ಮೇ-ದಿನದ ವಿಶೇಷ

ಬಿ.ವಿ.ರಾಮ ಪ್ರಸಾದ್

ಬಸ್‌ ಏಜೆಂಟ್‌ ಕುರಿ ಕಳೆದು ಹಾಕಿದ ಕತೆ

ನನ್ನ ಟೀ, ಸಿಗರೇಟ್‌ ಚಟದಿಂದಾಗಿ ನಮ್ಮ ಊರಿನ ಗಲ್ಲಿಗಳಲ್ಲಿರುವ, ಊರಿನ ಅಂಚಿನಲ್ಲಿರುವ, ಊರು ಊರುಗಳ ಮಧ್ಯ ಇರುವ ಅನೇಕ ಸಣ್ಣ ಟೀ ಅಂಗಡಿಗಳು ನನಗೆ ಪರಿಚಿತ. ಅಂತದ್ದೊಂದು ಟೀ ಅಂಗಡಿಯಲ್ಲಿ ಒಬ್ಬ ಬಸ್‌ ಏಜೆಂಟರು ತಾವು ಒಂದು ಕುರಿ ಕಳೆದು ಹಾಕಿದ ಕತೆ ಹೇಳಿದರು.
ಈ ಟೀ ಅಂಗಡಿಗಳಲ್ಲಿ ಬೇರೇ ಬೇರೇ ರೀತಿಯ ಜನ ನನಗೆ ಸಿಗುತ್ತಾರೆ. ಬೆಳಿಗ್ಗೆ ಐದು ಗಂಟೆಗೇ ಹೋದರೆ ಮುನ್ಸಿಪಾಲ್ಟಿಯ ಕಸ ಗುಡಿಸುವವರು ಸಿಕ್ಕಿ ನಮಸ್ಕಾರ ಅಣ್ಣ ಅನ್ನುತ್ತಾರೆ. ಎಂಟು ಗಂಟೆಯ ಸುಮಾರಿಗೆ ಹೋದರೆ ವಾಕ್‌ ಮುಗಿಸಿಕೊಂಡು ಬರುವ ಮೇಷ್ಟ್ರುಗಳು, ಪ್ರೊಫೆಸರ್‌ಗಳು ಟೀ ಕುಡಿಯುತ್ತಾ ಕೂತಿರುತ್ತಾರೆ. ಕೆಲವೊಮ್ಮೆ ಪೋಲೀಸ್‌ ಪೇದೆಗಳು ಕಾಣುತ್ತಾರೆ. ಮಧ್ಯಾನ್ಹದ ಊಟಕ್ಕೆ ಕಡಿಮೆ ರೇಟಿಗೆ ಜಾಸ್ತಿ ಅನ್ನ ಸಿಗುತ್ತದೆ ಅಂತ ಕೂಲಿ ಕೆಲಸಗಾರರು ಬಂದಿರುತ್ತಾರೆ. ಖಾಯಮ್ಮಾಗಿ ಸಮಯ ಕಳೆಯುವುದಕ್ಕೆ ಬೇರೆ ಜಾಗ ಇಲ್ಲ ಅಂತ ಅಲ್ಲೇ ಅಂಗಡಿಯ ಸುತ್ತಮುತ್ತ ಕೂತು ಆಗಾಗ ಟೀ, ಸಿಗರೇಟ್‌ ತರಿಸಿಕೊಳ್ಳುವ ನಿರುದ್ಯೋಗಿ ಹುಡುಗರು, ಕ್ಲಾಸಿಗೆ ಚಕ್ಕರ್‌ ಹೊಡೆದ ಕಾಲೇಜು ಹುಡುಗರು ಇರುತ್ತಾರೆ. ಈ ಟೀ ಅಂಗಡಿಯ ಮಾಲಿಕರು ನನ್ನ ಜೊತೆ ಹರಟೆ ಹೊಡೆಯುತ್ತಾರೆ, ಜೋಕ್‌ ಮಾಡುತ್ತಾರೆ, ಈ ಜಗತ್ತಿನ ಅನ್ಯಾಯಗಳ ಬಗೆ ಮಾತನಾಡುತ್ತಾರೆ, ಸಲಹೆ ಕೇಳುತ್ತಾರೆ, ಸಲಹೆ ಕೊಡುತ್ತಾರೆ, ಕೆಲವೊಮ್ಮೆ ತಮ್ಮ ಜೀವನದ ಕತೆಗಳನ್ನೂ ಹೇಳುತ್ತಾರೆ.
