ಬಯಲುಡುಗೆಯ ಬೊಂತಾದೇವಿ

ವಿಶೇಷ ಲೇಖನ

ಸುಲೋಚನಾ ಮಾಲಿಪಾಟೀಲ

ಬಯಲುಡುಗೆಯ ಬೊಂತಾದೇವಿ

ಚಿತ್ರ ಕೃಪೆ: ಗೂಗಲ್

ಸವಾಲಕ್ಷ ದೇಶದ ರಾಜಧಾನಿ ಮಾಂಡವ್ಯಪುರದಲ್ಲಿ ಮಹಾದೇವ ಭೂಪಾಲನ ತಂಗಿ ನಿಜದೇವಿ ಅಕ್ಕಮಹಾದೇವಿಯಂತೆ ನಿಷ್ಕಳಂಕ ಮಲ್ಲಿಕಾರ್ಜುನನ ಭಕ್ತಳಾಗಿದ್ದಳು. ಮಾಂಡವ್ಯ ಪುರದ ತುಂಬೆಲ್ಲ ಶಿವದೇವಾಲಯಗಳು, ಶಿವಲಿಂಗಗಳು, ಹೂಬನಗಳು ತುಂಬಿಕೊಂಡಿದ್ದವು. ಆತನ ಆಸ್ಥಾನದಲ್ಲಿ ಬೇರೆ ದೇವರ ಪೂಜಿಸದೆ ನಿಷ್ಕಳಂಕ ಮಲ್ಲಿಕಾರ್ಜುನನನ್ನೇ ಪೂಜಿಸುವ ಕಟ್ಟಾಜ್ಞೆ ಆಗಿತ್ತು. ಒಂದು ದಿನ ಮಾಂಡವ್ಯಪುರಕ್ಕೆ ಬಂದ ಒಬ್ಬ ವ್ಯಾಪಾರಿ ತನ್ನ ಕೊರಳಲ್ಲಿದ್ದ ಲಿಂಗವ ಅಂಗೈಯಲ್ಲಿಟ್ಟು ಪೂಜಿಸಿದ್ದ ಎಂಬ ಕಾರಣಕ್ಕೆ ಆತನ ಕೈ ಕಾಲುಗಳಿಗೆ ಕೊಳ ತೊಡಿಸಿ ಒಲಗಕ್ಕೆ ಕರೆತರಲಾಗಿತ್ತು. ಆ ವ್ಯಾಪಾರಿ ಕಲ್ಯಾಣದಿಂದ ಬಂದಾತ ಮತ್ತು ಆತನಲ್ಲಿರುವ ವಚನ ಗ್ರಂಥಗಳ ಬಗ್ಗೆ, ಲಿಂಗಪೂಜೆಯ ಬಗ್ಗೆ ಊರ ಜನರಿಂದ ಮಹಾದೇವ ಭೂಪಾಲನು ಅರಿತಿದ್ದ. ಅದಕ್ಕಾಗಿ ಆತನಲ್ಲಿದ್ದ ವಚನ ಗ್ರಂಥಗಳನ್ನು ಕಸಿದುಕೊಂಡು ಕಂಬಕ್ಕೆ ಕಟ್ಟಿ ವಧಾಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆತ ಹಿಮ ಸುರಿವ ರಾತ್ರಿಯ ಚಳಿ ಲೆಕ್ಕಿಸದೆ ಬಸವಣ್ಣನವರ ವಚನಗಳನ್ನು ರಾಗಬದ್ಧವಾಗಿ ಹಾಡುತ್ತಲಿದ್ದ. ನಿದ್ದೆಯಿಲ್ಲದೆ ಚಡಪಡಿಸುವ ರಾಜನ ತಂಗಿ ನಿಜದೇವಿಗೆ ಆತನ ವಚನ ಗಾಯನದಲ್ಲಿದ್ದ ಅಗಾಧ ಶಕ್ತಿಯ ಸತ್ಯದ ಬೆಳಕು ಗೋಚರಿಸಿವಂತೆ ಕಂಡಿತು. ರಾಜ ಆತನಿಂದ ವಶಪಡೆದ ವಚನ ಗ್ರಂಥಗಳನ್ನು ನೋಡುವ ಹಂಬಲ ಹೆಚ್ಚಾಗಿ ಅಣ್ಣನ ಕೋಣೆಗೆ ಹೋಗಿ ನೋಡಲು, ಅವಳಣ್ಣ ಚಿಕ್ಕ ಹಣತೆಯ ಮೂಲಕ ಗ್ರಂಥಗಳನ್ನ ಒದುತ್ತಿದ್ದನು. ಇದನ್ನು ಕಂಡ ನೀಜದೇವಿ ಮಾರುವೇಷದಲ್ಲಿ ವ್ಯಾಪಾರಿಯ ಬಳಿ ಬಂದು ಆತನಲ್ಲಿದ್ದ ಇನ್ನಷ್ಟು ವಚನಗಳು ತನಗೆ ಬೇಕೆಂದು ಕೇಳಲಾಗಿ, ತನ್ನ ಜೊಳಿಗೆಯಲ್ಲಿ ಉಳಿದಿರುವ ನಾಲ್ಕೈದು ತಾಳೆಗೆರೆಯಲೆಗಳನ್ನು ತೆಗೆದುಕೊಳ್ಳಲು ಹೇಳಿದ.
ನಿನ್ನ ಹಾಡಿನಲ್ಲಿನ ವಿನಯ ಬಹಳ ಇಷ್ಟವಾಯಿತು. ಆದರೆ ಇವರುಗಳು ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲವೆಂದು ನಿಜದೇವಿ ಹೇಳಿದಾಗ ‘ಉರಿವ ಬೆಂಕಿ, ಹರಿವನದಿ, ಚಿಗುರೊಡೆದ ಹಸಿರು, ಸೊಯ್ಯನೆ ಬೀಸುವ ಗಾಳಿ, ಮಳೆಗೆ ಯಾರು ಅಪ್ಪಣೆಯೂ ಆಕ್ಷೇಪಣೆಯೂ ಬೇಕಾಗಿಲ್ಲವೆಂಬ ವ್ಯಾಪಾರಿಯ ಮಾತು ಕೇಳಿ ಅವಳಲ್ಲಿದ್ದ ಆಸೆಯು ಅರಮನೆಯ ತ್ಯಜಿಸಿ ಬಯಲೋಳಗಿನ ದೇವರನ್ನು ಕಾಣುವ ಹಂಬಲಕ್ಕೆ ದಾರಿಮಾಡಿಕೊಟ್ಟಂತಾಯಿತು. ನೀಜದೇವಿ ವಚನಗಳ ತಾಳೆಗೆರೆಗಳು ತೆಗೆದುಕೊಳ್ಳುವಷ್ಟರಲ್ಲಿ ಯಾರೋ ನುಸುಳಿದಂತೆ ನೆರಳನ್ನು ಕಂಡಳು. ದ್ವಾರಪಾಲಕನ ಮುಖ ತಪ್ಪಿಸಿ ಬಂದ ನಿಜದೇವಿಗೆ ಒಬ್ಬರಹಿಂದೆ ಒಬ್ಬರಂತೆ ಸೆರೆವಾಸದಲ್ಲಿದ್ದ ಸಾತ್ವಿಕರು ಸೇರಿ ರಾಜಧಾನಿಯನ್ನು ದಾಟಿ ಹೋಗಲು ಮಾತಾಡಿಕೊಳ್ಳುವದನ್ನು ಕೇಳಿ, ನಿಜದೇವಿ ಕೂಡ ವ್ಯಾಪಾರಿಯ ಕೊಳಬಿಚ್ಚಿ ಎಲ್ಲರೊಡನೆ ತಾನು ಅರಮನೆಯ ಕಟ್ಟುಪಾಡು ತ್ಯಜಿಸಿ ಅವರೊಂದಿಗೆ ಹೊರಟಳು.
