ವಿಶೇಷ ಲೇಖನ
ದುಡಿಯುವ ಮಹಿಳೆಯರ ಸಮಸ್ಯೆಗಳು-
ಡಾ ಸಾವಿತ್ರಿ ಕಮಲಾಪೂರ
ಶತ ಶತಮಾನಗಳು ಕಳೆದರೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಗಳು ನಿಂತಿಲ್ಲ. ಈ ಸಮಸ್ಯೆಗಳು ಕಾಲ ದೇಶಗಳನ್ನು ಮೀರಿ ನಡೆಯುತ್ತಿವೆ .
ಅನೇಕ ದಾಸರೂ,ಸಂತರೂ, ಶರಣರೂ, ಮಹಾತ್ಮರೂ,ತತ್ವ ಜ್ಞಾನಿಗಳೂ ,ಮತ್ತು ವೇದಾಂತಿಗಳು ಮಹಿಳೆಯರ ಸ್ಥಾನಮಾನ ಗೌರವ ಅಪಮಾನ ಅವಮಾನ ರಕ್ಷಣೆ ಇದರ ಕುರಿತಾಗಿ ಚಿಂತಿಸಿ ,ಅವಳ ಸೂಕ್ಷ್ಮ ಮನಸ್ಸಿನ ಸಂವೇದನೆಯನ್ನು ಅರಿತು ನಾಲ್ಕುಗೋಡೆಯ ಮದ್ಯ ಇರುವ ಆ ಮಹಿಳೆಯನ್ನು ಹೊರಗಿನ ಪ್ರಪಂಚಕ್ಕೆ ಕರೆದು ತರುವ ಪ್ರಯತ್ನ ಮಾಡಿ ,ಹೊರ ತಂದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ .ಹೀಗೆ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟ ಮಹಿಳೆಯರು ಅದೆಷ್ಟು ಅಸಭ್ಯತೆಯ ಸುಳಿಯಲ್ಲಿ ಸಿಕ್ಕು ಹೊರ ಬರದೇ ಅಂತ್ಯ ವಾಗಿದ್ದಾರೆ .
ಯಾವ ಒಂದು ದೇಶವು ಪ್ರಗತಿಯತ್ತ ಸಾಗಿದೆ ಎಂದರೆ, ಆ ದೇಶದ ಮಹಿಳೆಯರೇ ಕಾರಣರು ಎಂದು ಹೇಳಿದ ಸ್ವಾಮಿ ವಿವೇಕಾನಂದರ ಮಾತನ್ನು ಗಮನಿಸಿದಾಗ ,ಆ ಅಭಿವೃದ್ಧಿಯ ದೇಶದಲ್ಲಿ ಅದೇಷ್ಷು ಸಮಸ್ಯೆಗಳು ಆ ಮಹಿಳೆಗೆ ಇವೆ ಎಂದು ನಾವು ನೀವುಗಳು ತಿಳಿಯಬೇಕಾದುದು ಅತೀ ಅವಶ್ಯ ಮತ್ತು ಅನಿವಾರ್ಯವೂ ಕೂಡಾ ಆಗಿದೆ .
ಇಳೆಯಂತೆ ಇರುವ ಮಹಿಳೆ ಸಹನಾ ಮೂರ್ತಿ ,ತ್ಯಾಗಮಯಿ ತನ್ನೆಲ್ಲ ನೋವುಗಳನ್ನು ಸಂಬಂಧದ ಮೂಟೆಯನ್ನು ಹೊತ್ತು ತಿರುಗುವ ಮಹಿಳೆ ಗಂಡ, ಮಕ್ಕಳು, ಅತ್ತೆ, ಮಾವ, ಮೈದುನ ,ನಾದಿನಿಯರು ಹೀಗೆ ಎಲ್ಲರಿಗೆ ಒಪ್ಪಿಗೆ ಆಗುವಂತೆ ಸಂಸಾರ ನಡೆಸುವ ಮಹಿಳೆಯರನ್ನು ಮೆಚ್ಚಲೇಬೇಕು .ಅಲ್ಲವೇ ?
ಮನೆಯ ಒಳಗೆ ಮತ್ತು ಮನೆಯ ಹೊರಗೆ ದುಡಿಯುವ ಮಹಿಳೆಯ ನೋವನ್ನು ಭಗವಂತ ಮಾತ್ರ ತಿಳಿಯಬಲ್ಲನು. ಅದರಲ್ಲೂ ತುಂಬ ಕುಟುಂಬದಲ್ಲಿ ಇದ್ದು ,ಹೊರಗೆ ದುಡಿಯುವ ಮಹಿಳೆಯರ
ಸಮಸ್ಯೆಗಳು ಹಲವಾರು
ಅದರಲ್ಲಿ ಮೊದಲು ಮನೆಯವರ ಮನವನ್ನು ಗೆಲ್ಲಬೇಕು .