ಮಜಾ ಅಂದರೆ ಇವರುಗಳಿಗೆ ನನ್ನ ಹೆಸರು, ನನಗೆ ಇವರುಗಳ ಹೆಸರು ಗೊತ್ತೇ ಇರುವುದಿಲ್ಲ. ಮಾತನಾಡುವುದಕ್ಕೆ, ಹಂಚಿಕೊಳ್ಳುವುದಕ್ಕೆ ಹೆಸರು, ಕುಲ, ಗೋತ್ರ ಎಲ್ಲಾ ಗೊತ್ತಿರಬೇಕು ಎಂದೇನು ಇಲ್ಲವಲ್ಲ? ನಾವು ಸಾಹಿತ್ಯ ಎಂದು ಓದುವ ಕತೆ, ಕಾದಂಬರಿಗಳ ಪಾತ್ರಗಳೇನು ನಮಗೆ ಪರಿಚಿತರೇ ಇರುತ್ತಾರೇನು? ಕೆಲವೊಮ್ಮೆ ಈ ಟೀ ಅಂಗಡಿಗಳಿಗೂ ʼಹೆಸರುʼ ಅಂತ ಇರುವುದಿಲ್ಲ. ಇದ್ದರೂ ಯಾರೂ ಗಮನಿಸಿರುವುದಿಲ್ಲ. ಅವೇನು ಫೈವ್‌ ಸ್ಟಾರ್‌ ಹೋಟೆಲ್‌ಗಳೇ ಅಥವಾ ವೈನ್‌ ಶಾಪ್‌ಗಳೇ ಹೆಸರಿನಿಂದ ಫೇಮಸ್‌ ಆಗಲು? ಅವುಗಳನ್ನು ಕರೆಯುವುದು ಅವು ಇರುವ ಜಾಗದ ಮೇಲೆ, ಅಥವಾ ಅವುಗಳ ಮಾಲಿಕರ ಅಡ್ಡ ಹೆಸರಿನ ಮೇಲೆ. ಬೈ ಪಾಸ್‌ ಟೀ ಅಂಗಡಿ, ರ‍್ಗಾ ಟೀ ಅಂಗಡಿ, ಸೇತುವೆ ಪಕ್ಕದ ಅಂಗಡಿ, ತಮಿಳು ಅಜ್ಜಿ ಕ್ಯಾಂಟೀನ್‌, ಮರಾಠ ಹುಡುಗನ ಕ್ಯಾಂಟೀನ್‌, ಶೇಠು ಕ್ಯಾಂಟೀನ್‌ – ಇತ್ಯಾದಿ. ಅವರಿಗೆ ನಾನು ಸ್ಕೂಟೀಲಿ ಬರುವ ಸರ್‌, ಕುಳ್ಳಗಿದ್ದಾರಲ್ಲ ಅವರು, ಬೆಳ್ಳಗಿದ್ದಾರಲ್ಲ ಅವರು, ಕನ್ನಡಕ ಹಾಕ್ತಾರಲ್ಲ ಅವರು, ಮೇಸ್ಟ್ರು ಇತ್ಯಾದಿ; ನನಗೆ ಅವರು ತಮಿಳು ಅಜ್ಜಿ, ಮರಾಠ ಹುಡುಗ, ಗುಜರಾಥೀ ಶೇಠು, ಜೈನರ ಹೆಂಗಸು,  ಕ್ಯಾಂಟೀನ್‌ ಗೌಡರು.


ಒಮ್ಮೆ ಸೇತುವೆ ಪಕ್ಕದ ಜೈನರ ಕ್ಯಾಂಟೀನ್‌ನಲ್ಲಿ ಟೀ ಕುಡೀತಿರುವಾಗ ಆ ಜೈನರ ಹೆಂಗಸು ಇದ್ದಕ್ಕಿದ್ದ ಹಾಗೆ ʼʼನನ್ನ ಮಗ ಹೈಸ್ಕೂಲ್‌ ಓದುವಾಗ ಮನೆ ಬಿಟ್ಟು ಹೋದವನು ಇನ್ನೂ ಬಂದೇ ಇಲ್ಲ” ಅಂತ ಸ್ಟೋವ್‌ ಮೇಲಿನ ಟೀ ಪಾತ್ರೆ ಅಲ್ಲಾಡಿಸುತ್ತಾ ಹಾಗೇ ಸುಮ್ಮನೆ ಅನ್ನುವ ಹಾಗೆ ಅಂದರು. ಇವರು ತುಂಬಾ ಘನತೆಯಿಂದ ಇರುವ ಹೆಂಗಸು. ಎತ್ತರ, ಅಗಲ ಬೆನ್ನು, ಉದ್ದ ಮೂಗು, ಬಿಳಿ ಮುಖ, ಮಾತನಾಡಲೂ ಹೆದರಿಕೆಯಾಗುವಷ್ಟು ಗಂಭೀರ ನಡವಳಿಕೆ. ಅವರ ಗಂಭೀರತೆ ಗಂಡನ ಎದುರು ಮಾತ್ರಾ ಮಾಯವಾಗಿರುತಿತ್ತು. ಯಾರಿದ್ದಾರೆ ಇಲ್ಲ ಎಂದು ನೋಡದೆ ಗಂಡನನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರು. ಇಂತಹ ಹೆಂಗಸು “ಈ ಸಾರೀ ಮಳೆ ಜಾಸ್ತಿ ಅಲ್ವಾ” ಅನ್ನುವ ಧ್ವನಿಯಲ್ಲಿ ಒಂದೇ ನಿಮಿಷದಲ್ಲಿ ತನ್ನ ಮಗ ಮನೆ ಬಿಟ್ಟು ಹೋದ ಕತೆ ಹೇಳಿದರು. “ಕೆಲವು ಸತಿ ರಾತ್ರಿ ಯಾರಾದ್ರೂ ಬಾಗಿಲು ಬಡಿದ್ರೆ ಮಗ ಬಂದ್ನೇನೋ ಅಂತ ನೋಡ್ತೀನಿʼʼ, ಚೇಂಜ್‌ ವಾಪಾಸ್‌ ಕೊಡ್ತಾ ಒಂದು ನಿಟ್ಟುಸಿರೂ ಬಿಡದೆ ಹೇಳಿದರು.
ಬಸ್‌ ಎಜೆಂಟ್‌ ಕುರಿ ಕಳೆದು ಹಾಕಿದ ಕತೆ ಇಷ್ಟು ದುಃಖದ್ದಲ್ಲ. ಬರೀ ಒಂದು ಕುರಿ ಕಳೆದು ಹೋದ ಕತೆ. ಕೆಲವರಿಗೆ ಇದು ಕತೆಯಾಗುವ ಅರ್ಹತೆಯನ್ನೇ ಹೊಂದಿಲ್ಲ ಅನಿಸಬಹುದು. ಕುರಿ ಕಳೆದಿದ್ದೋ, ಮಗ ಮನೆ ಬಿಟ್ಟು ಹೋದದ್ದೋ, ಅವರವರಿಗೆ ಅವರ ನಷ್ಟವೇ ದೊಡ್ಡದು. ಬಸ್‌ ಏಜೆಂಟ್‌ ಈ ಕತೆಯನ್ನು ಇದು ಒಂದು ತಮಾಷೆಯ ವಿಷಯ ಅಂತಲೆ ಹೇಳಿದರು ಅನ್ನಿ.
ಈ ಕತೆಯನ್ನು ನಾನು ಕೇಳಿಸಿಕೊಂಡಿದ್ದು ನಾನು ಕೆಲಸಕ್ಕೆ ಹೋಗುವ ದಾರಿಯಲ್ಲಿ ಮೂರು ರಸ್ತೆ ಸೇರುವ ಜಂಕ್ಷನ್‌ ತರದ ಜಾಗದಲ್ಲಿರುವ …….. ಅನ್ನುವ ಹೆಸರಿನ ಊರಿನ (ಊರೇನು, ಹಳ್ಳಿ ಅನ್ನಬಹುದು) ಒಂದು ಟೀ ಅಂಗಡಿಯಲ್ಲಿ.  ಆ ಟೀ ಅಂಗಡಿಯಲ್ಲಿ ಎರಡು ರೀತಿಯ ಜನ ಇರುತ್ತಿದ್ದರು. ಒಂದು ಆ ಊರಿನ ಜನ, ಹಿಂದೆ ಅರಳಿಕಟ್ಟೆಯ ಕೆಳಗೆ ಸೇರುತ್ತಿದ್ದ ಹಾಗೆ ದೇಶಾವರಿ ಮಾತನಾಡಲು, ಪೇಪರ್‌ ಓದಲು ಅಲ್ಲಿ ಸೇರುತ್ತಿದ್ದರು. ಅವರನ್ನು ಆ ಕ್ಯಾಂಟೀನ್‌ರವರು ಗಿರಾಕಿ ಎಂದೇನೂ ಪರಿಗಣಿಸುತ್ತಿರಲಿಲ್ಲ. ಇನ್ನೊಂದು ಊರಿಂದ ಊರಿಗೆ ಹೋಗುವಾಗ ಒಂದು ಬಸ್ಸಿಂದ ಇಳಿದು ಇನ್ನೊಂದು ಬಸ್ಸಿಗೆ ಕಾಯುತ್ತಿರುವವರು ಅಥವಾ ಕೆಲಸಕ್ಕೆ ಹೋಗುವಾಗ ಬರುವಾಗ ಟೀ ಕುಡಿಯುವ ನನ್ನಂತವರು. ಮೊದಲ ಗುಂಪಿನವರು ಮನೆಯವರಾದರೆ ಎರಡನೇ ಗುಂಪಿನವರು ಅತಿಥಿಗಳು. ಆ ಕ್ಯಾಂಟೀನ್‌ನ ಮಾಲಿಕರು ಮಾತನಾಡಿಸುವ ರೀತಿಯಲ್ಲೇ ಈ ವ್ಯತ್ಯಾಸ ಗೊತ್ತಾಗುತಿತ್ತು. ಇನ್ನು ಈ ಎರಡು ಗುಂಪಿನ ನಡುವಿಗೆ ಬರುವಂತ, ಒಂದು ರೀತಿಯಲ್ಲಿ ಅತಿಥಿ, ಇನ್ನೊಂದು ರೀತಿಯಲ್ಲಿ ಮನೆಯವರಾದ  ಬಸ್‌ ಏಜೆಂಟರುಗಳು. ಇವರು ಒಂದು ಬಸ್‌ನಿಂದ ಇಳಿದು ಇನೊಂದು ಬಸ್‌ ಬರುವವರೆಗೆ ಅಲ್ಲಿ ಟೀ, ಕಾಫಿ, ಸಿಗರೇಟು, ಬೀಡಿ ಮುಗಿಸಿ, ಇನ್ನೊಂದು ಬಸ್‌ ಬರುತ್ತಿದ್ದ ಹಾಗೇ ರೈಟ್‌ ರೈಟ್‌ ಅಂದು ಹೋಗುವವರು. ನಾನು ದಿನಕ್ಕೆ ಎರಡು ಸರ‍್ತಿ ಅಲ್ಲಿಗೆ ಹೋಗುವವನಾಗಿದ್ದರಿಂದ ಇವರೆಲ್ಲರೂ ನನನ್ನು ಮಾತಾಡಿಸುತ್ತಿದ್ದರು. ಮಾಮೂಲಿನ ಹಾಗೆ ನನಗೆ ಅವರ ಹೆಸರು ಅವರಿಗೆ ನನ್ನ ಹೆಸರು ಗೊತ್ತಿಲ್ಲ. ಆದರೂ ನಾವು ಪರಿಚಿತರೇ.
