ಕಾವ್ಯ ಸಂಗಾತಿ
ಮರ ಮತ್ತೆ ಚಿಗುರಿದಾಗ..
ಭಾರತಿ ಅಶೋಕ್
ವೈರಿ ಶಿಶಿರನ ನರ್ತನಕೆ
ಬರಡಾದ ಮರವು
ಇನ್ನೆನು ಕಥೆ ಮುಗಿಯಿತು
ಬಾಳಿನ ಯಾತ್ರೆ ಕೊನೆಯಾಯ್ತು
ಎನ್ನುತ ಭರವಸೆ ಕಳೆದುಕೊಂಡು
ವ್ಯತೆಗೀಡಾಗಲೂ…
ಬದುಕಲಿ ಮತ್ತೆ ವಸಂತನ ಆಗಮನ!
ಹೋದ ಜೀವ ಮರಳಿದಂತೆ
ಸಡಗರ ಸಂಭ್ರಮ ತರತರ.
ಮತ್ತೆ ಒಡಲೊಳು ಚಿಗುರನು
ಕಂಡು ಕಂಗೊಳಿಸಲು,
ಗತವೈಭವದ ನೆನಪು.
ಮೈತುಂಬಾ ಚಿಗುರು, ಹೊಗರು,
ಹೂ ಕಾಯಿ ಗೊಂಚಲು
ತನುಮನಕೆಲ್ಲಾ ಹಸಿರಿನ ಸಿಂಚನ
ಮತ್ತೆ ಹೊಸ ಜೀವ ಹೊಸ ಭಾವದಿ ಹರೆಯಕೆ ವರವಿತ್ತ ಭಾವ
ಕಾಣುವ ನೋಟ,ಮಾಟ,ಕೂಟವೆಲ್ಲಾ
ಹೊಸತು ಹೊಸತನ ಹೊಸತರಲ್ಲೇ ತಲ್ಲೀನ.
ಪ್ರಕೃತಿ ಪುರುಷನ ಮುಂದೆ
ತಾನೊಂದು ವಧುವಾಗಿ
ಮೈಯೆಲ್ಲಾ ಶೃಂಗರಿಸಿ
ತಿದ್ದಿ ತೀಡಿದ ಗೊಂಚಲು.
ಸೊಕ್ಕಿದ ಗಜಗಮನೆಯಾಗಿ ಮೆರೆಯುವ ಸೊಬಗು.
ಒನಪು ವಯ್ಯಾರಕೆ ತಾರುಣ್ಯ
ಭಾಗಿ ಸೋತು ಶರಣಾದಂತೆ.
ಮುಗ್ದ, ಸ್ನಿಗ್ದ ಮೆಲುಗಾಳಿಗೆ
ಭಾಗಿ ತೂಗಿ ತೋರಣವಾಗಿ,
ಬದುಕ ಪ್ರೀತಿಯನು
ಜೀವ ಪ್ರಿತಿಯ ಒಡಲೊಳಿರಿಸಿ
ಆಂತರ್ಯದಿ ನಗುತ
ವಸಂತನ ಸ್ಪರ್ಶಕೆ
ನಾಚಿ ನೀರಾದಂತೆ.
ಮತ್ತೆ ಬಾಳಿನ ಲವಲವಿಕೆ
ಉತ್ಸಾಹ, ಉಲ್ಲಾಸ ಮೈಮರೆಸಿ
ತನ್ನಿರುವ ಘಮಲನು
ಜೀವ ಪ್ರೀತಿಯ ಒಲವಲಿ
ಬಾಚಿ ತುಂಬಲು
ಪ್ರಕೃತಿ ಪುರುಷನೊಡನೆ ಮೈ ಮೆರವಣಿಗೆ.
ಸೂಕ್ಷ್ಮ ಚಿಗುರೊಳು
ಮತ್ತೆ ಮತ್ತೆ ಮಗುವಾಗಿ
ಕುಣಿವಂತೆ.
ನವಿರಾದ ಕಂಪಿನಲಿ ಜೀವದಾತು ಬೆರೆತಂತೆ ನಿಶ್ಚಿಂತ ಭಾವ.
ಫಲ ನೀಡುವ ಧನ್ಯತಾ ಭಾವದಿ
ಹೊಸ ಚಿಗುರ ಹೊತ್ತ ಆನಂದದ
ಆಲಾಪಕೆ ಬದುಕು ನಾಂದಿ.
ಜೀವ ಸಂಕುಲಕೆ ಪ್ರಾಣವಾಯು,
ಉಸಿರು ಕೊಟ್ಟು ಪಡೆವ ಶಕ್ತಿಗೆ
ಬೆರಗಾಗಿ ಮತ್ತೆ ವಸಂತನ
ನೆನೆವ ಮ(ನ)ರಕೆ ಹೊಸತನ.