ಪುಸ್ತಕ ಪರಿಚಯ

ಕಾನ್ಮನೆಯ ಕಾಲುದಾರಿ

ಪಶ್ಚಿಮ ಘಟ್ಟದೊಳೆಗೇ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಲಿನ ಪ್ರದೇಶಗಳಲ್ಲೇ ಹರಿದಾಡುವ ‘ಕಾನ್ಮನೆಯ ಕಾಲುದಾರಿ’ ಎಂಬ ಕಾದಂಬರಿಯೂ..!

ದಿನೇಶ ಹಲಿಮನೆಯವರು ನನಗೆ ‘ಸಿರ್ವಂತೆ ಕ್ರಾಸ್‌’‌ ಕಥಾಸಂಕಲನ ಮತ್ತು ‘ಕಾನ್ಮನೆಯ ಕಾಲುದಾರಿ’‌ ಕಾದಂಬರಿ ಕಳುಹಿಸಿ ಎರಡು-ಮೂರು ತಿಂಗಳಾಗಿತ್ತು. ಇವುಗಳಲ್ಲಿ ‘ಸಿರ್ವಂತೆ ಕ್ರಾಸ್’ ಕಥಾಸಂಕಲನದ‌ ಬಗೆಗೆ ನನ್ನ ಅನಿಸಿಕೆ ಬರೆದು ಬಹಳ ದಿನವಾಯಿತು.‌ ಆದರೆ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ ಇಷ್ಟು ದಿವಸ ನನ್ನ ಅನಿಸಿಕೆ ಬರೆಯಲಾಗಿರಲಿಲ್ಲ. ಈ ಕಾದಂಬರಿ ಓದಿದ್ದೆನಾದರೂ ಈ‌‌‍ ಕುರಿತು ಬರೆಯಲಾಗಿರಲಿಲ್ಲ. ಹಾಗಾಗಿ ಇಂದು ಅವಡುಗಚ್ಚಿ ಕುಳಿತು ಬರೆದೆನು. ಇದು ನನ್ನ ವ್ಯಯಕ್ತಿಕ ಅನಿಸಿಕೆ ಈ ಕಾದಂಬರಿ ಕುರಿತು ಎಂದು ಹೇಳುತ್ತಾ ನೋಡೋಣ ಬರ್ರಿ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ…

ಅದು ಹೀಗಿದೆ…

ಶಿವರಾಮ ಕಾರಂತರಂತೆ‌ ಪಶ್ಚಿಮ ಘಟ್ಟದೊಳಗೆ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಹರಿದಾಡುತ್ತದೆ ಈ ಕಾದಂಬರಿಯ ಕಥಾಹಂದರ.
ಅದೇ ಕಾರಣಕ್ಕೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕಾಂಬರಿಕಾರರಾದ ದಿನೇಶ ಹುಲಿಮನೆ ಅವರು ಮೂಲತಃ ಅವರ ಹತ್ತಿರದವರೇ ಎಂಬುದು ಕಾದಂಬರಿಯ ಆಪ್ತತೆಯನ್ನು ಹೆಚ್ಚಿಸುತ್ತದೆ. ಕಾದಂಬರಿಕಾರರು ಪ್ರಾರಂಭದಲ್ಲೇ ಹೇಳುವ ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ. ಆಧುನೀಕರಣ, ಸಂಪ್ರದಾಯ, ಸಂಬಂಧ, ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿಯನ್ನು ಓದಲೇಬೇಕು…

ಈ ಕಾದಂಬರಿ ದಿನೇಶ ಹಲಿಮನೆಯವರ ಮೊದಲ ಕಾದಂಬರಿ ಎಂದರೆ ಒಂದು ಕ್ಷಣ ಬೆರಗಾಗಬೇಕು ನಾವು ಅಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ..!

