ಕಾವ್ಯ ಸಂಗಾತಿ
ಕಾಕ ಕಾಕಃ ಪಿಕ ಪಿಕಃ
ಮಧುರಾ ಮೂರ್ತಿ


ಕೋಗಿಲೆಯನನುಸರಿಸಿ ಕಾಗೆಯದು ತಾನುಲಿಯೆ
ಕೇಳುವರೇ ಕಿವಿಗಳನು ಅಗಲಿಸುತ
ತಿಳಿದಿರದ ವಿಷಯಗಳ ತಿಳಿದವನು ತಾನೆಂದು
ಹೇಳುತಿರೆ ನಂಬುವರೇ ಅನವರತ
ಬಣ್ಣಗಳು ಒಂದೇ, ಬಾಹ್ಯ ರೂಪವೂ ಒಂದೆನುತ
ಕಾಗೆಯದು ಕೋಗಿಲೆ ಆಗಬಹುದೇ
ಬಣ್ಣಗಳ ನೋಡುತ ನಿರ್ಧರಿಸದಿರು ಮನುಜ
ಅಂತರಂಗದ ಮರ್ಮ ಅರಿಯಬಹುದೇ

ಬದುಕಿರುವ ಕೆಲಘಳಿಗೆ ಮುಖವಾಡ ಧರಿಸುತ್ತ
ಪರರೆದುರು ತೋರಿಸುವ ಬಯಕೆಯೇಕೆ
ಕಾಲವದು ಸರಿದಾಗ ನಿಜಬಣ್ಣ ತಿಳಿಯುವುದು
ಅದಕಿಂತ ಅವಮಾನ ನಿನಗೆ ಬೇಕೇ
ಇರುವುದರ ಜೊತೆಗೆ ಮತ್ತಷ್ಟು ಇದೆಯೆಂದು
ಸೇರಿಸುವ ಅತಿಯಾಸೆ ನಿನಗೇಕೆ ಹೇಳು
ನಿನಗೊಲಿದ ಪ್ರತಿಭೆಯಲಿ ಆನಂದ ಹೊಂದದೆಯೆ
ಎಲ್ಲವೂ ತನದೆನಲು ಎದುರಿಸುವೆ ಗೋಳು
