ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಭಯ

ಚಿಕ್ಕ ಮಕ್ಕಳು ರಾತ್ರಿ ತಮ್ಮ ನೆರಳಿಗೆ ಹೆದರಿ ತಾಯಿ ತಂದೆಯರನ್ನು ತಮ್ಮ ಶೌಚಾಲಯಕ್ಕೆ ಕರೆದುಕೊಂಡು ಹೋಗುವದಿದೆ. ಇನ್ನು ಭಯಾನಕ ದೃಶ್ಯಗಳನ್ನು ನೋಡಿದರಂತೂ ಮುಗಿದೇ ಹೋಯ್ತು! ಒಮ್ಮೆ ಶಾಲೆಯ ಪ್ರಾರಂಭದ ದಿನ ಮಕ್ಕಳೊಂದಿಗೆ ನಾನು ಕೂಡ ವರ್ಗಕೊನೆಯ ಸ್ವಚ್ಛತೆಯಲ್ಲಿ ತೊಡಗಿದಾಗ ಯಾವತ್ತು ತರಗತಿಯಲ್ಲಿ ಮುಂದಿರುವ ಸೌಮ್ಯ ಕಿಟಾರನೇ ಕಿರುಚಿದಾಗ ತನ್ನ ಬೆರಳನ್ನು ಕಟ್ಟಿಗೆ ಕಪಾಟಿನ ಮೇಲೆ ತೋರಿಸಿದಾಗ ಅಲ್ಲಿ ಜಿರಳೆಗಳ ದರಬಾರು. ಆಗ ಕಲಿಕೆಯಲ್ಲಿ ಹಿಂದುಳಿದ ಆಕಾಶ ಲಗುಬಗೆಯಿಂದ ಅವುಗಳನ್ನು ಅಲ್ಲಿಂದ ಓಡಿಸಿ ಕೊಂದೆ ಬಿಟ್ಟ. ಮಕ್ಕಳಿಗೆ ಕಲಿಕೆಯೊಂದಿಗೆ ಧೈರ್ಯ ಕೂಡಾ ಅವಶ್ಯ.
“ಧೈರ್ಯಮಂ ಸರ್ವತ್ರ ಸಾಧನಂ”ಎಂಬ ಮಾತಿನಂತೆ ಎಲ್ಲ ಪರಿಪೂರ್ಣ ಕಾರ್ಯಗಳ ಯಶಸ್ಸಿಗೆ ಸಾಧನೆಗೆ ಧೈರ್ಯ ಎಂಬ ಆಭರಣ, ಆಯುಧ ಬೇಕೇ ಬೇಕು.
“ಮನುಷ್ಯ ಯಾವಾಗ ಧೈರ್ಯ ಕಳೆದುಕೊಳ್ಳುತ್ತಾನೋ ಆಗ ಎಲ್ಲವನ್ನು ಕಳೆದುಕೊಂಡಂತೆ”ಎಂದಿದ್ದಾನೆ ಜರ್ಮನ್ ಕವಿ ಗಯಟೆ. ಭಯ ಮನುಷ್ಯನ ಶತ್ರು.
ಭಯಗ್ರಸ್ತರು ತಾವು ಭಯಪಟ್ಟುಕೊಳ್ಳುವುದರ ಜೊತೆಗೆ ಮತ್ತೊಬ್ಬರನ್ನು ಭಯದ ಸುಳಿಗೆ ಸಿಲುಕಿಸುತ್ತಾರೆ. ಕೆಲವೊಮ್ಮೆ ಚಿಕ್ಕಂದಿನಲ್ಲಿ ಸಂಭವಿಸಿದ ಘಟನೆಗಳು ಇವರನ್ನು ಭಯಗ್ರಸ್ತರನ್ನಾಗಿ ಮಾಡಿರಲು ಸಾಕು. ತಾವು ನಿರುತ್ಸಾಹಿಗಳಾಗಿರುವುದರ ಜೊತೆಗೆ ಬೇರೆಯವರ ಉತ್ಸಾಹವನ್ನು ಮೊಳಕೆಯಲ್ಲೇ ಚಿವುಟಿ ಬಿಡುವರು.
ಎಮರ್ಸನ್ ಎಂಬ ತತ್ವಜ್ಞಾನಿ ಭಯಗ್ರಸ್ತರಿಗೆ “ಅಯ್ಯೋ, ನೀವು ಯಾವುದನ್ನು ಕಂಡು ಭಯಪಡುತ್ತಿರೋ ಅದನ್ನೇ ಮಾಡತೊಡಗಿ, ಭಯ ನಾಶವಾಗುತ್ತದೆ.ಎಂದು ಹೇಳಿದ್ದಾನೆ. ಭಯಪಡಬೇಕಾದ ವಿಷಯಗಳಿಗೆ ನಾವು ಭಯ ಪಡಬೇಕಷ್ಟೆ. ಅದನ್ನು ಬಿಟ್ಟು ಪ್ರತಿಯೊಂದಕ್ಕೂ ಭಯ ಪಟ್ಟುಕೊಂಡರೆ ಅದು ಹೇಡಿಗಳ ಲಕ್ಷಣ. ಸಂದೇಹಗಳಿಂದ ಭಯ ಸಹಜ. ಹೀಗಾಗಿಬಿಟ್ಟರೆ, ಹಾಗಾಗಿಬಿಟ್ಟರೆ ಎಂಬ ಊಹೆಗಳು ಭಯವನ್ನು ಹೆಚ್ಚಿಸುತ್ತವೆ. ಒಂದು ವೇಳೆ ಹೆರಿಗೆ ನೋವಿನ ಭಯ ಇದ್ದಿದ್ದರೆ ತಾಯಿ ಮಗುವನ್ನು ಹೆರಲು ಸಾಧ್ಯವೇ?

ಭಯವನ್ನು ಹೋಗಲಾಡಿಸಲು ಎರಡು ಮಾರ್ಗಗಳಿವೆ. ಮೊದಲನೆಯದಾಗಿ ನಾವು ಏಕೆ ಭಯ ಪಡಬೇಕು ಎಂದು ಆಲೋಚಿಸಬೇಕು. ಏನಾಗುತ್ತೆ ನೋಡಿಯೇ ಬಿಡೋಣ ಎಂದು ಹೇಳಿಕೊಳ್ಳುತ್ತಾ ಬಂದಲ್ಲಿ ಆ ಧೈರ್ಯಕ್ಕೆ ಭಯ ಹೊರಟು ಹೋಗುತ್ತದೆ. ಮರ ಹತ್ತುವಾಗ ಇದ್ದ ಭಯ ಮರ ಹತ್ತಿದ ಮೇಲೆ ಖಂಡಿತ ಇರುವುದಿಲ್ಲ. ಆದರೆ ಮರ  ಹತ್ತುವ ಛಾತಿ ನಮದಾಗಬೇಕಷ್ಟೆ. ಇನ್ನೊಂದು ಮಾರ್ಗವೂ ಅದೇ. ನಾವು ಯಾವುದಕ್ಕೆ ಭಯ ಪಟ್ಟುಕೊಳ್ಳುತ್ತೇವೆಯೋ ಅದರಲ್ಲಿ ಸ್ವಲ್ಪ ಸ್ವಲ್ಪವಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತ ಹೋದಂತೆ ಭಯ ಇಲ್ಲವಾಗುತ್ತೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ ಸಹಜ. ಆದರೆ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಂಡಾಗ ಭಯ ದೂರವಾಗುತ್ತದೆ.
ಭಯ ಎನ್ನುವುದು ಮನದಲ್ಲಿದ್ದರೆ ಏನನ್ನು ಸಾಧಿಸಲಾಗದು ಎಂಬುದನ್ನು ಒಂದು ದೃಷ್ಟಾಂತದಿಂದ ತಿಳಿಯಬಹುದು.
ಸೊಂಡಿಲಿಯೊಂದಕ್ಕೆ ಬೆಕ್ಕು ಎಂದರೆ ಭಯ. ಒಬ್ಬ ಮುನಿಯ ಬಳಿ ಹೋಗಿ ತನಗೆ ಬೆಕ್ಕು ಎಂದರೆ ಭಯ, ತನ್ನನ್ನು ಬೆಕ್ಕನ್ನಾಗಿ ಪರಿವರ್ತಿಸಿ ಬಿಡಿ ಎಂದು ಕೇಳಿಕೊಂಡಿತು. ಮುನಿ ತಥಾಸ್ತು ಎಂದ. ಇಲಿ ಬೆಕ್ಕಾಯಿತು. ಎರಡು ದಿನಗಳು ಕಳೆದಿಲ್ಲ, ಬೆಕ್ಕಾಗಿದ್ದ ಇಲಿ ಮುನಿಯ ಬಳಿ ಬಂದು, “ಪೂಜ್ಯರೇ, ನನ್ನ ಕಂಡರೆ ನಾಯಿ ಬೊಗಳುತ್ತೆ, ನನಗೆ ನಾಯಿ ಎಂದರೆ ಭಯ ನನ್ನನ್ನೂ ನಾಯಿಯನ್ನಾಗಿಸಿ “ಎಂದು ಕೇಳಿಕೊಂಡಾಗ ಸರಿ, ಮುನಿಯ ಕೃಪೆಯಿಂದ ಬೆಕ್ಕು ನಾಯಿಯಾಯಿತು.
