ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸಂಕಲ್ಪ

ಪ್ರತಿಭೆ ಎನ್ನುವದು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ ಎಂಬ ಮಾತಿದೆ.ನಮ್ಮ ಶಾಲೆಯ ವಿದ್ಯಾರ್ಥಿ ಪ್ರಕಾಶ ಬಡತನದಲ್ಲಿ ಕಲಿತು ಸೈನ್ಯವನ್ನು ಸೇರಿ ಇಂದು ಲೆಫ್ಟಿನೆಂಟ್ ಹುದ್ದೆಯವರೆಗೆ ಉನ್ನತಸ್ಥಾನವನ್ನು ಪಡೆದವಿಷಯ ಯಾವ ಶಿಕ್ಷಕರಿಗೆ ತಾನೆ ಹೆಮ್ಮೆಯನ್ನುಂಟು ಮಾಡುವದಿಲ್ಲ ಹೇಳಿ, ಅಪ್ಪಟ ಗ್ರಾಮೀಣ ಪ್ರತಿಭೆ, ವ್ಯವಸಾಯ ಮಾಡುವ ಒಬ್ಬ ರೈತನ ಮಗನಾಗಿ ಊರಿಗೆ, ಶಾಲೆಗೆ ಕೀರ್ತಿಯನ್ನು ತಂದ ಹುಡುಗ. ಪ್ರತಿಬಾರಿ ಬಂದಾಗಲೂ ಶಾಲೆಯ ಎಲ್ಲ ಶಿಕ್ಷಕರಿಗೆ ನಮಿಸಿ ಹೋಗುವ ಪರಿಪಾಠವನ್ನು ಹೊಂದಿದ್ದ. ಹೀಗೆ ನಮಿಸಲು ವರ್ಗಕೋಣೆಗೆ ಬಂದಾಗ ಅವನ ಸಾಧನೆಯ ಯಶೋಗಾಥೆಯನ್ನು ಅವನ ಬಾಯಿಂದಲೇ ಹೇಳಲು ಕೇಳಿಕೊಂಡೆವು. ಅವನು ತಾನು ಶಾಲೆಯಿಂದ ಬಂದ ಮೇಲೆ ತಂದೆಯ ಜೊತೆ ಹೊಲದ ಕೆಲಸವನ್ನು ಕೂಡ ಮಾಡಿ, ದನಕರುಗಳ ಸೇವೆ ಮಾಡಿ ನಂತರ ಅಭ್ಯಾಸಕ್ಕೆ ಅಣಿಯಾಗುತ್ತಿದ್ದ. ಜೀವನದಲ್ಲಿ ಏನು ಗುರಿ ಇತ್ತು? ಎಂದು ಕೇಳಿದಾಗ ತಾನು ಭಾರತೀಯ ಸೈನ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸುವ ಮೂಲಕ ತನ್ನ ಸಂಕಲ್ಪವನ್ನು ಈಡೇರಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳುವಾಗ ಅವನ ಯಶೋಗಾಥೆಯನ್ನು ಕೇಳುವ ಮಕ್ಕಳ ಕಣ್ಣಿನ ತೇಜಸ್ಸು ಹಾಗೂ ಶಾಂತತೆ ತಮ್ಮ ಮನದಲ್ಲೆಲ್ಲೊ ಸಂಕಲ್ಪ ಗೈಯುವಂತೆ ಭಾಸವಾಗುತ್ತಿತ್ತು. ನಿಜ ‘ಸಂಕಲ್ಪ’ಎಂಬುದು ನಮ್ಮಲ್ಲಿ ಛಲವನ್ನು ಹುಟ್ಟುಹಾಕಿ ಅದನ್ನು ಈಡೇರಿಸಲು ಶೃದ್ಧೆಯಿಂದ ಸ್ವಯಂಪ್ರೇರಿತರಾಗಿ ಹಾಕಿಕೊಂಡ ಯೋಜನೆ, ಯೋಚನೆ, ಸಮಯಪ್ರಜ್ಞೆ,ಪರಿಶ್ರಮದಿಂದ ಕಾರ್ಯ ಪ್ರವೃತ್ತರಾದಾಗ ಮಾತ್ರ ಸಿಗುವ ವಿಜಯವಾಗಿದ್ದು ಆಲಸಿಗಳ ಪಾಲಿಗೆ ಆಶಾಗೋಪುರ, ಗಗನಕುಸುಮವಾಗುತ್ತದೆ.
