ಆಧುನಿಕ ಕನ್ನಡ ಸಾಹಿತ್ಯ ಮತ್ತು ಮಹಿಳೆ-ಡಾ. ಪುಷ್ಪಾವತಿ ಶಲವಡಿಮಠ

ವಿಶೇಷ ಲೇಖನ

ಡಾ. ಪುಷ್ಪಾವತಿ ಶಲವಡಿಮಠ

ಆಧುನಿಕ ಕನ್ನಡ ಸಾಹಿತ್ಯ ಮತ್ತು ಮಹಿಳೆ

ಇಡಿಯಾಗಿ ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳನ್ನು ತಿರುವಿ ಹಾಕಿದಾಗ ಮಹಿಳೆ ತನ್ನ ಸಾಹಿತ್ಯ ಚರಿತ್ರೆಯನ್ನು ತಾನೇ ಕಟ್ಟಿಕೊಳ್ಳಬೇಕಾಗಿ ಬಂದ ದುರಂತಕ್ಕೆ ತುಂಬಾ ವಿಷಾದವೆನಿಸುತ್ತದೆ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯಂತೆ ಅವಳ ಸಾಹಿತ್ಯವನ್ನೂ ಎರಡನೆಯ ದರ್ಜೆಯಲ್ಲಿಟ್ಟೆ ನೋಡಲಾಗಿದ್ದು ವಿಪರ್ಯಾಸ.
ಮಹಿಳೆ ಎಂದಾಗಲೇ ಅವಳನ್ನು ನೋಡಿದ ವೈರುಧ್ಯದ ನೆಲೆಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ’ದೇವತೆ’ ಎಂದು ಗೌರವಿಸಿ, ಆಧರಿಸಿದ್ದು ಒಂದೆಡೆಯಾದರೇ, ರಕ್ಕಸಿ, ಮಾಯೆ, ಚಂಚಲೆ, ಮಲೀನೆ, ಕಿರುಬನ ಹೃದಯದವಳು, ನಡೆದಾಡುವ ಸ್ಮಶಾನ ಎಂಬ ವೈರುಧ್ಯದ ಹೇಳಿಕೆಗಳು ಅವಹೇಳನಕಾರಿ ಮಾತುಗಳು, ಅವಮಾನಗಳು ಮಹಿಳೆಯನ್ನು ತಲೆ ತಗ್ಗಿಸುವಂತೆ ಮಾಡಿವೆ. ಸ್ಥಾಪಿತ ಸಿದ್ಧಾಂತಗಳಂತೂ ಅವಳನ್ನು ದೇವಮಂದಿರಗಳಲ್ಲಿ ಕಲ್ಲಾಗಿಸಿ, ದೇವತೆಯ ಸ್ಥಾನ ನೀಡಿದ್ದರೂ ಜೀವಂತ ಹೆಣ್ಣಿನಲ್ಲಿ ಅವಹೇಳನಕಾರಿ ಗುಣಗಳನ್ನು ಅರೋಪಿಸಿದ್ದು ಮಾತ್ರ ವಿಪರ್ಯಾಸವೇ ಸರಿ.
ಪುರುಷ ಶ್ರೇಷ್ಠ-ಹೆಣ್ಣು ಕನಿಷ್ಠ ಎಂಬ ತರತಮ ಭಾವನೆಯಲ್ಲೇ ಅವಳ ಬದುಕಿನ ಅಸ್ತಿತ್ವ ಹೂತು ಹೋದಾಗ, ಆ ಕೆಸರಿನಿಂದ ಎದ್ದು ಬರುವುದೇ ಅವಳಿಗೆ ಬಹು ದೊಡ್ಡ ಸಾಹಸ ಆಗಿತ್ತು.
ಪುರೋಹಿತಶಾಹಿ ವ್ಯವಸ್ಥೆ, ಪ್ರಭುತ್ವ ವ್ಯವಸ್ಥೆ, ಪುರುಷ ಪ್ರಧಾನ ವ್ಯವಸ್ಥೆಯ ಅಡಿಯಲ್ಲಿ ಮಹಿಳೆ ಶತಶತಮಾನಗಳಿಂದಲೂ ಶೋಷಿತಳೇ ಆಗಿದ್ದಳು. ಪ್ರಭುತ್ವವನ್ನೂ ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ವಿಚಾರಗಳನ್ನು ವರ್ಗಾಯಿಸಿದವರು ಪುರೋಹಿತಶಾಹಿ ವರ್ಗದವರು. ಹೆಣ್ಣು ಅಪವಿತ್ರಳೆಂದು ಹೇಳುತ್ತಾ ಅವಳ ರಜಸ್ವಲೆಯನ್ನು ಮುಂದಿಟ್ಟುಕೊಂಡು ಮಡಿ-ಮೈಲಿಗೆಯ ನೆಪವೊಡ್ಡಿ ಅವಳನ್ನು ದೂರವಿರಿಸುತ್ತಾ ಬಂದದ್ದೂ ಸಹ ಇದೇ ಪುರೋಹಿತಶಾಹಿ ವರ್ಗ. ಇವೆಲ್ಲಾ ಕಾರಣಗಳಿಂದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ದ್ವಿತಿಯ ದರ್ಜೆಯ ಪ್ರಜೆಯಾಗಿ, ಅವನ ಅಡಿಯಾಳಾಗಿ ಬದುಕು ಕಳೆದ ಕಥೆಗಳಿವೆ. ಸಮಾಜದಲ್ಲಿ ಪುರುಷರಂತೆ ತಾನೂ ಒಬ್ಬಳು ಮನುಷ್ಯಳು ಎಂಬ ತಿಳುವಳಿಕೆ ಬಂದಿದ್ದೆ ಮಹಿಳೆಗೆ ಇತ್ತೀಚೆಗೆ. ಹೆಂಡತಿ ಎಂದರೆ ಜೊತೆಗಾಗಿ, ಮಗಳು ಎಂದರೆ ನೋವಿನ ಶೂಲ ಎಂದು ಅರ್ಥೈಸಿದ ವ್ಯವಸ್ಥೆಯಲ್ಲೇ ಮಹಿಳೆ ಇದ್ದಳು. ಹೆಂಡತಿಯಾಗಿ ಹೆಣ್ಣು ಬೇಕು, ಆದರೆ ಮಗಳಾಗಿ ಅವಳು ಬೇಡ. ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಎಂಬುದು ಹೀಗೆನೇ ಬೆಳೆದುಕೊಂಡು ಬಂದಿದೆ. ಹೀಗಾಗಿ ೨೧ನೇ ಶತಮಾನದಲ್ಲಿದ್ದುಕೊಂಡು, ಕಂಪ್ಯೂಟರ್ ಯುಗದಲ್ಲಿ ಇದ್ದುಕೊಂಡು, ಜ್ಞಾನಜಗತ್ತಿನ ತುತ್ತ ತುದಿಯಲ್ಲಿದ್ದರೂ ಹೆಣ್ಣು ಭ್ರೂಣ ಹತ್ಯೆಯಂತಹ ಕಾಲಘಟ್ಟದಲ್ಲಿದ್ದೆವೆ. ಹೆಣ್ಣಿನ ಮೇಲೆ ಅತ್ಯಾಚಾರಗಳು ನಡೆಯುತ್ತಿತ್ತು. ಅದನ್ನೆ ಅತ್ಯಂತ ಕ್ರೂರವಾದದ್ದು ಎಂದುಕೊಂಡ ಸಮಯದಲ್ಲೇ ಅದನ್ನೂ ಮೀರಿ ಆಸಿಡ್ ಎರಚುವ, ಅತ್ಯಾಚಾರ ಎಸಗಿ ಕ್ರೂರವಾಗಿ ಅಂಗಾಂಗಳನ್ನು ಕತ್ತರಿಸಿ ಸಾಯಿಸುವ ವಿಕೃತಿಯ ಕಾಲಘಟ್ಟದಲ್ಲಿ ಇದ್ದಾಗ ಮತ್ತೆ ಮತ್ತೇ ಮಹಿಳೆಯ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ ಇವತ್ತಿಗೂ ಕಾಡುತ್ತಿದೆ. ಈ ಕಾರಣದಿಂದ ಮಹಿಳೆಯ ಬಗ್ಗೆ, ಅವಳ ಸಾಹಿತ್ಯದ ಬಗ್ಗೆ, ಅವಳ ಭಾಷೆಯ ಬಗ್ಗೆ ಮಾತನಾಡುವುದು, ಬರೆಯುವುದು ಪ್ರಸ್ತುತ ವಿಷಯ ಎಂದೇ ಒಪ್ಪಿಕೊಳ್ಳಬಹುದು.
ದಲಿತ ಸಮುದಾಯದಂತೆ ಮಹಿಳಾ ಸಮುದಾಯವನ್ನೂ ಚಾರಿತ್ರಿಕವಾಗಿ ಅಷ್ಟೇ ಅಲ್ಲ ಸಾಹಿತ್ಯಿಕವಾಗಿಯೂ ಹೊರಗಿಡಲಾಗಿದೆ. ಸೃಜನಶೀಲ ಕಾರ್ಯದಲ್ಲಿ ಅದರಲ್ಲೂ ಬರವಣಿಗೆಯಂತಹ ಅಭಿವ್ಯಕ್ತಿಯ ಸಂದರ್ಭದಲ್ಲಿ ಅವಳು ತೊಡಗಿಕೊಳ್ಳಲು ಹಲವಾರು ಅಡ್ಡಿ-ಆತಂಕ-ನಿರ್ಭಂದಗಳಿದ್ದವು. ಹೀಗಾಗಿ ಕನ್ನಡ ಸಾಹಿತ್ಯ ಸಂದರ್ಭಗಳನ್ನು ನೆನಪಿಸಿಕೊಂಡಾಗ ಮಹಿಳೆಯ ಕುರಿತು ತುಂಬಾ ವಿಷಾದ ಎನಿಸುತ್ತದೆ. ಕನ್ನಡ ಭಾಷೆಗೆ ಸಾಮಾನ್ಯವಾಗಿ ಸುಮಾರು ೨೦೦೦-೨೫೦೦ ವರ್ಷಗಳ ಇತಿಹಾಸವನ್ನು ಹೇಳುತ್ತೇವೆ. ಕನ್ನಡಸಾಹಿತ್ಯಕ್ಕೆ ೧೫೦೦-೨೦೦೦ ವರ್ಷಗಳ ಇತಿಹಾಸವನ್ನು ಹೇಳುತ್ತೇವೆ. ಹಾಗೆಯೇ ಕನ್ನಡ ವ್ಯಾಕರಣ ಪರಂಪರೆಗೆ ಸುಮಾರು ೧೦೦೦ ವರ್ಷಗಳ ಇತಿಹಾಸ ದಾಖಲೀಕರಿಸುತ್ತೇವೆ. ಇಷ್ಟೆಲ್ಲಾ ಶ್ರಮವಹಿಸಿ ದಾಖಲೆಯುತವಾಗಿ ಅಂಕಿ-ಅಂಶಗಳನ್ನು ಕಲೆ ಹಾಕುವ ನಾವುಗಳು ನಮ್ಮ ಭಾಷೆ, ಸಾಹಿತ್ಯ, ವ್ಯಾಕರಣದ ಸುಧೀರ್ಘ ನಡಿಗೆಯನ್ನು ಕಂಡು ಹೆಮ್ಮೆ ಪಡುತ್ತೆವೆ. ಏತನ್ಮಧ್ಯೆ ಕನ್ನಡ ಸಾಹಿತ್ಯ ಸೃಷ್ಟಿ ಪ್ರಾರಂಭವಾಗಿ ಎಷ್ಟೋ ಶತಮಾನಗಳವರೆಗೆ ಮಹಿಳಾ ಸಾಹಿತ್ಯದ ಗೈರು ಹಾಜರಿಯನ್ನು ಎದುರುಗೊಳ್ಳುತ್ತೇವೆ. ಪುರುಷರ ಸಾಹಿತ್ಯದ ಕೃತಿಗಳ ಪ್ರಕಟಣೆ ಭರದಿಂದ ನಡೆಯುತ್ತಿರುವಾಗ ಮಹಿಳೆಯ ಗೈರುಹಾಜರಿಯನ್ನೇ ಎದುರುಗೊಳ್ಳುತ್ತೇವೆ.
ಯಾಕೆ ಹೀಗಾಯಿತು.? ಮಹಿಳೆಗೆ ಯೋಚಿಸುವ ಶಕ್ತಿ ಇರಲಿಲ್ಲವೇ? ಭಾವನೆಗಳೇ ಇರಲಿಲ್ಲವೇ? ಅಭಿವ್ಯಕ್ತಿಯ ಯಾವ ಮಾರ್ಗವೂ ಅವಳ ಪಾಲಿಗೆ ತೆರೆದುಕೊಳ್ಳಲಿಲ್ಲವೇ? ಕ್ರಿಯಾಶೀಲತೆಯೇ ಇರಲಿಲ್ಲವೇ? ಸೃಜನಶೀಲತೆ ಇರಲಿಲ್ಲವೇ? ಪತ್ರ ಬರೆಯುವುದಕ್ಕೂ ಬರುತ್ತಿರಲಿಲ್ಲವೇ? ಮೇಘ ಸಂದೇಶಗಳು ಇದ್ದಾಗ ಪತ್ರ ಸಂದೇಶಗಳು ಇದ್ದಿಲ್ಲವೇ? ಪ್ರಭುತ್ವ ಮತ್ತು ಪುರುಷ ಪ್ರಧಾನ ವ್ಯವಸ್ಥೆ ಅವಳನ್ನು ಏಕಾಂತವಾಸಿಯನ್ನಾಗಿಸಿತೇ? ಹೊರುವ ಹೆರುವ ಸಂಸ್ಕೃತಿ ಅಡುಗೆ ಮನೆ-ಹೆರಿಗೆ ಕೋಣೆಗಳಿಗೆ ಅವಳನ್ನು ಸೀಮಿತವಾಗಿಸಿತ್ತೇ? ಎಂಬ ಹತ್ತಾರು ಪ್ರಶ್ನೆಗಳು ಕಾಡತೊಡಗುತ್ತವೆ. ಮಂತ್ರ ಋಕ್ಕುಗಳನ್ನು ಬರೆದು ವೇದ-ಉಪನಿಷತ್ತುಗಳನ್ನು ಓದಿಕೊಂಡು ವಾದಿನಿಯರೆಂದು ಹೆಸರಾದ ವಿಶ್ವವರಾ, ಗೋಧಾ, ಘೋಷಾ, ಲೋಪಾಮುದ್ರಾ, ಗಾರ್ಗಿ, ಕಾತ್ಯಾಯಿನಿ ತರುವಾಯ, ಕಾಲಕ್ರಮೇಣ ಎಲ್ಲಿ ಕಳೆದು ಹೋದರು? ಇನ್ನು ಎಷ್ಟೋ ಪ್ರಶ್ನೆಗಳು ತಲೆ ಕೊರೆಯುತ್ತವೆ.
ಸಾಹಿತ್ಯ ರಚನೆಗೆ ತೊಡಗಲು ಮಹಿಳೆಗೆ ಪುರುಷನಷ್ಟು ಧ್ಯಾನಸ್ಥಿತಿ. ಏಕಾಗ್ರತೆ, ತನ್ಮಯತೆ ದೊರೆಯಲಾರದು. ಓದಲು, ಬರೆಯಲು ಕುಳಿತರೆ ಕುಕ್ಕರ್ ಆರಿಸುವ ಚಿಂತೆ, ಮಕ್ಕಳನ್ನು ಶಾಲೆಗೆ ಕಳುಹಿಸುವ, ಕರೆದುಕೊಂಡು ಬರುವ. ಹೊಂವರ್ಕ ಮಾಡಿಸುವ, ಗಂಡ-ಅತ್ತೆ-ಮಾವ-ಬಂಧು-ಬಳಗ, ನೆರೆ-ಹೊರೆ, ಆಪ್ತರಿಷ್ಟರು ಹೀಗೆ ಎಲ್ಲರನ್ನೂ ಎಲ್ಲವನ್ನೂ ಸಂಭಾಳಿಸುವ ಹೊಣೆಗಾರಿಕೆ, ಹಬ್ಬ-ಹರಿದಿನ, ಜಾತ್ರೆ-ಮಹೋತ್ಸವ, ಪೂಜೆ-ವ್ರತ-ಉಪವಾಸಗಳಿಗೆ ದಣಿಯುವುದು ಅವಳ ಪಾಲಿಗಿರುವಾಗ ಮಹಿಳೆಗೆ ಏಕಾಂತ, ಧ್ಯಾನಸ್ಥಿತಿ ದೊರೆಯುವುದು ತುಂಬಾ ಕಡಿಮೆ. ಇಂತಹ ಎಲ್ಲಾ ಸಂದರ್ಭಗಳು ಅವಳ ಓದಿಗೆ, ಬರವಣಿಗೆ ಖಂಡಿತಾ ತೊಂದರೆ ಮಾಡುತ್ತವೆ. ಬಹುತೇಕ ಪುರುಷರು ಇಂತಹ ಜವಾಬ್ದಾರಿ ಪ್ರಸಂಗಗಳಿಂದ ದೂರ ಉಳಿಯುಯತ್ತಾರೆ. ಅವರು ತಮ್ಮ ವಯಕ್ತಿಕ ವೃತ್ತಿ ಬದುಕಿನ ಆಚೆ-ಈಚೆಗೆ ಲಕ್ಷ್ಯವಹಿಸಿ ತಮ್ಮ ಮನಸ್ಸು ಮತ್ತು ದೇಹವನ್ನು ಬಳಲಿಸಿಕೊಳ್ಳುವುದಿಲ್ಲ. ಈ ಕಾರಣದಿಂದ ಅವರಿಗೆ ಉಲ್ಲಸಿತ ಮನಸ್ಥಿತಿ ಏಕಾಂತ ಧ್ಯಾನಸ್ಥಿತಿ ಸುಲಭವಾಗಿ ದೊರೆಯುತ್ತದೆ. ಅಂತಹ ಸಮಯವನ್ನು ಓದು, ಬರಹದಲ್ಲಿ ಆಸಕ್ತಿ ಇದ್ದ ಕ್ರಿಯಾಶೀಲ ಸೃಜನಶೀಲ ಪುರುಷ ವರ್ಗ ಬಳಸಿಕೊಳ್ಳುತ್ತದೆ. ಒತ್ತಡದ ಬದುಕಿನಿಂದ ಮಹಿಳೆಯು ಎಷ್ಟೇ ಕ್ರಿಯಾಶೀಲೆಯಾಗಿದ್ದರೂ ಸೃಜನಶೀಲೆಯಾಗಿದ್ದರೂ ಓದು ಬರಹದಲ್ಲಿ ತೊಡಗಿಸಿಕೊಳ್ಳಲಾಗದಿದ್ದಕ್ಕೆ ತೊಳಲಿಬಳಲುವ ಪೇಚಿನ ಸ್ಥಿತಿಗೆ ಬಂದು ನಿಲ್ಲುತ್ತಾಳೆ. ಕುಟುಂಬ ನಿರ್ವಹಣೆಗೆ ಬಂದ ಹೆಣ್ಣುಮಗಳು ಮನೆತನದ ನಿರ್ವಹಣೆ ವಂಶಾಭಿವೃದ್ದಿ ಮುಂತಾದ ಕಾರಣಗಳಿಂದ ಮತ್ತು ಅವುಗಳನ್ನು ನಿರ್ವಹಿಸುವಲ್ಲಿಯೇ ಅವಳ ಪ್ರತಿಭೆ ಕ್ರಿಯಾಶೀಲತೆ ಸೋರಿ ಹೋಗಿರುತ್ತದೆ. ಇತ್ತೀಚೆಗೆ ಆ ನೋವು-ತಲ್ಲಣ-ಸಂಕಟಗಳು ಮಹಿಳಾ ಕಾವ್ಯದಲ್ಲಿ ಅಭಿವ್ಯಕ್ತವಾದದ್ದು ಕಂಡು ಬಂದಿದೆ.

