“ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್‌ ಅವರಿಂದ

shobha

ಬಿಂದುವಿನ ಮನಸ್ಸಿನಲ್ಲಿ ಅಹರ್ನಿಶಿ ಕಾಡುತ್ತಿದ್ದುದು ಒಂದೇ ವಿಷಯ, ಗುಪ್ತಗಾಮಿನಿಯಂತೆ ನನ್ನೊಳಗಡೆ ಇರುವ ವಿಷಯವನ್ನ ಪ್ರಕಾಶನಿಗೆ ಹೇಳುವುದೋ ಬೇಡವೋ? ಹೇಳಿದರೆ ನನ್ನ ಜೀವನಕ್ಕೆ ನಾನೇ ಕಲ್ಲು ಚಪ್ಪಡಿ ಹಾಕಿಕೊಂಡಂತೆ! ಆಗಬಹುದು, ಹೇಳದಿದ್ದರೆ ನಾನೊಬ್ಬಳು ನಯವಂಚಕಿ ಎಂಬ ಹಾಲಾಹಲವನ್ನು ಎದೆಯೊಳಗೆ ಹೊತ್ತು ಜೀವನ ಸಾಗಿಸಬೇಕು, ಎಂಬ ಜಿಜ್ಞಾಸೆಗೆ ಒಳಗಾಗಿ ಯಾವೊಂದು ನಿರ್ಧಾರಕ್ಕೂ ಬರಲಾರದ ಮನಸ್ಥಿತಿಯಲ್ಲಿ ಮೂರು ವರ್ಷದ ಹಿಂದಿನ ನೆನಪಿನಾಳಕ್ಕೆ ಜಾರಿದಳು.
ಆಗತಾನೆ ಪದವಿ ಮುಗಿಸಿದ್ದ ಬಿಂದು ಮನೆಯಲ್ಲಿ ಕೆಲಸಕ್ಕೆ ಹೋಗುವೆನೆಂದಾಗ ಮರುಮಾತಿಲ್ಲದೆ ಒಪ್ಪಬೇಕಾದ ಪರಿಸ್ಥಿತಿ ಅವರಮ್ಮನದು. ಅಷ್ಟೇನೂ ಓದಿಲ್ಲದ ಇನ್ನಿಬ್ಬರು ಹೆಣ್ಣುಮಕ್ಕಳು ಮನೆಯಲ್ಲಿ ಇದ್ದರೂ, ಆರ್ಥಿಕವಾಗಿ ಯಾವುದೇ ಬೆಂಬಲ ನೀಡಲು ಆಸಹಾಯಕರಾಗಿದ್ರು. ಇತ್ತ ಗಂಡು ಮಗ ಕಷ್ಟಪಟ್ಟು ದುಡಿಯುತ್ತಿದ್ದರೂ, ಒಮ್ಮೊಮ್ಮೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ! ಇಂತಹ ಪರಿಸ್ಥಿತಿಯಲ್ಲಿ ತಾನು ಕೆಲಸ ಮಾಡುವುದು ಅನಿವಾರ್ಯವಾಗಿತ್ತು, ಎದುರಿಗಿದ್ದ ಪತ್ರಿಕೆಯ ಜಾಹೀರಾತಿನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಅಕ್ಷರಗಳು ಅವಳನ್ನು ಕೂಗಿ ಕರೆದವು. ಪ್ರತಿಷ್ಠಿತ ಗಾರ್ಮೆಂಟ್ಸ್ ಮಾಲೀಕನಾಗಿದ್ದಂತಹ ಜಾನಿ ನೆಪ ಮಾತ್ರದ ಸಂದರ್ಶನವನ್ನು