ಆದಪ್ಪ ಹೆಂಬಾ ಮಸ್ಕಿ ಕವಿತೆ-ಬದುಕ ಬಂಡಿ

ಕಾವ್ಯ ಸಂಗಾತಿ

ಆದಪ್ಪ ಹೆಂಬಾ ಮಸ್ಕಿ

ಬದುಕ ಬಂಡಿ

ಅಮ್ಮ ನಿತ್ಯ ನೆನಪಾಗುತ್ತಾಳೆ
“ಇಷ್ಟೊತ್ತಾದ್ರೂ ಮಕ್ಕೊಂಡೀಯಲಪ ಎದ್ದೇಳು”
ಇಂದಿಗೂ ಸ್ವರ್ಗದಿಂದ
ಅಮ್ಮನ ಕಾಟ
ಗೊಣಗುತ್ತಲೇ ಏಳುತ್ತೇನೆ
ಅವಳಿಗೊಮ್ಮೆ ನಮಿಸುತ್ತ ||

ಅಮ್ಮನ ಪಕ್ಕದಲ್ಲಿರುವ
ಅಪ್ಪನೂ ಕಮ್ಮಿಯಿಲ್ಲ
ಎಡಗೈಯಿಂದ ಗುಮ್ಮುವುರೇ
“ಹೇತು ಹಿಮ್ಮಡ ತೊಳಕಬೇಕು
ಬೂದಿ ಹಚ್ಚಿ ಮುಂಗೈ ತೊಳಕಬೇಕು” ಎಂದು
ಬೂದಿ ಇಲ್ಲದ ನನಗೆ
ಹ್ಯಾಂಡ್ ವಾಷೇ ಗತಿ
ಹಿಮ್ಮಡಿಯನ್ನು ಹಸಿಮಾಡುತ್ತೇನೆ
ಅಪ್ಪನ ನೆನೆಯುತ್ತ ||

ಪ್ರಾಣಕ್ಕೆ ಪ್ರಾಣ ಕೊಡುವ
ಸ್ನೇಹಿತರು
ಹಿಂದಿನಿಂದಲೂ ಮುಂದಿನಿಂದಲೂ
ಇದೇ ಪ್ರಾಣಕ್ಕೆ
ಚೂರಿ ಹಾಕಿದ
ಸಹೋದದರರು
ಮರೆಯುವುದಾದರೂ ಹೇಗೆ
ನಿತ್ಯ ವಂದಿಪರೆನಗೆ
ಅಳಿಸದು ಅವರ ನೆನಪು ||

ಮನದಲ್ಲೇ ಮಂಡಿಗೆ ತಿನ್ನಿಸಿದ ಮನದನ್ನೆ
ಮಾಜಿಯಾಗಳು
ಎಂದೆಂದೂ
ಬಹುಕಾಲದ ಗೆಳತಿಯಷ್ಟೆ ||

ಮೌನದಿಂದಲೇ
ಮುಗುಳು ನಗೆ ಸೂಸಿ
ಕಣ್ಣಂಚ ಮಿಂಚ
ಸ್ಪುರಿಸಿದ ಮಧ್ಯದರಸಿ
ಕೈಗೆಟುಕದ ಸಿಹಿ ದ್ರಾಕ್ಷಿ ||

ಕುಂತರೂ ನಿಂತರೂ
ನನ್ನನ್ನೇ ಧ್ಯೇನಿಸುವ
ನನ್ನ ಬುದುಕು
ನನ್ನ ಸಂಗಾತಿ ||

ಎಲ್ಲರ ಒಕ್ಕೊರಲಿನ
ಮಾತು ಒಂದೇ, “ವಯಸ್ಸಾಗುತಿದೆ ನಿಮಗೆ ತುಸು ಗಾಂಬಿರ್ಯವಿರಲಿ”
ಪಾಲಿಸುವೆ ಶಿರಸಾವಹಿಸಿ
ತುಂಟ ನಗೆ ಬೀರುತ್ತ ||

ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ನೋವಿರಲಿ ನಲಿವಿರಲಿ
ಬಂದದ್ದು ಬರಲಿ
ಒಂದೇ ಪ್ರಾರ್ಥನೆ ನನದು
ಆ ದೇವರಲ್ಲಿ
ಕಣ್ಣು ಮುಚ್ಚುವವರೆಗೆ ಇರಲಿ
ನಗು ನೆಮ್ಮದಿ ಸದಾ ಜೊತೆಯಲ್ಲಿ ||


3 thoughts on “ಆದಪ್ಪ ಹೆಂಬಾ ಮಸ್ಕಿ ಕವಿತೆ-ಬದುಕ ಬಂಡಿ

    1. ನಿಮ್ಮ ಕವಿತೆ ಓದಿ ನನ್ನ ತಾಯಿಯ ನೇನಪು ಮರುಕಳಿಸಿ ಕಣ್ಣಂಚಿನಲಿ ನೀರು ತಂತು..ತಾಯಿಯ ಪ್ರೀತಿನೇ ಹಾಗೆ ಅಲ್ವಾ ಸರ್…ಅದ್ಭುತ ಕವಿತೆ..

Leave a Reply

Back To Top