ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
(ಭಾಗ-1)

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಕಾಣಿಸದೇ ಕಾಡುತಿದೆ ವೈರಾಣು ಕರೋನಾ…
ಕಳವಳದಿ ಕಂಗಾಲು
ಮನುಜಕುಲ ಸಂಪೂರ್ಣ..
ಮಾರ್ಚ ತಿಂಗಳಿಂದ ಕರೋನಾ ಎನ್ನುವ ಪದವೇ ಎಲ್ಲರ ಸ್ಥಾಯಿ ಭಾವವಾಗಿದೆ. ಎಲ್ಲಾ ಮುಗಿತು. ಕಲಿತಾಯ್ತು ಮದುವೆಯಾಯ್ತು ಮಕ್ಕಳನ್ನು ಓದಿಸಿ, ಉದ್ಯೋಗಕ್ಕೆ ಸೇರಿಸಿ, ಮದುವೆ ಮಾಡಿ ಸೆಟಲ್ ಮಾಡಿದ್ದಾಯ್ತು ಇನ್ಯಾವಾಗ ದೇವರು ಕರೆಸಿಕೊಂಡರು ಹೋಗಲು ಸಿದ್ಧ ಎಂದು ದಿನಾ ಡೈಲಾಗ್ ಹೇಳುತ್ತಿದ್ದ ಸುತ್ತಮುತ್ತಲ ಮನೆಗಳ ಅಂಕಲ್ ಆಂಟಿಗಳೆಲ್ಲ ನಗು ಮಾತು ಮರೆತು ಜೀವಭಯದಲ್ಲಿ ಮಾಸ್ಕ ಧರಿಸಿ ಅಂಗಳಕ್ಕಿಳಿಯಲು ಭಯಪಡುವುದನ್ನು ನೋಡುವಾಗ ಸಾವು ಯಾರಿಗೂ ಸ್ವೀಕಾರಾರ್ಹ ಸಂಗತಿಯೇ ಅಲ್ಲ ಎನ್ನುವ ಸರ್ವಕಾಲಿಕ ಸತ್ಯ ಸುತ್ತೆಲ್ಲ ಗೋಚರವಾಗುತ್ತಿದೆ. ಬಂದ ಕಷ್ಟವನ್ನು ಎದುರಿಸಲಾರದೇ ಕಂಗಾಲಾದವರು, ಬಂದಿದ್ದನ್ನು ಸ್ವೀಕರಿಸಿದವರು, ಅದನ್ನು ಧೈರ್ಯದಿಂದ ಎದುರಿಸಿದವರು, ತಮ್ಮ ಕಷ್ಟವನ್ನು ಕಟ್ಟಿಟ್ಟು ಇತರರಿಗಾಗಿ ತುಡಿಯುವವರು…ಹೀಗೆ ಹಲವು ಬದುಕುಗಳು,ಕೆಲವು ಘಟನೆಗಳು ಕಾಡುತ್ತವೆ.. ಕೆಲವಷ್ಟನ್ನು ನಿಮ್ಮೆದುರಿಗಿಡುವ ಯತ್ನ ನನ್ನದು.
