ವಿಶೇಷಲೇಖನ
ಸುಲೋಚನಾ ಮಾಲಿಪಾಟೀಲ
“ನನ್ನ ಅಪ್ಪ”
ಅಪ್ಪನೆಂದರೆ ನನ್ನ ಪಾಲಿಗೆ ಪರಮಾತ್ಮ. ನಮ್ಮ ಆತ್ಮದೊಂದಿಗೆ ಸಂಧಿಸಿ ಪರಮಾನಂದ ನೀಡುವ ಪ್ರತ್ಯಕ್ಷ ಪರಂಧಾಮ. ನನ್ನ ಅಂತರಾತ್ಮದಲಿ ಅಡಗಿದ ಗುರು, ಪಾಲಕ, ಪೋಷಕ, ಮಾರ್ಗದರ್ಶಕ, ನನ್ನ ಜೀವನದ ಬಂಡಿಯ ಚಾಲಕರು ಅವರಾಗಿದ್ದಾರೆ. ಅದರಲ್ಲಿ ಮಗಳೆಂದರೆ ತಂದೆಯ ಪಾಲಿಗೆ ಎರಡನೆ ಅಮ್ಮ. ಮಗಳ ಮುದ್ದು ಮಾತಿನಲ್ಲೆ ತಮ್ಮ ಎಲ್ಲಾ ದಣಿವು, ನೋವು, ಮರೆತು ಸಂತಸದಿ ಜೀವನ ಕಳೆಯುವವರು. ಮಗುವಾಗಿದ್ದಾಗ ನಮ್ಮ ತಂದೆ ನಾವು ಬಿದ್ದರು ನಮ್ಮಿಂದ ನಾವೇ ಎದ್ದು ನಿಲ್ಲುವ ಹಾಗೆ ಮತ್ತು ಎಚ್ಚರಿಕೆಯಿಂದ ನಡೆಯುವ ನಡಿಗೆಯನ್ನು ಕಲಿಸಿದವರು. ಒಳ್ಳೆಯ ಕಥೆಗಳ ಉದಾಹರಣೆ ನೀಡಿ ನೀತಿಪಾಠ ತಿಳಿಸಿ ಬೆಳೆಸಿದವರು. ಸಿಸ್ತು, ಸಂಯಮತೆ, ಸಂಸ್ಕಾರ ನಮ್ಮಲ್ಲಿ ಮೂಡಿಸಿದವರು. ಒಬ್ಬ ಆದರ್ಶ ಶಿಕ್ಷಕರಾಗಿ ಬಡಮಕ್ಕಳಿಗೆ ತಮ್ಮ ಮಕ್ಕಳಂತೆ ವಿದ್ಯಾದಾನ ಮಾಡಿದವರು. ಅನ್ನ ದಾಸೋಹ ಮಾಡಿದವರು. ಬದುಕಿನುದ್ದಕ್ಕೂ ದುಡ್ಡಿಗೆ ಆಸೆ ಪಡದೆ ಸಾಮರಸ್ಯದ ಜೀವನ ನಡೆಸಿಕೊಂಡು ಬಂದವರು. ತಮ್ಮ ಎಲ್ಲ ಮಕ್ಕಳಲ್ಲಿ ಆ ಭಾವನೆಗಳ ಬೀಜ ಬಿತ್ತಿದವರು. ಸದ್ಗುಣಗಳಿಂದ ಕೂಡಿದ ಶರಣ ಚಿಂತನೆಯ ಗಾಂಭೀರ್ಯದ ಮನುಷ್ಯರವರು. ನಾವು ಚಿಕ್ಕವರಿದ್ದಾಗ ಸಲಿಗೆಯಿಂದ ತಂದೆಯ ಜೊತೆ ಬೆಳೆದೆವು. ದೊಡ್ಡವರಾದಂತೆ ಅವರ ಗಾಂಭಿರ್ಯದ ನಡೆಯಲ್ಲಿ ಭಯ ಭಕ್ತಿಯಿಂದ ಅವರನ್ನು ಅನುಸರಿಸಿಕೊಂಡು ನಡೆದೆವು. ಎದುರುತ್ತರ ಕೊಡದ ಹಾಗೆ ತಮ್ಮ ಭಯದಲ್ಲಿ ನಮಗೆ ಒಳ್ಳೆಯ ನಡತೆಯ ಗುಣಗಳನ್ನು ಕಲಿಸಿ ಬೆಳೆಸಿದರು.
