ಲಹರಿ
ಭಾರತಿ ಅಶೋಕ್
ಅವಳ ಸ್ವಗತ
ಅಂದೇ ಹೇಳಿದ್ದೆ ನೀನು ದುಡುಕುತ್ತಿರುವೆ ಎಂದು,ಕೇಳಲಿಲ್ಲ ನೀನು, ನಿನ್ನದು ವಿಪರೀತ ಹಠ, ನೀನು ಹೋಗುವ ದಾರಿ ಸರಳಿಲ್ಲ ಎಂದು ಹೇಳಿದರು ಕೇಳಲೇ ಇಲ್ಲ, ನಾನೆಲ್ಲ ಸರಿ ಮಾಡಿಕೊಳ್ಳುವೆ ಎಂದು ನಡೆದೆ. ನನಗೂ ಗೊತ್ತಿತ್ತು ನಿನ್ನ ಶಕ್ತಿ,ಆದರೂ ಅಷ್ಟೊಂದು ಕಗ್ಗಾಡದು, ನೀನು ಅದರಲ್ಲಿ ಕಾಲಿಟ್ಟಾಗಲೇ ನನಗೆ ತುಂಬಾ ನೋವಾಯಿತು ಆದರೂ, ತಾಳಿಕೊಂಡಿರುವೆ, ಕಾರಣ ನಿನ್ನನ್ನು ಸೊಲಿಸಲು ನನಗಿಷ್ಟವಿಲ್ಲ.
ಈಗೇನಾಗಿದೆ ನಾನು ಸರಿ ದಾರಿಯಲ್ಲಿ ನಡೆಯುತ್ತಿಲ್ಲವೆ…?
ದಾರಿ ಬದಲಿಸಿರುವೆನೆ…?
ನಿನ್ನ ನಿರೀಕ್ಷೆ ಸುಳ್ಳಾಗಿಸುವೆನೆಂಬ ಭಯವೇ..?
ಆರೂ ಸವೆಸದ ದುರ್ಗಮ ಹಾದಿ ಅಯ್ದುಕೊಂಡೆನೆಂದು ನವೆಯದಿರು, ನಡೆಯಬೇಕಿದೆ ತೋರಲು ಹಿಂದೆ ಬರುವ ಮಂದಿಗೆ ಹೊಸ ಹಾದಿ
ಬಂದುದು ಅಂತಹುದೇ ದಾರಿಯಲಿ
ಇರುವ ದಾರಿಯಗುಂಟ ನಡೆವ ಖಯಾಲಿ ನನಗಿಲ್ಲ
ನನಗೆ ನನ್ನದೇ ಹೊಸ ದಾರಿಯಲಿ ನಡೆವುದೇ ಸುಖ
ಅದು ನನ್ನವರಿಗೂ ರಾಜಮಾರ್ಗ
ಇಷ್ಟೆಲ್ಲಕೂ ಕಾರಣ ನೀನು ಮನವೇ
ನೀನು ನನ್ನ ಬೆಂಗಾವಲಿರುವಾಗ
ನನಗೆ ನಿಶ್ಚಿಂತೆ.
ಖಂಡಿತಾ ನಾನು ಆಯ್ದುಕೊಂಡಿರುವ ದಾರಿಯನ್ನು ನಡೆದು ಮುಗಿಸುವೆನು, ನಿನಗೆ ನನ್ನ ಪಾಡು ನೋಡಿ ಮರುಕ ಹುಟ್ಟಿರಬಹುದು. ಆದರೆ ಒಂದು ತಿಳಿ ಇದೇ ದಾರಿ ನನಗೆ ಸುಗಮವಾದುದು,ಸಮ ದಾರಿಯಲ್ಲಿ ನಡೆದಿದ್ದರೆ ನೀನು ಹೀಗೆ ನನ್ನನ್ನು ಹಿಂಬಾಲಿಸುತ್ತಿದ್ದೆಯಾ….? ಇಲ್ಲ ನನ್ನ ಪಾಡಿಗೆ ನನನ್ನನ್ನು ಬಿಟ್ಟುಬಿಡುತ್ತಿದ್ದೆ, ನಿನಗೆ ಗೊತ್ತಿಲ್ಲ ಅನ್ನಿಸುತ್ತೆ ನೀನಿರುವೆ ಸದಾ ದಾರಿಗೆ ಕಾವಲಾಗಿ ಎನ್ನುವ ಧೈರ್ಯವೇ ನನ್ನನ್ನು ನಡೆಸುತ್ತಿದೆ!
ನಾನು ನಿನ್ನ ಮೂರ್ಖತನವನ್ನು ಅರಿತಿರುವೆ ಅದಕ್ಕಾಗಿ
ಹಿಂದಿರುವೆ….
