ಅಂಕಣ ಸಂಗಾತಿ

ಈ ಬಂಧನ

ಮಹಾದೇವಿ ಪಾಟೀಲ.

“ಮದುವೆ ಎಂಬ ಶ್ರೇಷ್ಠ ಬಂಧ”

ಸ್ನೇಹಿತರೇ ಮತ್ತೊಮ್ಮೆ ನಿಮಗೆ ಈ ಬಂಧನದ ಅಂಕಣಕ್ಕೆ ಸಂಬಂಧಗಳ ಆಳ ಅರಿಯುವ ಪಯಣಕ್ಕೆ ಸ್ವಾಗತ ..ಪ್ರತಿ ವಾರವೂ ನನ್ನ ಲೇಖನ ಓದುವ ಮೂಲಕ ಸಂಬಂಧಗಳನ್ನು‌ ನಿಭಾಯಿಸುವ ಸಂಬಂಧಗಳ ಆಳ ಅರಿತು ತಮ್ಮ ತಮ್ಮ ತಪ್ಪುಗಳಿದ್ದರೆ ತಿದ್ದಿಕೊಳ್ಳುವ ಮೂಲಕ ಸುಖವಾಗಿ ಬಾಳಬೇಕು ಎನ್ನುವುದು ನನ್ನ ಆಶಯ‌‌
ಬಂಧುಗಳೇ….!
ಇಂದು ನಾನು ಹೇಳಲು ಹೊರಟಿರುವ ಈ ಬಂಧನ ಪ್ರಪಂಚದ ಅತ್ಯದ್ಭುತ ಎನ್ನಲಾದ ಬಂಧನ.. ಬದುಕಿನ ಕೊನೆವರೆಗೂ ಈ ಒಂದು ಬಂಧನ ಗಟ್ಟಿಯಾಗಿ ಇದ್ದರೆ ಸಾಕು ಸ್ವರ್ಗಕ್ಕೆ ಮೂರೇ ಗೇಣು ..ಅದು ಯಾವುದು ಅಂತ ಯೋಚ್ನೆ ಮಾಡ್ತಿದ್ದೀರಾ ? ಅದೇ ವಿವಾಹ ಬಂಧನ ..
ಹುಡುಗ ಹುಡುಗಿ ಆಗಿದ್ದವರು ಮದುಮಗ‌ ಮದುಮಗಳು‌ ಆಗಿ ಗಂಡ ಹೆಂಡತಿ ಆಗುವ ಭವ್ಯ ಬಂಧನ..ಎಲ್ಲಿಯೋ ಇದ್ದವರು ಒಂದೇ ಸೂರಿನಡಿ ಸೇರಿ ಭವಿಷ್ಯದ ಕನಸು ಕಾಣುವ ಸಂಭ್ರಮದ ಬಂಧನ..ಅಪರಿಚಿತರೆಲ್ಲ ಸೇರಿ ಪರಿಚಿತರಾಗುವ ಅನುಬಂಧನ,ಎರಡು ಮನೆಗಳು ಒಂದಾಗುವ ಮೂಲಕ ಅಮ್ಮನನ್ನು ಅತ್ತೆ ಮಾಡುವ, ಅಪ್ಪನನ್ನು ಮಾವ ಮಾಡುವ ,ಮೈದುನ, ನಾದಿನಿ, ಓರೆಗಿತ್ತಿ ,ಅಳಿಯ ಹೀಗೆ ಹೊಸ ಸಂಬಂಧಗಳನ್ನು‌ ಸೃಷ್ಟಿಸುವ ಹೊಸ ಬಂಧನ..ಹೊಸ ಕನಸುಗಳನ್ನು ಹೊತ್ತು ಹೊಸ ಬಾಳಿಗೆ ಹೆಜ್ಜೆಯಿಡುವ ಮಧುರ ಬಂಧನ..ಹೆಣ್ಣು ಹುಟ್ಟಿ ಬೆಳೆದ ಮನೆ ಬಿಟ್ಟು ಇನ್ನೊಂದು ಮನೆ ಬೆಳಗಲು ಬರುವ ಆತ್ಮಗಳ ಬಂಧನ…


ಮದುವೆ ಎಂದರೆ ಎರಡು ಮನಸುಗಳ ಕನಸುಗಳ ಮಿಲನ. ವಿವಾಹಕ್ಕಿಂತ‌ ಮೊದಲು ಗಂಡು ಮತ್ತು ಹೆಣ್ಣು ಇಬ್ಬರಿಗೂ ಕೆಲವು ಅಗತ್ಯಗಳಿದ್ದು ಅವುಗಳನ್ನ ಪೂರೈಸಿಕೊಳ್ಳಲು ಜೊತೆಯಲ್ಲೇ ಇಷ್ಟಪಟ್ಟು ಕಟ್ಟಿಕೊಂಡ ಬದುಕು ಈ ಮದುವೆ , ಈ ಒಂದು ವ್ಯವಸ್ಥೆಯಲ್ಲಿ ಪರಸ್ಪರರು ತಮಗೆ ಅವಶ್ಯಕವಾಗಿರುವಂತಹ ವಿಷಯಗಳನ್ನು ಅನುಭವಿಸುತ್ತಾರೆ..
