ಮೇ-ದಿನದ ವಿಶೇಷ

ಜಿ. ಹರೀಶ್ ಬೇದ್ರೆ

ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

1ನೇ ಮೇ 1986 ಬಂಡವಾಳಶಾಹಿಗಳಿಂದ ತಮ್ಮ ಮೇಲೆ ಆಗುತ್ತಿದ್ದ ದೌರ್ಜನ್ಯವನ್ನು ವಿರೋಧಿಸಿ, ಬೀದಿಗಿಳಿದು ಹೋರಾಟ ಮಾಡಿ ಜಯ ಸಾಧಿಸಿದ ಲಕ್ಷಾಂತರ ಕಾರ್ಮಿಕರ ವಿಜಯೋತ್ಸವದ ದಿನ. ಈ ವಿಜಯೋತ್ಸವವು  ಸಾವಿರಾರು ಕಾರ್ಮಿಕರ ತ್ಯಾಗ ಬಲಿದಾನದಿಂದ ಒಲಿದು ಬಂದದ್ದಾಗಿದೆ. ಇದೆಲ್ಲಾ ನಡೆದಿದ್ದು ಅಮೇರಿಕಾದ ಷಿಕಾಗೋದಲ್ಲಿ. ಭಾರತದಲ್ಲೂ ಮೊಟ್ಟ ಮೊದಲ ಬಾರಿಗೆ 1923ನೇ ಇಸವಿಯಲ್ಲಿ ಕಾಮ್ರೇಡ್ ಸಿಂಗಾರವೇಲನ್ ನೇತೃತ್ವದಲ್ಲಿ ನಡೆಯಿತು.

ಯಾವುದೇ ದೇಶವೂ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಕೈಗಾರಿಕೆಗಳ/ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಹಾಗೆಯೇ ಆ ಕೈಗಾರಿಕೆಗಳ ಅಭಿವೃದ್ಧಿಯೂ ಅದರಲ್ಲಿ ದುಡಿಯುವ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ.  ಎಲ್ಲಿಯವರೆಗೆ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯ ಇರುತ್ತದೋ ಅಲ್ಲಿಯವರೆಗೆ ಆ ಕೈಗಾರಿಕೆ/ ಸಂಸ್ಥೆ  ಅಭಿವೃದ್ಧಿ ಪಥದಲ್ಲಿ ಇರುತ್ತದೆ. ಯಾವುದೇ ಒಂದರಲ್ಲಿ ಏರುಪೇರಾದರೂ  ಅಭಿವೃದ್ಧಿ ಕುಂಠಿತವಾಗಿ, ಆ ಕೈಗಾರಿಕೆ/ ಸಂಸ್ಥೆ ಶಾಶ್ವತವಾಗಿ ಮುಚ್ಚಿಹೋಗುವ ಸಂಭವವೂ ಇರುತ್ತದೆ.  

ಹೀಗೆ ಅವನತಿಗೆ ತುತ್ತಾದ ಕಂಪನಿಗಳ  ಉದಾಹರಣೆಯಾಗಿ ಹೇಳಬೇಕೆಂದರೆ,ಒಂದು ಕಾಲದಲ್ಲಿ ಭಾರತದ ಹೆಮ್ಮೆಯ ಪ್ರತೀಕವಾಗಿದ್ದ ಹೆಚ್.ಎಂ.ಟಿ. ವಾಚ್ ಕಂಪನಿ, ದಾವಣಗೆರೆಯಲ್ಲಿದ್ದ ಡಿ.ಸಿ.ಎಂ. ಕಾಟನ್ ಮಿಲ್ ಮುಂತಾದವನ್ನು ಹೆಸರಿಸಬಹುದು.  ಈಗ ಭದ್ರಾವತಿಯ ವಿ.ಐ.ಎಸ್.ಎಲ್. ಹಾಗೂ ಎಂ.ಪಿ.ಎಂ. ಕಾರ್ಖಾನೆಗಳು ಇದೇ ಹಾದಿಯಲ್ಲಿ ಇರುವುದು ವಿಪರ್ಯಾಸ.

ಉನ್ನತಿಯ ಉದಾಹರಣೆಯಾಗಿ ತೆಗೆದುಕೊಂಡರೆ,     ಹೀರೋ ಹೊಂಡಾ ಯಾರಿಗೆ ಗೊತ್ತಿಲ್ಲ ಹೇಳಿ, ಹೀರೋ ಭಾರತದ ಕಂಪೆನಿಯಾದರೆ, ಹೋಂಡಾ ಜಪಾನ್ ದೇಶದ ಕಂಪನಿ.  ಎರಡು ಕಂಪನಿಗಳು ಒಂದಾಗಿ ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಚಕ್ರಾಧಿಪತ್ಯ ಸಾಧಿಸಿದ್ದು ಯಾರು ತಾನೇ ಮರೆಯಲು ಸಾಧ್ಯ‌ ಈಗ ಎರಡು ಕಂಪನಿಗಳು ಬೇರೆ ಬೇರೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ  ಮಾರುಕಟ್ಟೆ ಚಕ್ರಾಧಿಪತ್ಯ ಮಾತ್ರ ಇವುಗಳ ತೆಕ್ಕೆಯಲ್ಲೇ ಇದೆ. ಇದು ಸಾಧ್ಯವಾಗಿದ್ದು  ಇವುಗಳ ಆಡಳಿತ ಮಂಡಳಿಗಳ ದೂರದರ್ಶಿತ್ವ ಮತ್ತು ಕಾರ್ಮಿಕರ ಪರಿಶ್ರಮ ಎಂದರೆ ಖಂಡಿತಾ ತಪ್ಪಾಗಲಾರದು.

ಇದೇ ರೀತಿ ಆರಂಭವಾದ ಮೊದಲ ದಿನದಿಂದಲೂ ಎದುರಾದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡು ಯಶಸ್ಸಿನ ಪ್ರಯಾಣವನ್ನು ಈಗಲೂ ಮುಂದುವರೆಸಿಕೊಂಡು  ಭಾರತೀಯರ ಅತ್ಯಂತ ವಿಶ್ವಾಸಕ್ಕೆ ಪಾತ್ರವಾಗಿರುವ ಭಾರತೀಯ ಜೀವ ವಿಮಾ ನಿಗಮದ ಬಗ್ಗೆ ಹೇಳಲೇಬೇಕು. ಸರ್ಕಾರ ಇದರಲ್ಲಿ ಹೂಡಿದ ಬಂಡವಾಳದ ಹಣದ ಅದೇಷ್ಟೋ ಸಾವಿರ ಪಟ್ಟು ಹೆಚ್ಚು ಹಣವನ್ನು ಡಿವಿಡೆಂಡ್ ರೂಪದಲ್ಲಿ ಈ ಸಂಸ್ಥೆಯು ಹಿಂದಿರುಗಿಸಿದೆ.  ಸರ್ಕಾರದ ಪಂಚವಾರ್ಷಿಕ ಯೋಜನೆಗಳಿಗೆ ಕೋಟಿ ಕೋಟಿ ಹಣವನ್ನು ನೀಡುತ್ತಾ ಬಂದಿದೆ.  ಇದರಿಂದ ಸಿಗುವ ಬಡ್ಡಿಯ ಹಣವನ್ನೇ ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ನೀಡುತ್ತಿದೆ.  ಈ ಸಂಸ್ಥೆ ಎದುರಿಸಿದ, ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಆದರೂ ಎದುರಾದ, ಎದುರಾಗುವ ಎಲ್ಲಾ ಸಮಸ್ಯೆಗಳನ್ನೂ ಸಮರ್ಥವಾಗಿ ಪರಿಹರಿಸಿಕೊಂಡು ಮುಂಚೂಣಿಯಲ್ಲಿ ಇದೆ.  ಇದು ಸಾಧ್ಯವಾಗಿದ್ದು, ಆಗುತ್ತಿರುವುದು ಇಲ್ಲಿನ ಕಾರ್ಮಿಕ ಸಂಘಟನೆಗಳಿಂದ. ಇಲ್ಲಿ ತಳಮಟ್ಟದಿಂದ ಮೇಲ್ಮಟ್ಟದವರೆಗೂ ವಿವಿಧ ಕಾರ್ಮಿಕ ಸಂಘಟನೆಗಳಿವೆ. ಎಲ್ಲಾ ಸಂಘಟನೆಗಳ ಮುಖ್ಯ ಧೇಯ, ನಿಗಮದ ಏಳಿಗೆ.  ನಿಗಮ ಇದ್ದರೆ ಮಾತ್ರ ತಾವುಗಳು ಇರಲು ಸಾಧ್ಯ ಎಂದು ನಂಬಿ ದುಡಿಯುತ್ತಿದ್ದಾರೆ.  ಇಂತಹ ನಿಸ್ವಾರ್ಥ ಶ್ರಮಿಕ ವರ್ಗದ ಬೇಕು ಬೇಡಗಳಿಗೆ, ಇಲ್ಲಿನ ಆಡಳಿತ ಮಂಡಳಿ  ತುಂಬಾ ಒಳ್ಳೆಯ ಸ್ಪಂದನೆಯನ್ನು ನೀಡಿ ಕಾಪಾಡುತ್ತಿದೆ. ಇಲ್ಲಿ ಎರಡೂ ಕೈಗಳು ಒಟ್ಟಿಗೆ ಸೇರಿರುವುದರಿಂದ ನಿಗಮವು ಯಾವುದೇ ತೊಂದರೆ ಇಲ್ಲದೆ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದೆ.