ಮಾಡಿ ಇವಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ದಿನವೇ “ಬನ್ನಿ ಬಿಂದು ರವರೇ ನಾನು ನಿಮ್ಮ ಮನೆಯ ಬಳಿಗೆ ಹೋಗುವುದು ನಿಮ್ಮನ್ನು ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ”, ಎಂದು ಬೃಹದಾಕಾರದ ಕಾರಿನ ಮುಂದಿನ ಸೀಟಿನಲ್ಲಿ ಅವಳನ್ನು ಕೂರಿಸಿಕೊಂಡು ಮನೆಯ ಸಮೀಪ ಇಳಿಸುವಾಗ ಡೋರ್ ಲಾಕ್ ತೆಗೆಯುವ ನೆಪವೊಡ್ಡಿ, ಅವಳ ಮೈಗೆ ಕೈ ತಾಗಿಸಿದ. ದೂರದಿಂದ ಕಾರಿನಲ್ಲಿ ಇಳಿಯುತ್ತಿದ್ದ ತಂಗಿಯನ್ನು ಗಮನಿಸಿದ ಅವಳ ಅಣ್ಣ ರಾಜು “ನೋಡು ಇನ್ಮೇಲೆ ಅವರ ಜೊತೆ ಕಾರಿನಲ್ಲಿ ಬರಬೇಡ ನೋಡಿದವರು ತಪ್ಪು ತಿಳಿಯುತ್ತಾರೆ”ಎಂದು ತಿಳಿ ಹೇಳಿದ. ಸ್ಪುರದ್ರೂಪಿಯಾದ ಬಿಂದು ತನ್ನ ಮಾಧುರಿ ಹೇರ್ ಕಟ್ಟನ್ನು ಹಿಂದಕ್ಕೆ ತಳ್ಳುತ್ತಾ ಸೈಕಲ್ನಲ್ಲಿ ಆಫೀಸ್ಗೆ ತೆರಳುವಾಗ ರಸ್ತೆಯ ಹುಡುಗರ ಕಣ್ಣು ಅವಳ ಮೇಲೆ ಸರಿದಾಡುತ್ತಿತ್ತು. “ಬಾಸ್ ಸೈಕಲ್ ತುಳಿದುಕೊಂಡು ಬರುವಷ್ಟರಲ್ಲಿ ಸಮಯ ಆಗಿದ್ದೆ ತಿಳಿಯಲಿಲ್ಲ ಸಾರಿ” ಎನ್ನುತ್ತಾ ಒಳಬಂದ ಬಿಂದುವಿನ ಮುಖದ ಮೇಲಿನ ಮುತ್ತಿನಂತ ಬೆವರ ಹನಿಗಳನ್ನು ಗಮನಿಸುತ್ತಾ ,”ಪರವಾಗಿಲ್ಲ ಬಾ ಬಿಂದು ನೆನ್ನೆ ಗಾರ್ಮೆಂಟ್ಸ್ ನಿಂದ ಹೊರ ಹೋಗಿರುವ ಸ್ಟಾಕ್ ಅನ್ನು ಚೆಕ್ ಮಾಡು” ಎಂದು ಹೇಳಿ ಗೋಡೌನ್ ಒಳಗೆ ಕೆಲಸ ಮಾಡುತ್ತಿದ್ದ ಹೆಂಗಳೆಯರತ್ತ ತೆರಳಿದ ಬಾಸ್ ಜಾನಿ. ಬಿಂದು ತನ್ನ ಕೆಲಸ ಮುಗಿಸಿ ಬಾಸ್ ಬಳಿ ಬಂದಾಗ ,ಅಲ್ಲಿದ್ದ ಹೆಂಗಳೆಯರೆಲ್ಲ ಕೆಲಸ ಮುಗಿಸಿ ತಮ್ಮ ಮನೆಗೆ ತೆರಳಿದ್ದರು. ಗೋಡೌನ್ನಲ್ಲಿ ಒಬ್ಬನೇ ಇದ್ದ ಬಾಸ್ ಬಳಿಗೆ ಹೋಗಲು ತುಸು ಮುಜುಗರವಾದರೂ, ಅನಿವಾರ್ಯವಾಗಿತ್ತವಳಿಗೆ. ಲೆಕ್ಕವನ್ನು ನೋಡುವ ನೆಪವೊಡ್ಡಿ ಅವಳ ಮೈಗೆ ಮೈ ತಾಗಿಸಿ ನಿಂತ ಬಾಸ್ ನ ಬಿಸಿ ಉಸಿರು ಅವಳ ಕಿವಿಯ ಮೂಲಕ ಹಾದು ಹೋಗಿ ಪುಳಕಿತಳಾದಳು. ರೋಮಾಂಚನಳಾದವಳನ್ನು ಮೆಲ್ಲನೆ ತನ್ನ ಬಿಸಿ ಅಪ್ಪುಗೆಯಲ್ಲಿ ಬಾಚಿಕೊಂಡು ತನ್ನ ಕಬಂದ ಬಾಹುಗಳಲ್ಲಿ ಬಂಧಿಸಿ, ದೂರ ಸರಿಯ ಹೋದವಳಿಗೆ ನಿನಗಿಷ್ಟವಿಲ್ಲವೆಂದರೆ ನಾನು ಬಲವಂತ ಮಾಡುವುದಿಲ್ಲ, ಎಂದು ದೂರ ಸರಿದ. ಕಾಲ ಸರಿಯುತ್ತಿತ್ತು ಕೆಲಸ ಓಡುತ್ತಿತ್ತು ,ಜಾನಿಯ ಹಸಿದ ಕಂಗಳು ಆಗಾಗ ಅವಳನ್ನು ಹಿಂಬಾಲಿಸುತ್ತಲಿದ್ದುದು ಅವಳ ಗಮನಕ್ಕೆ ಬಂದಿತಾದರೂ, ಅವಳಿಗೆ ಆ ಕೆಲಸ ಅನಿವಾರ್ಯವಾಗಿದ್ದರಿಂದ ಸಹಿಸಿಕೊಳ್ಳಲೇ ಬೇಕಿತ್ತು. ತಿಂಗಳ ಸಂಬಳವೆಂದು ಕೈ ತುಂಬಾ ದುಡ್ಡನಿತ್ತಾಗ, ಪ್ರಥಮ ಬಾರಿಗೆ ಅಷ್ಟೊಂದು ಹಣವನ್ನು ನೋಡಿದ ಅವಳಿಗೆ ತುಂಬಾ ಸಂತಸವಾಗಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡ ಜಾನಿ ಅವಳನ್ನು ನವಿರಾಗಿ ಸ್ಪರ್ಶಿಸುತ್ತಾ “ನೋಡು ಬಿಂದು ಹೊಟ್ಟೆಗೆ ಹಸಿವಾದಾಗ ಊಟ ಮಾಡುತ್ತೇವೆ. ಹಾಗೇ ದೇಹಕ್ಕೆ ಹಸಿವಾದಾಗ ಅದಕ್ಕೆ ಬೇಕಾದನ್ನು ಕೊಡವುದು ನಮ್ಮ ಧರ್ಮ”ಇದು ಖಂಡಿತವಾಗಿಯೂ ತಪ್ಪಲ್ಲ ಎಂದು ಅವಳ ಮನವೊಲಿಸಿದ. ಪ್ರಥಮ ಬಾರಿಗೆ ಗಂಡಿನ ಸ್ಪರ್ಶದ ಅನುಭೂತಿಗೆ ಒಳಗಾದ ಬಿಂದು ಮುಂದೆ ಏನಾಗುತ್ತಿದೆ ಎಂಬ ಅರಿವಿಲ್ಲದೆ ,ತನ್ನನ್ನು ತಾನು ಅರ್ಪಿಸಿಕೊಂಡು ಬಿಟ್ಟಿದ್ದಳು!!
ಬಾಹ್ಯ ಪ್ರಪಂಚದ ಅರಿವಿಲ್ಲದೆ ಕಳೆದ ಆ ಕ್ಷಣಗಳಿಂದ ಮರಳಿದ ಬಿಂದುವಿಗೆ ತನ್ನ ಮೇಲೆಯೇ ಜಿಗುಪ್ಸೆಯಾಗುವಷ್ಟು ಅಸಹ್ಯವಾಗಿತ್ತು. ಮನೆತನದ ಮಾನ ಮರ್ಯಾದೆಗಳನ್ನು ಬೀದಿಗೆ ತೂರಿದ ತಾನೂ ಒಂದು ಹೆಣ್ಣೇ!!? ಹೀಗೇಕೆ, ಕ್ಷಣಿಕ ಸುಖಕ್ಕೆ ಬಲಿಯಾಗಿ ತನ್ನತನವನ್ನೇ ಬಿಟ್ಟುಬಿಟ್ಟೆ, ಸ್ನೇಹಿತೆಯರೆಲ್ಲ ವೈವಾಹಿಕ ಜೀವನ ನಡೆಸುತ್ತಿರುವರೆಂಬ ಮತ್ಸರವೋ, ಇಬ್ಬರು ಅಕ್ಕಂದಿರ ಸಲುವಾಗಿ ನನಗೆ ಆ ಸುಖವು ಮರೀಚಿಕೆಯಾಗಿದೆ ಎಂಬ ಹತಾಶ ಭಾವನೆಯೇ ಇಂದಿನ ಘಟನೆಗೆ ಕಾರಣವಾಯಿತೇ ? ಅಥವಾ ಜಾನಿಯ ಮೋಡಿಯ ಮಾತುಗಳಿಗೆ ಬಲಿಯಾಗಿಬಿಟ್ಟೆನೆ? ಎಂದು ಬಹು ದುಃಖದಿಂದ ಪರಿತಪಿಸುತ್ತಾ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಮನೆಯನ್ನು ಸೇರಿ ಮುಸುಕು ಹೊದ್ದು, ಮೌನವಾಗಿ ಇಡೀ ರಾತ್ರಿ ಕಣ್ಣೀರು ಹರಿಸಿ ಮುಂಜಾವಿನಲಿ ನಿದ್ರಾ ದೇವಿಗೆ ಶರಣಾಗಿದ್ದಳು. “ಏನಮ್ಮ ಆಫೀಸಿಗೆ ಹೋಗಲ್ವಾ ಗಂಟೆ 9:00 ಆಯ್ತು “ಎಂದು ಎಬ್ಬಿಸಲು ಬಂದ ಬಿಂದುವಿನ ತಾಯಿ ಮುಸುಕನ್ನು ತೆಗೆದಾಗ, ಕೆಂಡಾಮಂಡಲ ಜ್ವರದಿಂದ ಬೇಯುತ್ತಿದ್ದ ಬಿಂದು ಏನೊಂದು ಮಾತನಾಡದೆ ಮೌನವಾಗಿ ಮಲಗಿದ್ದಳು. ಜ್ವರ ಹೆಚ್ಚಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಮಾತ್ರೆಗಳನ್ನು ಕೊಡಿಸಿ ಮನೆಗೆ ಕರೆತಂದರು. ವಾರ ಕಳೆದರೂ ಇನ್ನೂ ಮಂಕಾಗಿದ್ದ ಬಿಂದು ಕೆಲಸಕ್ಕೆ ಹೋಗುವ ಮನಸ್ಸಿಲ್ಲವೆಂದು ಅಮ್ಮನಿಗೆ ಸ್ಪಷ್ಟವಾಗಿ ತಿಳಿಸಿದಳು. ಆದರೆ ಮನೆಯ ಬಡತನ ಅವಳನ್ನು ಕೈಕಟ್ಟಿ ಕೂರುವಂತೆ ಮಾಡಲಿಲ್ಲ. ತಾಯಿಯ ಜೊತೆಗೂಡಿ ಮಸಾಲೆ ಪುಡಿ ಉಪ್ಪಿನಕಾಯಿಗಳನ್ನು ತಯಾರಿಸಿ ಅಣ್ಣನ ಸಹಾಯದಿಂದ ಮಾರಾಟ ಮಾಡಿಸಿ, ಮನೆಗೆ ಆರ್ಥಿಕವಾಗಿ ನೆರವಾಗ ಹತ್ತಿದಳು. ಅದೃಷ್ಟವಶಾತ್ ಕೆಲವೇ ದಿನಗಳಲ್ಲಿ ಇವರ ಮಸಾಲಾ ಪದಾರ್ಥಗಳ ರುಚಿಗೆ ತುಂಬಾ ಬೇಡಿಕೆಯಾಯಿತು. ಹಗಲಿಡೀ ದುಡಿಮೆಯಲ್ಲಿ ತಲ್ಲೀನಳಾಗುತ್ತಿದ್ದ ಬಿಂದು ರಾತ್ರಿಯಾಗುತ್ತಿದ್ದಂತೆ, ನಮ್ಮ ಮನೆಯವರಿಗೆ ,ಕೊನೆಗೆ ನನಗೆ ನಾನೇ ಮೋಸ ಮಾಡಿಕೊಂಡುಬಿಟ್ಟೆ !!ಎಂಬ ನೋವಿನೊಂದಿಗೆ ನಿದ್ರೆಯ ಮೊರೆ ಹೋಗುತ್ತಿದ್ದಳು.ತನ್ನ ಪಾಪದಕೆಲಸದ ಪ್ರಾಯಶ್ಚಿತ್ತವೇನೋ ಎಂಬಂತೆ ತನ್ನನ್ನು ಬಹುವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡ ಪ್ರತಿಫಲ ಕೇವಲ ಒಂದು ವರ್ಷದಲ್ಲಿ ಇವರ ನಿರೀಕ್ಷೆಗೂ ಮೀರಿ ಹಣ ಸಂಪಾದನೆಯಾಯಿತು. ಆರ್ಥಿಕವಾಗಿ ಸಬಲರಾದ ಇವರು ಅಕ್ಕಂದಿರ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದರು. ಈಗ ಅವರ ವ್ಯಾಪಾರ ರೊಟ್ಟಿ, ಶೇಂಗಾ ಚಟ್ನಿ,ಹೋಳಿಗೆ, ಉಪ್ಪಿನಕಾಯಿ ಮುಂತಾದ ಅಡಿಗೆ ಪದಾರ್ಥಗಳಿಗೂ ವಿಸ್ತರಿಸಿ ಮೂರು ವರ್ಷಗಳಲ್ಲಿ ಸ್ವಂತ ಮನೆ, ಓಡಾಡಲು ಕಾರು ಎಲ್ಲವೂ ದಕ್ಕಿತಾದರೂ, ಟೊಂಕ ಕಟ್ಟಿ ದುಡಿದು ಮನೆಯ ಏಳಿಗೆಗೆ ಕಾರಣವಾದರೂ, ಬಿಂದುವಿಗೆ ತನ್ನ ಜೀವನದಲ್ಲಿ ನಡೆದ ಕಹಿ ಘಟನೆ ಆಗಾಗ ಕಾಡಿ,ಪಶ್ಚಾತಾಪದ ಬೇಗುದಿ ಯಲ್ಲಿ ಬೇಯುತ್ತಿದ್ದಳು. ಮನೆಯಲ್ಲಿ ಬಿಂದುವಿನ ಮದುವೆಯ ಸಂಭ್ರಮ ಮಾತುಕತೆ ಪ್ರಾರಂಭವಾಗಿತ್ತು .ವೃತ್ತಿಯಲ್ಲಿ ಪ್ರತಿಷ್ಠಿತ ಉದ್ಯಮಿಯು ,ಪ್ರವೃತ್ತಿಯಲ್ಲಿ ಶ್ರೇಷ್ಠ ಸಾಹಿತಿಯೂ ಆದಂತಹ ಪ್ರಕಾಶ ಇವಳನ್ನು ನೋಡಿದ ಮೊದಲ ದಿನವೇ ತನ್ನ ಒಪ್ಪಿಗೆಯನ್ನು ಸೂಚಿಸಿ ಅವಳ ಜೊತೆ ಪ್ರತ್ಯೇಕವಾಗಿ ಮಾತನಾಡಲು ಬಯಸಿದ್ದ. ಬಿಂದುವಿಗೆ ಈಗಂತೂ ದಿಕ್ಕೇ ತೋಚದ ಪರಿಸ್ಥಿತಿ !!ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಪ್ರಕಾಶನಿಗೆ ತಿಳಿಸಬೇಕೋ ?ಇಲ್ಲಾ ಮುಚ್ಚಿಡಬೇಕೋ ?ಎಂದು ಅಹರ್ನಿಶಿ ಚಡಪಡಿಸುತ್ತ ಜಿಜ್ಞಾಸೆಗೆ ಒಳಗಾಗಿದ್ದಳು.