ಘಮಟುಗಟ್ಟಿದ ಅಡುಗೆ ಕೋಣೆಗಳಿವೆ
ಜಿಡ್ಡುಗಟ್ಟಿದ ಬಾಣಂತಿ ಖೋಲಿಗಳಿವೆ
ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ...!
ಸೂರ್ಯಕಿರಣಗಳೇ ಕಾಣದ ನಮ್ಮ
ಕತ್ತಲ ಕೋಣೆ ಗವಿಗೊಮ್ಮೆ
ನೀನು ದಯಮಾಡಿಸಬಾರದೆ...?
        (ಪ್ರಭುವೇ ನೀನೊಮ್ಮೆ ಹೆಣ್ಣಾಗು- ಕೆ. ಷರೀಫಾ)

ಹೌದು ಕಣೆ ಉಷಾ
ನಾವು ಹುಡುಗಿಯರೇ ಹೀಗೆ...
ಏನೇನೋ ವಟಗುಟ್ಟಿದರೂ
ಹೇಳಬೇಕಾದ್ದನ್ನು ಹೇಳದೆ
ಏನೇನೆಲ್ಲಾ ಅನುಭವಿಸಿ ಸಾಯುತ್ತೇವೆ.
ಜುಮ್ಮೆನಿಸುವ ಆಲೋಚನೆಗಳನ್ನೆಲ್ಲಾ
ಹಾಗೆ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ.
            (ನಾವು ಹುಡುಗಿಯರೇ ಹೀಗೆ-ಪ್ರತಿಭಾ ನಂದಕುಮಾರ)