ಈಗಿನ ದಿನಗಳಲ್ಲಿ ಎಷ್ಟೋಮಂದಿ ತಂದೆತಾಯಂದಿರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ವೆಚ್ಚ ಮಾಡಲು ಹಿಂದೇಟು ಹಾಕುವದಿಲ್ಲ,ಮಕ್ಕಳ ಭವಿತವ್ಯ ಭವ್ಯವಾಗಬೇಕೆಂಬುದು ಹೆತ್ತವರ ಭವ್ಯವಾದ ಕನಸಾಗಿರುವದು ಸಹಜ, ಆದರೆ ತಮ್ಮ ಮಕ್ಕಳು ಕಲಿಕೆಯ ಅವಧಿಯಲ್ಲಿ ಎಂಥ ಯೋಜನೆ,ಯೋಚನೆ,ಭಾವನೆಗಳನ್ನು ಸಂಗ್ರಹಿಸುತ್ತಿದ್ದಾರೆ,ಎಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕುರಿತು ಅವರು ಜಾಗರೂಕರಾಗಿದ್ದಾರೆಯೇ?.ಓದು ಬರಹ ಕಲಿತ ಮಕ್ಕಳು ಜೀವನದ ಸಮಸ್ಯೆಗಳನ್ನು ಎದುರಿಸಲು ನೆರವಾಗುವ ಯೋಚನೆಗಳಿಗಿಂತಲೂ ಮನುಷ್ಯರ ದೌರ್ಬಲ್ಯಗಳನ್ನು ವೈಭವೀಕರಿಸಿದ ಅಸಂಖ್ಯ ಚಲನಚಿತ್ರ ಮತ್ತು ಬರಹಗಳಿಃದ ಸಾಕಷ್ಟು ಪ್ರಭಾವಿತರಾಗುತ್ತಾರೆ.ಮಹಾಪುರುಷರ,ಸಾಹಸಿ ಸಾಧಕರ,ಜೀವನ ಸಂದೇಶಗಳನ್ನು ಅವರು ಓದಲು ಆಸಕ್ತಿ ತೋರುವುದಿಲ್ಲ.
ಮಕ್ಕಳ ಶೀಲ ಸಂವರ್ಧನೆಗೆ ಬೇಕಾದ ಜ್ಞಾನವನ್ನು ಬಾಲ್ಯದಿಂದಲೇ ಅಂದರೆ ಬೆಳವಣಿಗೆಯ ಅತ್ಯುತ್ತಮ ಸಮಯದಲ್ಲಿ ಮಕ್ಕಳಿಗೆ ನೀಡಲಾಗದಿರುವದು ಒಂದು ದೊಡ್ಡ ಹೆತ್ತವರ ಅಸಹಾಯಕತೆ ಅಥವಾ ದೂರದರ್ಶಿತ್ವದ ಅಭಾವಕ್ಕೆ ಹಿಡಿದ ಕನ್ನಡಿ ಎಂದು ಹೇಳಬಹುದು.ವ್ಯಕ್ತಿಯ ಚಾರಿತ್ರ್ಯ ನಿರ್ಮಾಣದಲ್ಲಿ ಒಳ್ಳೆಯ ಅಭ್ಯಾಸಗಳ ರೂಢಿ ಮೊದಲ ಪಾಠಶಾಲೆಯಾದ ಮನೆಯಿಂದಲೇ ಪ್ರಾರಂಭವಾಗುತ್ತದೆ.ಒಳ್ಳೆಯತನದಲ್ಲಿ ವಿಶ್ವಾಸ,ಒಳ್ಳೆಯವನಾಗಬೇಕೆಂಬ ಸಂಕಲ್ಪಗಳೇ ನಮ್ಮನ್ನು ದೋಷಮುಕ್ತರನ್ನಾಗಿ ಮಾಡುವ ಶಕ್ತಿಯನ್ನು ನೀಡುವುದಿಲ್ಲ.ನಾವು ರೂಡಿಸಿಕೊಂಡ ಬೇಡದ ಅಭ್ಯಾಸಗಳನ್ನು ತ್ಯಜಿಸಬೇಕು.ಹೊಸ ಅಭ್ಯಾಸಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ಸಂಕಲ್ಪ ನಮ್ಮದಾದಾಗ ನಾವಿಟ್ಟುಕೊಂಡ ಗುರಿ ಸಾಧಿಸಲು ಸಾಧ್ಯ.
‘ಕೆಲವೇ ದಿನಗಳಲ್ಲಿ ಮಕ್ಕಳು ಪಡೆದಾಡುವ ಅಭ್ಯಾಸದ ಮೂಟೆಗಳಾಗುತ್ತಾರೆ’ಎಂಬುದನ್ನು ಬದುಕಿಗೆ ರೂಪ ನೀಡಲು ಸಾಧ್ಯವಾಗುವ ಬಾಲ್ಯದಲ್ಲಿಯೇ ಹೆತ್ತವರು ತಮ್ಮ ಮಕ್ಕಳ ನಡೆನುಡಿಯನ್ನು ಗಮನಿಸಿ ತಿದ್ದಿದಾಗ ಮಾತ್ರ ಅವರ ಭವಿಷ್ಯಧ ನಡೆ ಉತ್ತಮವಾಗುತ್ತದೆ.
