ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ಜಗವೇ ನಾಟಕರಂಗ
“ಜಗದೀಶನಾಡುವ ಜಗವೇ ನಾಟಕರಂಗ” ನಾರದರು ಹಾಡಿಕೊಳ್ಳುತ್ತಾ ಬರುವ ಈ ಹಾಡನ್ನು ಚಿಕ್ಕಂದಿನಿಂದಲೇ ಕೇಳಿಯೇ ಬೆಳೆದುಬಂದದ್ದು ನಾನಾ ಅರ್ಥ ಕೊಡುವ ಈ ಸಾಲನ್ನು ಆ ಚಿಕ್ಕ ಮಗು ಅರ್ಥೈಸಿಕೊಂಡಿದ್ದು ಆ ದೇವನು ಭೂಮಿಯ ಮೇಲೆ ನಾಟಕ ಆಡಿಸುತ್ತಾನೆ . ಅಕ್ಷರಶಃ ಪದಗಳ ಅರ್ಥವನ್ನಷ್ಟೇ ಆ ವಯಸ್ಸಿಗೆ ಅದನ್ನು ಮೀರಿ ಅರ್ಥವಾಗುತ್ತಿರಲಿಲ್ಲ ಬಿಡಿ ಆದರೂ ಅದು ನಿಜವೇ ತಾನೆ? ಕಣ್ಣು ಕೋರೈಸುವ ದೀಪಗಳಿರದ ಪ್ರಸಾಧನವಿರದ ಯಾವುದೇ ರಿಹರ್ಸಲ್ ಬೇಡದ ದಿನನಿತ್ಯದ ನಾಟಕ ತಾನೆ ಈ ಜೀವನ? ಹುಟ್ಟಿದಂದಿನಿಂದ ರಂಗಪ್ರವೇಶ ಸತ್ತನಂತರ ಅಂಕದ ಪರದೆ ಜಾರಿದ ನಡುವಿನಲ್ಲಿ ಏನೆಲ್ಲಾ ವೇಷಭೂಷಣ ಆಡಂಬರ ಆಟ ಸಂಭಾಷಣೆ ಗೋಳಾಟ ಮೆರೆದಾಟ . ಒಟ್ಟಿನಲ್ಲಿ ನವರಸಗಳ ಅಪೋಷಣೆ ಆವಾಹನೆಯಾಗಿ ಆವರಿಸಿ ನಾವೇ ನಾವಾಗಿ ನಟಿಸುವುದು ಈ ಬದುಕು ಆಧ್ಯಾತ್ಮಿಕ ತಳಹದಿಯ ಮೇಲೆ ಹೇಳುವುದಾದರೆ ಮೇಲೆ ನಿಂತು ಆಡಿಸ್ತಾನೆ ಗೊಂಬೆ ಆಡ್ಸೋನು. “ತೇನವಿನಾ ತೃಣಮಪಿ ನ ಚಲತಿ” ಎನ್ನುವ ಸಿದ್ಧಾಂತವನ್ನು ನಂಬುವುದಾದರೆ ಇಡೀ ವಿಶ್ವವೇ 1ನಿಯಮಬದ್ಧ ಯೋಜಿತ ರೀತಿಯಲ್ಲಿ ತನ್ನಷ್ಟಕ್ಕೆ ತಾನೆ ನಡೆಯುತ್ತಿವೆ ಯಾರೊಬ್ಬರೂ ಆ್ಯಕ್ಷನ್ ಕಟ್ ಹೇಳದಿದ್ದರೂ ಸ್ಕ್ರಿಪ್ಟ್ ರೈಟಿಂಗ್ ಮಾಡದಿದ್ದರೂ ಮುಂದಾಗುತ್ತಲೇ ಮುಂದು ಉರುಳುತ್ತಲೇ ಇರುತ್ತದೆ ಕಾಲ . ಇದೆಲ್ಲದರ ಹಿಂದೆ 1 ಅಗೋಚರ ಶಕ್ತಿ ಇದೆ ಅಂದುಕೊಳ್ಳುವುದಾದರೆ ಅದೇ ಈ ನಾಟಕದ ನಿರ್ದೇಶಕ ಸೂತ್ರಧಾರ . ಆ ಬ್ರಹ್ಮಲಿಖಿತದಂತೆಯೇ ಎಲ್ಲಾ ಎಲ್ಲವೂ ಎಲ್ಲರೂ ನಡೆಯುವುದು . “ನಾನೊಂದು ಗೊಂಬೆಯು ನೀ ಸೂತ್ರಧಾರ” ಎಲ್ಲವನ್ನೂ ಆ ಶಕ್ತಿಗೊಪ್ಪಿಸಿದರೆ ಅರ್ಪಿಸಿದರೆ ನಿರಮ್ಮಳ ನೆಮ್ಮದಿ ಆದರೆ ಆ ಮನಃಸ್ಥಿತಿ ಸಾಧಿಸುವುದು ಕಷ್ಟ ಸಾಧ್ಯದ ಕೆಲಸವೇ ಸರಿ. ಕೆಲವೊಮ್ಮೆ ಜೀವನದ ಓಟವನ್ನು ಓಡುವಾಗ ಅಂದುಕೊಂಡ ಹಾಗೆ ಆಗದಿದ್ದಾಗ ಎಣಿಸದೆಯೇ ಒಳ್ಳೆಯದಾದಾಗ ಇದೆಲ್ಲದರ ಹಿಂದೆ ಯಾವುದೋ ಸೂತ್ರವಿದೆ; ಅದು ಆಡಿಸಿದ ಹಾಗೆ ನಾವು ಅನಿಸುವುದಂತೂ ಹೌದು . ಆ ಭಗವಂತನ ದಿಗ್ದರ್ಶನದಲ್ಲಿ ಭೂಮಿಯೆಂಬ ರಂಗವೇದಿಕೆಯಲ್ಲಿ ಅವಿರತ ಅವ್ಯಾಹತ ನಡೆಸಲ್ಪಡುತ್ತಿರುವ ಘಟನಾವಳಿಗಳೇ ನಾಟಕ . ಅಂತೆಯೇ ಈ ಜಗವೇ ನಾಟಕರಂಗ .
ಇನ್ನು ಲೌಕಿಕ ವಿಚಾರಕ್ಕೆ ಬಂದರೆ ಮುಖವಾಡಗಳ ಸಂತೆಯೇ ಈ ಪ್ರಪಂಚ ಮನದೊಳಗೊಂದು ಹೊರಗೊಂದು ಕೃತಿಯಲ್ಲೊಂದು ತೋರುವ ಜನರೆಲ್ಲ ನಟನಾ ಚತುರರೇ ; ಅಭಿನಯ ವಿಶಾರದರು. ಹಾಗಾಗಿ ಜಗನ್ನಿಯಾಮಕನ ನಾಟಕದಲ್ಲಿ ಒಳಗೊಳಗೆ ಮತ್ತಷ್ಟು ಮಗದಷ್ಟು ರೂಪಕಗಳು ರೂಪುಗೊಳ್ಳುತ್ತಲೇ ಇರುತ್ತವೆ ,ಆಡುವವರು ಆಡಿಸುವವರು ಇದ್ದೇ ಇರುತ್ತಾರೆ . ಯಾವುದು ನಿಜ ಯಾವುದು ಸುಳ್ಳು ಯಾರು ನಮ್ಮವರು ಯಾರು ಪರರು ಎಂದು ಗುರುತಿಸಲು ಆಗದಷ್ಟು ಹಾಸುಹೊಕ್ಕಾಗಿದೆ ನಾಟಕ ಜೀವನದಲ್ಲಿ . ದುರ್ಜನರ ವಿಷಯ ಬಿಡಿ ಜೀವನದಲ್ಲಿ ಎಲ್ಲರೊಳಗೊಂದಾಗಿ ಬಾಳಲು ಸಾಮರಸ್ಯದಿಂದ ಇರಲು ಕೆಲವೊಮ್ಮೆ ನಾಟಕ ಮಾಡಬೇಕಾಗುತ್ತದೆ ಇದು ಒಳಿತಿಗಾಗಿ ಅಂತಹವರಿಗೆ ಡಿವಿಜಿಯವರು ಹೀಗೆ ಹೇಳಿದ್ದು
ಕಲೆಗಳಲಿ ಪರಮಕಲೆ ಜೀವನದ ಲಲಿತ ಕಲೆ
ಕಲಿಸಲದಳವಲ್ಲ ಬಾಹ್ಯ ಬೋಧನೆಯಿಂ
ಒಲಿದೊಲಿಸಿಕೊಳುವ ಲೌಕಿಕ ನಯದ ಸೊಗಸ ನೀಂ
ತಿಳಿವುದೊಳಹದದಿಂದ _ ಮಂಕುತಿಮ್ಮ
(೮೨೫)
ಒಳ ಹದದಿಂದ ಅರಿವು ವಿಚಕ್ಷಣೆ ಹೊಂದಿ ಲೌಕಿಕ ನ್ಯಾಯದ ಸೊಬಗನು ಹೋಲಿಸಿಕೊಂಡರೆ ಈ ಜೀವನ ನಾಟಕದ ಅಭಿನಯ ಸುಲಭ ಆದರೆ ಇದು ಅನುಭವವೇದ್ಯ ಜನ್ಮಜಾತ ಯಾರೊಬ್ಬರೂ ಕಲಿಸಿ ಕೊಡಲಾಗದು ಎಂಬುದು ನಿತ್ಯಸತ್ಯ
ಮುಂದೆ ಶೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕದಲ್ಲಿ ಮ್ಯಾಕ್ ಬೆತ್ ಹೇಳುವ ಈ ನುಡಿಗಳನ್ನು ಕೇಳಿ
ಬಾಳ್ ಒಂದು, ನಡೆವ ನೆಳಲ್, ಅನಿತೆ ಅದು ರಂಗದಲಿ
ಠೀವಿಯಿಂದಾಟೋಪದಿಂದೊಂದು ತಾಸಾಡಿ
ಬಳಿಗಂ ಏನುಂ ಕೇಳಬಾರದಿಹ ಬಡ ನಟನು
ಅದು ಬಾಲಿಶಂ ಪೇಳ್ದ, ಸದ್ದುಗದ್ದಲ ತುಂಬಿ ಅರ್ಥಮೇನಿರದ ಕಥೆ
ಅಂದರೆ ಜೀವನ ನಿತ್ಯ ನಡೆಯುವ ನಾಟಕ ನಾವು ಪಾತ್ರಧಾರಿಗಳು ಭಗವಂತ ಹೇಳಿ ದಂತೆ ನಡೆಸುವುದಷ್ಟೇ ನಮ್ಮ ಧರ್ಮ ಕರ್ಮ ಅರ್ಥವಿರುವುದೋ ಇಲ್ಲದ್ದು ಬೇಕಿರುವುದು ಬೇಡವೋ ಎಲ್ಲಾ ನಮ್ಮರಿವಿಗೆ ಮೀರಿದ್ದು ನಾವು ಬಡ ನಟರಷ್ಟೇ ಹೇಳಿದ್ದನ್ನು ಮಾತ್ರ ಮಾಡುವುದು. ತೀರ ವೈಯಕ್ತಿಕ ನೆಲೆಗೆ ಬಂದರೆ ಹೆಣ್ಣು ಸಹ 1ಪರಿಪೂರ್ಣ ಅಭಿನೇತ್ರಿ . ಜೀವನದ ವಿವಿಧ ಮಜಲುಗಳಲ್ಲಿ ವಿವಿಧ ಪಾತ್ರ ವಹಿಸುವ ಆಕೆ ಅಭಿನಯಿಸದಿದ್ದರೂ ಪಾತ್ರ ವಹಿಸುತ್ತಾಳೆ ತಾನೇ ಪ್ರೀತಿಯ ಮಗಳು ಅಮ್ಮ ಪ್ರೇಯಸಿ ಸೋದರಿ ನಾನಾ ಭಾವಗಳ ಪೂರ್ಣ ಮಮತೆ ಅನ್ನಿಸುವ ಹೆಣ್ಣಿಗೆ ಜೀವನದ ನಾಟಕವಲ್ಲದೆ ಇನ್ನೇನು ಎಷ್ಟೋ ವೇಳೆ ತನ್ನತನ ಸೋರಲು ಆಗದೆ ಪಾತ್ರೆಗೆ ಹಾಕಿದ ನೀರಿನ ತರಹ ಹೆಣ್ಣು ಜಗನ್ನಾಟಕದ ಸೂತ್ರಧಾರಿ ಗಣಿಯೂ ಹೌದು ಪಾತ್ರಧಾರಿಯೂ ಹೌದು . ಈ ಬಗ್ಗೆ ನಾನು ಬರೆದ ಕವನವೊಂದನ್ನು ಹಂಚಿಕೊಳ್ಳುತ್ತಾ ಈ ಲೇಖನವನ್ನು ಮುಗಿಸುವೆ .
ಅಭಿನೇತ್ರಿ
ಹೆಣ್ಣಾಗಿ ನೀ ಭುವಿಗೆ ಬರುವ ಬಹಳ ಮೊದಲೇ
ಸಜ್ಜಾಗಿಹುದು ವೇದಿಕೆ. ವಹಿಸಲು ಪಾತ್ರಗಳ ಸಾಲು ಸಾಲೇ
ಜೀವನ ಪಾಠವ ಕಲಿಸುವ ಈ ಜಗವೊಂದು ರಂಗಶಾಲೆ
ಅಣಿಯಾಗುˌ ಸುಖವಿರಲಿ ಬರಲಿ ಕಷ್ಟಗಳ ಸರಮಾಲೆ.
ಬಾಲ್ಯದಲಿ ನೀನಾಗಬೇಕು ಮಗಳು ಸೋದರಿ ವಿದ್ಯಾರ್ಥಿ
ನಂತರದಲಿ ಸಂಗಾತಿಯ ಮನದನ್ನೆ ಆಪ್ತ ಸಲಹೆಗಾರ್ತಿ
ಮಕ್ಕಳಿಗೆ ಪ್ರೀತಿ ಪ್ರೇಮ ಧಾರೆಯೆರೆವ ಮಮತಾಮೂರ್ತಿ
ಬಂಧುಬಳಗ ನೆರೆಹೊರೆ ಮಿತ್ರರಿಗೆ ವಿಶ್ವಾಸದ ಸಹವರ್ತಿ.
ಜೀವನದ ರಂಗಭೂಮಿಯಲಿ ಭೂಮಿಕೆಗಳ ನಿರ್ವಹಿಸುತ್ತಾ
ಅಸ್ಮಿತೆಯಾಗಿ ತನ್ನ ಅಸ್ತಿತ್ವದ ಸುಳಿವ ಹೊಳಹಿಸುತ್ತಾ
ಬಾಳ ಗಮ್ಯದ ಕಡೆಗೆ ಪಯಣಿಸುತಿಹ ಯಾತ್ರಿ
ಓ ಹೆಣ್ಣೆ ನಿಜ ಅರ್ಥದಲಿ ನೀನು ಶ್ರೇಷ್ಠ ಅಭಿನೇತ್ರಿ.
ಸುಜಾತ ರವೀಶ್
ಯಾರು ಏನೇ ಅಂದುಕೊಂಡರೂ ಮುಗಿಸಲಾಗದ ಈ ಜಗದ ನಾಟಕ ಅಂಕದ ಪರದೆ ಬೀಳುವತನಕ ಸಹನಟರೊಂದಿಗೆ ಹೊಂದಿ ಬಾಳೋಣ ಆ ನಿರ್ದೇಶಕನಿಗೆ ಅಚ್ಚುಮೆಚ್ಚಾಗೋಣ. ಈ ಜನ್ಮದ ನಾಟಕ ಮುಗಿಯಿತೆಂದರೆ ದೇಹವೆಂಬ ದಿರಿಸು ಬಿಚ್ಚಿಟ್ಟು ಮತ್ತೊಂದು ನಾಟಕಕ್ಕೆ ಮತ್ತೊಂದು ವೇಷದೊಂದಿಗೆ ಸಜ್ಜಾಗೋಣ ಅಲ್ಲವೇ ?
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು