ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಮಹಾಂತೇಶ ಗೋನಾಲರ ಗಜಲ್ ಗಳಲ್ಲಿ

ಸಾಮಾಜಿಕ ಚಿಂತನೆ

ಗಜಲ್ ಪ್ರೀತಿಸುವ ಮನಸುಗಳಿಗೆ ಈ ಗಜಲ್ ಪಾಗಲ್ ನ ನಮಸ್ಕಾರಗಳು..

‘ಗಜಲ್’ ಎನ್ನುವ ಶಬ್ದ ಕಿವಿಗೆ ಬೀಳುತ್ತಲೇ ಹೃದಯದ ಬಡಿತ ತೀವ್ರವಾಗುತ್ತದೆ. ಅಂಥಹ ಚುಂಬಕ ಶಕ್ತಿ ಗಜಲ್ ಗೆ ಇದೆ. ಅಂತೆಯೇ ಪ್ರತಿ ಗುರುವಾರ ಒಬ್ಬೊಬ್ಬ ಶಾಯರ್ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ವ್ಯಕ್ತಿ ಪರಿಚಯದೊಂದಿಗೆ ಗಜಲ್ ಲೋಕದಲ್ಲಿ ವಿಹರಿಸುತಿದ್ದರೆ ನನಗೆ ಈ ಪರಪಂಚದ ಅರಿವೆ ಇರುವುದಿಲ್ಲ.‌ ಬನ್ನಿ, ಗಜಲ್ ಪ್ರೇಮಿಗಳೇ; ನಿಮಗೂ ಇದೆ ಅನುಭವ ಆಗುತ್ತದೆ ಎಂದು ಪ್ರಾಮಿಸ್ ಮಾಡುವೆ..!

“ಎಲ್ಲೇ ಹೋದರೂ ಖುಷಿಯಾಗಿರು ಎಂದು ಪತ್ರದಲ್ಲಿ ಅಮ್ಮ ಬರೆದಿದ್ದಾಳೆ
ನನ್ನನ್ನು ನೆನೆಯದೆ ಇದ್ದರೂ ಪರವಾಗಿಲ್ಲ ಮನೆಯನ್ನು ಮರೆಯಬೇಡ”
-ಅಜಮಲ್ ಅಜಮಲಿ

    ಜೀವನವು ಉತ್ತರವಿಲ್ಲದ ಪ್ರಶ್ನೆಗಳಿಂದ ತುಂಬಿದೆ. ಆ ಉತ್ತರಗಳನ್ನು ಹುಡುಕುವ ಧೈರ್ಯವು ಜೀವನಕ್ಕೆ ಅರ್ಥವನ್ನು ನೀಡುತ್ತಲೇ ಇರುತ್ತದೆ. ಈ ದಿಸೆಯಲ್ಲಿ ಪ್ರತಿಯೊಂದು ಸುಂದರ ವಸ್ತುಗಳ ಹಿಂದೆಯೂ ