ಮೌನದೊಡಲ ಮಾತು-ಗಜಲ್ ಸಂಕಲನ

ಪುಸ್ತಕ ಸಂಗಾತಿ

ಅಂಬಮ್ಮ ಪ್ರತಾಪ್ ಸಿಂಗ್ ರವರ

ಗಜಲ್ ಸಂಕಲನ

ಮೌನದೊಡಲ ಮಾತು

ಕೃತಿಯ ಶೀಷಿ೯ಕೆ …….ಮೌನದೊಡಲ ಮಾತು (ಗಜಲ್ ಗಳು)
ಲೇಖಕರು……………ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್
ಪ್ರಥಮ ಮುದ್ರಣ. ೨೦೨೩. ಬೆಲೆ ೮೦₹

ಪ್ರಕಾಶಕರು………. ಶ್ರೀ ಪ್ರತಾಪ್ ಸಿಂಗ್ ವಿಜಯ ಪ್ರಕಾಶನ ಮಾನ್ವಿ ಜಿಲ್ಲಾ ರಾಯಚೂರು ಮೊ.೭೨೫೯೫೭೭೭೬೫

ಬದುಕು ಮತ್ತು ಬರಹವನ್ನು ಪ್ರೀತಿಸುವ ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಇವರು ಮಾನ್ವಿ ನಿವಾಸಿಯಾಗಿದ್ದು ಶಿಕ್ಷಕಿಯಾಗಿ, ಗೃಹಣಿಯಾಗಿ ,ಮಿತಭಾಷಿಣಿಯಾಗಿ, ಸಾಹಿತಿಯಾಗಿ ,ಎರಡು ದೋಣಿಯಲ್ಲಿ ಕಾಲಿಟ್ಟು ಚಲಿಸುತ್ತಾ ತಮ್ಮ ಮನದ ತಳಮಳಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಮನದ ನೆಮ್ಮದಿಗಾಗಿ ಬರಹಕ್ಕೆ ಶರಣಾಗಿದ್ದಾರೆ . ಮೊದಲು ಕವನ ರಚನೆಯಲ್ಲಿ ತೊಡಗಿಸಿಕೊಂಡು ಮನಸ್ಸು ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದಾರೆ ನಂತರ ವಿಚಾರಧಾರೆ ಎಂಬ ಪ್ರಬಂಧ ಸಂಕಲನ ಮತ್ತು ಜೀವನಪಥ ಎಂಬ ಲೇಖನ ಸಂಕಲನವನ್ನು ಪ್ರಕಟಿಸಿ ರಾಯಚೂರು ಜಿಲ್ಲೆಗೆ ಚಿರಪಚಿತರಾಗಿದ್ದಾರೆ. ಈಗ ಅವರು ತಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸಿಕೊಳ್ಳಲು ಗಜಲ್ ರಾಣಿಯನ್ನು ಮೆಚ್ಚಿ ಅವಳಿಗೆ ಶರಣಾಗಿ ಧ್ಯಾನಿಸಿ ಅವಳ ಮುಖಾಂತರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾ ಪ್ರಥಮ ಗಜಲ್ ಸಂಕಲನ ಮೌನದೊಡಲ ಮಾತು ಎಂಬ ಸಂಕಲವನ್ನು ಪ್ರಕಟಿಸಿದ್ದಾರೆ.ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿ ಗಳು,ಬಹುಮಾನಗಳು ಬಂದಿವೆ.

ಗಜಲ್ ಎಂಬುದು ಅರಬ್ಬಿ ಶಬ್ದವಾದರೂ ಫಾರ್ಸಿ ಭಾಷೆಯಲ್ಲಿ ಕಾವ್ಯವಾಗಿ ಬೆಳೆದು ಉರ್ದು ಕಾವ್ಯ ಸಾಹಿತ್ಯದ ರಾಣಿಯಾಗಿ ಮೆರೆಯುತ್ತಿದೆ . ಗಜಲ್ ಮೂಲತಃ ಮಾನವ ಜೀವಿಯ ಸಹಜ ಪ್ರೀತಿ , ಪ್ರೇಮ ,ಪ್ರಣಯ ,ವಿರಹ ,ವೇದನೆ, ನೋವು ,ಹತಾಶೆ ,ಧ್ಯಾನ ,ಕಾಯುವಿಕೆ ,ಮನದ ತಳಮಳದ ಬೇಗುದಿಯನ್ನು ಅಭಿವ್ಯಕ್ತಿಗೊಳಿಸುವ ಒಂದು ಸುಂದರವಾದ ಮೃದು ಮಧುರ ಶಬ್ದಗಳ ಮೂಲಕ ರೂಪಕ ,ಪ್ರತಿಮೆಗಳ ಮೂಲಕ ಅಭಿವ್ಯಕ್ತಿಸುವ ಕಾವ್ಯವಾಗಿದ್ದು ಹಾಡುಗಬ್ಬ ವಾಗಿದೆ.ಇದಕ್ಕೆ ತನ್ನದೇ ಆದ ಛಂದಸ್ಸು ,ಲಯ ,ಗೇಯತೆ ,ಮೋಹಕತೆ ,ಆದ್ರತೆ ,ಹೊಂದಿದ ಸುಂದರವಾದ ಕಾವ್ಯ ವಾಗಿದ್ದು ,ಇಂದು ಭಾರತದ ಎಲ್ಲಾ ಭಾಷೆಗಳಲ್ಲಿ ಗಜಲ್ ರಚನೆ ಯಾಗುತ್ತಿವೆ. ಈಗ ಕನ್ನಡದ ಕವಿಗಳು ಗಜಲ್ ಗೆ ಮೋಹಗೊಂಡು ಕನ್ನಡದಲ್ಲಿ ಗಜಲ್ ಗಳನ್ನು ರಚಿಸುತ್ತಿದ್ದಾರೆ .

ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ಇವರ ಮೌನದೊಡಲ ಮಾತು ಗಜಲ್ ಸಂಕಲನದಲ್ಲಿ ಒಟ್ಟು 60 ಗಜಲ್ ಗಳಿದ್ದು ಇವರ ತಖಲ್ಲುಸ್ (ಕಾವ್ಯನಾಮ ) ವನಿತಾ ಎಂದು ಇದ್ದು ಇದು ಒಂದು ವಿಶೇಷ , ಮಹಿಳೆಯರ ಪ್ರತಿನಿಧಿ ಎಂಬ ವಿಶಾಲ ಭಾವವಿದ್ದು ಇಲ್ಲಿ ಮಹಿಳೆಯರ ತಳಮಳಗಳು ಬಿತ್ತರಿಸಿದ್ದಾರೆ .ಇವರ ಗಜಲ್ ಗಳಲ್ಲಿ ಪ್ರೇಮ ,ವಿರಹ, ನಿವೇದನೆ ,ನೋವು ,ಅಂತರಾಳ ಯಾತನೆ ,ಕಾತರಿಕೆ ,ಚಡಪಡಿಕೆ ,ಕಾಯುವಿಕೆಗಳಲ್ಲದೆ ಸಾಮಾಜಿಕ ಚಿಂತನೆಯ ಗಜಲ್ ಗಳು ಇವೆ .ಸಂಕಲನಕ್ಕೆ ಹಿರಿಯ ಸಾಹಿತಿಗಳಾದ ಕಥೆಗಾರರು ನಾಟಕಕಾರರು ಮಕ್ಕಳ ಸಾಹಿತಿಗಳು ,ಗಜಲ್ ಕಾರರಾದ ಶ್ರೀ.ಮಂಡಲಗಿರಿ ಪ್ರಸನ್ನ ಅವರು ಸುಂದರವಾದ ಮೌಲಿಕವಾದ ಮುನ್ನಡೆಯನ್ನು ಬರೆದಿದ್ದಾರೆ .ಹಿರಿಯ ಸಾಹಿತಿಗಳಾದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಲೇಖಕರು ಸಾಹಿತಿಗಳು ಗಜಲ್ ಕಾರರಾದ ಶ್ರೀ ಸಿದ್ದರಾಮ ಹೊನ್ಕಲ್ ಅವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ.

ಅಂಬಮ್ಮ ಪ್ರತಾಪ್ ಸಿಂಗ್ ಇವರ ಮೌನದೊಡಲ ಮಾತು ಗಜಲ್ ಸಂಕಲನದಲ್ಲಿ ಇರುವ 60 ಗಜಲುಗಳಲ್ಲಿ ಬಹು ಪಾಲು ಗಜಲ್ ಗಳು ಗಜಲ್ದ ಮೂಲ ದ್ರವ್ಯವಾದ ಪ್ರೀತಿ, ಪ್ರೇಮ, ಪ್ರಣಯ ,ವಿರಹ ,ಕಳವಳದ ಗಜಲ್ ಗಳೇ ಹೆಚ್ಚಾಗಿವೆ ಜೊತೆಗೆ ಇತರ ಸಾಮಾಜಿಕ ಕಳಕಳಿಯ ಕೆಲವು ಗಜಲ್ ಗಳಿವೆ.

ನಿನ್ನ ಬರುವಿಕೆಯು ಎಲ್ಲೆಡೆ ಪರಿಮಳ ಪಸರಿಸಿದೆ
ಇಳೆಗೆ ಬಿದ್ದ ಮಳೆ ಹನಿಯು ಸೌಗಂಧವ ಸೂಸುತ್ತಲೂ (ಗಜಲ್ ೦೧)

ಪ್ರಿಯತಮೆಗೆ ಪ್ರಿಯಕರನ ಬರುವ ಮುನ್ಸೂಚನೆ ಪ್ರಕೃತಿ ಕೊಡುತ್ತಿದೆ ಎಂದು ಹೇಳುವ ಈ ಗಜಲ್ದ ಮಿಶ್ರದಲ್ಲಿ ನಿನ್ನ ಬರುವಿಕೆಯಿಂದ ಪ್ರಕೃತಿ ಎಲ್ಲೆಡೆ ಅರಳಿ ಸಂಭ್ರಮದಿಂದ ಪರಿಮಳವನ್ನು ಪಸರಿಸುತ್ತದೆ. ಇಳೆಗೆ ಮಳೆ ಬಿದ್ದಾಗ ಹೊರಡುವ ಆ ಮಣ್ಣಿನ ಕಂಪು ನಿನ್ನ ಬರವನ್ನು ಸೂಚಿಸುತ್ತದೆ ,ಎಂದು ಸುಂದರವಾದ ರೂಪಕಗಳಿಂದ ವಿವರಿಸಿದ್ದಾರೆ .

ಮನವು ನೊಂದು ಬೇಯುತ್ತಿದೆ ನಿನ್ನ ಮೌನಕ್ಕೆ ಗೆಳೆಯ
ನೆನಪು ಸತ್ತು ಸಮಾಧಿಯಾಗಿದೆ ನಿನ್ನ ಮೌನಕ್ಕೆ ಗೆಳೆಯ(ಗಜಲ್ ೧೦)

ಮನಮೆಚ್ಚಿದ ಪ್ರಿಯಕರ ಅಥವಾ ನಲ್ಲ ಸಣ್ಣ ವಿಷಯಕ್ಕೆ ಮುನಿದು ಮೌನವಾದರೆ ಮನ ಹೇಗೆ ಚಡಪಡಿಸುತ್ತದೆ ಎಂದು ಈ ಗಜಲ್ ಕಾವ್ಯದಲ್ಲಿ ರೂಪಕಗಳೊಂದಿಗೆ ಚಿತ್ರಿಸಿದ್ದಾರೆ. ನಿನ್ನ ಮೌನದಿಂದ ಮನ ನೊಂದು ಬೇಯುತ್ತಿದೆ , ನಿನ್ನೊಂದಿಗೆ ಕಳೆದ ಆ ಸುಂದರವಾದ ನೆನಪುಗಳು ಸಮಾಧಿಯಾಗಿವೆ ,ತಂಪಾಗಿ ಸೂಸುವ ಸುಳಿಗಾಳಿ ನಿನ್ನ ಮೌನದ ರಭಸಕ್ಕೆ ಬಿರುಗಾಳಿಯಾಗಿ ಬೀಸುತ್ತಿದೆ. ಸಮುದ್ರದ ಅಲೆಗಳು ಬೋರ್ಗರೆಯುತ್ತಿವೆ,ಹೃದಯವು ಮರಣ ಮೃದಂಗವನ್ನು ಬಾರಿಸುತ್ತದೆ .ಎಂದು ರೂಪಕಗಳೊಂದಿಗೆ ಸುಂದರವಾಗಿ ಮನದ ಅಳಲನ್ನು ಚಿತ್ರಿಸಿದ್ದಾರೆ .