ನಿಜದೇವಿಗೆ ಅರಮನೆಯ ಕಟ್ಟುಪಾಡುಗಳನ್ನು ಮೀರಿ ಹೊರಟ ಸಂಭ್ರಮ ಸಂತಸ ಅವಳಲ್ಲಿ ತುಂಬಿತ್ತು. ಅರಮನೆಯ ಸಂಪ್ರದಾಯದಲ್ಲಿ ಎಲ್ಲಿ ಹೋದರು ಬಾಗಿ ನಮಿಸುವ ಕೈಗಳು, ಎಲ್ಲೆಡೆ ಹೂದೋಟಗಳು, ಓಲಗದ ಶಿಸ್ತು, ಪೂಜೆ ಪುನಸ್ಕಾರಗಳ ನಡುವೆ ಬಂಧಿಯಾಗಿ ಬದುಕುವಂತಿದ್ದ ನಿಜದೇವಿಗೆ ಬಯಲೋಳಗಿನ ಸ್ವಚ್ಛಂದದಲಿ ತಿರುಗಾಡಿ ಬಯಲೊಳಗೆ ಬಿಡಾಡಿ ಹಾಗೆ ಇರುವ ದೇವರನ್ನು ಹುಡುಕುವ ಹಂಬಲ ಅವಳದ್ದಾಗಿತ್ತು. ಹೋಗುವ ದಾರಿ ಅರಿತಿಲ್ಲ, ಊರು ತಿಳಿದಿಲ್ಲ, ಹಸಿವಿಲ್ಲ, ನೀರಡಕೆಯಿಲ್ಲ, ನೆರಳಿಲ್ಲದ ಬಯಲೋಳು ಬಿಡಾಡಿ ದೇವರನ್ನು ತಿಳಿಯುವ ಅರಿಯುವ ಲೋಕದ ಹಂಬಲದಲ್ಲಿ, ಜೊತೆಗಿದ್ದ ಸಾತ್ವಿಕರ ದಾರಿ ಸಾತ್ವಿಕರಿಗಾದರೇ, ನಿಜದೇವಿಯ ಹಾದಿ ಕಲ್ಲುಮುಳ್ಳಿನದಾಗಿತ್ತು. ಊರು ಕಂಡಲ್ಲಿ ಮಲಗಿ, ನೀರು ಕಂಡಲ್ಲಿ ಮಿಂದು ಮೂರು ಲೋಕದ ಮಾಯಾಗಾರನ ಬಿಡಾಡಿ ಹಾಗೆ ನಲಿದು ಅರಿವಿನ ಬೆಳಕು ಹುಡುಕುತ್ತಿದ್ದಳು. ತೊಟ್ಟ ಬಟ್ಟೆಯ ಮೇಲೆ ಮೋಹವಿಲ್ಲ, ಹಸಿವೆನಿರಡಕೆಯ ಹಂಗಿಲ್ಲ, ವ್ಯಾಪಾರಿಯಿಂದ ಪಡೆದ ವಚನಗಳ ಒಂದೊಂದು ತಾಳೆಗೆರೆಯ ಸಾರವು ಅತಿಮೂಲ್ಯವೆನಿಸಿತು. ಎಲ್ಲಿಯೂ ಕಾಣದ ಬಿಡಾಡಿ ದೇವರನ್ನು ಕಂಡು ಮಾತನಾಡಿಸುವ ಹವಣಿಕೆಯಲ್ಲಿ ಸೋತು ಕೊನೆಗೆ ಎಲ್ಲೂ ಕಾಣದ ದೇವರು ತನ್ನೊಳಗಿರುವನೆಂದು ಹಟತೊಟ್ಟ ಯೋಗಿಗಳಂತೆ ಮಾತಾಡಿದಳು. ಯಾರ ಅನುಭವಕ್ಕೆ ಬಾರದ ದೇವರನ್ನ ಅಂತರಂಗದ ಅರಿವಿನಲ್ಲಿ ದಿನದಿನವೂ ಕಾಣುತ್ತ ಅರಿಯುತ್ತ ಕಲ್ಯಾಣದ ದಾರಿ ಹಿಡಿದಳು. ಅರಣ್ಯದೊಳಗಿನ ದಾರಿಯಲ್ಲಿ ಕಾಡುಪ್ರಾಣಿಗಳ ಗರ್ಜನೆ, ಹಕ್ಕಿಗಳ ಕಲರವ, ನಾರಿ ನಾಯಿಗಳು ಕೂಗಾಟದ ಮಧ್ಯೆ ನಿಸ್ಸೋತು ಮಣ್ಣಿನ ಏರುದಿಬ್ಬಿನ ಮೇಲೆ ಮಲಗಿದ ನಿಜದೇವಿಗೆ ಕಾಡೆಲ್ಲ ಹೊತ್ತಿ ಧಗಧಗ ಉರಿಯುತ್ತಿದ್ದಂತೆ ಮೇಲೆ ಏಳಲು ಆಗದೇ ‘ಎಲೇ ಬಿಡಾಡಿ ಇಲ್ಲಿಯ ತನಕ ಬಂದೆಯಾ? ಅನ್ನುತ್ತಾ ಅಲ್ಲಿಯೇ ಕುಸಿದು ಬಿದ್ದಳು.
