ಡಿ.ವಿ.ಜಿ,ಯವರ ಹುಟ್ಟುಹಬ್ಬದ ದಿನದ ವಿಶೇಷ ಲೇಖನ
ಡಿ.ವಿ.ಜಿ. ಯವರ ’ಸಾಹಿತ್ಯಶಕ್ತಿ’
ಮಹಾಬಲ ಭಟ್, ಗೋವಾ
ಡಿವಿಜಿಯವರ ಮಂಕುತಿಮ್ಮನ ಕಗ್ಗವನ್ನು ಸಾಮಾನ್ಯವಾಗಿ ಎಲ್ಲರೂ ಬಲ್ಲರು. ಮರುಳ ಮುನಿಯನ ಕಗ್ಗವನ್ನು ಹಲವರು ಬಲ್ಲರು. ಜೀವನ ಧರ್ಮಯೋಗವನ್ನೂ ಜ್ಞಾಪಕ ಚಿತ್ರಶಾಲೆಯನ್ನೂ ಕೆಲವರು ಬಲ್ಲರು. ಆದರೆ ಅವರ ಲೇಖನಿಯಿಂದ ಸೃಷ್ಟಿಯಾದ ಇತರ ಅಗಾಧ ಸಾಹಿತ್ಯವನ್ನು ಬೆರಳೆಣಿಕೆಯಷ್ಟು ಜನರು ಮಾತ್ರ ತಿಳಿದಿರುವರು. ಸಾಹಿತ್ಯ, ಧರ್ಮ, ಸಂಸ್ಕೃತಿ, ಸಮಾಜ, ರಾಜಕೀಯ, ಪ್ರಬಂಧನ ವ್ಯವಸ್ಥೆ ಇತ್ಯಾದಿ ವೈವಿಧ್ಯಮಯ ವಿಷಯಗಳ ಮೇಲೆ ಅವರು ಸ್ವಾರಸ್ಯಕರ ಬರಹಗಳನ್ನು ಬರೆದಿದ್ದಾರೆ. ಅವರ ಜನ್ಮದಿನದ ಈ ಶುಭಸಂದರ್ಭದಲ್ಲಿ ಅವರ ’ಸಾಹಿತ್ಯ ಶಕ್ತಿ’ ಎಂಬ ಪುಸ್ತಕವನ್ನು ಅವಲೋಕಿಸೋಣ.
೧೯೫೦ರಲ್ಲಿ ಪ್ರಕಟವಾದ ಪುಸ್ತಕವಿದು. ೧೯೭೩ರವರೆಗೆ ಕಂಡ ನಾಲ್ಕು ಮುದ್ರಣಗಳು ಈ ಪುಸ್ತಕದ ಜನಪ್ರಿಯತೆಗೆ ಸಾಕ್ಷಿ. ಮೈಸೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗೆ ಕನ್ನಡ ಪಠ್ಯವಾಗಿಯೂ ಅಂಗೀಕೃತವಾಗಿತ್ತು. ಈ ಪುಸ್ತಕ ಮುಖ್ಯವಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತು ಡಿವಿಜಿಯವರ ಉಪನ್ಯಾಸಗಳ ಸಂಗ್ರಹ. ಆರಂಭದಲ್ಲಿ ಹಾಗೂ ಕೊನೆಯಲ್ಲಿ ಕಾವ್ಯತ್ತ್ವದ ಕುರಿತಾದ ಪ್ರಬಂಧಗಳಿವೆ.
’ರಾಷ್ಟ್ರಕನಿಗೆ ಸಾಹಿತ್ಯ ಬೇಕೆ?’ ಎನ್ನುವುದು ಈ ಹೊತ್ತಿಗೆಯ ಮೊದಲ ಪ್ರಬಂಧ. ಡಿವಿಜಿಯವರು ರಾಷ್ಟ್ರಸೇವೆಯಲ್ಲಿರುವ ಅಧಿಕಾರಿಗಳನ್ನೂ,ರಾಜಕಾರಣಿಗಳನ್ನೂ, ರಾಷ್ಟ್ರಪ್ರೇಮಿಗಳನ್ನೂ ರಾಷ್ಟ್ರಕ ಎಂದು ಕರೆದಿರುವುದು ನಿಮಗೆಲ್ಲ ತಿಳಿದಿರಬಹುದು. ಯಾಕೆಂದರೆ ಇವರೇ ರಾಷ್ಟ್ರವನ್ನು ಕಟ್ಟುವವರು. ಅವರ ಜೀವನದ ಧ್ಯೇಯ ನಿಷ್ಠೆಗಳು ರಾಷ್ಟ್ರವೊಂದೇ. ಅಂತಹ ವಿರಕ್ತ ರಾಷ್ಟ್ರಕರಿಗೆ ಸೌಂದರ್ಯಾನುಭವ ನೀಡುವ ಸಾಹಿತ್ಯ ಬೇಕೆ ಎನ್ನುವುದು ಈ ಪ್ರಬಂಧದ ಚಿಂತನೆಯ ಬೀಜ. ಈ ಪ್ರಬಂಧದ ಸಾರವನ್ನು ತಮ್ಮ ಮುಂದೆ ಇಡಲು ಯತ್ನಿಸುತ್ತೇನೆ.
Who sighs for beauty is poet; who strives for it is a statesman.
ರಾಮಣೀಯಕವೆಂದು ಬಿಸಸುಯ್ಯಲದು ಕವಿತೆ;
ಭೂಮಿಗದನೆಟುಕಿಸುವೆನೆಂಬೆಸಕೆ ರಾಷ್ಟ್ರಕತೆ;
ಆಮೂಲಮದರರಿವನ್ ಅರಸಲ್ ಅದು ವಿಜ್ಞಾನ;
ಸಾಮಗ್ರ್ಯದಿಂ ಕಾಣಲ್ ಅದುವೆ ದಿವ್ಯಜ್ಞಾನ.
ಎನ್ನುವ ಸಾಲುಗಳು ಸಾಹಿತ್ಯದ ವಿಶ್ವ ವ್ಯಾಪಕತೆಯನ್ನು ತೋರಿಸುತ್ತವೆ. ಸಾಹಿತ್ಯವೆಂದರೆ ಎದೆಯನ್ನು ಅಲುಗಿಸುವಂಥ ಮಾತು ಎನ್ನುತ್ತಾರೆ ಡಿವಿಜಿ. ಸಾಹಿತ್ಯದ ಸಾರ ಭಾಗ ಕಾವ್ಯ. ಮನಸ್ಸಿಗೆ ಒಂದು ಹಿತ ರಮಣೀಯ ವಿಕಾರವನ್ನುಂಟಾಗಿಸಿ ಆ ಮೂಲಕ ಬುದ್ಧಿಯನ್ನು ಅರಳಿಸಬಲ್ಲ ವಾಕ್ಯ ಸಮೂಹವೇ ಶ್ರೇಷ್ಠಕಾವ್ಯ. ಕಾವ್ಯದಿಂದ ಆಗುವ ಉಪಕಾರಗಳಲ್ಲಿ ಮುಖ್ಯವಾದವು ಮೂರು ತೆರದವು.
ಅದು ನಮ್ಮ ಅಂತಃಪ್ರಪಂಚವನ್ನು ತೋರಿಸಿಕೊಡುವ ಕಿಟಕಿ.
ಹೃದಯದ ನೀರ್ಗಲ್ಲನ್ನು ಹೊಳೆಯಾಗಿ ಹರಿಸುವ, ಅಲ್ಲಿಯ ಕೆಸರು ಮಣ್ಣನ್ನು ಗಟ್ಟಿಮಾಡಿ ವಜ್ರವಾಗಿಸುವ ಸೂರ್ಯ ಪ್ರಭೆ.
ಒಂದು ಮಹಾ ತತ್ವದ ಕಡೆಗೆ ಜೀವವನ್ನು ಕರೆದೆಳೆಯುವ ದಿವ್ಯಧ್ವನಿ.
