ಸಂವಿಧಾನ ಶಿಲ್ಪಿ
ತೇಜಾವತಿ ಹೆಚ್. ಡಿ
ರಾಮಜಿ ಭೀಮಾಬಾಯಿಯ ಹದಿನಾಲ್ಕನೆಯ ಪುತ್ರರತ್ನವಾಗಿ
ಬೆಳಗುಬೈಗು ಧೋಹೆ ರಾಮಾಯಣ ಮಹಾಭಾರತ ಸಂಸ್ಕಾರವಾಗಿ
ಹೋದಲ್ಲೆಲ್ಲಾ ಅಸ್ಪೃಶ್ಯತೆಯ ಬಿಸಿಯನ್ನೇ ನೀನುಂಡೆ
ಸಹಪಾಠಿಗಳೆದುರು ದಲಿತನೆಂದು ಅವಮಾನಕ್ಕೀಡಾದೆ!
ಫೆಂಡೆಸೆ ಅಂಬೇಡ್ಕರರ ಪ್ರೀತಿಯ ತುತ್ತಿಗೆ ಪಾತ್ರರಾಗಿ
ಗುರುಗಳ ಕೈಯಲಿ ಭೀಮರಾವ್ ಅಂಬೇಡ್ಕರ್ ಆಗಿ
ಅಸ್ಪೃಶ್ಯರ ವರ್ಗದಲ್ಲೇ ಮೊದಲು ಸನ್ಮಾನಕ್ಕೆ ಪಾತ್ರನಾದೆ
ಭಗವಾನ್ ಬುದ್ಧನ ಚರಿತ್ರೆಯ ಹೊತ್ತಗೆಗೆ ಆಕರ್ಷಿತನಾದೆ !
ಹೆಜ್ಜೆ ಹೆಜ್ಜೆಗೂ ತಿರಸ್ಕಾರದ ಉರಿಯಲ್ಲಿ ಹೊಗೆಯಾಗಿ
ಪಣತೊಟ್ಟೆ ದಲಿತವರ್ಗದವರ ಪಾಲಿಗೆ ಜಾಗೃತಿಯಾಗಿ
ಬಹಿಷ್ಕೃತ ಭಾರತ ಪತ್ರಿಕೆಗೆ ಸಾಮಾಜಿಕ ಹೋರಾಟಗಾರನಾದೆ
ಮಹಾಡದ ಚೌಡರ ಕೆರೆಯ ನೀರ ಮುಟ್ಟಲು ಚಳುವಳಿಯಾದೆ !
ಅನಿಶ್ಚಿತ ಹುಟ್ಟಿನ ಹಿಂದು ಧರ್ಮವ ತೊರೆಯುವ ಪ್ರತಿಜ್ಞೆಯಾಗಿ
ನೆಹರೂರವರ ಪಂಚವಾರ್ಷಿಕ ಯೋಜನೆಗಳಿಗೆ ಮಾರ್ಗದರ್ಶಕರಾಗಿ
ವಿದೇಶಿ ಗಣ್ಯರೆದುರು ಮಂತ್ರಿಮಂಡಲದ ವಜ್ರವಾದೆ
ಭಾರತ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿಯಾದೆ !
ಆಧುನಿಕ ಭಾರತದ ನಿರ್ಮಾಪಕ ಸಮಾಜ ಪ್ರವರ್ತಕನಾಗಿ
ಹಲವು ಗೌರವ ಪದವಿ ಪುರಸ್ಕಾರಗಳಿಗೆ ಭಾಜನರಾಗಿ
ಬೌದ್ಧ ಧರ್ಮ ಪ್ರಚಾರ ಆಚಾರಕ್ಕಾಗಿ ಜೀವನ ಅರ್ಪಿಸಿಕೊಂಡೆ
ಹಿಂದುವಾಗಿ ಹುಟ್ಟಿ ಬೌದ್ಧ ಧರ್ಮ ಸ್ವೀಕರಿಸಿ ಕೊನೆಯುಸಿರೆಳೆದೆ !
ನೆಹರೂ ಮಂತ್ರಿಮಂಡಲದಲ್ಲಿ ಕಾನೂನು ಸಚಿವನಾಗಿ
ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷನಾಗಿ
ಹಸ್ತಪ್ರತಿಯ ಬೆಳ್ಳಿತಟ್ಟೆಯಲಿಟ್ಟು ಲೋಕಾರ್ಪಣೆಗೊಳಿಸಿದೆ
ಬಾಬಾಸಾಹೇಬ ನೀ ಸಂವಿಧಾನದ ಶಿಲ್ಪಿಯಾದೆ !
****************