ನಾವು ಚಾಮುಂಡಿ ಬೆಟ್ಟ ಹತ್ತಿದೆವು..ಅನುಭವ

ಅನುಭವ

ನಾವು ಚಾಮುಂಡಿ ಬೆಟ್ಟ ಹತ್ತಿದೆವು..

ಗೊರೂರುಅನಂತರಾಜು, ಹಾಸನ.

ರೀ ನಾಳೆ ನಾನು ಚಾಮುಂಡಿ ಬೆಟ್ಟಕ್ಕೆ ಹೊರಟಿರುವೆ. ನೀವು ಏನು ಮಾಡುವಿರಿ.. ಮಡದಿ ಶಾಕುಂತಲೆ ಕಾಫಿ ಕೈಗಿಟ್ಟು ಕೇಳಿದಳು. ನಾನು ಏನು ಮಾಡಬೇಕು.? ತಕ್ಷಣಕ್ಕೆ ಗೊತ್ತಾಗಲಿಲ್ಲ. ಜೇಬು ನೋಡಿಕೊಂಡೆ. ಸ್ವಲ್ಪ ದುಡ್ಡಿರಬಹುದು ಅಷ್ಟೇ. ಇಷ್ಟರಲ್ಲಿ ಮೈಸೂರು ಸುತ್ತಿ ಬರಲುಂಟೇ..! ಇವತ್ತು ಗುರುವಾರ ಬಂತಮ್ಮ..ಗುರು ರಾಯರ ನೆನೆಯಮ್ಮ..ಕಾಫಿ ಸಿಫ್ ಮಾಡಿ ಮಡದಿಯ ಮನಸ್ಸನ್ನು ಡೈವರ್ಟ್ ಮಾಡಲು ಪ್ರಯತ್ನಿಸಿದೆ. “ರೀ, ನಾಳೇ ಅಷಾಡ ಶುಕ್ರವಾರ, ನಾನು ಚಾಮುಂಡಿ ಬೆಟ್ಟ ಹತ್ತಲು ಸಂಕಲ್ಪ ಮಾಡಿರುವೆ..ನೀವು ತಡೆಯಬೇಡಿ ಎಂದಳು.ರಥದ ಚಕ್ರಕ್ಕೆ ಹೆದ್ನ ಕೊಡುವ ವಿಫಲ ಪ್ರಯತ್ನ ನನ್ನದು. ಅವಳೇನೋ ಉಚಿತ ಬಸ್ಸಿನಲ್ಲಿ ಮೈಸೂರಿಗೆ ಹೋಗಿ ಬರುತ್ತಾಳೆ. ಅವಳು ಬರುವ ತನಕ ಮನೆಯಲ್ಲೇನು ಮಾಡಲಿ. ? ನನಗೆ ಏನೂ ಅಡಿಗೆ ಮಾಡಲು ಬರುವುದಿಲ್ಲ. ಒಮ್ಮೆ ಅವಳು ಉಷಾರಿಲ್ಲದೆ ನರಳುವಾಗ ಒಂದು ಕಪ್‌ ಅಕ್ಕಿಯನ್ನು ಕುಕ್ಕರ್‌ನಲ್ಲಿ ಹಾಕಿ ಎರಡು ಕಪ್ ನೀರು ಹಾಕಿ ಗ್ಯಾಸ್ ಸ್ಟವ್ ಮೇಲೆ ಇಡಿ ಎಂದಳು. ಇಟ್ಟೆ. ಎರಡು ವಿಶಲ್ ಹೊಡೆದ ಮೇಲೇ ಮುಚ್ಚಳವನ್ನು ಪ್ರೆಸ್ ಮಾಡಿ ಎಂದಳು. ಅರೇ, ಉಡಿ  ಉಡಿ ಅನ್ನ ರೆಡಿ..! ಇದು ಬಿಟ್ಟು ಮತ್ತೇನು ಅಡಿಗೆ ಕಲಿತ್ತಿಲ್ಲದ ಭೀಮi ಬಕಾಸುರ ನಾನು. “ಮೈಸೂರಿಗೆ ಹೋಗಿ ಬರಲು ಹಣಕಾಸಿನ ವ್ಯವಸ್ಥೆ ಹೇಗೆ ಮಾಡಿಕೊಂಡಿರುವೆ..ಕಾಫಿ ಲೋಟ ಕೆಳಗಿಟ್ಟು ನಾಲಿಗೆ ಚಪ್ಪರಿಸಿದೆ. ಕುಡಿದಿದ್ದು ಶುಗರ್ ಲೆಸ್‌ಕಾಫಿ.
“ನೀವು ಕೊಟ್ಟ ಸಂಬಳ ದುಡ್ಡಿನಲ್ಲಿ ಒಂದಿಷ್ಟು ಸೇವಿಂಗ್ಸ್ ಮಾಡಿರುವೆ. ನೀವೀಗ ಕಥೆಯೋ ಕವಿತೆಯೋ ಬರೆಯುತ್ತೀರಿ. ನಾನು ಸೀರೆ ಬಟ್ಟೆ ಜೋಡಿಸಿಕೊಳ್ಳುತ್ತೇನೆ. ಕುಶಾಲನಗರದಿಂದ ನಮ್ಮ ಅಕ್ಕನೂ ಬರ‍್ತಾಇದ್ದಾರೆ.. ಎಂದಳು. ಮೊದಲೇ ಎಲ್ಲಾ ಪ್ಲಾನ್ ಮಾಡಿ ಕೊಂಡಿದ್ದಾರೆ ಅಕ್ಕ ತಂಗಿಯರು. “ಸರಿ, ನನ್ನ ಬಟ್ಟೆಯನ್ನು ಜೋಡಿಸಿಕೋ. ನನಗೆ ಈ ಹೋಟೆಲ್ ಊಟ ಆಗಬರುತ್ತಿಲ್ಲ.


ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಚಾಮುಂಡಿ ಪಾದಕ್ಕೆ ಹೋಗಲು ಯಾವ ಫ್ಲಾಟ್‌ಫಾರಂ.. ನಿರ್ವಾಹಕ ಮಹಾಶಯರನ್ನು ಕೇಳಿದಳು ಮಡದಿ. ಆತ ಏನೂ ಹೇಳಲಿಲ್ಲ.ಮಹಿಳೆಯರು ಆ ಬಸ್ಸು ಈ ಬಸ್ಸು ಎಂದು ಸೀಟು ಹಿಡಿಯಲು ಪರದಾಡುತ್ತಿದ್ದರು. ನಾನೇ ಓರ್ವ ವಿದ್ಯಾರ್ಥಿನಿಗೆ ಕೇಳಿದೆ “ಮೇಡಂ, ಚಾಮುಂಡಿ ಬೆಟ್ಟ ಹತ್ತಲು ಯಾವ ಬಸ್ಸು ಹತ್ತಬೇಕು..? ನಾನು ಸ್ಟೂಡೆಂಟ್ ನನ್ನನ್ನು ಮೇಡಂ ಎಂದು ಕರೆದರಲ್ಲಾ ಎಂಬ ಖುಷಿಗೋ ಏನೋ “ಅಂಕಲ್, ನೀವು ಆ ಕಡೆ ಪ್ಲಾಟ್ ಫಾರಂಗೆ ಹೋಗಿ, ಜೆಎಸ್‌ಎಸ್ ಸ್ಟಾಪ್‌ ಅಂತ ಹೇಳಿ. ಅಲ್ಲಿ ಬಸ್ಸು ನಿಲ್ಲಿಸುತ್ತಾರೆ. ನೀವು ಅಲ್ಲಿಂದ ಸ್ವಲ್ಪ ದೂರ ಒಳಗೆ ನಡೆದರೆ ಚಾಮುಂಡಿ ಪಾದ ಸೇರುವಿರಿ ಎಂದಳು. ಅಂತೆಯೇ ಸೇರಿದವು. ಅಲ್ಲಿ ಉದ್ದಕ್ಕೂ ಅರಿಶಿಣ ಕುಂಕುಮದ ಅಂಗಡಿ ಸಾಲು. ಇಪ್ಪತ್ತು, ನಲ್ವತ್ತು, ಐವತ್ತು ರೂ.ಗಳಂತೆ ಅಡಿಕೆ ತಟ್ಟೆಯಲ್ಲಿ ಅರಿಶಿಣ ಕುಂಕುಮ ಇಟ್ಟು ಮಾರುತ್ತಿದ್ದರು. ನನಗೆ ಆಶ್ಚರ್ಯ..! ಇದೇನು ಹೂವು ಬಾಳೆಹಣ್ಣು ತೆಂಗಿನಕಾಯಿಗಳಿಗಿಂತ ಈ ಅಂಗಡಿಗಳೇ ಹೆಚ್ಚಿವೆಯೆಲ್ಲಾ..! ನನ್ನಾಕೆ ಮತ್ತು ಅವರಕ್ಕ ಎರಡು ಅರಿಶಿಣ ಕುಂಕುಮದ ತಟ್ಟೆ ಖರೀದಿಸಿದರು. ನಮ್ಮ ಪಾದರಕ್ಷೆಗಳನ್ನು ಮುಫತ್ತಾಗಿ ಅಂಗಡಿ ಬಳಿ ಬಿಟ್ಟೆವು. ಗೇಟ್‌ನಲ್ಲಿ ಪರಿಸರವಾದಿಗಳು ಪ್ಲಾಸ್ಟಿಕ್ ಇದ್ದರೆ ಇಲ್ಲಿಯೇ ಬಾಕ್ಸ್ನಲ್ಲಿ ಹಾಕಿ ಎಂದರು. ಮುಂದೆ ಮೆಟ್ಟಿಲು ಎಷ್ಟಿವೆ ಎಂದು ಒಬ್ಬ ಹುಡುಗನನ್ನು ಕೇಳಿದೆ. ಆತ ಸಾವಿರದ ಒಂದು ಎಂದು ಪಕ್ಕ ಲೆಕ್ಕ ಹೇಳಿದ. ಹಾಗೆಂದು ಮೆಟ್ಟಿಲುಗಳಿಗೆ ನಂಬರ್ ಹಾಕಿರಲಿಲ್ಲ.ಸರಿ ಮೊದಲನೇ ಮೆಟ್ಟಿಲಿನಿಂದ ಅರಿಶಿಣ ಕುಂಕುಮ ಮೆಟ್ಟಿಲುಗಳಿಗೆ ಹಚ್ಚುತ್ತಾ ಮಡದಿ ಬೆಟ್ಟ ಹತ್ತತೊಡಗಿದಳು. ಆಗ ನನಗೆ ಅರಿಶಿಣ ಕುಂಕುಮ ವ್ಯಾಪಾರ ಏಕೆ ಎಂದು ತಿಳಿಯಿತು. ನಾನು ಉತ್ಸಾಹದಿಂದಲೇ ಮಡದಿಯ ಭಕ್ತಿಗೆ ನನ್ನ ಶಕ್ತಿಯನ್ನು ಪ್ರದರ್ಶಿಸಬೇಕೆಂದು ಅವಳ ಮನಿ ಇರುವ ಮಿನಿ ಪಸ್ ೯ ಹೊತ್ತು ಮುಂದೆ ಮುಂದೆ ಬೆಟ್ಟ ಹತ್ತತೊಡಗಿದೆ. ಆಗ ನನ್ನನ್ನೇ ವಿಡಂಬಿಸಿ ಬರೆದಿದ್ದ ಹನಿಗವನ ನೆನೆಸಿಕೊಂಡೆ.
ಮಡದಿ ಹೆಸರಿನ ಮುಂದೆ
ಗಂಡಸರ ಹೆಸರು ಏಕಿರುತ್ತದೆ
ಯೋಚಿಸಿ ತುಸು ಹೊತ್ತು
ಮುಂದೆ ಮುಂದೆ ನಡೆಯುತ್ತಾನಲ್ಲಾ

ಲಗೇಜ್ ಹೊತ್ತು..
 ನೂರು ಮೆಟ್ಟಿಲು ಏರುವಷ್ಟರಲ್ಲೇ ಏದುಸಿರು ಬಂದು “ಉಸ್ಸಪ್ಪ..! ಎಂದು ಕುಳಿತೆ. “ಉಸ್ಸ್ ಎನ್ನಬಾರದು ಎಂದರು ನನ್ನ ಪತ್ನಿಯ ಅಕ್ಕನವರು. “ಏನ್‌ ಮಾಮ, ಹಂಡ್ರೆಡ್ ಸ್ಟೆಪ್‌ಗೆ ನಿಮಗೆ ಸುಸ್ತಾಯಿತಾ..? ಇನ್ನೂ ನೈನ್ ನಾಟ್‌ ಒನ್ ಸ್ಟೆಪ್ಸ್  ಗಳಿವೆ ಗೊತ್ತಾ ಎಂದಳು ಖುಷಿ.
ಇನ್ನೂ ೯೦೧ ಮೆಟ್ಟಿಲು ಹತ್ತುವುದು ಹೇಗಪ್ಪ ಎಂದು ಚಿಂತಿಸುತ್ತಿರಲು ಗೋವಾದಲ್ಲಿ ಸಿಐಡಿ ೯೯೯ ಸಿನಿಮಾ ನೆನಪಾಯಿತು. ಜೇಮ್ಸ್   ಬಾಂಡ್‌ ಅಣ್ಣರ ಸ್ಮರಿಸಿ ಉತ್ಸಾಹದಿಂದ ಮೆಟ್ಟಿಲು ಏರತೊಡಗಿದೆ. ಆಗಾಗ್ಗೆ ತುಂತುರು ಮಳೆ ಬಂದು  ಮೆಟ್ಟಿಲು ಜಾರುತ್ತಿದ್ದು ಜಾಗ್ರತೆಯಿಂದ ಹತ್ತಬೇಕಿತ್ತು. ಮುನ್ನೂರು ಮೆಟ್ಟಿಲು ಹತ್ತಿರಬಹುದಷ್ಟೇ ಉಬ್ಬಸ ಹೆಚ್ಚಾಗಿ ತಲೆ ತಿರುಗಿದಂತಾಗಿ ಬೆಟ್ಟವೇ ನನ್ನ ಸುತ್ತ ತಿರುಗುತ್ತಿದೆಯೇನೋ ಎನಿಸಿತೊಡಗಿ ಅಲ್ಲಿಯೇ ಕುಳಿತೆ.  ಬಹಳ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಿರುಚಾಡಿಕೊಂಡು ಜೈಕಾರ ಹಾಕುತ್ತಾ ಬೆಟ್ಟ ಹತ್ತುತ್ತಿದ್ದರು. ಶಾಲೆಗೆ ಬಂಕ್ ಹಾಕಿ ಹುಡುಗಿಯರ ಹಿಂಬಾಲಿಸಿಕೊಂಡು ಬಂದ ಭಕ್ತ ಮಹಾಶಯರು ಸಾಕಷ್ಟಿದ್ದರು. ನಾನಾದರೂ ಮಡದಿಯ ಅಣತಿಯಂತೆ ಚಪ್ಪಲಿಯನ್ನು ಕುಂಕುಮದ ಅಂಗಡಿ ಬಳಿ ಬಿಟ್ಟು ಬಂದು ಭಕ್ತಿ ಭಾವ ಮೆರೆದಿದ್ದರೆ ಈ ಭಕ್ತರು ಚಪ್ಪಲಿ ಶೂ ಧರಿಸಿ ಬಂದಿದ್ದಾರೆ..!
ಇಬ್ಬರು ಹುಡುಗಿಯರು ಮಂಡಿಗಾಲಿನ ಮೇಲೆ ಬೆಟ್ಟ ಹತ್ತುವ ಸಾಹಸ ನಡೆಸಿದ್ದರು. ಹರಕೆ ಹೊತ್ತಿರಬೇಕೆಂದು ತಿಳಿದು ಮಡದಿ ಹೆಸರು ಕೇಳಿದಳು. ಅರ್ಪಿತ ಎಂದಳು. ಮುಂದೆ ಸಾಗಿದಂತೆ ಮರ‍್ನಾಲ್ಕು ಭಜನೆ ತಂಡದವರ ಹಾಡು ಕೇಳಿಸಿತು. ನಂದಿ ವಿಗ್ರಹ ಸಮೀಪಿಸಿದಂತೆ  ಬಂದ್ ಮಾಡಿದ್ದ ಟಾರ್‌ ರಸ್ತೆಯ ಹಾಸು ಪಾಸು ಚುರುಮುರಿ, ಫ್ರೂಟ್ಸ್,  ಪಾನೀಯ ಅಂಗಡಿಗಳು ಕಂಡು ಬಂದವು. ಹತ್ತುರೂ.ನ ಚುರುಮುರಿಗೆ ಮೂವತ್ತು ರೂ. ಮೊಮ್ಮಗಳು ಖುಷಿಯನ್ನು ಖುಷಿ ಪಡಿಸಲು ಚುರುಮುರಿಯನ್ನು ಕೊಡಿಸಿದರು ಅವರಜ್ಜಿ. ಇಷ್ಟರಲ್ಲಾಗಲೇ ಇವರು ಮೆಟ್ಟಿಲುಗಳಿಗೆ ಹಚ್ಚಿಕೊಂಡು ಬಂದ ಅರಿಶಿಣ ಕುಂಕಮದ ತಟ್ಟೆ ಖಾಲಿಯಾಗಿತ್ತು ನಂದಿ ಸನಿಹದ ಗುಹೆಯೊಳಗಿನ ಶಿವನ ದರ್ಶಿಸಿದೆವು.


