ಅಂಕಣ ಸಂಗಾತಿ
ನನ್ನಿಷ್ಟದ ಪುಸ್ತಕ….
ಸುಧಾ ಪಾಟೀಲ
ಮಂಕುತಿಮ್ಮನ ಕಗ್ಗ
ಪುಸ್ತಕದ ಹೆಸರು… ಡಿ. ವಿ. ಜಿ. ಅವರ ಮಂಕುತಿಮ್ಮನ ಕಗ್ಗ
ಲೇಖಕರು… ಕವಿತಾಕೃಷ್ಣ
ಪ್ರಕಾಶಕರು….ತನು-ಮನ ಪ್ರಕಾಶನ..ಮೈಸೂರು
ಬೆಲೆ…60 ರೂ
ಪ್ರಥಮ ಮುದ್ರಣ…1994
ಮಂಕುತಿಮ್ಮನ ಕಗ್ಗವನ್ನು ಅವಲೋಕಿಸುವ ಮುನ್ನ ಡಿ. ವಿ. ಜಿ ಅವರ ಬಗೆಗೆ ಒಂದಿಷ್ಟು ಮಾತುಕಥೆ…
ಡಿ. ವಿ. ಜಿ. ಅವರು ಕನ್ನಡ ಸಾರಸ್ವತ ಲೋಕದ ಒಂದು ಧ್ರುವತಾರೆ. ಅವರು ಲೇಖಕರಾಗಿ ನೀಡಿದ ಕೊಡುಗೆ ಅಪೂರ್ವವಾದುದು. ಸನಾತನ ಧರ್ಮದ ಅಂತ:ಸತ್ವವನ್ನು ಆಧುನಿಕ ಜನತೆಗೆ ಅರಿವು ಮಾಡಿಕೊಟ್ಟ ಮಹಾ
ದಾರ್ಶನಿಕರು. ಬದುಕೊಂದು ಜಟಕಾ
ಬಂಡಿ, ವಿಧಿ ಅದರ ಸಾಹೇಬ’ ಎಂದು ಎಚ್ಚರಿಸಿದರು. ‘ಎಲ್ಲರೊಳ
ಗೊಂದಾಗು’ ಎಂದು ಬುದ್ಧಿ ಹೇಳಿದರು
‘ಕೈವಲ್ಯಪಥವನರಸುವವರಿಗೆಮತಿಯೊಂದೇದೀವಿಗೆ ‘ಎಂದುಬಾಳುವ
ದಾರಿತೋರಿದರು. ವೇದೋಪನಿಷತ್ತುಗಳನ್ನು ಓದದಿದ್ದರೂ ಚಿಂತೆಯಿಲ್ಲ
ಕನ್ನಡಿಗರು ಡಿ. ವಿ. ಜಿ. ಅವರ ಕೃತಿಗಳನ್ನು ಓದಿದರೆ ಸಾಕು. ನಡೆ-ನುಡಿಯಲ್ಲಿ ಅವಿನಾಭಾವ ಬಾಂಧವ್ಯ
ಹೊಂದಿದ್ದ ಅಮರ ವ್ಯಕ್ತಿ ಡಿ. ವಿ.ಜಿ
ಡಿ.ವಿ. ಜಿ.ಯವರ ಪೂರ್ಣಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಇವರು 1887ನೆಯ
ಮಾರ್ಚ್ 17 ರಂದು ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಜನಿಸಿದರು.ಇವರ ತಂದೆ ವೆಂಕಟರಮಣಯ್ಯ
ಸಾತ್ವಿಕವ್ಯಕ್ತಿ. ವೃತ್ತಿಯಲ್ಲಿ ಹಳ್ಳಿ ಶಾಲಾ ಗುರುಗಳಾಗಿದ್ದರು. ಇವರ ತಾಯಿ ಅಲುಮೇಲಮ್ಮ ಆದರ್ಶ ಗೃಹಿಣಿ. ಆಚಾರ-ವಿಚಾರಗಳತವರಾಗಿದ್ದರು.ರಾಮಣ್ಣ ಇವರ ಚಿಕ್ಕತಾತ. ಡಿ.ವಿ.ಜಿ
ಇವರ ಹಿತ ಚಿಂತನೆಯಲ್ಲೇ ಬೆಳೆದರು. ಸ್ಥಳೀಯ ಎ. ವಿ. ಶಾಲೆಯಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಸಾಗಿತು. ಮೈಸೂರು-ಕೋಲಾರಸುತ್ತಿಬಂದರು. ಎಸ್.ಎಸ್.ಎಲ್.ಸಿ. ಯಲ್ಲಿ ಪಾಸಾಗಲಿಲ್ಲ. ಕನ್ನಡ-ಗಣಿತ-ವಿಜ್ಞಾನ
ವಿಷಯಗಳಲ್ಲಿ ಸೋತರು. ಆದರೆ ನುಡಿ ಕನ್ನಡದಲ್ಲಿ’ ಬಾಳಗಣಿತದಲ್ಲಿ’
ವಿಚಾರ ವಿಜ್ಞಾನದಲ್ಲಿ ಹಿಮಗಿರಿ ಶಿಖರವನ್ನೇರಿದರು.
ಇವರ ಮಾತೃಭಾಷೆ ತೆಲುಗು. ಬ್ರಾಹ್ಮಣರಾದ ಕಾರಣ ಸಂಸ್ಕೃತದಲ್ಲಿ ಒಲವು. ಆದರೆ ಕನ್ನಡವನ್ನು ಇವರು ಆರಾಧಿಸಿದರು.1905ರಲ್ಲಿ ಸೋಡಾಫ್ಯಾಕ್ಟರಿ ಗುಮಾಸ್ತ ಹುದ್ದೆ ಹಿಡಿದರು. ಅನಂತರ ಭಾಗೀರಥಮ್ಮನವರು ಧರ್ಮಪತ್ನಿಯಾಗಿ ಬಂದರು. ಉದರಪೋಷಣೆಗಾಗಿ
ಬೆಂಗಳೂರಿಗೆ ಬಂದು, ಆರ್ಕಾಟ್ ಶ್ರೀನಿವಾಸಾಚಾರ್
ರಸ್ತೆಯಲ್ಲಿದ್ದ ಜಟಕಾ ಗಾಡಿಗೆ ಬಣ್ಣಬಳಿಯುವ ಕಾರ್ಖಾನೆಯಲ್ಲಿ ನೌಕರಿ ಗಿಟ್ಟಿಸಿದರು. ಮುದ್ರಣಾಲಯಗಳ ಸ್ನೇಹ
ಲಭಿಸಿತು.ಆಗ ಬರವಣಿಗೆ ಮಾಡುವ ಕಾಯಕ ಆರಂಭ
ವಾಯ್ತು. ನಂತರ ಪತ್ರಿಕಾಲಯ ಸೇರಿದರು. ಮದ್ರಾಸಿಗೂ ಹೋದರು. ಮರಳಿ ಬೆಂಗಳೂರಿಗೆ ಬಂದರು. ಬರಹದಿಂದ
ದಿವಾನ್ ವಿಶ್ವೇಶ್ವರಯ್ಯನವರ ಸ್ನೇಹ ಗಳಿಸಿದರು. ಲೇಖನಿ ಹರಿತವಾಗಿತ್ತು.ಆಕರ್ಷಕ ಬರಹದಿಂದ ಜನ
ಪ್ರಿಯರಾದರು. ಪತ್ರಿಕೆಗಳ ಏಳ್ಗೆಗೆ ದುಡಿದರು. ವಿಶ್ವೇಶ್ವರಯ್ಯನವರ ಒಲವಿನಿಂದ 1912 ರಲ್ಲಿ ಬೆಂಗಳೂರು ನಗರಸಭೆಯ ಸದಸ್ಯರಾಗಿ ನಾಮಕರಣಗೊಂಡರು.