ಮರುದಿನ ಎಚ್ಚರವಾದಾಗ ಕಾಡು ಜನಾಂಗದ ಹಟ್ಟಿಯಲ್ಲಿ ಮಲಗಿರುವುದನ್ನು ಕಂಡಳು. ಆ ಹಟ್ಟಿಯ ದೊರೆಯ ಹೆಂಡತಿ ನಿಜದೇವಿಯ ಅಂಗಾಲದಲ್ಲಿ ಆದ ಗುಳ್ಳೆಗಳಿಗೆ ಮನೆ ಮದ್ದನ್ನು ಹಚ್ಚುತ್ತಿದ್ದಳು. ಕಲ್ಲು ಮುಳ್ಳಿಗೆತಾಗಿ ಮೈಮೇಲಿನ ಬಟ್ಟೆಗಳೆಲ್ಲ ತುಂಡು ತುಂಡಾಗಿದ್ದವು. ಅಲ್ಲಲ್ಲಿ ಮೈ ತುಂಬ ಮಸಿತುಂಬಿದ ಚಿಕ್ಕಪುಟ್ಟ ಸುಟ್ಟು ಗಾಯಗಳಾಗಿದ್ದವು. ಅಂತಹ ಅವಸ್ಥೆಯಲ್ಲಿ ಇದ್ದವಳನ್ನು ಕಂಡ ಹಟ್ಟಿ ದೊರೆ ಅವಳ ಸೌಂದರ್ಯಕೆ ಮನಸೋತು ಮದುವೆಯಾಗುವ ಆಸೆಯನಿತ್ತ. ಕಾಡು ದೇವಿಯ ಪೂಜಾರಿ ಅದಕೆ ಸಮ್ಮತಿ ನೀಡಿ, ನಿಜದೇವಿಗೂ ಏನು ಬೇಕು ಕೆಳೆಂದಾಗ ‘ ಯಾವ ಮೈ ಯಾರಿಗೆ ಆಸೆ ಚಿಗುರಿತೋ ಆ ಮೈ ವಾಸನೆ ನನಗಿಲ್ಲ. ಅದು ಬಿಡಾಡಿ ದೇವನೆ ಸ್ವತ್ತು. ಇದೋ ಲೋಕವೇ ನೋಡಿಕೊಳ್ಳಲಿ ಬಯಲಾದೆನು ಎನ್ನುತ್ತಾ ತನ್ನ ಮೈಮೇಲಿನ ಅಳಿದುಳಿದ ಬಟ್ಟೆಯನ್ನೆಲ ಕಿತ್ತೆಸೆದಳು. ಅಲ್ಲಿಯೇ ಕುಳಿತ ಹಟ್ಟಿ ದೊರೆಯ ಹೆಂಡತಿ ಓಡಿಹೋಗಿ ಒಂದು ಕೌದಿ ಯಿಂದ ಅವಳ ಮೈ ಮುಚ್ಚಿದಳು. ಹಳೆ ಬಟ್ಟೆಯ ಹೊಸ ಹೊಂದಾಣಿಕೆಯಲ್ಲಿ ಕಾಶ್ಮೀರದ ವಿಧವಿಧ ಚಿತ್ತಾರದಂತೆ ಬಿಳಿದಾರದ ಗೆರೆಗಳಿದ್ದವು. ‘ಈರುಳ್ಳಿಯ ಸಿಪ್ಪೆ ಸುಲಿದಂತೆ ಅಲ್ಲೆನಿದೆ ಬಟ್ಟೆಯ ಒಂದೊಂದು ಪದರು ಬಿಚ್ಚಿದರೆ ಅದೇ ಬಯಲು, ಕೂಡಿಸಿ ಜೊಡಿಸಿದರೆ ಹೊಸ ಹೊದಿಕೆ’. ನಿಜದೇವಿಯ ಚಿತ್ತ ಕೌದಿಯ ಚಿತ್ತಾರ ಕಾಣುವುದರಲ್ಲೆ ಆ ಬಿಡಾಡಿ ದೇವನು ಈ ಕೌದಿಯಲ್ಲೆ ಇದ್ದಾನೆಂದು ಭಾವಿಸಿದವಳು. ಅಲ್ಲಿಂದ ಬೊಂತೆಯನ್ನು ಹೊತ್ತುಕೊಂಡು ಕಲ್ಯಾಣದತ್ತ ನಡೆದಳು. ಆಕೆ ಹೊದ್ದುಕೊಂಡಿದ್ದ ಬೊಂತೆಯನ್ನು ಕಂಡು ಲೋಕವೆಲ್ಲ ಬೊಂತಾದೇವಿಯೆಂದು ಅವಳನ್ನು ಕರೆಯತೊಡಗಿತು.
ಮಾರನೆ ದಿನ ಗೊದಾವರಿ ಹೊಳೆದಾಟಿ ಕಲ್ಯಾಣಕ್ಕೆ ಬಂದಾಗ, ಬಾಯಾರಿ ಬಂದವರಿಗೆ ತುಂಬಿಟ್ಟು ಅರವಟ್ಟೆಗಳು, ಅನ್ನಾಹಾರ ಛತ್ರಗಳು, ಜನರ ನಡೆನುಡಿಯೊಳಗಿನ ನಯವಿನಯವನ್ನ ಕಂಡಳು. ಸ್ವರ್ಗವೇ ಕಣ್ಣೆದಿರು ನಿಂತತನಿಸಿತು. ತನ್ನ ಮನಸ್ಸಿಗೆ ತೋಚಿದ ಹಾಗೆ ಅಲ್ಲಲ್ಲಿ ಮಲಗಿ ದಿನ ಕಳೆದಳು. ತಾನು ಅರಮನೆಯಲ್ಲಿ ಕಲಿತಿದ್ದು ವೇದ ಶಾಸ್ತ್ರ, ಪುರಾಣ ಪೌರೋಹಿತ ವೇದಗಳು ಯಾವ ಅನುಭಾವ ಕೊಡಲಿಲ್ಲವೋ ಅದಕ್ಕಿಂತ ಮಿಗಿಲಾದ ಅನುಭವ ಕಲ್ಯಾಣದ ಪ್ರಜೆಗಳಲ್ಲಿ ಶರಣಶರಣೆಯರ ನಡೆ ನುಡಿ ಆಲೋಚನೆಗಳಲ್ಲಿ ಕಂಡಳು. ಅನುಭಾವ ಮಂಟಪದಲ್ಲಿ ಹೆಣ್ಣುಗಂಡೆಬ ಭೇದವಿಲ್ಲದ, ಶಾಸ್ತ್ರ ಸಂಪ್ರದಾಯಗಳಿಲ್ಲದ ನಯ ವಿನಯದಿಂದಿರುವ ಅರಿವಿನ ಹೊಳೆಯಲ್ಲಿ ಮಿಂದು ಸಂತಸಪಟ್ಟಳು. ಎಲ್ಲರ ಉಸಿರೊಳಗೆ, ಮನದೊಳಗೆ ಆ
ಬಿಡಾಡಿ ದೇವನೇ ನೆಲೆಸಿರುವುದನ್ನು ಕಂಡು, ಕೆಲಕಾಲ ಮಾತಿಲ್ಲದೆ ಮೌನದಲ್ಲಿಯೇ ಎಲ್ಲವನ್ನು ಅನುಭವಿಸಿದಳು. ಬಸವಣ್ಣನವರು ಪ್ರತಿಯೊಬ್ಬರ ಹತ್ತಿರ ಹೋಗಿ ಅಂತಃಕರಣದಿಂದ ಮುಟ್ಟಿ ಮಾತನಾಡಿಸುವುದುನ್ನು ಕಂಡು ಸಾಕ್ಷಾತ್ ಬಿಡಾಡಿ ದಯಾಮೂರ್ತಿಯ ಕಂಡ ಅನುಭಾವ ಅವಳಿಗಾಯಿತು. ಅದೇ ದಿನ ರಾತ್ರಿ ಯಾರ ಊಹೆಗೂ ನಿಲುಕದ ಕಲ್ಪಿಸದ ಕಲ್ಯಾಣತುಂಬ ಕಿರುಚಾಟ, ಮಕ್ಕಳ ಆಕ್ರಂದನ, ಶರಣರ ಮನೆಗಳು ಬೆಂಕಿಗಾಹುತಿಯಾಗಿದ್ದವು. ಬೊಂತೆಯೊಳಗೆ ಮುದುಡಿ ಕುಳಿತ ಬೊಂತಾದೇವಿ ಏನು ನಡೆಯುತ್ತಿದೆ ಎಂಬುದು ಅರಿವಾಗುವ ಮೊದಲೆ ಶರಣರೆಲ್ಲ ಬಯಲೊಳಗೆ ಬಿಡಾಡಿಯ ಕುರುಹು ಹುಡುಕುತ್ತಿದರು. ಯಾರೋ ಬಂದು ಏ ಹುಚ್ಚಿ ಏನು ಹುಡುಕುತ್ತಿಯಾ ಎಂದು ಕೇಳಿದ. ಮಮಕಾರದ ಮುತ್ತು ಕಳೆದುಕೊಂಡೆನು. ನೀನು ಕಂಡಿಯೆನಪ್ಪಾ. ನಿನ್ನೆಯ ದಿನ ಇದೇ ಹಾದಿಯಲ್ಲಿ ಅಣ್ಣನವರ ಜೊಳಿಗೆಯಲ್ಲಿತ್ತು, ಅದಕ್ಕೂ ಮೊದಲು ಶರಣರ ಜಂಗಮ ದಾಸೋಹದ ಊಟದ ಬಟ್ಟಲಲ್ಲಿತ್ತು, ಓಂ ಮುತ್ತಿನ ಬೆಲೆ ನಿನ್ನ ಕೈಯೊಳಗಿನ ಅವುಗಳಿಗೆ ತಿಳಿಯದು. ಕಂಡರೆ ಹೇಳಿಕೊಟ್ಟ ಭಂಟನೇ! ನಾನೊಂದು ಬಿಡಾಡಿ ಮುತ್ತೊಂದು ಕಳೆದುಕೊಂಡೆವು ಎನ್ನುತ ಅಳುತ ನಗುತ ಮರುಗತೊಡಗಿದಳು. ಕಲ್ಯಾಣದ ಶರಣರ ಸನ್ನಿಧಾನದಲ್ಲಿ ದಿನದಿಂದ ದಿನಕ್ಕೆ ಪರಿಚಿತಳಾಗಿ ಅರಿವು ಹುಡುಕುತ್ತಾ ಊರ ಹೊರಗೂ ಒಳಗೂ ಘಟದೊಳಗೂ ಬಯಲಾಗುತ್ತ, ಬೊಂತೆಯೊಳಗೂ ಬಯಲಾದ ಶರಣೆ ಬೊಂತಾದೇವಿ. ಇವಳ ವಚನಗಳ ಅಂಕಿತನಾಮ ಬಿಡಾಡಿ. ಅವಳ ಆರು ವಚನಗಳು ಸಿಕ್ಕಿವೆ. ಅವುಗಳಲ್ಲಿ ಬಯಲಿನ ಕಲ್ಪನೆಯೇ ಪ್ರಮುಖವಾಗಿದೆ.

