ನಿಜ ಜಗಕೆ ಧಾವಂತವಿಲ್ಲ…
ದೇವಯಾನಿ
ಧಾವಂತವಿರಲಿಲ್ಲ ಬೆಳಗಿಗೆ
ಈ ಮೊದಲಿನಿಂದಲೂ
ತನ್ನಷ್ಟಕ್ಕೆ ತಾನೇ ಮೂಡುವ
ಸೂರ್ಯ ಚೆಂಬೆಳಕ ಚೆಲ್ಲುವುದಕ್ಕೆ
ಚುರುಗುಟ್ಟಿಸುವ ಬಿಸಿಲಹೊಗೆ
ಚಿಮ್ಮಿಸಲು ಗಡಿಯಾರ ಬೇಕಿರಲೇ ಇಲ್ಲ
ಹಕ್ಕಿ ಚಿಲಿಪಿಲಿಯೂ
ಹೂ ಹಣ್ಣುಗಳೂ
ಎಲ್ಲವೂ ಕಾಯುತ್ತಿದ್ದುದು
ಸೂರ್ಯ ತೇಜದ ಗಡಿಯಾರ ತಾನೆ?
ಋತುವುರುಳಿ ಋತುವಾಗಮಿಸಿ
ನಗುವ ವಸುಂಧರೆಗೆ ಆಗಾಗ
ಹೊನ್ನ ಹೊದಿಕೆ , ಶ್ವೇತ ಚಾದರ
ಮಳೆಹನಿಯ ತೋರಣ
ಎಲ್ಲಕೂ ರವಿಕಿರಣವೇ ಕಾರಣ
ಈಗಲೀಗೀಗ ಗಡಿಯಾರದ
ಮುಳ್ಳುಗಳನೂ ಮೀರಿಸಿದ್ದಾಯ್ತು
ಹುಲುಮಾನವ ಹಾರಾಟ ,ಧಾವಂತ
ನಡೆಯದೆಲೆ ಗುರಿ ಸೇರುವ ಗಮ್ಯಕೆ
ಸೂರ್ಯ ನಕ್ಕಿರಬೇಕು
ನಿದ್ರಿಸುವ ರಾತ್ರಿಗಳ ಕೊಂದುದಕೆ
ಚಂದ್ರ ತಾರೆ ಶಪಿಸಿರಬೇಕು
ಈಗೀಗ ಸಾಗರ ಕುಡಿದಿಂಗಿಸಲು
ಅಗಸ್ತ್ಯನೇ ಬರಬೇಕಿಲ್ಲ
ಬೆಟ್ಟ ಸರಿಸಲು ಹನುಂತನೇ
ಆಗಬೇಕಿಲ್ಲ…
ಎಲ್ಲಾ ನನದೇ ಎಲ್ಲವೂ ನನಗಾಗೇ
ಎಂದವನೀಗ ನಾಲ್ಕು ಗೋಡೆಯ ಬಂಧಿ
ಗಡಿಯಾರ ನಗುತ್ತಿದೆ
ಹಣದ ಕೇಕೆ ದನಿಗಳೆದುಕೊಂಡಿದೆ
ಜಗ ಸ್ಥಬ್ಧವಾಗಿಲ್ಲ ಮರುಳೇ
ಕೇಳಬಲ್ಲೆಯಾದರೆ ಕೇಳೊಮ್ಮೆ
ರವಿರಥದ ಗಾಲಿಯುರುಳುವ ಸದ್ದು
ವಸುಂಧರೆಯ ನಿಡಿಯುಸಿರಿನ ಸದ್ದು
ಜಗದ ನಿಜ ಗಡಿಯಾರ
ಹಗುರಾಗಿ ಓಡುತಿದೆ
ನನ್ನ ನಿಮ್ಮ ಬದುಕ ಗಡಿಯಾರಗಳು
ಮಾತ್ರಾ ಓಡಲಾರದೇ ಕುಂಟುತ್ತಿವೆಯೀಗ