ಹೀಗೆ ಒಂದು ಸಂಜೆ ನಾನು ಅಲ್ಲಿ ಕುಳಿತಿರುವಾಗ ಈ ಬಸ್‌ ಏಜೆಂಟ್‌ ಬಂದರು. ಅವರನ್ನು ನಾನು ನೋಡಿದ್ದೇನಾದರೂ ಮಾತಾಡಿಸಿರಲಿಲ್ಲ. ಎತ್ತರವೂ ಅಲ್ಲದ, ಕುಳ್ಳೂ ಅಲ್ಲದ, ಬಿಳಿಯೂ ಅಲ್ಲದ, ಕಪ್ಪಗೂ ಅಲ್ಲದ ಆಸಾಮಿ. ಮೂಗಿನ ಕೆಳಗಿನ ಮೀಸೆ ಸ್ವಲ್ಪ ಹರಿದು ಹೋಗಿದ್ದ ತುಟಿಯನ್ನು ಮುಚ್ಚಲು ಪ್ರಯತ್ನಿಸುತ್ತಿತ್ತು. ಹಣೆ ಮೇಲೆ ಗುಂಡಗಿನ ಕುಂಕುಮ. ಅಲ್ಲಿ ಕುಳಿತಿದ್ದ ಜನ ಮಾತಿನ ನಡುವೇ “ಏಜೆಂಟರೇ, ಕುರಿ ಸಿಕ್ತಾ?” ಅಂದರು. “ನೀ ಸುಮ್ನಿರೋ ಮಾರಾಯ. ನನ್ನ ಕತೆ ನನಗಾಗಿದೆ” ಅಂದರು ಏಜೆಂಟರು. ಆಗ ಆ ಕ್ಯಾಂಟೀನವರ ಹೆಂಡತಿ ( ಕ್ಯಾಂಟೀನ್‌ ನಡೆಸುವವರು ಗಂಡಸು, ಹೆಂಡತಿ, ಮಗಳು, ಮಗ –ಇಷ್ಟು ಬಿಟ್ಟರೆ ಅವರಿಗೆ ಒಂದು ಹೆಸರಿರುತ್ತದೆ, ಅದನ್ನು ನೆನಪಿಟ್ಟುಕೊಳ್ಳಬೇಕು, ಅಂದು ನನಗೆ ಎಂದೂ ಅನಿಸಿಲ್ಲ. ಅವರಿಗೂ ಅಷ್ಟೆ, ನನ್ನ ಬೈಕ್‌, ಈಗ ನನ್ನ ಕಾರ್‌ ನನ್ನನ್ನು ಗುರುತಿಸಲು ಸಾಕು, ನನ್ನ ಹೆಸರನ್ನೂ ಅವರು ಕೇಳಿಲ್ಲ. ಹಾಗಂತ ಆತ್ಮೀಯತೆಗೇನೂ ಕಮ್ಮಿಯಾಗಿಲ್ಲ), “ಸಾರ್‌, ಏಜೆಂಟ್ರು ಕುರಿ ಕಳೆದು ಹಾಕಿದ ಕತೆ ನಿಮಗೆ ಗೊತ್ತಾ” ಅಂದ್ರು. ಅಲ್ಲಿ ಕುಳಿತಿದ್ದ ಇನೊಬ್ಬರು “ಏನೋ ಮಾರಾಯ, ನಾನೂ ಕೇಳಿದೆ, ಎಂತ, ನೀನು ಕುರಿ ಕಳೆದೆಯಂತಲ್ಲ, ಏನದು ಪುರಾಣ” ಅಂದ್ರು. ಅಲ್ಲಿ ಇದ್ದವರು ನಾಕೈದು ಸರ‍್ತಿ ಈ ಕತೆಯನ್ನು ಕೇಳಿದ್ದರೂ, “ಹೇಳಿ ಏಜೆಂಟ್ರೇ, ಸಾರ್‌ ಕೂಡ ನಿಮ್ಮ ಕುರಿ ಕತೆ ಕೇಳಲಿ” ಅಂದ ಮೇಲೆ ಏಜೆಂಟರು ಕತೆ ಶುರು ಮಾಡಿದರು. ಕತೆಯೆಂದರೆ ಒಬ್ಬರು ಹೇಳುವುದು ಇನ್ನೊಬ್ಬರು ಕೇಳಿಸಿಕೊಳ್ಳುವ ರೀತಿಯ ನಿರೂಪಣೆಯಲ್ಲ. ನಡುನಡುವೆ ಒಬ್ಬರು ಪ್ರಶ್ನೆ ಕೇಳೋರು, ಇನೊಬ್ಬರು “ಅದೆಂಗಾಯ್ತು ಮಾರಾಯಾ” ಅನ್ನೋರು, ಇನ್ನೊಬ್ರು ಮಧ್ಯದಲ್ಲೇ ಬೇರೆ ಕತೆ ಶುರು ಮಾಡೋರು. ಮಾತುಕತೆಯ ರೂಪದಲ್ಲಿ ಹೇಳಿರುವ ಕತೆಯನ್ನು ಸ್ವಗತ ಸ್ವರೂಪವಾದ ಬರವಣಿಗೆಯಲ್ಲಿ ಹೇಳುವುದು ಕಷ್ಟ. ಹಾಗಾಗಿ ಈ ಕತೆಯನ್ನು ಏಜೆಂಟರ ಏಕಾಲಾಪ ಅನ್ನುವ ರೀತಿಯಲ್ಲೇ ಕೊಟ್ಟಿದ್ದೇನೆ.
………………………………………………

………………………………………………………………………….