ಲೋಕ ಬಂಜೆಯ ಪಟ್ಟ ಕಟ್ಟುತಿಹುದು
ಚಿಂತೆ ಚಿತೆಯಾಗಿ ಮನವ ದಹಿಸುತಿಹುದು (ಗಜಲ್ ೧೬)

ಇದು ಒಂದು ಮಹಿಳಾ ಸಂವೇದನೆ ಗಜಲ್ ಆಗಿದ್ದು ನಮ್ಮ ಜಾನಪದ ಸಾಹಿತ್ಯದ ತ್ರಿಪದಿಯಲ್ಲಿ ಬಂಜೆಯಾದ ಮಹಿಳೆಯರ ನೋವಿನ ಬಗ್ಗೆ ಅನೇಕ ತ್ರಿಪದಿಯಲ್ಲಿ ನಾವು ಕಾಣುತ್ತೇವೆ. ಮಹಿಳೆಯಾಗಿ ಹುಟ್ಟಿದ ಮೇಲೆ ಮದುವೆಯಾಗಬೇಕು, ಮದುವೆಯಾದ ಮೇಲೆ ಮಕ್ಕಳಾಗಬೇಕು ಮಕ್ಕಳಾಗದ ಮಹಿಳೆ ಬಂಜೆಯೆಂದು ಸಮಾಜದ ನಿಂದನೆಗೆ ಗುರಿಯಾಗಿ ಅಲ್ಲಿ ಆಡುವ ಮಾತುಗಳಿಗೆ ಅವಳು ಬಹಳ ನೊಂದುಕೊಳ್ಳುತ್ತಾಳೆ. ತಾನು ಬಂಜೆ ಎಂಬ ನಿಂದನೆಯು ಅವಳನ್ನು ನಿತ್ಯ ದಹಿಸುತ್ತದೆ . ಗಂಡನೆ ಮಗುವೆಂದು ಭಾವಿಸಿ, ನೆಮ್ಮದಿಯಾಗಿ ಬದುಕಬೇಕೆಂಬ ಮಹಿಳೆಗೆ ಸಮಾಜ ಹೆಜ್ಜೆ ಹೆಜ್ಜೆಗೆ ನಿಂದಿಸಿ ಅವಳ ಬಾಳನ್ನು ಗೋಳಾಗಿಸುತ್ತದೆ ಎಂಬ ವಿಚಾರವನ್ನು ಕವಿಯತ್ರಿಯು ಸುಂದರವಾಗಿ ನಿರೂಪಿಸಿದ್ದಾರೆ.

ತುತ್ತಿನ ಚೀಲಕ್ಕಾಗಿ ನಡೆದಿದೆ ಹೋರಾಟ ಈ ಭುವಿಯಲಿ
ಉದರ ನಿಮಿತ್ತಂ ಬಹುಕೃತ ವೇಷಂ ಈ ಬಾಳಿನಲಿ(ಗಜಲ್ ೩೧
)

ಇದು ಒಂದು ಸಾಮಾಜಿಕ ಕಳಕಳಿಯ ಗಜಲ್ ಆಗಿದೆ ,ಮಾನವನಾಗಿ ಹುಟ್ಟಿಬಂದ ಮೇಲೆ ಹೊಟ್ಟೆ ತುಂಬಿಸಿಕೊಳ್ಳಲು ನಿರಂತರ ಹೋರಾಟ ನಡೆಸಬೇಕಾಗಿದೆ. ಈ ಭೂಮಿಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಮಾನವನು ನಾನಾತರಹದ ವೇಷಗಳನ್ನು ಧರಿಸಬೇಕಾಗುತ್ತದೆ ಬಾಳಿನಲ್ಲಿ. ಇದು ಬಡವರ ಗೋಳಿನ ಕತೆಯಾಗಿದ್ದು ,ಬದುಕಿನ ಬಗ್ಗೆ ರೂಪಕಗಳೊಂದಿಗೆ ಗಜಲನ್ನು ಸುಂದರವಾಗಿ ಕಟ್ಟಿದ್ದಾರೆ.

