ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. 
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ

ಮೂರನೆ ಅದ್ಯಾಯ

Yellow Sunflower Macro Photographyt

ಗಜಲ್ ಎನ್ನುವ ನಶೆ

ಗಜಲ್ ಎನ್ನುವ ನಶೆ

ಯಾವುದೇ ಒಂದು ಸಾಹಿತ್ಯ ಪ್ರಕಾರ ಜನಪ್ರಿಯ ಆಗುತ್ತಿದೆ ಅಂದರೆ ಅದು ಜನ ಜೀವನವನ್ನು ಸರಳವಾಗಿ ತನ್ನತ್ತ ಸೆಳೆದುಕೊಂಡು ಒಂದು ಅವಿನಾಭಾವ ಬಂಧ ಬೆಸೆಯುತ್ತಿದೆ ಎಂದೇ ಅರ್ಥ. ಹೌದು ಅರಮನೆಗಳಿಂದ ಕೊಳಚೇರಿಗಳ ಗಲ್ಲಿ ಗಲ್ಲಿ ತಲುಪಿದ ಗಜಲ್ ಬದುಕಿನ ಹೊಸದೊಂದು ಅಭಿವ್ಯಕ್ತಿಯ ತೀವ್ರತೆಯನ್ನು ಸೃಜಿಸಿತು. ಗಜಲ್ ಇಷ್ಟೊಂದು ಯಶಸ್ಸು ಸಾಧಿಸುತ್ತಿದಂತೆ ಆಕರ್ಷಿತರಾದ ಸಾಕಷ್ಟು ಜನ ಅದರ ಪಟ್ಟು, ಚೌಕಟ್ಟು ಮೊದಲಾದವುಗಳನ್ನು ಅರಿತು ತಮ್ಮದೇ ಆದ ವಿಭಿನ್ನ ರೀತಿಯ ಬದುಕಿನ ಒಳ ಹೊರ ಸಂಗತಿಗಳನ್ನು ಹೊರ ಹಾಕತೊಡಗಿದರು. ಪರಿಣಾಮವಾಗಿ ಗಜಲ್ ಇನ್ನಷ್ಟು ದಾಪುಗಾಲು ಇಟ್ಟು ತನ್ನೊಳಗೆ ದೊಡ್ಡ ದೊಡ್ಡ ಗಜಲ್ ರಚನಕಾರರನ್ನು ತುಂಬಿಕೊಳ್ಳತೊಡಗಿತು.

ಸೂಫಿ ಸಂತರಿಂದ ಹೆಚ್ಚೆಚ್ಚು ಪಸರಿಸಿದ ಗಜಲನ ವಿಷಯ ಯಾವಾಗಲೂ ಪ್ರಧಾನವಾಗಿ ಮೋಹ, ಪ್ರೇಮ, ವಿರಹವೇ ಆಗಿರುತ್ತಿತ್ತು. ಇದೇ ಸಂದರ್ಭದಲ್ಲಿ ಪರ್ಷಿಯನ್ ಭಾಷೆಯಿಂದ ಉರ್ದು ಕಡೆಗೆ ಹೊರಳಿದ ಮೊಘಲರು ಈ ಪ್ರೇಮಕಾವ್ಯಕ್ಕೆ ಆಸರೆಯಾಗಿ ನಿಂತ ಕಾರಣ ಲೌಕಿಕ ಅಲೌಕಿಕ ಅನುರಾಗಗಳ ಸಂಬಂಧ ಅಧ್ಯಾತ್ಮಿಕದೆಡೆಗೆ ತುಡಿಯುವಂತೆ ಮೂಡಿ ಬಂದಿದ್ದು ಮಹತ್ವ ಪಡೆದಿತ್ತು. ತನ್ನನ್ನು ತಾನು ಮರೆತು ಉನ್ಮಾದದಲ್ಲಿ ಒಂದಾಗುವ ಸೂಫಿ ಸಂತರ ಗಜಲಗಳು ಭಾರತೀಯ ಗಜಲ್ ಇತಿಹಾಸದ ಮೊದಲ ಮೈಲುಗಲ್ಲುಗಳಾಗಿವೆ.