“ಅವತ್ತೇನಾಯ್ತು ಅಂದ್ರೇ, ಅವತ್ತು, ಸೋಮವಾರಾನಾ, ಬಸ್‌ ಫುಲ್‌ ರಷ್ಷೂ. ಸರೀ, ಇಲ್ಲಿ ಸರ‍್ಕಲ್‌ಗೆ ಬರೋ ಹೊತ್ತಿಗೆ ಮ್ಯಾನೇಜ್‌ ಮಾಡಿ ಮಾಡಿ ಸಾಕಾಗಿತ್ತು. ಆ ತರಲೇ ಊರಿನ ಜನಾ ಇದ್ದರಾಲ್ಲ, ಹತ್ತು ಜನಾ ಹತ್ತಿ, ಯೋಳು ಟಿಕೆಟ್‌ ಅಂತಾ ಯಾಮಾರ‍್ಸಕ್ಕೆ ನೋಡ್ತಾ ಇದ್ರು. ಅವರ ಜೊತೆ ಜಗಳ, ರಷ್‌ ಬೇರೆ, ಉಸ್ಸಪ್ಪಾ ಅನ್ಸಿತ್ತು ಸರ‍್ಕಲ್‌ ಬರೋ ಹೊತ್ತಿಗೆ.
ಇಲ್ಲಿ ಬಂದ್ನಾ, ಸ್ವಲ್ಪ ಜನಾ ಇಳಿದ್ರು….ಇಲ್ಲಿ ಹತ್ತೋರೇನು ಜಾಸ್ತಿ ಇರಲಿಲ್ಲ. ಆದರೆ ಆ ಲಕ್ಕೊಳ್ಳಿ ಗೌಡ್ರು….. ಯೇ ಅದೇ ಅಜ್ಜ ಇದಿಯಲ್ಲಪ್ಪ…ಅವರಲ್ಲ….ಉದ್ದ ಮೀಸೆ ಬಿಟ್ಟಿದ್ದಾರಲ್ಲೋ, ಅವರ ಮಗ ಬುಲೆಟ್‌ ಅಲ್ಲಿ ಓಡಾಡ್ತನಲ್ಲ,…ಹೂ ಅದೇ ಬೆಂಕಿ ರಂಗನ ಅಪ್ಪ…ಅಯ್ಯೋ ಫಸ್ಟ್ ಏನಾಯ್ತು ಅನ್ನೋದು ಕೇಳೋ ಮಾರಾಯ..ನಾ ಹೇಳ್ತಾ ಇರೋದು ಕುರಿ ಕತೆ…ಆ ಆಜ್ಜನ ಮಗ ಯಾರು, ಮೊಮ್ಮಗ ಯಾರು, ಆ ಅಜ್ಜ ಯಾರ‍್ಯಾರನ್ನು ಇಟ್ಟಕೊಂಡಿತ್ತು, ಅದೆಲ್ಲಾ ನಿಂಗ್ಯಾಕೆ…ನೀನೊಳ್ಳೆ….”
ಯಾರೋ ಒಬ್ರು ಮಧ್ಯ ಮಾತಾಡಿದವನಿಗೆ ಬೈದು, ನೀವು ಹೇಳಿ ಏಜೆಂಟ್ರೆ, ಅಂದ್ರು.
“ಸರಿ, ಆ ಗೌಡರು ಕುರಿ ಇಟ್ಕೊಂಡು ನಿಂತಾವ್ರೆ. ಈ ರಷ್‌ ಅಲ್ಲಿ ಕುರಿ ಎಲ್ಲಿ ಹಾಕೋಣ. ಬಿಟ್ಟು ಹೋಗೋಣಾ ಅಂದ್ರೆ ಮತ್ತೆ ಅವರ ಊರ ಹತ್ರ ಹೋದಾಗ ಗೌಡ್ರು ಬೈತಾರೆ. ಸರಿ ಅಂತ ಹೇಳಿ, ಗೌಡ್ರೆ, ಕುರಿ ಡಿಕ್ಕೀಲಿ ಹಾಕೋಣ, ನೀವು ಒಳಗೆ ಕೂರಿರಂತೆ ಅಂದು ಕುರಿ ತೆಗೆದು ಡಿಕ್ಕೀಲಿ ತುಂಬಿದ್ವಿ. ಆ ಡಿಕ್ಕಿ ಸ್ವಲ್ಪ ಲೂಸ್‌ ಇತ್ತಾ…ಅದಕ್ಕೆ ಒಂದು ಹಗ್ಗ ಕಟ್ಟಿ ಬಿಗಿ ಮಾಡ್ತಿದ್ವಿ. ಸೌಕಾರ್ರಿಗೆ ಹೇಳಿ ಹೇಳಿ ಇಟ್ಟಿದ್ದೆ, ಅದರಲ್ಲೇನು ಬಂಗಾರ ಹಾಕ್ತೀವ, ಮಾಡ್ಸೊನಂತೆ ಬಿಡು ಅಂತ ಹಾಗೇ ಬಿಟ್ಟಿದ್ರು.