ಇದೇ ಸಮಾಜದ ಭಾಗವೇ ಆದ ನನಗೂ ಮೊದಲೆರಡು ದಿನ ಕರೋನಾ ಲಾಕ್ ಡೌನ್ ಶಿಕ್ಷೆ ಎನಿಸಿತು. ಶಿಕ್ಷೆ ಎಂದುಕೊಂಡಾಗ ಬಾಲ್ಯದ ಒಂದು ಘಟನೆಯೂ ನೆನಪಾಯ್ತು. ಮಲೆನಾಡಿನ ಪುಟ್ಟ ಹಳ್ಳಿಯೊಂದರಲ್ಲಿ ನಾಲ್ಕನೆಯ ತರಗತಿ ಓದುತ್ತಿದ್ದೆ. ಏಕೋಪಾಧ್ಯಾಯ ಶಾಲೆಯಾಗಿತ್ತು ಅದು. ಒಂದೊಂದು ತರಗತಿಯವರಿಗೆ ಒಂದೊಂದು ವಿಷಯವನ್ನು ಕಲಿಸುತ್ತ, ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದ ನಾಯ್ಕ ಮಾಸ್ತರರ ತಾಳ್ಮೆ ದೊಡ್ಡದಿತ್ತು. ಒಂದು ದಿನ ನಾಲ್ಕು ಗಂಟೆಯ ಹೊತ್ತಿಗೆ ಉಳಿದ ಕ್ಲಾಸಿನವರಿಗೆ ಕಲಿಸಿ ನಮಗೆ ಅವರಿಗೆ ವಿವಿಧ ಚಟುವಟಿಕೆ ಕೊಟ್ಟು ಅವರ ಮೇಜಿನ ಸುತ್ತ ನಿಲ್ಲಿಸಿ ನಮಗೆ ಪಾಠ ಮಾಡುತ್ತಿದ್ದರು. ಅಷ್ಟರಲ್ಲಿ ಬಂದ ಶಾಲಾ ಕಮೀಟಿಯ ಅಧ್ಯಕ್ಷರು ‘ಮಾಸ್ತರೇ ಐದು ನಿಮಿಷ ಬನ್ನಿ ಮಾತನಾಡೋದಿದೆ’ ಎಂದರು. ಇವತ್ತಿಗೆ ಪಾಠ ಸಾಕು. ನೀವು ಇಪ್ಪತ್ತರವರೆಗೆ ಮಗ್ಗಿ ಬರೆಯಿರಿ. ಯಾರೂ ಗಲಾಟೆ ಮಾಡಬೇಡಿ ಅಧ್ಯಕ್ಷರು ಬಂದಿದ್ದಾರೆ. ಎಂದು ಮಕ್ಕಳಿಗೆ ಹೇಳಿ ಶಾಲೆಯ ಕದ ಎಳೆದುಕೊಂಡು ಹೋದರು. ಇಪ್ಪತ್ತಾರು ಜನರಿದ್ದ ಶಾಲೆಯಲ್ಲಿ ಮೂರು ಜನ ಮಾಸ್ತರರು ಹೇಳಿದಂತೆ ಬರೆಯುತ್ತ ಕುಳಿತರು. ಉಳಿದಂತೆ ಕೆಲವರು ಗುಸು ಕುಸು ಮಾತು, ಪಿಸು ಪಿಸು ನಗು ಶುರು ಮಾಡಿದರು, ಕ್ರಮೇಣ ಕೆಲವರು ಕುಳಿತ ಬೇಂಚ ಬಡಿದರು. ಯಾವ್ಯಾವಾಗಿನದೋ ಸಿಟ್ಟನ್ನು ನೆನಪಿಸಿಕೊಂಡು ಕೆಲವರು ಜಗಳ ಆಡಲಾರಂಭಿಸಿದರು. ಕೆಲವರು ಸಣ್ಣ ಹೊಡೆದಾಟ ಶುರು ಮಾಡಿದರು, ಅನೇಕರು ಪ್ರೇಕ್ಷಕರಾದರು. ಕೂಗಾಟ, ಕಿರುಚಾಟ ಎಲ್ಲವೂ ಜೋರಾಯ್ತು. ಮಾನಿಟರ್ ಸುಮಂಗಲಾ ರೂಲ್ ಕಟ್ಟಿಗೆ ಹಿಡಿದು ಕೀರಲು ದ್ವನಿಯಲ್ಲಿ ಎಲ್ಲರನ್ನೂ ಸುಮ್ಮನಿರಿಸಲು ಯತ್ನಿಸಿ ಸೋತು ಒಂದೆಡೆ ಕುಕ್ಕರಿಸಿದಳು. ಅಷ್ಟರಲ್ಲಿ ಒಬ್ಬ ಹುಡುಗ ‘ಇದು ಆಟದ ಸಮಯ’ ಎಂದು ಕಟ್ಟಿಗೆಯಿಂದ ಬೆಲ್ ಮೇಲೊಂದು ಬಾರಿಸಿದರು. ನಾವೆಲ್ಲ ಪಾಟಿ ಪುಸ್ತಕಗಳನ್ನು ಪಾಟೀಚೀಲದೊಳಗೆ ತುರುಕಿ ಮಾಸ್ತರರ ಎಚ್ಚರಿಕೆಯ ಮಾತು ಮರೆತು ಆಟದ ಮೈದಾನಕ್ಕೆ ಧಾವಿಸಬೇಕೆಂದು ಮುಚ್ಚಿದ ಬಾಗಿಲಿನತ್ತ ನಡೆದೆವು
*******.
ಮುಂದುವರೆಯುವುದು..