ಗಿಪ್ಟ್ ,ರಿಟರ್ನ್ ಗಿಪ್ಟ್ಗಳ ಲೋಕದೊಳಗೆ-ಜ್ಯೋತಿ , ಡಿ.ಬೊಮ್ಮಾ

ಲಲಿತ ಪ್ರಬಂಧ

ಗಿಪ್ಟ್ ,ರಿಟರ್ನ್ ಗಿಪ್ಟ್ಗಳ ಲೋಕದೊಳಗೆ

ಜ್ಯೋತಿ , ಡಿ.ಬೊಮ್ಮಾ

ಗಿಪ್ಟ್ ,ರಿಟರ್ನ್ ಗಿಪ್ಟ್ಗಳ ಲೋಕದೊಳಗೆ.

ಮನೆಯಲ್ಲಿ ಜರಗುತ್ತಿರುವ ಒಂದು ಸಮಾರಂಭಕ್ಕೆ ಆಗಮಿಸುವ ಅಥಿತಿ ಗಳಿಗೆ ರಿಟರ್ನ್ ಗಿಪ್ಟ್ ಏನು ಕೊಡಬೆಕೆಂದು ಯೋಚಿಸಿ ತಲೆ ಕೆಟ್ಟು ಯಾವದೇ ನಿರ್ಧಾರಕ್ಕೆ ಬರಲಾಗದೆ ಒಂದು ವಾರ ಒದ್ದಾಡಿ , ಯಾವ ವಸ್ತು ಕೊಡಬೇಕೆಂದು ಅಮ್ಮ ಅತ್ತಿಗೆ ಅಕ್ಕ ತಂಗಿ ಗೆಳತಿಯರೊಂದಿಗೆಲ್ಲ ಪೋನ್ ನಲ್ಲಿ ರಿಟರ್ನ್ ಗಿಫ್ಟಗಳ ಕುರಿತು ಒಂದೊಂದು ಗಂಟೆ ಮಾತಾಡಿದ್ದೆ ಮಾತಾಡಿದ್ದು . ಅವರು ಅದು ಕೊಟ್ಟರು ಇವರು ಇದು ಕೊಟ್ಟರು. ಇಂತಹ ವಸ್ತುಗಳು ಇಂತಲ್ಲಿ ಸಿಗುತ್ತವೆ.ಅಲ್ಲಿ ಬೆಲೆ ಕಮ್ಮಿ ಇರುತ್ತದೆ.ಇಲ್ಲಿ ಕ್ವಾಲಿಟಿ ಚನ್ನಾಗಿರುತ್ತದೆ ಬರಿ ಇವೇ ಮಾತಾಡಿದ್ದೆ ಬಂತು .ಸಮಾರಂಭದ ದಿನ ಹತ್ತಿರ ಬಂದರು ಕೊಡುವ ವಸ್ತು ನಿರ್ಧರಿಸಲು ಆಗಲೆ ಇಲ್ಲ ನನಗೆ.ಕೊನೆಗೆ ತಂಗಿಗೆ ಅದರ ಜವಾಬ್ದಾರಿ ಬಿಟ್ಟು ನಿರಾಳಾದೆ.

ಈ ರಿಟರ್ನ್ ಗಿಪ್ಟ್ ಗಳ ಹಾವಳಿ ಶುರುವಾದದ್ದು ಇತ್ತಿಚೆಗೆ . ಮೊದಲು ಯಾರ ಮನೆಯಲ್ಲಿ ಸಮಾರಂಭವಿರುತ್ತದೋ ಅವರಿಗೆ ಮಾತ್ರ ಕಾಣಿಕೆ ಕೊಡುವ ಪದ್ದತಿ ಇತ್ತು.ಇತ್ತಿಚೆಗೆ ಕಾಣಿಕೆ ಕೊಟ್ಟವರಿಗೆ ತಿರುಗಿ ಒಂದು ಕಾಣಿಕೆ ಕೊಡುವ ಈ ರಿಟರ್ನ್ ಪದ್ದತಿ ಶುರುವಾಗಿದೆ. ನಮ್ಮ ಕರೆಗೆ ಓಗೊಟ್ಟು ಬರುವ ಅಥಿತಿಗಳು ಮತ್ತು ಅವರು ಕಾಣಿಕೆ ತಂದಿರುವಾಗ ಅವರನ್ನು ಹಾಗೆ ಕಳಿಸುವದು ಅವಮಾನ ಎಂಬ ಧೋರಣೆಯಿಂದ ಈ ರಿಟರ್ನ್ ಗಿಪ್ಟ್ ಪದ್ದತಿ ಶುರುವಾಯಿತು. ಸಮಾರಂಭಕ್ಕೆ ಬಂದು ಹಾರೈಸುವದಕ್ಕಿಂತ ಈ ಗಿಪ್ಟ್ ಗಳೆ ಹೆಚ್ಚಿನ ಮಹತ್ವ ಪಡೆದುಕೊಳ್ಳತೊಡಗಿದವು

.