ಕೆಲವು ತಜ್ಞರ ಪ್ರಕಾರ ಮದುವೆ ಎಂದರೆ ಗಂಡು ಮತ್ತು ಹೆಣ್ಣು ಮುಂದಿನ ಪೀಳಿಗೆಯನ್ನು ಸೃಷ್ಟಿಸಲು ಶಾರೀರಿಕವಾಗಿ ಒಂದಾಗುವ ಪ್ರಕೃತಿಯ ಸಂತಾನೋತ್ಪತ್ತಿಯ ವ್ಯವಸ್ಥೆ ಮಾತ್ರ ಎನ್ನುತ್ತಾರೆ..ಇದಕ್ಕಾಗಿಯೇ ಗಂಡು ಮತ್ತು ಹೆಣ್ಣನ್ನು ಸೃಷ್ಟಿಸಲಾಗಿದೆ .. ಒಂದು ವೇಳೆ ಮಕ್ಕಳ ಅವಶ್ಯಕತೆ ಇಲ್ಲದಿದ್ದರೆ? ಗಂಡು ಹೆಣ್ಣು ಜೊತೆಯಾಗಿರುವ ಅಥವಾ ಮದುವೆಯಾಗುವ ಅವಶ್ಯಕತೆಯೇ ಇರುತ್ತಿರಲಿಲ್ಲ.ಅಕಸ್ಮಾತ್ ಮದುವೆಯಾಗಿ 5-6 ವರ್ಷಗಳವರೆಗೂ ಮಗು ಆಗಲಿಲ್ಲವಾದರೆ ಅಂತಹ ಎಷ್ಟೋ ಸಂಬಂಧಗಳು ಮುರಿದು ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ ಅಂತಹ ಮದುವೆಗಳು ಅರ್ಥಹೀನವಾಗಿವೆ ಎನ್ನುತ್ತಾರೆ. ಅಂಥವರು ಪರಸ್ಪರ ಅರ್ಧ ಸತ್ತಂತೆ ಬದುಕುತ್ತಾರೆ. ಕೆಲವರು ಮಾತ್ರ ಮಾನವೀಯ ಭಾವನೆಗಳ ಸುಳಿಯಲ್ಲಿ ಸಿಲುಕಿ ಮಕ್ಕಳಾಗದಿದ್ದರೂ ಪತ್ನಿಯ ಪ್ರೀತಿಗೆ ಸೋತು ದಾಂಪತ್ಯ ಸಂಬಂಧವನ್ನು ಕೊನೆವರೆಗೂ ಕಾಪಾಡಿಕೊಂಡು ಹೋದರೆ, ಕೆಲವರು ಬೇರೆ ಮಕ್ಕಳನ್ನು ದತ್ತು ತೆಗೆದುಕೊಂಡು ತಮ್ಮ ದಾಂಪತ್ಯಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ..ಒಟ್ಟಾರೆ ದಾಂಪತ್ಯದ ಮುಖ್ಯ ಉದ್ದೇಶವೇ ಮಕ್ಕಳನ್ನು ಹೆತ್ತು ಸಾಕುವುದು..
ಕೆಲವರಂತೂ ಮಗು ಆಗುವುದಿಲ್ಲ ಎಂದಾಹ ವಿಚ್ಛೇದನ ಪಡೆದು ಮರುಮದುವೆಗಳನ್ನು ಮಾಡಿಕೊಂಡಿರುವ ಉದಾಹರಣೆಗಳು ಇವೆ .
