ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ 

ಜನಾಭಿಪ್ರಾಯವೇ ಪ್ರಜಾಪ್ರಭುತ್ವದ ಸುಂದರತೇ…

ಅವನು ತನ್ನ ಪಕ್ಷದ ಪ್ರಣಾಳಿಕೆಗಳನ್ನು ಜಾರಿಗೊಳಿಸುತ್ತೇವೆ. “ಜನರ ಕಲ್ಯಾಣವೇ ನಮ್ಮ ಪಕ್ಷದ ಧೈಯ್ಯ..” ಎಂದು ನೆರೆದ ಜನಸ್ತೋಪವನ್ನು ಕುರಿತು ಹರ್ಷೋದ್ಗಾರರಿಂದ ಚುನಾವಣಾ ಭಾಷಣಗಳನ್ನು ಮಾಡುವಾಗ… ಜನರು ಕೇ ಕೇ ಹಾಕಿ ಹುರಿದುಂಬಿಸುತ್ತಿದ್ದರು.

ಇತ್ತ ಇನ್ನೊಂದು ಪಕ್ಷದವರು, “ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು..!!   ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು.  ಈ ಸಲ ನೀವು ನಮಗೆ ಬಹುಮತ ನೀಡಿದ್ದೆಯಾದರೆ ನಮ್ಮ ಸರಕಾರವು ನಿಮ್ಮ ಬಗ್ಗೆ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ..”ಎಂದು ಅತ್ಯುತ್ಸಾಹದಿಂದ ಜನರನ್ನು ಕುರಿತು ಮಾತನಾಡುತ್ತಿದ್ದರು.

 ಹೀಗೆ ಒಂದು ತಿಂಗಳುಗಳ ಕಾಲ ಕರ್ನಾಟಕ ವಿಧಾನಸಭಾ ಚುನಾವಣೆಯ ನಿಮಿತ್ಯವಾಗಿ ಎಲ್ಲಾ ಪಕ್ಷಗಳು ತಮ್ಮ ತಮ್ಮ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಿ ಮತವನ್ನು ಕೇಳಿದರು. ರೋಡ್ ಶೋ, ರ್ಯಾಲಿ, ಸಮಾವೇಶಗಳು, ಮನೆ ಮನೆ ಭೇಟಿಗಳು, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡುವುದು, ಏಟು, ಒಳೇಟು ಕೊಡುವುದು ನಿರಂತರವಾಗಿ ಚುನಾವಣೆಯಲ್ಲಿ ನಡೆದೇ ಇರುತ್ತವೆ. ಎಲ್ಲವನ್ನೂ ಕೇಳಿಸಿಕೊಂಡ ಜನರು,
ಕೊನೆಯಲ್ಲಿ ಚುನಾವಣೆಯ ದಿವಸ  ತಮ್ಮ ತಮ್ಮ ಅಭ್ಯರ್ಥಿಗಳನ್ನು ತಮ್ಮ ಪ್ರತಿನಿಧಿಗಳನ್ನು ಆರಿಸುವ ಬಹುದೊಡ್ಡ ‘ಮತದಾನದ ದಿವಸ’ ಬಂದೇ ಬಿಟ್ಟಿರುತ್ತದೆ.

 ಜನರ ಕಲ್ಯಾಣವನ್ನು ಬಯಸುವ ಕಾರಣಕ್ಕೋ..,  ತಮ್ಮ ಸಮುದಾಯದ ವ್ಯಕ್ತಿ ನಿಂತಿದ್ದಾನೆ ಎನ್ನುವ ಕಾರಣಕ್ಕೋ.., ಅಥವಾ ಈ ಪಕ್ಷ ಜನರ ಒಳಿತನ್ನು ಬಯಸುತ್ತದೆ ಎನ್ನುವ ಕಾರಣಕ್ಕೋ..,  ಅಥವಾ ಈ ಹಿಂದೆ ಆತ ಜನಪ್ರತಿನಿಧಿಯಾಗಿಯೋ ಯಾವುದೇ ಜನ ಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ, ಕೇವಲ ತನ್ನ ಸ್ವಾರ್ಥ ಸಾಧನೆಯನ್ನು ಮಾಡಿಕೊಂಡಿದ್ದಾನೆ ಎನ್ನುವ ಕಾರಣದಿಂದಲೋ ಕೆಲವರನ್ನು ತಿರಸ್ಕರಿಸಿ, ಕೆಲವರನ್ನು ಪುರಸ್ಕರಿಸಿ, ತಮಗೆ ಬೇಕಾದ ಅಭ್ಯರ್ಥಿಗೆ, ಪಕ್ಷಕ್ಕೆ, ವ್ಯಕ್ತಿಗೆ ಮತವನ್ನು ಹಾಕುವುದರ ಮೂಲಕ ಹೊಸ ಸರ್ಕಾರವನ್ನು ರಚಿಸಿರುವುದು “ಪ್ರಜಾಪ್ರಭುತ್ವದ ಬ್ಯೂಟಿ” ಎಂದೇ ಹೇಳಬಹುದು…!!