ಸರಿ, ಕುರಿ ಡಿಕ್ಕಿಗೆ ತುಂಬಿ, ಒಳಗಡೆ ಹಿಂದಿನ ಸೀಟಿನಲ್ಲಿ ನಾನು ಪಕ್ಕ ಗೌಡ್ರಿಗೂ ಒಂದು ಸೀಟ್ ಮಾಡಿ ಕುಳಿತ್ವಿ. ನಮ್ಮ ಕೆಳಗೇ….. ಡಿಕ್ಕೀಲಿ ಕುರಿ ಇದೆ ಅಂತ ಅನ್ಕೋ. ಸರಿ, ಬಸ್‌ ಹೋಗತಾ ಇತ್ತಾ, ಇಲ್ಲಿ ಬಿಟ್ರೆ ನೆಕ್ಷ್ಟ್‌ ಲಕ್ಷ್ಮೀಪುರಾನೇ ಸ್ಟಾಪ್.‌ ಮಧ್ಯ ಕಾಡಲ್ವ. ಯಾವ್ದು ಸ್ಟಾಪ್‌ ಇಲ್ಲಾ. ಕರೋನ ಸಧ್ಯ ಮುಗೀತಲ್ಲಾ ಅಂತೆಲ್ಲಾ ನಾನು ಗೌಡ್ರು ಮಾತಾಡಿಕೊಂಡು ಕೂತಿದ್ವಾ…..ಅಷ್ಟು ಹೊತ್ತಿಗೆ ಡ್ರೈವರ್‌ ಯಾಕೋ ಬಸ್‌ ನಿಲ್ಸಿದಾ…. ಏಜೆಂಟ್ರೆ…ಡಿಕ್ಕಿಯಿಂದ ಕುರಿ ಹಾರ‍್ತಂತೆ ನೋಡ್ರೀ…ಅಂದ. ಯಾರೋ ಬೈಕ್‌ನೋರು ಕುರಿ ಹಾರಿರೋದು ನೋಡಿ ನಮ್ಮನ್ನ ಫಾಲೋ ಮಾಡ್ಕೊಂಡು ಬಂದು ಬಸ್‌ ಅಡ್ಡ ಹಾಕಿ ಹೇಳಿದ್ರು ಪುಣ್ಯಾತ್ಮರು.”
“ಅವರೇನೋ ಪಾಪ ಬಂದು ಹೇಳಿದ್ರು, ನಮ್ಮ ಬಸ್‌ ಲೇಟಾಗಿತ್ತಾ, ಫಾಷ್ಟಾಗಿ ಹೋಗ್ತಾ ಇತ್ತು ನಾವು ಅವರಿಗೆ ಸಿಕ್ದಾಗ ಹತ್ ಹತ್ರ ಲಕ್ಷ್ಮೀಪುರ ಬಂದಿತ್ತು. ಸ್ವಾಮಿ, ಎರಡು ಕಿಲೋಮೀಟರ್‌ ಹಿಂದೇನೆ ಕುರಿ ಡಿಕ್ಕಿಯಿಂದ ಹಾರಿ ಕುಣಿಕೊಂಡು ಕುಣಿಕೊಂಡು ಹೋಯ್ತು…ಅಂದ್ರಾ…. ಅಯ್ಯೋ ಶಿವನೆ ಅಂತ ನಾನು ಗೌಡ್ರು ಇಳಿದ್ವಿ. ಈಗ ಯೇನು ಮಾಡೋದು? ಸರಿ, ಬಸ್‌ ಅಲ್ಲಿರೊವ್ರಿಗೆ ನಮ್ಮ ಕುರಿ ಚಿಂತೆ ಯೆಲ್ಲಿರತ್ತೆ? ಲೇಟಾಯ್ತು, ಲೇಟಾಯ್ತು ಅಂತ ನಿಮ್ಮಂತೋರು ಬಂಬಡ ಬಜಾಯ್ಸಕ್ಕೆ ಶುರು ಮಾಡಿದ್ರು.” (ಹೀಗೆ ಅನ್ನುವಾಗ ನನ್ನ ಕಡೆಗೆ ನೋಡಿ ನಕ್ಕರು ಏಜೆಂಟರು.)
“ಸರೀನಾ, ಅಲ್ಲೇ ಹತ್ರ ನಮ್ಮ ನಿಂಗಣ್ಣನ ಮನೆ ಇತ್ತಲ್ಲಾ…. ಯೇ, ಮುಚ್ಚಕೊಂಡು ಕೂರು…ಯಾವ ಲಿಂಗಣ್ಣ, ಅವನ ಹೆಂಡ್ತಿಯಾರು,…ಇವೆಲ್ಲಾ ಕೇಳಬೇಡಾ ….” ಮತ್ತೆ ಮಧ್ಯ ಮಾತಾಡಿದವನಿಗೆ ಉಳಿದವರು ಬೈದು, ನೀವು ಹೇಳಿ ಏಜೆಂಟ್ರೆ ಅಂದ್ರು. ಇನ್ನು ಕತೆ ಮುಗಿದು, ನಾನು ಕತೆ ಮುಗೀತು ಅಂತ ಹೇಳೋವರೆಗೂ ಯಾರೂ ಮಾತಾಡ್ಬಾರದೂ ಅನ್ನೋ ಕಂಡೀಷನ್‌ ಹಾಕಿ ಏಜೆಂಟರು ಕತೆ ಮುಂದುವರೆಸಿದರು.