ಗಜಲ್ ಎನ್ನುವುದೇ ಒಂದು ನಶೆ, ಅದರ ಒಳ ಹೋದವನು ನಶೆಯ ಗುಂಗಿನ ಸವಿಯನ್ನು ಸವಿಯದೇ ಹೊರ ಬರಲಾರ. ಆದ್ದರಿಂದ ಗಜಲ್ ಮಾಡಿದ ಮೋಡಿಯು ದೊಡ್ಡ ಯಶಸ್ಸು ಕಾಣಲು ಮತ್ತೊಂದು ಮಗ್ಗುಲಿನತ್ತ ಹೊರಳಿತು. ಗಜಲದಿಂದ ಅವರು ಬೆಳೆದರಾದರೂ ಗಜಲ್ ಎಂದೊಡನೆ ಅವರೇ ನೆನಪಾಗುವಷ್ಟು ಕೆಲವರು ಗಜಲ್ ಹೆಸರಿಗೆ ಪರ್ಯಾಯವಾದರು. ಗಜಲ್ ಲೋಕ ಕಂಡ ಅಂತಹ ಮಹಾನ್ ಗಜಲ್ ಮಾಂತ್ರಿಕರ ಬಗ್ಗೆ ಚಿಕ್ಕ ಚೊಕ್ಕ ವಿವರಣೆ ನಿಮಗಾಗಿ..

ಅಮೀರ್ ಖುಸ್ರೋ

Amir Khusro - Poems by the Famous Poet - All Poetry

ಭಾರತದ ಗಿಳಿ ಎಂದೇ ಖ್ಯಾತರಾದ ಇವರನ್ನು ಖವಾಲಿಯ ಜನಕ ಎಂದೇ ಪರಿಗಣಿಸಿಲಾಗಿದೆ. ಉತ್ತಮ ಸಂಗೀತಗಾರರೂ ಆದ ಇವರು ಖಾಯಲ್ ಮತ್ತು ತಾರಾನಾ ಎಂಬ ಶೈಲಿಯ ಸಂಗೀತಕ್ಕೂ ಜನಕರಾಗಿದ್ದಾರೆ.

ಸೂಫಿ ಪಂಥಕ್ಕೆ ಸೇರಿದ ಇವರು ಅರಬ್ ರಾಷ್ಟ್ರಗಳ ಮುಖ್ಯ ಅಂಶಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಅಳವಡಿಸುವ ಮೂಲಕ ಹೆಸರು ಮಾಡಿದ್ದಾರೆ. ಗಜಲನ್ನು ತಮ್ಮ ವಿಶಿಷ್ಟ ಸಂಗೀತದಲ್ಲಿ ಅಳವಡಿಸಿಕೊಂಡ ಇವರು ಗಜಲಗೆ ಒಂದು ಹೊಸ ಮೆರುಗು ನೀಡಿ ದೇಶಭಿಮಾನದ ಮೂಲಕ ಮತ್ತೊಂದು ಮಜಲಿನೆಡೆಗೆ ಒಯ್ದರು.

ಮೀರ್ ತಖೀ ಮೀರ್

Mir Taqi Mir

ಗಜಲ್ ಲೋಕದ ರಾಜನಾಗಿ ಮೆರೆದ ಮೀರ್ ತಖೀ ಮೀರ್ ಸೂಫಿ ಸಂತನಾಗಿ ಗಜಲ್ ಪ್ರಕಾರವನ್ನು ಅತ್ಯಂತ ಪ್ರಖರವಾಗಿ ಬೆಳಗಿದವರು. ಪಾರ್ಸಿ, ಟರ್ಕಿಶ್, ಅರಬ್ ಭಾಷೆಯನ್ನು ಸಹ ಬಲ್ಲ ಈತನ ಅಂತರಾಳದ ಸೂಕ್ಷ್ಮ ತುಡಿತಗಳೇ ಆತನ ಗಜಲ್ ವಸ್ತುಗಳಾಗಿದ್ದವು. ಆದ್ದರಿಂದಲೇ ಆತನ ಗಜಲಗಳು ಹೆಚ್ಚು ಆಪ್ತವಾಗಿ ಜನ ಸಾಮಾನ್ಯರು ಗುನುಗುನಿಗಿಸುವಂತಾದವು.

ಮಹಮ್ಮದ್ ಇಕ್ಬಾಲ್

Remembering Muhammad Iqbal, the writer of 'Sare Jahan se Accha ...

