‘ಗುಬ್ಬಿ ಗೂಡು ಕಟ್ಟಿತ್ತು’ಸಣ್ಣಕಥೆ -ಗೊರೂರು ಅನಂತರಾಜು

ಕಥಾ ಸಂಗಾತಿ

‘ಗುಬ್ಬಿ ಗೂಡು ಕಟ್ಟಿತ್ತು

‘ಸಣ್ಣಕಥೆ -ಗೊರೂರು ಅನಂತರಾಜು


ನಮಸ್ಕಾರ್ ಸರ್, ಕಲಾಕೃತಿ ಬಗ್ಗೆ ಪೈಂಟಿಂಗ್ ಮಾಡಿದ ಕಲಾವಿದನನ್ನು ಕೇಳಿದರೆ ಪೈಂಟಿಂಗ್‌ಗೆ ಒಂದು ಚೌಕಟ್ಟನ್ನು ಹಾಕಿದಂತೆ. ಪೈಂಟಿಂಗಿನ ಅರ್ಥ ವಿಸ್ತಾರ ಸಂಕುಚಿತವಾಗುತ್ತದೆ. ನೀವು ಕೇಳಿದಕ್ಕೆ ಸ್ವಲ್ಪ ವಿವರಣೆ ಕೊಡಬಯಸುತ್ತೇನೆ.. ಹವ್ಯಾಸಿ ಚಿತ್ರಕಲಾವಿದ ಶಂಕರ್ ನನ್ನ ದಡ್ಡ ಪ್ರಶ್ನೆಗೆ ಹೀಗೆ ಕುಟುಕಿದ್ದರು. ಆ ದಡ್ಡ ನಾನಾದರೂ ಏನು ಕೇಳಿದ್ದೇನೆಂದರೇ ಸಾಂಸ್ಕೃತಿಕ ಸೌರಭ ಪುಸ್ತಕ ಸಿದ್ದವಾಗುತ್ತಿದೆ. ಚಿತ್ರಕಲೆ, ಸಂಗೀತ, ನೃತ್ಯ ಪ್ರಕಾರ ಒಳಗೊಂಡಿರುತ್ತದೆ. ನಿಮ್ಮ ಇವತ್ತಿನವರೆಗಿನ ಕಲಾಸಾಧನೆ ಮಾಹಿತಿ ಕಳಿಸಿ. ಜೊತೆಗೆ ನಿಮ್ಮ ಪೋಟೋ ನಿಮ್ಮ ಪೈಂಟಿಂಗ್ಸ್  ಗಳ ಪೋಟೋ ವಿವರ ಕಳಿಸಿ ಎಂದು ಮೆಸೇಜ್ ಹಾಕಿದ್ದನಷ್ಟೇ! ಅದಕ್ಕೆ ಶಂಕರ್ ಒಂದು ಅಪಾಟ್ ೯ ಮೆಂಟ್‌ನ್ನು ಒಂದು ಗುಬ್ಬಚ್ಚಿ ವೀಕ್ಷಿಸುತ್ತಿರುವ ದೃಶ್ಯದ ಪೋಟೋ ಕಳಿಸಿದ್ದರು. ಆ ಪೋಟೋ ನೋಡಿದ ಕೂಡಲೇ ನಮ್ಮ ಮನೆ ಎದುರಿಗಿರುವ ಅಪಾರ್ಟ್ಮೆಂಟ್ ಕಣ್ಣೆದುರು ಕಾಣಿಸಿತು.
ಆಗ ಬೆಳಿಗ್ಗೆ ೬ರ ಸಮಯ. ಹಾಸಿಗೆಯಿಂದ ಎದ್ದವನೇ ಬಾಗಿಲು ತೆಗೆದು ಹೊರಗೆ ಬಂದೆ. ಮನೆ  ಎದುರು ಇರುವ  ಅಪಾರ್ಟ್ಮೆಂಟ್‌ನ ಮೇಲ್ತಂತಸ್ತಿನ ಪೈಪ್ ಲೈನ್‌ಗಳ  ಮೇಲೆ ಪಾರಿವಾಳಗಳು ನೆಲೆಗೊಂಡಿದ್ದವು.  ಮನೆ ಎದುರಿನ ಶ್ರೀ ಶನೇಶ್ವರ ದೇವಸ್ಥಾನದ ಗೋಪುರದ ಮೇಲ್ತುದಿಯಲ್ಲಿ ಪಾರಿವಾಳವೋ ಕಾಗೆಯೋ ಒಟ್ಟಾರೆ ಕಪ್ಪು ಹಕ್ಕಿಗಳ ಚಿತ್ರ  ಕಡೆದಿದ್ದಾನೆ ಆ ಶಿಲ್ಪಿ. ಈ ಪಕ್ಕ ಜೀವಂತ ಪಾರಿವಾಳಗಳು ಬಂದು ಕುಳಿತರೂ ನಮಗೆ ಯಾವೊಂದು ವ್ಯತ್ಯಾಸ ತಕ್ಷಣಕ್ಕೆ ಗೊತ್ತಾಗುವುದೇ ಇಲ್ಲ.  ನಾನು ೧೯೮೮ರಲ್ಲಿ ನಮ್ಮೂರಿನಿಂದ ಬಂದು ಈ ಜಾಗದಲ್ಲಿ ಹರಾಜಿನಲ್ಲಿ ಸೈಟ್‌ನ್ನು ಕೂಗುವಾಗ ನಕ್ಷೆಯಲ್ಲಿ ನಿವೇಶನ ಎದುರು ಇದ್ದಿದ್ದು ಪಾರ್ಕ್. ದೇವಸ್ಥಾನ ನಿರ್ಮಾಣಕ್ಕೂ ಮುನ್ನ ಈ ಪಾರ್ಕ್ ಎಂಬ ಜಾಗದಲ್ಲಿ ಬೆಳೆದ ಗಿಡಗಂಟೆಗಳ ಸಂದಿಗಳಲ್ಲಿ ಹಂದಿಗಳು  ವಾಸವಿದ್ದವು. ಇವುಗಳಿಗೆ ಮನೆಮಠಗಳಿಲ್ಲವಷ್ಟೇ ಎಂದುಕೊಂಡಿದ್ದು ಉಂಟು. ರಾತ್ರಿಯೆಲ್ಲಾ ಗುಟುರು ಹಾಕುತ್ತಿದ್ದ ಈ ಹಂದಿಗಳ ಮಾಲೀಕರನ್ನು ಹುಡುಕಿ ಒಡೆಯುವಷ್ಟು ಸಿಟ್ಟು ಬರುತಿತ್ತಾದರೂ ಆ ಪುಣ್ಯಾತ್ಮ ರು ಯಾರು  ಇತ್ತ ಬರುತ್ತಿರಲಿಲ್ಲ. ಬೆಳಿಗ್ಗೆ ತಾಯಿ ಹಂದಿಯೊಂದಿಗೆ ಮರಿಗಳ ಸೈನ್ಯ ನುಗ್ಗಿ ಬಂದು  ಚರಂಡಿಯಲ್ಲಿ ಹೊರಳಾಡಿ ಹರಡಿದ ಗಬ್ಬು ವಾಸನೆ ಮುಂದೆ ಯಾವ ಸೆಂಟಿನ ವಾಸನೆಯೂ ನಿಲ್ಲುತ್ತಿರಲಿಲ್ಲ. ಸದ್ಯ ದೇವಸ್ಥಾನ ಕಟ್ಟಿ ಕೆಟ್ಟ ವಾಸನೆ ನಿವಾರಣೆಯಾಗಿದೆ.
ಈಗ ನಮ್ಮ ಹುಣಸಿನಕೆರೆ ಬಡಾವಣೆ ಬಹು ಮಹಡಿ ಕಟ್ಟಡಗಳಿಂದ ಕೂಡಿದೆ. ನಾವು ಹುಣಸಿನಕೆರೆ ಕ್ಷೇಮಾಭಿವೃದ್ಧಿ ಸಂಘ ಕೂಡ ಮಾಡಿಕೊಂಡಿದ್ದೇವೆ. ೮೦ ಅಡಿ ರಸ್ತೆಗೆ ಅಬ್ದುಲ್ ಕಲಾಂ ರಸ್ತೆ ಎಂದು ಹೆಸರಿಟ್ಟಿದ್ದಾರೆ. ಇಲ್ಲಿನ ಪಾಕ್೯ ನತ್ತ ವಾಕ್  ಹೊರಟೆ. ರಸ್ತೆ ಬದಿಯ ಕರೆಂಟ್ ತಂತಿಗಳ ಮೇಲೆ ಕೆಲವು ಗುಬ್ಬಚ್ಚಿಗಳು ಕುಳಿತು ಚುಯ್ಯಂಗುಡುತ್ತಿದ್ದವು. ಮೊಬೈಲ್ ಟವರ್‌ಗಳಿಂದ ಗುಬ್ಬಚ್ಚಿಗಳು  ಸಾಯುತ್ತಿವೆ ಎಂಬುದನ್ನು ಯಾರೋ ಪುಣ್ಯಾತ್ಮರಿಂದ ಕೇಳಲ್ಪಟ್ಟಿದ್ದ ನಾನು ಅನುಮಾನ ಪರಿಹರಿಸಿಕೊಳ್ಳಲು ಆ ಕೂಡಲೇ ಶಂಕರ್  ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದೆ.  


ಹಲೋ ಶಂಕರ್, ನೀವು ಈ ಹಿಂದೆ ಇದೇ ಏರಿಯಾದಲ್ಲಿ ವಾಸವಿದ್ದಿರಂತಲ್ಲಾ! ಆಗ ಈ ಜಾಗವೆಲ್ಲಾ ಸ್ಮಶಾನವಾಗಿತ್ತೆಂದು ನನ್ನ ಮೊಮ್ಮಗ ಮೋಹಿತನ ಒಂದನೇ ವರ್ಷದ ಹುಟ್ಟು ಹಬ್ಬದ ಪೋಟೋ ತೆಗೆಯಲು ಬಂದಿದ್ದಾಗ್ಗೆ ಹೇಳಿದ್ದಿರಷ್ಟೇ.. ಎಂದು ನಾನು ಮಾತು ಮುಂದುವರಿಸುವ ಮುನ್ನವೇ ಯರ‍್ರೀ ಅದು, ನಿಮಗೆ ಪೋನ್ ಮಾಡಲು ಹೊತ್ತು ಗೊತ್ತು ಇಲ್ಲವೇ..! ಎಂಬ ಅವಾಜ್ ಧ್ವನಿಗೆ ಬೆಚ್ಚಿಬಿದ್ದು ಸ್ವಿಚ್ ಆಫ್ ಮಾಡಿದೆ. ಮತ್ತೇ ಆ ಕಡೆಯಿಂದ ಕರೆ ಬಂತು. ಸಾರಿ ಸಾರ್, ಕರೆ ನಿಮ್ಮದೆಂದು ಗೊತ್ತಾಗಲಿಲ್ಲ. ಆದರೂ ಈ ಕರೋನ ಆರ್ಭಟದಲ್ಲಿ   ದಿನಕ್ಕೊಂದು ಸಾವಿನ ಸುದ್ದಿ ವ್ಯಾಟ್ಸಪ್‌ನಲ್ಲಿ ಬರ‍್ತಾ ನಮಗೆ ಭಯ ಆತಂಕ ಹೆಚ್ಚುತ್ತಿರುವಾಗ ನೀವು ಸ್ಮಶಾನ ಎಂದು ಬೆಳಗಿನ ನಿದ್ರೆಗಣ್ಣಿನಲ್ಲಿ ಹೆದರಿಸುವುದು ಸರಿಯೇ.?.ಎಂದರು ಶಂಕರ್.
 ಸಾರಿ ಶಂಕರ್, ನೀವು ಎದ್ದು ಪ್ರೆಶಪ್ ಆಗಿ. ನಾನು ಆಮೇಲೆ ಕರೆ ಮಾಡುವೆ ಎಂದು ಹೇಳಿ  ೮೦ ಅಡಿ ರಸ್ತೆಯಲ್ಲಿ ವಾಕ್ ಮಾಡುತ್ತಾ  ವ್ಯಾಟ್ಸಪ್‌ನಲ್ಲಿ ಬರುವ ಪತ್ರಿಕೆಗಳನ್ನು ಓದುತ್ತಾ ಹುಣಸಿನಕೆರೆಯತ್ತ ನಡೆದೆ. ಜನತಾ ಮಾಧ್ಯಮ ಪತ್ರಿಕೆಯಲ್ಲಿ ಅಂದು ವರದಿ ಬಂದಿತ್ತು. ಅದು ಖರೆ ಸುದ್ದಿ.  ರಸ್ತೆ ಬದಿ ಕೊಳೆತ ಮಾವಿನ ಹಣ್ಣುಗಳು ಸೇರಿದಂತೆ ರಸ್ತೆಯುದ್ದಕ್ಕೂ ಕಸವನ್ನು ಎಸೆದಿದ್ದರು ನಮ್ಮ ವ್ಯಾಪಾರಿಗಳು.  ಸಂಪಾದಕರು ವೆಂಕಟೇಶಮೂರ್ತಿಯವರ ಕಳಕಳಿ ಎಲ್ಲರಿಗೂ ತಿಳಿದಿದೆ. ಅವರ ತಂಡ ಜನವರಿ ೨೬ರ ಗಣರಾಜ್ಯೋತ್ಸವಕ್ಕೆ ಹುಣಸಿನಕೆರೆ ಹಬ್ಬ ಮಾಡಿ ಮಹಿಳೆಯರು ಇದೇ ೮೦ ಅಡಿ ರಸ್ತೆಯಲ್ಲಿ ರಂಗೋಲಿ ಬರೆದು ನೂರಾರು ಮಂದಿ ಉಪ್ಪಿಟ್ಟು ತಿಂದು ಹೋಗಿ ಕೆಲವೇ ತಿಂಗಳಲ್ಲಿ ಮತ್ತೆ ರಸ್ತೆಯಲ್ಲಿ ಕಸ ಎಂದರೇ ಯಾರಿಗೆ ತಾನೇ ಸಿಟ್ಟು ಬರುವುದಿಲ್ಲ. ಸರಿ, ನಾನೇನು ಮಾಡಬೇಕು. ಸಿಟ್ಟು ಬಂದು ಯಾರಿಗೂ ಅರ್ಥವಾಗಬಾರದೆಂದು ಒಂದು ನವ್ಯ ಕವಿತೆ ಬರೆದು ಸ್ಪರ್ಧೆಗೆ ಕಳಿಸಿದೆ. ರಾಷ್ಟç ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿಗೆ ಕವಿಯ ಸಾಧನೆ, ಕವಿತೆ ವಾಚನದ ವೈಖ್ಯರಿ ಇವುಗಳನ್ನೆಲ್ಲಾ ಪರಿಗಣಿಸಿ ಆಯ್ಕೆ ಮಾಡುವುದಾಗಿ ತಿಳಿಸಿ ನಾನು ಕಳಿಸಿ ಪ್ರಶಸ್ತಿ ಬಾರದಿರುವುದಕ್ಕೆ ಕಾರಣ ತಲೆಕೆರೆದು ಹೇನು ಹುಡುಕುವ ಪ್ರಯತ್ನ ಮಾಡಿದೆ. ನಾನು ಲಾಕ್‌ಡೌನ್ ಸಂಕಟದಲ್ಲಿ ಹೊರಗೆ ಹೋಗದೆ ಗೂಗಲ್ ಪೇ ಮಾಡಲು ಬಾರದೇ ಪ್ರವೇಶ ಶುಲ್ಕ ೫೦ ರೂ. ಸಕಾಲಕ್ಕೆ ಕಳಿಸದೆ ನನ್ನ ಕವಿತೆ ಬಹುಮಾನದಿಂದ ವಂಚಿತವಾಯಿತೇ..? ಎಂದೆಲ್ಲಾ ಯೋಚಿಸಿ ಉದ್ದಕ್ಕೂ ಮಲಗಿದ್ದ ರಸ್ತೆಯ ಮೇಲೆ ನಡೆದೆ ನಡೆದೆ. ಆ ತುದಿಯತ್ತ ಹೋಗುವಷ್ಟರಲ್ಲಿ ಇನ್ನೊಂದು ಕೆರೆ ಎದುರಾಯಿತು. ಅಲ್ಲಿ ಒಂದಿಷ್ಟು ಗೊರವಂಕಗಳು ಇದ್ದವು.ವಾಪಸ್ಸು ಬರುತ್ತಾ  ಹುಣಸಿನಕೆರೆಯತ್ತ ನೋಡಿದೆ. ಈ ಕೆರೆಯ ಒಣ ಭಾಗದಲ್ಲಿ ಬೆಳ್ಳಕ್ಕಿಗಳು ಕೋಳಿ ಅಂಗಡಿಯವರು ಹೊಟ್ಟೆ ಕಳ್ಳು ಕಿತ್ತು ಎಸೆದಿದ್ದ  ಮಾಂಸವನ್ನು ಹಾರಾಡಿಕೊಂಡು ಹೆಕ್ಕಿ ತಿನ್ನುತ್ತಿದ್ದವು. ಇದು ಶನಿವಾರದ ಚಿತ್ರಣ.  


