ವಿಶೇಷ ಲೇಖನ
ಪ್ರೊ. ಜಿ ಎ. ತಿಗಡಿ. ಸೌದತ್ತಿ
ತೋಂಟದ ಸಿದ್ದಲಿಂಗೇಶ್ವರರ
ವಚನ ವಿಶ್ಲೇಷಣೆ
ಬೂದಿಯಲ್ಲಿ ಹೊರಳುವ ಕತ್ತೆಯಂತೆ,
ಎಲುವ ಕಡಿವ ಶ್ವಾನನಂತೆ,
ಹಾತೆಯ ತಿಂಬ ಹಲ್ಲಿಯಂತೆ,
ಕಿಚ್ಚ ಹಾಯಿವವಳಂತೆ
ಒಚ್ಚಿ ಹೊತ್ತಿನ ಭೋಗಕ್ಕೆ ಮಚ್ಚಿ ಹುಚ್ಚಾದಿರಿಯಲ್ಲ!
ಮೃತ್ಯುಂಜಯನನಪ್ಪದೆ ಮೃತ್ಯುವಿನ ಬಾಯತುತ್ತಾದವರ ಕಂಡು
ನಗುತ್ತಿದ್ದೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ
ಬೂದಿಯಲ್ಲಿ ಹೊರಳಾಡುವ ಕತ್ತೆಯಂತೆ, ಸತ್ತ ಪ್ರಾಣಿಗಳ ಎಲುವನ್ನು ಕಡಿಯುತ್ತಿರುವ ನಾಯಿಯಂತೆ, ಜೊಂಡಿಗವನ್ನು ತಿನ್ನುವ ಹಲ್ಲಿಯಂತೆ, ಬೆಂಕಿಯಿಂದ ಆಕರ್ಷಿತವಾಗಿ ಅದರ ಮೇಲೆರಗುವ ಕೀಟದಂತೆ, ಒಂದು ಹೊತ್ತಿನ, ದಿನದ, ಸುಖ ಸಂತೋಷದ ಭೋಗ ಜೀವನಕ್ಕೆ ಮರುಳಾಗಿ ಮೆಚ್ಚಿ ಹುಚ್ಚರಂತಾಗಿಬಿಟ್ಟಿರಲ್ಲ. ಈ ರೀತಿ ವರ್ತಿಸಿ ಬದುಕುತ್ತಿರುವ ಅಜ್ಞಾನಿಗಳು ಮೃತ್ಯುವನ್ನು ಜಯಿಸಿದ ಪರಾತ್ಪರ ಶಿವನನ್ನು ನಂಬಿ ಅಪ್ಪಿಕೊಳ್ಳದೆ, ಸಾವಿನ ಬಾಯಿಗೆ ಬಲಿಯಾಗಿ ಹೋಗುತ್ತಿದ್ದಾರೆ. ಇಂಥವರನ್ನು ಕಂಡ ನಮ್ಮ ಮಹಾಲಿಂಗ ಗುರು ಶಿವಸಿದ್ದೇಶ್ವರರು ನಗುತ್ತಿದ್ದಾರೆಂದು ತೋoಟದ ಸಿದ್ದಲಿಂಗೇಶ್ವರರು ಹೇಳುತ್ತಾರೆ.
ಕ್ಷಣಿಕವಾದ ದೈಹಿಕ ಸುಖಕ್ಕಾಗಿ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುವವರನ್ನು ಕುರಿತು ಸಿದ್ದಲಿಂಗೇಶ್ವರರು ಮರುಕ ಪಡುತ್ತಾರೆ. ಇದರ ಸ್ಪಷ್ಟತೆಗಾಗಿ ಅವರು ನಾಲ್ಕು ಜ್ವಲಂತ ನಿದರ್ಶನಗಳನ್ನು ಕೊಡುತ್ತಾರೆ. ತನ್ನ ಮೈ ಕೆರೆತ, ಕಡಿತವನ್ನು ನಿವಾರಿಸಿಕೊಳ್ಳಲು ಕತ್ತೆ ಬೂದಿಯಲ್ಲಿ ಹೊರಳಾಡುತ್ತದೆ. ಆ ಕ್ಷಣಕ್ಕೆ ತನ್ನ ನೋವು ನಿವಾರಣೆಯಾದರೆ ಸಾಕು, ಹೀಗಾಗಿ ಅದಕ್ಕೆ ಬೂದಿಯಾದರೇನು ? ಮಣ್ಣಾದರೇನು ? ಮರಳಾದರೇನು ? ಕ್ಷಣಿಕ ದೈಹಿಕ ತೊಂದರೆ ನಿವಾರಣೆಯೊಂದೇ ಅದರ ಗುರಿ.
ಅದೇ ರೀತಿ ಹಸಿದ ನಾಯಿಗೆ ಎಲುವಿನ ತುಂಡೊಂದು ಸಿಕ್ಕರೆ ಸಾಕು ಜಿಗಿದು ಹೋಗಿ ಬಾಯಲ್ಲಿಟ್ಟುಕೊಂಡು ಕಡಿಯಲು ಆರಂಭಿಸುತ್ತದೆ. ಹಾಗೆ ಜಗಿಯುತ್ತಿರುವಾಗ ಅದಕ್ಕೆ ಎಲುಬಿನಿಂದ ರಕ್ತವಸುರುತ್ತಿರುವಂತೆ ಭಾಸವಾಗಿ ಸಂತಸಪಡುತ್ತಾ ಜಗಿಯುವ ಕ್ರಿಯೆಯನ್ನು ನಿರಂತರವಾಗಿರಿಸುತ್ತದೆ. ಪಾಪ ಆ ನಾಯಿಗೆ ಗೊತ್ತಿಲ್ಲ, ತಾನು ಕಡಿಯುತ್ತಿರುವ ಎಲುಬಿನ ಚೂರೊಂದು ತನ್ನ ಬಾಯಲ್ಲಿನ ದವಡೆಗೆ ಚುಚ್ಚಿ ತನ್ನದೇ ರಕ್ತವಸರುತ್ತಿದೆ ಎಂಬುದು. ಹೀಗೆ ತನ್ನ ರಕ್ತವನ್ನೇ ಎಲುವಿನಿಂದೊಸರುವ ರಕ್ತವೆಂದು ತಿಳಿದು ನಾಲಿಗೆ ಚಪ್ಪರಿಸುತ್ತ ಸುಖವನ್ನು ಅನುಭವಿಸುತ್ತದೆ. ಇದನ್ನೇ ಮೆರೆಮಿಂಡಯ್ಯನೆಂಬ ಶರಣ " ಕುಕ್ಕರ ಅಸ್ತಿಯ ಕಡಿದು ತನ್ನಯ ಶೋಣಿತಕ್ಕೆ ಚಪ್ಪರಿಸುವಂತೆ " ಎಂದಿದ್ದಾನೆ.
ಇನ್ನು ಹಲ್ಲಿಗೆ ತಕ್ಷಣದ ಹಸಿವನ್ನು ಹಿಂಗಿಸಿಕೊಳ್ಳಲು ಯಾವ ಕೀಟವಾದರೂ ಅಷ್ಟೇ ಚಂಗನೇ ಹಾರಿ ಹಿಡಿಯುತ್ತದೆ. ಹಾಗೆ ಹಾರಿ ಜೊಂಡಿಗವನ್ನು ಹಿಡಿದ ಹಲ್ಲಿಗೆ ಅದನ್ನು ನುಂಗಲಾರದೆ, ನುಂಗಿದರೂ ಅರಗಿಸಿಕೊಳ್ಳಲಾರದೆ, ಒದ್ದಾಡತೊಡಗುತ್ತದೆ ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳುತ್ತದೆ. ರಾತ್ರಿಯ ಹೊತ್ತಿನ ಕತ್ತಲೆಯಲ್ಲಿ ಕೀಟವೊಂದು ಬೆಂಕಿಯನ್ನು ಕಂಡು ಆಹಾರ ಕಾಣಬಹುದೆಂದು ಅದರತ್ತ ಆಕರ್ಷಿತಗೊಳ್ಳುತ್ತದೆ. ಅದರ ಸುಂದರ ಮೋಹಕತೆಗೆ ಮರುಳಾಗಿ ಎರಗಿ ಸಾವನ್ನಪುತ್ತದೆ. ಹೀಗೆ ಈ ಎಲ್ಲಾ ನಿದರ್ಶನಗಳಲ್ಲಿ ಕತ್ತೆ ನಾಯಿ ಹಲ್ಲಿ ಕೀಟಗಳು ತತ್ಕಾಲದ ತಮ್ಮ ದೈಹಿಕ ತೃಷೆಯನ್ನು ತೀರಿಸಿಕೊಳ್ಳಲು ಹೋಗಿ ಕೊನೆಯಲ್ಲಿ ಸಾವಿನತ್ತ ಸಾಗುತ್ತವೆ.
ಮನುಷ್ಯ ಜೀವಿ ತನ್ನ ಬುದ್ಧಿಶಕ್ತಿ ಹಾಗೂ ವಿವೇಚನಾ ಶಕ್ತಿಗಳಿಂದ ಪ್ರಾಣಿಗಳಿಗಿಂತ ಭಿನ್ನನಾಗಿ ಶ್ರೇಷ್ಠನೆನಿಸಿದವನು. ಹೀಗಿದ್ದರೂ ಲೌಕಿಕದ ಕ್ಷಣಿಕ ಸುಖದಾಸೆಗಳಿಗೆ ಆಕರ್ಷಿತನಾಗಿ ಭೋಗ ಜೀವನಕ್ಕೆಳಸುತ್ತಿದ್ದಾನೆ. ಈ ಸುಖ ಒಂದು ಕ್ಷಣದ್ದು, ಒಂದು ಗಂಟೆಯದು, ಒಪ್ಪತ್ತಿನದು ಹೆಚ್ಚೆಂದರೆ ಒಂದು ದಿನದ್ದಾಗಿರಬಹುದು. ಆದರೆ, ಸುಖವೆಂದರೇನು ? ಶಾಶ್ವತವಾದ ನಿಜ ಸುಖ ಯಾವುದು ? ಎಂಬುದನ್ನು ಅರಿಯದೆ ಅಜ್ಞಾನಿಯಾಗಿ ಇಂದ್ರಿಯಗಳ ವಶವರ್ತಿಯಾಗಿ ಅರಿಷಡ್ವರ್ಗಾದಿ ವಿಷಯಗಳತ್ತ ಮನ ಹರಿಯಬಿಡುತ್ತಾ, ದೈಹಿಕ ಸುಖದ ವಾಂಛೆ ತೀರಿಸಿಕೊಳ್ಳುವ ದಂದುಗದಲ್ಲಿ ಸಿಲುಕುತ್ತಾನೆ. ಗುರು ತೋರಿದ ಸನ್ಮಾರ್ಗದಲ್ಲಿ ನಡೆದು ಅರಿವಿನ ಪರಮ ಚೈತನ್ಯ ಸ್ವರೂಪಿ ಮೃತ್ಯುಂಜಯನಿಗೆ ಶರಣು ಹೋಗಿ ಸಮರ್ಪಿಸಿಕೊಳ್ಳದೆ ಸಾವಿನ ಬಾಯಿಗೆ ತುತ್ತಾಗುತ್ತಿದ್ದಾನೆ ಎಂದು ತೋಂಟದ ಸಿದ್ದಲಿಂಗ ಶಿವಯೋಗಿಗಳು ಮರುಗುತ್ತಾರೆ.
ಪ್ರೊ. ಜಿ ಎ. ತಿಗಡಿ. ಸೌದತ್ತಿ