ಪತ್ರಿಕೋದ್ಯಮದಲ್ಲಿ ಅನಂತ ಸೇವೆ ಸಂದಾಯ ಮಾಡಿದ ಡಿ.ವಿ.ಜಿ. ಅವರು 1926 ರಲ್ಲಿ ಮೈಸೂರು ಶಾಸನ ಪರಿಷತ್
ಸದಸ್ಯರಾಗಿ, 1927 ರಲ್ಲಿ ಮೈಸೂರು ವಿ.ವಿ. ಸೆನೆಟ್ ಸದಸ್ಯರಾಗಿ ಆಯ್ಕೆಗೊಂಡು ಅದ್ವಿತೀಯ ಸೇವೆ ಸಂದಾಯ ಮಾಡಿದರು. ಪತ್ರಿಕೋದ್ಯೋಗಿಗಳ ಪ್ರಥಮ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು. 1930 ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಆರಂಭಿಸಲು ನಾಂದಿ ಹಾಡಿದರು.
ಡಿ.ವಿ.ಜಿ. ಅವರ ಸಾಹಿತ್ಯ ತುಂಬಾ ವಿಪುಲವಾದುದು.
ಅವರ ಕಾವ್ಯ ಸಂಪತ್ತು ಆನಂದ ತರುವಂತದ್ದು. ಶುಚಿ -ರುಚಿಗೆ ಹೆಸರಾದುದು.ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಅಂತ:ಪುರಗೀತೆ, ವಸಂತ
ಕುಸುಮಾ0ಜಲಿ, ಶೃಂಗಾರ ಮಂಗಳಂ, ಉಮರನ
ಒಸಗೆ, ಶ್ರೀರಾಮ ಪರೀಕ್ಷಣ0, ಶ್ರೀಕೃಷ್ಣ ಪರೀಕ್ಷಣ0, ಮಹಾತ್ಮಾ ಗಾಂಧಿ, ಕೇತಕಿವನ, ನಿವೇದನ ಮುಂತಾದವು
ಗಟ್ಟಿ ಕೃತಿಗಳು. ಮಂಕುತಿಮ್ಮನ ಕಗ್ಗ ಜ್ಞಾನಪೀಠ ಪ್ರಶಸ್ತಿಗೆ
ಮಾತ್ರವಲ್ಲ, ನೋಬಲ್ ಪಾರಿತೋಷಕ ಪಡೆಯಲೂ ಯೋಗ್ಯವಾದ ಕಾವ್ಯ.
ಇನ್ನು ಅವರ ನಿಬಂಧ ಕೃತಿಗಳು ತುಂಬಾ ಮೌಲಿಕ
ವಾದುವು. ಜೀವನ ಸೌಂದರ್ಯ ಮತ್ತು ಸಾಹಿತ್ಯ ಸಂಸ್ಕೃತಿ ಬಾಳಿಗೊಂದು ನಂಬಿಕೆ, ಸಾಹಿತ್ಯ ಮತ್ತು ವಿಜ್ಞಾನ, ಕಾವ್ಯ, ಸ್ವಾರಸ್ಯ, ಸಾಹಿತ್ಯ ಶಕ್ತಿ ಈ ಕೃತಿಗಳು ಓದುಗರಿಗೆ ರಾಜ
ಮಾರ್ಗಗಳಾಗಿವೆ. ವಿಚಾರದೃಷ್ಟಿ ಮೂಡಿಸಿ ಒಳಗಣ್ಣು ತೆರೆಸಲು ಸಮರ್ಥವೆನಿಸಿವೆ.
ಡಿ. ವಿ. ಜಿ. ಅವರ ಧಾರ್ಮಿಕ ಸಂಪತ್ತುತುಂಬಾ ಅಮೂಲ್ಯ
ವಾದುದು. ಅವರ ಆಳವಾದ ಅಧ್ಯಯನ, ಉನ್ನತ ಚಿಂತನೆ, ಸರ್ವೇತ್ಕೃಷ್ಟ ಅಭಿವ್ಯಕ್ತಿಗೆ ಕೈಗನ್ನಡಿಗಳಾಗಿವೆ.
ಪುರುಷಸೂಕ್ತ, ದೇವರು, ಅದ್ವೈತ ತತ್ವ ಮತ್ತು
ಅನುಷ್ಠಾನ, ಋತ-ಸತ್ಯ-ಧರ್ಮ, ಈಶೋಪನಿಷತ್,
ಜೀವನ ಧರ್ಮ ಯೋಗ ಈ ಕೃತಿಗಳು ನಮ್ಮನ್ನು ಕೈ
ಹಿಡಿದು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಕ್ರತುಶಕ್ತಿಗಳಾಗಿವೆ. ಆಧ್ಯಾತ್ಮ ಚಿಂತನೆಯಿಂದಷ್ಟೇ ನಮ್ಮ ಏಳ್ಗೆ. ಈ ಕೃತಿಗಳು ಏಳ್ಗೆಯ ಬುನಾದಿಗಳಾಗಿವೆ.