ಭಾನುವಾರ ಬೆಳಿಗ್ಗೆ  ೬ಕ್ಕೆ ಶಂಕರ್ ಕಳಿಸಿದ್ದ ವ್ಯಾಟ್ಸಪ್ ತೆರೆದೆ. ನೀವು ಹೇಳಿದಕ್ಕೆ ಸ್ವಲ್ಪ ವಿವರಣೆ ಕೊಡುವೆ.  ನನ್ನ ಪೈಂಟಿಂಗ್‌ನಲ್ಲಿ ಗುಬ್ಬಿಯೇ ಮುಖ್ಯ ವಿಚಾರ. ಇಲ್ಲಿ ಗುಬ್ಬಿಯು ತಟ್ಟೆಯ ಅಂಚಿನಲ್ಲಿ ಕುಳಿತು ಎತ್ತರವಾಗಿ ಕಟ್ಟಿರುವ ಬಿಲ್ಟಿಂಗ್ ನೋಡುತ್ತಿದೆ.  ಗುಬ್ಬಿ ಕೂಡ ಯೋಚಿಸುತ್ತಿದೆ. ನಾವು ಊಟ ತಿನ್ನುವ ಸ್ಥಳದಲ್ಲಿ ಹೀಗೆ ಮಲ್ಟಿಸ್ಟೋರ್  ಕಟ್ಟಡ  ಕಟ್ಟುತ್ತಾ ಹೋದರೆ ನಾವು ಎಲ್ಲಿ ವಾಸ ಮಾಡುವುದು? ನಮ್ಮ ಬಗ್ಗೆ ಈ ನರಮಾನವ ಯಾಕೆ ಯೋಚಿಸುವುದಿಲ್ಲ? ನಾವೂ ಇವರ ಜೊತೆ ಬದುಕುತ್ತಿಲ್ಲವೇ! ನಮ್ಮ ಬಗ್ಗೆ ಯಾಕೆ ಇವ ಯೋಚಿಸುವುದಿಲ್ಲ..? ಪ್ರಶ್ನೆಗಳಿಗೆ ಬ್ರೇಕ್ ಹಾಕಿ ಇನ್ನೂ ಹೆಚ್ಚಿನ ವಿವರಣೆ ನೀವು ನೀಡಿ ನಾನೀಗ ತಿಂಡಿ ತಿನ್ನಬೇಕು ಹೆಚ್ಚು ನನ್ನ ತಲೆ ತಿನ್ನಬೇಡಿ ಎಂದು ಹುಸಿಮುನಿಸಿನಲ್ಲಿ ರೇಗಿದರು.” ಭಾನುವಾರದ ಸ್ಪೇಷಲ್ ಎಂದು ಕುರಿ ತಲೆಮಾಂಸ ತಂದಿದ್ದಿರಾ” ಎಂದೆ. “ಅರೇ! ನಿಮಗೆ ಹೇಗೆ ಗೊತ್ತಾಯಿತು ಮಾರೆಯರೇ! ಎಂದರು. “ನೀವು ಮೂಳೆ ತಿನ್ನುತ್ತಾ ಮಾತನಾಡುತ್ತಿಲ್ಲವೇ. ನೀವು ನಾಲಿಗೆ ಹೊರಳಿಸಿ ಮಾತನಾಡುವಾಗಲೇ ಗೆಸ್ ಮಾಡಿದೆ” ಎಂದೆ. “ಪ್ರಚಂಡರು ನೀವು” ಎಂದರು. “ಶಂಕರ್,  ನಿಮ್ಮ ಚಿತ್ರ ಆಧರಿಸಿ ಪ್ರಬಂಧ ರಚಿಸಬೇಕೆಂದಿರುವೆ. ಹಾಗೇ ಮುಂದುವರಿಸಿ ಎಂದೆ. ಅವರು ಒಂದಿಷ್ಟು ಆನೆ, ನಾಯಿ, ಕುದುರೆ, ಕತ್ತೆ ಹೀಗೆ ಪ್ರಾಣಿಗಳನ್ನೇ ಮನೆಗೆ ಅಟ್ಟಿ ಓಕೆನಾ.. ಸಾಕ ಇನ್ನು ಬೇಕ..ಎಂದು ಚಾಟ್ ಮಾಡಿದರು. ನಾನು ಸ್ವಲ್ಪ ಚುರುಕಾದೆ. ನಿಮ್ಮ ಪೋಟೋ ದೃಶ್ಯ ನನ್ನೆದರು ಕಾಣುತ್ತಿದೆ. ನೀವು  ಈ ಪರಿಸರದಲ್ಲಿ ವಿದ್ಯಾರ್ಥಿ ದಿನಗಳನ್ನು ಕಳೆದವರಲ್ಲವೇ. ಆ ದಿನಗಳನ್ನು ಹಾಗೆಯೇ ನೆನಪಿಸಿಕೊಳ್ಳಿ.