ಇದುವರೆಗೂ ತನ್ನ ಆಪ್ತರಲ್ಲಿ ಯಾರಲ್ಲಿಯೂ ಹೇಳಿಕೊಳ್ಳಲಾರದಂತ, ಯಾವ ನಿರ್ಧಾರಕ್ಕೆ ಬರಬೇಕು ಎಂದು ತಿಳಿಯದಂತಹ ಅಸಹಾಯಕ ಪರಿಸ್ಥಿತಿಯಲ್ಲಿ ಯೋಚಿಸುತ್ತಾ ಕುಳಿತವಳಿಗೆ ಕದ್ದಿಂಗಳು ಕಗ್ಗತ್ತಲ ಕಾರ್ಮುಗಿಲ ರಾತ್ರಿಯಲ್ಲಿ ಹುಣ್ಣಿಮೆಯ ಚಂದಿರನೇ ಗೋಚರಿಸಿದಂತೆ ಕೊನೆಗೂ ಒಂದು ಉಪಾಯ ಹೊಳೆದು ನೆಮ್ಮದಿಯಿಂದ ನಿದ್ರಿ ಸಿದಳು. ಕಪ್ಪಗೆ ರೇಷ್ಮೆಯಂತೆ ಮಿಂಚುತ್ತಿರುವ ನೀಳಕೇಶರಾಶಿ ಯನ್ನು ಸಡಿಲವಾಗಿ ಇಳಿಬಿಟ್ಟು ಕಿವಿಗೆ ಪುಟ್ಟದಾದ ಮುತ್ತಿನ ಜುಮ್ಕಿಯನ್ನು ಹಾಕಿಕೊಂಡು ತಿಳಿನೀಲಿ ಬಣ್ಣದ ಮೈಸೂರ್ ಸಿಲ್ಕ್ ಸೀರೆಯನ್ನು ಧರಿಸಿ ಮುಖಕ್ಕೆ ಲಘುವಾಗಿ ಅಲಂಕರಿಸಿಕೊಂಡು ಹೊರಟ ಅವಳ ಸೌಂದರ್ಯ ಸಾಕ್ಷಾತ್ ದೇವತೆಯೇ ಧರೆಗಿಳಿದಂತಿತ್ತು. ಪ್ರಕಾಶ ಒಂದು ಕ್ಷಣ ಅವಳ ಸೌಂದರ್ಯವನ್ನು ನೋಡಿ ಅವಕ್ಕಾಗಿ ನಿಂತುಬಿಟ್ಟ. ನಿಮಗೆ ಅಭ್ಯಂತರವಿಲ್ಲದಿದ್ದರೆ ನನ್ನ ಕಾರನ್ನು ಇಲ್ಲಿಯೇ ಬಿಟ್ಟು ನಿಮ್ಮ ಕಾರಿನಲ್ಲಿ ದೂರದ ಬೆಟ್ಟಕ್ಕೆ ಹೋಗಿ ಬರೋಣವೆ ಎಂದ ಬಿಂದುವಿನ ಮಾತುಗಳಿoದ ಎಚ್ಚೆತ್ತುಕೊಂಡು ಕಾರನ್ನು ಸ್ಟಾರ್ಟ್ ಮಾಡಿದ ಪ್ರಕಾಶ ಸಹಜ ಕುಶಲೋಪರಿಗಳಿಂದ ಮಾತನ್ನು ಪ್ರಾರಂಭಿಸಿ ತನ್ನ ಜೀವನ, ತಾನು ಬೆಳೆದು ಬಂದ ದಾರಿ, ತನ್ನ ಆಸಕ್ತಿ, ಅಭಿರುಚಿ ಇವುಗಳನ್ನೆಲ್ಲ ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ಜೊತೆ ಜೊತೆಗೆ ಅವಳ ಬಗ್ಗೆಯೂ ಪರಿಚಯ ಮಾಡಿಕೊಂಡ. ಅವನ ಜೊತೆ ಮಾತನಾಡಿದ ಕೆಲವೇ ಗಂಟೆಗಳಲ್ಲಿ ಅವನೊಬ್ಬ ಸಭ್ಯ ಹಾಗೂ ಸ್ನೇಹಮಯಿ ಎಂದು ಅರ್ಥ ಮಾಡಿಕೊಂಡಳು. “ಬಿಂದು ನೀನು ನನಗೆ ಸಂಪೂರ್ಣ ಒಪ್ಪಿಗೆಯಾಗಿರುವೆ ನಿನ್ನ ಅಭಿಪ್ರಾಯ ಏನೆಂದು”ಕೇಳಿದಾಗ ಎರಡು ದಿನದ ಕಾಲಾವಕಾಶವನ್ನು ಕೇಳಿದ ಬಿಂದುವಿಗೆ “ಟೇಕ್ ಯುವರ್ ಓನ್ ಟೈಂ ಬಿಂದು ನನ್ನ ಕರೆಗೆ ಓಗೊಟ್ಟು ಬಂದಿದ್ದಕ್ಕೆ ಥ್ಯಾಂಕ್ಯೂ ವೆರಿಮಚ್ ವಿವಾಹ ಎನ್ನುವುದು ಜೀವನಪರ್ಯಂತ ಇರುವಂತಹ ಸಂಬಂಧ ನಿನ್ನ ಅಭಿಪ್ರಾಯಕ್ಕಾಗಿ ನಾನು ನಿರೀಕ್ಷಿಸುತ್ತಿರುತ್ತೇನೆ “ಎಂದು ಸಿಹಿಯೊಂದಿಗೆ ಅವಳನ್ನು ಬಿಳ್ಕೊಟ್ಟನಾದರೂ ಮದುವೆಯಾದರೆ ಇವಳ ಜೊತೆಯೇ ಎಂಬ ತೀರ್ಮಾನಕ್ಕೆ ಬಂದುಬಿಟ್ಟ. ಇತ್ತ ಮನೆಗೆ ಬಂದ ಬಿಂದುವಿಗೆ ತಾಯಿ ಅಣ್ಣ ಅಕ್ಕಂದಿರಿಂದ ಒಂದೇ ಪ್ರಶ್ನೆ ಪ್ರಕಾಶ್ ನಿನಗಿಷ್ಟವಾದನೆ ಮದುವೆ ಯಾವಾಗ ಇಟ್ಟುಕೊಳ್ಳೋಣ ಎಂದು ಅವರ ಬಳಿಯೂ ಎರಡು ದಿನದ ಕಾಲಾವಕಾಶವನ್ನು ಕೇಳಿದ ಬಿಂದು ಮೊದಲೇ ತಾನು ಯೋಚಿಸಿದಂತೆ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ಕಥೆಯ ರೂಪಕ್ಕಿಳಿಸಿ ಇದು ನನ್ನ ಆಪ್ತ ಸ್ನೇಹಿತೆಯ ಕಥೆ ಎಂದೂ ಇದಕ್ಕೆ ಒಂದು ಮುಕ್ತಾಯವನ್ನು ನೀಡಬೇಕೆಂದು ಪ್ರಕಾಶನಲ್ಲಿ ಪ್ರೀತಿಯಿಂದ ಕೇಳಿಕೊಂಡಾಗ ಮರುದಿನವೇ ಆ ಕಥೆಗೆ ಅವನಿಂದ ಉತ್ತರ ಬಂದಿತ್ತು.
” ಗಿಳಿ ಕಚ್ಚಿದ ಹಣ್ಣಿಗೂ ಶೀಲ ಕಳೆದುಕೊಂಡ ಹೆಣ್ಣಿಗೂ ಯಾವುದೇ ವ್ಯತ್ಯಾಸವಿಲ್ಲ ಆದರೆ ವಿಶಾಲವಾದ ಮನಸ್ಸೊಂದಿದ್ದರೆ ಮಾತ್ರ”ಇದನ್ನು ಓದಿದ ಬಿಂದುವಿನ ಮನಸ್ಸು ಆಕಾಶದಲ್ಲಿ ಗರಿಗೆದರೆ ಸ್ವಚ್ಛಂದವಾಗಿ ಹಾರಾಡುತ್ತಿರುವ ಸುಂದರ ಹಕ್ಕಿಯಂತಾಗಿ ಮರಕ್ಷಣವೇ ಈ ವಿವಾಹಕ್ಕೆ ತನ್ನ ಒಪ್ಪಿಗೆಯನ್ನು ಸೂಚಿಸಿದಳು.


2 thoughts on ““ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್‌ ಅವರಿಂದ

  1. ಸರಳ ,ಸುಂದರ ಕಥೆ.ಇಷ್ಟವಾಯಿತು.ಕವಯತ್ರಿಯಾಗಿ ಪರಿಚಿತ ಲೇಖಕಿ ಉತ್ತಮ ಕಥೆಗಾರ್ತಿಯೂ ಆಗಬಲ್ಲರು ಎಂಬುದಕ್ಕೆ ಈ ಕಥೆಯೇ ನಿದರ್ಶನ.ಸಂಗಾತಿಗೂ ಲೇಖಕರಿಗೂ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು ಶುಭವಾಗಲಿ

Leave a Reply

Back To Top