ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಅತ್ತೆಗೊಂದು ಕಾಲ ಇದೆಯೇ

ಬಹಳ ಪ್ರಖ್ಯಾತ ಗಾದೆ “ಅತ್ತೆಗೊಂದು ಕಾಲ ಸೊಸೆಗೊಂದು ಕಾಲ” ಅಂದರೆ ಒಂದು ಕಾಲದಲ್ಲಿ  ಅತ್ತೆಗಿರಿಯ ದಬ್ಬಾಳಿಕೆಯಲ್ಲಿ ನಲುಗಿದ ಸೊಸೆಯರಿಗೆ ಮುಂದೆ ನೀವೂ ಅತ್ತೆಯಾಗುತ್ತೀರಿ ಒಳ್ಳೆಯ ಕಾಲ ಬರುತ್ತದೆ  ಎಂಬ ಆಶಾಭಾವನ್ನು ಸಾರುವಂತಿದ್ದರೂ, ಅತ್ತೆ ಎಂದರೆ ಒಂದು ಪೂರ್ವಾಗ್ರಹದ ಭಾವನೆಯ ದ್ಯೋತಕವೂ ಹೌದು.
ಮುಂಚಿನ ಅವಿಭಕ್ತ ಕುಟುಂಬಗಳಲ್ಲಿ ಅತ್ತೆಯ ಸ್ಥಾನಕ್ಕೆ ಅತ್ಯಂತ ಮಹತ್ವವಿದ್ದು
ಕೃಷಿ ಅಥವಾ ಕುಟುಂಬ ವ್ಯವಹಾರಗಳಲ್ಲಿ ತೊಡಗಿದ್ದು ವೈಯುಕ್ತಿಕ ಆರ್ಥಿಕ ವರಮಾನವಿರದ ಗಂಡು ಮಕ್ಕಳ ಪತ್ನಿಯರಾದ ಸೊಸೆಯರಿಗೆ ಅತ್ತೆಯನ್ನು ಆಶ್ರಯಿಸಿ ನಡೆಯಬೇಕಾದ ಅನಿವಾರ್ಯತೆ ಇತ್ತು. ಕೌಟುಂಬಿಕ ಸೌಹಾರ್ದ ಸಾಮರಸ್ಯಗಳಿದ್ದಾಗ ವರದಕ್ಷಿಣೆ ಆರೋಪಗಳೂ ವಧೂ ದಹನಗಳೂ ಪ್ರಚಲಿತವಿರಲಿಲ್ಲ. ವಿಚ್ಛೇದನಗಳೂ ಬಹಳವಿರಲಿಲ್ಲ.  
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ವಿಶೇಷ  ಕಾನೂನುಗಳಿವೆ. ಶೋಷಿತ ಮಹಿಳೆಯರಿಗೆ ವರಪ್ರದವಾಗಿವೆ. ನಿಜ ! ಆದರೆ ಇವು ಕೆಲವರ ದುರ್ಬಳಕೆಗೂ ಒಳಗಾಗಿ ನಿರಪರಾಧಿಗಳ ವಿರುದ್ದ ಬಳಸುವ ಬ್ರಹ್ಮಾಸ್ತ್ರಗಳಾಗಿಯೂ ಪರಿಣಮಿಸಿರುವುದು ಮಾತ್ರ ನಿಜಕ್ಕೂ ಒಂದು ದುರಂತ. ಇಲ್ಲಿ ಶೋಷಕ ಶೋಷಿತ ವರ್ಗಗಳನ್ನು  ಗುರುತಿಸುವುದು  ತುಂಬಾ ಕಠಿಣಕರವಾಗಿದ್ದು ಕಾನೂನಿನ ಬಲವಿದೆಯೆಂಬ ಧಾರ್ಷ್ಟ್ಯ ಕುಟುಂಬಗಳನ್ನು ಒಡೆಯುವ ಹುನ್ನಾರಕ್ಕೆ ತೊಡಗಿರುವುದನ್ನು ಕಂಡು ಬರುತ್ತದೆ. ಕೆಲವು ಪ್ರಸಂಗಗಳಲ್ಲಿ ದೌರ್ಜನ್ಯ ತಡೆಗಟ್ಟಿರಬಹುದಾದರೂ ಬಹಳಷ್ಟು ಬಾರಿ ತಮ್ಮದೇ ಮಾತು ನಡೆಸಿಕೊಳ್ಳುವ ಹಠ ಸಾಧಿಸುವ ಮನೋಭಾವದ ಹೆಣ್ಣುಮಕ್ಕಳಿಗೆ ಅನುಕೂಲಕರವಾಗಿ ಪರಿಣಮಿಸಿದೆ.  ಎಷ್ಟೋ ಇಂತಹ ದೃಷ್ಟಾಂತಗಳೂ ಕಣ್ಣೆದುರಿಗಿವೆ.