“ಸರೀ, ಯೇನು ಹೇಳ್ತಿದ್ದೆ, ಹಾ ಲಿಂಗಣ್ಣನ ಹತ್ರ ಹೋಗಿ, ಅವನ ಬೈಕ್‌ ಇಸ್ಕೊಂಡು ವಾಪಾಸ್‌ ಅದೇ ದಾರೀಲಿ ಯೆಲ್ಲಾ ಕಡೇ ನೋಡ್ಕೋತಾ ಬಂದೆ. ಇಲ್ಲೆ ಯೆಲ್ಲಾದ್ರೂ ಮೇಯ್ತಾ ಇರಬಹುದು. ಇಲ್ಲಾ ಯಾರಾದ್ರು ಪುಣ್ಯಾತ್ಮರು ನೋಡಿ ಕಟ್ಟಿ ಹಾಕಿರಬೋದು ಅಂತ. ದಾರೀಲಿ ಸಿಕ್ಕವರಿಗೆಲ್ಲಾ ಕೇಳೋದು. ಒಳಗೆ ಯಾವುದು ಜಾನುವಾರು ಕಂಡ್ರೂ ಕುರೀನ ಅಂತ ಕೇಳೋದು. ಯಾರ ಮನೆ ಮುಂದೆ ಕುರಿ ಇದ್ರು ಗೌಡ್ರುದೇನಾ ಅಂತ ನೋಡೋದು”. (ನನಗೆ ಯಾಕೋ ಇಲ್ಲಿ ʼವೈದೇಹಿ ಏನಾದಳೋ…ʼ ಹಾಡು ನೆನಪಿಗೆ ಬಂತು).
“ಅದೆಲ್ಲಿ ಸಿಗತ್ತೆ ಕುರಿ? ಮತ್ತೆ ವಾಪಾಸ್‌ ಇಲ್ಲಿಗೇ ಬಂದ್ವಿ. ಗೌಡ್ರಿಗೆ ನೀವೋಗಿ ಗೌಡ್ರೆ, ನೋಡೊನಂತೆ ಅಂದ್ರೆ, ನೆಕ್ಷ್ಟ್‌ ಬಸ್‌ ಚಾರ‍್ಜು ನಿಮ್ಮಜ್ಜ ಕೊಡ್ತಾನಾ ಅಂತ ಜಗಳ ಮಾಡಕ್ಕೆ ಹತ್ತಿದ್ರು. ಸರಿ ಅಂತ ಮತ್ತೆ ನಮ್ಮ ಇನ್ನೊಂದು ಖಲೀಲ್‌ ಬಸ್ಗೇ ಹತ್ತಿಸಿ ಕಳಿಸಿದೆ. ಯೆಲ್ಲೋತೋ ಯೇನಾಯ್ತೋ ಕುರಿ, ಅಂತೂ ಹೀಗಾಯ್ತು”.
ಏಜೆಂಟ್ರು “ಅಂತೂ ಹೀಗಾಯ್ತು” ಅಂದ ಕೂಡಲೇ ಇನ್ನು ಮಾತಾಡಬಹುದು ಅಂತ ಕತೆ ಮಧ್ಯ ಮಧ್ಯ ಮಾತಾಡ್ತಿದ್ದೋನು ಬಾಯಿ ಹಾಕ್ದಾ. “ಅಯ್ಯೋ ಇಷ್ಟೇನಾ…ಒಂದು ಕುರಿ ಕಳೆದು ಹೋಗಿದ್ದನ್ನಾ ರಾಮಾಯಾಣಾ ಮಾಡಿ ಹೇಳ್ತೀಯಲ್ಲಾ” ಅಂದ.
“ಅಣ್ಣಾ, ನಿನಗೆ ಇದು ಸಣ್ಣ ವಿಷಯ. ಆ ಕುರಿ ರೇಟ್‌ ಯೆಷ್ಟು ಗೊತ್ತಾ? ಇಪ್ಪತ್ತು ಸಾವಿರ”
“ಅದೇನು ನೀನು ಕೊಟ್ಟಾ?”
“ಮತ್ಯಾರು ನಿಮ್ಮಪ್ಪ ಕೊಡ್ತಾನಾ? ಗೌಡ್ರು ಬಿಟ್ಟ್ತಾರಾ? ಡಿಕ್ಕಿಲೀ ಹಾಕಿದ್ದು ನನ್ನ ತಪ್ಪು ಅಂದ್ರು. ಪಾಪಾ ನಮ್ಮ ಸೌಕಾರರು ಐದು ಸಾವಿರ ಕೊಟ್ರು. ಕರೋನ ಈಗ ತಾನೆ ಮುಗಿದು ಉಸಿರಾಡ್ತಾ ಇದ್ದೀನಿ, ನೀನೊಳ್ಳೆ ಪೆದ್ದ ಕುರಿನ್ಯಾರಾದ್ರು ಡಿಕ್ಕೀಲ್ಲಿ ಹಾಕ್ತಾರಾ?” ಅಂದ್ರು.
“ಅಂತೂ ಕುರಿ ಡಿಕ್ಕೀಲಿ ಹಾಕಿ ಏಜೆಂಟ್ರು ಹದಿನೈದು ಸಾವಿರ ಕಳ್ಕೊಂಡಗಾಯ್ತು, ಅಲಾ?” ಅಂದ್ರು ಕ್ಯಾಂಟೀನ್‌ ಹೆಂಗಸು.
“ಪುಣ್ಯಾ, ಗೌಡರು ಹನ್ನೆರಡು ಸಾವಿರಕ್ಕೆ ಒಪ್ಕೋಂಡ್ರು. ಆಗ ತಾನೇ ಕರೋನಾ ಮುಗಿದು ಕೆಲಸಾ ಶುರುವಾಯ್ತು, ಊಟಕ್ಕೇನೋ ದಾರಿಯಾಯ್ತು ಅಂತಿದ್ದೆ, ಹೀಗಾಯ್ತು. ಯೇನೋ ಪುಣ್ಯ ಆಗ ನನ್ನ ಮಗಳ ಸ್ಕಾಲರ‍್ಶಿಪ್‌ ಕರೆಕ್ಟಾಗಿ ಹನ್ನೆರಡು ಸಾವಿರ ಬಂದಿತ್ತು, ಬಚಾವಾದೆ. ಈಗಲೂ ಈ ದಾರೀಲಿ ಹೋಗ್ತಾ ಕುರಿ ಕಂಡ್ರೆ ಇದೇ ಕುರಿ ಇರ‍್ಬೋದೇನೋ ಅಂತ ಒಂದ್ಸಾರಿ ನೋಡ್ತೀನಿʼʼ
“ಹೋಗ್ಲಿ ಬಿಡೋ ಮಾರಾಯ ಆ ಕುರಿನಾದ್ರು ಬದ್ಕೋತಲ್ಲಾ” ಅಂತ ಒಬ್ಬರು ಅಂದ್ರು.
ಇನ್ನೊಬ್ಬರು ಎಲ್ಲಿ ಬದುಕಿರತ್ತೆ, ಯಾರೋ ಹೊಡ್ಕೊಂಡು ತಿಂದರ‍್ತಾರೆ, ಇಲ್ಲ ಹುಲಿ ತಿಂದಿರತ್ತೆ, ಈ ಯಪ್ಪ ಆಸೆ ಇಟ್ಕೊಂಡು ದಿನಾ ನೋಡೋದೆ ಬಂತು, ಅಂತ ಕತೆಗೆ ಮಂಗಳ ಹಾಡಿದರು.
“ಆಸೆ ಇರತ್ತಲ್ಲಣ್ಣಾ, ಮಗಳು ದುಡ್ಡಾದ್ರು ವಾಪಾಸ್‌ ಕೊಡ್ಬೋದು” ಅಂತ ಏಜೆಂಟ್ರು ಅನ್ನೋ ಹೊತ್ತಿಗೆ ಅವರ ಬಸ್‌ ಬಂದು ʼʼರೈಟ್‌, ರೈಟ್‌” ಅಂತ ಅವರು ಹೊರಟರು.
ಈ ಕತೆನಾ ಇನ್ನು ಒಂದೆರಡು ಸಾರಿ ಇದೇ ಜಾಗದಲ್ಲಿ ಬೇರೆಯವರಿಗೆ ಏಜೆಂಟ್ರು ಹೇಳೊದನ್ನ ನಾನು ಕೇಳಿಸಿಕೊಂಡಿದ್ದೀನಿ. ಪ್ರತಿ ಸಾರಿ ಸಣ್ಣ ಪುಟ್ಟ ಬದಲಾವಣೆಗಳಾಗ್ತಾ ಇರತ್ತೆ. ಅದೇನು ಬರಿದಿರೋ ಕತೆನಾ ಗಟ್ಟಿಯಾಗಿ ಒಂದೇ ತರ ಎಷ್ಟು ದಿನಾ ಆದ್ರೂ ಹಾಗೇ ಇರೋಕ್ಕೆ? ಆದರೆ ಪ್ರತಿ ಸಾರಿನೂ ಏಜೆಂಟರು ʼʼನಾನು ಇನ್ನೂ ಆಗಾಗ ಈ ರೋಡಲ್ಲಿ ಕುರಿ ಕಂಡಾಗ ಅದೇ ಕುರಿನಾ ಅಂತ ನೋಡ್ತೀನಿʼʼ ಅಂತ ನಿಟ್ಟುಸಿರು ಬಿಟ್ಟು ಹೇಳೇ ಹೇಳ್ತಾರೆ. ಆಗ ನನಗೆ ʼʼ ಕೆಲವು ಸತಿ ರಾತ್ರಿ ಯಾರಾದ್ರೂ ಬಾಗಿಲು ಬಡಿದ್ರೆ ಮಗ ಬಂದ್ನೇನೋ ಅಂತ ನೋಡ್ತೀನಿʼʼ ಅಂತ ನಿಟ್ಟುಸಿರೂ ಬಿಡದೆ ಜೈನರ ಟೀ ಅಂಗಡಿ ಹೆಂಗಸು ಹೇಳಿದ್ದು ನೆನಪಾಗತ್ತೆ. ಎತ್ತಣ ಮಾಮರ ಎತ್ತಣ ಕೋಗಿಲೆ, ಎಲ್ಲಿ ಓಡಿಹೋದ ಮಗನ ದುಃಖ, ಎಲ್ಲಿ ಕಳೆದು ಹಾಕಿದ ಕುರಿಯ ದುಃಖ? ಅವರವರ ದುಃಖ ಅವರವರಿಗೆ ದೊಡ್ಡದ್ದು ಅಲ್ಲವೇ?


ಬಿ.ವಿ.ರಾಮ ಪ್ರಸಾದ್

13 thoughts on “

  1. Houdaudu, nija…Aane bhara Aanege Eruve bhara eruvege, Aadaru nim thalmege matthu nimma spandana manobhavakke ond mechuge sallisalebeku….

  2. ಚೆನ್ನಾಗಿದೆ ಸರ್ ನಿಮ್ಮ ಲೇಖನ ಅಥ್ವಾ ಕಥೆ..

    ನೀವು ಹೇಳಿದ್ದು ಸರಿ ಇದು ಕಥೆ ಆಗೋಕೆ ಆಗದ ಕಥೆ…. ಚಿಕ್ಕದೋ ದೊಡ್ಡದೋ ಅವರ ಕಷ್ಟ ಅವರಿಗೇ ದೊಡ್ಡ ಕಥೆನೆ ಅಗಿರತೆ flow ತುಂಬ ಚೆನ್ನಾಗಿದೆ please keep writing

Leave a Reply

Back To Top