ಕಾವ್ಯ ಸಂಗಾತಿ
ಪ್ರೊ. ಸಿದ್ದು ಸಾವಳಸಂಗ-
“ಮಾನವ ಕುಲಂ ತಾನೊಂದೆ ವಲಂ”
ಪರರ ನೋಡಿ
ಕುಹಕ ನಗೆ ಬೀರಿ
ಸುಖ ಪಡುವ ಮನುಜ
ನಿನ್ನ ಯೋಗ್ಯತೆಯೇನು ?
ಅವರಿವರ ಹಿಂದೆ
ಹಂದೆಯಂತೆ ಹೀಯಾಳಿಸಿ
ಬೆಲ್ಲದಂತೆ ಮುಂದೆ ಮಾತನಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಮುಂದುವರೆವವರ
ಹಿಂದೆಳೆದು ಹಗ್ಗ ಕಟ್ಟಿ
ಬಗ್ಗಿ ನಡೆಯುವಂತೆ ಮಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಕುಲ-ಕುಲಗಳ ನಡುವೆ
ಕಲಹ ಹಬ್ಬಿಸಿ ಗುಲ್ಲೆಬ್ಬಿಸಿ
ವಿಕಟ ನಗೆ ಬೀರುವ ಮನುಜ
ನಿನ್ನ ಯೋಗ್ಯತೆಯೇನು ?
ಬಾವಿಯಲ್ಲಿ ಬಿದ್ದವರ
ನೋಡಿಯೂ ಮೇಲೆತ್ತದೆ
ಕಲ್ಲೊಗೆದು ಕಾಡುವ ಮನುಜ
ನಿನ್ನ ಯೋಗ್ಯತೆಯೇನು ?
ಮಾನವ ಕುಲಂ ತಾನೊಂದೆ ವಲಂ
ಎಂದರಿತು ಬಾಳಿದರೆ ನೀನು ಮೇಲು
ಇಲ್ಲದಿರೆ ತಿಪ್ಪಿಯ ಮೇಲಿನ ಕೋಳಿಗಿಂತ ಮನುಜ
ನಿನ್ನ ಬಾಳು ಬಲು ಕೀಳು !!
——————————–
ಪ್ರೊ. ಸಿದ್ದು ಸಾವಳಸಂಗ