ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಕೆಟ್ಟ ಚಟಗಳಿಗೆ ದಾಸರಾಗದಿರೋಣ

ನಾವು ಕಲಿಯುತ್ತಿದ್ದ ಶಾಲೆಯಲ್ಲಿ ಆಗ ನಮಗೆ ಒಬ್ಬರು ಮೇಷ್ಟ್ರು ಇದ್ದರು. ಅವರ ಹೆಸರು ಗಿರೀಶ್ ಚಂದ್ರ ಎಂದಿರಲಿ. ಜಿ. ಸಿ ಯ ಬದಲಾಗಿ ನಾವು ಅವರನ್ನು ಕರೆಯುತ್ತಾ ಇದ್ದದ್ದು ಪಿಡ್ಕ್ ಮಾಸ್ಟರ್ ಎಂದು. ಕಾರಣ ಅವರು ಬೆಳಗ್ಗೆ ಬರುವಾಗಲೇ ಎಣ್ಣೆ ಏರಿಸಿಕೊಂಡು ಕುಡಿದ ಮತ್ತಿನಲ್ಲಿಯೇ ಶಾಲೆಗೆ ಬರುತ್ತಿದ್ದರು. ವಾಸನೆ ಬರಬಾರದು ಎಂದು ಅದರ ಮೇಲೆ ಎಲೆ ಅಡಿಕೆ ತಿಂದು ನಾಲಗೆ ಹಲ್ಲೆಲ್ಲ ಕೆಂಪು ಮಾಡಿಕೊಂಡು, ಅಲ್ಲಲ್ಲಿ ಉಗಿದುಕೊಂಡು ಇರುತ್ತಿದ್ದರು. ಅವರನ್ನು ನೋಡುವಾಗ ನಮಗೆ ಹೇಸಿಗೆ ಅನ್ನಿಸುತ್ತಿತ್ತು. ಇನ್ನು ಕೆಲವರು ಅವರಿಗೆ “ಸಾವಿರ ರೂಪಾಯಿ ಕೊಟ್ಟರೆ ಅವರು ಹತ್ತನೇ ತರಗತಿ ಪಾಸ್ ಮಾಡಿಸಿ ಕೊಡುತ್ತಾರೆ ” ಎಂದೂ ಹೇಳುತ್ತಿದ್ದರು. ಅದೆಲ್ಲ ಊಹಾಪೋಹಗಳ ಮಾತೋ ಏನೋ. ಕಾರಣ ಸಾವಿರ ರೂಪಾಯಿ ಎಂದರೆ ಆಗ ಬಹಳ ದೊಡ್ಡದು, ಮತ್ತೆ ಆಗ ಯಾರೂ ಅವರಿಗೆ ದುಡ್ಡು ಕೂಡಲೇ ಇಲ್ಲ, ಕೊಟ್ಟಿದ್ದಿದ್ದರೆ ಎಲ್ಲರೂ ಪಾಸ್ ಆಗಬಹುದಿತ್ತು ಅಲ್ಲವೇ? ಆದರೆ ಮಾತು ಅದಲ್ಲ.
             ಸಮಾಜದಲ್ಲಿ ಉತ್ತಮ ಹುದ್ದೆಯಲ್ಲಿ ಇರುವ ಶಿಕ್ಷಕರೊಬ್ಬರು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡರೆ ಅವರ ವಿದ್ಯಾರ್ಥಿಗಳು ಅವರನ್ನು ಹೇಗೆ ಕಾಣುತ್ತಾರೆ, ಸಮಾಜ ಅವರನ್ನು ಹೇಗೆ ಕಾಣುತ್ತದೆ ಎಂಬುದು. ಸಮಾಜ ಶಿಕ್ಷಕರನ್ನು ತಿಳಿದವರು, ತುಂಬಾ ಬುದ್ಧಿವಂತರು, ಎಲ್ಲಾ ಗೊತ್ತಿರುವವರು, ಎಲ್ಲೂ ಏನೂ ತಪ್ಪು ಮಾಡದವರು, ಲಂಚ ಸ್ವೀಕರಿಸದವರು, ಬಡ ಮಾಸ್ಟರ್/ ಟೀಚರ್, ಮಕ್ಕಳ ಜೊತೆಗೆ ಇರುವವರು ಎಂಬ ದೃಷ್ಟಿಯಲ್ಲಿ ನೋಡುತ್ತದೆ. ಹಾಗೆಯೇ ಯಾವುದೇ ತಪ್ಪನ್ನು ಬೇರೆಯವರು ಮಾಡಿದರೆ ಕ್ಷಮೆ ಇದೆ, ಶಿಕ್ಷಕರು ಮಾಡಿದರೆ ಕ್ಷಮೆ ಇಲ್ಲ, ಕಾರಣ ಅವರು ನಾಲ್ಕು ಮಕ್ಕಳಿಗೆ ಬುದ್ಧಿ ಹೇಳುವವರು. “ಹೀಗೆ ಮಾಡಿದವ ಮಕ್ಕಳಿಗೆ ಏನು ಕಲಿಸುತ್ತಾನೆ?” ಎಂಬ ಪ್ರಶ್ನೆ ಎಲ್ಲರ ಒಳಗೆ.