ಊರ ಒಳಗಣ ಬಯಲು,
ಊರ ಹೊರಗಣ ಬಯಲೆಂದುಂಟೆ ?
ಊರೊಳಗೆ ಬ್ರಾಹ್ಮಣ ಬಯಲು,
ಊರ ಹೊರಗೆ ಹೊಲೆಬಯಲೆಂದುಂಟೆ ?
ಎಲ್ಲಿ ನೋಡಿದಡೆ ಬಯಲೊಂದೆದ
ಬಿತ್ತಿಯಿಂದ ಒಳಹೊರಗೆಂಬ ನಾಮವೈಸೆ.
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.

ಬೀಡಾಡಿಯೆಂದರೆ ಯಾವ ಎಲ್ಲೆಗಳೂ ಇಲ್ಲದ ಬಯಲು ರೂಪ ಪಡೆದ ಶಿವನು. ಸ್ವತಂತ್ರ ಮನೋಭಾವದ ಬೊಂತಾದೇವಿಯ ಕಲ್ಪನೆಯಲ್ಲಿ, ಅವಳ ಶಿವ ಯಾವುದರಲ್ಲೂ ಬಿಳುವಹಾಗಿಲ್ಲ. ಎಲ್ಲೆಡೆಯೂ ಎಲ್ಲದರೊಳಗೆಯೂ ಬೀಡಾಡಿಯಾಗಿ ನೆಲೆಸುತ್ತಿರುತ್ತಾನೆ. ಯಾವುದೆ ಕಟ್ಟುಪಾಡುಗಳು ಆತನಿಗಿಲ್ಲ, ಲಯದೊಳಗಿರುವ ಬಯಲುರೂಪಿಯಾಗಿದ್ದವನಿಗೆ ಬೀಡಾಡಿಯ ಹೆಸರನ್ನಿಟ್ಟ ಬೊಂತಾದೇವಿಯ ಭಕ್ತಿಯ ಪರಾಕಾಷ್ಠೆಯಾಗಿದೆ. ಈ ವಚನದಲ್ಲಿ ಬಯಲೆಂಬ ದೇವರು, ಬಾಹ್ಯಾ, ಮತ್ತು ಸಮಾಜ ಎಂಬ ಮೂರು ಪ್ರಕಾರದಲ್ಲಿ ಧ್ವನಿಸುತ್ತದೆ. ಸಮಾಜದೊಳಗಿನ ಎಲ್ಲಾ ಜೀವಿ ಆಂತರಿಕ ಸಂಬಂಧವನ್ನು ಹೊಂದಿದ್ದೇನೆ ಆಗಿದ್ದಾರೆಂಬುದು ಅವಳ ನಿಲುವು. ವರ್ಣಭೇದ ನೀತಿಯ ಸಮಾಜದೊಳಗೆಕರಿಯರು- ಬಿಳಿಯರು, ಮತ್ತು ಸವರ್ಣಿಯರು ಅಸ್ಪೃಶ್ಯರು ಮುಂತಾದ ಪಂಗಡನೊಳಗೊಂಡ ಈ ಬಯಲನ್ನು ಹೀಗೆ ವಿಭಜಿಸಬಹುದೆ? ಎಂಬುದು ಬೊಂತಾದೇವಿಯ ಪ್ರಶ್ನವಾಗಿದೆ. ಮಾನವರ ನಡುವೆ ಅಡ್ಡಗೊಡೆಕಟ್ಟಿ ಒಳಗಣ ಹೊರಗಣ ಎಂದು ಹೆಸರು ಕೊಡುವುದುಂಟೆ
ಎಂಬ ಪ್ರಶ್ನೆ ಶ್ರೇಣಿಕೃತ ಸಮಾಜದ ಅತಾರ್ಕಿಕತೆಯ ಮೇಲೆ ಬೆಳಕು ಚೆಲ್ಲುತ್ತದೆ. ಎಲ್ಲೆಡೆ ಇರುವ ಶಿವ ಯಾರೇ ನಂಬಿಕರೆದರೂ ಓಂ ಎನ್ನದಿರುತ್ತಾನೆಯೇ? ಎಂಬ ಆತ್ಮವಿಶ್ವಾಸ ಅವಳದಾಗಿದೆ. ಆಧ್ಯಾತ್ಮದ ತುದಿಯನ್ನು ಮುಟ್ಟಿದ ಶರಣೆಬೊಂತಾದೇವಿಯ ಮನಸ್ಸು ಸಮತಾಭಾವದಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ತುಂಬಿತ್ತು ಎನ್ನುವುದಕ್ಕೆ ಈ ವಚನವೇ ಸಾಕ್ಷಿಯಾಗಿದೆ.