ನಾವು ಮದುವೆಯಾಗಿ ಗಂಡನ ಮನೆ ಸೇರಿದಾಗ ನಮ್ಮ ನೆನಪಲ್ಲಿ ನೊಂದು ಮರುಗಿದವರು. ಜೀವನದಲ್ಲಿ ಧೈರ್ಯದಿಂದ ಕಷ್ಟಗಳನ್ನೆದುರಿಸಿ ಸರಿಯಾದ ಮಾರ್ಗ ಹುಡುಕಿ ಬದುಕುವ ಕಲೆ ಕಲಿಸಿ, ತೃಪ್ತಿಯ ನೆಮ್ಮದಿಯ ಜೀವನ ಕಂಡುಕೊಳ್ಳಲು ಉಪದೇಶಿಸಿದರು. ನಮ್ಮ ತಂದೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಮಕ್ಕಳಷ್ಟೆಯಲ್ಲಾ ಮೊಮ್ಮಕ್ಕಳು ಕೂಡ ಅವರ ಸನ್ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈಗಿನ ಆಧುನಿಕ ಯುಗದಲ್ಲಿ ಹಿರಿಯರ ಮಾತುಗಳನ್ನು ಮನ್ನಿಸಿ ನಡೆಯುವವರೇ ವಿರಳ. ನಮ್ಮ ತಂದೆಯವರು ನಮ್ಮ ಮನೆಯ ಸಂಸ್ಕಾರದಲ್ಲಿ ಪ್ರೀತಿ, ವಾತ್ಸಲ್ಯ, ನಂಬಿಕೆಗಳ ಗಟ್ಟಿ ಬುನಾದಿ ಹಾಕಿದ್ದಾರೆ. ಅವರ ಮೊದಲಿನ ಕಷ್ಟದ ದಿನಗಳು ನೆನೆಸಿಕೊಂಡಾಗ ಆದ ಸಂಕಟ, ಈಗಿನ ಅವರ ನೆಮ್ಮದಿಯ ಜೀವನ ಕಂಡಾಗ ಆದ ಸಂತಸ, ಇದಕ್ಕೆಲ್ಲ ಆ ಭಗವಂತನ ಕೃಪೆ ನಮ್ಮೆಲ್ಲರ ಮೇಲೆ ಸದಾಯಿದೆ. ದೇವರ ಋಣ ಯಾವ ರೀತಿ ಕರ್ಮಯೋಗಿಯಾಗಿ ತಿರಿಸಿದರು ಕಡಿಮೆಯೆ ಅಂತ ಅನ್ನಿಸುತ್ತದೆ.
ನಮ್ಮ ಕಾಯಕ ನಿಷ್ಠೆಯಿಂದ ಮಾಡಿದೊಡೆ ಅದರ ಸವಿಯುವ ಫಲವು ಸಿಹಿಯಾಗಿರುತ್ತದೆ ಅಲ್ಲವೇ. ಅದರಲ್ಲಿ ಶಿಕ್ಷಕ ವೃತ್ತಿಗೆ ಎಲ್ಲೆಡೆ ಗೌರವ, ಮರ್ಯಾದೆ ಲಭಿಸುತ್ತಲೆಯಿರುತ್ತದೆ. ಎಲ್ಲಿ ಹೋದರು ಅವರ ಕೈಕೆಳಗೆ ಪಳಗಿದ ವಿಧ್ಯಾರ್ಥಿಗಳ ವೃಂದ ನಮಿಸಿ ಗೌರವಿಸುತ್ತಲೆ ಇರುತ್ತದೆ. ಇಂತಹ ಭಾಗ್ಯ ನಾವು ನಮ್ಮ ತಂದೆಯಿಂದ ಕಾಣುತ್ತಲಿದ್ದೆವೆ. ತಂದೆಯ ನೆರಳಿಲ್ಲದೆ ಎಷ್ಟೊಂದು ಮಕ್ಕಳು ಪಡುವ ಪಾಡು ನೋಡಿದರೆ ನಾವು ಪುಣ್ಯವಂತರಲ್ಲವೇ. ನಮ್ಮ ತಂದೆಯ ಪ್ರೀತಿ ಹಾರೈಕೆ ಸದಾ ನಮ್ಮ ಮೇಲಿದೆ. ತೊಂಬತ್ತು ವರ್ಷದ ನಮ್ಮೆಲ್ಲರ ಹಿರಿಯ ಜೀವಿ ತಮ್ಮ ಮರಿಮೊಮ್ಮಕ್ಕಳಲ್ಲಿ ಮಗುವಿನಂತೆ ಆಡಿ ನಲಿವುದನ್ನು ಕಂಡು ಸಂತಸಪಡುತ್ತಿದ್ದೆವೆ. ಹಿರಿಯರು ಮನೆ ಮನ ಅಲುಗಾಡದಂತೆ ಆಧಾರ ಇರುವ ದೊಡ್ಡ ಸ್ಥಂಭ ವಿದ್ದಂತೆ ಹೌದಲ್ಲವೇ.
————————