ಹೊರಗೆ ಹೋಗಿ ದುಡಿಯಲು ಮನೆಯವರ ಒಪ್ಪಿಗೆ ಬೇಕು .
ಮನೆಯವರ ಒಪ್ಪಿಗೆ ಸಿಕ್ಕರೂ ಕಟ್ಟಿಕೊಂಡ ಗಂಡನ ಒಪ್ಪಿಗೆ ಬೇಕಾಗುತ್ತದೆ .
ಗಂಡನು ಒಪ್ಪಿದ ಮೇಲೆ ಮನೆಯ ನಾಲ್ಕು ಗೋಡೆಯ ಬಂಧನದ ಪಂಜರದಿಂದ ಹಾರಿ ಹೊರಬಂದಂತೆ ಆಗುತ್ತದೆ.
ಗಂಡನ ಬಂಧನದಿಂದ ಹೊರಗೆ ಹಾರಿದ ಹಕ್ಕಿ ಸ್ವತಂತ್ರವೇ?
ಯಾವಾಗ ಮನೆಯನ್ನು ತಲುಪುತ್ತೇನೆ ಎನ್ನುವ ಚಿಂತೆ ಸುರು ಆಗುತ್ತದೆ .
ಹೊರಗಡೆ ದುಡಿಯಲು ಹೋದ ಮಹಿಳೆಗೆ ಅದೇಷ್ಷು ಕೆಲಸ ಇರುತ್ತದೆ ಎನ್ನುವುದು ದುಡಿಯುವ ಕೆಲಸದವರಿಗೆ ಮಾತ್ರ ಗೊತ್ತಾಗುತ್ತದೆ .
ದುಡಿಯದೇ ಅರಾಮವಾಗಿ ಅಡುಗೆ ಮಾಡಿ ಮನೆಯಲ್ಲಿಯೇ ಇದ್ದು ಮನೆಯ ಕೆಲಸ ವನ್ನು ಮಾಡದಿರುವವರಿಗೆ ದುಡಿದು ಬರುವ ಹೆಣ್ಣಿನ ಕಷ್ಟ ಅರ್ಥ ಆಗುವುದು ಸ್ವಲ್ಪ ಕಷ್ಟವೇ .
ಏನ್ ಕೆಲಸವೋ ಎನೋ ಅದಾವ ಕೆಲಸವೋ ಏನೋ ಎಂದು ಮೂಗು ಮುರಿಯುವ ಜನಗಳ ಮಧ್ಯ ದುಡಿಯುವ ಮಹಿಳೆಯ ನಿತ್ಯ ರೋದನ ತಪ್ಪಿದ್ದಲ್ಲಾ .
ಭಾರತೀಯ ಸಮಾಜದಲ್ಲಿ ಪುರುಷ ಪ್ರಧಾನತೆಯಿದ್ದು ,ಸ್ತ್ರೀ ಮತ್ತು ಪುರುಷರಿಬ್ಬರ ನಡುವೆ ಇರುವ ಭೇದಭಾವ ತಾರತಮ್ಯ ಗಳು,ಲಿಂಗಾನುಪಾತದ ಅಸಮಾನತೆಗೆ ಕಾರಣವಾಗಿದೆ .
ಮಹಿಳೆಯರ ಮಾನಭಂಗ ಮತ್ತು ಇತರ ಹೀನ ಕೃತ್ಯಗಳಿಗೆ ಅವಕಾಶ ಮಾಡಿಕೊಟ್ಟಿದೆ .
ಇದರಿಂದ ಜೀವಿಸುವ ಹಕ್ಕು ,ಸ್ವಾತಂತ್ರ್ಯ ದ ಹಕ್ಕು ,ಅಭಿವ್ಯಕ್ತಿ ಹಕ್ಕು ಗಳನ್ನು ಉಲ್ಲಂಘಿಸಿದೆ.
ಮಹಿಳೆಯರ ಅಸ್ತಿತ್ವ ಮತ್ತು ಉಳಿವು ಪುರುಷರ ಅನುಕಂಪವನ್ನು ಆಧರಿಸಿದೆ .
ಕೌಟುಂಬಿಕ ವಿಷಯದಲ್ಲಿ ಹಾಗೂ ಇತರೆ ಹೊರಗಿನ ಕೆಲಸ ಕಾರ್ಯದ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಪುರುಷರ ಆಜನ್ಮ ಸಿದ್ಧ ಹಕ್ಕೆಂದು ಪರಿಗಣಿಸಲಾಗಿದೆ .
ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪುರುಷರು ಪ್ರಾಬಲ್ಯ ಹೊಂದಿದ್ದು ,ಮಹಿಳೆಯರ ಮೇಲಿನ ದೌರ್ಜನ್ಯ ತಪ್ಪುತ್ತಿಲ್ಲ.