ಕವಿಯಾದವನಿಗೆ ಇತರರಿಗಿಂತ ಹೆಚ್ಚಾದ ಶಕ್ತಿಯಿರುತ್ತದೆ. ಅವುಗಳಲ್ಲಿ ಪರಿಸರವನ್ನು ವಿಶೇಷ ರೀತಿ ಗ್ರಹಿಸುವ ಸಂವೇದನಾ ಶಕ್ತಿ, ನವ ಕಲ್ಪನೆಗಳನ್ನು ಮಾಡಬಲ್ಲ ಪ್ರತ್ಯುದ್ಭಾವನಶಕ್ತಿ, ಆತ್ಮವನ್ನು ಚುಚ್ಚಿ ಎಬ್ಬಿಸಿ ಶ್ರೇಯೋಮಾರ್ಗವನ್ನು ಹುಡುಕಿಸಬಲ್ಲ ಉಚಿತ ವಚಶ್ಶಕ್ತಿ ಇವು ಮುಖ್ಯವಾದವು.
ಶಬ್ದಗಳನ್ನು ಜೋಡಿಸುವಾಗ ಕವಿಗೆ ಔಚಿತ್ಯ ಪ್ರಜ್ಞೆ ಇರಬೇಕು. ಅವನ ಶ್ರಮದಲ್ಲಿಯೂ ಒಂದು ಕ್ರಮವಿರಬೇಕು. ಹಳತು ಹೊಸತುಗಳೆರಡೂ ಸರಿಯಾದ ಅಳತೆಯಲ್ಲಿ ಹೊಂದಿಕೊಂಡಿರಬೇಕು. ಆ ಕೌಶಲದ ಸಾಧನೋಪಾಯಗಳು ಶಬ್ದ ಸಂಪತ್ತು, ಅಲಂಕಾರ, ಛಂದಸ್ಸು ಮೊದಲಾದ ಭಾಷಾ ಪರಿಕರಗಳು.
ಪರ್ಯವಸಾನದಲ್ಲಿ ತತ್ವ ವಿಚಾರ ಪ್ರೇರಕವಾದದ್ದು ಮಹಾಕಾವ್ಯ. ಕವಿಗಿರುವ ಲೋಕಾನುಭವಶಕ್ತಿ, ಹೃದಯ ಮರ್ಮವಿವೇಚನಶಕ್ತಿ, ನೂತನ ಸಂದರ್ಭ ಸಂಘಟನಾ ಶಕ್ತಿ ಇವು ರಾಜ್ಯಸಮರ್ಥನಿಗೂ ಅವಶ್ಯವಾದವು. ಜೀವನ ಸ್ವಾರಸ್ಯವನ್ನು ವಾಕ್ಯರೂಪದಲ್ಲಿ ತೋರಿಸುವುದು ಕವಿಯ ಕಲ್ಪನೆ. ಆ ಸ್ವಾರಸ್ಯವನ್ನು ಲೋಕವ್ಯವಸ್ಥೆಯಲ್ಲಿ ಪ್ರತ್ಯಕ್ಷಪಡಿಸುವುದು ರಾಜ್ಯಕರ್ಮಿಯ ಸಂಕಲ್ಪ. ಇಂಗ್ಲೆಂಡಿನ ಗ್ಲಾಡ್ ಸ್ಟನ್, ಅಮೇರಿಕದ ಲಿಂಕನ್, ಇಟಲಿಯ ಮಟ್ಜಿನಿ, ಭಾರತದ ಮಹಾತ್ಮಾ ಗಾಂಧಿ ಇವರೆಲ್ಲ ಮಹಾಕವಿಗಳ ಬರಹಗಳಿಂದಲೇ ಪ್ರೇರಣೆ ಪಡೆದಿದ್ದರು. ವೇದಗಳಿಂದ ಹಿಡಿದು ಅರ್ವಾಚೀನ ಇಂಗ್ಲೀಷ್ ಕವಿಗಳ ಸಾಹಿತ್ಯದಲ್ಲಿ ಬಹುಭಾಗದ ಮುಖ್ಯ ವಿಷಯ ರಾಜಕೀಯ. ದುರ್ವಿಕಾರಕಾರಕವಾದ ಘರ್ಷಣ ಭೂಯಿಷ್ಠವಾದ ರಾಜಕೀಯದ ಸಂಸ್ಕಾರಕ್ಕೆ ಕಾವ್ಯದ ಸಹಾಯ ಬೇಕು. ಸಾಹಿತ್ಯ ವ್ಯಾಸಂಗವು ರಾಷ್ಟ್ರ ಧರ್ಮಕ್ಕೆ ಆವಶ್ಯಕವಾದ ಪೂರ್ವಸಿದ್ಧತೆ. ಸಾಹಿತ್ಯವಿಲ್ಲದ ಸಾರ್ವಜನಿಕ ಸೇವೆ ಕತ್ತಲುಕೋಣೆಯಲ್ಲಿ ಮೂಗನು ಬಡಿಸಿದ ಭೋಜನ.