ನನ್ನ ಪರಿಚಯದ ಕುಟುಂಬವೊಂದರಲ್ಲಿ ಅತ್ತೆ ಸೊಸೆಯರ ನಡುವೆ ಸ್ವಲ್ಪ ತಿಕ್ಕಾಟವಿತ್ತು. ಗಂಡ ತನ್ನ ತಾಯಿಯ ಪರ ವಹಿಸಿ ಹೆಂಡತಿಯನ್ನೇ ಹೊಂದಿಕೊಂಡು ಹೋಗಲು ಹೇಳಿದ್ದಕ್ಕೆ ಕೋಪಗೊಂಡ ಅವಳು ಸುಳ್ಳು ಸುಳ್ಳೇ ಅತ್ತೆಮನೆಯವರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ಪೋಲೀಸ್ ದೂರು ಕೊಟ್ಟು ನಿರಪರಾಧಿಗಳಿಗೂ ಜೈಲು ಸಜೆಯಾಯಿತು. ಇದೇ ರೀತಿ ದೂರು ಕೊಡುವೆ ಎಂದು ಬೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೂ ಇದ್ದಾರೆ. ಒಟ್ಟಿನಲ್ಲಿ “ಬಗ್ಗಿದವರಿಗೇ ಮತ್ತೆರಡು ಗುದ್ದು” ಇಲ್ಲಿ.

ಇಂದಿನ ಕಾಲದಲ್ಲಿ ದುಡಿಯುವ ಸೊಸೆಯರಿರುವ ಮನೆಯಲ್ಲಿ ಕೌಟುಂಬಿಕ ಮೊಮ್ಮೊಕ್ಕಳ ಜವಾಬ್ದಾರಿಯನ್ನು ಕಷ್ಟದಿಂದಲೇ ಹೊರುವ ಅತ್ತೆಯರೂ ಇದ್ದಾರೆ. ಅಥವಾ ಅವರ ಅವಶ್ಯಕತೆ ಇರುವ ವರೆಗೂ ಇಟ್ಟುಕೊಂಡು ನಂತರ ಅಟ್ಟಿಬಿಡುವ ಸಮಯಸಾಧಕರೂ ಸಹ ಬಹಳಷ್ಟು .

