ಬಾರಯ್ಯ ಸಂಭವಿಸು

ಮದ್ದೂರು ಮಧುಸೂದನ್

ಕೇಡುಗಾಲಕೆ
ನಾಯಿ ಮೊಟ್ಟೆ ಇಕ್ಕಿದೆ
ಮೊಟ್ಟೆ ಇಕ್ಕಿದ್ದು
ದಿಟವೇ ?
ಪ್ರಶ್ನಿಸುವ ಬಾಯಿಗಳಿಗೆ ಈಗಾಗಲೇ
ಕರ್ಪ್ಯೂ ಜಾರಿಯಾಗಿದೆ
ಹುತ್ತವೇ ಹಾವನ್ನು
ನುಂಗುವ ದುರಿತ ಕಾಲವಿದು
ಭುಸಗುಡುವ ಬಾಯಿಗೆ
ಬಾಂಬಿಕ್ಕುವ ಭಯ
ಚಾಲು ಇದೆ
ಬಣ್ಣ ಬಣ್ಣದ ಪ್ರಣಾಳಿಕೆಗಳೆಂಬ ಟಿಕಳಿಗಳನ್ನು
ಈಗಾಗಲೇ
ಕುಂಡಿ ಮೇಲೆ ಅಂಟಿಸಿಯಾಗಿದೆ
ಶಬ್ದಕೆ ನಾಚಿಕೆಯಾಗುವಷ್ಟು
ಮೈಕಾಸುರ ಅಬ್ಬರಿಸುತ್ತಿದ್ದಾನೆ
ಕಾಶ್ಮೀರದೀ ಕನ್ಯಾಕುಮಾರಿವರೆಗೆ
ಚಾಲ್ತಿಯಲ್ಲಿದೆ.
ಸಗಣಿ ತಿಂದವರ
ಭಕ್ತಿಯ ಮಾರಾಟ ಜೋರಿದೆ
ಕಾವಿ ಮರೆಯಲಿ
ತ್ರಿಶೂಲಗಳಿಗೂ
ನಾಚಿಕೆ ಸಂಭವಿಸಿದೆ
ಪ್ರಜಾಪ್ರಭುತ್ವದ
ಸಿಂಹಾಸನಕೆ
ಇನ್ನುಷ್ಟು ಮೊಳೆ ಬಡಿದು ಬಿಗಿ ಮಾಡಲಾಗುತ್ತಿದೆ
ಸಿಂಹಾಸನದಡಿಯಲಿ
ಸಿಲುಕಿದ ನಿನ್ನ
ಕಿರು ಬೆರಳು ಈಚೆ ಬಾರಲಾರದೆ
ಒಳಗೊಳಗೆ ಮಿಡುಕುತ್ತಿದೆ
ಬಾರಯ್ಯ ಬಾರೋ
ಸಂಭವಿಸು
ಶುದ್ದೋದನನ
ಮೊಮ್ಮಗನೇ..
ಎಂದು..
*******
ಸೂಪರ್ ಸರಗ