ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಮರ್ಪಣೆ

ಪ್ರಕೃತಿಯಲ್ಲಿ ಬೆಳೆದ ಗಿಡ ಮರಗಳು ರುಚಿಕರವಾದ ಹಣ್ಣುಗಳನ್ನು, ಹೂವುಗಳನ್ನು ಕೊಡುತ್ತವೆ ನಿಜ ಅದಕ್ಕೆ ಪ್ರತಿಯಾಗಿ ನಮ್ಮಿಂದ ಏನನ್ನು ಬಯಸುವದಿಲ್ಲ. ಫಲ ತುಂಬಿದ ಮರಗಳು ಬಾಗುವಂತೆ ತಮ್ಮನ್ನೇ ತಾವು ಜಗತ್ತಿಗೆ ಸಮರ್ಪಸಿಕೊಳ್ಳುತ್ತವೆ. ಈ ಮೂಲಕ ಧನ್ಯತೆಯನ್ನು ಪಡೆದುಕೊಳ್ಳುತ್ತವೆ. ಇವುಗಳಿಗೆ ಪ್ರತಿಯಾಗಿ ನಮ್ಮ ಮನದಾಳದಲ್ಲಿ ಅವುಗಳ ಬಗ್ಗೆ ನಮಗೆ ಗೊತ್ತಿಲ್ಲದಂತೆ ಪ್ರೀತಿ, ಕಾಳಜಿಯೊಂದಿಗೆ ಅವುಗಳ ಸಮರ್ಪಣಾ ಭಾವ ನಮಗೆ ಪಾಠವಾಗುತ್ತದೆ.
ಒಂದು ಕೋಣೆಯಲ್ಲಿ ಸೊಗಸಾದ ಸುವಾಸನೆ ಬರುತ್ತದೆ. ಎಲ್ಲಿಂದ ಬರುತ್ತಿದೆ ಎಂದು ನೋಡಿದರೆ ಒಂದು ಮೂಲೆಯಲ್ಲಿ ಊದಿನ ಕಡ್ಡಿ ಉರಿಯುತ್ತಿರುತ್ತದೆ ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಆ ಜಾಗದಲ್ಲಿ ಒಂದು ಚಿಟಿಕೆ ಬೂದಿ ಮಾತ್ರ ಕಂಡು ಬರುತ್ತದೆ. ಅಂದರೆ ತನ್ನನ್ನು ತಾ ಸಮರ್ಪಸಿಕೊಂಡು ಸುತ್ತಲೂ ಸುವಾಸನೆಯನ್ನು ಪಸರಿಸಿದ ಊದಿನಕಡ್ಡಿಯ ಭಾವವೇ ಅದರ ತ್ಯಾಗ ನಮ್ಮ ಚೈತನ್ಯಕೇ ಮರು ಜೀವ ತುಂಬುತ್ತದೆ.
“ಶರಣರ ಬಾಳನ್ನು ಮರಣದಲ್ಲಿ ಕಾಣು “ಎಂಬಂತೆ ನಮ್ಮ ವ್ಯಾಪ್ತಿಯ ಯಾವುದೇ ಕಾಯಕದ ಫಲವನ್ನು ನಾವು ಅನುಭವಿಸುತ್ತಿದ್ದೇವೆಂದರೆ ಅದಕ್ಕೆ ಪ್ರತಿಯಾಗಿ ನ್ಯಾಯ ಸಲ್ಲಿಸಬೇಕು. ನಿಷ್ಠೆ, ತ್ಯಾಗದಿಂದ ಕರ್ತವ್ಯವನ್ನು ನಿರ್ವಹಿಸಲು ಕಾಯಾ ವಾಚಾ ಮನಸಾ ಸಮರ್ಪಸಿಕೊಂಡಾಗ ಆತ್ಮ ತೃಪ್ತಿಯೊಂದಿಗೆ ಅವರ ಉಸಿರು ಹೋದರು ಹೆಸರು ಉಳಿದು ಅವರ ಜೀವನವೇ ಒಂದು ಪಾಠವಾಗುತ್ತದೆ.