        ಸಮಾಜ ಶಿಕ್ಷಕರನ್ನು ಬೇರೆಯೇ ಸೃಷ್ಟಿಯಲ್ಲಿ ಕಾಣುತ್ತದೆ. ಅಲ್ಲಿ ಅವರು ಯಾವ ತಪ್ಪುಗಳನ್ನು ಕೂಡಾ ಮಾಡಬಾರದು. ಸಕಲ ವಿದ್ಯೆಯನ್ನು ಬಲ್ಲವರಾಗಿ, ವಿದ್ಯಾರ್ಥಿಗಳಿಗೆ ಒಳ್ಳೆಯದನ್ನು ಮಾತ್ರ ಹೇಳಿಕೊಡುವವರಾಗಿ,ಕೆಟ್ಟ  ಗುಣಗಳಿಗೆ , ಅಭ್ಯಾಸಗಳಿಗೆ ದಾಸರಾಗದೆ ನಿಯತ್ತಾಗಿ ಬದುಕುವವರು, ತಮ್ಮ ವಿದ್ಯಾರ್ಥಿಗಳಿಗೆ ಕೂಡ ಒಳ್ಳೆಯದನ್ನೇ ಬೋಧಿಸುವವರು. ಪ್ರತಿ ಹಳ್ಳಿಯಲ್ಲೂ ಅತ್ಯಂತ ಹೆಚ್ಚು ಗೌರವವನ್ನು ಪಡೆಯುವವರು  ಶಿಕ್ಷಕರು.  ನಗರಗಳಲ್ಲಿ ಬಿಡಿ,  ಅಲ್ಲಿ ಯಾರು ಶಿಕ್ಷಕರೆಂದು ಗೊತ್ತಾಗುವುದಿಲ್ಲ.  ಕಾರಣ ಅಲ್ಲಿ ರಾಶಿ ಜನಗಳಲ್ಲಿ ಶಿಕ್ಷಕರು ಎದ್ದು ಕಾಣುವುದಿಲ್ಲ. ಎಲ್ಲೋ ಒಬ್ಬರು ಇಬ್ಬರು ಸೀರೆ ಉಟ್ಟುಕೊಂಡು ಹೋಗುತ್ತಿದ್ದರೆ ಅವರನ್ನು ಶಿಕ್ಷಕರು ಅಂದುಕೊಳ್ಳಬಹುದು. ಆದರೆ ಈಗ ಶಿಕ್ಷಕರು ಸೀರೆ ಉಡಬೇಕು ಎಂಬ ನಿಯಮ ಕೂಡಾ ಇಲ್ಲ. ಕಾಲ ಬದಲಾದ ಹಾಗೆ ಶಿಕ್ಷಕರು ಬದಲಾಗಬೇಕು ಅಲ್ಲವೇ? ಸರಕಾರ ಶಿಕ್ಷಕರಿಗೆ ಎಲ್ಲರೂ ಹಾಕುವಂತಹ ಚೂಡಿದಾರ ಅಥವಾ ಸಲ್ವಾರ್ ಕಮೀಝ್ ಹಾಕಲು ಅವಕಾಶ ಕೊಟ್ಟಿದೆ. ಬೇರೆ ಬೇರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಅವರದ್ದೇ ಆದ ಸಮವಸ್ತ್ರಗಳನ್ನು ನೀಡಲಾಗಿದೆ. ಕೆಲವು ಕಡೆ ಅವರು ಕೋಟ್ ಗಳನ್ನು ಧರಿಸುವುದು ಮುಖ್ಯ. ಹಾಗಾಗಿ ಹಿಂದಿನ ಕಾಲದಂತೆ ಇಂದು ಶಿಕ್ಷಕರು ಎಲ್ಲರ ನಡುವೆ ಎದ್ದು ಕಾಣುವುದಿಲ್ಲ. ಸಾಮಾನ್ಯರಂತೆ ಇರುತ್ತಾರೆ. ಕಾರಲ್ಲಿ ಮಾತ್ರ ಶಿಕ್ಷಕರ ಸಿಂಬಲ್ ಕೆಲವು ಕಡೆ ಕಂಡರೆ ಡಾಕ್ಟರ್ , ಲಾಯರ್ ಗಳ ಹಾಗಲ್ಲ. ಶಿಕ್ಷಕರಿಗೆ ನಾನು ಶಿಕ್ಷಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಗೋ ಅಡ್ಡಿ ಆಗುತ್ತದೆ. ಕಾರಣ ಅದು ದುಡಿದು ಗಳಿಸಬಲ್ಲ, ಉತ್ತಮ ಸ್ತರದ ಶ್ರೀಮಂತವಾಗಿ ಬಾಳ್ವೆ ನಡೆಸಬಲ್ಲ ಜೀವನ ಕೊಡುವ ಕಾಯಕ ಅಲ್ಲ. ಚಾಪೆ ಇದ್ದಷ್ಟು ಕಾಲು ಚಾಚಿಕೊಂಡು ಬಾಳಬೇಕು ಅಷ್ಟೇ. ಕೆಲವರು ತಮ್ಮದೇ ಆದ ಶಿಸ್ತನ್ನು ಅಭ್ಯಾಸ ಮಾಡಿಕೊಂಡರೆ ಇನ್ನು ಕೆಲವರು ಕೆಟ್ಟ ಚಟಗಳಿಗೆ ದಾಸರಾಗಿರುತ್ತಾರೆ. ಶಿಕ್ಷಕರು ಕೂಡ ಸಾಮಾನ್ಯ ಮನುಷ್ಯರೇ ಅಲ್ಲವೇ? ಅವರಿಗೂ ಕೂಡ ನೋವು,  ದುಃಖ , ಕಷ್ಟ , ಸಂಸಾರದ ಜವಾಬ್ದಾರಿ , ಕೆಲಸದ ಒತ್ತಡಗಳು, ತಮ್ಮದೇ ಆದ ಕೆಲಸಗಳು ಇರುವುದಿಲ್ಲವೇ? ಅದು ಸರಿ,  ಆದರೆ ಕೆಟ್ಟ ಚಟಗಳಿಗೆ ದಾಸರಾಗುವುದು ತಪ್ಪು. ತಾನು ತಿಳಿದವನಾಗಿದ್ದು ತನಗೆ ಯಾವುದು ಸರಿ,  ಯಾವುದು ತಪ್ಪು ಎಂದು ಗೊತ್ತಿದ್ದು, ಬಿಟ್ಟುಬಿಡಲಾರದ ಕೆಟ್ಟ ಚಟಗಳನ್ನು ಮೈಗೆ ಅಂಟಿಸಿಕೊಂಡು ಬದುಕುವುದು , ಇದರಿಂದ ವಿದ್ಯಾರ್ಥಿಗಳ ಎದುರು ಮತ್ತು ಅವರ ಪೋಷಕರ ಎದುರು ತಲೆತಗ್ಗಿಸುವಂತೆ ಆಗುವುದು  ತಪ್ಪೇ. ತಮ್ಮ ಮುಂದಿನ ಪೀಳಿಗೆಯ ರೂವಾರಿಗಳಾಗಿ, ಎಲ್ಲಾ ವಿದ್ಯಾರ್ಥಿಗಳು ನಮ್ಮನ್ನು ಕೆಲಿದ್ದಕ್ಕಿಂತ ಹೆಚ್ಚಾಗಿ ನಮ್ಮ ನಡೆ ನುಡಿ ನೋಡಿ ಅನುಸರಿಸುತ್ತಾರೆ ಎಂದು ತಿಳಿದವರಾಗಿ ಹೀಗೆ ಮಾಡುವುದು