ಪಾಕಿಸ್ತಾನದ ರಾಷ್ಟ್ರಕವಿ ಆದ ಮಹಮ್ಮದ್ ಇಕ್ಬಾಲ್ ಅವರನ್ನು ಭಾರತೀಯರು ನೆನಪಿಸಿಕೊಳ್ಳಲು ಇರುವ ಒಂದೇ ಒಂದು ಮುಖ್ಯ ಕಾರಣ ಎಂದರೆ ಅದು “ಸಾಂರೇ ಜಹಾಂಸೇ ಅಚ್ಚಾ, ಹಿಂದುಸ್ತಾನ ಹಮಾರಾ ಹಮಾರಾ” ಎಂಬ ಭಾರತದಾದ್ಯಂತ ಜನರ ನಾಲಿಗೆಯ ತುದಿಯಲ್ಲಿ ನಲಿದಾಡುವ ಗೀತೆ. ಈ ಗೀತೆಯನ್ನು ರಚಿಸಿದ ಕವಿಯಾದ ಇವರ ಮಹತ್ವವನ್ನು ಸಾರಲು ಆ ಗೀತೆಯ ಉದಾಹರಣೆವೊಂದೇ ಸಾಕು. ಇನ್ನೂ ವಿಶೇಷ ಎಂದರೆ ಆ ಗೀತೆ ಒಂದು ಗಜಲ್ ಆಗಿದೆ. ಮಹಮ್ಮದ್ ಇಕ್ಬಾಲ್ ಅವರ ಧೋರಣೆಗಳು, ಪ್ರತಿಪಾದನೆಗಳು ಏನೇ ಇರಬಹುದಾದರೂ ಗಜಲಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅವರನ್ನು ಗಜಲ್ ಲೋಕ ಸದಾ ನೆನೆಯುತ್ತದೆ.

ಮಿರ್ಜಾ ಗಾಲಿಬ್

Mirza Ghalib Shayari Famous Poetry 10 Sher Ghazals Hindi Shayari ...

ತನ್ನ ಬದುಕಿನಲ್ಲಿ ಸಾಕಷ್ಟು ಕಷ್ಟ ನೋವುಗಳನ್ನು ಕಂಡು ಸೆರೆವಾಸವನ್ನು ಸಹ ಅನುಭವಿಸಿದ ಮಿರ್ಜಾ ಅಸಾದುಲ್ಲಾ ಬೇಗ್ ಖಾನ್ ಎನ್ನುವುದು ಮಿರ್ಜಾ ಗಾಲಿಬನ ನಿಜವಾದ ಹೆಸರು ಮತ್ತು ಗಾಲಿಬ್ ಎನ್ನುವುದು ಈತನ ಕಾವ್ಯನಾಮವಾಗಿದೆ.

ಮೊಘಲರು ಭಾರತಕ್ಕೆ ನೀಡಿದ ಪ್ರಮುಖ ಕೊಡುಗೆ ಎಂದರೆ ಮೂರು ಒಂದು ಉರ್ದು ಭಾಷೆ, ಇನ್ನೊಂದು ತಾಜ ಮಹಲ್ ಆದರೆ ಮತ್ತೊಂದು ಮಿರ್ಜಾ ಗಾಲಿಬ್ ಆಗಿದ್ದಾನೆ. ಉರ್ದು ಕಾವ್ಯ ಮತ್ತು ಗಜಲ್ ಸಾಹಿತ್ಯದಲ್ಲಿ ಸಾಕಷ್ಟು ಪ್ರಭಾವಿಸಿದ ಪ್ರಮುಖರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಈತ ಒಂದು ಯುಗದ ಮತ್ತೊಂದು ಜಗತ್ತೇ ಆಗಿ ಹೋಗಿದ್ದ.

ಗಜಲ್ ಅಮೀರ್ ಖುಸ್ರೋನ ಗುಟ್ಟು, ಮೀರ್ ತಖೀ ಮೀರನ ಒಗ್ಗಟ್ಟು, ಇಕ್ಬಾಲನ ಒಗಟು ಮತ್ತು ಗಾಲಿಬ್ ಮನದಾಳದ ಕಟ್ಟುಗಳಿಂದ ಹೊಸ ಹೊಳಪು ಪಡೆದು ಜಗವನ್ನು ಆವರಿಸಿದೆ. ಇವರಷ್ಟೇ ಅಲ್ಲದೇ ಗಜಲ್ ಲೋಕ ಕಂಡ ಅನೇಕ ದಿಗ್ಗಜರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಗಜಲ್ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.

*******

ಬಸವರಾಜ ಕಾಸೆ

Leave a Reply

Back To Top