“ರೀ, ಮಿರಿಂಡಾ ಇದ್ದರೆ ತನ್ನಿ ಎಂದಳು ಮಡದಿ. ಅಂಗಡಿಯಲ್ಲಿ ಮಿರಿಂಡಾ ಇರಲಿಲ್ಲ ಬದಲಿಗೆ ಸೆವೆನ್‌ ಅಪ್‌ ಕೊಟ್ಟನು. ನಮಗೂ ಪಿಕಪ್ ಬೇಕಿತ್ತು. ಒಂದಕ್ಕೆ ಎರಡರಷ್ಟು ದುಡ್ಡು ಕೊಟ್ಟು ಖರೀದಿಸದೇ ವಿಧಿಯಿರಲಿಲ್ಲ. ನಂದಿ ಮುಂದೆ ಮರ‍್ನಾಲ್ಕು ಹುಡುಗಿಯರು ವಿವಿಧ ಭಂಗಿಯಲ್ಲಿ ನಿಂತು ಒಬ್ಬರಿಗೊಬ್ಬರು ಪೋಟೋ ತೆಗೆದುಕೊಳ್ಳುತ್ತಿದ್ದರು. ಅವರಲ್ಲಿಒಬ್ಬಾಕೆಗೆ ನನ್ನ ಮೊಬೈಲ್‌ ಕೊಟ್ಟು ಪೋಟೋ ತೆಗೆದುಕೊಡಲು ಕೋರಿದೆ. ಕೋರಿಕೆ ಈಡೇರಿಸಿದಳು ಆಕೆ. ಅಷ್ಟರಲ್ಲಿ ನನಗೂ ಆಯಾಸ ಕಡಿಮೆಯಾದಂತೆ ಭಾಸವಾಗಿ ಸುತ್ತಲೂ ಕಣ್ಣಾಯಿಸಿದೆ. ಮೈಸೂರು ಚೆನ್ನಾಗಿಯೇ ಕಾಣಿಸಿತು. ಮುಂದಿನ ನಡಿಗೆ ಅಷ್ಟೇನೂ ತ್ರಾಸವಾಗಲಿಲ್ಲ. ಚಾಮುಂಡಿ ಬೆಟ್ಟದಲ್ಲಿ ಜನವೋಜನ. ದೇವಿ ದರ್ಶನಕ್ಕೆ ಕ್ಯೂನಲ್ಲಿ ಬೆಳಿಗ್ಗೆ ನಾಲ್ಕೂವರೆಗೆ ನಿಂತವರು ಹತ್ತಕ್ಕೆ ದರ್ಶನ ಭಾಗ್ಯ ದೊರಕಿತೆಂಬ ವಿಚಾರ ಕೇಳಿ ಸುಸ್ತಾದಳು ಮಡದಿ. ಗೋಪುರಕ್ಕೆ ಕೈ ಮುಗಿದು ದೇವಾಲಯವನ್ನು ಒಂದು ರೌಂಡ್ ಹೊಡೆದೆವು.   ಈಗ ಊಟಕ್ಕೆ ಹೋಗೋಣ ನಡೆಯಿರಿ ಎನ್ನಲು ವಾಚ್ ನೋಡಿಕೊಂಡೆ. ಒಂದೂವರೆ ಗಂಟೆ. ಪಾಪ ಮಡದಿ ಮತ್ತು ಅವರಕ್ಕ ಬೆಳಿಗ್ಗೆಯಿಂದ ಏನೂ ತಿಂದಿಲ್ಲ. ನಾನು ಮತ್ತು ಖುಷಿ ಬೆಳವಾಡಿಯಲ್ಲಿನ ಚಾಮುಂಡಿ ದೇವಾಲಯದಲ್ಲಿ ಬೆಳಿಗ್ಗೆ ದೇವಿ ದರ್ಶನ ಮಾಡಿ ಪ್ರಸಾದ ಫಲಾವ್‌ ಕೇಸರಿ ಬಾತ್‌ ತಿಂದಿದ್ದೆವು. ಊಟಕ್ಕೆ ರಷ್‌ ಇದ್ದರೂ ಕ್ಯೂನಲ್ಲಿ ಸಾಗಿ ಊಟ ಮಾಡಿ ಹೊರ ಬಂದೆವು. ಮತ್ತೆ ಹಿಂತಿರುಗಿ ಬೆಟ್ಟ ಇಳಿದು ನಾವು ಬಿಟ್ಟು ಬಂದಿದ್ದ ಚಪ್ಪಲಿ ಧರಿಸಬೇಕಿತ್ತು. ಬೆಟ್ಟ ಹತ್ತುವಾಗಲೇ ಆಗಾಗ್ಗೆ ಸೋನೆ ಮಳೆ ಬಿದ್ದು ಮೆಟ್ಟಿಲು ಜಾರುತ್ತಿತ್ತು. ಇನ್ನೂ ಇಳಿಯುವಾಗ ಜಾರಿಬಿದ್ದರೆ ಕಷ್ಟ ಎಂದು ಭಾವಿಸಿ ಬಸ್ಸಿನಲ್ಲಿ ಸಿಟಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ನಂಜನಗೂಡಿಗೆ ಹೋಗಿ ಮನೆಗೆ ಹಿಂತಿರುಗುವಷ್ಟರಲ್ಲಿ ರಾತ್ರಿ ಎಂಟಾಗಿತ್ತು.

————————–

ಗೊರೂರುಅನಂತರಾಜು, ಹಾಸನ.

Leave a Reply

Back To Top