ಕಥಾಸಂಗಾತಿ
ಬಿ.ಟಿ.ನಾಯಕ್ ಅವರ ಕಥೆ
“ಕಾಮನೆಯ ಭೂತಗಳು”
ತನ್ನ ಪತಿಯನ್ನು ಕಳೆದುಕೊಂಡ ಗಂಜಾಯಮ್ಮ ಕಟ್ಟಡದ ಕೆಲಸಗಳಲ್ಲಿ ಕೂಲಿ ಮಾಡುತ್ತಿದ್ದಳು. ಆಕೆಯ ಮಗಳು ಪ್ರಾಯಕ್ಕೆ ಬಂದ ದೇವೀರಮ್ಮ ಕೂಡ ತಾಯಿ ಜೊತೆಗೂಡಿದ್ದಳು. ಅವರು ಶ್ರದ್ದೆಯಿಂದ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದರು. ಆದರೇ, ಅಲ್ಲಿ ಕಾರ್ಮಿಕರ ಉಸ್ತುವಾರಿ ಮೇಸ್ತ್ರಿ ಸುಮಾರು ಐವತ್ತರ ಆಸುಪಾಸಿನವ ದೇವೀರಮ್ಮನ ಯವ್ವನಕ್ಕೆ ಲಗ್ಗೆ ಹಾಕಲು ಯೋಚಿಸಿದ. ಹೇಗೋ ಅವಳಿಗೆ ಆಸೆ ತೋರಿಸಿ ಅವಳನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಮನವೊಲಿಸಿ ಅವಳ ಮಾನ ಹರಣ ಮಾಡಬೇಕೆಂದಿದ್ದ. ಆದರೇ, ದೇವಿರಮ್ಮ ತನ್ನ ತಾಯಿಯನ್ನು ಬಿಟ್ಟು ಎಂದೂ ಅಗಲುತ್ತಿದ್ದಿಲ್ಲ. ಮೇಸ್ತ್ರಿ ಸಿದ್ದಪ್ಪ ದೇವೀರಮ್ಮಳ ಬಳಿ ಬಂದು ಏನಾದರೂ ನೆಪ ಮಾಡಿಕೊಂಡು ಆಕೆಯ ಬಳಿ ಬಂದು, ಅವಾಗಾವಾಗ ತನ್ನ ಮೈ ಅವಳಿಗೆ ತಾಕಿಸುತ್ತಿದ್ದ. ಆಗ ದೇವೀರಮ್ಮಗೆ ಆತನ ಮನದ ಬಯಕೆ ಅರ್ಥವಾಯಿತು. ಆಕೆ ತಡ ಮಾಡದೆಯೇ ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದಳು. ಆಗ ಗಂಜಾಯಮ್ಮ ಮೇಸ್ತ್ರಿಗೆ ಒಂದು ದಿನ ಹೀಗೆ ಎಚ್ಚರಿಕೆ ಕೊಟ್ಟಳು;
‘ಸಾರೂ, ನೀವು ನನ್ನ ಮಗಳಿಗೆ ತೊಂದ್ರೆ ಕೊಡುತ್ತಿರುವುದು ನನಗೆ ತಿಳಿದಿದೆ. ನಾವು ಬಡವರಾದರೂ ಮಾನವಂತರು. ನೀವು ಹೀಗೆಯೇ ಮುಂದುವರಿಸಿದರೆ, ನನ್ನ ಎಲ್ಲಾ ಸಂಬಂಧಿಕರನ್ನು ಕರೆಯಿಸಿ ನಿಮಗೆ ತಕ್ಕ ಮರ‍್ಯಾದೆ ಮಾಡಬೇಕಾಗುತ್ತದೆ ಎಚ್ಚರವಿರಲಿ. ನಾನು ಮತ್ತೆ ಮತ್ತೇ ಹೇಳುತ್ತಿದ್ದೇನೆ ಕೇಳಿ,
ನನ್ನ ಮಗಳ ತಂಟೆಗೆ ಬರದೇ, ನಿಮ್ಮ ಕೆಲಸ ಮಾತ್ರ ನೋಡಿಕೊಳ್ಳಿ’ ಎಂದಾಗ. ಆತ ಸೊಕ್ಕಿನಿಂದ ಹೀಗೆ ಹೇಳಿದ;
‘ಗಂಜಾಯಮ್ಮ ನಿನಗೆ ಈಗ ದುಡಿಯುವ ವಯಸ್ಸು ಹೋಗಿದೆ. ನಾನು ಹೇಳಿದಂತೆ ಕೆಲಸ ಮಾಡಲು ನಿನಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಾಳೆಯಿಂದ ನೀನು ನಮ್ಮಲ್ಲಿಯ ಕೆಲಸಕ್ಕೆ ಬರುವುದು ಬೇಡ. ಬೇಕಿದ್ದರೇ, ನಿನ್ನ ಮಗಳನ್ನು ಮಾತ್ರ ಕಳಿಸಿಕೊಡು.’ ಎಂದ.
‘ನಾನು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದೇನೆ, ನೀವು ಬೇಕಂತಲೇ ಅವಳ ಬಗ್ಗೆ ಏಚ್ಚರಿಸಿದ್ದಕ್ಕೆ ಈ ರೀತಿ ನನ್ನನ್ನು ಕೆಲಸದಿಂದ ತೆಗೆದು ಹಾಕುವ ಕೆಟ್ಟ ಯೋಚನೆ ಮಾಡುವದು ಸರಿಯಲ್ಲ.’ ಎಂದಳು.
