ಬಹುಮಾನಿತ ತೆಲಗು ಕಥೆ-ಅರಳಿದ ವಸಂತ- ಕನ್ನಡಾನುವಾದ ಚಂದಕಚರ್ಲ ರಮೇಶಬಾಬು

ಅನುವಾದ ಸಂಗಾತಿ

ಅರಳಿದ ವಸಂತ

ತೆಲುಗು ಮೂಲ: ನಾಮನಿ ಸುಜನ

ಕನ್ನಡಕ್ಕೆ: ಚಂದಕಚರ್ಲ ರಮೇಶಬಾಬು

“ಹಲೋ! ಯಾರ್ರೀ ? ಯಾರು ಮಾತಾಡ್ತಾ ಇರೋದು?” ಆಚೆ ಕಡೆಯಿಂದ ಒಂದು ಗಂಡಸಿನ ಧ್ವನಿ.
“ಹಲೋ …. ! ನಿಮಗೆ ಈ ಫೋನ್ ಎಲ್ಲಿದು? ಹೇಳಿ. ನೀವು ಯಾರು? ಎಲ್ಲಿದ್ದೀರಿ?” ತೇಜ ಮಾತಾಡುತ್ತಿರುವಾಗಲೇ ಕಟ್ ಆಯಿತು.
“ಕಳ್ಲ ರಾಸ್ಕೆಲ್ ! ಯಾರೋ ಒಳ್ಳೆ ಫೋನ್ ಸಿಕ್ತು ಅಂತ ಮಜಾ ಮಾಡ್ತಿರಬಹುದು. ನಾನು ಫೋನ್ ಮಾಡ್ತೀನಿ ಅಂತ ಅಂದುಕೊಂಡಿಲ್ಲ ಅನಿಸತ್ತೆ. ಮಾತು ಕೇಳಿದ ತಕ್ಷಣ ಸ್ವಿಚಾಫ್ ಮಾಡಿದ “ ಉರಿದುಬಿದ್ದಳು ತೇಜ.
“ಅಂಥವನಾಗಿದ್ದರೆ ನಿನ್ನ ಕಾಲ್ ಯಾಕೆ ತೊಗೊಂಡ” ಲಾ ಪಾಯಿಂಟ್ ತೆಗೆದಳು ವಿಶಾಲಾಕ್ಷಿ. ಆಕೆ ತೇಜಲ ಅಜ್ಜಿ. ಅಮ್ಮನ ಅಮ್ಮ. ಅದೇ ಊರಲ್ಲಿ ಬೇರೊಂದು ಕಡೆ ಇರುತ್ತಾಳೆ.
“ ಅಬ್ಬಾ ! ನಿನಗೆ ಗೊತ್ತಿಲ್ಲ ಬಿಡಜ್ಜೀ ! ನಾನು ಫೋನ್ ಮಾಡ್ತೀನಿ ಅಂತ ಅಂದುಕೊಂಡಹಾಗಿಲ್ಲ ! ಎಂಥಾ ಒಳ್ಳೆ ಫೋನದು ! ಅದರಲ್ಲಿ ನನ್ನ ಡಾನ್ಸ್ ಫೋಟೋಗಳು, ಮುಖ್ಯವಾದ ನಂಬರ್ ಗಳು, ವಿಡಿಯೋಗಳು ಎಷ್ಟಿದ್ದವೋ ಗೊತ್ತಾ ? ದೇವರೇ ! ಆ ಫೋನ್ ಹೇಗಾದರೂ ಸಿಗುವ ಹಾಗೆ ಮಾಡು ತಂದೇ !” ಅವಳ ಮೊರೆ ಭಗವಂತ ಕೇಳಿದನೇನೋಎಂಬಂತೆ ಹತ್ತೇ ನಿಮಿಷಗಳಲ್ಲಿ ಆ ಫೋನ್ ನಿಂದ ಕಾಲ್ ಬಂತು. ಕುಣಿಯುತ್ತ ಓಡಿ ತೊಗೊಂಡಳು ತೇಜ. “ ಹಲೋ !” ಆಚೆಯಿಂದ ಕೇಳಿಬರುವಷ್ಟರಲ್ಲೇ “ ರಾಸ್ಕೆಲ್! ನಿನ್ನ ಹಿಡಿಯೋದು ಕಷ್ಟ ಅಂತ ಅಂದುಕೊಳ್ಳುತ್ತಿದ್ದೀಯೇನೋ…..” ಇನ್ನೂ ತೇಜಳ ವಾಕ್ಯ ಮುಗಿದಿರಲಿಲ್ಲ.
“ಹಲೋ ! ಸ್ವಲ್ಪ ನಾಲಿಗೆ ಬಿಗಿ ಹಿಡಿದು ಮಾತಾಡಿ…. ಇಷ್ಟಕ್ಕು ಮುಂಚೆ ನಿಮ್ಮ ಮೊಬೈಲ್  ನಲ್ಲಿ ಚಾರ್ಜ್ ಇರದೇ ಬಂದಾಯಿತು. ನಮ್ಮಣ್ಣ ಫೋನ್ ಮಾಡಿದಾಗ ಚಾರ್ಜಿರಲಿಲ್ಲ ಅಂತ ಹೇಳಿ, ಮನೆಗೆ ಬಂದು ಛಾರ್ಜಿಂಗ್ ಮಾಡಿ, ಫೋನ್ ಮಾಡಿ ಯಾರದ್ದೋ ಅವರಿಗೆ ತಲುಪಿಸು ಎಂದಿದ್ದಾನೆ” ಈ ಸಲ ಹೆಣ್ಣು ದನಿ ಸ್ಪಷ್ಟವಾಗಿ ಕೇಳಿಬಂತು.
“ಸಾರೀ ಮೇಡಂ” ಎಂದಳು ತೇಜ.
“ಇಟ್ಸಾಲ್ ರೈಟ್ “ ಅಂತ ಎಲ್ಲಿಗೆ ಬರಬೇಕೋ ಹೇಳಿದಳು ಆ ಹುಡುಗಿ.
ಮತ್ತೆ ತನಗೆ ಸಿಕ್ಕ ಫೋನ್ ತಂದುಕೊಂಡು ತನ್ನಜ್ಜಿಗೆ ತೋರಿಸಿ ತೋರಿಸಿ ಖುಶಿಪಟ್ಟಳು ತೇಜ.
  ********
ಅವತ್ತು ಹೆಣ್ಣು ನೋಡಲು ಬರುವುದರಿಂದ ತಾಯಿ ಹಾರಿಕ, ಅಜ್ಜಿ, ತಾತ ಎಲ್ಲರೂ  ಹುಡುಗನ ಕಡೆಯವರಿಗಾಗಿ ಕಾಯುತ್ತ ಹಾಲ್ ನಲ್ಲಿ ಕುಳಿತಿದ್ದರು.
“ಹುಡುಗ ನಿನ್ನ ಯಾವುದೋ ಪ್ರೋಗ್ರಾಂನಲ್ಲಿ ಹಾಡಿದ್ದು ನೋಡಿದ್ದಾನಂತೆ. ಅವರದ್ದು ಮುಂಚಿನಿಂದ ಸಂಗೀತ, ಸಾಹಿತ್ಯ ಹಿನ್ನೆಲೆಯ ಕುಟುಂಬವಂತೆ.  ಅವರ ಅಜ್ಜ ದೊಡ್ಡ ಸಂಗೀತ ವಿದ್ವಾಂಸರಂತೆ. ಹುಡುಗ ಕೂಡಾ ಸ್ವಲ್ಪ ಹಾಡುತ್ತಾನಂತೆ” ಅಜ್ಜ ಹೇಳುತ್ತಿದ್ದಂತೆ ಅವರ ಆಗಮನವಾಯಿತು.
ಮಾಮೂಲೀ ಮರ್ಯಾದೆಗಳಾದ ನಂತರ “ಯಾವುದಾದರೂ ಒಂದು ಹಾಡಮ್ಮಾ” ಹುಡುಗನ ತಾಯಿ ಕೇಳಿದಳು.
