ದೇವರಾಜ್ ಹುಣಸಿಕಟ್ಟಿ ಕವಿತೆ/ಸುಡುವ ಬೆಳದಿಂಗಳು

ಕಾವ್ಯ ಸಂಗಾತಿ

ಸುಡುವ ಬೆಳದಿಂಗಳು

ದೇವರಾಜ್ ಹುಣಸಿಕಟ್ಟಿ

ಚಂದ್ರನಿಗೆ ಮುಟ್ಟಾಗಿದೆ
ಈಗೀಗ…
ಬೆಳದಿಂಗಳೆಲ್ಲ ಕೆಂಡವಾಗಿದೆ….

ಮನುಷ್ಯರು
ದೇವರಾಗುತ್ತಿರುವ ಹೊತ್ತಿಗೆ…!
ರೇಪಿಸ್ಟ್ ಗಳು ಸನ್ನಡತೆಯಲಿ
ಬಿಡುಗಡೆ ಗೊಂಡರೆ….!
ಹದ್ದು ಈಗೀಗ ಪಾರಿವಾಳವೆಂದು ಕರೆಸಿಕೊಂಡರೆ….!
ಕತ್ತು ಕೊಯ್ದವರಿಲ್ಲಿ ಉಸಿರು ನೀಡುವ ಮಾತನಾಡಿದರೆ….!
ಸನ್ನಡತೆಯ ಅರ್ಥಕ್ಕೆ ಹೊಡೆದು ಬಿಡಿ
ಮೆತ್ತಗೆ…!
ಕೊನೆ ಮೊಳೆ ತೆಗೆದುಕೊಂಡು ಸುತ್ತಿಗೆ…..!

ಚಂದ್ರನಿಗೆ ಮುಟ್ಟಾಗಿದೆ
ಈಗೀಗ
ಬೆಳದಿಂಗಳೆಲ್ಲ ಸುಡುವ ಕಿಚ್ಚಾಗಿದೆ…

ಹೊಲದ ಬದು
ಕಾಣೆಯಾದ ಕೇಸೊಂದು ಬಂದರೆ….!
ನೆಲದ ಪಹಣಿ ಕದ್ದ ಆರೋಪ ಹೊರಿಸಿದರಂತೆ….!
ಹಕ್ಕಿಯ ಗೂಡಿಗೆ ಹಾವಿನದ್ದೇ
ಪಹರೆಯಂತೆ….!!
ತುರ್ತಾಗಿ ಶೇರು ತುಂಬಿದ
ಧಾನ್ಯ…
ಕಿಂಟಲೆಂದು ಮಾರುವುದಿದೆಯಂತೆ…!!
ಸುಳ್ಳಿನ ವ್ಯಾಪಾರಕ್ಕೆ ಐವತ್ತಾರು
ಇಂಚಿನ ಎದೆಯಿದ್ದರೆ ಸಾಕಂತೆ….!

ಚಂದ್ರನಿಗೆ ಮುಟ್ಟಾಗಿದೆ
ಈಗೀಗ
ಬೆಳದಿಂಗಳೆಲ್ಲ ನಂಜಾಗಿದೆ

ನಂಜಿನ ವ್ಯಾಪಾರ
ಹೇಗೊ ದೇಶದ ಮೇಲಿನ..ಹಲ್ಲೆ..!!
ಧರ್ಮದ ಮೇಲಿನ ದಾಳಿ…!
ಹೆಚ್ಚೆoದರೆ…
ಇನ್ನೊಂದು ಪುಲ್ವಾಮ…!!
ಇನ್ನೂ ಜೀವಂತವಿದೆ…
ಬಲ್ಲರಲ್ಲ…
ಜನರ ನೆನಪಿಗೂ ಸಾವಿದೆ…!!

ಚಂದ್ರನಿಗೆ ಮುಟ್ಟಾಗಿದೆ
ಈಗೀಗ
ಬೆಳದಿಂಗಳೆಲ್ಲ ಸುಡುವ ಪಂಜಾಗಿದೆ…

ನಂಜುಂಡವನ ದೇಶದಲಿ
ಮೈಯಲ್ಲಾ ಕೇಸರಿ…
ಉಳಿದ ಬಣ್ಣ ನಿಷೇಧಿಸಲಾಗಿದೆ…!
ಸುಡುವ ಬೆಳದಿಂಗಳು ಬೆತ್ತಲಾಗಿದೆ….!!

——————

2 thoughts on “ದೇವರಾಜ್ ಹುಣಸಿಕಟ್ಟಿ ಕವಿತೆ/ಸುಡುವ ಬೆಳದಿಂಗಳು

  1. ಅದ್ಭುತ ಸರ್.ಜೋಡಣೆ ತುಂಬಾ ಚನ್ನಾಗಿದೆ ಓದಿನ ಸವಿಯ ನುಣಿಸಿದ ಸಂಗಾತಿಗೆ ಧನ್ಯವದಗಳು

Leave a Reply

Back To Top