ಅಂದು
ಇಂದೂ ನನ್ನ ಸುತ್ತಿದ
ಹೃದಯಹೀನ ಮಳಲು ವಿಸ್ತಾರಗಳಲ್ಲಿ
ನಿಷ್ಕಲ್ಮಶ ಪ್ರೇಮ, ನಿಷ್ಠೆ, ವಿಶ್ವಾಸ
ಗಗನ ತಾರೆಗಳ
ನಿರಭ್ರ ನೀಲಿ ಆಕಾಶದ 
ಮುಳ್ಳು ಹಾಸಿಗೆಯಲಿ
ನರಳಿ ಮನಸು ಕನಸು
ಮುಪ್ಪಾಗಿವೆ.
        (ಒಂಟಿ-ಮಾಲತಿ ಪಟ್ಟಣಶೆಟ್ಟಿ) 

ಮೊದಲೆ ಮಣ್ಣಿನ ಮಗಳು, ಮಣ್ಣಾಗಿ ಹೋದಳು
ಸುಕ್ಕು ತೊಗಲಿನ ದೇಹ ಬಿಳಿಗೂದಲು
’ಮಣ್ಣೆ ನುಂಗಲಿ ನನ್ನ’ ಎಂಬ ಪರಿತಾಪ
ಉಗ್ರಶಾಪದ ಒಂದು ರೂಪವಷ್ಟೆ
ಯಾರೂ ಹೇಳಿದರಿವರು ಆದರ್ಶವೆಂದು
ಇಂಥ ಗಂಡನು ಬೇಡ ಏಳು ಜನ್ಮಕು
ಎನುತಲೆ ಮಣ್ಣ ಸೇರಿದರು ಸೀತೆಯರು
ಸೀತೆ ಹುಟ್ಟುವುದಿಲ್ಲ ಇನ್ನು ಮುಂದೆ
ಸೀತೆ ಹುಟ್ಟುವುದಿಲ್ಲ ಇನ್ನು ಮುಂದೆ
        (ಸೀತೆ ಹುಟ್ಟುವುದಿಲ್ಲ ಇನ್ನು ಮುಂದೆ - ಧರಣೀದೇವಿ ಮಾಲಗತ್ತಿ)

ಮೌನಗಳು ಮಾತನಾಡುತ್ತವೆ
ನದಿ ಕಣಿವೆಗಳಲ್ಲಿ
ಸಹ್ಯಾದ್ರಿಯ ಕಾಡುಪೊದೆಗಳಲ್ಲಿ
ಆಕಾಶವನ್ನಪ್ಪುವ ಬಟಾಬಯಲ ಬತ್ತಲೆಯಲ್ಲ
ಮಾತನಾಡುತ್ತವೆ ಮೌನಗಳು
ಮುದಿ ಸೊಳೆಯರ ಕಣ್ಣುಗಳಲ್ಲಿ
ತುಡುಕುತ್ತವೆ ಮೌನಗಳು ತಲೆ ಹಿಡುಕರ
ಭದ್ರ ಜೇಬುಗಳಲ್ಲಿ
ನಟಿಸುವ ನಾಯಕರ ಸಿಹಿ ಮಾತುಗಳಲ್ಲಿ
            (ಪ್ರಶ್ನೆಗಳು-ಎಚ್.ಎಲ್. ಪುಷ್ಪಾ)

ಹೌದವ್ವ,
ನಾವೆಲ್ಲೋ ಎಡವಿದ್ದೇವೆ,
ಏನನ್ನೋ ಬಚ್ಚಿಟ್ಟುಕೊಳ್ಳಲು
ಹೋಗಿ ಪೂರ್ತಿ ಬೆತ್ತಲಾಗಿದ್ದೇವೆ!
ಅನುಭವಿಸಿದ್ದನ್ನೆಲ್ಲ ದಾಖಲಿಸದೇ
ಬೇರೆಯದೇ ಭ್ರಮೆಯಲ್ಲಿ
ಬದುಕುತ್ತ ಬಂದಿದ್ದೇವೆ
            (ಜೀವ ಮಿಡಿತದ ಸದ್ದು-ವಿಭಾ)
ಇಲ್ಲ
ಒಂದೇ ಒಂದೂ ಶಬ್ದವೂ ಇಲ್ಲ

ನಿಮ್ಮ ಪದಕೋಶದಲಿ
ನಿಜ ಅರ್ಥ ಅರುಹಲು
ನಿಮ್ಮ ಪುರುಷಸೂಕ್ತದಲಿ
(ನಿಮ್ಮ ಪುರುಷಸೂಕ್ತದಲಿ-ಹೇಮಾ ಪಟ್ಟಣಶೆಟ್ಟಿ)