ಡಿವಿಜಿಯವರು ಕರ್ನಾಟಕ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ವಿಶೇಷ ಸಾಹಿತ್ಯೋತ್ಸವಗಳನ್ನು ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಹಾಗೂ ಇನ್ನಿತರೆಡೆ ವಿವಿಧ ಸಂದರ್ಭಗಳಲ್ಲಿ ಅವರು ಮಾಡಿದ ಭಾಷಣಗಳು ಈ ಪುಸ್ತಕದಲ್ಲಿ ಅಡಕವಾಗಿವೆ. ಪ್ರಥಮ ಸಾಹಿತ್ಯೋತ್ಸವದ ಪ್ರಾಸ್ತಾವಿಕ ಭಾಷಣದಲ್ಲಿ ದೇಶದಲ್ಲಾಗುತ್ತಿರುವ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಮಧ್ಯೆ ಕನ್ನಡವನ್ನು ಉಳಿಸಿ ಬೆಳೆಸುವುದು ಹೇಗೆ ಎಂಬುದನ್ನು ವಿಮರ್ಶಿಸಿದ್ದಾರೆ. ಗ್ರಂಥ ರಚನೆ ಸಾಹಿತ್ಯದ ಎಲ್ಲ ಶಾಖೆಗಳನ್ನು, ಎಲ್ಲ ಮತ ಸಂಪ್ರದಾಯಗಳನ್ನೂ ಒಳಗೊಳ್ಳಬೇಕಾದ ಆವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ. ಇಂಗ್ಲೀಷ್ ಭಾಷೆ ಆಧುನಿಕ ವಿದ್ಯಾಭ್ಯಾಸದ ಮಾಧ್ಯಮವಾಗಿ ಮೆರೆಯುತ್ತಿದ್ದ ಆ ಕಾಲದಲ್ಲಿ ಕನ್ನಡ ಮಾಧ್ಯಮದ ಅಗತ್ಯತೆಯ ಕುರಿತೂ ಮಾತನಾಡಿದ್ದಾರೆ. ಅದೇ ಕಾರ್ಯಕ್ರಮದ ಉಪ ಸಂಹಾರ ಭಾಷಣದಲ್ಲಿ ಕನ್ನಡದಲ್ಲಿ ನೂತನ ಸಾಹಿತ್ಯ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎರಡನೆಯ ವರ್ಷದ ಪ್ರಾಸ್ತಾವಿಕ ಭಾಷಣದಲ್ಲಿ ಅಧ್ಯಾಪಕರಿಗೆ ಇರಬೇಕಾದ ಜ್ಞಾನ ವಿಸ್ತಾರ, ಕನ್ನಡದಲ್ಲಿಯೇ ವಿದ್ಯಾಭ್ಯಾಸ ನಡೆದರೆ ವಿದ್ಯಾರ್ಥಿಗಳಿಗೆ ಅಗುವ ಅನುಕೂಲ, ಭಾಷೆಯ ಕಲಿಕೆಯಲ್ಲಿ ವ್ಯಾಕರಣ ಪಾಠದ ಅನಿವಾರ್ಯತೆ, ಹಳತು ಹೊಸತುಗಳ ಮಿಶ್ರಣ, ಜೀವನೋಪಾಯದ ವಿಷಯಗಳಲ್ಲಿ ಗ್ರಂಥರಚನೆ ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ. ಮೂರನೆಯ ವರ್ಷದಲ್ಲಿ ನವ್ಯತೆಯೇ ಜೀವನ ಎಂಬುದನ್ನು ಪ್ರತಿಪಾದಿಸಿ ಆಧುನಿಕ ದೃಷ್ಟಿಯ, ವೈಜ್ಞಾನಿಕ ದೃಷ್ಟಿಕೋನದ ಪುಸ್ತಕಗಳ ರಚನೆಯನ್ನು ಕುರಿತು ಮಾತನಾಡಿದ್ದಾರೆ. ನಾಲ್ಕನೆಯ ವರ್ಷದ ಸಾಹಿತ್ಯೋತ್ಸವದಲ್ಲಿ ಕನ್ನಡದಲ್ಲಿ ಆಧುನಿಕ ಶಾಸ್ತ್ರಗಳಿಗೆ ಬೇಕಾದ ಪಾರಿಭಾಷಿಕ ಶಬ್ದಗಳ ನಿರ್ಮಾಣದ ಕುರಿತು ತಮ್ಮ ಚಿಂತನೆಯನ್ನು ಹೊರಗೆಡವಿದ್ದಾರೆ.