 ಯಾವ ಪಕ್ಷ ಏನೇ ಹೇಳಲಿ..?  ಯಾವ ವ್ಯಕ್ತಿ ಏನೇ ಹೇಳಲಿ..? ಅಂತಿಮವಾಗಿ ಜನರ ಅಭಿಪ್ರಾಯವೇ ಸತ್ಯ.  ಜನರು ಒಗ್ಗೂಡಿ ಬಹುಮತದಿಂದ ಆರಿಸಿದಾಗ ಬಹುಮತ ಪಡೆದ ಪಕ್ಷವು ಹೊಸ ಸರ್ಕಾರವನ್ನು ರಚಿಸುತ್ತದೆ. ಕರ್ನಾಟಕದಲ್ಲಿಯೂ ಅಂತಹ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದನ್ನು ನಾವು ಕಾಣುತ್ತೇವೆ.

ಜನರ ದೃಷ್ಟಿಯಲ್ಲಿ ಯಾವ ವ್ಯಕ್ತಿ  ಜನಾಭಿವೃದ್ಧಿಯನ್ನು ಬಯಸುತ್ತಾನೆಯೋ ಆತನನ್ನು ಆರಿಸುವ ಜವಾಬ್ದಾರಿಯನ್ನು ಹೊಣೆಗಾರಿಕೆಯನ್ನು ಹೊತ್ತಿರುತ್ತಾರೆ ಇಲ್ಲದೆ ಹೋದರೆ ಜವಾಬ್ದಾರಿ ಇಲ್ಲದ ವ್ಯಕ್ತಿಯನ್ನು ಆರಿಸಿದಾಗ ಮುಂದೆ ಐದು ವರ್ಷಗಳ ಕಾಲ ಪಶ್ಚಾತಾಪ ಪಡಬೇಕಾಗುತ್ತದೆ.

ಜನರ ತೆರಿಗೆಯಿಂದ ಸಂಗ್ರಹವಾದ ಹಣವು ಜನರ ಕಲ್ಯಾಣಕ್ಕಾಗಿ ಉಪಯೋಗವಾಗಬೇಕೆ ಹೊರತು ಜನವಿರೋಧಿ ಕಾರ್ಯಕ್ರಮಗಳಿಗೆ ಅಥವಾ ದುಂದು ವೆಚ್ಚಕ್ಕೆ ಕಾರಣವಾದರೇ ಆ ಸರ್ಕಾರವನ್ನು ಜನರು ಕ್ಷಮಿಸುವುದಿಲ್ಲ.‌‌..!! ಅದು ಚುನಾವಣೆಯ ಸಮಯದಲ್ಲಿ ಜನಾಭಿಪ್ರಾಯ ರೂಪಗೊಳ್ಳುತ್ತದೆ.
ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮೊದಲ ಪ್ರಥಮಾದ್ಯತೆಯಾಗಬೇಕು.  ಕುಡಿಯುವ ನೀರು, ಆಹಾರ ಭದ್ರತೆ, ಆರೋಗ್ಯ, ಶಿಕ್ಷಣ, ವಸತಿ, ಜನರ ರಕ್ಷಣೆ, ಇವು ಜನರಿಗೆ ದಕ್ಕಬೇಕಾದ ಸೌಲಭ್ಯಗಳು.  ಅವುಗಳನ್ನು ನಿಗದಿತ ಪ್ರಮಾಣದಲ್ಲಿ ಫಲಾನುಭವಿಗಳಿಗೆ ತಲುಪಿಸುವ ಹೊಣೆಗಾರಿಕೆ ಆಯಾ ಪಕ್ಷದ ಜನಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆ. ಇಲ್ಲದೆ ಹೋದರೆ ತನ್ನ ಅವಧಿ ಮುಗಿದ ನಂತರ ಐದು ವರ್ಷಗಳ ಕೊನೆಯಲ್ಲಿ ಚುನಾವಣೆಗೆ ಹೋದಾಗ,  ಜನರ ಬಳಿಯಲ್ಲಿ ಮತ ಕೇಳುವಾಗ ಜನರು ಆತನನ್ನು ತಿರಸ್ಕರಿಸಿಬಿಡುತ್ತಾರೆ. ಇಂದಿನ  ಚುನಾವಣೆಗಳ ಪ್ರಚಾರಗಳಲ್ಲಿ ಕೆಲಸ ಮಾಡದ ಶಾಸಕರನ್ನು ತರಾಟೆಗೆ ತೆಗೆದುಕೊಂಡಿರುವ ಉದಾಹರಣೆಗಳನ್ನು ನೋಡಬಹುದು.