ಆಧುನಿಕ ಮಹಿಳಾ ಕಾವ್ಯ ಲೋಕದ ದಿಗ್ಗಜ ಕವಿಯತ್ರಿಯರ ಕವನದ ಕೆಲವು ತುಣುಕುಗಳಿವು. ಪ್ರತಿ ಸಾಲೂ ಮಹಿಳೆಯ ಬದುಕನ್ನು ಬದುಕು-ಬವಣೆಯನ್ನು ಅನಾವರಣಗೊಳಿಸಿವೆ. ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯನ್ನು ನಡೆಸಿಕೊಂಡು ಬಂದ ಚಿತ್ರಣವು ಕಾಣುತ್ತದೆ.
ಮಹಿಳೆ ಸೃಜನಶೀಲ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ತನ್ನ ಹಕ್ಕನ್ನು ಪ್ರಶ್ನಿಸಿಕೊಳ್ಳುತ್ತಾ ಅದನ್ನು ಕಿತ್ತುಕೊಳ್ಳುವವರ ವಿರುದ್ಧ ಪ್ರತಿರೋಧ ಒಡ್ಡುತ್ತಲೇ ಸಾಹಿತ್ಯದಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ.
ಮಹಿಳೆ ಬರವಣೆಗೆಯಲ್ಲಿ ತೊಡಗಿಕೊಳ್ಳುವಾಗ ಪ್ರತಿ ಹಂತದಲ್ಲೂ ಅಡೆತಡೆಗಳಿದ್ದವು. ಅವಳದು ಅಡತಡೆಗಳಲ್ಲಿಯೇ ನಿಲ್ಲದ ಓಟ. ಪುರುಷ ಕೇಂದ್ರಿತ ವಲಯದ ಚಟುವಟಿಕೆಯನ್ನು ಅವನ ಶ್ರೇಷ್ಠತೆಯನ್ನು ತನ್ನ ಕನಿಷ್ಠತೆಯನ್ನು ಪ್ರಶ್ನಿಸಿಕೊಳ್ಳುತ್ತಲೇ ಮಹಿಳೆ ಬರವಣಿಗೆಗೆ ತನ್ನನ್ನು ತೊಡಗಿಸಿಕೊಂಡಳು. ಹೀಗಾಗಿ ಮಹಿಳಾ ಸಾಹಿತ್ಯವೆಂದರೆ ಅದೊಂದು ಪ್ರತಿರೋಧದ ಸಾಹಿತ್ಯ ವೆಂದು ಅದೊಂದು ಚಳುವಳಿ ರೂಪದ ಸಾಹಿತ್ಯ ವೆಂದು ಕರೆಯಿಸಿಕೊಂಡಿತು.
ಪ್ರಾರಂಭದಲ್ಲಂತೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಸಾಹಿತ್ಯದ ದಾಖಲಾತಿ ತುಂಬಾನೇ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಚರಿತ್ರೆಕಾರರು ಎಲ್ಲೋ ಮಹಿಳಾ ಸಾಹಿತ್ಯವನ್ನು ಮುತುವರ್ಜಿಯಿಂದ ಹುಡುಕಿ ದಾಖಲಿಸುವಲ್ಲಿ ವಿಫುಲರಾಗಿದ್ದಾರೆ ಎನಿಸುವುದು. ಅತ್ತಿಮಬ್ಬೆಯಂತಹ ಶ್ರೇಷ್ಠ ಮಹಿಳೆ ರನ್ನ ಕವಿಗೆ ಆಶ್ರಯ ನೀಡಿದ್ದಳು ಮತ್ತು ಶಾಂತಿಪುರಾಣದ ಸಾವಿರ ಪ್ರತಿ ಮಾಡಿಸಿದ್ದಳು ಎಂಬಂತಹ ಸಂಗತಿಗಳು ಅವಳ ಸಾಹಿತ್ಯ ಪ್ರೇಮವನ್ನು ಹೇಳುತ್ತವೆ. ವಿಜಯನಗರ ಸಾಮ್ರಾಜ್ಯ, ರಾಷ್ಟ್ರಕೂಟ ಸಾಮ್ರಾಜ್ಯ, ಕದಂಬ, ಹೊಯ್ಸಳ ಮುಂತಾದ ಕರ್ನಾಟಕವನ್ನಾಳಿದ ಪ್ರಸಿದ್ಧ ರಾಜಮನೆತನಗಳಲ್ಲಿ ರಾಣಿ ಮಹಾರಾಣಿಯರು ಸಾಹಿತ್ಯ ರಚಿಸಿರಬಹುದು. ಡಾ. ಚನ್ನಕ್ಕಾ ಪಾವಟೆಯವರು ಶಾಸನಗಳಲ್ಲಿ ವೀರ ಮಹಿಳೆಯರು ಎನ್ನುವ ಲೇಖನದಲ್ಲಿ ಕಲ್ಯಾಣದ ಚಾಲುಕ್ಯ ದಶವರ್ಮನ ಮಗಳು, ಚಕ್ರವರ್ತಿ ಜಯಸಿಂಹನ ಸಹೋದರಿ, ಹಾನುಗಲ್ಲ ಕದಂಬ ಮಯೂರವರ್ಮನ ಮಡದಿ ಅಕ್ಕಾದೇವಿಯ ಕುರಿತು, ಹೊಯ್ಸಳ ವೀರಬಲ್ಲಾಳನ ರಾಣಿಯರಲ್ಲಿ ಒಬ್ಬಳಾದ ಉಮಾದೇವಿಯ ಕುರಿತು, ಇನ್ನೊಬ್ಬ ರಾಣಿ ಚೋಳ ಮಹಾದೇವಿಯರ ಕುರಿತು, ಕೆಳದಿ ವೀರಶ್ರೀ ಚನ್ನಮ್ಮ ರಾಣಿಯ ಕುರಿತು, ಬೆಳವಡಿ ರಾಣಿ ಮಲ್ಲಮ್ಮನ ಕುರಿತು, ಕಿತ್ತೂರ ರಾಣಿ ಚನ್ನಮ್ಮನ ಕುರಿತು, ಉಳ್ಳಾಲದ ರಾಣಿ ಅಬ್ಬಕ್ಕದೇವಿಯ ಕುರಿತು, ಸಾಮಾನ್ಯ ಮಹಿಳೆಯರಲ್ಲಿ ರಣರಂಗವನ್ನು ಪ್ರವೇಶಿಸಿ ಶೌರ್ಯ ಮೆರೆದ ’ಬಗಿಯೂರಿ’ನ ಸಾವಿಯಬ್ಬೆಯ ಕುರಿತು, ಸಾತೇನಹಳ್ಳಿಯ ಒಡತಿ ವೆಣ್ಣಿಲೆ ಸೆಟ್ಟಿಕವ್ವೆ, ಚಿತ್ರದುರ್ಗದ ಒನಕೆ ಓಬವ್ವ ಮುಂತಾದವರ ಕುರಿತು ಅತ್ಯಂತ ಶ್ರದ್ಧೆಯಿಂದ ವಿದ್ವತ್ಪೂರ್ಣ ಲೇಖನವನ್ನು ಬರೆದಿರುವರು. ಎಷ್ಟೋ ಗೊತ್ತಿರದ ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಇದೇ ತರಹ ರಾಜಮನೆತನದಲ್ಲಿ ಇರುವ ಮಹಿಳಾ ಸಾಹಿತ್ಯವನ್ನು ಸಂಶೋಧಿಸಿ ಅದಕ್ಕೆ ಪೂರಕವಾದ ದಾಖಲೆಗಳನ್ನು ಸಂಯಮದಿಂದ ಹುಡುಕಿದರೆ ಮಹಿಳಾ ಸಾಹಿತ್ಯಕ್ಕೆ ಪುಷ್ಠಿದಾಯಕ ದಾಖಲೆಗಳು ದೊರೆಯಬಹುದು. ಇನ್ನೂ ಮಹಿಳಾ ಸಾಹಿತ್ಯವನ್ನು ತಳಮೂಲದಿಂದ ಸಂಗ್ರಹಿಸುವ ದಾಖಲಿಸುವ ಕೆಲಸಗಳು ನಡೆಯಬೇಕಿದೆ. ಆರ್. ನರಸಿಂಹಾಚಾರ್ಯರ ಕವಿ ಚರಿತೆಯಿಂದ ಮೊದಲುಗೊಂಡು ಕನ್ನಡ ಸಾಹಿತ್ಯ ಚರಿತ್ರೆಯು ದಾಖಲಾಗುತ್ತಲೆ ಬಂದಿತು. ರಂ. ಶ್ರೀ. ಮುಗಳಿ, ಎಲ್. ಎಸ್. ಶೇಷಗಿರಿರಾವ್ ಹಲವಾರು ವಿಶ್ವವಿದ್ಯಾನಿಲಯಗಳು ಹೊರ ತಂದಿರುವ ಸಂಪುಟಗಳು ಮಹಿಳಾ ಸಾಹಿತ್ಯ ಚರಿತ್ರೆ ಕಟ್ಟಿಕೊಡುವಲ್ಲಿ ಗಂಭೀರವಾಗಿ ಚಿಂತಿಸಿಲ್ಲ.
ಇತ್ತೀಚೆಗೆ ’ಸ್ತ್ರೀವಾದಿ ಸಾಹಿತ್ಯ’ದಲ್ಲಿ ಪುರುಷರು ಮಹಿಳಾ ಸಾಹಿತ್ಯದ ಕುರಿತು ವಿಮರ್ಶಾತ್ಮಕವಾಗಿ ಬರೆಯುತ್ತಿದ್ದಾರೆ. ಅಂತೆಯೇ ಮಹಿಳಾ ಚಿಂತಕಿಯರು ಸಹ ಮಹಿಳಾ ಸಾಹಿತ್ಯಕ್ಕೆ ಗಂಭೀರ ಓದಿನ ಸ್ವರೂಪ ನೀಡುತ್ತಿದ್ದಾರೆ.
ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮಹಿಳೆಯನ್ನು ಯಾವ ದೃಷ್ಟಿಕೋನದಲ್ಲಿ ಚಿತ್ರಿಸಿದ್ದಾರೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಪುರುಷ ಸಾಹಿತ್ಯದಲ್ಲಿ ಮಹಿಳೆಯ ಚಿತ್ರಣ ಪ್ರಧಾನ ಪಾತ್ರವಾಗಿರುತ್ತದೋ?! ಮಧ್ಯಮ ದೃಷ್ಟಿಕೋನದಲ್ಲಿರುತ್ತದೋ?! ಎಂಬುದು ಕೂಡಾ ಗಮನಾರ್ಹವಾಗುತ್ತದೆ. ಅವರು ತಮ್ಮ ತಮ್ಮ ಕೃತಿಗಳಲ್ಲಿ ಮಹಿಳೆಯನ್ನು ಮುಖ್ಯವಾಹಿನಿಗೆ ತಂದು ನಿಲ್ಲಿಸುವರೋ?! ಪರದೆಯ ಹಿಂದೆಯೇ ಸರಿಸಿರುವರೋ?! ಎಂಬ ಎಲ್ಲ ಬಗೆಯ ಚಿತ್ರಣಗಳೂ ಕಣ್ಮುಂದೆ ಸುಳಿಯುತ್ತವೆ. ಈ ನೆಲೆಯಲ್ಲಿ ಮಹಿಳೆಯರ ಅಸ್ತಿತ್ವವನ್ನು ಶೋಧಿಸಿಕೊಳ್ಳಬೇಕಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಮತ್ತು ಮಹಿಳೆ ಎಂದಾಗ ಮೊದಲು ಈ ವಿಚಾರಗಳನ್ನು ಅವಲೋಕಿಸಬೇಕಾಗುತ್ತದೆ. ಶೃಂಗಾರ ವರ್ಣನೆಗೆ ಸೀಮಿತವಾದ ಹೆಣ್ಣಿನ ಅಂಗಾಂಗಳು ಅವಳ ಆಂತರ್ಯವನ್ನು ಸ್ಪರ್ಶಿಸಲೇ ಇಲ್ಲ ಇದು ಸಾಹಿತ್ಯದ ದೌರ್ಬಲ್ಯವಾಗಿ ಕಂಡುಬಂದಿದೆ. 
ಆಧುನಿಕತೆಯ ಸಂದರ್ಭದಲ್ಲಿ ಮುದ್ದಣ್ಣ-ಮಡದಿಯೊಂದಿಗೆ ಸರಸ ಸಲ್ಲಾಪ ಮಾಡುವುದು ಖುಷಿಯ ಸಂಗತಿ. ನವೋದಯದ ಸಂದರ್ಭದಲ್ಲಿ ಕುವೆಂಪು, ಬೇಂದ್ರೆ, ಕೆಎಸ್‌ಎನ್, ಜಿ.ಎಸ್. ಶಿವರುದ್ರಪ್ಪ, ಜಿ.ಪಿ. ರಾಜರತ್ನಂ, ಮುಂತಾದವರು ಮಹಿಳೆಗೆ ಗೌರವಸ್ಥಾನ ನೀಡಿ ಅವಳ ಶಕ್ತಿಯನ್ನು ಗುರುತಿಸಿರುವುದು ಸಂತೋಷದಾಯಕ ವಿಚಾರವಾಗಿದೆ. ಮುಂದುವರೆದಂತೆ ನವ್ಯ, ಪ್ರಗತಿಶೀಲರು ತೀರಾ ಗಂಭೀರವಾದ ಸಮಸ್ಯೆಗಳಿಗೆ ವಾಲಿಕೊಂಡು ಮಹಿಳಾ ನೆಲೆಗಳ ಗಂಭೀರ ಹುಡುಕಾಟ ಮಾಡಲಿಲ್ಲ. ದಲಿತ ಮತ್ತು ಬಂಡಾಯ ಸಾಹಿತ್ಯಗಳು ಚಳುವಳಿಗಳಾಗಿ ರೂಪಿತವಾದವೇ ಹೊರತು ಮಹಿಳಾ ಸಮಸ್ಯೆಗಳತ್ತ ಗಂಭೀರ ಅಧ್ಯಯನ ಮಾಡಲೇ ಇಲ್ಲ. ಅವಳನ್ನು ಒಂದು ಭಾಗವಾಗಿ ಮಾತ್ರ ವಿಶ್ಲೇಷಣೆ ಒಳಪಡಿಸಿದರು.

ಜನಪದ ಸಾಹಿತ್ಯ ಮಾತ್ರ ಮಹಿಳಾ ಸಾಹಿತ್ಯದ ಔನತೀಕರಣವನ್ನು ಎತ್ತಿತೋರಿದೆ. ಜನಪದ ಸಾಹಿತ್ಯ ಬೇರು ಶಿಷ್ಟ ಸಾಹಿತ್ಯ ಅದರ ಹೂ ಎಂಬ ಮತ್ತು ಜನವಾಣಿ ಬೇರು ಕವಿವಾಣಿ ಹೂ ಎಂಬ ಮಾತುಗಳು ಜನಪದ ಸಾಹಿತ್ಯದ ತಳಪಾಯದ ಮೇಲೆ ಶಿಷ್ಟ ಸಾಹಿತ್ಯ ಬೆಳೆದು ಬಂದದ್ದನ್ನು ಸ್ಪಷ್ಟ ಪಡಿಸುತ್ತವೆ. ಅದರಲ್ಲೂ ಗರತಿಯರು ಕಟ್ಟಿಕೊಂಡ ತ್ರಿಪದಿಗಳು ಸಾಹಿತ್ಯದ ದೃಷ್ಟಿಯಿಂದ ಗಮನಾರ್ಹವಾಗಿವೆ. ಕನ್ನಡ ಜನಪದ ಗರತಿಯರು ಕಟ್ಟಿಕೊಟ್ಟ ತ್ರಿಪದಿಗಳ ಮಾದರಿಗಳನ್ನು ಸರ್ವಜ್ಞ, ರತ್ನಾಕರವರ್ಣಿಯರು ಬಳಸಿಕೊಂಡರು ಎಂದು ಶ್ಯಾಮಲಾದೇವಿ ಬೆಳಗಾಂವಕರ ಅಭಿಪ್ರಾಯ ಪಡುತ್ತಾರೆ. ಹನ್ನೆರಡನೆಯ ಶತಮಾನದಲ್ಲೇ ದಟ್ಟವಾದ ಪ್ರಥಮ ಮಹಿಳಾ ಸಾಹಿತ್ಯದ ಸುಗ್ಗಿಯನ್ನು ಕಾಣಬಹುದು. ಅದರ ಪೂರ್ವದ ಮಹಿಳಾ ಸಾಹಿತ್ಯದ ದಾಖಲೀಕರಣ ನಗಣ್ಯವಾಗಿದೆ. ತರುವಾಯ ಬಂಡಾಯ ಸಾಹಿತ್ಯ ಮತ್ತು ಸ್ತ್ರೀವಾದಿ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದ ಪ್ರವಾಹದ ರಭಸವನ್ನು ಕಾಣಬಹುದಾಗಿದೆ.
ಏನೇ ಆದರೂ ಮತ್ತೇ ಮತ್ತೇ ನಮ್ಮನ್ನು ಕಾಡುವ ಪ್ರಶ್ನೆಯೊಂದೇ ಮಹಿಳಾ ಸಾಹಿತ್ಯ ಚರಿತ್ರೆಯ ದಾಖಲೆಗಳು ಯಾಕೆ ಪ್ರಜ್ಞಾಪೂರ್ವಕವಾಗಿ ಕಾಳಜಿ ಪೂರ್ವಕವಾಗಿ ನಡೆಯಲಿಲ್ಲ ಎಂಬುದು. ವಚನ ಸಾಹಿತ್ಯ ಸಂದರ್ಭ ಬಿಟ್ಟರೆ ಇತರೆ ಸಾಹಿತ್ಯ ಸಂದರ್ಭದಲ್ಲಿ ಮಹಿಳೆಯ ಹಾಜರಿ ಏಕೆ ಇಲ್ಲ? ಎಂಬುದೇ ಮುಖ್ಯ ಪ್ರಶ್ನೆಯಾಗಿ ಕಾಡುತ್ತದೆ.
೧೯೫೪ರಲ್ಲಿ ಡಾ. ರಂ.ಶ್ರೀ ಮುಗಳಿಯವರು ಕನ್ನಡ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟ ತರುವಾಯ ಸಾಕಷ್ಟು ವಿದ್ವಾಂಸರು ಮತ್ತೆ ಮತ್ತೆ ತಮ್ಮ ತಮ್ಮ ದೃಷ್ಟಿ ಧೋರಣೆಯಂತೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯೋಗ ಮಾಡಿದ್ದಾರೆ.
೧. ಶತಮಾನಗಳ ದೃಷ್ಟಿಯಿಂದ
೨. ಕನ್ನಡ ಭಾಷಾ ಬೆಳವಣಿಗೆಯ ದೃಷ್ಟಿಯಿಂದ
೩. ಪ್ರಭುತ್ವವನ್ನು ಆಧರಿಸಿ
೪. ಮತಧರ್ಮವನ್ನಾಧರಿಸಿ
೫. ಮಹತ್ವದ ಕವಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು
೬. ಪ್ರಮುಖ ಸಾಹಿತ್ಯ ಪ್ರಕಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು
೭. ಸಾಹಿತ್ಯ ಚಳುವಳಿಗಳನ್ನು ಕೇಂದ್ರಿಕರಿಸಿಕೊಂಡು

ಇಷ್ಟೆಲ್ಲಾ ದೃಷ್ಟಿ, ಧೋರಣೆಗಳ ಮೇಲೆ ಬರೆಯಲ್ಪಟ್ಟಿರುವ ಸಾಹಿತ್ಯ ಚರಿತ್ರೆಗಳು ಮಹಿಳಾ ಸಾಹಿತ್ಯದ ಮೇಲೆ, ಮಹಿಳಾ ಭಾಷೆಯ ಮೇಲೆ ಏಕೆ ದೃಷ್ಟಿ ಹರಿಸಲಿಲ್ಲ.? ಎಂಬ ಪ್ರಶ್ನೆಗಳು ಮತ್ತೆ ಮತ್ತೆ ಹೃದಯ, ಮೆದಳನ್ನು ಕೊರೆಯುತ್ತಲೇ ಇವೆ.
ಮೇಲಿನ ವಿಭಾಗೀಕರಣದ ದೃಷ್ಟಿ, ಧೋರಣೆಗಳಡಿ ಕಟ್ಟಲ್ಪಟ್ಟ ಸಾಹಿತ್ಯ ಚರಿತ್ರೆಯಲ್ಲಿ ಲಿಂಗ ತಾರತಮ್ಯ ಇರಬಹುದೇ? ಎಂಬ ಸಂಶಯ ಇಣುಕುತ್ತದೆ. ಈ ಮಾತನ್ನು ಸ್ಪಷ್ಟೀಕರಿಸಲು ಎಚ್.ಎಸ್. ಶ್ರೀಮತಿಯವರ ಮಾತುಗಳನ್ನು ಇಲ್ಲಿ ದಾಖಲಿಸಬಹುದು. ಈ ಸಾಹಿತ್ಯ ಚರಿತ್ರೆಗಳು ಮಹಿಳಾ ಸಾಹಿತಿಗಳನ್ನು, ಅವರ ಕೃತಿಗಳನ್ನು ಪ್ರಸ್ತಾವಿಸುವಲ್ಲಿ ವಸ್ತುನಿಷ್ಠವಾಗಿ ಚಿಂತಿಸಿವೆಯೇ? ಅಲ್ಲೂ ಲಿಂಗ-ತಾರತಮ್ಯ ಧೋರಣೆಗಳು ತಲೆದೋರಿವೆಯೇ? ಇದು ವಿದ್ವತ್ ವಲಯಕ್ಕೂ ಪ್ರಭಾವಿಸಿದೆಯೇ? ಎಂಬ ಬಹುಮುಖ್ಯವಾದ ತಾತ್ವಿಕ ಪ್ರಶ್ನೆಯನ್ನು ಎತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದಾಗ ನಿಜಕ್ಕೂ ಮಹಿಳಾ ಸಾಹಿತ್ಯದ ದಾಖಲೀಕರಣದಲ್ಲಿ ತೋರಿದ ನಿಷ್ಕಾಳಜಿಯ ಕುರಿತು ದಟ್ಟವಾದ ನಿರಾಶೆಯ ಭಾವ ಆವರಿಸಿಕೊಳ್ಳುತ್ತದೆ. ಮಹಿಳಾ ಸಾಹಿತ್ಯ ಅಡುಗೆ ಮನೆಯ ಸಾಹಿತ್ಯ ಎಂದು ಕಡೆಗಣಿಸಿ ದೂರ ತಳ್ಳಲ್ಪಟ್ಟಿತೆ? ಮಹಿಳೇ ಅಷ್ಟೊಂದು ಭಾವಶೂನ್ಯಳಾಗಿದ್ದಳೇ? ಅವಳು ಅಷ್ಟೊಂದು ಸಂವೇದನಾರಹಿತ ಸ್ಥಿತಿಯಲ್ಲಿದ್ದಳೇ? ಅವಳಿಗೆ ಅಷ್ಟೊಂದು ಸೃಜನಶೀಲತೆಯ ಕೊರತೆ ಇತ್ತೇ? ಇವುಗಳೆಲ್ಲ ಸತ್ಯವಾದರೇ ಜನಪದ ಗರತಿ ಹೇಗೆ ಹಾಡಿದಳು? ವಚನ ಸಾಹಿತ್ಯಕ್ಕಿಂತ ಪೂರ್ವದಲ್ಲಿ ಮಹಿಳಾ ಸಾಹಿತ್ಯಕ್ಕೆ ಪೂರಕ ವಾತಾವರಣ ಯಾಕೆ ಲಭ್ಯವಾಗಲಿಲ್ಲ? ಕುರಿತೋದೆಯೇ ಕಾವ್ಯ ಪರಿಣತಮತಿಗಳಾದವರು ಪುರುಷರಷ್ಟೇನಾ? ಪ್ರತಿಭೆ ಎನ್ನುವುದು ದೈವದತ್ತವೆಂದು ನಂಬಿದವರು ಅದು ಪುರುಷರಿಗೆ ಮಾತ್ರ ಪ್ರಾಪ್ತವಾಗಿತ್ತಾ? ಎಂಬ ಮುಖ್ಯ ಚರ್ಚೆಗಳೊಂದಿಗೆ ಮಹಿಳಾ ಸಾಹಿತ್ಯದ ಮರುಕಟ್ಟುವಿಕೆಗೆ ತೊಡಗಬೇಕಾಗುತ್ತದೆ. ಈ ಕಾರಣದಿಂದಲೇ ಎಚ್.ಎಸ್. ಶ್ರೀಮತಿಯವರು, ವಿಜಯಾದಬ್ಬೆ, ಮಲ್ಲಿಕಾಘಂಟಿ, ಮುಂತಾದವರು ಅವರಂತೂ ನಮ್ಮ ಸಾಹಿತ್ಯ ಚರಿತ್ರೆ ಬರೆದುಕೊಡಲಿಲ್ಲ. ನಾವಾದರೂ ನಮ್ಮ ಚರಿತ್ರೆ ಬರೆದುಕೊಳ್ಳೋಣ ಎಂದು ಮುಂದಾದಾಗ ಆಧುನಿಕ ಮಹಿಳಾ ಚರಿತ್ರೆ ರೂಪಿತವಾಯಿತು. ಕೊಂಚ ಸಮಾಧಾನ ತಂದು ಕೊಟ್ಟಿತು.
ನಮ್ಮ ಕರ್ನಾಟಕ ಕವಿಕುಲದಲ್ಲಿ ನಾರಿಯರ ಹೆಸರೇ ಕೇಳಿಬರುವುದಿಲ್ಲ. ಇದ್ದರೆ ಒಂದೆರಡಿರಬಹುದು. ಈ ಪರಿಸ್ಥಿತಿಗೆ ಆಗಿನ ಸಮಾಜ ಪದ್ಧತಿಯಲ್ಲಿ ಸ್ತ್ರೀಗೆ ಇದ್ದ ನಿಕೃಷ್ಟತೆ, ನಿರಕ್ಷರತೆ, ಪ್ರೋತ್ಸಾಹದ ಕೊರತೆ, ಮೊದಲಾದವುಗಳು ಕಾರಣ ಎಂಬುದು ನಿಸ್ಸಂದೇಹ. ಇದು ನಮ್ಮ ಸಾಹಿತ್ಯದ ಬೆಳವಣಿಗೆಯನ್ನು ಅರ್ಧಕ್ಕರ್ಧದಷ್ಟು ಕುಗ್ಗಿಸಿದೆ ಎಂದು ವಿಷಾದಿಂದ ಹೇಳಬೇಕಾಗಿದೆ. ಎಂದು ಶ್ಯಾಮಲಾದೇವಿಯವರು ಪ್ರತಿಕ್ರಿಯಿಸುತ್ತಾರೆ. ನಿಜ ಈ ಹೇಳಿಕೆಯು ಎರಡು ಅಂಶಗಳನ್ನು ತೆರೆದಿಡುತ್ತದೆ, ಒಂದು ಮಹಿಳೆಗೆ ಸಮಾಜದಲ್ಲಿ ಇದ್ದಿರಬಹುದಾದ ಸ್ಥಾನ. ಎರಡನೆಯದು ಮಹಿಳೆಯ ಬೆಳವಣಿಗೆಗೆ ಇರುವ ಪ್ರೋತ್ಸಾಹದ ಕೊರತೆ. ಕನ್ನಡ ಸಾಹಿತ್ಯ ಚರಿತ್ರೆ ಕಟ್ಟುವಾಗ ಬಹುಶ್ರಮ ವಹಿಸಿದ ವಿದ್ವಾಂಸರು ಮಹಿಳಾ ಸಾಹಿತ್ಯ ಹುಡುಕುವಾಗ ಉದಾಸೀನ ತೋರಿದ್ದಾರೆ. ಈ ಉದಾಸೀನತೆಯಿಂದ ಮಹಿಳೆ ನಡೆದು ಬಂದ ಹೆಜ್ಜೆ ಗುರುತುಗಳು ಅಳಿಸಿಹೋಗಿರುವ ಸಾಧ್ಯತೆಗಳೂ ಇರಬಹುದು.
ಇತ್ತೀಚೆಗೆ ಸಮಾಜ ಮತ್ತು ಸಾಹಿತ್ಯ ಕ್ಷೇತ್ರದಿಂದ ದಿವ್ಯ ನಿರ್ಲಕ್ಷಕ್ಕೆ ಒಳಗಾದ ಮಹಿಳಾ ಸಾಹಿತ್ಯವನ್ನು ಮುತುವರ್ಜಿಯಿಂದ ಕೈಗೆತ್ತಿಕೊಂಡು ಜೋಡಿಸುವ ಕೆಲಸವಾಗುತ್ತಿದೆ. ಬಿ.ಎನ್. ಸುಮಿತ್ರಾದೇವಿ, ಎನ್. ಗಾಯತ್ರಿ, ನೇಮಿಚಂದ್ರ, ಶ್ರೀವಳ್ಳಿ ಈ ನಾಲ್ವರು ಈ ಕೆಲಸದಲ್ಲಿ ಅಪಾರ ಮುತುವರ್ಜಿ ಮತ್ತು ಶ್ರಮವಹಿಸಿದ್ದಾರೆ. ಇದರ ಫಲವಾಗಿ ಮಹಿಳಾ ಸಾಹಿತ್ಯ ಚರಿತ್ರೆಯನ್ನು ಮೂರು ಹಂತಗಳಲ್ಲಿ ಗುರುತಿಸಿಕೊಳ್ಳಬಹುದಾಗಿದೆ.
೧. ಆಧುನಿಕ ಪೂರ್ವ
೨. ಆಧುನಿಕ
೩. ಆಧುನಿಕೋತ್ತರ

ಮಹಾದೇವಿಯಕ್ಕ, ಮುಕ್ತಾಯಕ್ಕ, ಅಮುಗೆರಾಯಮ್ಮ, ಆಯ್ದಕ್ಕಿ ಲಕ್ಕಮ್ಮ ಮುಂತಾದ ವಚನಕಾರ್ತಿಯರು, ಮಹಿಳಾ ಕೀರ್ತನಕಾರರು, ಶೃಂಗಾರಮ್ಮ, ಹೊನ್ನಮ್ಮರಂತಹ ಒಡೆಯರ ಆಸ್ಥಾನದ ಕವಿಯತ್ರಿಯರು, ಮಹಿಳಾ ತತ್ವಪದಕಾರರು ಇವರೆಲ್ಲಾ ಆಧುನಿಕ ಪೂರ್ವದ ಮಹಿಳಾ ಸಾಹಿತಿಗಳಾಗಿ ಕಾಣಸಿಗುತ್ತಾರೆ.
ತಿರುಮಲಾಂಬ, ಕಲ್ಯಾಣಮ್ಮ, ಶ್ಯಾಮಲಾದೇವಿ, ಬೆಳಗೆರೆ ಜಾನಕಮ್ಮ, ಕಾತ್ಯಾಯನಿ, ಸರಸ್ವತಿ ಬಾಯಿ ರಾಜವಾಡೆ (ಗಿರಿಬಾಲೆ), ಎಚ್. ವಿ. ಸಾವಿತ್ರಮ್ಮ ಮೊದಲಾದವರು ಆಧುನಿಕ ಮಹಿಳಾ ಲೇಖಕಿಯರಾಗಿ ಗುರುತಿಸಿಕೊಂಡಿದ್ದಾರೆ.
ಆಧುನಿಕೋತ್ತರದಲ್ಲಿ ಮಹಿಳಾ ಸಾಹಿತ್ಯದ ಬೆಳೆ ಹುಲುಸಾಗಿದೆ. ಇಲ್ಲಿ ಮುಖ್ಯವಾಗಿ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಗುರುತಿಸಿಕೊಂಡ ಮಹಿಳೆಯರು ಪ್ರತಿರೋಧ ಮಹಿಳಾ ಸಾಹಿತ್ಯ ರಚಿಸಿದ್ದಾರೆ. ಇದೇ ಮುಂದೆ ಸ್ತ್ರೀವಾದಿ ಸಾಹಿತ್ಯ ಚಳಿವಳಿಯ ರೂಪ ತಾಳಿತು. ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರ, ಡಾ. ಅನುಪಮಾ ನಿರಂಜನ, ವಿಜಯಾದಬ್ಬೆ, ಎಚ್. ಎಲ್. ಪುಷ್ಪಾ, ಶೈಲಜಾ ಉಡಚಣ, ಶಶಿಕಲಾ ವಸ್ತ್ರದ, ಸಾ.ರಾ. ಅಬೂಬಕರ್, ಕೆ. ಷರೀಫ್, ಮುಮ್ತಾಜ ಬೇಗಂ, ಮಲ್ಲಿಕಾಘಂಟಿ, ಕೆ. ನೀಲಾ, ಡಾ. ಸಭೀಹಾ, ನೇಮಿಚಂದ್ರ, ಗೀತಾ ನಾಗಭೂಷಣ, ಬಿ.ಟಿ. ಲಲಿತಾ ನಾಯಕ, ವಿನಯಾ, ಸುಕನ್ಯಾ ಮಾರುತಿ, ಇನ್ನೂ ಸಾಕಷ್ಟು, ಮಹಿಳಾ ಸಾಹಿತಿಗಳನ್ನು ಹೆಸರಿಸಬಹುದು, ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ಸಮಕಾಲೀನ ಮಹಿಳಾ ಸಾಹಿತ್ಯವನ್ನು ಮೂರು ಹಂತಗಳಲ್ಲಿ ವಿಭಜಿಸುತ್ತಾರೆ.
೧. ಸ್ವಾತಂತ್ರಪೂರ್ವ
೨. ಸ್ವಾತಂತ್ಯೋತ್ತರದಿಂದ – ೧೯೭೫ರವರೆಗೆ

೩. ೧೯೭೫ ರಿಂದ ಅನಂತರ.
ಸ್ವಾತಂತ್ರ್ಯ ಪೂರ್ವದ ಲೇಖಕಿಯರಲ್ಲಿ ಅಂದು ಹೆಚ್ಚಾಗಿ ಸಾಹಿತ್ಯ ಸೃಷ್ಟಿ ಒಂದು ಹವ್ಯಾಸ ಎನ್ನುವುದಕ್ಕಿಂತ ಅದು ಬದಲಾವಣೆಯ ಅಸ್ತ್ರವಾಗಿತ್ತು. ವರದಕ್ಷಿಣೆ, ಸ್ತ್ರೀ ಶಿಕ್ಷಣ, ಬಾಲ್ಯವಿವಾಹ, ವಿಧವಾ ಸಮಸ್ಯೆ, ಜಾತಿ ಮತ್ತು ಕೋಮು ವ್ಯವಸ್ಥೆಗಳಿಂದ ಆಗುವ ಅನ್ಯಾಯಗಳನ್ನು ಅಂದರೆ ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಪ್ರಶ್ನಿಸುವ ಕೆಲಸವನ್ನು ಮಾತ್ರ ಈ ಕಾಲಘಟ್ಟದ ಲೇಖಕಿಯರು ಮಾಡಿದರು. ಮಧ್ಯಮ ವರ್ಗದ ಸ್ತ್ರೀ ಕೇಂದ್ರಿತ ಕಾಳಜಿಗಳೇ ಇಲ್ಲಿ ಮುಖ್ಯವಾಗಿದ್ದವು ಆದರೆ ಇವರ ಕಾಲದ ಪರಿಮಿತಿಗಳಿಂದಾಗಿ ಅದು ಸಮಗ್ರವಾಗಿರಲಿಲ್ಲ, ತಲಿಸ್ಪರ್ಶಿಯಾಗಿರಲಿಲ್ಲ ಎಂದು ಸಮಿತ್ರಾಬಾಯಿಯವರು ಹೇಳುತ್ತಾರೆ. (ಸಂಗ್ರಹ: ಸಮಕಾಲೀನ ಮಹಿಳಾ ಸಾಹಿತ್ಯ-ಡಾ. ಕೆ.ಆರ್. ಸಂಧ್ಯಾರೆಡ್ಡಿ)
ಎರಡನೆಯ ಘಟ್ಟದಲ್ಲಿ ಶಿಕ್ಷಣ ಮತ್ತು ಉದ್ಯೋಗ ಅವಕಾಶ, ಆರ್ಥಿಕ ಸ್ವಾವಲಂಬನೆ, ಮಾಧ್ಯಮಗಳ ಬೆಳವಣಿಗೆಯಿಂದ ಮಹಿಳಾ ಸಾಹಿತಿಗಳ ಸಂಖ್ಯೆ ಹೆಚ್ಚಾಯಿತು. ಹೆಣ್ಣಿನ ಶೀಲ, ಪಾತಿವ್ರತ್ಯ, ತಾಯ್ತನಗಳನ್ನು ವೈಭವೀಕರಿಸುವ ಪಾತ್ರಗಳಿಗೆ ಹೆಚ್ಚು ಒತ್ತು ಸಿಕ್ಕಿರುವುದನ್ನು ಇಲ್ಲಿ ಗುರುತಿಸಬಹುದು. ಇಲ್ಲಿ ಮಧ್ಯಮ ವರ್ಗಕ್ಕೆ ಮತ್ತು ಸಿನಿಮಾಗಳಿಗೆ ತಕ್ಕ ವಸ್ತುವನ್ನೇ ಇವರು ಆಯ್ದುಕೊಂಡರು ಮತ್ತು ಆಕರ್ಷಕ ಬರವಣಿಗೆ ಶೈಲಿ ಬಳಸಿಕೊಂಡರು.
ಮೂರನೆಯ ಘಟ್ಟದಲ್ಲಿ ೧೯೭೫ರಲ್ಲಿ ಸ್ತ್ರೀವಾದ ಭರತಕ್ಕೆ ಕಾಲಿಟ್ಟತ್ತು. ಇದರ ಫಲವಾಗಿ ಮಹಿಳಾ ಸಾಹಿತ್ಯದ ಸ್ವರೂಪ, ಗೊತ್ತು-ಗುರಿಗಳನ್ನು ಕುರಿತಂತೆ ಖಚಿತವಾದ ಅಭಿಪ್ರಾಯ ರೂಪುಗೊಳ್ಳ ತೊಡಗಿತು. ಹೀಗೆ ಇದರ ವ್ಯಾಪ್ತಿಗೆ ಒಳಪಡುವಂತಹ ಸಾಹಿತ್ಯದ ಸ್ವರೂಪ ಉದ್ದೇಶಗಳನ್ನು ಕುರಿತಂತೆ ಗಂಭೀರವಾದ ಚರ್ಚೆ ಆರಂಭವಾಗಿದ್ದು ೧೯೭೫ರ ನಂತರವೇ (ಸಂಗ್ರಹ: ಸಮಕಾಲೀನ ಮಹಿಳಾ ಸಾಹಿತ್ಯ-ಡಾ. ಕೆ.ಆರ್. ಸಂಧ್ಯಾರೆಡ್ಡಿ). ಇಲ್ಲ ತುಂಬ ಉನ್ನತಮಟ್ಟದ, ಗಂಭೀರ ಚರ್ಚೆಗಳು ಮಹಿಳಾ ಸಾಹಿತಿಗಳಿಂದ ನಡೆದವು.
ಡಾ. ಕೆ.ಆರ್. ಸಂಧ್ಯಾರೆಡ್ಡಿಯವರು ತಮ್ಮ ಲೇಖನದಲ್ಲಿ ಮಹಿಳಾ ಸಾಹಿತ್ಯದ ಸಪಷ್ಟ ಸ್ವರೂಪ ತಿಳಿಸಲು ಮೂರು ನೆಲೆಗಳನ್ನು ಗುರುತಿಸಿದ್ದಾರೆ.
೧. ಮಹಿಳೆಯರಿಂದ ರಚಿತವಾದ ಸಾಹಿತ್ಯ
೨. ಮಹಿಳೆಯರನ್ನು ಕೇಂದ್ರವಾಗುಳ್ಳು ಸಾಹಿತ್ಯ
೩. ಮಹಿಳಾವಾದಿಯಾದ ಸಾಹಿತ್ಯ.