‘ನಿನ್ನ ಕೈಲಿ ಕೆಲಸ ಆಗೋದೇ ಇಲ್ಲ. ಪ್ರತಿ ಅರ್ಧ ಗಂಟೆಗೊಮ್ಮೆ ಏನೋ ನೆಪ ಮಾಡಿಕೊಂಡು ವಿಶ್ರಾಂತಿಗೆ ಹೋಗ್ತೀಯ. ನಾನು ಅದನ್ನು ಕಂಡಿದ್ದೇನೆ. ತೋರಿಕೆಯ ನಿನ್ನ ಕೆಲಸ, ಪಡೆಯುವ ಹೆಚ್ಚಿನ ದುಡ್ಡು ಇವೆಲ್ಲಾ ಯಾಕೆ ?’ ಎಂದ. ಆಗ ಆಕೆ;
‘ಆಯಿತು, ನಾಳೆಯಿಂದ ನಾನು ಬರೋದಿಲ್ಲ ಮತ್ತು ನನ್ನ ಮಗಳೂ ಬರೋದಿಲ್ಲ. ಬೇರೆ ಕಡೆ ಎಲ್ಲಿಯಾದರೂ ಕೆಲಸ ನೋಡಿಕೊಳ್ತೇವೆ. ನಿಮ್ಮಂತಹ ಕಾಮುಕರ ಜೊತೆ ಕೆಲಸ ಮಾಡುವದು ನಮಗೆ ಬೇಕಿಲ್ಲ. ನಮ್ಮ ಪಾಲಿನ ಅನ್ನ ಎಲ್ಲೋ ಒಂದು ಕಡೆ ಇರುತ್ತದೆ. ಅದನ್ನು ಹುಡುಕಿಕೊಂಡು ನಾವು ಹೋಗುತ್ತೇವೆ. ದುಡಿದು ತಿನ್ನುವವರ ಪರ ದೇವರು ಇರುತ್ತಾನೆ. ನೀನೇ ಆ ದೇವರು ಎಂದಂದು ಕೊಳ್ಳಬೇಡ. ನಾವು ಎಲ್ಲಿ ದುಡಿದರೂ ಅನ್ನ ಸಿಗುತ್ತದೆ ಎಂದು ಮುಖದ ಮೇಲೆ ಹೊಡೆದು ಹೇಳಿದಾಗ, ಆತ ಮೋಸದ ನಗೆ ಬೀರುತ್ತಾ;
‘ಜಗತ್ತು ದೊಡ್ಡದೆಂದು ನಿನಗೆ ಬೇಕಾದದ್ದು ಹುಡುಕಲು ಹೋದರೇ, ಅದು ಸಿಗುತ್ತದೆಯಾ ? ನಿನಗೆ ಭ್ರಮೆ ಅಷ್ಟೇ. ನೀವಿಬ್ಬರೂ ನಾನು ಹೇಳಿದಂತೆ ಕೇಳಿದರೆ, ನೀವಿಬ್ಬರೂ ದುಡಿಯದೆಯೇ ಕೂಲಿ ಹಣವನ್ನು ಕೊಡಿಸುತ್ತೇನೆ. ಈ ಬಗ್ಗೆ ವಿಚಾರ ಮಾಡು’ ಎಂದಾಗ;
ಥೂ ! ಈ ಮಾತು ಹೇಳಲಿಕ್ಕೆ ನಾಚಿಕೆಯಾಗೋದಿಲ್ವೇ ? ನಾವು ಆ ರೀತಿ ನಡೆದುಕೊಳ್ಳುತ್ತೇವೆ ಎಂದು ನೀನು ಕನಸಿನಲ್ಲಿಯೂ ಯೋಚಿಸಬೇಡ. ನಿಮ್ಮಂಥಹ ಕಾಮುಕರ ಸಹವಾಸವೇ ನಮಗೆ ಬೇಡ’ ಎಂದು ಹೇಳಿ ಅವರಿಬ್ಬರೂ ಅಲ್ಲಿಂದ ಹೊರಟು ಹೋದರು.
ಗಂಜಾಯಮ್ಮ ಮತ್ತು ದೇವಿರಮ್ಮ ಇಬ್ಬರೂ ಮರು ದಿನ ಅಲ್ಲಿಗೆ ಕೆಲಸಕ್ಕೆ ಹೋಗಲೇ ಇಲ್ಲ. ಆದರೇ, ಹೊಟ್ಟೆ ಸುಟ್ಟರೇ ತಾವೆ ಬರ್ತಾರೆ ಏಂದು ನಂಬಿದ್ದ ಮೇಸ್ತ್ರಿ ಇವರಿಬ್ಬರ ದಾರಿ ಕಾಯುತ್ತಿದ್ದವನು, ಅವರು ಬರದಿದ್ದದ್ದಕ್ಕೆ ‘ತಾನು ಸುಮ್ಮನೇ ದುಡುಕಿದೆ, ಕನಿಷ್ಠ ದೇವೀರಮ್ಮಳ ಅಂಗ ಸೌಷ್ಠವವನ್ನು ದೂರದಿಂದ ನೋಡಿ ಆನಂದಿಸ ಬಹುದಿತ್ತು’ ಎಂದು ಚಿಂತಿತಗೊಂಡ. ಅಲ್ಲದೇ, ಆತ ವಿಚಲಿತನಾಗಿ ಆಕೆಯ ಭ್ರಮೆಯಲ್ಲಿ ಮುಳುಗಿದ. ಆನಂತರ, ಹೇಗೋ ಅವರನ್ನು ಮರುಳು ಮಾಡಿ ಕರೆಯಿಸಿ ಕೊಳ್ಳಬೇಕೆಂದುಕೊಂಡು ತಾನೇ ಖುದ್ದಾಗಿ ಅವರ ಮನೆಗೆ ಹೋದ. ಅಲ್ಲಿ ಗಂಜಾಯಮ್ಮಳನ್ನು ಕಂಡು ಹೀಗೆ ಹೇಳಿದ;
‘ಏನೋ ಅಕ್ಕ ನನ್ನಿಂದ ತಪ್ಪು ಆಗಿದೆ. ನಾನು ಹೀಗೆ ಮಾತಾಡಬಾರದಿತ್ತು. ನೀವಿಬ್ಬರೂ ಮತ್ತೇ ಕೆಲಸಕ್ಕೆ ಬರಬೇಕು’ ಎಂದು ಅಂಗಲಾಚಿ ಬೇಡಿಕೊಂಡ. ಆಗ ಗಂಜಾಯಮ್ಮ ಕೆಲಸಕ್ಕೆ ಬರಲು ಒಪ್ಪಿಕೊಂಡಳು. ಆದರೇ, ಆತ ಅಲ್ಲಿ ಕಾಮನೆ ಬೀರಿ, ಓರೆ ನೋಟದಿಂದ ದೇವೀರಿ ಕಡೆಗೆ ನೋಡದೇ ಬಿಡಲಿಲ್ಲ. ಆಮೇಲೆ ಅಲ್ಲಿಂದ ಹೊರಟು ಹೋದ.
ಇಷ್ಟು ಅನುಭವಿಸಿದ ಮೇಲೆ ಗಂಜಾಯಮ್ಮಗೆ ಮೇಸ್ತ್ರಿಯ ಮೇಲಿನ ಅನುಮಾನ ಹೋಗಲಿಲ್ಲ. ಅವನು ಏನಾದರೂ, ಹೇಗಾದರೂ ಕೆಟ್ಟದ್ದನ್ನು ಮಾಡದೇ ಬಿಡುವುದಿಲ್ಲ ಎಂದು ಆಕೆಗೆ ಅನ್ನಿಸಿತು.
ಆಕೆಯೊಬ್ಬಳೇ ಮಾರನೇ ದಿನ ಕೆಲಸಕ್ಕೆ ಹೋದಳು. ಅದನ್ನು ಗಮನಿಸಿದ ಮೇಸ್ತ್ರಿ;
‘ಯಾಕೆ ನಿನ್ನ ಮಗಳು ಕೆಲಸಕ್ಕೆ ಬರಲಿಲ್ವ ?’ ಎಂದ.
‘ಅವಳಿಗೆ ಹುಷ್ಯಾರು ಇಲ್ಲ. ಏನೋ ಒಂದು ಸಮಸ್ಯೆ’ ಎಂದಳು. ಆತನೇನೋ ಸುಮ್ಮನಾದ, ಆದರೇ, ಆತನ ಒಳ ಕ್ಷುದ್ರ ಮನಸ್ಸು ಇನ್ನೂ ಕೆಟ್ಟದಾಯಿತು. ಹೇಗೂ ಇಲ್ಲಿ ಇವಳೊಬ್ಬಳೇ ಇದ್ದಾಳೆ , ತಾನು ಅವರ ಮನೆಗೆ ಹೋಗಿ ದೇವೀರೀಯನ್ನು ಭೇಟಿಯಾಗಿ ಮನವೊಲಿಸಿ ಆಕೆಯನ್ನು ಪಡೆಯಲೇ ಬೇಕೆಂದು ಕೊಂಡು, ಅಲ್ಲಿಗೆ ಹೋಗಿಯೇ ಬಿಟ್ಟ !
ಅಲ್ಲಿ ಮುಗ್ಧೆ ದೇವಿರಮ್ಮ ಮನೆಯಲ್ಲಿ ಅಕ್ಕಿ, ಬೇಳೆ ಬೇಯಿಸಿ ಮಧ್ಯಾನ್ಹಕ್ಕಾಗಿ ಅಡಿಗೆ ಮಾಡುತ್ತಿದ್ದಳು. ತಮ್ಮಲ್ಲಿ ಖಾರದ ಪುಡಿ ಖಾಲಿ ಆಗಿತ್ತು. ಅದನ್ನು ಪಡೆಯಲು ಪಕ್ಕದ ಮನೆಯಾಕೆ ಸುಂಕ್ಲಮ್ಮಳ ಬಳಿ ಹೋಗಿ ಕೇಳಿದಾಗ, ಆಕೆ ಅದನ್ನು ಕೊಟ್ಟು ಆಕೆಯ ಬೆನ್ನ ಹಿಂದೆಯೇ ಬಂದಳು. ಆಗ ಅದೃಷ್ಟವಶಾತ್ ಆಕೆಯ ದೃಷ್ಟಿ ಗಂಜಾಯಮ್ಮಳ ಮನೆ ಕಡೆಗೆ ಹೋಯಿತು. ಏಕೆಂದರೇ, ಅಲ್ಲಿ ಒಬ್ಬ ಆಗಂತುಕನ ಚಲನ ವಲನ ಆಕೆ ಗಮನಿಸಿದಳು. ಹಾಗಾಗಿ, ದೇವೀರಮ್ಮಳ ಕಡೆ ನೋಡಿ, ಬೆರಳು ಮಾಡಿ ಆ ಕಡೆ ತೋರಿಸಿದಳು. ಆಗ ದೇವಿರೀ ಮೇಸ್ತ್ರಿಯನ್ನು ಗಮನಿಸಿದಳು. ಕೂಡಲೇ, ಆಕೆ ತಾನು ಅಲ್ಲಿಗೆ ಹೋಗುವುದಿಲ್ಲ ಇಲ್ಲಿಯೇ ಇರುತ್ತೇನೆ ಎಂದಳು.
‘ಆತ ಯಾರು ?’ ಎಂದು ಕೇಳಿದಳು ಸುಂಕ್ಲಮ್ಮ.
‘ಅವನು ಕೆಲಸದ ಮೇಸ್ತ್ರಿ ತುಂಬಾ ಕೆಟ್ಟವನು. ನನಗೆ ಸದಾ ತೊಂದರೆ ಕೊಡ್ತಿದ್ದಾನೆ ‘ ಎಂದಳು. ಆಗ ದೇವೀರಿಯನ್ನು ತನ್ನ ಮನೆಯಲ್ಲೇ ಕೂಡ್ರಿಸಿ, ಸುಂಕ್ಲಮ್ಮ ಆ ಕಡೆ ಹೋದಳು. ಆಕೆ ಆತನೆಡೆಗೆ
ನೋಡದೆಯೇ ಗಂಜಾಯಮ್ಮಳ ಮನೆ ಒಳಕ್ಕೆ ಹೋದಳು.
ಅವಳ ಹಿಂದೆಯೇ ಆತ ಹೋಗಿ ಬಾಗಿಲಲ್ಲಿ ನಿಂತು;
‘ಗಂಜಾಯಮ್ಮ ಅಕ್ಕ ಇದ್ದೀರಾ ?’ ಎಂದು ಕೂಗಿದ. ಆಗ ಹೊರ ಬಂದ ಸುಂಕ್ಲಮ್ಮ ಆತನನ್ನು ನೋಡಿ ಹೀಗೆ ಕೇಳಿದಳು;
‘ಯಾರಪ್ಪ ನೀನು ?’
‘ನಾನು ಅವರಿಗೆ ಪರಿಚಯದವನು’ ಎಂದ.
‘ನೀನು ಯಾರನ್ನು ಕೂಗಿದೆ ?’
‘ಅದೇ ಅಕ್ಕ ಗಂಜಾಯಮ್ಮಳನ್ನು’ ಎಂದ.
‘ಅವರಿಬ್ಬರೂ ಕೆಲಸಕ್ಕೆ ಹೋಗಿದ್ದಾರೆ ‘ ಎಂದಳು. ಆಗ ಆತ ತಕ್ಷಣವೇ ;
‘ಇಲ್ಲ ಇಲ್ಲ ಆಕೆಯ ಮಗಳು ಕೆಲಸಕ್ಕೆ ಹೋಗಿಲ್ಲ. ಆಕೆ ಮನೆಯಲ್ಲಿಯೇ ಇದ್ದಾಳೆ !’ ಎಂದ.
‘ಅದು ನಿನಗೆ ಹೇಗೆ ಗೊತ್ತು ?’
‘ಇಲ್ಲ.. ಇಲ್ಲ.. ಇರಬಹುದೆಂದು ಕೊಂಡೆ’ ಎಂದ.
‘ಅವಳು ಇಲ್ಲಿಲ್ಲ. ಅವಳ ತಾಯಿ ಇಲ್ಲದಾಗ ಮಗಳನ್ನು ಹುಡುಕಿಕೊಂಡು ಬರಲು ನಿನಗೇನು ಕೆಲಸ ?’ ಎಂದು ಕೆಂಗಣ್ಣು ಬೀರಿದಳು. ಆಗ ಆತ ತಡ ಮಾಡದೆಯೇ
ಅಲ್ಲಿಂದ ಕಾಲ್ಕಿತ್ತ !
ಸಂಜೆಯ ವೇಳೆಗೆ ಗಂಜಾಯಮ್ಮ ತನ್ನ ಮನೆಗೆ ಬಂದಾಗ ಸುಂಕ್ಲಮ್ಮ ಮೇಸ್ತ್ರಿಯ ವಿಷಯ ಬಿಡಿಸಿ ಹೇಳಿದಾಗ ಆಕೆಗೆ ಸುದ್ದಿ ತಿಳಿಯಿತು. ಪಾಪ ! ದೇವಿರಿ ಆತನು ಬಂದಾಗಿನಿಂದ ಭ್ರಾಂತಿಗೊಂಡು ಬೆದರ ತೊಡಗಿದಳು. ಗಂಜಾಯಮ್ಮ ಆಮೇಲೆ ಕೆಲಸಕ್ಕೆ ಹೋಗದೇ, ಧೃಡ ಮನಸ್ಸಿನಿಂದ ಬಿಟ್ಟು ಬಿಟ್ಟಳು !.
