ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಅಡಗಿಸಲಾರದ ದನಿ”

ಗೆಳೆಯ ನಿನ್ನೊಲವು ಎದೆಯಲೇ ಅಡಗಿಸಲಾರದ ದನಿ
ನೀನೆಂದಿಗೂ ಸದಾ ಅಕ್ಷಯ ವಾಗುವ ಒಲವ ಖನಿ
ಪ್ರೇಮ ಪಕ್ಷಿಯನು ಹೃದಯ ಗೂಡಿನಲಿ ಬಂಧಿಸಿಡಲಾರೆ
ನಮ್ಮೀ ಅನುಬಂಧವ ಎದೆಯೊಳಗೆ ಬಚ್ಚಿಡಲಾರೆ
ಮಳೆ ಮುಗಿಲಿಗೆ ನವಿಲು ಗರಿ ಬಿಚ್ಚದಿರುವುದೇ
ನಿನ್ನೊಲವ ನೆನೆನೆನೆದು ಈ ಮನ ಅರಳದಿರುವುದೇ
ಓಡುವ ನದಿಗೆ ಸಾಗರ ಸೇರುವ ಮಹದಾಸೆ
ಎನಗೆ ಅಡಗಿಸಲಾರದ ನಿನ್ನೊಲವ ದನಿಯಾಗುವಾಸೆ
ಮಾಮರದ ಚಿಗುರಲೂ ಕೋಗಿಲೆ ದನಿ ಅಡಗಿಸುವುದೇ
ಚೈತ್ರನ ಹೊಸ್ತಿಲಲೂ ತರುಲತೆಗಳು ಚಿಗುರುವಾಸೆಯ ಬಿಡುವುದೇ
ಅರಳಿ ನಗುವ ಸುಮ ಸೌಗಂಧವನಡಗಿಸಿ ಬಾಳಬಲ್ಲದೆ
ಭ್ರಮರವದು ಝೇಂಕಾರವ ತೊರೆದು ಬದುಕುವುದೇ
ಗೆಳೆಯ ನನ್ನೀ ಪ್ರೇಮ ಪಯಣದ ನಿಲ್ದಾಣವೇ ನೀನು
ಈ ಪ್ರೆಮ ಪಲ್ಲವಿಗೆ ಅಡಗಿಸಲಾರದ ದನಿಯಾಗು ನೀನು
ಮಧುಮಾಲತಿರುದ್ರೇಶ್ ಬೇಲೂರು

ತುಂಬು ಧನ್ಯವಾದಗಳು ತಮಗೆ