ಈ ಮೂರು ನೆಲೆಗಳನ್ನು ಒಳಗೊಂಡ ಸಾಹಿತ್ಯ ಮಾತ್ರವೇ ಮಹಿಳಾ ಸಾಹಿತ್ಯ ಎಂಬ ಶೀರ್ಷಿಕೆಗೆ ಅರ್ಹ, ಎಂದು ವಾಖ್ಯಾನಿಸುತ್ತಾರೆ.
೧೯೨೦ರ ಕಾಲಘಟ್ಟದಲ್ಲಿ ಕಾವ್ಯ, ಕಥೆ, ಪ್ರಬಂಧ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಆತ್ಮಕಥನ, ಜೀವನ ಚರಿತ್ರೆ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಉತ್ತಮ ಬೆಳೆ ಮಹಿಳಾ ಸಾಹಿತ್ಯದಿಂದ ಹುಟ್ಟಿ ಬಂದಿತು. ಬಂಡಾಯ ಸಾಹಿತ್ಯ, ಸ್ತ್ರೀವಾದ ಸಾಹಿತ್ಯಗಳು ಮುಸ್ಮಿಂ ಲೇಖಕಿಯರಿಗೆ ಮತ್ತು ದಲಿತವರ್ಗದ ಲೇಖಕಿಯರಿಗೆ ಒಂದು ದೊಡ್ಡ ವೇದಿಕೆಯನ್ನು ಒದಗಿಸಿದವು.
ಪ್ರಾರಂಭದಲ್ಲಿ ಶಾಂತಾಬಾಯಿ, ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ ಮುಂತಾದವರು ಕಥೆ, ಕಾದಂಬರಿ, ನಾಟಕದ ರಚನೆ ಮಾಡಿ ಸುಧಾರಣಾವಾದಿ ಮನೋಭಾವನೆ ಹುಟ್ಟು ಹಾಕಿದರು. ತಿರುಮಲಾಂಬರವರು ’ಸತೀ ಹಿತೈಷಿಣಿ’ ಎಂಬ ಗ್ರಂಥಮಾಲಾ ಪ್ರಕಟಣ ಸಂಸ್ಥೆ ಹುಟ್ಟು ಹಾಕಿದ್ದಲ್ಲದೇ ಕರ್ನಾಟಕ ನಂದಿನಿ ಎಂಬ ಪ್ರತಿಕೆಯನ್ನು ಹೊರಡಿಸಿದ್ದರು. ಆರ್. ಕಲ್ಯಾಣಮ್ಮನವರು ’ಶ್ರೀ ಶಾರದಾ ಸಮಾಜ’ವನ್ನು ಕಟ್ಟಿ ಸ್ತ್ರೀಯರ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು. ಸತತ ನಾಲ್ವತ್ತೂರು ವರ್ಷ ’ಸರಸ್ವತಿ’ ಪತ್ರಿಕೆಯನ್ನು ನಡೆಸಿದರು. ಹೀಗೆ ಸಾಹಿತ್ಯದೊಂದಿಗೆ ಸಾಮಾಜಿಕ ಸ್ಪಂದನೆಗೂ ತಮ್ಮನ್ನು ಒಳಗು ಮಾಡಿಕೊಂಡಿದ್ದು ಮಹಿಳಾ ಶಕ್ತಿಯ ದ್ಯೋತಕವಾಗಿದೆ. ಅಡುಗೆ ಮನೆಯನ್ನು ದಾಟಿ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಂಡಿದ್ದ ತಿ.ತಾ. ಶರ್ಮರ ಪತ್ನಿ ತಿರುಮಲೆ ರಾಜಮ್ಮ ’ಭಾರತಿ’ ಎಂಬ ಕಾವ್ಯನಾಮದಿಂದ ಕಾವ್ಯ, ನಾಟಕ, ವ್ಯಕ್ತಿಚಿತ್ರ ರೂಪಕ, ವಿಮರ್ಶೆ, ಪ್ರಬಂಧ, ಮಕ್ಕಳ ಸಾಹಿತ್ಯ ಬರೆದರು. ಇದರ ನಂತರ ಬಂದ ಶ್ಯಾಮಲಾದೇವಿ ’ಃಖಿಉ ಕೃಷ್ಣ’ ಹೆಸರಿನಿಂದ ಕಥೆಗಳನ್ನು ಬರೆದರು. ಅಲ್ಲದೇ ತಮ್ಮ ಪತಿಗೆ ’ಜನಕರ್ನಾಟಕ ಪತ್ರಿಕೆ’ ನಡೆಸಲು ನೆರವಾದರು. ಹೊಸ ಶಿಕ್ಷಣ ಪದ್ದತಿಗೆ ತಮ್ಮನ್ನು ಸಮರ್ಪಿಸಿಕೊಂಡು ಕೊಡಗಿನ ಗೌರಮ್ಮ, ಸರಸ್ವತಿ ಬಾಯಿ ರಾಜವಾಡೆ, ಎಚ್. ವ್ಹಿ. ಸಾವಿತ್ರಮ್ಮ ಸಣ್ಣಕಥಾ ಕ್ಷೇತ್ರಕ್ಕೆ ನೆರವಾದರು.
ಸೀತೆ-ರಾಮ-ರಾವಣ, ವಿಮುಕ್ತಿ ಕಾದಂಬರಿ ಬರೆದ ಎಚ್.ವಿ. ಸಾವಿತ್ರಮ್ಮ, ಎಚ್. ಎಸ್. ಕಾತ್ಯಾಯಿನಿ, ಶಾಂತಾದೇವಿ ಮಾಳವಾಡ, ಹಿಂದಿ-ಕೊಂಕಣಿ-ಕನ್ನಡ ಮೂರು ಭಾಷೆಯಲ್ಲಿ ಕೃತಿಗಳನ್ನು ರಚಿಸಿದ ಸೀತಾದೇವಿ ಪಡುಕೋಣೆ, ಹಿಂದಿಯಿಂದ ಕನ್ನಡಕ್ಕೆ ಅನಿವಾದ ಮಾಡಿದ ಅನುವಾದಕಿ ವಾಸಂತಿ ಪಡುಕೋಣೆ, ಮೂಲತಃ ಮಹಾರಾಷ್ಟ್ರದವರಾದರೂ ಕನ್ನಡದಲ್ಲಿ ಕೃತಿ ರಚಿಸಿದ ಜಯದೇವಿ ತಾಯಿ ಲಿಗಾಡೆ, ಹಾಸ್ಯಕ್ಷೇತ್ರಕ್ಕೆ ಕೊಡುಗೆ ನೀಡಿದ ಟಿ. ಸುನಂದಮ್ಮ, ಸಿ.ಎನ್. ಲಕ್ಷ್ಮೀದೇವಿ ಪ್ರಮುಖ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಗುರುತಿಸಿಕೊಂಡ ಮಹಿಳಾ ಸಾಹಿತಿಗಳು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಮಹಿಳೆ ಮತ್ತು ಭಾಷೆ :
ಮಹಿಳೆ ಅಭಿವ್ಯಕ್ತಿಗಾಗಿ ಕಟ್ಟಿಕೊಂಡ ಭಾಷೆ ಪುರುಷ ಭಾಷೆಗಿಂತ ಭಿನ್ನವಾಗಿದೆ. ಇಂತಹ ಭಾಷೆಯನ್ನು ಮುಂದಿಟ್ಟುಕೊಂಡೇ ಮಹಿಳೆ ಕಾವ್ಯವನ್ನು ರಚಿಸುವ ಪ್ರಯತ್ನ ಮಾಡುತ್ತಾಳೆ. ಮಹಿಳೆಯ ಪ್ರಪಂಚ ಪುರುಷರಿಗಿಂತ ಭಿನ್ನ ಅವಳ ಪ್ರಪಂಚದಲ್ಲಿ ಉಪ್ಪು, ಖಾರ, ಹುಳಿ, ಮಸಾಲೆ, ತರಕಾರಿ, ಸೂಜಿ, ದಾರ, ಹೊಲಿಗೆ, ಕಸೂತಿ, ಗಂಡ, ಮನೆ, ಮಕ್ಕಳು ಇಂತಹವುಗಳೇ ತುಂಬಿರುತ್ತವೆ. ಹೀಗಾಗಿ ಅವಳ ಮಾತು-ಅಭಿವ್ಯಕ್ತಿ, ಭಾಷೆ, ಆಚಾರ-ವಿಚಾರ ಎಲ್ಲದಕ್ಕೂ ಒಂದು ಸಾಮಾಜಿಕವಾಗಿ ವಿಧಿಸಲ್ಪಟ್ಟ ಮೌಲ್ಯವ್ಯವಸ್ಥೆ ಇರುತ್ತದೆ. ಭಾಷೆಯ ಬಳಕೆಯಲ್ಲೂ ಅವಳದು ಸಂಸ್ಕಾರಯುತ ನಡಿಗೆ. ಆ ಬೇಲಿಯನ್ನು ಭಾಷೆಯ ವಿಷಯದಲ್ಲೂ ಅವಳು ದಾಟುವಂತಿಲ್ಲಿ. ಹೀಗಾಗಿ ಮಹಿಳೆ ಅಭಿವ್ಯಕ್ತಿಗಾಗಿ ಬಳಸುವ ಭಾಷೆ ಪುರುಷರಿನಿಗಿಂತ ಭಿನ್ನವಾಗಿಯೇ ಇರುತ್ತದೆ. ಅವಳು ಮಾತನಾಡುವುದೆಲ್ಲ ಅವಳಿಗಾಗಿ ಗುರುತಿಸಿ ನಿರ್ದೇಶಿಸಲಾಗಿರುವ ಭಾಷೆಯಲ್ಲಿ.
ನಿನಗೆ ಕಿವಿಯಿಲ್ಲ
ನನಗೆ ಭಾಷೆಯಿಲ್ಲ
ನಾವು ಮಾತಾನಾಡುವುದು ಹೇಗೆ?