ಅದೇ ಸಮಯದಲ್ಲಿ ಗಂಜಾಯಮ್ಮಳ ಗೆಳತಿ ಗದ್ದೆಮ್ಮ ದೂರದ ಕಾಡಿನ ಒಂದು ಹಳ್ಳಿಯಿಂದ ತನ್ನ ಆರೋಗ್ಯದ ಸಮಸ್ಯೆಯಿಂದ ಊರಿಗೆ ಬಂದಿದ್ದಳು. ತನ್ನ ಕೆಲಸ ಮುಗಿದ ಮೇಲೆ ಗಂಜಾಯಮ್ಮಳನ್ನು ಭೇಟಿಯಾಗಲು ಹುಡುಕಿಕೊಂಡು ಬಂದಳು. ಗಂಜಾಯಮ್ಮ ಆಕೆಯನ್ನು ನೋಡಿ ಖುಷಿಗೊಂಡು ಆಕೆಗೆ ಊಟ ಮಾಡಿಸಿದಳು. ಆ ಸಮಯದಲ್ಲಿ ಗಂಜಾಯಮ್ಮ ತನ್ನ ದುಃಖವನ್ನು ಅವಳ ಬಳಿ ಹೇಳಿಕೊಂಡಳು.
ಆಗ ಆಕೆಯ ಗೆಳತಿ ಒಂದು ಸಲಹೆ ಕೊಟ್ಟಳು;
‘ನೀವಿಬ್ಬರೂ ನಾನಿದ್ದಲ್ಲಿಗೆ ಬಂದು ಬಿಡಿ. ಅಲ್ಲಿ ಕಾಡಿನಲ್ಲಿ ಇಂಥಹ ತಂಟೆಗಳು ಇರುವುದಿಲ್ಲ. ಅಲ್ಲಿ ಭತ್ತದ ಗದ್ದೆಗಳು ಇವೆ. ಅಲ್ಲಿ ಇಬ್ಬರೂ ದುಡಿದು ಬದುಕುವೀರಂತೆ’ ಎಂದಳು.
ಗಂಜಾಯಮ್ಮಗೆ ಆಕೆ ಹೇಳುವುದು ಸರಿ ಎನಿಸಿದಾಗ ಅಲ್ಲಿಗೆ ಹೋಗಲು ನಿರ್ಧರಿಸಿದಳು.
ಒಂದೆರಡು ದಿನಗಳಾದ ಮೇಲೆ ತಾಯಿ ಮಗಳು ಇಬ್ಬರೂ ಕಾಡಿನಲ್ಲಿರುವ ಹಳ್ಳಿಗೆ ಬಂದರು. ಗದ್ದೆಮ್ಮಳ ಮನೆಯಲ್ಲಿಯೇ ಇದ್ದು ತಮ್ಮ ಉದ್ಯೋಗ ಹುಡುಕಲು ಕಾಡಿನ ಮಧ್ಯದವರೆಗೆ ಹೋಗಬೇಕಾಗಿ ಬಂದಾಗ, ಗಂಜಾಯಮ್ಮ ಅಂಜದೇ, ತನ್ನ ಗುರಿಯನ್ನು ತಲುಪಿದಳು. ಭತ್ತದ ಗದ್ದೆಯ ಸಮೀಪವೇ ಒಂದೆರಡು ಜೋಪಡಿಗಳು ಇದ್ದವು. ಅಲ್ಲಿಗೆ ತಲುಪಿ ಅಲ್ಲಿದ್ದವರ ಜೊತೆ ತನ್ನ ಪರಿಚಯ ಮಾಡಿಕೊಂಡಳು. ಅವರು ಕೂಡ ಇವಳ ಹಾಗೆ ಅಲ್ಲಿಗೆ ದುಡಿಯಲು ಬಂದವರೇ ಆಗಿದ್ದರು. ಮುಂಜಾನೆಯ ವೇಳೆಗೆ ಒಬ್ಬ ಮಧ್ಯಸ್ಥಿಕೆದಾರ ಬರುತ್ತಾನೆ. ಆತನು ಎಲ್ಲರಿಗೂ ಕೆಲಸದ ಬಗ್ಗೆ ಹೇಳಿ, ಕೂಲಿ ಹಣ ಕೊಡುತ್ತಾನೆ ಎಂದು ತಿಳಿಯಿತು. ಆಕೆ ಮತ್ತೇ ಬರುವುದಾಗಿ ಹೇಳಿ ಸುಮಾರು ಎರಡರಿಂದ ಮೂರು ಕಿ.ಮೀ. ನಡೆದೇ ಹೋದಳು.
ಮಾರನೆಯ ದಿನ ಬೇಗನೆ ಎದ್ದು ಭತ್ತದ ಗದ್ದೆಗೆ ಹೋದಳು. ಅದಾಗಲೇ, ಆ ವ್ಯಕ್ತಿ ಬಂದಿದ್ದ. ಆತನನ್ನು ಭೇಟಿ ಮಾಡಿದ ಗಂಜಾಯಮ್ಮ ತಾನು ಮತ್ತು ತನ್ನ ಮಗಳಿಗೆ ದುಡಿಯಲು ಅವಕಾಶ ಮಾಡಿ ಕೊಡಲು ಕೇಳಿಕೊಂಡಳು. ಆತ ಒಪ್ಪಿಗೆ ಕೊಟ್ಟು ಇಲ್ಲಿಯೇ ಇರಬೇಕಾಗುತ್ತದೆ ಎಂದಾಗ ಈಕೆ ಒಪ್ಪಿದಳು. ಆತ ಕೆಲಸದ ಬಗ್ಗೆ ಹೇಳಿ ಪಟ್ಟಣಕ್ಕೆ ಹೊರಟು ಹೋದ.
ಈಗ ತಾಯಿ ಮಗಳಿಬ್ಬರೂ ಕಾಡಿನ ಮಧ್ಯದಲ್ಲಿ ವಾಸ ಮಾಡಲಿಕ್ಕೆ ತಮ್ಮ ಸಾಮಾನು ಸರಂಜಾಮುಗಳನ್ನು ತಾವಿದ್ದಲ್ಲಿಗೆ ಸಾಗಿಸಿಕೊಂಡರು. ಅವರ ಜೀವನ ಈಗ ಒಂದು ಸಣ್ಣ ಜೋಪಡಿಯಲ್ಲಿ ನಡೆಯಿತು. ಅಲ್ಲಿ ಅವರಿಗೆ ರಾತ್ರಿ ಕಳೆಯುವುದೇ ಸಮಸ್ಯೆ ಆಯಿತು. ಏಕೆಂದರೆ, ಅಲ್ಲಿ ಯಾವಾಗಲೂ ಕಾಡಿನ ಕಗ್ಗತ್ತಲು ಇರುತ್ತಿತ್ತು. ಹಾಗಾಗಿ, ಎಣ್ಣೆಯ ದೀಪದ ಮಂದ ಬೆಳಕಿನಲ್ಲಿಯೇ ಜೀವಿಸ ಬೇಕಾಯಿತು. ಇದನ್ನರಿತ ಅವರು ಸಂಜೆ ಯಾಗುವದರೊಳಗೆಯೇ ರಾತ್ರಿಯ ಊಟದ ಪದಾರ್ಥಗಳನ್ನು ತಯಾರಿಸುತ್ತಿದ್ದರು.
ಅವರು ಕಾಡಿನಲ್ಲಿ ಸೌದೆಗಾಗಿ ಕಟ್ಟಿಗೆಗಳನ್ನು ಆಯ್ದು ಕೊಂಡು ಬರಲು ಹೋಗ ಬೇಕಾಗುತ್ತಿತ್ತು. ಅದಕ್ಕಾಗಿ ದೇವಿರೀನೇ ಹೋಗುತ್ತಿದ್ದಳು. ಆಮೇಲೆ ಬಂದು ತಾಯಿಗೆ ಸಹಾಯ ಮಾಡಿ, ಭತ್ತದ ಗದ್ದೆಯಲ್ಲಿಯೂ ಕೆಲಸ ಮಾಡುತ್ತಿದ್ದಳು. ಈ ರೀತಿ ಅವರ ಉದ್ಯೋಗ ಮತ್ತು ಜೀವನ ನಿರಂತರ ಸಾಗಿತು.
ಹೀಗೆಯೇ ಒಂದು ದಿನ ಸೌದೆಯ ಕಟ್ಟಿಗೆ ಆಯ್ದು ಕೊಂಡು ಬರಲು ಹೋದಾಗ, ದೇವಿರಿ ತಲೆ ತಗ್ಗಿಸಿಕೊಂಡು ಕಟ್ಟಿಗೆಗಳನ್ನು ಆಯುತ್ತಿದ್ದಳು. ಅದೇ ಸಮಯದಲ್ಲಿ ಕಾಡಿನ ಯುವಕರಿಬ್ಬರು ಆಕೆಯ ಹತ್ತಿರಕ್ಕೆ ಬಂದರು. ಅದರಲ್ಲಿ ಒಬ್ಬ ಆಕೆಯ ಮೈಕಟ್ಟು ನೋಡುತ್ತಲೆಯೇ ನಿಂತ. ಆಗ ದೇವಿರಿ ಮುಜುಗರಗೊಂಡು, ತಲೆ ತುಂಬಾ ಸೆರಗನ್ನು ಹೊದ್ದು ತನ್ನ ಕೆಲಸ ಮುಂದುವರೆಸಿದಳು. ಸ್ವಲ್ಪ ಹೊತ್ತಾದ ಮೇಲೆ ಆ ಯುವಕರು ಅಲ್ಲಿಂದ ಹೊರಟು ಹೋದರೆಂದು ಆಕೆಗೆ ಅನಿಸಿತು. ಆಮೇಲೆ ಆಯ್ದ ಸೌದೆ ಕಟ್ಟಿಗೆಗಳನ್ನು ಹೊತ್ತು ಕೊಂಡು ತನ್ನ ಜೋಪಡಿಗೆ ಬಂದಳು. ಆದರೇ, ಆಕೆಗೆ ಅರಿವಿಲ್ಲದಂತೆ ಆ ಯುವಕರಿಬ್ಬರೂ ಆಕೆಯ ಹಿಂದೆಯೇ ಬಂದು ಆಕೆಯ ವಾಸ ಸ್ಥಳ ನೋಡಿಕೊಂಡು ಹಿಂದಿರುಗಿದರು.
ಒಂದೆರಡು ದಿನಗಳು ಕಳೆದ ಮೇಲೆ ಗಂಜಾಯಮ್ಮ ಮತ್ತು ದೇವೀರಿ ಇದ್ದಲ್ಲಿಗೆ ಮೂರು ನಾಲ್ಕುಜನ ಕಾಡಿನ ಹಿರಿಯರು ಬಂದರು. ಅವರ ವೇಷ ಭೂಷಣಗಳನ್ನು ನೋಡಿದರೆ ಆಶ್ಚರ್ಯವಾಗುತ್ತಿತ್ತು ! ಅವರು ಕಡಿಮೆ ಬಟ್ಟೆ ಇರುವ ಉಡುಪುಗಳನ್ನು ತೊಟ್ಟು, ಚರ‍್ಮದ ಉಡುಪುಗಳನ್ನು ಹೊದ್ದುಕೊಂಡು, ಕೈಯಲ್ಲಿ ತಮ್ಮ ಆಯುಧಗಳನ್ನು ಹಿಡಿದುಕೊಂಡು ಬಂದಿದ್ದರು. ಅವರು ನೇರವಾಗಿ ಬಂದು ಗಂಜಾಯಮ್ಮಳನ್ನು ಭೇಟಿಯಾದರು. ಅವರ ಮಾತುಗಳು ಅಸ್ಪಷ್ಟವಾಗಿದ್ದವು. ಎಲ್ಲೋ ಅಲ್ಲೊಂದು ಇಲ್ಲೊಂದು ಅರ್ಥವಾಗುತ್ತಿದ್ದವು. ಅವರ ಭಾಷೆ ಕನ್ನಡವೇನೋ ಇತ್ತು, ಆದರೇ, ಕಾಡು ಭಾಷೆ ಅದರಲ್ಲಿ ತುಂಬಿತ್ತು.
ಆಗ ಬಂದವರಲ್ಲಿ ಒಬ್ಬ ಆಕೆಗೆ ಸಂಜ್ಞೆ ಮಾಡಿ ನಮಸ್ಕರಿಸಿದ. ಆಗ ಈಕೆ ‘ಇವರಲ್ಲಿ ಅದೆಷ್ಟು ವಿಧೇಯತೆ’ ಎಂದು ಹಿಗ್ಗಿದಳು. ಆಗ ಆತ ದೇವಿರಿ ಕಡೆಗೆ ಬೆರಳು ಮಾಡಿ ತಮಗೆ ಕೊಡಲು ಹೇಳಿದ. ಆಗ ಗಂಜಾಯಮ್ಮ ಗಾಭರಿಯಾಗಿ ನಡುಗ ತೊಡಗಿದಳು. ಅದನ್ನು ಕಂಡ ಕಾಡು ಜನರು ಆಕೆಗೆ ಎರಡೂ ಕೈ ಮುಂದೆ ಮಾಡಿ, ನಮಸ್ಕರಿಸುತ್ತಾ ಕೈಗಳನ್ನು ಝಾಡಿಸುತ್ತಲೇ ಹೇಳಿದರು.’ ಏನೂ ತೊಂದರೆ ಇಲ್ಲ’ ಎಂದು ಸಂಜ್ಞೆ ಮಾಡಿದರು. ಅಷ್ಟರಲ್ಲೇ ಅವರಲ್ಲೊಬ್ಬ ಮಧ್ಯದಲ್ಲಿ ಬಂದು ವಿವರಿಸಿ ಹೇಳಿದನು. ಅದು ಹೀಗಿತ್ತು;
‘ನಮ್ಮ ಕಾಡಿನ ಒಡೆಯನ ಮಗನು ಈ ಯುವತಿಯನ್ನು ಕಂಡು ಮೋಹಿತನಾಗಿ ಮದುವೆಯಾಗಲು ಬಯಸಿದ್ದಾನೆ’ ಎಂದು ಹೇಳಿದ.
‘ಅಯ್ಯೋ ನಾವು ಇಲ್ಲಿಗೆ ದುಡಿಯಲಿಕ್ಕೆ ಬಂದವರು, ಮತ್ತೇ ನಮ್ಮೂರಿಗೆ ಹೊರಟು ಹೋಗುತ್ತೇವೆ. ಅದು ಸಾಧ್ಯವಿಲ್ಲದ ಮಾತು’ ಎಂದು ಗಂಜಾಯಮ್ಮ ಗಾಬರಿಯಿಂದ ಹೇಳಿದಾಗ, ಅವರು ಪುನಃ ಅರಿಕೆ ಮಾಡಿಕೊಂಡರು.
‘ಆ ಹುಡಿಗಿಗೆ ಇಲ್ಲಿ ಏನೂ ತೊಂದರೆ ಯಾಗುವುದಿಲ್ಲ. ಅವಳನ್ನು ನಮ್ಮ ಮಗಳಂತೆ ನೋಡಿ ಕೊಳ್ಳುತ್ತೇವೆ. ದಯಮಾಡಿ ಸಂಭಂದ ಒಪ್ಪಿಕೊಳ್ಳಿ’ ಎಂದರು. ಆಗ ಗಂಜಾಯಮ್ಮ;
‘ನಿಮ್ಮನ್ನು ನೋಡಿದರೇ ನನಗೇಯೇ ಭಯವಾಗುತ್ತದೆ. ನನ್ನ ಮಗಳಿಗೆ ಹೇಗೆ ಆಗಬೇಡ’ ಎಂದು ಆತಂಕ ವ್ಯಕ್ತ ಪಡಿಸಿದಳು.
‘ಇಲ್ಲಾ ತಾಯೀ ನೋಡಲು ನಾವು ಹೀಗೆಯೇ ಇದ್ದೇವೆ. ಏಕೆಂದರೆ, ನಾವು ಕಾಡು ಪ್ರಾಣಿಗಳೊಂದಿಗೆ ಜೀವಿಸುತ್ತೇವೆ. ಹಾಗಾಗಿ, ನಮ್ಮ ಒರಟುತನ ಏದ್ದು ಕಾಣಿಸುತ್ತದೆ’. ಎಂದೊಬ್ಬ.
‘ಅದೇನೇ ಹೇಳಿ, ಸಂಭಂದ ಸಾಧ್ಯವಿಲ್ಲ.’ ಕಡ್ಡಿ ಮುರಿದ ಹಾಗೆ ಹೇಳಿದಳು. ಹಾಗೆ ಹೇಳಿದ್ದಕ್ಕೆ ಅವರಲ್ಲಿಯ ಇನ್ನೊಬ್ಬ ಹೀಗೆ ಹೇಳಿದ;
‘ನೀವು ಅವರ ಹುಡುಗನ ಜೊತೆಗೆ ಮದುವೆ ಮಾಡಿದರೇನೇ ಇಲ್ಲಿ ಬದುಕಿ ಉಳಿಯಲು ಸಾಧ್ಯ. ಇಲ್ಲದಿದ್ದರೇ. ಅರ್ಧಂಭರ್ಧ ನಾವು ಸಾಯಿಸಿ, ಕಾಡು ಪ್ರಾಣಿಗಳಿಗೆ ನಿಮ್ಮನ್ನು ಹಾಕಿ ಬಿಡುತ್ತೇವೆ’ ಎಂದ.
ಆಗ ಆಕೆ ದಿಗಿಲು ಗೊಂಡಳು. ನಮಗೆ ಎಲ್ಲಿಯೂ ಉಳಿಗಾಲ ಇಲ್ಲವೇ ? ಎಂದು ತನ್ನಷ್ಟಕ್ಕೆ ತಾನೇ ಗಂಜಾಯಮ್ಮ ಪ್ರಶ್ನಿಸಿಕೊಂಡಳು ?.
‘ನಿಮಗೆ ಇನ್ನೂ ಒಂದು ವಾರದ ಗಡುವು ಕೊಡುತ್ತೇವೆ. ಅಷ್ಟರಲ್ಲಿ ಒಂದು ನಿರ್ಧಾರಕ್ಕೆ ಬರಬಹುದು’ ಎಂದು ಹೇಳಿ ಅವರೆಲ್ಲಾ ಹೊರಟು ಹೋದರು.
ಗಂಜಾಯಮ್ಮಗೆ ಸಮಸ್ಯೆಯು ಜಟಿಲವೆನಿಸಿತು. ಏನು ಇದು, ಊರಲ್ಲಿ ಕಾಮುಕರ ಕಾಟ ಎಂದು ಇಲ್ಲಿಗೆ ಬಂದರೆ, ಇಲ್ಲಿ ಕೂಡಾ ಕಾಡು ಮನುಷ್ಯರ ಕಾಟ ಶುರುವಾಯಿತಲ್ಲ’ ಎಂದು ನೊಂದು ಕೊಂಡಳು.
ಅಲ್ಲಿಯೇ ಜೋಪಡಿಯ ಪಕ್ಕಕ್ಕೆ ಇರುವ ಒಬ್ಬ ವೃದ್ಧ ಮಹಿಳೆ ಬಂದು ಇವರನ್ನು ಸಾಂತ್ವನ ಗೊಳಿಸಿದಳು. ಅಲ್ಲದೇ, ಸಮೀಪದಲ್ಲಿಯೇ ಒಂದು ದೇವಸ್ಥಾನವಿದೆ. ಅಲ್ಲಿಯ ದೇವತೆ ಅಶಕ್ತರಿಗೆ, ಮತ್ತು ಅಸಹಾಯಕರಿಗೆ ಒಲಿಯುತ್ತಾಳೆ. ಅಲ್ಲಿಗೆ ಹೋಗಿ ಪೂಜೆ ಮಾಡಿ ಬೇಡಿಕೊಳ್ಳಿ ಎಂದಳು. ಆಗ ತಡ ಮಾಡದೆಯೇ ಗಂಜಾಯಮ್ಮ ಮತ್ತು ದೇವಿರೀ ಇಬ್ಬರೂ ಆ ದೇವಸ್ಥಾನಕ್ಕೆ ಹೋದರು. ಕೆಲವು ಕ್ಷಣಗಳಲ್ಲಿ ಅಲ್ಲಿಗೆ ತಲುಪಿದರು. ಆ ದೇವಸ್ಥಾನ ನಿಶ್ಯಬ್ದವಾಗಿತ್ತು !
ಅಲ್ಲಿ ಯಾರೂ ಕಾಣಲಿಲ್ಲ. ಆಮೇಲೆ ಇಬ್ಬರೂ ಗರ್ಭ ಗುಡಿಯೊಳಗೆ ಇಣುಕಿ ನೋಡಿದರು. ಅಲ್ಲಿ ಒಳಗೆ ಒಬ್ಬ ಗಡ್ಡಧಾರಿ ಸನ್ಯಾಸಿ ದೇವಿ ಮೂರ್ತಿಯ ಮುಂದೆ ಕುಳಿತಂತೆ ಅನಿಸಿತು. ಮೆಲ್ಲಗೆ ಆತನನ್ನು ಮಾತಾಡಿಸಿದರು.
‘ನಮಸ್ಕಾರ ಗುರುಗಳೇ’ ಎಂದಾಗ ಆತ ತಿರುಗಿ ಇವರ ಕಡೆಗೆ ನೋಡಿದ.
‘ಏನಾಗಬೇಕು ?’ ಎಂದು ಸಂಜ್ಞೆ ಮಾಡಿದ.
ಆಗ ಗಂಜಾಯಮ್ಮ ಹೀಗೆ ಹೇಳಿದಳು; ‘ಗುರುಗಳೇ ನಾವು ಇಲ್ಲಿ ಭಯದ ನೆರಳಲ್ಲಿ ಇದ್ದೇವೆ. ಏನೋ ಹೊಟ್ಟೆಗಾಗಿ ಉದ್ಯೋಗ ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇವೆ. ಆದರೇ, ಇಲ್ಲಿಯ ಕಾಡಿನ ಜನರು ನನ್ನ ಮಗಳನ್ನು ಮದುವೆ ಮಾಡಿಕೊಡಲು ಕೇಳುತ್ತಿದ್ದಾರೆ. ಅದು ನಮಗೆ ಸುತಾರಾಂ ಇಷ್ಟವಿಲ್ಲ. ಅಲ್ಲದೇ, ನಮ್ಮ ಸಂಪ್ರದಾಯವೇ ಬೇರೆ.’ ಎಂದಳು.
ಅದಕ್ಕೆ ಆತ ದೇವಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿ ಧ್ಯಾನ ಮಗ್ನನಾದ. ಇವರೂ ಕೂಡ ಕಣ್ಣು ಮುಚ್ಚಿಕೊಂಡು ದೇವತೆಯ ಕಡೆಗೆ ನೋಡುತ್ತಾ ಕುಳಿತರು.
ಸುಮಾರು ಒಂದು ಘಂಟೆ ಯಾದರೂ ಆ ವ್ಯಕ್ತಿ ಏನೂ ಹೇಳಲಿಲ್ಲ. ಇವರಿಬ್ಬರೂ ಇನ್ನೂ ಆತಂಕಕ್ಕೆ ಒಳಗಾದರು. ಸ್ವಲ್ಪ ಹೊತ್ತಿನ ಮೇಲೆ ಆ ವ್ಯಕ್ತಿ ತಢನ್ನ ಕಣ್ಣುಗಳನ್ನು ತೆರೆದು ಇವರ ಬಳಿ ಬಂದು ಹೀಗೆ ಹೇಳಿದ;
‘ದೇವಿ ಹೀಗೆ ಹೇಳುತ್ತಿದ್ದಾಳೆ.. ನಿಮ್ಮಿಂದ ಒಂದು ಬಲಿ ಬೇಕಂತೆ’.
ಆಗ ತಾಯೀ ಮಗಳಿಬ್ಬರೂ ಧಿಗ್ಭ್ರಾಂತರಾದರು. ಅವರಿಗೆ ಏನೂ ಹೊಳೆಯಲಿಲ್ಲ. ಅದ್ಹೇಗೆ ಕಷ್ಟದಲ್ಲಿದ್ದ ಭಕ್ತರನ್ನು ದೇವಿ ರಕ್ಷಿಸುತ್ತಾಳೆಯೇ ವಿನಃ ಅವರನ್ನು ಬಲಿ ಕೇಳುವುದಿಲ್ಲ. ಆದರೇ, ಈ ವ್ಯಕ್ತಿ ಏನೋ ಸಂಚು ಮಾಡಿದ್ದಾನೆಯೇ ಎಂದನಿಸಿತು. ಆಗ ಗಂಜಾಯಮ್ಮಗೆ ಆ ವ್ಯಕ್ತಿಯ ಜೊತೆಗೆ ಮುಕ್ತವಾಗಿ ಮಾತಾಡಬೇಕೆನಿಸಿತು. ಆಕೆ ಹೀಗೆ ಹೇಳಿದಳು;
‘ಗುರುಗಳೇ, ನೀವು ಹಿರಿಯರು ಮತ್ತು ದೇವಿ ಹತ್ತಿರ ಇರುವವರು. ನೀವೇ ನಮಗೆ ರಕ್ಷಣೆಗೆ ಬರಬೇಕು. ನಾವು ಅಸಹಾಯಕರು, ನಮಗೆ ಸಹಾಯಧನ ಮಾಡಿ’ ಎಂದು ಇಬ್ಬರೂ ಕೈ ಜೋಡಿಸಿದರು.
‘ನೋಡಿ ಅಮ್ಮ, ನಾನು ಸುಮಾರು ಬೆಳಗ್ಗೆಯಿಂದ ಇಲ್ಲಿ ಕುಳಿತಿದ್ದೇನೆ ಮತ್ತು ನಾನು ನನ್ನ ಹೊಟ್ಟೆಗೆ ಇನ್ನೂ ಏನೂ ಹಾಕಿಕೊಂಡಿಲ್ಲ. ದೇವಿಗೆ ಏನಾದರೂ ಬಲಿ ಅಥವಾ ಙನೈವೇದ್ಯೆಯಾದಾಗ ಮಾತ್ರ ತಾಯೀ ಶಾಂತ ಆಗುವಳು’ ಎಂದ.
‘ಹೌದೇ.. ಈಗ ನಾವು ಏನು ಮಾಡಬೇಕು ?’ ಎಂದಳು ಗಂಜಾಯಮ್ಮ. ಆಗ ಅವರು;
‘ತಾಯೀಗೆ ನಿಮ್ಮನ್ನೇ ಬಲಿ ಕೊಡಬೇಕೆಂದೇನಿಲ್ಲ, ಪ್ರಾಣಿ ಬಲಿ ಕೂಡ ಆಗಬಹುದು’ ಎಂದ.
‘ಗುರುಗಳೇ, ನಮಗೆ ಅದರ ರೂಢಿ ಇಲ್ಲ. ಅಲ್ಲದೇ, ನಾವು ಎಂದೂ ಹಾಗೆ ಮಾಡಿಲ್ಲ’ ಎಂದಳು.
‘ಸರಿ.. ಕಾದು ನೋಡೋಣ.. ಯಾರಾದರೂ ನಿಮ್ಮ ಸಹಾಯಕ್ಕಾಗಿ ಬಲಿ ನೈವೇದ್ಯೆ ನೀಡುತ್ತಾರೇನೋ ಎಂದು ನೋಡಬೇಕು’ ಎಂದರು.
