ಮೀನಾಕ್ಷಿ ಸುರೇಶ್…ಎನ್ನ ಮನೆ-ಮನದ ಹೊಂಬೆಳಕು

ಕಾವ್ಯ ಸಂಗಾತಿ

ಎನ್ನ ಮನೆ-ಮನದ ಹೊಂಬೆಳಕು

ಮೀನಾಕ್ಷಿ ಸುರೇಶ್

ರೆಕ್ಕೆ ಬಿಚ್ಚಿ ಹಾರಾಡುವ ಪುಟ್ಟ ಕೋಗಿಲೆ
ಚಿನ್ನದುಂಗುರ ನಿನ್ನ ರೆಕ್ಕೆಗಳಿಗೆ
ಕಣ್ಣುಗಳು ಬಿಳಿಯ ವಜ್ರಗಳಂತೆ
ನನ್ನಾಸೆಯ ಬಾಂದಳದ
ಬೆಳ್ಳಿಚುಕ್ಕಿ ನನ್ನಪ್ಪ ನೀನು

ಆಗಸದಂಚಿನ ಕುಂಚದಲ್ಲಿ
ನಿನ್ನ ಚಿತ್ರ ಬಿಡಿಸುವ ಕೊಂಚ ಆಸೆ ನನ್ನದು
ಬಾನಂಚಿನ ಕೋಲ್ಮಿಂಚಿಗೆ
ಮುತ್ತಿಡುವ ಬೆಳಕು ನೀನು

ಕಪ್ಪು ಆಗಸದಲ್ಲಿ ಬೆಳ್ಳಿತಾರೆ
ಲೆಕ್ಕವಿಲ್ಲ ಕಂದ ನಿನ್ನ
ತುಂಟಾಟದ ಗರಿಗಳಿಗೆ
ನನ್ನ ತವರು ಹಾಲು ಹಾದಿಯಲ್ಲಿ
ಭರವಸೆಯ ಬೆಳಕಿನ ನಕ್ಷತ್ರಧಾರೆ.

ನಿನ್ನ ತೊದಲ್ನುಡಿಯ ಹೂ ಸಂತೆಯಲ್ಲಿ
ಕಳೆದು ಹೋಗಿದ್ದೇನೆ ಕಂದಾ
ಅದೆಷ್ಟೋ ಜಗತ್ತುಗಳಡಗಿವೆ
ನಿನ್ನ ಒಂದು ಮುಗುಳ್ನಗೆಯಲಿ

ಬಂದು ಬಾಚಿ ತಬ್ಬಿದಾಗ
ಮಲ್ಲಿಗೆ ಬಳ್ಳಿ ಅತ್ತಿತ್ತ ಬಾಗಿದಂತೆ
ಕಾಲು ಸವೆಯುವಷ್ಟು ದಾರಿ ನಡೆದರೂ
ದಣಿವಿಲ್ಲ ನನ್ನ ದೇಹಕ್ಕೆ
ಕಾಯುತಿರುವೆ ನಾ ಸಸಿ ವೃಕ್ಷವಾಗಲು
ಏಕತಾನತೆಯ ನಾದ ಮೀಟಿ
ನಿರ್ವಾಣದಲಿ ಹೊಮ್ಮಿಸುವ
ಉಸಿರಾಗಲು

ಅದ್ಯಾವ ಮಹಾಕಾವ್ಯದ
ಮೊದಲ ಪುಟವೋ ನೀನು
ನಿನ್ನ ಚೆಲುವಿಕೆಯ ಉಮೇದಿಯಲ್ಲಿ
ಧುಮ್ಮಿಕ್ಕುವ ನಕ್ಷತ್ರಗಳ ಸಾರವಿದೆ

ನೋವ ಶರಧಿಯಲ್ಲಿ ಚಿಮ್ಮಿದ
ಸಂತಸದ ಅಲೆ ನೀನು
ದಿವ್ಯದಿಗಂತದಾಚೆಗೂ
ನಿನ್ನ ತುಂಟತನದೇ ರಂಗಿನಾಟ
ಕಾಯುತ್ತೀನಿ ಕಂದ ಕೊನೆಯವರೆಗೂ
ನಿನ್ನ ಬಲಿಷ್ಟ ತೋಳುಗಳ ಮೇಲೆ
ಮತ್ತೆ ನಾ ಮಗುವಾಗಲು…


Leave a Reply

Back To Top