‘ಕಾವ್ಯೇಷುನಾಟಕ0ರಮ್ಯ0 ‘ಎಂಬುದು ಪ್ರಾಚೀನೋಕ್ತಿ
ನಾಟಕ ಬಹು ಜನಪ್ರಿಯವಾದ ಮಾಧ್ಯಮ. ಡಿ. ವಿ. ಜಿ
ಅಮೂಲ್ಯವಾದ ನಾಟಕ ಸಾಹಿತ್ಯನೀಡಿ ಪರಮೋ
ಪಕಾರವೆಸಗಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ, ಅನುಭವಗಳ ಅಂತ:ದರ್ಶನ ಮಾಡಿಸಿದ್ದಾರೆ. ಗೀತಾಶಾಕುಂತಲ,
ಶ್ರೀವಿದ್ಯಾರಣ್ಯ ವಿಜಯ, ಪ್ರಹಸನತ್ರಯೀ, ಕನಕಾಲುಕಾ, ಮ್ಯಾಕ್ ಬೆತ್, ಪರಶುರಾಮ, ಜಾಕ್ ಕೇಡ್, ತಿಲೋತ್ತಮೆ ಈ ನಾಟಕಗಳೆಲ್ಲವೂ ಒಪ್ಪವಾಗಿ ರಚನೆಗೊಂಡಿವೆ.
ಜ್ಞಾಪಕ ಚಿತ್ರಮಾಲೆ ನಮ್ಮ ನಾಡಿನ ರನ್ನ ಗನ್ನಡಿ, ಸುಜನ
ಜನಪದದರಮ್ಯಚಿತ್ರಣ. ಸಾಹಿತಿ ಸಜ್ಜನ ಸಾರ್ವಜನಿಕರು
ಸಾಹಿತ್ಯೋಪಾಸಕರು. ಮೈಸೂರು ದಿವಾನರು, ವೈದಿಕ ಧರ್ಮ ಸಂಪ್ರದಾಯಸ್ಥರು, ಹಲವು ಸಾರ್ವಜನಿಕರು,
ಹೃದಯ ಸಂಪನ್ನರು, ಕಲೋಪಾಸಕರು ಮುಂತಾದ ಕೃತಿಗಳು ಡಿ.ವಿ.ಜಿ. ಯವರು ನೀಡಿದ ಅಮೂಲ್ಯ ಕಾಣಿಕೆಗಳಾಗಿವೆ.
‘ರಾಜಕೀಯ’ ಕ್ಷೇತ್ರ ನಿತ್ಯ ನಿರ್ಮಲವಾಗಿರಬೇಕೆ0ಬುದು ಅವರ ಹೆಬ್ಬಯಕೆಯಾಗಿತ್ತು. ರಾಜ್ಯಶಾಸ್ತ್ರ, ವೃತ್ತಪತ್ರಿಕೆ
ಸಾರ್ವಜನಿಕದಲ್ಲಿ ಸಾತ್ವಿಕ, ರಾಜ್ಯಾ0ಗ ತತ್ವ, ರಾಜಕೀಯ ಪ್ರಸಂಗಗಳು.. ಈ ಕೃತಿಗಳು ನಮ್ಮ ಆಡಳಿತ -ಜನ ಜೀವನದ ಮೇಲೆ ಬೆಳಕು ಚೆಲ್ಲುವಂತಾಗಿದೆ.
ಡಿ. ವಿ. ಜಿ. ಓರ್ವ ವ್ಯಕ್ತಿಯಾಗಿರಲಿಲ್ಲ. ಭಾರತೀಯ ಋಷಿ ಜೀವನದ ಭವ್ಯ ಬುನಾದಿಯ ಮೇಲೆ ರೂಪುಗೊಂಡ ಬೃಹತ್ ಶಕ್ತಿಯಾಗಿದ್ದರು. ಅವರ ಸಂದೇಶ ಅನುಕರಣೀಯವಾಗಿವೆ. ಸಾರ್ವಕಾಲೀಕ ಸತ್ವ ಮಡುಗಟ್ಟಿ ನಿಂತಿವೆ.