ನಾನು ಜೊತೆಗಿದ್ದರೂ ನಡೆಯಬೇಕಾದುದು ನೀನೇ ಎನ್ನುವುದು ಸತ್ಯ
ಅದಕ್ಕಾಗಿ ಈಗಲಾದರೂ ಒಮ್ಮೆ ಅಗೋ ಅಲ್ಲಿದೆ ನೋಡು ಆ ದೊಡ್ಡ ಆಲದ ಮರ ಅದರ ಕೆಳಗೆ ಕುಳಿತುಕೋ ಧಣಿವಾರಿಸಿ, ಸುಧಾರಿಸಿಕೊಂಡು ಮೆಲ್ಲನೆ ಕಣ್ಮಿಚ್ಚಿ ಯೋಚಿಸು, ಅಲ್ನೋಡು ಅಲ್ಲಿ, ಆ ಬದಿಯಲ್ಲಿ ಕಾಣುತ್ತಿವೆಯಲ್ಲ ರಸ್ತೆಗಳು ಅವೆಲ್ಲಾ ನೀನು ಸೇರಬೇಕಾಗಿರುವ ಠಾವಿಗೆ ಕರೆದೊಯ್ಯುತ್ತವೆ, ನೋಡೊಮ್ಮೆ ಸರಿಯಾಗಿ ಎಷ್ಟೊಂದು ಸರಳವಾದ ರಸ್ತೆಗಳು ಅಲ್ಲವೇ – ನಡೆ ಅದರಲ್ಲಿ ಒಂದನ್ನಾಯ್ದುಕೋ ಕಣ್ಮಿಚ್ಚಿ ನಡೆದರೂ ನೀನು ಸೇರಬೇಕಾದ ಜಾಗಕ್ಕೆ ಸೇರುವೆ, ಯೋಚಿಸು.
ಇಲ್ಲ ಇಲ್ಲ ಎಂದಿಗೂ ಸಾಧ್ಯವಿಲ್ಲ ಮತ್ತೊಮ್ಮೆ ದಾರಿ ಬದಲಿಸುವ ಮಾತನ್ನು ನಿನ್ನಿಂದ ನಿರಿಕ್ಷಿಸಲಾರೆ. ನೀನು ಇರುವುದಾದರೆ ಜೊತೆಗಿರು ಅಷ್ಟೆ.ನಿನ್ನ ಬಿಟ್ಟಿ ಸಲಹೆಗಳನ್ನು ನಾನು ಕೇಳಲಾರೆ.ಇದೇ ದಾರಿಯಲ್ಲಿ ನಡೆದೇ ನಡೆಯುವೆ.ಇದೇ ದಾರಿಯಲ್ಲಿ ಮುಂದೆ ಮುಂದೆ ನಡೆದು ನನ್ಹಿಂದೆ ಬರುವ ನನ್ನ ನೆರಳಿಗೆ ಹಾದಿಯನ್ನು ಹಸನಾಗಿಸಿ ಕಲ್ಲು ಮುಳ್ಳು ಚುಚ್ಚದಂತೆ ಸೌಮ್ಯವಾಗಿ ಕರೆದೊಯ್ಯುವೆ. ಚಿಂತಿಸದಿರು ಹಠದಲ್ಲಿ ಅಯ್ದುಕೊಂಡಿರುವೆ ಅದಕ್ಕಾಗಿ ನಡೆದು ಸವೆಸುವೆ ಎನ್ನುವ ಮಾತಿಲ್ಲ, ಇಷ್ಟ ಪಟ್ಟು ಅಯ್ದುಕೊಂಡ ಹಾದಿ ಪ್ರೀತಿಯಿಂದ ನಡೆಯುತ್ತಿರುವೆ, ನಡೆಯುವೆ..
ನಿನ್ನದು ವಿಪರೀತ ಆತ್ಮವಿಶ್ವಾಸ ಸರಿ ನಡೆ. ನಡೆದು ಸಾಗಿಸು,ಸಾಧಿಸು.ಆದರೆ ಮತ್ತೆ ಮತ್ತೆ ಒಂದು ಒಂದೇ ಒಂದು ಮಾತನ್ನು ನೆನಪಿಡು ನೀನು ಈಗಲೇ ಧಣಿದಿರುವೆ,ಜೊತೆಗೆ ಹೆಗಲ ಹೊರೆ ಬೇರೆ, ಅದಕ್ಕಾಗಿ ಈ ದಾರಿ ಸಾಕೆನಿಸಿದರೆ ಬದಲಿಸಿಬಿಡು. ಅಲ್ಲಿ ನಿನಗಾಗಿ ಜೊತೆ ನಡೆಯುವ ಜೀವಗಳಿವೆ, ಹೊರೆಯನ್ನು ಇಳಿಸಿ ಭಾರ ಕಡಿಮೆ ಮಾಡಿ ನೆಮ್ಮದಿಯ ದಾರಿಯಲ್ಲಿ ನಡೆಸಲು ಕಾದಿಹವು
ಭಾರತಿ ಅಶೋಕ್.