ಒಂದು ಹೊಸ ಅಭ್ಯಾಸವನ್ನು ಕಲಿತು ರೂಢಿಸಿ ದೃಢಪಡಿಸಿಕೊಂಡು ಅದನ್ನು ಮನಸ್ಸಿನಲ್ಲಿ ನೆಲೆ ನಿಲ್ಲುವಂತೆ ಮಾಡಲು ಮೊದಲು ಚಂಚಲತೆ ಮತ್ತು ಅನಿಶ್ಚಿತತೆಯನ್ನು ತೊರೆದು ಆರಂಭಿಸಿದ ದೃಢ ಸಂಕಲ್ಪವನ್ನು ನೆನೆದು ಹರಿವ ಮರ್ಕಟ ಮನವನ್ನು ಏಕಾಗ್ರತೆಯಂತೆ ಅಭ್ಯಾಸವನ್ನು ಯಶಸ್ವಿಗೊಳಿಸಬೇಕು.
ನಿಷ್ಠೆಯಿಂದ ನಿರಂತರ ಸಾಧನೆ ಮಾಡಲು ಪ್ರೇರಕವಾಗುವ ಪ್ರತಿಯೊಂದು ಅವಕಾಶವನ್ನೂ ಜಾಗೃತೆಯಿಂದ ಗಮನಿಸಿ ಉಪಯೋಗಿಸಿಕೊಂಡಾಗ ಸಂಕಲ್ಪವನ್ನು ಕಾಯ್ದುಕೊಳ್ಳಲು ಸಾಧ್ಯ.
ಪರೀಕ್ಷೆ ಬಂದಾಗ ಮಾತ್ರ ಅಧ್ಯಯನಶೀಲರಾಗುವ ನಮ್ಮ ಮಕ್ಕಳು ಮೊದಲಿನಿಂದಲೇ ಸಮಯವನ್ನು ಬಳಸಿಕೊಳ್ಳುವದಿಲ್ಲ.ಹೊಸ ಅಭ್ಯಾಸವು ಮನಸ್ಸು ನರವ್ಯೂಹಗಳಲ್ಲಿ ಆಳವಾಗಿ ಬೇರು ಬಿಡುವವರೆಗೂ ಯೋಜಿಸಿಕೊಂಡ ಸಾಧನೆಯನ್ನು ಒಂದೇ ಒಂದು ದಿನದ ಮಟ್ಟಿಗೂ ಬಿಡಬಾರದು.ಕಾರಣಾಂತರಗಳಿಂದ ಒಂದು ದಿನ ಅಭ್ಯಾಸ ತಪ್ಪಿದರೆ, ಮರುದಿನ ಹೇಗಾದರೂ ನಿಯಮಗಳಿಂದ ಜಾರಿಕೊಳ್ಳಲು ಮನ ನೆಪಹುಡುಕುವದು.ಈ ನಿಟ್ಟಿನಲ್ಲಿ ಅದಂದಿನ ವಿಷಯವನ್ನು ಅದಂದೇ ಮಾಡುತ್ತ ಬಂದಾಗ ತಮ್ಮ ಗುರಿ ಸಾಧಿಸಲು ಸಾಧ್ಯ.
ಸ್ವಾಮಿ ವಿವೇಕಾನಂದರು “ಇತರರಿಗಾಗಲಿ,ನಿಮಗೆ ನೀವೇ ಆಗಲಿ ‘ದರಿದ್ರ,ದುರ್ಬಲ’ಎಂದು ಹೇಳಬೇಡಿ’ಎಂದು ಪ್ರತಿಯೊಬ್ಬರ ಆಂತರ್ಯವನ್ನು ಜಾಗೃತಿಗೊಳಿಸಿದ್ದಾರೆ.
ಬದುಕ ಭವಿಷ್ಯದ ಸಂಕಲ್ಪ ಸಿದ್ಧಿಗೆ ಯೋಜನೆ ಯೋಚನೆ ಹಾಕಿಕೊಂಡು ಬದ್ಧತೆ ಆತ್ಮ ಶುದ್ಧತೆಯಿಂದ ಎದುರಾಗುವ ಅಡೆತಡೆಗಳಿಂದ ವಿಮುಖರಾಗಬಾರದು. ತಾಳ್ಮೆ,ಶ್ರದ್ಧೆಯಿಂದ ಯಶಸ್ವಿಗೊಳಿಸುವತ್ತ ಕಾರ್ಯಪ್ರವೃತ್ತರಾಗೋಣ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

3 thoughts on “

  1. ಸಕಾಲಿಕ ಲೇಖನ ಉತ್ತಮ ವಾಗಿ ಮೂಡಿಬಂದಿದೆ ಅಭಿನಂದನೆಗಳು

  2. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಲೇಖನ ಟೀಚರ್

Leave a Reply

Back To Top