ಕವಿ ಜನತೆಯ ಕಾಮಧೇನು ವಿನಂತಿರಬೇಕು. ರವಿಯು
ಲೋಕರಕ್ಷಕ. ಅವನು ಅರಿಯದ ಮರ್ಮಗಳನ್ನು ಕವಿ ಅರಿತಿರುವನು. ರವಿಯು ಬಾಹ್ಯ ಲೋಕವ ಮಾತ್ರ ಬೆಳಗಿದರೆ , ಕವಿಯು ಜನರ ಹೃದಯಾ0ತರವನ್ನು ಬೆಳಗುವನುಎಂದು ಡಿ.ವಿ. ಜಿ. ಅವರೇ ಹೇಳಿದ್ದಾರೆ. ನಮ್ಮ ಡಿ. ವಿ. ಜಿ
ಜನತೆಯ ಅಂತರಂಗವನ್ನು ಬೆಳಗಿ, ಬಾಳನ್ನು ಸಾರ್ಥಕ
ಪಡಿಸುವ ಕಾಮಧೇನುವಾಗಿದ್ದಾರೆ. ಅವರು 1975 ಅಕ್ಟೋಬರ್ 7 ರಂದು ನಮ್ಮಿಂದ ಅಗಲಿ ದೂರವಾದರು
ಇಂತಹ ಮಹಾನ್ ದಾರ್ಶನಿಕ ಕವಿಯನ್ನು ಪಡೆದ ಕನ್ನಡಿಗರು ನಿಜಕ್ಕೂ ಭಾಗ್ಯಶಾಲಿಗಳು. ಈಗ ಅವರು ನಮ್ಮೊಂದಿಗಿಲ್ಲ. ಆದರೇನು ಅವರ ಅಮೂಲ್ಯ ಕೃತಿರತ್ನಗಳು ಇವೆ. ಅವನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡೋಣ. ಬದುಕನ್ನು ಸಾರ್ಥಕ ಪಡಿಸಿಕೊಳ್ಳೋಣ.
ಬೆಂಗಳೂರಿನಲ್ಲಿ ಡಿ.ವಿ.ಜಿ ಅವರ ಆಶಯದಂತೆ ರೂಪುಗೊಂಡಿರುವ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ‘ ಅದೊಂದು ಅವರ ಜೀವಂತ ಸ್ಮಾರಕವಾಗಿದೆ.
ಅದೊಂದು ವನಸುಮದಂತೆ ಸದ್ದುಗದ್ದಲವಿಲ್ಲದೆ ನಿಷ್ಕಾಮ ಸೇವೆ ಗೈಯ್ಯುತ್ತಿದೆ. ಅದರ ಉನ್ನತಿಗೆ ಸಮಸ್ತ
ಕನ್ನಡಿಗರು ಕಾಣಿಕೆ ಸಲ್ಲಿಸಿ ಕವಿಗುರುವಿನ ಋಣದಿಂದ
ಮುಕ್ತರಾಗೋಣ.
ಒಟ್ಟು 240 ಪುಟಗಳ ಮಂಕುತಿಮ್ಮನ ಕಗ್ಗ.. ತಾತ್ಪರ್ಯ ಸಹಿತ … ಡಿ. ವಿ. ಜಿ.. ಅವರ ಚಿತ್ರದೊಂದಿಗೆ ಸುಂದರ
ವಾಗಿ ಮೂಡಿ ಬಂದಿದೆ. 2003 ರಲ್ಲಿ ದ್ವಿತೀಯ
ಮುದ್ರಣ ಕಂಡಿದೆ.