“ಅಮ್ಮಾ ! ಈಗ ಬೇಕಾ ? ಸುಮ್ನೆ ತೊಂದರೆ ಕೊಡ್ಬೇಡ” ಹುಡುಗನ ಧ್ವನಿ ಕೇಳಿಸುತ್ತಲೇ ತಲೆ ಎತ್ತಿದಳು ತೇಜ. ಅವನು ಬೇರೇ ಯಾರೋ ಆಗಿರಲಿಲ್ಲ.  ಇತ್ತೀಚೆಗೆ ಹಾಡುಗಳ ಸ್ಪರ್ಧೆಯಲ್ಲಿ ತನ್ನ ಜೊತೆ ಹಾಡಿ ಮೊದಲ ಬಹುಮಾನ ಗಿಟ್ಟಿಸಿದ ವ್ಯಕ್ತಿ. ಎರಡನೆಯ ಬಹುಮಾನ ಬಂದ ತನಗೆ ಅಭಿನಂದನೆ ಹೇಳುತ್ತಿದ್ದರೆ, ತಾನು ಕೋಪದಲ್ಲಿ “ ಏನು ಅಣಕಿಸ್ತಿದ್ದೀರಾ ? ಆದರೂ ಎಲ್ಲರೂ ಅಂದಂತೆ ನಿಮಗೆ “ಗಾನಕೋಗಿಲೆ” ಅಂತ ಬಿರುದು ಕೊಡಬೇಕಾಗಿದ್ದೇ ! ಎಷ್ಟಾದರೂ ಮಾಸದ ಬಣ್ಣ ಅಲ್ವಾ !” ಅಂತ ಏನೇನೋ ಅನಿಸಿಕೊಂಡ ವ್ಯಕ್ತಿ. ಆಫೀಸಿನಿಂದ ಬಂದ ತಕ್ಷಣ, ಅಮ್ಮ ನೋಡಲು ಯಾರೋ ಬರುತ್ತಿದ್ದಾರೆ ಅಂದಾಗ ಲಗುಬಗೆಯಿಂದ ತಯಾರಾಗುತ್ತ,  ಫೋಟೋ ಸಹ ನೋಡಿರಲಿಲ್ಲ. ಅದಕ್ಕೆ ಹೀಗಾಗಿದ್ದು.
ಅವನನ್ನು ನೋಡಿ, ಸಿಟ್ಟು ನೆತ್ತಿಗೇರಿತ್ತು. ಅವಳ ಕಣ್ಣಿಗೆ ಶಕ್ತಿ ಇದ್ದಿದ್ದರೆ ಅವನು ಅಲ್ಲೇ ಬೂದಿಯಾಗಿರುತ್ತಿದ್ದ. ಯಾರೇನು ಅಂದುಕೊಂಡರೂ ಸರಿಯೇ ಅಂತ ತೇಜ ಎದ್ದು ಒಳಗೆ ಬಂದುಬಿಟ್ಟಳು.
“ಏನೂ ತಿಳ್ಕೋಬೇಡಿ. ಈಗಷ್ಟೆ ಅಫೀಸಿನಿಂದ ಬಂದಿದ್ದಾಳೆ, ಸ್ವಲ್ಪ ತಲೆನೋವಂತೆ” ಅಂತ ತಾಯಿ ಸಂಜಾಯಿಷೀ ಹೇಳಿದ್ದಳು. ಮತ್ತೆ ಹತ್ತು ನಿಮಿಷಗಳಲ್ಲಿ ಅವರು ಹೊರಟುಹೋಗಿದ್ದರು.
ಆ ಹುಡುಗ ತನಗೆ ಖಂಡಿತಾ ಬೇಡ ಎಂದಿದ್ದಳು ತೇಜ.