 ಹಾಗಾಗಿ ಜನಪ್ರತಿನಿಧಿಗೆ ತನ್ನ ಕರ್ತವ್ಯಗಳ ಬಗ್ಗೆ ಅರಿವಿರಬೇಕು ಇಲ್ಲದೇ ಹೋದರೆ ಜನರಿಂದ ತಿರಸ್ಕೃತನಾಗುತ್ತಾನೆ. ಜನಮನ್ನಣೆ ಪಡೆದ ಶಾಸಕರು, ಸಂಸದರು, ಜನರ ಕಲ್ಯಾಣದ ಜೊತೆಗೆ ನಾಡಿನ ಕಲ್ಯಾಣದ ಪ್ರಜ್ಞೆಯಿರಬೇಕು. ಜೊತೆ ಜೊತೆಗೆ ತಮ್ಮ ವೈಯಕ್ತಿಕ ಬದುಕಿನಲ್ಲಿಯೂ ಕೂಡ ನೀತಿ ಸಂಹಿತೆಗಳನ್ನು ಹಾಕಿಕೊಳ್ಳಬೇಕಾದ ಅಗತ್ಯತೆಯಿದೆ. ತಮ್ಮ ಚಪಲತೆಗೆ ನೈತಿಕ ಮೌಲ್ಯಗಳನ್ನು ತಿರಸ್ಕರಿಸಿ ಬದುಕಿದರೆ ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ. ನೈತಿಕತೆಯಿಂದ ಬದುಕುವ ವ್ಯಕ್ತಿ, ಜನಕಲ್ಯಾಣವನ್ನು, ನಾಡ ಕಲ್ಯಾಣವನ್ನು ಬಯಸಿದರೆ ಅಂತಹ ವ್ಯಕ್ತಿ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬಲ್ಲ. ಆತನೇ ನಿಜವಾದ ಜನಪ್ರತಿನಿಧಿಯಾಗಬಲ್ಲ..!!

ಮೊನ್ನೆ ಮೊನ್ನೆ ತಾನೇ ಆಡಳಿತದಲ್ಲಿದ್ದ ಪಕ್ಷವು,  ತನ್ನ ಪಕ್ಷದ ಶಾಸಕರು ಸೋತು ಬಹುಮತವನ್ನು ಕಳೆದುಕೊಂಡಾಗ ಸಹಜವಾಗಿ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು…!!  ಹಾಗೆಯೇ ವಿರೋಧ ಪಕ್ಷದಲ್ಲಿದ್ದ ಪಕ್ಷವು ಅಸ್ತಿತ್ವದಲ್ಲಿ ಸರ್ಕಾರದ ವಿರುದ್ಧ ಜನ ವಿರೋಧಿ ನೀತಿಗಳನ್ನು ಖಂಡಿಸಿ ಅದರ ಬಗ್ಗೆ ವಿರೋಧಿ ಜನಾಭಿಪ್ರಾಯ ರೂಪಿಸಿತು.  ತನ್ನ ಪಕ್ಷದ ಪ್ರತಿನಿಧಿಗಳು ಜನರ ಮತಗಳನ್ನು ಪಡೆಯುವುದರ ಮೂಲಕ ಶಾಸಕರನ್ನಾಗಿ ಆರಿಸಿ ಬಹುಮತ ಪಡೆಯುವಂತೆ ಪ್ರಚಾರ ಮಾಡಿತು.

ಈ ದೇಶದ ಸಂವಿಧಾನದಡಿಯಲ್ಲಿ “ಎಲ್ಲರ ಕಲ್ಯಾಣ ಬಯಸುವುದೇ ಪ್ರಜಾಪ್ರಭುತ್ವದ ಸುಂದರತೆ..” ಎಂದೇ ಹೇಳಬಹುದು. ಯಾವ ಪಕ್ಷವೇ ಸರ್ಕಾರ ರಚಿಸಲಿ, ಅಂತಿಮವಾಗಿ ಜನಕಲ್ಯಾಣ ಬಯಸುವ ಮನಸ್ಸು ಮೂಡಿದಾಗ ಮಾತ್ರ ಜನಮನ್ನಣೆ ಗಳಿಸಲು ಸಾಧ್ಯ.  ಇಲ್ಲದೆ ಹೋದರೆ ಮತ್ತೆ ಐದು ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೆ ವಿರೋಧ ಪಕ್ಷದಲ್ಲಿ ಕೂಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹಾಗಾಗಿ “ಜನರ ಒಳಿತನ್ನು ಬಯಸುವ” ಸರ್ಕಾರದ ನೀತಿ ನಿಯಮಗಳ ನಿರೀಕ್ಷೆಯಲ್ಲಿ ನಾವೆಲ್ಲರೂ ಇರೋಣವೆಂದು  ಬಯಸೋಣ.


 ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ


Leave a Reply

Back To Top