ಈ ಪುಸ್ತಕದಲ್ಲಿ ಕವಿತಾಕೃಷ್ಣ ಅವರು ಬಹಳ ಅರ್ಥ
ಪೂರ್ಣವಾಗಿ ಎಲ್ಲ ಕಗ್ಗಗಳಿಗೂ ತಾತ್ಪರ್ಯವನ್ನು
ನೀಡಿ ಡಿ. ವಿ. ಜಿ ಅವರ ಮಂಕುತಿಮ್ಮನಕಗ್ಗ ಪುಸ್ತಕಕ್ಕೆ ನ್ಯಾಯ ಒದಗಿಸಿದ್ದಾರೆ. ಇದನ್ನು ಪರಮ ಪೂಜ್ಯ
ಡಿ.ವಿ. ಜಿ ಯವರ ಪ್ರೀತಿಯ ಗೋಖಲೆ ಸಾರ್ವಜನಿಕ
ವಿಚಾರ ಸಂಸ್ಥೆ ಗೆ ಗೌರವ ಪೂರ್ವಕವಾಗಿ ಸಮರ್ಪಿಸಿ
ದ್ದಾರೆ.
ಪ್ರತಿಯೊಂದು ಕಗ್ಗವು ತನ್ನದೇ ಆದ ವಿಶೇಷ ಶೀರ್ಷಿಕೆಯಡಿಯಲ್ಲಿ ಸೊಗಸಾಗಿ ಮೂಡಿ ಬಂದಿವೆ. ಅದರಲ್ಲಿ ಕೆಲವನ್ನು ಇಲ್ಲಿ ಹೆಸರಿಸಲು ಬಯಸುತ್ತೇನೆ
ಅಂಜದೆ ಹೊರಡು
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು |
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ ||
ದೊರಕಿರುವ ಕೆಲಸ ಸಣ್ಣದಾದರೂ ಸರಿ ಮನವಿಟ್ಟು ಮಾಡು. ದೊರತುದನ್ನು ಗೊಣಗದೆ ಪ್ರಸಾದವೆಂದು ಊಟ ಮಾಡು. ಪರಮ ಅರ್ಥವನ್ನು ಬಿಡದೆ ಇಹದ
ಸೇವೆ ಮಾಡು. ವಿಧಿ ಕರೆ ಬಂದರೆ ಅಂಜದೆ ಹೊರಡು.
ಬದುಕು
ಮುಂದೇನೋ, ಮತ್ತೇನೋ, ಇಂದಿಗಾ ಮಾತೇಕೆ ? |
ಸಂದರ್ಭ ಬರಲಿ , ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ , ಬೇರಿಹನು |
ಇಂದಿಗಿಂದಿನ ಬದುಕು – ಮಂಕುತಿಮ್ಮ ||
ಮುಂದೇನೋ ? ಮತ್ತೇನೋ ಎಂಬ ಚಿಂತೆಯು ಏಕೆ?
ಸಮಯ ಬರಲಿ, ಬಂದಾಗ ಚಿಂತಿಸೋಣ . ನಾಳಿನ
ಹೊರೆಯ ಇಳಿಸುವನೊಬ್ಬನುಂಟು. ಇಂದಿಗೆ ಇಂದಿನ
ಬದುಕು ಸಾಕು.
ಪರಮ ಕಲೆ
ಕಲೆಗಳಲಿ ಪರಮ ಕಲೆ ಜೀವನದ ಲಲಿತ ಕಲೆ |
ಕಲಿಸಲದನಳವಲ್ಲ ಬಾಹ್ಯಭೋಧನೆಯಿ0 ||
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀ0
ತಿಳಿವುದೊಳಹದಿಂದ – ಮಂಕುತಿಮ್ಮ ||
ಕಲೆಗಳಲ್ಲಿ ಜೀವನದ ಲಲಿತಕಲೆಯು ಪರಮಕಲೆ
ಎನಿಸುವುದು. ಅದನ್ನು ಬಾಹ್ಯ ಬೋಧನೆಯಿಂದ
ಕಲಿವುದು ಹೆಚ್ಛೇನಲ್ಲ. ಒಲಿದು, ಒಲಿಸಿಕೊಳುವ ಲೌಕಿಕ ನೀತಿಯ ಸೊಗಸಿನ ಹದವನ್ನು ತಿಳಿ.