ಉಡುಗೋರೆಗಳೆಂದರೆ ಮತ್ತೊಬ್ಬರಿಗೆ ನಮ್ಮ ಸ್ನೇಹ ವಾತ್ಸಲ್ಯ ಪ್ರಸ್ತುತ ಪಡಿಸಲಾಗುವ ಒಂದು ವಿಷಯ
.ಇದನ್ನು ಒಂದು ವಸ್ತು ವನ್ನು ಕೊಟ್ಟು ತೊರ್ಪಡಿಸುವ ಒಂದು ಪದ್ದತಿ. ಮತ್ತೊಬ್ಬರಿಗೆ ಪ್ರೋತ್ಸಾಹಿಸಲು , ಅಭಿನಂದಿಸಲು , ಅವರ ಪ್ರತಿ ನಮ್ಮ ಪ್ರೀತಿಯ ಅಭಿವ್ಯಕ್ತಿ ವ್ಯಕ್ತಪಡಿಸಲು ಬಳಸುವ ಕಾಣಿಕೆ ಈಗ ವ್ಯವಹಾರಿಕ ರೂಪ ಪಡೆಯುತ್ತಿರುವದು ವಿಪರ್ಯಾಸ.

ಯಾರಾದರೂ ತಮ್ಮ ಮನೆಯ ಫಂಕ್ಷನ್ ಗಳಿಗೆ ಕರೆದಾಗ ಮೊದಲು ತಲೆಯಲ್ಲಿ ಬರುವದೇ ಏನು ಕಾಣಿಕೆ ಕೊಡಬೆಕೆಂಬುದು.ಕಾಣಿಕೆಗಳು ಆ ಸಮಾರಂಭದ ಸನ್ನಿವೇಶಕ್ಕನುಗುಣವಾಗಿ ಒಯ್ಯಲ್ಪಡುತ್ತವೆ. ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ಸ್ಪ್ರರ್ದೆಗಳಿಗೆ ಬಹುಮಾನದ ರೂಪದಲ್ಲಿ ಕೊಡುವ ಕಾಣಿಕೆಗಳು , ಮದುವೆಗಳಲ್ಲಿ ಮುಯ್ಯಿ ರೂಪದಲ್ಲಿ ಕೊಡುವ ಕಾಣಿಕೆಗಳು , ಹುಟ್ಟು ಹಬ್ಬ , ನಾಮಕರಣ , ಮದುವೆ ಅ್ಯನಿವರ್ಸರಿ , ಹೀಗೆ ಸಮಾರಂಭಗಳ ಪಟ್ಟಿ ಬೆಳೆದಂತೆ ಗಿಪ್ಟ , ರಿಟರ್ನ್ ಗಿಪ್ಟಗಳ ತಲೆನೋವು ಬೆಳೆಯುತ್ತದೆ. ಈಗ ಸಮಾರಂಭಕ್ಕೆ ಆಮಂತ್ರಿಸುವ ಕರೆಯೋಲೆ ಯಲ್ಲಿ ನಿಮ್ಮ ಆಗಮನವೇ ಉಡುಗೋರೆ ಎಂದು ಬರೆದಿರುತ್ತಾರೆ. ಆದರೂ ಖಾಲಿ ಕೈಯಿಂದ ಹೋಗಲಾಗುತ್ತದೆಯೇ.. ಒಂದು ವೇಳೆ ಹೋದರೂ ಎಲ್ಲರ ಗಮನ ನಮ್ಮ ಕೈಯೆಡೆಗೆ ಇರುವಂತೆ ಭಾಸವಾಗುತ್ತದೆ. ಅಲ್ಲಿ ಬಂದವರೆಲ್ಲ ಕೈಯಲ್ಲಿ ಏನಾದರೊಂದು ವಸ್ತು ಹಿಡಿದುಕೊಂಡು ಬಂದಂತೆ ಕಾಣಿಸಿದರಂತೂ ಖಾಲಿ ಕೈಯಲ್ಲಿ ಬಂದ ನಾವು ಏನೋ ಅಪರಾಧ ಮಾಡಿದಂತೆ ಪರಿತಪಿಸಬೇಕಾಗುತ್ತದೆ. ಅದಕ್ಕೆ ತಮ್ಮ ಆಗಮನವೇ ಉಡುಗೋರೆ ಎಂದು ಆಮಂತ್ರಿಸುವರು ಬರೆದರೂ ಓದಿ ಅದನ್ನು ನಿರ್ಲಕ್ಷಿಸಿ ಕಾಣಿಕೆ ಒಯ್ಯುವ ದಿದೆ. ಕಾಣಿಕೆ ಕೊಟ್ಟರಷ್ಟೆ ಮುಗಿಯುವದಿಲ್ಲ ಈ ಉಡುಗೋರೆ ಪಯಣ , ರಿಟರ್ನ್ ಆಗಿ ಅವರೇನು ಕೊಡುವರೋ ಎಂಬ ಆಸಕ್ತಿ.ಅವರು ತಿರುಗಿ ಕೊಡಲೇಬೇಕೆಂಬ ಉದ್ದೇಶ ನಮಗಿರದಿದ್ದರೂ , ಅವರು ಕೊಡುವ ವಸ್ತು ಈಗಾಗಲೇ ಮನೆಯಲ್ಲಿದ್ದರೂ ಮತ್ತೆ ಈ ರಿಟರ್ನ್ ಗಿಪ್ಟ್ ಗಳ ಮೋಹ ತೊಲಗಿಸಲಾಗದು.