ನಾನು ನಮ್ಮ ಊರಿನಲ್ಲಿದ್ದಾಗ ನಮ್ಮ ಮನೆಯೂ ನಾಡ ಹೆಂಚಿನಿಂದ ಕೂಡಿತ್ತು. ಆಗ ಅಲ್ಲಿ ಹೆಚ್ಚಾಗಿ  ಗುಬ್ಬಿಗಳು ಕಿಚಿಕಿಚಿ ಸದ್ದು ಮಾಡುತ್ತಿದ್ದವು. ಮುಂಜಾನೆ ಎದ್ದು ನಮ್ಮ ಮನೆಯ ಸೂರಿನಲ್ಲಿ ವಾಸಿಸುವ ಗುಬ್ಬಿಗಳ ಕಲರವ ಕೇಳಲೇ ನನಗೆ ಖುಷಿ.  ಎಷ್ಟೋ ಸಾರಿ ಗುಬ್ಬಿಗಳು ಮನೆಯ ಒಳಗೆ ಗೂಡು ಕಟ್ಟಿದ್ದು ಉಂಟು. ಗೂಡಿನಲ್ಲಿ ಮರಿಗಳನ್ನು ನೋಡಿ ಆನಂದಿಸಿದ್ದೇನೆ. ಆದರೆ ಇತೀಚಿಗೆ ಹಳ್ಳಿಗಳಲ್ಲೂ ಆರ್‌ಸಿಸಿ ಕಟ್ಟಡಗಳೇ! ಈ ಗುಬ್ಬಿಗಳಿಗೆ  ಗೂಡು ಕಟ್ಟಲು ನಾಡ ಹಂಚಿನ ಮನೆಗಳೇ ಬೇಕು.  ಪಟ್ಟಣಗಳಲ್ಲಿ ಗುಬ್ಬಿಗಳ ಕಲರವ ಕೇಳುವುದು ಕಷ್ಟ. ಹಳ್ಳಿಗಳಲ್ಲಿ ತಕ್ಕ ಮಟ್ಟಿಗೆ ಗುಬ್ಬಿಗಳು ಕಾಣುತ್ತಿವೆ. ನಾನು ಗುಬ್ಬಿಗಳ ಮೇಲಿನ ಕಾಳಜಿಯಿಂದ    ಪೇಂಟಿಂಗ್ ಮಾಡಿರುವೆ. ಕಾಲ ಗತಿಸಿದಂತೆ ಜೂ, ಜುರಾಸಿಕ್ ಪಾಕ್೯ ಗಳಲ್ಲಿ  ನೋಡಬೇಕಾಗುತ್ತದೆ. ನೀವು ಮೇ ೩೧ಕ್ಕೆ  ನಿವೃತ್ತಿ ಆಗಿದ್ದಿರಲ್ಲಾ ನಿಮ್ಮ ಮೊಮ್ಮಗ ಮೋಹಿತನಿಗೆ ಗುಬ್ಬಚ್ಚಿ ಕಥೆ ಹೇಳಲು ನನ್ನ ಪೇಂಟಿಂಗ್ ಬಳಸಿಕೊಳ್ಳಿ..
 ೫೦ ವರ್ಷಗಳ ಹಿಂದಕ್ಕೆ ನೆನಪು ಸರಿಯಿತು.  ಆಗ ಹತ್ತು ವರ್ಷದ ಬಾಲಕ ನಾನು. ಗುಬ್ಬಚ್ಚಿಗಳು ನಮ್ಮ ಮನೆ ಸೂರಿನಲ್ಲಿ ಗೂಡು ಕಟ್ಟುವುದು ಸಮಾನ್ಯವಾಗಿತ್ತು. ನಮ್ಮ ಮನೆ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಇದ್ದಿದ್ದರಿಂದ ಒಂದು ರೀತಿ ಜನನಿಬಿಡ ಪ್ರದೇಶವೇ ಆಗಿತ್ತು, ನಮ್ಮ ಬೀದಿಯಲ್ಲಿ ಬಂಗಾರಪ್ಪನವರ ಮಿಲ್ಟ್ರಿ ಹೋಟೆಲಿತ್ತು. ಅದಕ್ಕೂ ಮೊದಲು ಬಾರ್ ಇತ್ತು. ಹೇಮಾವತಿ ಅಣೆಕಟ್ಟೆ ಕೆಲಸ ಪ್ರಾರಂಭವಾಗಿ ತಮಿಳುನಾಡಿನಿಂದ ಬಾಲಾಜಿ ಕಂಪನಿಯೊAದಿಗೆ ಕಾರ್ಮಿಕರು ಬಂದು ನಮ್ಮ ಮನೆಯ ಎಡಭಾಗ ನಿವೇಶನಗಳಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದರು.  