ಕೆಟ್ಟದ್ದೇ. ಹಾಗಂತ ಅದು ಶಿಕ್ಷಕರಿಗೆ ಮಾತ್ರ ಅನ್ವಯಿಸುವುದು ಅಲ್ಲ. ಎಲ್ಲಾ ಪೋಷಕರಿಗೂ, ಇತರ ಹುದ್ದೆಯ ಜನರಿಗೂ ಅನ್ವಯಿಸುತ್ತದೆ. ಮಗು ಶಾಲೆಗಿಂತ ಹೆಚ್ಚು ಮನೆಯಲ್ಲಿ, ಸಮಾಜದಲ್ಲಿ, ಪೋಷಕರು, ಬಂಧುಗಳು, ಸಮಾಜವನ್ನು ನೋಡಿ ಕಲಿಯುತ್ತದೆ ಅಲ್ಲವೇ? ತಂದೆ ತಾಯಿ ಪ್ರತಿನಿತ್ಯ ಮಕ್ಕಳ ಎದುರು ಜಗಳವಾಡಿಕೊಂಡು ಇದ್ದರೆ ಮಕ್ಕಳಿಗೆ ಒಳ್ಳೆಯ , ಉದಾತ್ತ ಆಲೋಚನೆ ಬರಲು ಸಾಧ್ಯವೇ? ಮನೆಯ ವಾತಾವರಣ ಅವನ ಬದುಕನ್ನು ಕೆಡಿಸಬಹುದಲ್ಲವೇ?


          ಬದುಕು ನಾವು ತಿಳಿದ ಹಾಗೆ ಇಲ್ಲ ,  ನಾವು ಬದುಕಬೇಕು ಅಂದುಕೊಂಡ ಹಾಗೂ ಇಲ್ಲ. ಬದುಕನ್ನು ಅದು ಬಂದ ಹಾಗೆ ಸ್ವೀಕರಿಸಬೇಕು. ಕಷ್ಟಗಳು , ನೋವುಗಳು , ನಿಂದನೆಗಳು,  ಅಸಹಾಯಕತೆ, ಖಿನ್ನತೆ ಈ ಪ್ರಪಂಚದಲ್ಲಿ ಎಲ್ಲರಿಗೂ ಇದ್ದದ್ದೆ. ಅದನ್ನು ಕೆಟ್ಟ ಚಟಗಳ ಮೂಲಕ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕೂಡ ಇದನ್ನು ಅರಿತು ಬಾಳಬೇಕಾಗಿದೆ. ಕುಡಿತಕ್ಕೆ ವ್ಯಸನಿಯಾದ ಶಿಕ್ಷಕನ ಬಳಿ ಬರಲು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಎಲ್ಲರೂ ಹೆದರುತ್ತಾರೆ. ಕಾರಣ ಅವರ ಬುದ್ಧಿ ಅವರ ಕೈಯಲ್ಲಿ ಇರುವುದಿಲ್ಲ. ಬದಲಾಗಿ ಕೆಲವೊಮ್ಮೆ ಅವರು ಯಾವಾಗ ಏನು ಮಾತನಾಡುತ್ತಾರೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಯಾರ ಮೇಲಿನ ಕೋಪವನ್ನು ಯಾರ ಮೇಲೆ ತೆಗೆಯುತ್ತಾರೋ ತಿಳಿಯದು.