ಅವರು ಹಾಗೆ ಹೇಳುವಷ್ಟರಲ್ಲಿ ಒಂದು ಹದ್ದು ಹಾವನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ಬರುವುದನ್ನು ಆ ಗಡ್ಡ ಧಾರಿಯ ಗಮನಕ್ಕೆ ಬಂತು. ಅದಕ್ಕೆ ಅವರು ಆವ್ಹಾನ ನೀಡಿದರು. ವಿಚಿತ್ರವೆಂದರೇ, ರಣ ಹದ್ದು ಅರ್ಧಂಬರ್ದ ಸತ್ತ ಹಾವನ್ನು ದೇವಸ್ಥಾನದ ಮುಂದೆ ಬಿಸಾಕಿ ಹೊರಟು ಹೋಯಿತು. ಆಗ ಆ ಸಾಧು ವ್ಯಕ್ತಿ ಹೀಗೆ ಹೇಳಿದ;
‘ತಾಯಿಯ ಬಯಕೆ ಈಡೇರಿತು. ಈಗ ಆಶಿರ್ವಾದ ಮಾಡುತ್ತಾಳೆ’ ಎಂದ.
ಗಂಜಾಯಮ್ಮ ಮತ್ತು ದೇವಿರಿ ಕೈ ಜೋಡಿಸಿದರು. ಆಗ ಮಹದಾಶ್ಚರ್ಯ ಎಂಬಂತೆ ದೇವಸ್ಥಾನದ ಮುಂದೆ ಬಂದು ಒಂದು ಚಕ್ಕಡಿ ನಿಂತಿತು. ಅದರಲ್ಲಿ ಕುಳಿತಿದ್ದ ಯುವಕನೊಬ್ಬ ದೇವಸ್ಥಾನದ ಕಡೆಗೆ ನೋಡಿ ಹೀಗೆ ಕೇಳುತ್ತಿದ್ದ;
‘ಗುರುವಯ್ಯ..ಯಾರಾದರೂ ಕಾಡಿ ನಾಚೆಗೆ ಬರುತ್ತಾರಾ ?’ ಆಗ ಸಾಧು ಗಂಜಾಯಮ್ಮ ಮತ್ತು ದೇವೀರಿ ಕಡೆಗೆ ಸನ್ನೆ ಮಾಡಿ ಅಲ್ಲಿಗೆ ಹೋಗುವಂತೆ ಹೇಳಿದಾಗ ದೇವಿಗೆ ಪುನಃ ನಮಸ್ಕರಿಸಿ, ಸಾಧುಗೆ ಕೂಡ ನಮಸ್ಕರಿಸಿ ಚಕ್ಕಡಿಯ ಕಡೆಗೆ ಹೋಗಿ, ಅದನ್ನು ಏರಿ ಕುಳಿತರು. ಆತ ತನ್ನಲ್ಲಿದ್ದ ಎರಡು ಕಂಬಳಿಗಳನ್ನು ಅವರಿಗೆ ಕೊಟ್ಟು ತಾಯೀ ಮತ್ತು ಮಗಳಿಗೆ ಮೈ ತುಂಬಾ ಹೊದ್ದು ಕೊಳ್ಳಲು ಹೇಳಿದ. ಅವರು ಹಾಗೆಯೇ ಮಾಡಿದರು.
ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು. ಆದರೆ, ಚಕ್ಕಡಿಯ ಯುವಕ ನಿಲ್ಲಿಸದೆಯೇ ಓಡಿಸುತ್ತಾ ಕಾಡಿನಿಂದ ಹೊರಗೆ ಬಂದಾಗ, ತಾಯಿ ಮಗಳಿಗೆ ನೆಮ್ಮದಿ ಮೂಡಿತು.
ಈಗ ಅನಿವಾರ‍್ಯವಾಗಿ ತಮ್ಮ ಊರಿಗೆ ಹೋಗಿ, ಎದೆಗುಂದದೆಯೇ ಜೀವನ ನಡೆಸಲು ತಾಯೀ ಮಗಳು ನಿರ್ಧರಿಸಿದರು.
ಬಿ.ಟಿ.ನಾಯಕ್,
Very nice story. We involved inside the story feel good
You have shown a good interest in my story. Thanks for your valuable appreciation.
ಕಥೆ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ನಾಯಕ್ ಅವರಿಗೆ.
ನಿಮ್ಮ ಪ್ರೋತ್ಸಾಹ ನನಗೆ ಖುಷಿ ತಂದಿದೆ. ಧನ್ಯವಾದಗಳು.
ಗ0ಜಾಯಮ್ಮ ಹಾಗೂ ದೇವಿರಿ ತಾಯಿ, ಮಗಳು ಈ ಶ್ರಮ ಜೀವಿಗಳ ಕಥೆ ಚೆನ್ನಾಗಿ ಮೂಡಿ ಬಂದಿದೆ. ಕೊನೆಗೂ ಕಾಮುಕರಿಂದ ದೇವಿರಿ ತಪ್ಪಿಸಿ ಕೊಂಡು ತಾಯಿ ಜೊತೆಗೆ ನೆಮ್ಮದಿ ಜೀವನ ನಡೆಸಿದ ಕಥೆ ಸಂತಸದಿಂದ ಅಂತ್ಯ ಗೊಂಡಿದೆ.
ಅಭಿನಂದನೆಗಳು
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ವಾಮನಾಚಾರ್ಯ ಸರ್.
Good one sir..
Thanq Pralhad Kulkarni.
ಹೊಟ್ಟೆ ಹೊರೆಯಲು ಕಷ್ಟಪಡುವ ಶ್ರಮಜೀವಿಗಳಿಗೆ ಇಂತಹ ಆತಂಕಗಳು ಸಾಮಾನ್ಯ. ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಂಡ ತಾಯಿ ಮಗಳ ಧೈರ್ಯ ಮತ್ತು ಸಂಕಲ್ಪ ಮೆಚ್ಚುವಂತದ್ದೇ…
ಅಪಾಯದಿಂದ ಪಾರಾದ ಸಂದರ್ಭ ಕೊಂಚ ಅಸಂಭಾವ್ಯತೆಯನ್ನು ತೋರಿಸಿದರೂ ಕಥೆಯ ಓಘಕ್ಕೆ ತೊಡಕಾಗಿಲ್ಲ.
ಅಭಿನಂದನೆಗಳು.
ಧನ್ಯವಾದಗಳು.
ಕಥೆ ತುಂಬಾ ಇಷ್ಟವಾಯ್ತು
ನಿಮಗೆ ತುಂಬು ಹೃದಯದ ಧನ್ಯವಾದಗಳು.
ವಾಸ್ತವದ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು.
ಸರ್, ನಿಮ್ಮ ಅನಿಸಿಕೆ ಸ್ಪೂರ್ತಿ ತಂದಿದೆ. ಧನ್ಯವಾದಗಳು ಸರ್.