ಕುಟುಂಬದಲ್ಲಿ ತಾಯಿಯ ತ್ಯಾಗಕ್ಕೆ ಬೆಲೆ ತೇರುವುದುಂಟೆ? ತನ್ನ ಮಗು ಅನಾರೋಗ್ಯಕ್ಕೆ ತುತ್ತಾದರೆ ಆ ತಾಯಿ ತನ್ನ ಊಟ, ನಿದ್ದೆಗಳನ್ನೇ ತ್ಯಾಗ ಮಾಡಿ ತನ್ನ ಮಗುವಿನ ಕ್ಷೇಮಕ್ಕಾಗಿ ತನ್ನನ್ನೇ ಸಮರ್ಪಸಿಕೊಳ್ಳುತ್ತಾಳೆ.ಹೆತ್ತವರು ತಾವು ಕಷ್ಟಪಟ್ಟರೂ ತೊಂದರೆ ಇಲ್ಲಾ ತಮ್ಮ ಮಕ್ಕಳು ತಮ್ಮಂತೆ ಕಷ್ಟ ಪಡುವದು ಬೇಡ ಎಂಬ ನಿಟ್ಟಿನಲ್ಲಿ ವಿಚಾರ ಮಾಡಿ ಕೆಲವೊಮ್ಮೆ ತಮ್ಮ ಮಕ್ಕಳನ್ನು ಅತಿಯಾಗಿ ನಂಬಿ ಎಲ್ಲ ಮುಗಿದು ಹೋದ ಮೇಲೆ ರೋಧಿಸಿದಡೆನು ಫಲ? ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಮರವಾದಾಗ ಬಗ್ಗದ ಮನಸ್ಥಿತಿ ಮಕ್ಕಳದು. ಯಾವ ಮಗು ಬಾಲ್ಯದಲ್ಲಿ ಕಷ್ಟ ಪರಿಸ್ಥಿತಿಯನ್ನು ಸವಾಲನ್ನಾಗಿ ಸ್ವೀಕರಿಸುವ ಎದೆಗಾರಿಕೆಯನ್ನು ಹೊಂದಿರುತ್ತಾನೋ ಅವನೊಬ್ಬ ಸಮರ್ಪಣಾ ಭಾವದ ಸಮಾಜ ಸುಧಾರಕ ಇಲ್ಲವೇ ಸಾಧಕನಾಗಬಲ್ಲ. ಇದಕೆ ಸಂಪೂರ್ಣ ಹೆತ್ತವರ ಸಹಕಾರ ಬೇಕು
ಡಾಕ್ಟರ್ ಎ. ಪಿ. ಜೆ ಅಬ್ದುಲ್ ಕಲಾಂ ಹೇಳುವಂತೆ “ನಾವು ಕನಸುಗಳನ್ನು ಕಾಣಬೇಕು, ಆ ಕನಸುಗಳು ಹೇಗಿರಬೇಕೆಂದರೆ ನಮ್ಮನ್ನು ನಿದ್ದೆ ಮಾಡಲು ಬಿಡಬಾರದು ” ಎಂಬಂತೆ ನಮ್ಮ ಗುರಿ ಸಾಧನೆಗೆ ನಮ್ಮ ಪ್ರಾಮಾಣಿಕ ಪರಿಶ್ರಮ, ತಾಳ್ಮೆ,ಪ್ರಯತ್ನದ ಸಮಯೋಚಿತ ಸಮರ್ಪಣೆಯೇ ನಮ್ಮ ಯಶಸ್ಸು.