ಮೇಲುಕೋಟೆಯಲ್ಲಿ ನಡೆದಿದ್ದ ಮೈಸೂರು ಪಂಡಿತ ಮಂಡಲದ ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಭಾಷಣವು ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಾಚೀನ ಪಾಂಡಿತ್ಯದ ವೈಭವ, ಆಧುನಿಕ ಕಾಲದಲ್ಲಿ ಉಂಟಾಗುತ್ತಿರುವ ಶಿಥಿಲತೆ, ಪುರಾತನ ನೂತನಗಳ ಮಧ್ಯೆ ಉಂಟಾಗುತ್ತಿರುವ ಸ್ಪರ್ಧೆ, ಸ್ಮೃತಿ-ಸ್ವತಂತ್ರ ಬುದ್ಧಿಗಳ ನಡುವಿನ ಪೈಪೋಟಿ, ಕನ್ನಡ ಸಂಸ್ಕೃತಗಳ ಕಾದಾಟ, ಪಂಡಿತರಿಗಿರಬೇಕಾದ ಸಾಮಾನ್ಯ ಇಂಗ್ಲೀಷ ಜ್ಞಾನ ಇವು ಅವರ ಭಾಷಣದ ಮುಖ್ಯಾಂಶಗಳು. ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದಲ್ಲಿ ಮಾಡಿದ ಭಾಷಣದಲ್ಲಿ ಕಾವ್ಯದಲ್ಲಿರುವ ಜೀವನ ತತ್ವ ದರ್ಶನವನ್ನು ಮಾಡಿಸಿದ್ದಾರೆ. ಅದೇ ಸಂಘದ ರಜತೋತ್ಸವ ಸಭೆಯಲ್ಲಿ ಕನ್ನಡಕ್ಕೋಸ್ಕರ ಹೋರಾಡುತ್ತಿರುವ ಕೃಷ್ಣಶಾಸ್ತ್ರಿಗಳು, ವೆಂಕಟ ನಾರಾಯಣಪ್ಪನವರು ಮುಂತಾದವರ ಸೇವೆಯನ್ನು ನೆನೆದಿದ್ದಾರೆ. ಕನ್ನಡದಲ್ಲಿ ಸರ್ವತೋಮುಖ ಸಾಹಿತ್ಯ ನಿರ್ಮಿತಿ ನಡೆಯಬೇಕು, ಅದಕ್ಕೆ ತೀವ್ರತರ ತಪಸ್ಸು ಬೇಕು ಎಂದು ಪ್ರತಿಪಾದಿಸಿದ್ದಾರೆ. ಸಾಹಿತ್ಯ ನಿರ್ಮಾಣದ ದೀಕ್ಷೆ ತೋಡುವವರು ಭಾಷಾಜ್ಞಾನ, ಶಾಸ್ತ್ರ ಶಿಕ್ಷೆ, ಲೋಕ ಸಂಸರ್ಗ ಮತ್ತು ಜೀವನೋದಾತ್ತತೆ ಎಂಬ ಸಾಧನ ಚತುಷ್ಟಯವನ್ನು ಹೊಂದಬೇಕು ಎಂದಿದ್ದಾರೆ.