ಬರವಣಿಗೆ ಎಲ್ಲರಿಗೂ ಒಲಿಯುವುದಲ್ಲ. ಅದೂ ಕಾದಂಬರಿಯನ್ನು ಬರೆಯಲು ಬಹಳ ತಾಳ್ಮೆ ಬೇಕು. ತಮ್ಮ ಮೊದಲ ಪ್ರಯತ್ನದಲ್ಲಿಯೇ ದಿನೇಶ‌ ಹಲಿಮನೆಯವರು ಗೆದ್ದಿದ್ದಾರೆ. ಹೌದು, ಈ ಕಾದಂಬರಿಯಲ್ಲಿ ತೇಜಸ್ವಿಯವರ ಬರವಣಿಗೆಯ ಛಾಯೆ ದಟ್ಟವಾಗಿದೆ ಎಂಬುದೂ ನಿಜ. ಓದುತ್ತಿರುವಾಗ ಹಲವೆಡೆ ಚಿದಂಬರ ರಹಸ್ಯದ ಮುಂದುವರಿದ ಭಾಗವೇ ಇದು ಎಂದು ಎನ್ನಿಸಿದ್ದು ನಿಜವೂ ಹೌದು.
ಆದರೆ ಕಾದಂಬರಿಯ ಉತ್ತರಾರ್ಧದಲ್ಲಿ ಆ ನೆರಳಿನಿಂದ ಹೊರಬಂದು ನಾಗಾಲೋಟದಲ್ಲಿ ಮುಂದೆ ಸಾಗಿದ್ದಾರೆ ದಿನೇಶ ಹಲಿಮನೆಯವರು. ನಡುನಡುವೆ ಬರುವ ನಾಗಜ್ಜಿಯ ಪಾತ್ರ ನನಗೆ ಕಾರಂತರ ಮೂಕಜ್ಜಿಯನ್ನೊಮ್ಮೆ ನೆನಪಿಸಿತು ಎಂದರೆ ಅತಿಶಯೋಕ್ತಿಯೇನಲ್ಲ ಎಂಬುದು ನನ್ನ ಭಾವನೆ..!

ಎತ್ತು ಕಾಣೆಯಾದಾಗ ಬೈರ ಕಾಡಿನ ನಡುವಿನಲ್ಲಿರುವ ಹುಲಿದೇವರ ಬನಕ್ಕೆ ಬಂದು ಹುಲಿದೇವರ ಕಲ್ಲಿಗೆ ದೂರದಿಂದಲೇ ಕೈಮುಗಿಯುವ ಸನ್ನಿವೇಶ, ಜನರ ನಂಬಿಕೆ, ಹಾಗೂ ಭಯ ಎರಡರ ಪ್ರತಿರೂಪವೂ ಹೌದು.
ಹಿಂದೆಲ್ಲ ಹುಲಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಅಲ್ಲಲ್ಲಿ ಹುಲಿಗಳ ತಾಣವನ್ನು ಗುರುತಿಸುವುದಕ್ಕಾಗಿಯೇ ಹುಲಿದೇವರ ಕಟ್ಟೆ, ಹುಲಿಮನೆ, ಹುಲಿಗುಡಿ, ಹುಲೇಕಲ್ ಅಥವಾ ಹುಲಿಕಲ್ಲು, ಹುಲಿಕಟ್ಟೆ, ಹುಲಿಯೂರು, ಇತ್ಯಾದಿ ಹೆಸರುಗಳು ಜನಿಸಿದ್ದು. ಅಂತಹ ಹೆಸರುಗಳು ಅಸಂಖ್ಯ. ಇಲ್ಲಿ ಬೈರ ಹುಲಿಯಪ್ಪ ದೇವರ ಬಳಿ ಬಂದು ಕೆಂಪನಿಗೆ ಏನೂ ಆಗದೆ ಇರಲಿ, ದೊಡ್ಡ ಹಬ್ಬಕ್ಕೆ ಒಂದು ಬಾಳೆಕೊನೆ ಒಪ್ಪಿಸಿಕೊಡ್ತೀನಿ ಎಂದು ಹರಕೆ ಹೊರುತ್ತಾನೆ. ಅದೂ, ಹುಲಿದೇವರ ಕಲ್ಲಿನ ಬಳಿಗೆ ಹೋಗದೇ..! ಕೆಂಪ ಎಂಬ ಎತ್ತನ್ನು ಒಂದು ಪ್ರಾಣಿ ಎಂದು ನೋಡದೇ ತನ್ನ ಮನೆಯ ಸದಸ್ಯನೇನೋ ಎಂದು ಭಾವಿಸುವ ಬೈರ, ಹುಲಿದೇವರ ಕಲ್ಲಿನ ಬಳಿ ಹೋದರೆ ಮೈಲಿಗೆ ಆಗುತ್ತದೆ ಎಂದೂ ಯೋಚಿಸುತ್ತಾನೆ..! ಹುಲಿಯನ್ನೂ ಒಂದು ಪ್ರಾಣಿ ಎಂದು ಭಾವಿಸದೇ ಒಂದು ದೇವರಾಗಿ ಕಾಣುತ್ತಾನೆ. ಕೊಲ್ಲುವ ಹುಲಿಯೂ ದೇವರೇ… ಸಾಯುವ ಎತ್ತೂ ದೇವರೇ ಎಂಬುದು ಭಾರತೀಯ ಜೀವನ ದರ್ಶನ. ಇಂತಹ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಸುಂದರವಾಗಿ ವೈಬವಿಕರಿಸಲ್ಪಟ್ಟಿದೆ…

ದೊಡ್ದಬ್ಬ ಅಥವಾ ದೀಪಾವಳಿ ಹಬ್ಬದ ಸಡಗರ, ಸೊಬಗು, ಆಚರಣೆಗಳು, ಹಸುಗಳಿಗೆ ಬೇಕಾದ ದಂಡೆ ಹುರಿ ಹೊಸೆಯುವಂತಹ ಪದ್ದತಿಗಳು ಕಾದಂಬರಿಯ ಮೊದಲಲ್ಲಿ ಸೊಗಸಾಗಿ ಚಿತ್ರಿತವಾಗಿವೆ. ಇದೇ ಆಚರಣೆಗಳನ್ನು ಕಾದಂಬರಿಯ ಅಂತ್ಯದಲ್ಲಿ, ನಿರುತ್ಸಾಹದಿಂದ, ಯಾಂತ್ರಿಕವಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರ ಕಾದಂಬರಿ ಸಾಗಿ ಬಂದ ಕಾಲಘಟ್ಟವನ್ನು ಹಾಗೂ ನಮ್ಮ ಇಂದಿನ ಬದುಕು ಸಾಗಿಬಂದ ಕಾಲಘಟ್ಟವನ್ನೂ ಚಿತ್ರಿಸಿದ್ದಾರೆ. ಬೂರೆ ಹಬ್ಬ, ಬೂರ್ಗಳು, ಬಿಂಗಿಪದ, ಕಹಿ ಸವತೆಯನ್ನು ತಂದು ಹಂಡೆಗೆ ಕಟ್ಟಿದ್ದು, ಹಬ್ಬದ ದಿನ ಒಬ್ಬರ ಮನೆಯಲ್ಲಿ ಜಾಗಟೆ ಸದ್ದು ಮುಗಿಯುತ್ತಿದ್ದಂತೆ ಮೊತ್ತೊಂದು ಮನೆಯಿಂದ ಕೇಳಿಬರುವುದು, ದನ-ಕಾರುಗಳನ್ನು ಬೆಚ್ಚುವುದು ಇತ್ಯಾದಿ ವಿವರಗಳನ್ನು ಓದುತ್ತಿರುವಾಗ, ಹಬ್ಬದ ಸೊಗಸು ಮೊತ್ತೊಮ್ಮೆ ನಮ್ಮ ಕಣ್ಣು-ಮನಸುಗಳಲ್ಲಿ ತುಂಬಿಕೊಳ್ಳುತ್ತದೆ. ವಿಳ್ಯದ ಎಲೆಯಿಂದ ದೃಷ್ಟಿ ತೆಗೆಯುವ ನಂಬಿಕೆ, ಕೊಟ್ಟೆ ಕಡುಬು ಮಾಡುವ ಬಗೆ, ಬಿಂಗಿ ಪದ ಹಾಡಲು ಬರುವವರಿಗೆ ಹೋಳಿಗೆ-ಕಡುಬು ಕೊಡುವ ಸಂಪ್ರದಾಯ ಇತ್ಯಾದಿಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರ…