ನಮ್ಮ ಸೋಮಶೇಖರ್ ಚಿಕ್ಕಪ್ಪ ಕಟ್ಟಿಸಿದ ಮನೆಯನ್ನೇ ಹೋಟೆಲ್ ಆಗಿ ಪರಿವರ್ತಿಸಿ ಹೇಮಾವತಿ ಹೋಟೆಲ್ ಎಂದು ಹೆಸರಿಟ್ಟಿದ್ದರು. ನಮ್ಮೂರಿಗೆ ಅದೇ ಮೊದಲ ದೊಡ್ಡ ಹೋಟೆಲ್! ಅಲ್ಲಿ ಸಣ್ಣಪ್ಪ ಎಂಬುವರು ದೋಸೆ ಹಾಕುತ್ತಿದ್ದರು. ನಾನು  ದಿನಾ ಸಂಜೆ ಶಾಲೆಯಿಂದ ಬಂದು ಒಂದು ಖಾಲಿ ಇಲ್ಲವೇ ಮಸಾಲೆ ದೋಸೆ ಮೆಯ್ಯುತ್ತಿದ್ದೆನು.  ನಮ್ಮಜ್ಜ್ಜ ಅಪ್ಪಯ್ಯಶೆಟ್ಟರಿಗೆ  ಆರು ಗಂಡುಮಕ್ಕಳು. ೪ನೇಯವರು ನಮ್ಮ ತಂದೆ ಒಂದನೇ ಕ್ಲಾಸ್ಗೂ ಹೋಗದ ನತದೃಷ್ವರು.  ೨ನೇಯವರು ರಾಮ ದೊಡ್ಡಪ್ಪ ಪ್ರೈಮರಿ ಶಾಲೆಗೆ ಗುಡ್ ಬೈ ಹೇಳಿದವರು. ಅವರು ಹೋಟೆಲ್‌ಗೆ ಹೊಂದಿಕೊಂಡಂತೆ ಇದ್ದ ಅಂಗಡಿ ಮಳಿಗೆಯಲ್ಲಿ ಚಿಲ್ಲರೆ ಅಂಗಡಿ ತೆರೆದರು.  ಮುಂದೆ ಇವರ ೨ನೇ ಮಗ ಶ್ರೀಕಾಂತ್ ಬಿಎ ಮುಗಿಸಿ ಬಿಸಿನೆಸ್ ಮುಂದುವರಿಸಿದರು. ಇವರೇ ನನಗೆ ಹಾಸನದಲ್ಲಿ ಸೈಟ್ ಹರಾಜು ಮಾಡುವ ವಿಷಯ ತಿಳಿಸಿ ನಾನು ಇಲ್ಲಿ ನೆಲೆಸಲು ಕಾರಣರು. ಅಪ್ಪ ನೋಡಿಕೊಳ್ಳುತ್ತಿದ್ದ ಹೋಟೆಲ್  ಲಾಸ್‌ನಲ್ಲಿ ನಡೆದು ಒಂದು ದಿನ ಬಾಗಿಲು ಬಂದ್ ಆಯಿತು. ಅಜ್ಜ ನೀಡಿದ್ದ ಸೈಟಿನಲ್ಲಿ ಮನೆ ಕಟ್ಟಿ ಮುಂಭಾಗ ಅಂಗಡಿ ಮಳಿಗೆ ಮಾಡಿ ಅಪ್ಪ ಚಿಲ್ಲರೆ ಅಂಗಡಿ ಪ್ರಾರಂಭಿಸಿದರು. ಹೇಮಾವತಿ ಹೋಟೆಲ್ ವಾಸದ ಮನೆಯಾಗಿ ಪರಿವರ್ತನೆಗೊಂಡು ಅಲ್ಲಿಗೆ ಮಹಬಲರಾವ್ ಎಂಬುವರ ಕುಟುಂಬ ಬಂದು ನೆಲೆಸಿತು. ಇವರು ಮುಖ್ಯ ರಸ್ತೆಗೆ ಬನವಾಸೆ ಅಣ್ಣಯ್ಯನವರ ಕಟ್ಟಡದಲ್ಲಿ ಒಂದು ಕ್ಯಾಂಟೀನ್ ತೆರೆದರು. ಇವರ ಭಾವಮೈದ ಪದ್ಮನಾಭ ಬಿ.ಎ ಪದವೀದರ. ಇವರು ಮುಂದೆ ಒಂದು ದುರಂತಕ್ಕೆ ಸಿಕ್ಕಿ ಇವರ ಮುಖ ಸುಟ್ಟು ಹೋಗಿದ್ದು ಕಹಿ ನೆನಪು.
ನನ್ನ ಮೊಬೈಲ್ ರಿಂಗಣಿಸಿತು. ನಂಬರ್ ನೋಡಿದೆ ಶಂಕರ್! “ಏನ್ರೀ ಕವಿಗಳೇ, ಗುಬ್ಬಚ್ಚಿ ಮೇಲೆ  ಬ್ರಹ್ಮಾಸ್ತ್ರ ಬಿಡುತ್ತಿದ್ದಿರಾ ಏನು ಕತೆ” ಎಂದರು. ಇಲ್ಲಾ ಮಾರಾಯರೇ ಒಂದು ಕತೆ ಬರೆಯಬೇಕೆಂದು ತಿಣುಕಾಡುತ್ತಿದ್ದೇನೆ ಆಗುತ್ತಿಲ್ಲಾ. ಈ  ಸಿಟಿಗೆ ಬಂದಮೇಲೆ ಕತೆಗೆ ವಿಷಯವೇ ಸಿಗುತ್ತಿಲ್ಲ.  ನಮ್ಮ ಹಳ್ಳಿಯೇ ವಾಸಿ.  ಅದಕ್ಕೆ ನಮ್ಮ ಡಾ. ಗೊರೂರರು ಪ್ರಸಿದ್ದರಾಗಿರಬೇಕು.