      ಇನ್ನೊಬ್ಬರು ಶಿಕ್ಷಕರಿದ್ದರು. ಅವರಿಗೆ ಸಿಗರೇಟ್ ಸೇದುವ ಕೆಟ್ಟ ಚಟ ಇತ್ತು. ಅವರು ಎಲ್ಲ ಮಕ್ಕಳ ಮುಂದೆ ಸಿಗರೇಟ್ ಸೇವನೆ ಮಾಡುತ್ತಿರಲಿಲ್ಲ. ಟಾಯ್ಲೆಟ್ ರೂಮಿಗೆ ಹೋಗಿ ಅಲ್ಲಿ ಬೇಕಾದಷ್ಟು ದಮ್ ಎಳೆದು ಹೊರಗೆ ಬರುತ್ತಿದ್ದರು. ನಾವು ಅವರು ಹೊರಗೆ ಬಂದ ಮೇಲೆ ಶಿಕ್ಷಕರ ಟಾಯ್ಲೆಟ್ ತೊಳೆಯಲು ಹೋದಾಗ ಬರುವ ಆ ವಾಸನೆಯಿಂದ ಎಲ್ಲವನ್ನು ಗ್ರಹಿಸಿಕೊಂಡಿದ್ದೆವು. ವಿದ್ಯಾರ್ಥಿಗಳು ದಡ್ಡರಲ್ಲ, ಎಲ್ಲರೂ ತುಂಬಾ ಬುದ್ಧಿವಂತರೆ. ಬದುಕಿನ ಕೌಶಲ್ಯ ಅವರಲ್ಲಿ ತುಂಬಾ ಇರುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ಅಕ್ಷರ ಓದಲು , ಬರೆಯಲು ಬರದೇ ಇರಬಹುದು. ಆದರೆ ಮನೆಯಲ್ಲಿನ ಹಲವಾರು ಕೆಲಸಗಳ ಜವಾಬ್ದಾರಿಗಳನ್ನು ಅವನೇ ವಹಿಸಿಕೊಂಡಿರುತ್ತಾನೆ. ಉದಾಹರಣೆಗೆ ಡೈರಿಗೆ ಹೋಗಿ ಹಾಲು ಹಾಕಿ ಬರುವುದು, ಬಂಧು ಬಳಗದವರ ಮದುವೆಗೆ ಹೋಗಿ ಬರುವುದು, ಇತರ ಕಾರ್ಯಕ್ರಮಗಳಿಗೆ ಹೋಗಿ ಬರುವುದು, ಒಬ್ಬನೇ ರಜೆಯಲ್ಲಿ ಬಂಧುಗಳ ಮನೆಗೆ ಭೇಟಿ ನೀಡುವುದು, ತಂದೆ ತಾಯಿ ಹಿರಿಯರಿಗೆ ಬೇಕಾದ ಔಷಧಿ ಹಾಗೂ ಮನೆಯ ಸಾಮಾನುಗಳನ್ನು ತಂದು ಕೊಡುವುದು , ಕೆಲವರು ಸಂತೆಯಲ್ಲಿ ವ್ಯಾಪಾರ ಮಾಡುವುದು… ಹೀಗೆ ನಿತ್ಯ ವ್ಯವಹಾರದಲ್ಲಿ ಅವನು ಬಹಳ ಚತುರನಾಗಿರಬಹುದು. ಹಲವಾರು ಜನರ ಜೊತೆ ಸಮಾಜದಲ್ಲಿ ಸೇರಿದ ಇಂತಹ ವಿದ್ಯಾರ್ಥಿಗೆ ಜೀವನ ಪಾಠ ಚೆನ್ನಾಗಿಯೇ ತಿಳಿದಿರುತ್ತದೆ. ಬದುಕಿನ ಪಾಠ ಚೆನ್ನಾಗಿ ಬಂದಿರುತ್ತದೆ. ಅಂತಹ ವಿದ್ಯಾರ್ಥಿಗಳು ಎಲ್ಲವನ್ನು ಗ್ರಹಿಸುವುದರ ಜೊತೆಗೆ ಎಲ್ಲರನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಪ್ರತಿ ವಿದ್ಯಾರ್ಥಿಯು ಹಿರಿಯರಂತೆ ತನ್ನ ಬಂಧುಗಳನ್ನು,  ಪೋಷಕರನ್ನು ಮತ್ತು ಶಿಕ್ಷಕರನ್ನು ಚೆನ್ನಾಗಿಯೇ ಅರ್ಥ ಮಾಡಿಕೊಂಡಿರುತ್ತಾನೆ. ಹಾಗಿರುವಾಗ ಶಿಕ್ಷಕರ ಈ ಕೆಟ್ಟ ಚಟದ ಬಗ್ಗೆ ಕೂಡ ತಿಳಿಯುತ್ತಾನೆ.

         “ಕೆಟ್ಟ ಚಟಗಳಿಗೆ ನಾವು ದಾಸರಾಗಬಾರದು,  ಒಳ್ಳೆಯದನ್ನು ಮಾತ್ರ ಮಾಡಬೇಕು” ಎಂದು ಬಾಯಲ್ಲಿ ಹೇಳಿದರೆ ಸಾಲದು.  ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು.  ಒಂದು ವೇಳೆ ಶಿಕ್ಷಕರು ಹೇಳಿದ್ದನ್ನು ಕೇಳಿ ಕಲಿಯುವ ವಿದ್ಯಾರ್ಥಿಗಳೇ ಇದ್ದಿದ್ದರೆ ಸಮಾಜದಲ್ಲಿ ಕೆಟ್ಟ ಚಟಗಳಿಗೆ ಯಾರೂ ಎಂದೂ ದಾಸರಾಗುತ್ತಲೇ  ಇರಲಿಲ್ಲ. ಕಳ್ಳತನ, ಸ್ವಾರ್ಥ,  ಮೋಸ , ಸುಲಿಗೆ , ವರದಕ್ಷಿಣೆ , ಲಂಚ , ಸೋಮಾರಿತನ , ಪರರ ವಸ್ತುಗಳನ್ನು ಕಿತ್ತು ತಿನ್ನುವ ಕೆಟ್ಟ ಅಭ್ಯಾಸಗಳು ಯಾವುವೂ ನಡೆಯುತ್ತಲೇ ಇರಲಿಲ್ಲ. ಹಿರಿಯರನ್ನು ನೋಡಿಯೂ ವಿದ್ಯಾರ್ಥಿಗಳು ತುಂಬಾ ಕಲಿಯುತ್ತಾರೆ. ಮಗನ ಎದುರಿಗೆ, ತಂದೆ ಆರಾಮವಾಗಿ ಕೂತು ಕುಳಿತು ಕುಡಿದು, ಒಂದಿಷ್ಟು ಉಪ್ಪಿನಕಾಯಿ,  ಒಂದಷ್ಟು ಚಿಪ್ಸು ತಿಂದು,  ಉಳಿದದ್ದನ್ನು ಮಗನಿಗೆ ಬಿಟ್ಟು ಹೋದರೆ,  ಮುಂದೆ ತಾನು ಕೂಡ ದೊಡ್ಡವನಾದ ಮೇಲೆ ಇದೇ ತರಹ ಮಾಡಿ ತನ್ನ ಚಿಕ್ಕ ಮಕ್ಕಳಿಗೆ ಈ ತರಹ  ಬಿಟ್ಟು ಹೋಗಬೇಕು.  ಅದುವೇ ಸರಿ ಇರಬಹುದು ಎಂದು ಅವರು ಅಂದುಕೊಳ್ಳುತ್ತಾರೆ. ತಂದೆ ತಾಯಿಗಳನ್ನೇ ದೇವರು ಎಂದು ಪೂಜಿಸುವ ಮಕ್ಕಳು ಒಂದು ಹಂತದವರೆಗೆ ತಮ್ಮ ತಂದೆ ತಾಯಿ ಮಾಡಿದ್ದೆಲ್ಲವೂ ಸರಿ ಅಂದುಕೊಳ್ಳುತ್ತಾರೆ. ಬುದ್ಧಿ ಬಂದಾಗ ಅವರು ಬದಲಾಗಬೇಕು ಅಂದುಕೊಂಡರು ಮೂರು ವರ್ಷದಲ್ಲಿ ಕಲಿತದ್ದು ನೂರು ವರುಷಗಳವರೆಗೆ ಎಂಬ ಮಾತಿನಂತೆ ಒಮ್ಮೆಲೆ ಅದನ್ನು ಬಿಡಲಾರರು.