ಇಂದಿನ ಪುಟ್ಟ ಕುಟುಂಬ ವೈಯುಕ್ತಿಕ ಸ್ವಾತಂತ್ರ್ಯದ ಪರಿಕಲ್ಪನೆಯಲ್ಲಿ ಒಂದೇ ಸೂರಿನಡಿ ಜೀವಿಸುವ ಅಗತ್ಯವೂ ಇಲ್ಲ. ಬದಲಾದ ಆರ್ಥಿಕ ಪರಿಸ್ಥಿತಿಯಲ್ಲಿ ಒಬ್ಬರೊಬ್ಬರ ಮೇಲಿನ ಅವಲಂಬನೆಗಳೂ ಇರದಿದ್ದಾಗ ಮಗನ ಮಧ್ಯದ ಪ್ರೀತಿಗೆ ಅಡ್ಡ ಬಂದಳು ಅಥವಾ ತಮ್ಮ ಪ್ರಾಮುಖ್ಯತೆ ಕಡಿಮೆಯಾಯಿತು ಎಂಬ ಭಾವನೆಗಳಿರದೆ ಸೊಸೆಯ ಮೇಲಿನ ಅಸಹನೆಯೂ ಹಾಗೂ ತಮ್ಮ ಅಭದ್ರತಾ ಭಾವನೆಗಳಿಗೂ ಆಸ್ಪದವಿರದೆ  ತಟಸ್ಥ ಧೋರಣೆಗಳೂ ಕಂಡು ಬರುತ್ತವೆ. ಭಾರತೀಯ ಸಾಂಸಾರಿಕ ವ್ಯವಸ್ಥೆಯಂತೆ ಎಲ್ಲವೂ ತಮ್ಮ ಇಷ್ಟದಂತೆ ನಡೆಯಬೇಕೆಂಬ ಹಿರಿಯರ ಆಶಯಗಳೂ ಬದಲಾಗಿ ಕಿರಿಯರಿಗೆ ಸ್ವಾತಂತ್ರ್ಯ ಸಿಗುತ್ತಿದೆ.

ನನ್ನ ಗೆಳತಿ ಇತ್ತೀಚೆಗೆ ಅತ್ತೆಯಾದವರು ಹೇಳಿದ ಮಾತು ಇಲ್ಲಿ ನೆನಪಿಗೆ ಬರುತ್ತದೆ ನಾವು ಸೊಸೆಯಾಗಿದ್ದಾಗ ಅತ್ತೆಗೆ ಹೊಂದಿಕೊಂಡು ನಡೆದೆವು, ಕುಟುಂಬದ ಸಾಮರಸ್ಯಕ್ಕಾಗಿ. ಈಗ ಮಕ್ಕಳ ಸುಖಕ್ಕಾಗಿ ಸೊಸೆಯಂದಿರ ಜೊತೆಗೆ ಹೊಂದಿಕೊಂಡು ನಡೆಯುವ ಸಂದರ್ಭ. ಅವರ ಸ್ವಾತಂತ್ರ್ಯಕ್ಕೆ ಅಡ್ಡಿ ಬರದೆ ಅವರ ಆಸೆ ಆಕಾಂಕ್ಷೆಗಳಿಗೆ ಎದುರಾಡದೆ ಇರುವ ತನಕ ನಮ್ಮ ಸಂಬಂಧಗಳ ಮಧ್ಯೆ ಬಿರುಕುಂಟಾಗುವುದಿಲ್ಲ. ಹಾಗಾಗಿ ನಮ್ಮಷ್ಟಕ್ಕೆ ನಾವು ಇದ್ದರೆ ಸಾಕು ಅನ್ನಿಸುವಂತೆ ಆಗಿದೆ.

ಒಟ್ಟಿನಲ್ಲಿ ಈಗಿನ ಅತ್ತೆಯರೂ ಅತ್ತೆಗಿರಿ ತೋರದೆ ಸಾಮರಸ್ಯದಿಂದ ಹೊಂದಿ ಬಾಳುತ್ತಿರುವುದು ಸಾಮಾಜಿಕ ಕ್ರಾಂತಿಯೇ ಆಗಿರುವುದು ಒಳ್ಳೆಯ ಬೆಳವಣಿಗೆ. ಕುಟುಂಬವೆಂದರೆ ಎಲ್ಲರೂ ಸಮಾನರು ಹೊಂದಾಣಿಕೆಯೇ ಮೂಲಮಂತ್ರ ಎಂಬುದು ಅಂದಿಗೂ ಇಂದಿಗೂ ಪ್ರಸ್ತುತವಾಗಿರುವ ಮೂಲಭೂತ ವಿಷಯ.


ಸುಜಾತಾ ರವೀಶ್.

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top