ನಮ್ಮ ಉತ್ತರ ಕರ್ನಾಟಕದ ಕಲ್ಬುರ್ಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಕಾಣಿಕೆ ಕೊಡುವದರಲ್ಲಿ ತಿರುಗಿ ಕಾಣಿಕೆ ಪಡೆಯುವದರಲ್ಲಿ ಸೀರೆಗೆ ಅಗ್ರ ಸ್ಥಾನವಿದೆ. ಯಾರದೇ ಮನೆಯಲ್ಲಿ ಏನೇ ಸಮಾರಂಭವಿರಲಿ ಒಂದು ಸೀರೆಯನ್ನು ಕ್ಯಾರಿಬ್ತಾಗ್ ನಲ್ಲಿ ಹಾಕಿ ಕೊಟ್ಟರಾಯಿತು ಅದೇ ಗಿಪ್ಟ್. ಅಲ್ಲಿ ಅವರು ಎಲ್ಲರೂ ತಂದ ಸೀರೆಗಳನ್ನು ಒಟ್ಟು ಮಾಡಿ ಬಂದವರಿಗೆಲ್ಲ ರಿಟರ್ನ್ ಗಿಫ್ಟ್ ಗಳಾಗಿ ಅವೇ ಸೀರೆ ಕೊಡುತ್ತಾರೆ. ಕೆಲವೊಮ್ಮೆ ಅಸಮಾಧಾನ ಭುಗಿಲ್ಲೆಳುತ್ತದೆ ನಮ್ಮ ಹೆಂಗಳೆಯರಲ್ಲಿ.ನಾವು ಉತ್ತಮವಾದ ಸೀರೆ ಒಯ್ದು ಕಾಣಿಕೆ ಕೊಟ್ಟಾಗ ಆ ಕಡೆಯಿಂದ ಸಾಧಾರಣ ಸೀರೆ ರಿಟರ್ನ್ ಗಿಪ್ಟ್ ಆಗಿ ಬಂದರೆ ಅಸಮಾಧಾನ ಆಗುವದು ಸಹಜವೇ . ಅದಕ್ಕೆ ಈಗ ಅವರವರ ಸೀರೆಯನ್ನು ಅವರವರಿಗೆ ರಿಟರ್ನ್ ಗಿಪ್ಟ್ ಆಗಿ ಕೊಡುವುದೆ ಒಳಿತೆಂತು ನಾವು ಒಯ್ದದನ್ನು ಕುಂಕುಮ ಅರಸಿನದೊಂದಿಗೆ ನಮಗೆ
ವಾಪಸ ಕೊಡುತಿದ್ದಾರೆ . ಆಯ್ತಲ್ಲ ,ಅಸಮಾಧಾನಕ್ಕೆ
ಆಸ್ಪದವೆಲ್ಲಿ ..! ಹೀಗೆ ಪ್ರತಿಯೊಬ್ಬರ ಮನೆಯಲ್ಲೂ ಗಿಪ್ಟ್ ಕೊಡುವ ಮತ್ತು ರಿಟರ್ನ್ ಆಗಿ ಬರುವ ಸೀರೆಗಳ ರಾಶಿಯೇ ಇರುತ್ತದೆ.ಇವನ್ನು ಟ್ರಾನ್ಸಫರ್ ಸೀರೆಗಳೆನ್ನುತ್ತೆವೆ. ಇಂತಹ ಸೀರೆಗಳು ಒಬ್ಬರ ಮನೆಯಿಂದೊಬ್ಬರ ಮನೆಗೆ ಓಡಾಡುತ್ತ ಎಲ್ಲರ ಹಸ್ತದ ಸ್ಪರ್ಶ ದೊಂದಿಗೆ ಮಾಸಲು ಹೊಂದಿದ್ದರು ಹೀಗೆ ಮನೆಮನೆಗೆ ಟ್ರಾನ್ಸ್‌ಫರ್ ಆಗುತ್ತಲೇ ಇರುತ್ತವೇ , ಯಾರ ಮೈಯನ್ನಾದರೂ ಅಲಂಕರಿಸುವ ಭಾಗ್ಯ ಈ ಸೀರೆಗಳಿಗೆ ಇರದಿದ್ದರೂ ಸಮಾರಂಭಗಳಲ್ಲಿ ಭಾರಿ ಬೇಡಿಕೆ ಇವಕ್ಕೆ. ನಮ್ಮ ಕಡೆ ಈ ಬಟ್ಟೆ ಆಯೇರಿಯ ಗಡಿಬಿಡಿಯಲ್ಲಿ ಮನೆಯ ಯಜಮಾನತಿಯನ್ನು ಒಂದೆಡೆ ಕೂಡಿಸಿ ಬಿಡುತ್ತಾರೆ. ಬಂದವರೆಲ್ಲ ತಾವು ತಂದ ಸೀರೆ ಉಡುಗೊರೆ ಅವಳ ಉಡಿಯಲ್ಲಿ ಕ್ಯಾರಿಬ್ತಾಗ ಸಮೇತ ಅರ್ಪಿಸುತ್ತಾರೆ.ಯಾರಾದರೂ ತಾವು ತಂದ ಉತ್ತಮ ಸೀರೆ ಅವರ ಗಮನಕ್ಕೆ ತರಬಯಸುವರು ‌ ಸೀರೆಯನ್ನು ಕ್ಯಾರಿಬ್ಯಾಗ್ ನಿಂದ ಹೊರತೆಗೆದು ನಿಮಗಾಗಿ ತಂದಿದ್ದು , ಉತ್ತಮವಾಗಿದೆ , ಬೇರೆಯವರಿಗೆ ರಿಟರ್ನ್ ಆಗಿ ಕೊಡಬೇಡಿ ಎಂದು ಪರೋಕ್ಷವಾಗಿ ಹೇಳಿ ಅವರಿಗೆ ಕಾಣಿಕೆಯಾಗಿ ಕೊಡುತ್ತಾರೆ. ಇನ್ನೂ ಕೆಲವರು ಅತೀ ಕಳಪೆಯಾದ ಅಥವಾ ಅವರಿವರಿಂದ ರಿಟರ್ನ್ ಗಿಪ್ಟ್ ಗಳಾಗಿ ಬಂದ ಸೀರೆಗಳಲ್ಲೆ ಒಂದನ್ನು ಆರಿಸಿಕೊಂಡು ತಂದು ಕ್ಯಾರಿಬ್ಯಾಗ್ ಸಮೇತ ಅಯೇರಿ ಮಾಡುತ್ತಾರೆ.

ಒಟ್ಟಿನಲ್ಲಿ ಈ ಬಟ್ಟೆ ಅಯೇರಿಗಳ ಜಾತ್ರೆಯಲ್ಲಿ ಮನೆಯವರೆಲ್ಲ ಮುಳುಗಿ ಬಂದವರನ್ನು ಉಪಚರಿಸಲಾಗದೆ ಬಟ್ಟೆ ಕಾಣಿಕೆ ಪಡೆಯುತ್ತ ತಿರುಗಿ ಅವರು ತಂದ ಬಟ್ಟೆಗಳನ್ನು ಅವರಿಗೆ ಕೊಡುತ್ತ ಸಮಾರಂಭ ಮುಗಿಸುತ್ತಾರೆ. ಈಗ ಆಮಂತ್ರಣ ಪತ್ರಿಕೆಯಲ್ಲಿ ಬಟ್ಟೆ ಆಹೇರಿ ಇರುವದಿಲ್ಲ ಎಂದು ಬರೆಸಿದರೂ ಓದಿ ನಿರ್ಲಕ್ಷಿಸಿ ಮತ್ತೆ ಒಂದು ಸೀರೆಯನ್ನು ಕ್ಯಾರಿಬ್ಯಾಗ್ ನಲ್ಲಿ ಹಾಕಿಕೊಂಡು ಹೋದರೆ ಮಾತ್ರ ನಮಗೆ ಸಮಾಧಾನ. ಒಂದು ಸಮಾರಂಭ ಮುಗಿದ ನಂತರ ಒಂದು ದೊಡ್ಡ ಬಟ್ಟೆ ಗಂಟು ಮಾತ್ರ ಉಳಿಯುತ್ತದೆ.ಎಷ್ಟೋ ಲಕ್ಷ ಖರ್ಚು ಮಾಡಿ ಮಾಡಿದ್ದ ಸಮಾರಂಭದ ‌ಪಳಿಯುಳಿಕೆಗಳು ಈ ಬಟ್ಟೆಗಳು . ನಂತರ ಮನೆಯಲ್ಲಿ ಈ ಹೆಚ್ವುವರೆ ಬಟ್ಟೆಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಹೊಂದಿಸಿಡುವಷ್ಟರಲ್ಲಿ ಹೈರಾಣಾಗಿಬಿಡುತ್ತೆವೆ.

ಆದರೆ ಇತ್ತಿಚಿನ ದಿನಗಳಲ್ಲಿ ಈ ಟ್ರಾನ್ಸಫರ್ ಸೀರೆಗಳು ತನ್ನ ಮಹತ್ವ ಕಳೆದುಕೊಳ್ಳತೊಡಗಿವೆ.ಹೀಗೆ ಕಾಣಿಕೆ ರೂಪದಲ್ಲಿ ಕೊಟ್ಟ ಪಡೆದ ಸೀರೆಗಳು ಯಾರಿಗೂ ಉಪಯೋಗವಾಗದೆ ಕಪಾಟಿಗೆ ಮಾತ್ರ ಭರ್ತಿ ಆಗುವದರಿಂದ , ಸೀರೆಗಳ ಬದಲಿಗೆ ಏನಾದರೂ ವಸ್ತು ಗಳು ವಿನಿಮಯ ಮಾಡಿಕೊಳ್ಳುವ ಪಧ್ಧತಿ ಹೆಚ್ಚಾಯಿತು. ಅಲ್ಲಿಯೂ ತಾಕಲಾಟ ತಪ್ಪಿದ್ದಲ್ಲ.ಎಂತಹ ವಸ್ತುಗಳು ಕೋಡಬೇಕು , ಗೃಹೋಪಯೋಗಿ ವಸ್ತು ಗಳೆ , ಗೃಹಾಲಂಕಾರಿಕ ವಸ್ತುಗಳೆ , ಏನು ಕೊಟ್ಟರೆ ಅವರಿಗೆ ಉಪಯೋಗವಾಗಬಹುದು. ಉಡುಗೊರೆ ಎಂದರೆ ನಮ್ಮ ಅವಶ್ಯಕತೆ ಗನುಸಾರವಾಗಿ ಕೊಡಲ್ಪಡುತ್ತದೆ.ಅವರ ಉಪಯೋಗ ಅನುಪಯೋಗ ನಮ್ಮ ಸಮಸ್ಯೆಯಲ್ಲ ಅನಿಸಿದರೂ ಕೊಟ್ಟದ್ದು ಉಪಯೋಗವಾಗಲಿ ಎಂಬುದು ಎಲ್ಲರ ಸದುದ್ದೇಶವೇ ಆಗಿರುತ್ತದೆ.