ಅರಿವೆ ಬಿಡಾಡಿ ಅರಿಯದೆ ಬಿಡಾಡಿ
ಮಾರನೆ ಬಿಡಾಡಿ, ಮರೆಯದೆ ಬಿಡಾಡಿ
ಅರಿವರತು ಕುರುಹಿಲ್ಲದಾತ ನೀನೆ ಬಿಡಾಡಿ

ಅರಿವೆಂಬುದು ಯಾವುದೇ ಬಂಧನಕ್ಕೊಳಗಾದ ಮುಕ್ತ ಹರಿವಿನ ಜ್ಞಾನ. ಅರಿಯದೆ ಇರುವುದು ಕೂಡ ಅರಿವಿನ ನೆರಳಿನಂತಿರುವ ಅಜ್ಞಾನದ ಭಾವನೆಗಳು. ಮಾರವು (ಮರುಳ) ಒಂದರ್ಥದಲ್ಲಿ ಬಿಡಾಡಿ ಕಾರಣ ಮರೆಯಬೇಕೆಂಬ ಉದ್ದೇಶ ಯಾವ ಸಧ್ಭಕ್ತನಿಗೂ ಇರುವುದಿಲ್ಲ ಅದಕಾಗಿ ಜ್ಞಾಪಕಕ್ಕೆ ಬಾರದ, ಬಂಧಿಯಿಲ್ಲಿಲ್ಲದ ಅದು ಕೂಡ ಮುಕ್ತವಾಗಿ ಸಂಚರಿಸುವ ಭಾವವಾಗಿದೆ. ಜ್ಞಾನದ ನಿರಂತರ ಶೋಧನೆಯಲ್ಲಿ ಸ್ಥೂಲ, ಸೂಕ್ಷ್ಮ, ಕಾರಣ ಇವುಗಳ ಬಂಧನದಿಂದ ಹೊರಗಿದ್ದು ಸತ್ಯವನ್ನು ಹುಡುಕುವ ಜ್ಞಾನಾರ್ಜನೆಯ ಪ್ರಾಮಾಣಿಕ ಪ್ರಯತ್ನ ಕೂಡ ಮುಕ್ತ, ಸ್ವತಂತ್ರ ಬಿಡಾಡಿಯೇ ಎಂದೆನ್ನುತ್ತಾಳೆ. ಕುರುಹಿನ ಸಂಕೋಲೆಗೆ ಸಿಗದ, ಅದರ ಬಂಧನಕ್ಕೊಳಪಡದ ನೀನೆ ಬಿಡಾಡಿ ದೇವರು ಎಂದು ಹೇಳಿದ್ದಾಳೆ ಬೊಂತಾದೇವಿ.


ಸುಲೋಚನಾ ಮಾಲಿಪಾಟೀಲ

One thought on “ಬಯಲುಡುಗೆಯ ಬೊಂತಾದೇವಿ

Leave a Reply

Back To Top