ಕುರಿ ಕಡಿದು ಬಾಡೂಟ ಮಾಡುವುದೇ ಆಗಿದ್ದರೂ ಅಲ್ಲಿ ಹಿಂಸೆ ಆಗಬಾರದು ಎಂಬ ಒಂದು ನಂಬಿಕೆ ಹಳ್ಳಿಗಳಲ್ಲಿ ಈಗಲೂ ಇದೆ. ಅದನ್ನೇ ಮಾದಿ ಈರನಿಗೆ “ಥೂ! ಹುಚ್ಚು ಮುಂಡೇಗಂಡಾ, ನಾಲ್ಕೈದು ಕೊಚ್ಚು ಹಾಕಿ ಕಡದ್ಯಂತಲ್ಲೋ, ಎರಡು ಕೊಚ್ಚಿಗೂ ತುಂಡಾಗ್ದೆ ಕುರಿ ಬಿದ್ದು ಒದ್ದಾಡ್ತಂತೆ, ಹಂಗೆಲ್ಲಾ ಮಾಡಿದ್ರೆ ಪಾಪ ಬತೈತೆ, ಕುರಿನಾ ಒಂದೇ ಕೊಚ್ಚಿಗೆ ಕಡಿದ್ರೆ ಸರಿ, ಅದಿಲ್ಲಾ ಅಂದ್ರೆ ನನ್ನ ಕೈಯಾಗೆ ಆಗಲ್ಲಾ ಅಂತ ಸುಮ್ನೇ ಇರಬೇಕಪ್ಪ. ಅದು ಬಿಟ್ಟು ಪರ ಊರೋರ ಮುಂದೆ ಹಿರೇತನ ಎಂತಾಕೆ ಮಾಡೋದು“ ಎಂದು ತಾರಾಮಾರಾ ಬೈದು ಹೇಳುತ್ತಾಳೆ. ಕಾದಂಬರಿಕಾರರು ಈ ತರಹದ ಸಣ್ಣಸಣ್ಣ ವಿವರಗಳನ್ನೂ, ಸೂಕ್ಷ್ಮ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಭವಿಷ್ಯದಲ್ಲಿ ಇನ್ನೂ ಸೊಗಸಾದ ಕೃತಿಗಳನ್ನು ಬರೆಯಬಲ್ಲರು ಎಂಬ ನಂಬಿಕೆ ಮೂಡಿಸಿದ್ದಾರೆ…

ಬೈರ ನಿಧನನಾಗಿದ್ದಾನೆ ಎಂಬುದನ್ನು ತಿಳಿದ ನಾಯಿ, ಕೊಟ್ಟಿಗೆಯಲ್ಲಿದ್ದ ಎತ್ತುಗಳೂ ನೀರು, ಆಹಾರ ಮುಟ್ಟದೇ ಇದ್ದವು ಎಂದು ಚಿತ್ರಿಸುವ ಕಾದಂಬರಿಕಾರರು ಮಾನವನಿಗಿಂತ ಮೂಕ ಪ್ರಾಣಿಗಳೇ ಮೇಲು ಎಂಬ ಒಂದು ಝಲಕ್ ನೀಡುತ್ತಾರೆ. ಹಳ್ಳಿಗಳಲ್ಲಿ ಜಾತಿ ಜಾತಿಗಳು ಅಸ್ತಿತ್ವದಲ್ಲಿದ್ದರೂ ಅವರ ನಡುವೆ ಇರುವ ಸಾಮರಸ್ಯ ಹೇಗೆ ಕೆಲವರ ಕುತಂತ್ರ, ಸ್ವಾರ್ಥ, ದುರಾಸೆ, ನೀಚತನಗಳಿಂದ ಹಾಳಾಗುತ್ತದೆ, ಹಾಳಾಗುತ್ತಿತ್ತು ಎಂಬ ವಿಷಯ ಪ್ರಸ್ತಾಪಿಸುತ್ತಾ ಕಾದಂಬರಿ ಬೆಳೆಸುತ್ತಾ ಹೋಗಿದ್ದಾರೆ. ಪ್ರೀತಿ, ಪ್ರೇಮ, ಬದುಕು ಕಟ್ಟಿಕೊಳ್ಳಲು ಪಟ್ಟಣಕ್ಕೆ ವಲಸೆ ಹೋಗುವುದು, ಮುಂದುವರಿದು ವಿದೇಶಕ್ಕೂ ಹೋಗುವುದು, ಅವುಗಳಿಂದ ಕುಟುಂಬ ಮಟ್ಟದಲ್ಲಿ ಆಗುತ್ತಿರುವ ಸಂಕಷ್ಟಗಳು, ತಂದೆ, ಅಣ್ಣ ತೀರಿದರೂ ವಿಷಯ ತಿಳಿಸಲಾಗದ ಪರಿಸ್ಥಿತಿ ಇಂತಹ ಹಲವಾರು ವಿಷಯಗಳು, ನಮ್ಮ ಇಂದಿನ ಬದುಕಿನ ಪ್ರತಿಫಲನವೇ ಸರಿ, ಮತ್ತು ಕಾದಂಬರಿರಕಾರು ಅವುಗಳನ್ನು ಎಲ್ಲೂ ಕೃತಕವೆನ್ನಿಸುವಂತೆ ಬರೆದಿಲ್ಲ. ಬಲಿಷ್ಟರಾದವರು ತಮ್ಮ ಸ್ವಾರ್ಥಕ್ಕೆ ಈ ಕುಟುಂಬಕ್ಕೆ ಕಟ್ಟಿ ಕೊಡಲು ಹೊರಟಾಗ ಬರುವ ಒಂದು ವಾಕ್ಯ “ಕಾನ್ಮನೆಯ ಕಾಲುದಾರಿಯಲ್ಲಿ ಹುಲ್ಲು ಬೆಳೆಯದಿರಲಿ“ ಎಂಬುದು ಇಷ್ಟವಾಯಿತು. ನಮ್ಮ ಮನದ ದಾರಿಯಲ್ಲೂ ಹುಲ್ಲು ಬೆಳೆಯದಿರಲಿ, ಅಂದರೆ ನಮ್ಮ ಮನದಲ್ಲೂ ಉತ್ತಮ ವಿಚಾರಗಳು ಪದೇಪದೇ ಓಡಾಡುತ್ತಾ ಇರಲಿ…