ಸೇತು ಸಂಸಾರ
ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು |
ಅನವರತ ಪರಿಚರ್ಯೆಯವರೊರೆವ ಪಾಠ ||
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |
ಮನಕೆ ಪುಟ ಸಂಸ್ಕಾರ -ಮಂಕುತಿಮ್ಮ ||
ಮನೆಯನ್ನು ಮಠವೆಂದು ತಿಳಿ. ಬಂಧು ಬಳಗವನ್ನು
ಗುರುವೆಂದು ತಿಳಿ. ಸೇವೆ ಮಾಡುವವರ ಅನುಭವ ಪಾಠ ಸದಾ ತಿಳಿ. ಜಗವನ್ನು ದಾಟಿಸಲು ಸಂಸಾರವೇ
ಸೇತುವೆ. ಮನದ ಕೊಳೆ ತೊಳೆದು ಶುದ್ಧಗೊಳಿಸುವುದು
ನಗುತ ಬಾಳು
ನಗುವು ಸಹಜದ ಧರ್ಮ ; ನಗಿಸುವುದು ಪರಧರ್ಮ |
ನಗುವ ಕೇಳುತ ನಗುವುದತಿಶಯದ ಧರ್ಮ ||
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ |
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ||
ಮಾನವನಿಗೆ ನಗುವು ಸಹಜವಾದ ಧರ್ಮ. ಅನ್ಯರನ್ನು ನಗಿಸುವುದು ಪರಧರ್ಮ. ನಗುವನ್ನು ಕೇಳಿ ನಗುವುದು ಅತಿಶಯ ಧರ್ಮ. ಆದುದರಿಂದ ದೇವರಲ್ಲಿ ನಗುವ
ನಗಿಸುವ , ನಗಿಸಿ ನಗುತ ಬಾಳುವವರನ್ನು ನೀನು
ಬೇಡಿಕೊ.
ಹೀಗೆ ಸರಳವಾದ ಎಲ್ಲರಿಗೂ ಜೀವನದಲ್ಲಿ ಅಳವಡಿಸಿ ಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಕಗ್ಗಗಳು
ಮೂಡಿ ಬಂದಿವೆ. ಶೀರ್ಷಿಕೆ ನೋಡಿಯೇ ಇದು ಯಾವ
ವಿಷಯದ ಬಗೆಗೆ ಇರಬಹುದು ಎನ್ನುವುದು ಗೊತ್ತಾಗುತ್ತದೆ. ಜೀವನದ ಎಲ್ಲ ಆಗು ಹೋಗುಗಳನ್ನು ಇಲ್ಲಿ ನಾವು ಕಾಣಬಹುದು. ಪಾರಮಾರ್ಥಿಕ ವಿಷಯವನ್ನು
ತಿಳಿದುಕೊಳ್ಳಬಹುದು. ಸೃಷ್ಟಿಕ್ರಿಯೆಯ ಬಗೆಗೆ, ಯೋಗದ ಬಗೆಗೆ, ಸಂಸಾರ, ವೃತ್ತಿ , ಧ್ಯಾನ , ಸಾಮರಸ್ಯ, ದೈವಕೃಪೆ, ಮನಸ್ಸಾಕ್ಷಿ, ಯಶಸ್ಸು , ವಿಧಿ, ಜೀವಾಮೃತ, ತಲ್ಲಣ
ಬ್ರಹ್ಮ ಲೀಲೆ, ವಿಶ್ವವೃಕ್ಷ, ಬಾಳ ಕಡಲು, ಕಠಿಣತೆ, ಜಪ -ತಪ , ಕಲೆಗಾರರು , ದರ್ಶಕರು ,ಕಾರ್ಯಧೀರ….
ಒಂದೇ ಎರಡೇ ನೂರಾರು ಕಗ್ಗಗಳು ನಮ್ಮನ್ನು ಕಾಡುತ್ತವೆ… ಉತ್ತರಿಸುತ್ತವೆ… ಪ್ರಶ್ನೆ ಹಾಕುತ್ತವೆ… ಚಿಂತನೆಗೆ ಗುರಿ ಮಾಡುತ್ತವೆ.
ನೀವೂ ಎಲ್ಲರೂ ಒಮ್ಮೆ ಓದಲೇಬೇಕಾದ ಪುಸ್ತಕ.
ಮಂಕುತಿಮ್ಮನ ಕಗ್ಗ…
ಸುಧಾ ಪಾಟೀಲ್
ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )