ಕಾವ್ಯ ಸಂಗಾತಿ
ರಿಣ
ಲಲಿತಾ ಪ್ರಭು ಅಂಗಡಿ
ಬದುಕೆ , ಮೆಲ್ಲನೆ ಮುನ್ನಡೆ ಮುಂದೆ
ರಿಣ ತೀರಿಸುವುದು ಇನ್ನೂ ಹಾಗೆಯಿದೆ
ತುಸು ನೋವು ಮಾಯಿಸುವುದಿದೆ
ಸ್ವಲ್ಪ ಭಾರ ನಿಭಾಯಿಸುವುದಿದೆ
ತೀವ್ರಗತಿಯಲಿ ನೀ ಮುನ್ನುಗ್ಗುವದರಿಂದ
ಕೆಲವರಿಗೆ ಸಿಟ್ಟು ಬಂದಿದೆ ಕೆಲವು ಉಳಿದುಕೊಂಡಿವೆ
ಸಿಟ್ಟಿಗೆದ್ದವರ ಸಮಾಧಾನ ಮಾಡುವದಿದೆ
ಅಳುವವರ ನಗಿಸುವದಿದೆ
ಆಸೆ ಆಕಾಂಕ್ಷೆಗಳು ಅರ್ಧ-ಮರ್ದಆಗಿವೆ
ಕೆಲವು ಪೂರ್ತಿ ಆಗಬೇಕಿದೆ
ಕನಸುಗಳು ಮನದಲ್ಲಿ ಕೊನೆಯುಸಿರೆಳಿದಿವೆ
ಅವುಗಳನು ಮಣ್ಣು ಮಾಡುವದಿದೆ
ನಂಟು ಗಂಟುಗಳಾಗಿ ಹರಿದುಕೊಂಡಿವೆ
ಕೂಡುವುದು ಅಷ್ಟು ಕೈಬಿಟ್ಟು ಹೋಗಿದೆ
ಗಾಯಗಳ ಮಾಯಿಸುವದಿದೆ
ನೀ ಮುನ್ನಡೆ ಮುಂದೆ, ನಾ ಬರುತ್ತೆನೆ ಹಿಂದೆ
ಬಿಟ್ಟು ಬದುಕಬಲ್ಲನೆ ನಿನ್ನ?
ಉಸಿರಿನ ಮೇಲೆ ಹಕ್ಕು ಯಾರಿಗಿದೆ? ಬದುಕೆ, ಮೆಲ್ಲಗೆ ಮುನ್ನಡೆ ಮುಂದೆ
ರಿಣ ತೀರಿಸುವುದು ಇನ್ನೂ ಹಾಗೆಯಿದೆ
ಸೋತ ಮನಸುಗಳ ಗೆಲ್ಲುವದಿದೆ
ಮನಸು ಹಗುರಾಗಿಸುವದಿದೆ
ಎಲ್ಲೋ ದೀಪ ಮಿಣುಕತಲಿದೆ
ಅದನು ಬೆಳಗಿಸುವದಿದೆ
ಬದುಕೆ, ಮೆಲ್ಲನೆ ಮುನ್ನಡೆ ಮುಂದೆ
ರಿಣ ತೀರಿಸುವುದು ಇನ್ನೂ ಹಾಗೆ ಇದೆ.