ನಮ್ಮ ಮನೆಯಲ್ಲಿರುವ ವಸ್ತುಗಳೆ ಗಿಪ್ಟ್ ರೂಪದಲ್ಲಿ ಬಂದರೆ ಏನು ಮಾಡುವದು.ಅದನ್ನು ಮತ್ತೊಬ್ಬರಿಗೆ ರವಾನಿಸಬೇಕಷ್ಟೆ. ಗೃಹಅಲಂಕಾರಿಕ ಸಾಮುಗ್ರಿಗಳಾದರೂ , ಗೃಹೋಪಯೋಗಿ ವಸ್ತುಗಳು ಈಗ ಎಲ್ಲರ ಮನೆಯಲ್ಲೂ ಅವರವರ ಆಸಕ್ತಿ ಮೇರೆಗೆ ಮೊದಲೇ ತುಂಬಿಟ್ಟಿರುತ್ತಾರೆ. ಈ ಗಿಪ್ಟ್ ರಿಟರ್ನ್ ಗಿಪ್ಟ್ ಗಳ ರೂಪದಲ್ಲಿ ಬಂದ ವಸ್ತುಗಳು ಮನೆಯಲ್ಲಿ ಹತ್ತರೊಳಗೆ ಹನ್ನೊಂದಾಗಿ ಸೇರಿ ಬಿಡುತ್ತವೆ.

ನಮ್ಮ ಕಡೆ ಹೆಣ್ಣು ಮಕ್ಕಳಿಗೆ ಮದುವೆಯಲ್ಲಿ ” ರುಕವತ್ ” ಎಂದು ಗೃಹೋಪಯೋಗಿ ವಸ್ತುಗಳು ಕೊಡುವದು ಬಳಕೆಯಲ್ಲಿದೆ.ಇದು ವರದಕ್ಷಿಣೆಯ ಒಂದು ಭಾಗವೇ ಆಗಿದೆ. ಆದರೆ ಈಗ ವರನ ಕಡೆಯವರು ಇಂತಹ ವಸ್ತುಗಳಿಗಾಗಿ ಬೇಡಿಕೆ ಇಡುತಿಲ್ಲ.ಏಕೆಂದರೆ ಈಗಾಗಲೇ ಮನೆಯಲ್ಲಿ ದಂಡಿಯಾಗಿರುವ ವಸ್ತುಗಳಿಗೆ ಸ್ಥಳಾವಕಾಶದ ಅಭಾವವಿರುವಾಗ ಸೊಸೆ ತಂದ ವಸ್ತು ಗಳನ್ನೆಲ್ಲಿಡುವದು.‌ ಮೊದಲಿನಂತೆ ಈಗ ಯಾರ ಮನೆಯಲ್ಲೂ ಗೃಹಬಳಕೆಯ ವಸ್ತುಗಳ ಕೊರತೆ ಇಲ್ಲ.ಪಾತ್ರೆಪಗಡಗಳಂತೂ ಹೆಚ್ಚಾಗಿವೆ. ನಮ್ಮ ಗೆಳತಿಯೊಬ್ಬಳು ಮಗಳ ಮದುವೆಗಾಗಿ ಮಗಳಿಗೆ ಕೊಡಲು ಮಂಚ , ಅಲ್ಮೇರಾ , ಡ್ರೇಸ್ಸಿಂಗ್ ಟೇಬಲ್ ಇತ್ಯಾದಿ ವಸ್ತುಗಳನ್ನೆಲ್ಲ ಖರಿದಿಸಿ ಇಟ್ಟಿದ್ದರು .
ಮದುವೆಗೆ ಬರುವ ಜನ ವಧುವರರನ್ನು ನೋಡುವದಕ್ಕಿಂತ ಹೆಚ್ಚಾಗಿ ಮಗಳಿಗೆ ಏನೇನು ವಸ್ತುಗಳು ಕೊಡುತ್ತಿದ್ದಾರೆಂದು ನೋಡುವದು ಹೆಚ್ಚಿನ ಆಕರ್ಷಣೆ ವಿಷಯವಾಗಿತ್ತು. ಅದಕ್ಕೆ ಕಲ್ಯಾಣ ಮಂಟಪದ ಒಂದು ಕಡೆ ಇಂತಹ ವಸ್ತುಗಳ ಪ್ರದರ್ಶನ ವಿರುತ್ತದೆ. ಅಲ್ಲಿ ಒಂದು ಮನೆಗೆ ಬೇಕಾದ ಎಲ್ಲಾ ವಸ್ತುಗಳ ಸಾಲೇ ಇರುತ್ತದೆ.ವಧುವಿನೊಂದಿಗೆ ಈ ಸಾಮುಗ್ರಿಗಳೆಲ್ಲ ಅವಳ ಗಂಡನ ಮನೆ ಸೇರುತ್ತವೆ. ಹೇಗೂ ಮಗಳು ಹೋಸ ಸಂಸಾರ ಶುರುಮಾಡಲು ಇವೆಲ್ಲಾ ಬೇಕಾಗುತ್ತದೆಂದು ನನ್ನ ಗೆಳತಿ ಎಷ್ಟೆಲ್ಲ ಪೀಠೋಪಕರಣ ಕೊಂಡಿದ್ದಳು. ಮಗಳು ಮದುವೆಯಾಗಿ ಅವರು ಕೆಲಸ ಮಾಡುವ ಸ್ಥಳದಲ್ಲಿ ಒಂದು ಚಿಕ್ಕ ಬಾಡಿಗೆ ಮನೆ ತೆಗೆದುಕೊಂಡು ತನ್ನ ತಾಯಿ ತನಗಾಗಿ ಖರಿದಿಸಿದ ಒಂದೇ ಒಂದು ವಸ್ತು ಒಯ್ಯುವ ಗೋಜಿಗೆ ಹೋಗಲಿಲ್ಲ.ತಮಗೆ ಅತೀ ಅಗತ್ಯ ವಾದ ಕೆಲವು ವಸ್ತುಗಳನ್ನು ಅಲ್ಲೆ ಖರಿದಿಸಿ ಸಂಸಾರ ಸಾಗಿಸತೊಡಗಿದರು . ಅವಳ ಅತ್ತೆ ಮನೆಗಾದರೂ ಈ ಪೀಠೋಪಕರಣ ಗಳನ್ನು ಸಾಗಿಸೋಣವೆಂದರೆ ಅವರು ನಿರಾಕರಿಸಿ ಬಿಟ್ಟರು.ಏಕೆಂದರೆ ಮೊದಲೇ ಅವರಲ್ಲಿರುವ ವಸ್ತುಗಳೊಂದಿಗೆ ಇವು ಹೆಚ್ವುವರಿ ಅಷ್ಟೆ. ಇಲ್ಲಿ ಇವರ ಮನೆಯಲ್ಲೂ ಇಡಲು ಸ್ಥಳವಿಲ್ಲದೆ ಬೆರೆಯವರಿಗೂ ಕೊಡಲಾಗದೆ ಅವುಗಳಿಗೆ ಮನೆಯಲ್ಲಿ ಸ್ಥಳ ಹೊಂದಿಸಲು ಸುಸ್ತಾದರು. ಹೀಗೆ ಈಗ ಮನೆಯಲ್ಲಿ ಕಡಿಮೆ ವಸ್ತು ಗಳು ಇದ್ದಷ್ಟು ಆರಾಮ ಎಂಬ ಭಾವನೆಯಿಂದ ಈ ವಸ್ತುಗಳ ಮೇಲಿನ ಮೋಹ ಕಡಿಮೆಯಾಗುತ್ತಿದೆ. ಕಾಣಿಕೆ ರೂಪದಲ್ಲಿ ಕೊಡುವ ಈ ರುಕ್ವತ್ ವಸ್ತುಗಳು ತನ್ನ ಮಹತ್ವ ಕಳೆದುಕೊಂಡು ಬಿಟ್ಟಿವೆ.

ನಮ್ಮ ಕಡೆ ಸಂಕ್ರಾಂತಿ ಗೆ ಬಾಗಿನ ಕೊಡವ ಪದ್ದತಿ ಉಂಟು.ಮುತೈದೆಯರಿಗೆ ಮನೆಗೆ ಕರೆದು ಅರಶಿನ ಕುಂಕುಮದೊಂದಿಗೆ ಏನಾದರೂ ಒಂದು ವಸ್ತು ದಾನ ಮಾಡುತ್ತಾರೆ.ಕೊಡುವವರಿಗೆ ಪ್ರತಿ ವರ್ಷ ಏನು ಕೊಡಬೆಕೆಂಬ ತಾಕಲಾಟವಾದರೆ ಪಡೆದುಕೊಂಡವರಿಗೆ ಆ ವಸ್ತುಗಳನ್ನು ಏನು ಮಾಡಬೆಕೆಂಬ ಚಿಂತೆ.ಅವರು ಕೊಡುವ ತಟ್ಟೆ ಲೋಟ , ಚಮಚ ,ಚಿಕ್ಕ ಚಿಕ್ಕ ಸ್ಟಿಲ್ ಪಾತ್ರೆಗಳು , ಪ್ಲಾಸ್ಟಿಕ್ ವಸ್ತುಗಳ ಇತ್ಯಾದಿ ಇತ್ಯಾದಿ. ಮನೆಯಲ್ಲಿ ಈಗಾಗಲೇ ದಂಡಿಯಾಗಿರುವ ವಸ್ತುಗಳೊಂದಿಗೆ ಇವೊಂದಿಷ್ಟು ಹೊರೆ. ಪಾತ್ರೆಗಳು ಜಾಸ್ತಿ ಇದ್ದಷ್ಟೂ ತೊಳೆಯುವ ರಗಳೆ ಜಾಸ್ತಿ ಎಂದು ಕೆಲವೇ ಪಾತ್ರೆ ಬಳಸಲು ತೊಡಗಿದ್ದಾರೆ ನಮ್ಮ ಗೃಹಿಣಿಯರು.ಪಾತ್ರೆಗಳಾಗಲಿ ಮನೆಯಲ್ಲಿನ ವಸ್ತುಗಳಾಗಲಿ ಕಡಿಮೆ ಇದ್ದಷ್ಟು ಕೆಲಸ ಕಮ್ಮಿ.
ಅದಕ್ಕೆ ಈ ಉಡುಗೋರೆ ರೂಪದಲ್ಲಿ ಕೊಡುವ ಮತ್ತು ಪಡೆಯುವ ವಸ್ತುಗಳಿಂದ ಒಂದಷ್ಟೂ ಉಪಯೋವಿಲ್ಲವೆನಿಸುತ್ತಿದೆ. ಕೊಡಲೇಬೇಕಾದ ಸಂದರ್ಬದಲ್ಲಿ ನಮಗಾದಷ್ಟು ದುಡ್ಡನ್ನು ಲಕೋಟೆಯಲ್ಲಿ ಹಾಕಿ ಕೊಟ್ಟು ಅಭಿನಂದಿಸುವದೊಳಿತು.ರಿಟರ್ನ್ ಗಿಪ್ಟ್ ರೂಪದಲ್ಲಿ ಹಣ್ಣು ಅಥವಾ ಸಿಹಿ ಕೊಟ್ಟರೆ ಉಪಯೋಗವಾಗಬಹುದು.