         ಈ ಕೆಟ್ಟ ಚಟಗಳು ಮಾನವನಿಗೆ ಬರಲು ಪೋಷಕರ ಬಂಧುಗಳ ನೆರೆಹೊರೆಯವರ ಗೆಳೆಯರ ಪ್ರಭಾವ ಮತ್ತು ಕೆಲವರ ಸಹಾಯ ಕೂಡಾ ಇದ್ದೇ ಇರುತ್ತದೆ. ಶೀತವಾದ ಕೂಡಲೇ ಸಾರಾಯಿ ಕುಡಿದರೆ ಸರಿ ಹೋಗುತ್ತದೆ ಎಂದು ನಂಬುವವರು ಭಾರತದಲ್ಲಿ ಇನ್ನೂ ಇದ್ದಾರೆ. ಅಷ್ಟೊಂದು ದುಡ್ಡು ಖರ್ಚು ಮಾಡಿ ಡಾಕ್ಟರ ಬಳಿ ಯಾಕೆ ಹೋಗಬೇಕು? ಕಡಿಮೆ ದುಡ್ಡಲ್ಲಿ ಕಡಿಮೆಯಾಗಬಹುದಲ್ಲವೇ ಎಂದು ಸುಲಭದ ವಿಧಾನ ಹುಡುಕುತ್ತಾರೆ. ಇದು ಮುಂದೆ ಬರುವ ಕೆಟ್ಟ ಅಭ್ಯಾಸಗಳಿಗೆ ನಾಂದಿ ಹಾಡುತ್ತದೆ. ಕೆಲವು ಸಂಸಾರಗಳಲ್ಲಿ ತಂದೆ ತಾಯಿ ಇಬ್ಬರು ಕುಡುಕರಾಗಿದ್ದು,  ಮಕ್ಕಳಿಗೂ ಕೂಡ ಕುಡಿಯುವುದರಿಂದ ಏನು ಕೆಟ್ಟದು ಆಗದು, ಅದು ಕೂಡ ಒಂದು ಮದ್ದಿನಂತೆ ಎಂದು ಹೇಳಿ ಸ್ವಲ್ಪ ಸ್ವಲ್ಪವೇ ಚಿಕ್ಕಂದಿನಲ್ಲಿ ಕುಡಿಯುವ ಅಭ್ಯಾಸ ಮಾಡಿಸಿರುತ್ತಾರೆ. ಅದು ಮುಂದೆ ಬೆಳೆದಾಗ ಬಿಡದ ಚಟವಾಗಿ ಅಂಟಿಕೊಂಡು ಅವರಿಗೆ ಗೊತ್ತಿಲ್ಲದ ಹಾಗೆ ಅವರನ್ನು ಆವರಿಸಿಕೊಂಡು ಬಿಡುತ್ತದೆ. ಕೆಟ್ಟ ಚಟಗಳಿಗೆ ದಾಸರಾಗಲು ವಿದ್ಯಾವಂತ , ಅವಿದ್ಯಾವಂತ , ಅಕ್ಷರಸ್ಥ,  ಅನಕ್ಷರಸ್ಥ ಎಂಬ ಬೇಧ ಭಾವಗಳಿಲ್ಲ. ಅವನು ಒಬ್ಬ ಮನುಷ್ಯ ಅಷ್ಟೇ. ಅದೆಷ್ಟೋ ಡಾಕ್ಟರ್ ಗಳು , ಪದವೀಧರರು, ಇಂಜಿನಿಯರ್ಗಳು ತಮ್ಮ ಕಲಿಕೆಯ  ಅವಧಿಯಲ್ಲಿಯೇ ಹಲವಾರು ಡ್ರಗ್ ಗಳಿಗೆ ಹಾಗೂ ಕುಡಿತಕ್ಕೆ ಗೆಳೆಯರ ಜೊತೆ ಸೇರಿ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡ ಘಟನೆಗಳು ನಮ್ಮ ಮುಂದೆ ಇವೆ. ಮೊಬೈಲ್ ಗೇಮ್ಸ್ ಕೂಡ ಈಗ ಇವುಗಳ ಜಾತಿಗೆ ಸೇರುತ್ತದೆ.