ಮತ್ತೊಂದು ದೃಷ್ಟಿಕೋನದಿಂದ ನೋಡುವುದಾದರೆ..ಮೂಲಭೂತವಾಗಿ ಮದುವೆ ಎಂದರೆ ಅದು ಪರಸ್ಪರ ಒಬ್ಬರನ್ನೊಬ್ಬರು ತಮ್ಮ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಸಂಭವಿಸುವ ಒಂದು ಬಂಧನ.
ಕೆಲವು ಅನುಭವಿಗಳು ಹೇಳುವ ಪ್ರಕಾರ ವಿವಾಹವೆಂದರೆ ಒಂದು ಹೆಣ್ಣು ತಾನೇ ಬಯಸಿ ತನ್ನನ್ನು ಶೋಷಣೆಗೆ ಒಳಪಡಿಸಿಕೊಳ್ಳುವ ಅಥವಾ ಎಲ್ಲರೂ ಸೇರಿ ಅವಳನ್ನು ಶೋಷಿಸಲು ಮಾಡುವ ಒಂದು ಆಚರಣೆಯಷ್ಟೇ‌ ಎಂದಿದ್ದಾರೆ ..ಹೆಣ್ಣುಮದುವೆಯಾಗಿ ಬೇರೊಬ್ಬರ ಮನೆಗೆ ಬಂದಾಗ ಅವಳು ಸಹನಾಮಯಿಯಾಗಿದ್ದರೆ ಅಥವಾ ಆನಂದಮಯಿಯಾಗಿದ್ದರೆ ಅವಳಿಗೆ ಆಗುವ ಶೋಷಣೆ ಯಾವ ರೀತಿಯ ಪರಿಣಾಮ ಬೀರುವುದಿಲ್ಲ .ಎಲ್ಲವನ್ನೂ ಸಹಿಸಿ ಆನಂದಿಸುವಳು .ಒಂದು ವೇಳೆ ದುಃಖಭರಿತ ಭಾವನಾಜೀವಿ (ಸೆಂಟಿಮೆಂಟ್) ಹಾಗೂ ಮುಂಗೋಪಿಯಾಗಿದ್ದರೆ ಮುಗೀತು… ಗಂಡನ ಮನೆಯಲ್ಲಿನ ಪ್ರತಿಯೊಬ್ಬರ ಸರಳ ಆಜ್ಞೆಗಳು ಅವಳ ಪಾಲಿಗೆ ಶೋಷಣೆಯಂತೆಯೇ ಅನಿಸುತ್ತವೆ.. ಹೀಗೆ ಕೆಲವು ಮದುವೆಗಳು ಕೊಡು-ತೆಗೆದುಕೋ ಎಂಬ ಲೆಕ್ಕಾಚಾರದಿಂದಲೇ ಆಗುತ್ತವೆ..ಅಕಸ್ಮಾತ್ ಇಲ್ಲಿ ಪ್ರೀತಿಯ ಕುರಿತು ಭಾವನಾತ್ಮಕವಾಗಿ ಯಾರಿಂದಲಾದರೂ ಪರವಶಗೊಂಡರೆ ಲೆಕ್ಕಾಚಾರವನ್ನು ಮೀರಿ ಸಂಬಂಧ ಉಳಿಯುತ್ತದೆ…ಆಗ ನಾನೇನು ಪಡೆದೆ ಎನ್ನುವುದಕ್ಕಿಂತ ಇವರಿಗೆ ನಾ ಏನು ಕೊಡಬಲ್ಲೆ ಎಂಬ ನಿಸ್ವಾರ್ಥ ಭಾವ ಮೂಡುತ್ತದೆ.ಸಂಬಂಧಗಳನ್ನು ಸಮತೋಲಿಸುವುದು ಹೇಗೆ ಎಂಬ ಜಾಣ್ಮೆ ಇದ್ದಾಗ ಮಾತ್ರ ಪತಿ ಪತ್ನಿಯರೊಂದಾಗಿ ಪರಸ್ಪರ ಅವಶ್ಯಕತೆಗಳನ್ನು ಅರಿತು ಸುಖವಾಗಿ ಸುಂದರವಾಗಿ ಬದುಕಬಲ್ಲರು.ಒಬ್ಬರು ಸರಿಯಲ್ಲವಾದರೂ ಸಂಸಾರದ ಬಂಡಿ ಸರಿಯಾಗಿ ನಡೆಯದು…
ಮೊದಲು ನಾವೆಲ್ಲ ಸಂಬಂಧಗಳು ಎಂದರೆ ತಾಯಿ ,ತಂದೆ, ಅಕ್ಕ, ತಂಗಿ ,ಅಣ್ಣ ತಮ್ಮ, ಬಂಧು ,ಬಾಂಧವರು ಹೀಗೆ ಯೋಚಿಸುತ್ತಾ ಇದ್ದೆವು. ಆದರೆ ಈಗಿನ ಸಂಸ್ಕೃತಿಯಲ್ಲಿ ಸಂಬಂಧ ಅಂದರೆ ಅದು ಶಾರೀರಿಕ ಆಧಾರಿತ ಲೈಂಗಿಕ ಆಧಾರಿತ ಸಂಬಂಧ ಮಾತ್ರ ಎಂಬಂತೆ ಭಾವಿಸುತ್ತಿದ್ದಾರೆ. ಇದು ಅತ್ಯಂತ ವಿಷಾಧಕರ.ಅವರವರ ಶಾರೀರಿಕ ಸುಖ ಮಾತ್ರ ಇಲ್ಲಿ ಮುಖ್ಯವಾಗಿದ್ದು ಇನ್ನೊಬ್ಬರ ಭಾವನೆಗಳೊಂದಿಗೆ ಯಾವುದೇ ಕಾಳಜಿ ಇರುವುದಿಲ್ಲ…ಎಷ್ಟೋ ಜನರು ಲಿವಿಂಗ್ ರಿಲೇಶನ್ಸ್ ಲ್ಲಿ ಇದ್ದು ಸ್ವಲ್ಪ ದಿನ ಮಾತ್ರಕ್ಕೆ ಅವರಿಗೆ ಹೊಂದಾಣಿಕೆ ಆಗುವುದಿಲ್ಲ ಎಂದಾದರೆ ಯಾವ ಮುಲಾಜಿಲ್ಲದೇ ದೂರವಾಗುತ್ತಾರೆ ..


ಪೋಷಕರ ಒತ್ತಾಯಕ್ಕೆ ಮಣಿದು ಈ ವಿವಾಹ ಬಂಧನಕ್ಕೆ ಒತ್ತಾಯವಾಗಿ ಸಿಕ್ಕಿಕೊಂಡ ಕೆಲವರು‌ ಮನೆಯಲ್ಲಿ ಇರುವಾಗ‌ ತುಂಬಾ ಒಳ್ಳೆಯವರು‌ ಎಂಬಂತೆ ನಾಟಕ‌ಮಾಡಿ ಹೊರಗೆ ಹೋದಾಗ ತಮಗೆ ಹೇಗೆ ಬೇಕೋ ಹಾಗೆ ಇರುತ್ತಾರೆ….ಕೆಲವರು ಸಮಾಜದ ಮುಂದೆ ತುಂಬಾ ಸಂಭಾವಿತರಂತೆ ಸೋಗು ಹಾಕಿಕೊಂಡು ತಾವೇ ಜಗತ್ತಿನ ಆದರ್ಶ ದಂಪತಿಗಳು ಎಂಬ ರೀತಿ ತೋರಿಕೆಗೆ ಬದುಕುತ್ತಾರೆ…ಇವೆಲ್ಲ ಖಂಡನಾರ್ಹ ಅಷ್ಟೇ ಅಲ್ಲದೇ ತಮ್ಮ ಅಮೂಲ್ಯ ಬದುಕಿಗೆ ತಾವೇ ಮಾಡಿಕೊಳ್ಳುತ್ತಿರುವ ಮೋಸ ಎನ್ನಬಹುದು..
ಈಗಿನ ಕಾಲದ ಪತಿ‌ಪತ್ನಿಯರಂತೂ ತಮಗೆ ಮದುವೆ ಆಗಿದೆ ಎಂಬುವುದನ್ನೇ ಮರೆತು ತಮ್ಮಷ್ಟಕ್ಕೇ ತಾವು ಇಷ್ಟ ಬಂದಂತೆ ಸ್ವೇಚ್ಛೆಯಿಂದ ಬದುಕುತ್ತಿದ್ದಾರೆ …ಯಾವ ಅತ್ತೆ ಮಾವ, ಅವಿಭಕ್ತ ಕುಟುಂಬ ಏನೂ ಇಲ್ಲ ..ಬರಿ ತಮ್ಮ ಉದ್ಯೋಗ, ಹಣಗಳಿಕೆ, ಮೋಜು ,ಮಸ್ತಿ ,ಹೀಗೆ ಆಧುನಿಕತೆಯ ನಾಗರಿಕತೆಯ ಹೆಸರಿನಲ್ಲಿ ಮದುವೆ ಎಂಬ ಹೆಸರಿಗೆ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದಾರೆ…ಮೊದಲೆಲ್ಲಾ ಗಂಡ ಹೆಂಡತಿಯರ ನಡುವೆ ಭಾವನಾತ್ಮಕ ಸಂಬಂಧ ಬೆಸೆದು ನಾವಿಬ್ಬರೂ ಒಂದೇ ಎಂಬ ಮನಸ್ಥಿತಿ ಇತ್ತು..ಎಷ್ಟೇ ಜಗಳವಾಡಿದರೂ ಏನೇ ಕಷ್ಟ ಬಂದರೂ ಎಲ್ಲವನ್ನೂ ನಾಜೂಕಾಗಿ ಸಂಭಾಳಿಸಿಕೊಂಡು ಒಟ್ಟಿಗೇ ಬದುಕಲು ಪ್ರಯತ್ನಿಸುತ್ತಿದ್ದರು..ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂದು ಹೆಣ್ಣುಮಕ್ಕಳಿಗೆ ಮದುವೆ ಆದರೆ ಮುಗೀತು ತವರುಮನೆಗೆ ಅವರು ಕೇವಲ ಅತಿಥಿಗಳಷ್ಟೆ ಆಗಿದ್ದರು..ಎಷ್ಟೇ ಕಷ್ಟ ಬರಲಿ ಗಂಡ ಕೆಟ್ಟವನೇ ಇರಲಿ ಎಲ್ಲವನ್ನು ಅನುಸರಿಸಿಕೊಂಡು ಬಾಳು ಎಂದು ತಂದೆತಾಯಿ ಮಗಳಿಗೆ ಬುದ್ದಿಹೇಳುತ್ತಿದ್ದರು..ಆಗ ಅವಳು ಏನೇ ಆದರೂ ತನಗೇ ಗಂಡನ‌ಮನೆಯೇ ಶಾಶ್ವತ ಎಂದು ಅರಿತು ಬದುಕುತ್ತಿದ್ದಳು..
ಆದರೆ ಈಗ ಯಾವುದೇ ತರಹದ ಭಾವನಾತ್ಮಕ ಸಂಬಂಧಗಳು ಹೆಚ್ಚಾಗಿ ಕಾಣುವುದಿಲ್ಲ..ಜೊತೆಗೆ ಇರ್ತಿಯಾ ಇರು.‌. ಬೇಡವೇ ಹೋಗ್ತಾ ಇರು…ಯಾವುದೇ ಮುಲಾಜಿಲ್ಲದೇ ದೂರವಾಗುತ್ತಾರೆ.. ಯಾರೂ ಇಲ್ಲದಿದ್ದರೂ ತಾನು ಬದುಕಬಲ್ಲೆ ಎಂಬ ಮನಸ್ಥಿತಿಗೆ ಪತಿ ಪತ್ನಿ ಇಬ್ಬರಿಗೂ ಇದೆ…ತವರಿನವರು ಕೂಡ ಮಗಳು ತಪ್ಪು ಇದ್ದರೂ ಮಗಳು ಅತ್ತೆ ಮನೆಯಲ್ಲಿ ರಾಣಿಯಂತೆ ಮೆರೆಯಬೇಕೆಂದು ಬಯಸುತ್ತಾರೆ.. ಮಗಳಿಗೆ ಸ್ವಲ್ಪ ನೋವಾದರೆ ಮುಗೀತು ಗಂಡನ ಮನೆ ಬಿಟ್ಟುಬಾ ನಾವಿದ್ದೇವೆ… ಎಂದು ಹೇಳಿ ಸುಲಭವಾಗಿ ವಿವಾಹ ಬಂಧನವನ್ನು ಮುರಿಯುವುದಕ್ಕೆ ಕುಮ್ಮಕ್ಕು ಕೊಡುತ್ತಾರೆ…ಕೇವಲ ತಮ್ಮ ಮಗಳು ಸುಖವಾಗಿರಬೇಕು ಅವಳು ತಪ್ಪು ಮಾಡಿದರೂ ಅದು ಸರಿಯೇ ..ಹಾಗೇ ತಮ್ಮ ಮಗ ಸುಖವಾಗಿರಬೇಕು ಅವನಿಗೆ ನೂರಾರು ಕೆಟ್ಟ ಅಭ್ಯಸಗಳಿದ್ದರೂ ಸರಿ ..ಸೊಸೆಯಾಗಿ ಬಂದವಳು ಇವರು ಹೇಳಿದಂತೆ ಕೇಳಲಿಲ್ಲವಾದರೆ ಅವಳನ್ನು ಬಿಟ್ಟುಬಿಡಲು ಮಗನಿಗೆ ಹೇಳುತ್ತಾರೆ .ಮತ್ತೊಂದು ಮದುವೆಯನ್ನೂ ಮಾಡುತ್ತಾರೆ …
ಹೀಗೆ ಈ ಆಧುನಿಕತೆಯ ಅಬ್ಬರಕ್ಕೆ ಸಿಲುಕಿ ಮದುವೆ ಎಂಬ ಮಧುರ ಬಂಧನ ಅರ್ಥಕಳೆದುಕೊಂಡು ತತ್ತರಿಸಿದೆ.. ಕೇವಲ ಅದ್ದೂರಿಯಾಗಿ ಮದುವೆಯಾದರೆ ಮುಗೀತು..ಅದ್ದೂರಿ ಮದುವೆಗಳು ಅರ್ಥ ಕಳೆದುಕೊಂಡಿವೆ.. ಅಷ್ಟೇ ಅದ್ದೂರಿಯಾಗಿ ಜಗಳ ಮನಸ್ತಾಪಗಳಾಗಿ ದೂರವಾಗುತ್ತಿದ್ದಾರೆ ..ಅದು ವಿದ್ಯಾವಂತರಾದ ಉದ್ಯೋಗಸ್ಥರೇ ಹೆಚ್ಚಾಗಿ ವಿಚ್ಛೇದನಕ್ಕೆ ಒಳಪಡುತ್ತಿದ್ದಾರೆಂಬುದು ಅತ್ಯಂತ ಬೇಸರದ ಸಂಗತಿ..ಇದಕ್ಕೆ ಕಾರಣ
ಆರ್ಥಿಕವಾಗಿ ಸ್ವಾವಲಂಬಿತನವೋ ..ಮಾನವೀಯತೆಯ ಅವಸಾನವೋ..ಗೊತ್ತಿಲ್ಲ ಪರಸ್ಪರ ಸಂಬಂಧಗಳಲ್ಲಿ ಬಿರುಕುಗಳು ಹೆಚ್ಚಾಗಿ ವಿಚ್ಛೇದನಗಳು ಅಧಿಕವಾಗಿವೆ..ಎಂಬುದು ಅದ್ಯಯನದಿಂದ ತಿಳಿದಿದೆ…
ಏನೇ ಇರಲಿ ವಿವಾಹ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುವ ಮಾನವ ಜೀವಿತದ ಒಂದು ಶ್ರೇಷ್ಠ ಸಂಸ್ಕಾರ .ಎಷ್ಟೇ ಕಷ್ಟ ಬರಲಿ ಇಬ್ಬರೂ ಪರಸ್ಪರ ಹೊಂದಿಕೊಂಡು ಬಾಳಿದರೆ ಅದುವೇ ಸ್ವರ್ಗ..
ಬೆಚ್ಚನೆಯ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿತು ನಡೆವ ಸತಿಪತಿಗಳಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ..

ಎಂದು ದಾಂಪತ್ಯದ ಶ್ರೇಷ್ಠತೆಯನ್ನು ಸರ್ವಜ್ಞ ಕವಿ ಸಾರಿದ್ದಾರೆ.. “ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವನಿಗೆ” ಎಂದು ಶರಣರೂ ಹೇಳಿದ್ದಾರೆ ..ಆದ್ದರಿಂದ ಸತಿಪತಿಗಳಿಬ್ಬರೂ ಪರಸ್ಪರ ಅರ್ಥೈಸಿಕೊಂಡು, ಪ್ರೀತಿಯಿಂದ ನೈತಿಕತೆಯಿಂದ, ಹೊಂದಾಣಿಕೆಯಿಂದ,ಗೌರವದಿಂದ, ಅನುಸರಿಸಿಕೊಂಡು ದಾಂಪತ್ಯ ಜೀವನವನ್ನು ಸುಂದರವಾಗಿ ಅನುಭವಿಸಿದರೆ ಇದರಿಂದ ಸಮಾಜಕ್ಕೆ ಮಾದರಿಯಾಗುತ್ತಾರೆ …ಮಕ್ಕಳಿಗೆ
ಒಳ್ಳೆಯ ಆದರ್ಶ ತಂದೆ ತಾಯಿಗಳಾಗುತ್ತಾರೆ ..ಉತ್ತಮ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಾರೆ …
ಮದುವೆಯ ಈ ಬಂಧ
ಅನುರಾಗದ ಅನುಬಂಧ
ಏಳೇಳು ಜನುಮದಲೂ
ತೀರದ ಸಂಬಂಧ…….


ಮಹಾದೇವಿ ಪಾಟೀಲ..

ಮಹಾದೇವಿ ಪಾಟೀಲ (ಮಧು ಪಾಟೀಲ)ಯವರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೋರಣಹಳ್ಳಿ ಚಿಕ್ಕೋಡಿ ತಾಲೂಕು..ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ
ಶಿಕ್ಷಕರಾಗಿದ್ದಾರೆ ಪ್ರವೃತ್ತಿ:- ಸಾಹಿತಿಗಳು ,ಗಾಯಕರು,ನಿರೂಪಕರು.ಸಮಾಜಸೇವಕರು,ಪರಿಸರ ಪ್ರೇಮಿಗಳು.ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು..ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಚಿಕ್ಕೋಡಿ ತಾಲೂಕು ಅಧ್ಯಕ್ಷರು..ಗ್ರಾಮೀಣ ಸಾಂಸ್ಕೃತಿಕ ಮತ್ತು ಕಲೆಗಳ ಪ್ರೋತ್ಸಾಹಕರು.ಸಾಹಿತ್ಯ ಕ್ಷೇತ್ರದಲ್ಲಿಅಪಾರ  ಆಸಕ್ತಿ ಇರುವ ಇವರು.   ಕವನ,ಲೇಖನ,ಚುಟುಕು, ಹನಿಗವನಗಳನ್ನು ಬರೆಯುತ್ತಾರೆ..ಇದುವರೆಗೂ ಸುಮಾರು ೨೦೦ಕ್ಕೂ ಹೆಚ್ಚು ಕವನಗಳನ್ನು ಹಾಗೂ ೨೫ ಲೇಖನಗಳನ್ನು ಬರೆದಿದ್ದು ಪುಸ್ತಕ ಪ್ರಕಟನೆಗೆ ಸಿದ್ಧತೆ ನಡೆದಿದೆ.ಲೇಖನಗಳು ಹಾಗೂ ಕವನಗಳು ವಿಜಯವಾಣಿ,ಜನಮಿಡಿತ,ಕುಂದಾನಗರಿ,ಸಾಹಿತ್ಯ ಸಂಗಾತಿ‌ ಪತ್ರಿಕೆಗಳಲ್ಲಿ ಪ್ರಕಟವಾಗಿವೆ..ಪ್ರಶಸ್ತಿಗಳು:ಜನಮೆಚ್ಚಿದ ಶಿಕ್ಷಕಿ,ತಾಲೂಕು ಉತ್ತಮ ಶಿಕ್ಷಕಿ,ಸೇವಾರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡತಿ ಪ್ರಶಸ್ತಿ, ಗುರುಕುಲತಿಲಕ ಪ್ರಶಸ್ತಿ,ಶಿಕ್ಷಣ ರತ್ನ, ಗುರುಭೂಷಣ,ಸ್ತ್ರೀ ಕುಲ ರತ್ನ..

Leave a Reply

Back To Top