ಹೇಳುತ್ತಾ ಹೋದರೆ ಮತ್ತಷ್ಟು ಮಗದಷ್ಟು ಸಂಸ್ಥೆಗಳ ಬಗ್ಗೆ ಹೇಳಬಹುದು. ಆದರೆ ಯಾವುದೇ ಕೈಗಾರಿಕೆ ಅಥವಾ ಸಂಸ್ಥೆ ಉದ್ಧಾರ ಆಗಬೇಕೆಂದರೆ ದುಡಿಯುವ ವರ್ಗ ಹಾಗೂ ದುಡಿಸಿಕೊಳ್ಳುವ ವರ್ಗ ಜೊತೆ ಜೊತೆಯಲಿ ಹೆಜ್ಜೆ ಹಾಕಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಈ ಎರಡು ವರ್ಗಗಳ ಅಭಿವೃದ್ಧಿ ಆಗಿದೆ ಎಂದರೆ ದೇಶದ ಅಭಿವೃದ್ಧಿ ಆಗಿದೆ ಎಂದೇ ಅರ್ಥ.

ಕಾಯಕವೇ ಕೈಲಾಸ ಎಂದು ನಂಬಿ ದುಡಿಯುತ್ತಿರುವ ಎಲ್ಲಾ ಶ್ರಮಿಕ ವರ್ಗಕ್ಕೂ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
——————————————————-


ಜಿ. ಹರೀಶ್ ಬೇದ್ರೆ

16 thoughts on “

  1. ಉತ್ತಮ ಬರಹ, ನೀವು ಹೇಳಿದಂತೆ ಯಾವುದೇ ದೇಶದ ಅಭಿವೃದ್ಧಿ ಆ ದೇಶದ ಶ್ರಮಿಕ ವರ್ಗದ ಅಭಿವೃದ್ಧಿಯಲ್ಲಿ ಇದೆ. ಅಭಿನಂದನೆಗಳು

    1. ಉತ್ತಮವಾಗಿರುವ ಬರಹ ಒಂದೊಂದು ವಿಷಯಗಳನ್ನು ಕುಲಂಕುಷವಾಗಿ ತಿಳಿಸಿರುತ್ತೀರಿ

  2. ಉತ್ತಮ ಬರಹ ಹಾರ್ಧಿಕ ಅಭಿನಂದನೆಗಳು ಗೆಳೆಯ.

  3. ಸಮಯೋಚಿತ ಬರಹ ಹರೀಶ್, ವಿಶೇಷವಾಗಿ ನಮಗೆ ಅನ್ನ ನೀಡುತ್ತಿರುವ ನಮ್ಮ ಹೆಮ್ಮೆಯ ಸಂಸ್ಥೆಯ ಸ್ಥಿತಿಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ, ಅಭಿನಂದನೆಗಳು. ನಿಮ್ಮ ಫೋಟೋ ಅದ್ಭುತವಾಗಿ ಮೂಡಿಬಂದಿದೆ.

  4. ತುಂಬಾ ಅರ್ಥಪೂರ್ಣವಾದ ಲೇಖನ ಸರ್, ಎರಡೂ ಕೈ ಸೇರಿದರೆ ಚಪ್ಪಾಳೆ ಆಗುವಂತೆ ಕಾರ್ಮಿಕರು ಮತ್ತು ಆಡಳಿತ ಮಂಡಳಿ ಒಟ್ಟಾಗಿ ದುಡಿದರೆ ಪ್ರತ್ಯಕ್ಷವಾಗಿಯಲ್ಲದೇ ಪರೋಕ್ಷವಾಗಿಯೂ ಹಲವರ ಜೀವನ ಸುಖಮಯವಾಗುತ್ತದೆ.

Leave a Reply

Back To Top