ಕಳೆದ ಸಾವಿರ ವರ್ಷಗಳಿಂದ ಸ್ವಾತಂತ್ರ್ಯಕ್ಕಾಗಿ ದೇಶಭಕ್ತರ ತ್ಯಾಗ ಬಣ್ಣಸಲಸದಳ! ಗಲ್ಲು ಗಂಬವನ್ನು ನಾ ಮುಂದು ತಾ ಮುಂದು ಎಂದು ಏರಿದ ವೀರ ಯೋಧರ ಸಾಹಸ ಸ್ವಾತಂತ್ರ್ಯಕ್ಕೆ ಅಡಿಪಾಯವಾಗಿ ರೂಪಿಸಲ್ಪಟ್ಟಿತಲ್ಲವೇ? ಅದರ ಪರಿಣಾಮವೇ ನಮ್ಮೆಲ್ಲರ ಸ್ವತಂತ್ರದ ಸೊಗದ ಬದುಕು.
ಆದರೆ ಇಂದು ಸಮರ್ಪಣಾ ಭಾವ ತಾನಾಗಿಯೇ ಅಳಿಯುತ್ತಿದೆ. ಕಾರಣ ಭೋಗಗಳನ್ನು ಅನುಭವಿಸುವ ಮನಸ್ಸಿಗೆ ಇಂಬು ಗೊಟ್ಟು ಬೆಳೆಸಿಕೊಂಡು ಬರುವುದೇ ಆಗಿದೆ. ಸ್ವಾರ್ಥ ತಾಂಡವ ವಾಡುತ್ತಿದೆ,ಸ್ವಾತಂತ್ರ್ಯ ಎನ್ನುವುದು ಈ ಭೋಗಗಳನ್ನು ಅನುಭವಿಸುವುದಕ್ಕಾಗಿಯೇ ಎಂಬ ಭಾವನೆ.ಮನೆಯಲ್ಲಿ ಕೂಡಾ ಮಕ್ಕಳು ಇದು ನನ್ನದು ನಾನೇಕೆ? ಮತ್ತೊಬ್ಬರಿಗೆ ಹಂಚಬೇಕು ಎನ್ನುವ ಭಾವನೆ ತನ್ನ ಒಡಹುಟ್ಟಿದವರೊಂದಿಗೂ ಬೆಳೆಯುತ್ತದೆ. ಕುಟುಂಬದ ಸದಸ್ಯರೆನಿಸಿಕೊಂಡವರು ಹಂಚಿ ತಿನ್ನುವ ಹೊಂದಿಕೊಂಡು ಬಾಳುವ ನೀತಿಯನ್ನು ಮನದಟ್ಟಾಗಿಸಿದಾಗ ಮಾತ್ರ ಮಕ್ಕಳು ತಾವು ಕೂಡ ಸಮಾಜದಲ್ಲಿ ಇತರರೊಡನೆ ಬೆರೆವ ಸಹಬಾಳ್ವೆಯ ಬದುಕನ್ನು ಆನಂದಿಸುತ್ತಾರೆ. ಇದು ಮೊದಲ ಪಾಠಶಾಲೆಯಾದ ಮನೆಯಿಂದಲೇ ಆರಂಭವಾಗಬೇಕು. ಮನೆಗೆ ಬಂದ ಅತಿಥಿ ಸತ್ಕಾರ, ಸಂವಹನ ಗೌರವದಿಂದ ಕೂಡಿದಾಗ ಮಾತ್ರ ಆ ಮಗು ಸಮಾಜಕ್ಕೆ ಉತ್ತಮವಾದ ಪ್ರಜೆಯಾಗಲು ಸಾಧ್ಯ.
ಇಂದು ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳು, ಪತ್ರಿಕೆಯ ಜಾಹೀರಾತುಗಳು ಮಾನವನು ಸೆಳೆದು ಭೋಗಗಳನ್ನು ಯಾವುದೇ ಮಾರ್ಗದಿಂದಾದರೂ ಅನುಭವಿಸುವ ಆಸೆಯನ್ನು ಅಂಕುರಿಸುವಂತೆ ಮಾಡುತ್ತಿವೆ.
ನಾಡಿಗೂ, ಸಮಾಜಕ್ಕೂ ನಾವು ಮಾಡುವ ತ್ಯಾಗಗಳು ನಿಜವಾಗಿಯೂ ತ್ಯಾಗವೆನಿಸುವದಿಲ್ಲ. ನಮ್ಮಲ್ಲಿರುವ ಸರ್ವಸ್ವವೂ ದೇಶಕ್ಕೆ ಸೇರಿದ್ದು. ನಮ್ಮ ತನು, ಮನ, ಧನ, ಶಕ್ತಿ ಎಲ್ಲವೂ ನಾಡಿನದು ಅದನ್ನು ನಾಡಿಗೆ ಹಿಂತಿರುಗಿಸಿ ಕೊಡುವುದರಲ್ಲಿ ಎಂತಹ ತ್ಯಾಗ ಇದೆ? ಅದು ಬರೀ ಸಮರ್ಪಣೆ ಮಾತ್ರ. ಕೆರೆಯ ನೀರನ್ನು ಕೆರೆಗೆ ಚಲ್ಲು ಎಂಬಂತೆ ಸಮಾಜದಿಂದ ಪಡೆದದ್ದನ್ನು ಮರಳಿ ಸಮಾಜಕೆ ಅರ್ಪಿಸಬೇಕು.
ಮಣ್ಣಿನಲ್ಲಿ ಬೀಜವನ್ನು ಬಿತ್ತುತ್ತೇವೆ. ಅದು ಮಣ್ಣಲ್ಲಿ ಮಣ್ಣಾಗಿ ಸಸಿ ಮೊಳೆಯುತ್ತದೆ. ಬೀಜ ತನ್ನಿರವನ್ನು ಅಳಿದುಕೊಳ್ಳಲು ಬಯಸದಿದ್ದಲ್ಲಿ ಗಿಡ ಹುಟ್ಟುತ್ತಲೇ ಇರಲಿಲ್ಲ.
ನಮ್ಮ ಶಕ್ತಿ, ಸಮಯ, ಧನ, ಚಿಂತನೆ, ದುಡಿಮೆ ಮೊದಲಾದ ಅಷ್ಟಐಶ್ವರ್ಯಗಳನ್ನು ನಾಡಿಗೆ, ದೇಶಕ್ಕೆ ನಿವೇದನವಾಗಿ, ಸಮರ್ಪಣೆಯಾಗಿ ಪರಿವರ್ತಿಸದಿದ್ದರೆ ನಾವು ಕ್ರತಘ್ನರಾಗುವ ಸಂಭವ ಇರುತ್ತದೆ. ಹಂತ ಹಂತವಾಗಿ ಸಮಾಜಮುಖಿ ಕಾರ್ಯಗಳ ಮೂಲಕ ನಮ್ಮ ಮಕ್ಕಳಿಗೂ ಸಮರ್ಪಣಾ ಭಾವದ ಸಂಸ್ಕಾರ ನೀಡೋಣ. ಇಲ್ಲದಿದ್ದರೆ ಮೃಗಗಳಿಗೂ ನಮಗೂ ವ್ಯತ್ಯಾಸವೇನು?
“ಮಾನವ ಮುಖ್ಯವಲ್ಲ, ಮಾನವೀಯತೆ ಮುಖ್ಯ, ಧರ್ಮ ಮುಖ್ಯವಲ್ಲ ದಯೆ ಮುಖ್ಯ “ಎಂಬ ಬಸವಣ್ಣನವರ ವಾಣಿಯಂತೆ ಮಾನವೀಯತೆ ನೆಲೆಯಲ್ಲಿ ಸಮರ್ಪಣೆಯ ಬೆಲೆ ಅರಿತು ಸರ್ವರ ಹಿತದಲ್ಲಿ ನಮ್ಮ ಹಿತವನ್ನು ಕಾಣುವ ಸಂತೋಷದ ಸೆಲೆಯನ್ನು ಹರಿಸಿ ಬದುಕುವ ಕಲೆಯನ್ನು ಕರಗತಮಾಡಿಕೊಳ್ಳೋಣ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

3 thoughts on “

  1. ಅರ್ಥಪೂರ್ಣ ಅಂಕಣ ಬರಹ. ತುಂಬಾ ಚೆನ್ನಾಗಿದೆ ಮೇಡಮ್

Leave a Reply

Back To Top