ಕಾಣಿಕೆ ಕೊಡುವ ಹಾವಳಿ ಎಷ್ಟು ವ್ಯಾಪಿಸುತ್ತಿದೆ ಎಂದರೆ ಯಾರಾದರೂ ಅವರ ಮನೆಯ ಪೂಜೆಗಳಿಗೆ ಅರಸಿನ ಕುಂಕುಮಕ್ಕಾಗಿ
ಕರೆದರು ಒಂದು ಕಾಣಿಕೆ ತಗೊಂಡು ಹೋಗುವಷ್ಟು. ಪೂಜೆ ಹೋಮ ಹವನಗಳನ್ನು ಒಂದು ದೊಡ್ಡ ಸಮಾಭದಂತೆ ಆಚರಿಸುವವರಿಗೆ ಕಾಣಿಕೆ ಪಡೆಯುವದು ಕೊಡುವದು ಪೂಜೆಯ ಒಂದು ಭಾಗವೇ ಆಗಿಬಿಟ್ಟಿದೆ.
ಈ ಲೇಖನ ಬರೆಯುತ್ತಿರುವಾಗಲೇ ಪಕ್ಕದ ಮನೆಯವರು ಸೋಲಾಸೋಮವಾರ ಪೂಜೆ ಮಾಡಿ ಮುಗಿಸುತಿದ್ದೆವೆ ಊಟಕ್ಕೆ ಬರಬೇಕೆಂದು ಆಮಂತ್ರಿಸಿದರು , ಏನು ಗಿಪ್ಟ್ ಒಯ್ಯಬೆಕೆಂದು ತಲೆ ಬಿಸಿ ಶುರುವಾಯಿತು.ಅಕ್ಕಪಕ್ಕದವರೆಲ್ಲ ಒಬ್ಬರಿಗೊಬ್ಬರು ಪೋನ್ ಮಾಡಿಕೊಂಡು ಏನು ಕಾಣಿಕೆ ಒಯ್ಯಬೇಕೆಂದು ಚರ್ಚೆ ಮಾಡಿದೆವು . ಚರ್ಚೆ ಇನ್ನೂ ಸಾಗುತ್ತಿದೆ .


Leave a Reply

Back To Top