ಮೈಸೂರು ಸಂಸ್ಥಾನದ ವಿದ್ಯಾ ಸಮ್ಮೇಳನದ ಪ್ರಾಥಮಿಕ ಶಾಲೆಯಲ್ಲಿ ಅವರು ಮಾಡಿದ ಭಾಷಣ ಕಣ್ತೆರೆಸುವಂತಿದೆ. ಅದರಲ್ಲಿ ಅವರು ಉಪಾಧ್ಯಾಯರಿಗೆ ಇರಬೇಕಾದ ಕನಿಷ್ಠ ಅರ್ಹತೆ, ಅವರ ವ್ಯಕ್ತಿತ್ವ, ಮಕ್ಕಳಲ್ಲಿ ಬೆಳೆಸಬೇಕಾದ ಕೌಶಲ್ಯಗಳ ಬಗ್ಗೆ ಮನೋಜ್ಞ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಕನ್ನಡಿಗರಿಗೆ ಸಂಸ್ಕೃತ ಭಾಷೆಯ ಆವಶ್ಯಕತೆ ಏನು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಪುಸ್ತಕದ ಕೊನೆಯ ಅಧ್ಯಾಯ ’ಕಾವ್ಯೋಪಾಸನೆ’ ಎಂಬ ಪ್ರಬಂಧ. ಈ ಪ್ರಬಂಧದಲ್ಲಿ ಕಾವ್ಯದ ಅಂಗವಾದ ರಸ, ಧ್ವನಿ, ರಸಪಾಕ, ಅಕ್ಷರಶಕ್ತಿ, ಅಲಂಕಾರ, ಭಾವಶಿಲ್ಪ, ಅರ್ಥಲಾವಣ್ಯ, ಛಂದೋನರ್ತನ, ವಾಚಕನ ಯೋಗ್ಯತೆ, ಸಹೃದಯತೆ ಮುಂತಾದ ವಿಚಾರಗಳಿವೆ.
ಒಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದ ಕನ್ನಡದ ಸಾಹಿತ್ಯ ವಿಕಾಸದ ಬಗ್ಗೆ ಅತ್ಯಪೂರ್ವ ವಿಚಾರಗಳನ್ನು ಈ ಪುಸ್ತಕ ಒಳಗೊಂಡಿದೆ. ಡಿವಿಜಿಯವರಿಗೆ ಆಧುನಿಕ ಸಾಹಿತ್ಯ ನಿರ್ಮಾಣದ ಬಗೆಗಿರುವ ಒಲವು, ಪ್ರಾಚೀನ ಸಾಹಿತ್ಯದಲ್ಲಿರುವ ಪಾಂಡಿತ್ಯ, ಕಾವ್ಯಶಾಸ್ತ್ರದ ಆಳವಾದ ಅಧ್ಯಯನ ಇವುಗಳು ಈ ಹೊತ್ತಗೆಯಲ್ಲಿ ಪ್ರತಿಬಿಂಬಿತವಾಗಿವೆ. ಗ್ರಂಥದ ಚರಮ ಪದ್ಯದೊಂದಿಗೆ ನನ್ನೀ ಲೇಖನ ಸೇವೆಯನ್ನು ಡಿವಿಜಿ ಎಂಬ ಆ ಮಹಾಚೇತನಕ್ಕೆ ಅರ್ಪಿಸುತ್ತಿದ್ದೇನೆ.
ಕವಿಯುಂ ಸಹೃದಯನುಂ ಶಿವ |
ಶಿವೆಯರ ಪೋಲ್ತೈಕ್ಯಮೊಂದೆ ದೈವಿಕಯೋಗಂ ||
ಭುವನೈಕಭವ್ಯಮಾ ವಾ |
ಕ್ಸವನಂ ಜಯಿಸುಗೆ ಸರಸ್ವತೀ ಪ್ರೀತಿಕರಮ್ ||
-[———————————————————–
ಮಹಾಬಲ ಭಟ್, ಗೋವಾ
ಡಿ.ವಿ.ಜಿಯವರ “ಸಾಹಿತ್ಯ ಶಕ್ತಿ” ಕುರಿತ ನಿಮ್ಮ ಲೇಖನ ಅದ್ಭುತ.