*****
ಅರ್ಧರಾತ್ರಿ ಹನ್ನೆರಡರ ಸಮಯ. ಸುತ್ತೂ ನೀರವ ನಿಶಬ್ದ. ದಟ್ಟವಾದ ಕತ್ತಲಲ್ಲಿ ಆ ಬೆಡ್ರೂಮಿನಲ್ಲಿಯ ಚಿಕ್ಕ ಬಲ್ಬಿನ ಕಾಂತಿ ಕೋಣೆಯಲ್ಲಿ ಹರಡಿತ್ತು. ಹಾಸಿಗೆ ಮೇಲೆ ಮಲಗಿ ನಿದ್ರೆ ಮಾಡುತ್ತಿದ್ದ ವಿಶಾಲಾಕ್ಷಿಗೆ ಯಾರದ್ದೋ ನರಳಿಕೆ ಕೇಳಿಬಂತು. ಮನಸ್ಸಿನಲ್ಲಿ ಯಾವುದೋ  ಸಂಶಯ ಸುಳಿದಾಡಿತು. ಅದನ್ನು ನಿಜ ಮಾಡುತ್ತಾ ಪಕ್ಕದಲ್ಲೇ ಮಲಗಿದ್ದ ಗಂಡ ಶಂಕರಯ್ಯ ನಿಂದ ಆ ನರಳಿಕೆ ಜೊರಾಯಿತು. ಆಕೆ ನಿದ್ರೆಯ ಮತ್ತೆಲ್ಲಾ ಹಾರಿಹೋಯಿತು. ಎದ್ದು ಗಂಡನ ಕಡೆಗೆ ನೋಡಿದಳು. ಆತನ ಮುಖದಲ್ಲಿ ನೋವು ಸ್ಫುಟವಾಗಿ ಕಾಣುತ್ತಿತ್ತು. ಕ್ಷಣ ಕ್ಷಣಕ್ಕೂ ತೀವ್ರವಾದಂತೆ ಮುಖ ಕಿವುಚುತ್ತಿತ್ತು. ಬಾಯಿ ಸೊಟ್ಟವಾಗುತ್ತಿತ್ತು. ಕಣ್ಣು ತೆರೆದು ಮಾತಾಡುವ ಸ್ಥಿತಿಯಲ್ಲ್ರಿರಲಿಲ್ಲ.
ಆ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಅಂತ ತೋಚಲಿಲ್ಲ ವಿಶ್ಲಾಲಾಕ್ಷಿಗೆ. ಎರಡು ದಿವಸವಾಗಿತ್ತು ಈ ಮನೆಗೆ ಬಂದು. ಇನ್ನೂ ಅಕ್ಕ ಪಕ್ಕದವರು ಅಷ್ಟು ಪರಿಚಯವಾಗಿರಲಿಲ್ಲ. ತಮ್ಮ ಸ್ವಂತ ಮನೆಗೆ ಕೆಲ ದುರುಸ್ತಿ ಕೆಲಸಗಳು ಆಗಬೇಕಾದ್ದರಿಂದ ಸ್ವಲ್ಪಸಮಯಕ್ಕಾಗಿ ಮನೆ ಬದಲಿಸಿದ್ದರು. ಗಂಡು ಹುಡುಗರು ತಮ್ಮ ತಮ್ಮ ಕೆಲಸಗಳ ಮೇಲೆ ದೂರದ ಊರುಗಳಲ್ಲಿದ್ದರು. ತಾವು ಊರು ಬಿಡಲಾರದೇ ಇಲ್ಲೇ ಇದ್ದರು. ದುರುಸ್ತಿಯ ಸಮಯಕ್ಕೆ ತಮ್ಮ ಹತ್ತಿರ ಬರಲು ಮಕ್ಕಳು ಹೇಳಿದ್ದರೂ, ಬೇಡ ಎಂದುಕೊಂಡು ಅದೇ ಊರಲ್ಲಿ ಮತ್ತೊಂದು ಮನೆಗೆ ಬಾಡಿಗೆಗೆ ಹಿಡಿದು ಬಂದಿದ್ದರು. ಬೆಳೆಗ್ಗೆಯಿಂದ ಆದ ದಣಿವಲ್ಲಿ ಮೈ ಮರೆತು ನಿದ್ರೆ ಮಾಡಿದ್ದರು. ಆದರೆ ಅಷ್ಟು ನಿದ್ದೆಯಲ್ಲೂ ಪಕ್ಕದಲ್ಲಿ ಮಲಗಿದ್ದ ಗಂಡನ ನರಳಿಕೆ ವಿಶಾಲಾಕ್ಷಿಯನ್ನು ಎಬ್ಬಿಸಿತ್ತು. ಆತನ ಪರಿಸ್ಥಿತಿ ನೋಡಿ ಅವಳಿಗೆ ಕೈಕಾಲಾಡಲಿಲ್ಲ. ತಮ್ಮ ಮನೆಯ ಹತ್ತಿರವಾದರೆ ಹತ್ತಿರದ ಮನೆಗಳವರು ಅರ್ಧರಾತ್ರಿಯಾದರೂ ಸಹಾಯಕ್ಕೆ ಬರುತ್ತಿದ್ದರು. ಆದರೆ ಇಲ್ಲಿ ಯಾರದ್ದೂ ಪರಿಚಯವಿಲ್ಲ. ಗಂಡನ ಪರಿಸ್ಥಿತಿ ನೋಡಿ ಸುಮ್ಮನಿರಲು ಮನಸ್ಸಾಗದೇ ಓಡುತ್ತಾ ಪಕ್ಕದ ಮನೆಯ ಬಾಗಿಲನ್ನು ಬಡಿದಳು. ಅವಳ ಕಾತರದಲ್ಲಿ ಕಾಲಿಂಗ್ ಬೆಲ್ ಹೊಡೆಯಬೇಕೆಂಬುದು ಸಹ ನೆನಪಾಗಿರಲಿಲ್ಲ. ಒಳಗೆ ಲೈಟ್ ಬೆಳಗಿತು. “ಯಾರು’ ಎಂದು ಕೇಳಿಸಿತು ಒಂದು ಗಂಡಸಿನ ಧ್ವನಿ. ಕಿಟಕಿಯಿಂದ ಎರಡು ಕಣ್ಣು ಇಣುಕಿ ನೋಡಿದವು.
“ ನೋಡಿ, ನಮ್ಮವರು ಯಾಕೋ ನರಳ್ತಾ ಇದ್ದಾರೆ. ಬೇಗ ಸ್ವಲ್ಪ ಸಹಾಯ ಮಾಡಿ….” ನಡುಗುವ ದನಿಯಲ್ಲಿ ಗಟ್ಟಿಯಾಗೇ ಅಂದಳು ವಿಶಾಲಾಕ್ಷಿ.
ಮರುಗಳಿಗೆಯಲ್ಲಿ ಬಾಗಿಲು ತೆರೆದು ನೈಟ್ ಡ್ರಸ್ ನಲ್ಲಿದ್ದ ಒಬ್ಬ ಯುವಕ ಹೊರಗಡೆಗೆ ಬಂದ. ಒಳಗಿನಿಂದ ಆತನ ಅಮ್ಮ “ ಯಾರೋ?” ಎನ್ನುತ್ತ ಹೊರಬಂದರು.
“ಒಂದು ಸಾರಿ ಬಂದು ನೋಡಪ್ಪಾ ! ನನಗೆ ತುಂಬಾ ಹೆದರಿಕೆ ಆಗ್ತಿದೆ” ಎನ್ನುತ್ತಿದ್ದ ವಿಶಾಲಾಕ್ಷಿಯ ಹಿಂದೆ ನಡೆದವನು ಏನೋ ನೆನಪಾಗಿ ಒಳಗೆ ಹೋಗಿ ತನ್ನ ಪರ್ಸ್, ಕಾರಿನ ಚಾಬಿ ತಂದುಕೊಂಡ. “ಅಮ್ಮಾ ! ನೀವೇನು ಹೆದರ್ಕೋಬೇಡಿ” ಎನ್ನುತ್ತಾ, ಅಲ್ಲಿಂದಲೇ ಕಾರ್  ಲಾಕ್ ಓಪನ್ ಮಾಡಿ, ಏಳಲಾರದ ಸ್ಥಿತಿಯಲ್ಲಿದ್ದ ಶಂಕರಯ್ಯನವರನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಹೊರಗಡೆಗೆ ತಂದ. ವಿಶಾಲಾಕ್ಷಿ ಕಾರ್ ನ ಬಾಗಿಲು ತೆರೆದು ಹಿಡಿದಿದ್ದರೆ, ಆತನನ್ನ ಸೀಟಿನಲ್ಲಿ ಮಲಗಿಸಿ ಕಾರ್ ಮುಂದಕ್ಕೆ ಓಡಿಸಿದ. ವಿಶಾಲಾಕ್ಷಿಯ ಕಣ್ಣುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಡ್ರೈವಿಂಗ್ ಮಾಡುತ್ತಲೇ ಯಾರಿಗೋ ಫೋನ್ ಮಾಡಿದ. ಆಸ್ಪತ್ರಿಗೆ ತಲುಪುವ ಹೊತ್ತಿಗೆ, ಹೊರಗೆ ಸ್ಟ್ರ್ರೆಚರ್ ಹಿಡಿದು ಇಬ್ಬರು ನಿಂತಿದ್ದರು. ಅದರಲ್ಲಿ ಮಲಗಿಸಿ ಆತನನ್ನು ಒಳಗೆ ಕರೆದೊಯ್ದರು. ಅಲ್ಲಿಯ ವರೆಗೂ ಅಳುತ್ತಿದ್ದ ವಿಶಾಲಾಕ್ಷಿಯ ಹತ್ತಿರಕ್ಕೆ ಬಂದು “ ಅಮ್ಮಾ ! ಇನ್ನು ನೀವು ಹೆದರಬೇಡಿ. ಈ ಆಸ್ಪತ್ರಿಯಲ್ಲಿ ನನಗೆ ತಿಳಿದವರಿದ್ದಾರೆ. ಅವರು ನೋಡಿಕೊಳ್ತಾರೆ” ಅಂದ ಸಮಾಧಾನ ಮಾಡಿದ. ವಿಶಾಲಾಕ್ಷಿ ಮಾತ್ರ ಏನೂ ತೋಚದವಳಂತೆ ಅಳುತ್ತಾನೇ ಇದ್ದಳು. ಆ ಯುವಕ ಆಸ್ಪತ್ರಿಯ ಔಪಚಾರಿಕತೆಗಳನ್ನು ಮುಗಿಸಿದ.
ಹತ್ತು ನಿಮಿಷ ಕಳೆದ ಮೇಲೆ ಡಾಕ್ಟರ್ ಹೊರಬಂದು “ಅಮ್ಮಾ ! ಗಾಬರಿ ಏನು ಬೇಡ. ಚೇತರಿಸಿಕೊಳ್ಳುತ್ತಿದ್ದಾರೆ. ಹಾರ್ಟ್ ಎಟಾಕ್ ಆಗಿದೆ.  ಸರಿಯಾದ ಸಮಯಕ್ಕೆ ಇಲ್ಲಿಗೆ ಬಂದಿದ್ದೀರಿ. ಅದಕ್ಕೆ ಆಪತ್ತಿನಿಂದ ಬಚಾವಾದರು. ಸ್ವಲ್ಪ ತಡವಾಗಿದ್ದರೆ ತುಂಬಾ ಕಷ್ಟವಾಗೋದು” ಎಂದರು. ಅವರಿಗೆ ಕೈಯೆತ್ತಿ ನಮಸ್ಕರಿಸಿದಳಾಕೆ. ಮತ್ತೆ “ ಡಾಕ್ಟರ್! ಸ್ವಲ್ಪ ಅರ್ಜೆಂಟಾಗಿ ಬಂದೆವು. ನಿಮಗೆ ಕೊಡಬೇಕಾದ ಫೀಸು ತರಲಿಲ್ಲ. ಮತ್ತೆ ಕೊಡ್ತುತ್ತೇನೆ. ಈ ಹುಡುಗ ದೇವರ ಹಾಗೆ ನಮ್ಮನ್ನು ಇಲ್ಲಿಗೆ ಕರೆತಂದು ಪ್ರಾಣ ಉಳಿಸಿದ “ ಅಂದರು. ಅದಕ್ಕೆ ಡಾಕ್ಟರ್ “ ಫರ್ವಾ ಇಲ್ಲಮ್ಮಾ ! ಈ ಹುಡುಗ ನಮಗೆ ತುಂಬಾ ತಿಳಿದವನೇ. ನಿಜಕ್ಕೂ ನೀವು ತುಂಬಾ ಅದೃಷ್ಟವಂತರು” ಎನ್ನುತ್ತಾ ಹೊರಟರು.