ಹೇಗೆ ಹಿಂದುಳಿದವರನ್ನು ಕೆಲವು ಸ್ವಾರ್ಥಿಗಳು ಬಳಸಿಕೊಳ್ಳುತ್ತಾರೆ, ಹೇಗೆ ಕೆಲವು ತತ್ವಗಳು ಜನರನ್ನು ಹಾಳುಮಾಡುತ್ತವೆ. ಅನ್ಯಧರ್ಮದ ಸಂಘಟನೆಗಳ ಮುಖವಾಡ ಹೇಗೆ ನಿಧಾನವಾಗಿ ಬಯಲಾಗುತ್ತದೆ, ಹೇಗೆ ಅನ್ಯಾಯವಾಗಿ ಪಾಪದ ಜನರು ತಮ್ಮದಲ್ಲದ ತಪ್ಪಿಗೆ ನಷ್ಟ, ಸಂಕಟ ಅನುಭವಿಸುತ್ತಾರೆ ಎಂಬ ವಿವರಗಳನ್ನೂ ಕಾದಂಬರಿಕಾರರು ಸೊಗಸಾಗಿ ಸೇರಿಸಿದ್ದಾರೆ…

ಕಾದಂಬರಿ ಮೊದಮೊದಲು ತೇಜಸ್ವಿಯವರ ಬರಹಗಳಂತೆ ಆಪ್ತವಾದರೆ, ನಂತರ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ ಕೂಡಾ..! ವಿವಾಹದ ಬಗ್ಗೆ “ಮೇದಿನಿ ಮಠ“ ದ ಸ್ವಾಮಿಗಳ ನಿಲುವು, ಅವರನ್ನು ತಮ್ಮೆಡೆಗೆ ಸೆಳೆಯಲು ಹೋಗಿ ತಾವೇ ಕಕ್ಕಾಬಿಕ್ಕಿಯಾಗುವ ದೊಡ್ಡೇಗೌಡ ಮತ್ತು ಮಹಾಬಲ, ಅಲ್ಲಿನ ಚರ್ಚೆಗಳು ನಮ್ಮನ್ನು ವಿಚಾರ ಮಾಡಲು ಪ್ರಚೋದಿಸುವುದೂ ನಿಜ…

ಆದರೆ ಅಂತ್ಯ ನನಗೆ ತೃಪ್ತಿ ತರಲಿಲ್ಲ. ಅಂತ್ಯವನ್ನು ಓದುಗರ ಕಲ್ಪನಾಶಕ್ತಿಗೇ ಬಿಡುವುದು ಒಂದು ಕಥನ ತಂತ್ರ ಹೌದಾದರೂ, ಇನ್ನಷ್ಟು ಮುಂದುವರಿಸಬಹುದಿತ್ತೇನೋ ಎನ್ನಿಸಿದ್ದಂತೂ ನಿಜ…

***********

ಕೆ.ಶಿವು.ಲಕ್ಕಣ್ಣವರ


Leave a Reply

Back To Top