“ನೋಡಿ ರಾಜು, ನೀವು ಕಟ್ಟುಕತೆನಾದ್ರೂ ಬರೀರಿ. ಲಲಿತಳನ್ನು ನೆನೆದು ಲಲಿತ ಪ್ರಬಂಧನಾದ್ರೂ ರಚಿಸಿ. ಒಟ್ಟಿನಲ್ಲಿ ಒಬ್ಬ ಕಲಾವಿದ  ಸುಂದರ ಶಿಲ್ಪ ಕೆತ್ತುವುದಿಲ್ಲವೇ. ಹಾಗೇ ಕೆತ್ತಿ. ಈಗ ಗುಬ್ಬಿ ಕಥೆ ಕೇಳಿ. ನಮ್ಮ ಪ್ರೀತಿಯ ಗುಬ್ಬಚ್ಚಿಗಳು ಮನೆಯ ಮುಂದೆ ಇರುವಂಥ ಹುಳು ಹುಪ್ಪಟೆಗಳನ್ನು ತಿನ್ನುತ್ತಿದ್ದವು. ಮನೆಯ ವರಾಂಡದಲ್ಲಿ ಬೇಳೆಕಾಳು, ಅಕ್ಕಿ  ಒಣ ಹಾಕಿದ್ದಾಗ  ಹುಳುಗಳನ್ನು ಆರಿಸಿಕೊಂಡು ತಿನ್ನಲು ಬರುತ್ತಿದ್ದವು. ಆಕಾಶದಲ್ಲಿ ಹದ್ದು ಹಾರಾಡಿ ಭಯವೂ ಆಗುತ್ತಿತ್ತು.  ನಮ್ಮ ಅಜ್ಜ ಅಜ್ಜಿ ಹೇಳುತ್ತಿದ್ದರು ಗುಬ್ಬಿ ಗೂಡಿನ ಮೊಟ್ಟೆ ಹತ್ತಿರ ಹೋಗಬೇಡಿ. ಗೂಡನ್ನು ಮುಟ್ಟಿದ್ದು ಗುಬ್ಬಿಗೆ ತಿಳಿದರೆ ಅವು ಮರಿ ಮಾಡುವುದಿಲ್ಲ.
ಇತ್ತ ನನ್ನ ನೆನಪು ಮರುಕಳಿಸಿತು. ನಮ್ಮ ಶ್ರೀಕಾಂತ್ ಅಂಗಡಿ ಮುಂಭಾಗ ಅವರ ತಾಯಿ ಕಡೆ ಅಜ್ಜ ಕೊಡಿಸಿಕೊಟ್ಟಿದ್ದ ನಿವೇಶನದಲ್ಲಿ ರಾಮದೊಡ್ಡಪ್ಪ ಮನೆ ಕಟ್ಟಿದ್ದರು.  ಈ ಮನೆಯನ್ನು ಶ್ರೀಕಾಂತ್ ಗೋಡೌನ್ ಮಾಡಿ ಹಾಸನದಿಂದ ತಂದ ದಿನಸಿ ಸಾಮಾನುಗಳನ್ನು ಸ್ಟಾಕ್ ಮಾಡುತ್ತಿದ್ದರು.  ಆ ಮನೆಯ ಪಕ್ಕವೇ ಇವರ ನಿವೇಶನದಲ್ಲಿ ವಿದ್ಯುತ್ ಕಂಬ ಇತ್ತು. ಶ್ರೀಕಾಂತ್ ಎಷ್ಟೇ ಅರ್ಜಿ ಕೊಟ್ಟರೂ ಕೆಇಬಿಯವರು ಕ್ಯಾರೆ ಎನ್ನಲಿಲ್ಲ. ಲೈಟ್ ಕಂಬ ತೆಗೆಯಲಿಲ್ಲ. ಈ ಲೈಟ್ ಕಂಬ ಮತ್ತು ವಿದ್ಯುತ್ ಲೈನ್ ಮೇಲೆ ಕಾಗೆಗಳು ಕುಳಿತು ಬೆಳಿಗ್ಗೆ ಕ್ರಾಕ್ರಾ ಎಂದು ಕೂಗಿ ನಮ್ಮನ್ನು ಎಬ್ಬಿಸುತ್ತಿದ್ದವು. ಈ ಪುಣ್ಯಾತ್ಮ ಶ್ರೀಕಾಂತ ಅದ್ಯಾವ ಮಾಯದಲ್ಲಿ ಬೆಳಿಗ್ಗೆ ಎದ್ದು ಬರ‍್ತಾನೋ! ನಾವು ಎದ್ದು ಚರಂಡಿಗೆ ಉಚ್ಚೆ ಉಯ್ಯುತ್ತಾ ನಿಂತು ನೋಡಿದರೆ ಶ್ರೀಕಾಂತ ಇಲಿ ಹೆಗ್ಗಣ ಹೊಡೆದು ರಸ್ತಗೆ ಎಸೆದಿದ್ದನ್ನು ಕಾಗೆಗಳು ಕಾಕಾ ಕೂಗಿ ಕರೆದು ಹೆಕ್ಕಿ ತಿನ್ನುತ್ತಿದ್ದವು. ಹೆಗ್ಗಣದ ಆಸೆಗೆ ಬರುತ್ತಿದ್ದ ಕಾಗೆಗಳು  ವೈರ್‌ಗೆ ರೆಕ್ಕೆ ತಾಕಿ ಆಗಿಂದಾಗ್ಗೆ ಬಿದ್ದು ಸಾಯುತ್ತಿದ್ದವು. ನಾನು ಎಷ್ಟೋ ಸಾರಿ ಕಾಗೆ ಬಿದ್ದು ಒದ್ದಾಡುವಾಗ ಅವುಗಳ ಮೇಲೆ ನೀರು ಹಾಕಿ ಕೆಲವು ಬದುಕಿ ಹಾರಿಹೋಗಿ ಪ್ರಾಣ ಉಳಿಸಿಕೊಂಡಿದ್ದುಂಟು.  