ಆ ಹುಡುಗನ ಕಡೆಗೆ ತಿರುಗಿ “ ತುಂಬಾ ಧನ್ಯವಾದಾಪ್ಪಾ ! ನಾವು ಯಾರೂ ಅಂತ ತಿಳಿಯದೇ ಹೋದರೂ ದೇವರಂತೆ ಬಂದು ನಮ್ಮನ್ನು ಕಾಪಾಡಿದಿ. ನಿನ್ನ ಮೇಲು ಮರೆಯಲು ಸಾಧ್ಯವಿಲ್ಲ.”ಎಂದರು. ಅದಕ್ಕೆ ಆ ಯುವಕ “ ಅಷ್ಟು ದೊಡ್ಡ ಮಾತು ಬೇಡ. ನನ್ನ ಜಾಗದಲ್ಲಿ ಯಾರಿದ್ದರೂ ಇದೇ ಮಾಡುತ್ತಿದ್ದರು” ಅಂದ.
“ಈಗಿನ ಪೀಳಿಗೆಯ ಹುಡುಗರು ಹಾಗಿಲ್ಲಪ್ಪಾ ! ಇಷ್ಟಕ್ಕೂ ಮುಂಚೆ ನಾವು ಏನು ತಿನ್ನುತ್ತಿದ್ದರೂ ನಮ್ಮ ಜೊತೆ ಪ್ರಯಾಣ ಮಾಡುತ್ತಿದ್ದವರಿಗೂ ಕೊಡುವ ಸಂಪ್ರದಾಯವಿತ್ತು. ಆದರೆ ಈಗ ಆ ಬಂಧಗಳು ಮರೆಯಾಗಿವೆ. ಪಕ್ಕಕ್ಕಿದ್ದವರ ಜೊತೆ ಏನೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ತಾಂತ್ರಿಕತೆ ಬೆಳೆಯುತ್ತ ಮನುಷರ ನಡುವಿನ ಸಂಬಂಧ ದೂರವಾಗಿಸಿದ್ದು ಒಂದು ಕಾರಣವಾದರೆ, ನಂಬಿಸಿ ಮೋಸ ಮಾಡೋ ಕೆಲ ಸಂಘಟನೆಗಳು ಮತ್ತೊಂದು ಕಾರಣ. ಅಕ್ಕ ಪಕ್ಕದಲ್ಲಿ ಯಾರೂ ತಿಳಿಯದು ಎನ್ನುವ ಆತಂಕ ದೂರ ಮಾಡಿದೆಯಪ್ಪಾ ನೀನು. ಸಣ್ಣ ವಯಸ್ಸಾದರೂ ದೊಡ್ಡ ಮನಸ್ಸು ನಿಂದು. ಚಿಕ್ಕವರಿಗೆ ನಮಸ್ಕಾರ ಮಾಡಿದರೆ ಆಯುಃಕ್ಷೀಣ ಎನ್ನುತ್ತಾರೆ. ಆದರೆ ನನ್ನ ಆಯಸ್ಸು ಕೂಡ ಹಾಕಿಕೊಂಡು ಬಾಳಪ್ಪಾ ! ನಮ್ಮ ಮಕ್ಕಳು “ಯಾರೂ ಹತ್ತಿರ ಇಲ್ಲ. ಹೇಗಿರ್ತೀರಿ?” ಎಂದು ಗಾಬರಿ ಪಡುತ್ತಿದ್ದರು ಅವರನ್ನ ಮರೆಸುವ ಹಾಗೆ ಸಿಕ್ಕಿದ್ದಾರೆ ಅಂತ ಹೇಳ್ತೀನಿ ನಾಳೆ”ಎನ್ನುತ್ತ ಆನಂದ ಬಾಷ್ಪ ಸುರಿಸಿದರು ವಿಶಾಲಾಕ್ಷಿ ಭಾವುಕರಾಗಿ.
“ಅಷ್ಟು ಮಾತು ಯಾಕೆ ಬಿಡಿ”ಎನ್ನುತ್ತ ಹೊರಟ ಆ ಯುವಕ.
* * * * * *


ಒಂದು ವಾರ ಕಳೆದು “ ಅಮ್ಮಾ ! ನಾನು ಆ ದಿನ ಬಂದು ನೋಡಿಹೋದ ಹುಡುಗನ್ನ ಮದುವೆಯಾಗುತ್ತೇನೆ” ಎಂದ ತೇಜಳನ್ನ ವಿಚಿತ್ರವಾಗಿ ನೋಡಿದರು ತಂದೆತಾಯಿ.
“ಅದೇನೇ ? ಕಾಗೆ ಮೂತಿಗೆ ತೊಂಡೇಹಣ್ನು ಇದ್ದ ಹಾಗೆ. ಮುಖದಲ್ಲಿ ಅದೆಷ್ಟು ಕಳೆ ಇದ್ದರೂ ಕಪ್ಪಾಗಿರೂ ಆ ಹುಡುಗ ನಿನಗೇನು ಇಷ್ಟವಾಗಿದ್ದಾನೇ?” ಎಂದ ಅಮ್ಮನ ಮಾತಿಗೆ
“ಅಮ್ಮಾ ! ಬಾಹ್ಯ ಸೌಂದರ್ಯ ಅಷ್ಟು ಮುಖ್ಯನಾ ? ಅಂತಃ ಸೌಂದರ್ಯನಾ ? ಮೊನ್ನೆ ಅಜ್ಜ ಆಸ್ಪತ್ರಿಯಲ್ಲಿದ್ದಾರೆ ಅಂತ ಹೋಗಿದ್ದೆವಲ್ಲ. ಆಗ ಅಜ್ಜಿ ಪಕ್ಕದ ಮನೆ ಹುಡುಗ ತಮ್ಮನ್ನು ಅರ್ಧರಾತ್ರಿಯಲ್ಲಿ ಅಸ್ಪತ್ರಿಗೆ ಕರೆದುಕೊಂಡ ಹೋದ ಕತೆ ಅದೆಷ್ಟು ವಿವರವಾಗಿ ಹೆಳಿದರು ಗೊತ್ತಾ ! ಧನ್ಯವಾದ ಹೇಳೋಣ ಅಂತ ಅವರ ಮನೆಗೆ ಹೋದೆ. ಆ ಹುಡುಗ ಮನೆಯಲ್ಲಿರಲಿಲ್ಲ. ಆದರೆ ಅಲ್ಲಿದ್ದ ಫೋಟೋ ಆ ಮನೆಯಲ್ಲಿಯ ಮಗ, ಮಗಳ ಪರಿಚಯ ನೀಡಿತ್ತು. ಆ ಮಗಳು ಮೊನ್ನೆ ನಾನು ಕಳೆದುಕೊಂಡ ಸೆಲ್ ಫೋನ್ ಕೊಟ್ಟ ಹುಡುಗಿ. ಮಗ ನನ್ನ ನೋಡಲು ಬಂದ ಹುಡುಗ. ಅಷ್ಟು ಒಳ್ಲೆಯ ವ್ಯಕ್ತಿತ್ವ ಇರುವ ಮನೆಗೆ ಹೋದರೆ ನನಗೆ ಸಂತೋಷ ಸಿಗಲ್ವಾ? ಆ ಹುಡುಗ ನನ್ನನ್ನು ಚೆನ್ನಾಗಿ ನೋಡಿಕೊಳ್ಳಲ್ವಾ ? ನನ್ನ ಬಾಳು ಅರಳಿದ ವಸಂತವಾಗುವುದಿಲ್ಲವಾ? ಒಂದು ಹುಡುಗಿಗೆ ಇದಕ್ಕಿಂತ ಏನು ಬೇಕು ಹೇಳಮ್ಮಾ ?” ಎನ್ನುತ್ತಿದ್ದ ತೇಜಳ ಮಾತಿಗೆ ಹೌದೆನ್ನುವಂತೆ ದೂರದ ದೇವಸ್ಥಾನದ ಗಂಟೆ ಮಂಗಳ ಹಾಡಿತು.
————————————————

ತೆಲುಗು ಮೂಲ: ನಾಮನಿ ಸುಜನ
ಕನ್ನಡಕ್ಕೆ: ಚಂದಕಚರ್ಲ ರಮೇಶಬಾಬು

Leave a Reply

Back To Top