ತನಗೆ ಯಾವಾಗ ಮಗುಬೇಕು ,ಎಷ್ಟು ಮಕ್ಕಳು ಬೇಕು ಎನ್ನುವ ಸ್ವತಂತ್ರ ವಾಗಿ ನಿರ್ಧರಿಸುವ ಅಧಿಕಾರವಿಲ್ಲದೇ ಗಂಡನ ಹಾಗೂ ಕುಟುಂಬದ ಒಗ್ಗಟ್ಟಿನ ಬಲವಿಲ್ಲದೇ ಒಂಟಿಯಾಗಿ ಹೋರಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ .
ಅಷ್ಟೇ ಅಲ್ಲದೇ ಹೊರಗಿನ ಕೆಲಸ ಕಾರ್ಯದ ದಿನನಿತ್ಯದ ಕೆಲಸದ ಜೊತೆಗೆ ,ಮಕ್ಕಳ ಪಾಲನೆ ಪೋಷಣೆ ಯ ಜೊತೆಗೆ ಮನೆಯ ಕೆಲಸ ಕಾರ್ಯವನ್ನು ನಿಭಾಯಿಸುವ ಕೆಲಸ ಕಾರ್ಯದ ಹೊಣೆಯನ್ನು ಹೊತ್ತು ಸಾಗುವ ಗಾಣದ ಎತ್ತಿನಂತೆ ತಿರುಗುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ .
ಇದರಿಂದ ತನ್ನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅನೇಕ ಕಾಯಿಲೆಯಿಂದ ನರಳುವ ಮಹಿಳೆಯರ ಮೂಕರೋದನ ,
ಜೊತೆಗೆ ಮಕ್ಕಳ ಆರೋಗ್ಯದ ಕಾಳಜಿ,ಕುಟುಂಬದ ಆರೋಗ್ಯದ ಕಾಳಜಿಯನ್ನು ನೋಡಿಕೊಂಡು ಸಾಗುವ ಇಂಥಹ ಶಕ್ತಿ ದೇವತೆಯಂತೆ ಕೆಲಸ ಕಾರ್ಯ ಗಳನ್ನು ನಿಭಾಯಿಸುವ ನಾರಿಯ ಗುಣವನ್ನು ಅದೆಷ್ಟು ಪುರುಷ ಹೃದಯಗಳು ಸಹಿಸಿಕೊಂಡು ,ಹೊಂದಿಕೊಂಡು ,ಸಹಕರಿಸಿಕೊಂಡು ಹೋಗುತ್ತವೆ, ನೀವೆ ವಿಚಾರ ಮಾಡಿ ನೋಡಿ .
ಪುರುಷ ಆಡುವ ಮಾತುಗಳನ್ನೆಲ್ಲ ಮೌನವಾಗಿ ಸಹಿಸಿಕೊಂಡು ಇರಲಿಕ್ಕೂ ,ಬಿಡದೇ ಅನೇಕ ಕುತಂತ್ರ, ಕುಹಕ,ಚುಚ್ಚು ಮಾತುಗಳಿಂದ ಅದೆಷ್ಟು ಮಹಿಳೆಯರ ಹೃದಯ ಒಡೆದಿಲ್ಲಾ ಹೇಳಿ.
ಆಡಿದ ಮಾತಿಗೆ ಮರು ಉತ್ತರ ನೀಡಿದರೂ ಸಮಾಧಾನ ವಿಲ್ಲ. ಅದೆಷ್ಷು ಮಾತನಾಡುತ್ತೀರಿ .ಬಾಯಿ ಮುಚ್ಚಿ ರ್ರಿ ಹಿಂದಿದ್ದು,ಎಲ್ಲಾ ರಾಗ ತೆಗೆದು ಹೇಳಬೇಡಿ .ಎಂದು ಉದ್ದೇಶಪೂರ್ವಕವಾಗಿಯೇ ಕೆಲಸ ಕಾರ್ಯದಲ್ಲಿ ಅಡೆ ತಡೆ ತಂದು ಅದೇಷ್ಟು ಪುರುಷ ಹೃದಯಗಳು ಮೋಜ ನೋಡಿಲ್ಲ ಹೇಳಿ.
ಸಮಾಜವನ್ನು ತಿದ್ದುವ ಸಮಾಜಕ್ಕೆ ಪಾಠ ಮಾಡುವವರೇ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಅಸಭ್ಯ ,ಅಸತ್ಯ,ದಿಂದ ವಂಚಿಸಿದ ಮನಸ್ಸುಗಳು ಒಮ್ಮೆ ಅವಲೋಕನ ಮಾಡಿಕೊಳ್ಳಬೇಕಾಗಿದೆ .ಅಲ್ಲವೇ ?
—————–‘————————————-
ಡಾ ಸಾವಿತ್ರಿ ಕಮಲಾಪೂರ