ಅಂಗಡಿ ತೆರೆದ ಶ್ರೀಕಾಂತ್‌ರ ಮೊದಲ ಕೆಲಸವೆಂದರೇ ಬೋನಿಗೆ ಬಿದ್ದ ಹೆಗ್ಗಣಗಳನ್ನು ಒಂದು ಸಕ್ಕರೆ ಚೀಲಕ್ಕೆ ಹಾಕಿ ನೆಲಕ್ಕೆ ಬಡಿದು ಸಾಹಿಸಿ ಕಾಗೆಗೆ  ಹಾಕುವುದು. ನಮ್ಮ ರಾಮ ದೊಡ್ಡಪ್ಪ ಸತ್ತಾಗ ಹೇಮಾವತಿ ನದಿ ದಡದುದ್ದಕ್ಕೂ ಸ್ಮಶಾಣದ ಜಾಗವೆಲ್ಲಾ ಒತ್ತುವರಿಯಾಗಿಯೋ ಏನೋ ಹೂಳುವುದಕ್ಕೂ ಜಾಗವಿಲ್ಲ. ಅಂತೂ ಯೋಗನರಸಿಂಹಸ್ವಾಮಿ ದೇವಸ್ಥಾನದ ಆಚೆ ಸಿಕ್ಕ ಜಾಗದಲ್ಲಿ ಮಣ್ಣು ಮಾಡಲಾಗಿತ್ತು. ಆಮೇಲೆ ಮೂರು ದಿನಕ್ಕೆ ಹಾಲುತುಪ್ಪ ಬಿಡಲು  ಉದ್ದಿನವಡೆಯಾಗಿ ಭಕ್ಷ್ಯ ಭೋಜನಗಳನ್ನು ಎಡೆ ಇಟ್ಟರೂ ಏಕೋ ಕಾಗೆಗಳ ಸುಳಿವೇ ಇಲ್ಲ. ಇದನ್ನು ನೋಡಿದ್ದ ನಮ್ಮ ತಂದೆ ನಮ್ಮ ತಾಯಿ ಸತ್ತಾಗ ನಮ್ಮ ಗದ್ದೆಯೊಳಗೆ ಮಣ್ಣು ಮಾಡಿದ್ದರು ಇದರ ಪರಿಣಾಮ ಅವರಿಗೆ ಗದ್ದೆಯಲ್ಲಿ ಉತ್ತರ ಬಿತ್ತನೆ ಮಾಡು
ವಾಗ ನಮ್ಮ ತಾಯಿ ನೆನಪು ಕಾಡಿ  ನಮ್ಮ ಗದ್ದೆಯನ್ನು ವಾರಕ್ಕೆ ಮಾಡುತ್ತಿದ್ದ ರಾಜಣ್ಣರವರಿಗೆ ಮಾರಿಯೇಬಿಟ್ಟರು. ನನಗೆ ರಾತ್ರಿಯೆಲ್ಲಾ ತಾಯಿಯ  ನೆನಪು ಕಾಡಿ ರಾತ್ರಿ ನಿದ್ರೆ ಬರಲಿಲ್ಲ. ಬೆಳಿಗ್ಗೆ ಐದರ ಸಮಯದಲ್ಲಿ ನಿದ್ರಾ ದೇವಿ ಒಂದು ಗಂಟೆ  ಅಪ್ಪಿಕೊಂಡು ಆರಕ್ಕೆ ಆಕಳಿಸಿ ಎದ್ದೆ. ಮೊಬೈಲ್  ಎತ್ತಿಕೊಂಡೇ. ಶಂಕರ್ ಮೆಸೇಜ್ ಕಾಣಿಸಿತು.‘ನಾವು ತುಂಬಾ ಚಿಕ್ಕವರಿದ್ದಾಗ ತೋಟದ ಸೋಗೆ ಮನೆಯಲ್ಲಿ ವಾಸವಾಗಿದ್ದೆವು.  ಅಲ್ಲಿಗೆ  ತುಂಬಾ ಗುಬ್ಬಿಗಳು ಬರುತ್ತಿದ್ದವು. ತೋಟದ ಸೋಗೆ ಮನೆಯಲ್ಲಿ ಜೀವನ ತುಂಬಾ ಚೆನ್ನಾಗಿತ್ತು. ನಾನು ತೋಟದಲ್ಲಿ ಬಗೆ ಬಗೆಯ ಪಕ್ಷಿಗಳನ್ನು ನೋಡುತ್ತಿದ್ದೆ. ಪರಂಗಿ ಸೀಬೆ ಮಾವಿನ ಹಣ್ಣುಗಳನ್ನು ಗಿಳಿ ಮೊದಲಾಗಿ ಹಕ್ಕಿಗಳು ಕರಳು ಬಗೆದಂತೆ ತಿಂದು ಗಿಡದಲ್ಲೇ ಬಿಟ್ಟಿದ್ದ ಹಣ್ಣನ್ನು ಹಕ್ಖಡ್ಗ ಎಂದು ಕರೆಯುತ್ತಿದ್ದರು. ತೋಟದ ಗುಡಿಸಲಲ್ಲಿ ಮಣ್ಣಿನ  ಗಣಪತಿ,  ಚೋಮನನ್ನು ಮಾಡಿ ಹಬ್ಬಗಳನ್ನು ಆಚರಿಸಿ ತುಂಬಾ ಸಂತೋಷ ಪಟ್ಟಿದ್ದೆ. ತೋಟದ ಮನೆಯ ವಾಸ ಅರಮನೆಯ ವಾಸಗಿಂತಲೂ ಹೆಚ್ಚಿನ ಖುಷಿ. ತುಂಬಾ ಸೊಗಸಾಗಿತ್ತು ಆ ಜೀವನ. ಮಕ್ಕಳಾಟದ ಆ ಜೀವನ ತುಂಬಾ ಸೊಗಸು.
————————–


ಗೊರೂರು ಅನಂತರಾಜು, ಹಾಸನ.

Leave a Reply

Back To Top