ಕಾವ್ಯ ಸಂಗಾತಿ
ವಿನಯಚಂದ್ರ
ಶುಭಾಶಯಗಳ ಹಾವಳಿ
ದಿನವೂ ನಾಲ್ಕಾರು ಜನಕೆ ಶುಭಾಶಯ
ಅಭಿನಂದನೆ ಸಲ್ಲಿಸದೆ ಮುಗಿಯದು ನನ್ನ ದಿನ
ಅವರ ಪರಿಚಿತ ನಾನೆಂಬುದಕ್ಕೋ
ಅವರ ಗೆಲುವಿನಲ್ಲಿ ನನ್ನ ಹರ್ಷವಿಹುದೆಂದು ತೋರ್ಪಡಿಸಲಿಕ್ಕೋ
ನನ್ನ ಅಸ್ತಿತ್ವವನ್ನು ಆಗಾಗ ಸಾಬೀತು ಪಡಿಸಲಿಕ್ಕೋ
ಗೆದ್ದವ ನನ್ನ ಪರಿಚಿತನೂ ಹೌದೆಂದು ಲೋಕ ತಿಳಿಯಲೆಂದೋ
ನನ್ನ ಗೆಲುವಿನಲ್ಲೂ ಜನ ಮುಗಿಬಿದ್ದು ಅಭಿನಂದಿಸಲೆಂದೋ
ಏನೋ ಒಂದಕ್ಕೆ ಇರಬೇಕು
ಸ್ಪರ್ಧೆಯಲಿ ನಾನೇ ಗೆಲ್ಲಬೇಕಿತ್ತು
ಪ್ರಶಸ್ತಿ ನನಗೇ ಸಿಗಬೇಕಿತ್ತು
ಪುರವಣಿಯಲ್ಲಿನ ಕವಿತೆ ಹಾಳಾಗಿ ಹೋಗಲಿ
ವಾಚಕರವಾಣಿಯಲ್ಲೊಂದು ಪತ್ರವಾದರೂ
ಪ್ರಕಟವಾಗಬೇಕಿತ್ತು ನನ್ನ ಹೆಸರೊಟ್ಟಿಗೆ
ಹೊಟ್ಟೆಯ ತಳಮಳ ಅವಿತಿಟ್ಟರೂ
ಅಭಿನಂದಿಸದೆ ಉಳಿವುದಿಲ್ಲ
ಓ ಇಂದಿವನ ಹುಟ್ಟುಹಬ್ಬವೋ
ಇವನ್ಯಾವ ದೊಡ್ಡಮನುಷ್ಯನೆಂದು ಹಾರೈಸಬೇಕೋ
ಅರೇ ಇಷ್ಟೊಂದು ಜನ ಶುಭಾಶಯ ತಿಳಿಸಿದ್ದಾರೆಯೇ
ನಾನೂ ಒಂದು ಸಂದೇಶ ಒಗೆದುಬಿಡಲೇ
ನೂರಾರರ ಮಧ್ಯ ಎಷ್ಟರ ಲೆಕ್ಕ ಇಟ್ಟಾನು
ಯಾವುದಕ್ಕೂ ಇರಲಿ, ನನ್ನ ಹೆಸರಾದರೂ ನೆನಪಿರಲಿ
ಅರೇ! ಇವ ಮೊನ್ನೆ ಕೂಡ ಜನ್ಮದಿನ ಆಚರಿಸಿದ್ದನಲ್ಲ!
ಅರೇ! ಇವ ಕಳೆದ ವರ್ಷವೇ ನೆಗೆದುಬಿದ್ದಿದ್ದನಲ್ಲ!?
ಯಾರೂ ಏನೂ ನೋಡುವುದೇ ಇಲ್ಲವೇ ಪಾಪ
ಪೀಪಿ ಊದಿದವನ ಹಿಂದೆ ಇಲಿ ಹಿಂಡು ಓಡಿದಂತೆ
ಒಂದು ಕುರಿಯ ಹಿಂದೆ ಕುರಿಮಂದೆ ಓಡಿದಂತೆ
ಒತ್ತಿದವನು ಒತ್ತಿದ್ದನ್ನೇ ಒತ್ತುವುದು ಎಲ್ಲರು
ಅಂದ ಹಾಗೆ ನಿಮ್ಮ ಜನ್ಮದಿನ ಯಾವಾಗ!?
ಮರೆಯದೆ ತಿಳಿಸುತ್ತೀರಲ್ಲ!
ಅಗದೀ ಸುಂದರ ಮತ್ತು ವಾಟ್ಸಪ್ ವಾಣಿ ಪದಪತ್ರಗುಚ್ಛಗಳ ಮೂಲಕ ಗುಂಪಿನಲ್ಲಿ ಹೊರಬೀಳುವ ಒಳಮನಸ್ಸಿನ ಅನಾವರಣ. ಈ ಕವಿತೆಯನ್ನು ಓದಿದಮೇಲೂ ನನ್ನ ಅನಿಸಿಕೆ ತಿಳಿಸಬೇಕೆನಿಸಿತು. ಕಾರಣ, ಇದು ಹೃದಯದಿಂದ ಮೂಡಿದ್ದು. ಅಭಿನಂದನೆಗಳು.