ಈಗ ನಾಯಿಗೆ ಹುಲಿಯ ಭಯ. ಮುನಿಯ ಅಲವತ್ತುಕೊಂಡು ಹುಲಿಯಾಯಿತು. ಹುಲಿಯನ್ನು ಕಂಡ ಬೇಡ ಅಟ್ಟಿಸಿಕೊಂಡು ಬಂದ. ಹುಲಿಯಾಗಿದ್ದ ನಾಯಿಗೆ ಭಯ ಹೋಗಿಯೇ ಇಲ್ಲ ಮತ್ತೆ ಮುನಿಯ ಬಳಿಗೆ ಹೋಗಿ ತನ್ನನ್ನೂ ಒಬ್ಬ ಬೇಡನನ್ನಾಗಿಸಿ ಎಂದು ಪ್ರಾರ್ಥಿಸಿತು. ಹುಲಿ ಬೇಡನ ವೇಷ ತಾಳಿತು.
ಒಂದು ವಾರ ಕಳೆಯಿತು. ಬೇಡ ಮುನಿಯ ಬಳಿ ಬಂದು “ಸ್ವಾಮಿ ಈಗ ನನಗೆ ಬೇರೆ ಮನುಷ್ಯರನ್ನು ಕಂಡರೆ ಭಯವಾಗುತ್ತೆ. ಆದ್ದರಿಂದ ನನ್ನನ್ನೂ……”ಎಂದು ಹೇಳಿದ.
ಮುನಿ ನಗುತ್ತ “ಎಷ್ಟಾದರೂ ನೀನು ಇಲಿ, ನಿನ್ನನ್ನು ಹೇಗೆ ಪರಿವರ್ತಿಸಿದರೂ ಭಯ ನಿನ್ನ ಬಿಟ್ಟು ಹೋಗುವದಿಲ್ಲ, ನೀನು ಇಲಿಯಾಗಿರುವುದೇ ಸರಿ….”ಎಂದು ಹೇಳಿ ಮೊದಲಿನಂತೆ ಇಲಿಯನ್ನಾಗಿ ಮಾಡಿದ.
ಭಯ ಇದ್ದವನು ಏನನ್ನು ತಾನೇ ಮಾಡಲು ಸಾಧ್ಯ?

ಅಕ್ಕಮಹಾದೇವಿಯವರ ಎಲ್ಲ ವಚನಗಳಲ್ಲಿ ಜೀವನಾನುಭಾವ ಹಾಸು ಹೊಕ್ಕಾಗಿದೆ.ಒಂದು ವಚನ ಸಕಾಲಿಕ ಹಾಗೂ ಸರ್ವರಿಗೂ ಭಯಕ್ಕೆ ವಿರುದ್ಧವಾದ ನಿರ್ಭಯತೆಯ ನೀತಿಯನ್ನು ಅರುಹುತ್ತದೆ.
“ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಂತಯ್ಯಾ
ಸಮುದ್ರದಾ ತಡಿಯಲ್ಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜೀದೊಂಡೆತಯ್ಯ
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೇಂತಯ್ಯ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದೊಡೆ ಕೋಪಿಸಿಕೊಳ್ಳದೆ ಸಮಾಧಾನಿಯಾಗಿರುವಂತೆ ನಿರ್ಭಯವಾಗಿರಬೇಕೇಂಬುದು
ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಿ ಬಾಳುವ ತಂತ್ರವಾಗಿದೆ ಈ ವಚನದ ಮಂತ್ರ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

One thought on “

Leave a Reply

Back To Top