          ಮನುಷ್ಯ ಕೆಟ್ಟದ್ದನ್ನು ಕಲಿತಷ್ಟು ಬೇಗ ಒಳ್ಳೆಯದನ್ನು ಕಲಿಯಲಾರ. ಯಾವ ಟೀಚರ್ ಕೂಡ ಹೇಳಿಕೊಡದೆ ಮೊಬೈಲ್ ಒತ್ತುವುದು ಸಣ್ಣ ಮಕ್ಕಳಿಗೂ ಗೊತ್ತು ಆದರೆ ಹೇಳಿ ಕೊಟ್ಟ ಪಾಠ ಮತ್ತೆ ಮತ್ತೆ ಹೇಳಿ ಕೊಟ್ಟರು ಅದು ಬರದು. ಒಳ್ಳೆಯದನ್ನು ಹೇಳಿಕೊಟ್ಟು ಕಲಿಸಲು ತುಂಬಾ ಕಷ್ಟ ಆದರೆ ಕೆಟ್ಟ ಚಟಗಳನ್ನು ಹಿಡಿಸುವುದು ಬಹಳವೇ ಸುಲಭ.  ಅಂತಹ ಒಬ್ಬ ಗೆಳೆಯ ಸಿಕ್ಕಿದರೂ ಸಾಕು , ಜೀವನವನ್ನು ಹರಿದು ಚಿಂದಿ ಚಿಂದಿ ಮಾಡಲು. ಕುಡುಕರಿಗೆ ಬೀಡಿ ಸಿಗರೇಟು ಸೇದುವವರಿಗೆ, ಎಲೆ ಅಡಿಕೆ ಜೊತೆ ಹೊಗೆಸೊಪ್ಪು ತಿನ್ನುವವರಿಗೆ, ನಶ್ಯ ಎಳೆಯುವವರಿಗೆ ಸಿಗುವಷ್ಟು ಜನ ಗೆಳೆಯರು ಒಳ್ಳೆಯವರಿಗೆ ಸಿಗಲಾರರು. ಕೆಟ್ಟ ಚಟಗಳಿಗೆ ಗೆಳೆತನ ಬೇಗ ಅಂಟಿ ಕೊಳ್ಳುತ್ತದೆ. ನಾವು ಖರ್ಚಿಗೆ ಎಂದು ಯಾರ ಬಳಿಯಾದರೂ ನೂರು ರೂಪಾಯಿ ಕೇಳಿದರೆ ಯಾರು ಕೊಡಲಾರರು, ಅದೇ ಸಾವಿರ ರೂಪಾಯಿ ಮಾಲ್ ಆದರೂ ಗೆಳೆಯರೆಲ್ಲ ಸೇರಿಕೊಂಡು ಒಟ್ಟಾಗಿ ಪಾರ್ಟಿ ಮಾಡುತ್ತಾರೆ.


     ಯಾರೇ ಆಗಲಿ ಮನುಷ್ಯ ಅವನು ಶಿಕ್ಷಕನಾಗಲಿ ಅಥವಾ ಬೇರೆಯವರಾಗಲಿ ಕೆಟ್ಟ ಚಟಗಳಿಗೆ ತನ್ನನ್ನು ತಾನು ದಾಸನನ್ನಾಗಿ ಮಾಡಿಕೊಂಡು ಇರಬಾರದು. ದೊಡ್ಡ ದೊಡ್ಡ ಕಂಪನಿಯ ಮಹಾನ್ ವ್ಯಕ್ತಿಗಳು ಇತರಹವೇ ತಮ್ಮ ಕೆಟ್ಟ ಅಭ್ಯಾಸಗಳಿಂದ ತಮ್ಮ ದೊಡ್ಡ ದೊಡ್ಡ ಬಿಸಿನೆಸ್ ಗಳನ್ನು ಕಳೆದುಕೊಂಡು ದಿವಾಳಿಯಾಗಿಬಿಟ್ಟಿರುತ್ತಾರೆ. ಇದಕ್ಕೆ ಕಾರಣ ಅವರ ಕೆಟ್ಟ ಅಭ್ಯಾಸಗಳು. ಕೆಟ್ಟ ಅಭ್ಯಾಸಗಳಿಗೆ ತಮ್ಮ ಒಳ್ಳೆಯ ಬುದ್ಧಿಯನ್ನು ಕೊಟ್ಟುಬಿಟ್ಟರೆ ಅದು ಮನುಷ್ಯನನ್ನು ಹಾಳು ಮಾಡಿಬಿಡುತ್ತದೆ. ನನ್ನ ಕೈಯಲ್ಲಿ ತನ್ನ ಬುದ್ಧಿಯನ್ನು ಹಿಡಿದಿಡಬೇಕು ಮತ್ತು ತಾನು ಇತರರಿಗೆ ಮಾದರಿಯಾಗಿರಬೇಕು ಎಂದು ಬಯಸುವ ಪ್ರತಿ ಮನುಷ್ಯನು ಕೂಡ ಮಾದಕ ವಸ್ತುಗಳು ಮತ್ತು ದುಶ್ಚಟಗಳಿಂದ ದೂರವಿರಬೇಕು ಅಲ್ಲವೇ? ನೀವೇನಂತಿರಿ?

———————————-


ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top