  • ಪ್ರತಿಭಾ ನಂದಕುಮಾರ್
    ಆತ ಆಕೆ ಭಾಷೆ
    ಅವಳೆಂದದ್ದು? ಹಸಿವೆ ಮತ್ತು ಬಾಯಾರಿಕೆ
    ಆತನೆಂದ? ಚನ್ನಾಗಿ ಉಣ್ಣು, ಕುಡಿ

    ಆಕೆ ಅತ್ತಳು ಆಗ
    ಆತ ನಕ್ಕ
    ಮೊನ್ನೆ ಅವನೆಂದದ್ದು ಕಿಟಕಿ ಎಂದು
    ಅವಳು ತಿಳಿದುಕೊಂಡಂತೆ ಬಾಗಿಲು ಅಲ್ಲ
    ಗೋಡೆ ಎಂದರೆ ಆತ
    ಬಯಲೆಂದುಕೊಂಡಳು
    ಗೋಡೆ ಒಡೆದರೆ ಎಲ್ಲ ಬಯಲು ಎಂದೆ?
  • ವೈದೇಹಿ
    ಮೇಲಿನ ಎರಡು ಪದ್ಯಗಳು ಗಂಡು ಮತ್ತು ಹೆಣ್ಣಿನ ಭಾಷೆಯಲ್ಲಿರುವ ವ್ಯತ್ಯಾಸವನ್ನು ತಿಳಿಸುತ್ತವೆ. ಮಹಿಳೆಯ ಭಾಷೆಯ ಬಗ್ಗೆ ಪುರುಷನಿಗಿರುವ ಉದಾಸಿನತೆಯನ್ನು ಹೇಳಿದರೆ, ಅವಳ ಭಾಷೆಯ ಮೇಲ್ನೋಟದ ಸ್ವರ್ಗ ಮಾತ್ರ ಪುರುಷನಿಗೆ ನಿಲುಕಿದೆ. ಅವಳಂತರಂಗದ ಭಾಷೆಗೆ ಅವನು ಸ್ಪರ್ಶಿಸುವ ಪ್ರಯತ್ನ ಮಾಡಿಲ್ಲ ಮತ್ತು ಮಾಡಲಾರ.
    ಮಹಿಳೆಯು ಪುರುಷನ ಭಾಷೆಗೆ ತನ್ನದೇ ನೆಲೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಮಹಿಳೆಯ ಭಾಷೆಗೆ ಪುರುಷ ಭಾಷೆಯಂತೆ ಒಂದು ಗಟ್ಟಿ ಲೇಬಲ್ ದೊರೆಯಲಾರದು. ಭಾಷೆಯ ದೃಷ್ಟಿಯಲ್ಲಿ ಅವನ ಭಾಷೆ, ಅವಳ ಭಾಷೆ ಎಂಬ ಶ್ರೇಣಿಕೃತ ವ್ಯವಸ್ಥೆ ಇದೆ.
    ಕಾವ್ಯವನ್ನು ಹೆಣ್ಣಿನ ಭಾಷೆಯ ರಚನೆಯ ಪ್ರಯತ್ನಗಳು ಎನ್ನುವ ಸಂಗತಿಯನ್ನು ಕಲೆ ಮತ್ತು ವ್ಯಕ್ತಿಯ ಸಂಬಂಧದ ಎರಡು ನೆಲೆಗಳಿಂದ ಚರ್ಚಿಸಬಹುದು. ಕಲೆಯ ಹುಟ್ಟೇ ದುರ್ದಮ್ಯವಾದ ಅಂತರಂಗದ ಒತ್ತಡದ್ದು ಎನ್ನುವುದಾದರೆ ಹೆಣ್ಣಿನ ಅಂತರಂಗದ ಒತ್ತಡ ಮತ್ತು ತುರ್ತು ಭಾಷೆಯದ್ದೆಷ್ಟೋ ಅಷ್ಟೇ ಅವಳ ಅಸ್ಮಿತತೆಯ ಹುಡುಕಾಟ ಮತ್ತು ರಚನೆಯದ್ದೂ ಹೌದು. ಅದ್ದರಿಂದಲೇ ಹೆಣ್ಣಿನ ಕಾವ್ಯ-ಭಾಷೆ-ಅಸ್ಮಿತತೆಗಳ ನಡುವಿನದ್ದು ಬಿಡಿಸಲಾಗದ ಅಖಂಡ ಸಂಬಂಧ, ಬೇಕಾದರೆ ಇದನ್ನು, ’ತ್ರಿವೇಣಿ ಸಂಗಮ’ ಎಂದು ಕರೆಯೋಣ. ಇವು ಒಂದುಕ್ಕೊಂದು ಎಷ್ಟು ಪೂರಕವೆಂದರೆ, ಒಂದು ಇನ್ನೊಂದನ್ನು ಬಲಪಡಿಸುತ್ತಾ, ಒಂದು ಇನ್ನೊಂದನ್ನು ಸ್ಪಷ್ಟಪಡಿಸುತ್ತಾ ಸಂಘಟಿತವಾಗುತ್ತಾ ಹೋಗುತ್ತವೆ (ಸಂಗ್ರಹ: ಮಹಿಳಾ ಕಾವ್ಯಮೀಮಾಂಸೆ-ಎಂ.ಎಸ್. ಆಶಾದೇವಿ.) ಎಂಬ ಮಾತುಗಳು ಮಹಿಳೆ ಮತ್ತು ಭಾಷೆಗೆ ಹಿಡಿದ ಕನ್ನಡಿಯಂತಿವೆ. ನನಗೆ ಕಾವ್ಯ ಗೊತ್ತಿಲ್ಲ; ತಿಳಿಸಾರುಗೊತ್ತು. ಎಂಬ ಸಾಲುಗಳು ಮಹಿಳೆ ಕಟ್ಟಿಕೊಡುವ ಭಾಷೆಯನ್ನು ಎತ್ತಿ ಹೇಳುತ್ತವೆ. ಮಹಿಳೆಯನ್ನು ಅವಳ ಭಾಷೆಯಿಂದಲೇ ಅರ್ಥೈಸಿಕೊಳ್ಳಬೇಕಾಗುತ್ತದೆ. ವಚನ ಸಾಹಿತ್ಯ ಸಂದರ್ಭದಲ್ಲಿ ವಚನಕಾರ್ತಿಯರು ’ಗಂಡುಭಾಷೆ’ಯನ್ನು ಬಳಸಿಕೊಂಡಿದ್ದಾರೆ. ಅದರ ಕುರಿತು ವಿವೇಚನೆ ನಡೆಯಬೇಕಿದೆ. ಪ್ರತಿರೋಧದ ಸಂದರ್ಭದಲ್ಲಿ ಮಹಿಳಾ ಭಾಷೆಯೂ ಹರಿತಾಗುತ್ತದೆ. ಇದಕ್ಕೆ ಗೀತಾ ನಾಗಭೂಷಣರವರು ಉಪಯೋಗಿಸುವ ಭಾಷೆಯನ್ನು ನೋಡಬಹುದು. ಇತ್ತೀಚೆಗೆ ಮಂಗಳಮುಖಿಯರ ಭಾಷೆಯ ಕಡೆಗೂ ವಿಶೇಷ ಗಮನ ಹರಿಸಬೇಕಾಗಿದೆ.
    ಮಹಿಳಾ ಸಾಹಿತ್ಯ ಮತ್ತು ಮಹಿಳಾ ಭಾಷೆಯ ಕುರಿತು ಗಂಭೀರ ಅಧ್ಯಯನ ಅವಶ್ಯಕತೆ ಇದೆ. ಇವುಗಳನ್ನು ಕಾರ್ಯಕ್ರಮದಲ್ಲಿ ’ಮಹಿಳಾ ವೇದಿಕೆ’ ಎಂದು ಹೆಸರಿಟ್ಟು, ಮಹಿಳಾಗೋಷ್ಠಿ ನಡೆದಾಗ ಪುರುಷರೆಲ್ಲಾ ಎದ್ದು ಹೋಗುವಂತೆ, ಮಹಿಳಾ ಸಾಹಿತ್ಯ ಮತ್ತು ಅವಳ ಭಾಷೆಯ ಸಂದರ್ಭದಲ್ಲೂ ಅವಳನ್ನು ಹೊರಗಿಟ್ಟು ನೋಡದಂತೆ ಕಾಳಜಿವಹಿಸಬೇಕಾದ ಜರೂರು ಇದೆ.

ಪುರಾಮರ್ಶನ ಕೃತಿಗಳು:
೧. ಸ್ತ್ರೀವಾದಿ ಆಖ್ಯಾನ: ೨೦೦೫; ಡಾ. ಕೇಶನ ಶರ್ಮ ಕೆ; ಪ್ರ. ಸಾ.ರಾ. ಎಂಟರ್‌ಪ್ರೈಸಸ್ ಬೆಂಗಳೂರು.
೨. ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ; ೨೦೦೬ ಪ್ರಸಾರಾಂಗ, ಕನ್ನಡ ವಿ.ವಿ., ಹಂಪಿ.
೩. ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ೨೦೧೨, ಪ್ರ. ಪ್ರಸಾರಾಂಗ, ಕ.ರಾ.ಅ.ಮ.ವಿ.ವಿ, ವಿಜಯಪುರ.
೪. ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಸಂಪುಟ-೧೦ ಸಂಕೀರ್ಣ-೨ (ಸೃಜನೇತರ) ೨೦೧೨, ಪ್ರ. ಪ್ರಸಾರಾಂಗ, ಕ.ರಾ.ಅ.ಮ.ವಿ.ವಿ, ವಿಜಯಪುರ.

೫. ಆಧುನಿಕ ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ ಸಂಪುಟ-೦೯ ಸಂಕೀರ್ಣ-೧ (ಸೃಜನ) ೨೦೧೨, ಪ್ರ. ಪ್ರಸಾರಾಂಗ, ಕ.ರಾ.ಅ.ಮ.ವಿ.ವಿ, ವಿಜಯಪುರ.
೬. ಮಹಿಳಾ ಸಾಹಿತ್ಯ ಮೀಮಾಂಸೆ – ಡಾ. ಎಂ.ಎಸ್. ಆಶಾದೇವಿ.


ಡಾ. ಪುಷ್ಪಾವತಿ ಶಲವಡಿಮಠ

Leave a Reply

Back To Top