ಕೇಸರಿ ಝಂಡಾ ಹಿಡಿದವರ ರಕ್ತವೂ ಕೆಂಪು
ಹಸಿರು ಝಂಡಾ ಹಿಡಿದವರ ರಕ್ತವು ಕೆಂಪು ( ಗಜಲ್ ೪೩)

ಇಂದು ಸಮಾಜದಲ್ಲಿ ನಿತ್ಯ ಕಾಣುವ ಧರ್ಮ ಜಾತಿ ಪಂಥಗಳ ಒಳ ಜಗಳಗಳ ಬಗ್ಗೆ ಬರೆದ ಸಾಮಾಜಿಕ ಗಜಲ್, ಮಾನವರೆಲ್ಲರೂ ಒಂದೇ ಎಲ್ಲರ ಮೈಯಲ್ಲಿ ಹರಿವ ರಕ್ತವು ಕೆಂಪೇ ,ಧರ್ಮಗಳು ನಾವು ಮಾಡಿಕೊಂಡಿರುವೆವು, ಧರ್ಮಗಳ ಸಂಕೇತವಾಗಿ ರಂಗಿನ ಬಾವುಟಗಳನ್ನು ನಿರ್ಮಿಸಿರುವೆವು, ಈ ಭೇದ ಭಾವ ಎಂದು ನಿಲ್ಲುವುದು ,ವಿಶ್ವಮಾನವ ಜನಾಂಗದಲ್ಲಿ ಈ ಜಗಳದಿಂದ ದೇಶ ದೇಶಗಳಲ್ಲಿ ವೈರತ್ವ ಉಂಟಾಗಿದೆ .ಮಾನವ ಒಂದು ಎನ್ನುವ ಭಾವನೆ ಎಂದು ಬರುವದೋ ಎಂಬ ಕಳವಳಯಿಂದ ಈ ಗಜಲ್ ರಚನೆಯಾಗಿದೆ .

ಅಂಬಮ್ಮ ಪ್ರತಾಪ್ ಸಿಂಗ್ ಅವರ ಮೌನದೂಡಲ ಮಾತು ಸಂಕಲನದ ಗಜಲ್ ಗಳಲ್ಲಿ ಪ್ರೇಮ ನಿವೇದನೆ ಇದೆ. ಹೃದಯಾಂತರಾಳದ ನೋವಿಗೆ ಚಡಪಡಿಕೆ ಇದೆ . ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ.ಆದರೆ ಕೆಲವು ಕಡೆ ವಾಚ್ಯವೆನಿಸುತ್ತವೆ,ಕೆಲವು ಕಡೆ ಭಾವಗೀತೆ ಅನಿಸುತ್ತವೆ. ಇದು ಅವರ ಪ್ರಥಮ ಗಜಲ್ ಸಂಕಲನವಾಗಿದ್ದ ಕಾರಣ ಇದು ಸಹಜ.ಇವರು ಉತ್ತಮ ಗಜಲ್ ರಚನಾಕಾರರಾಗುವರೆಂಬ ಭರವಸೆ ಮೂಡುತ್ತದೆ. ಇವರಿಂದ ಇನ್ನೂ ಉತ್ತಮವಾದ ಗಜಲ್ ಗಳು ರಚನೆಯಾಗಲಿ ಎಂದು ಶುಭಹಾರೈಸುತ್ತಾ ನನ್ನ ಬರಕ್ಕೆ ವಿರಾಮ ನೀಡುತ್ತೇನೆ.


ಪ್ರಭಾವತಿ ಎಸ್ ದೇಸಾಯಿ

Leave a Reply

Back To Top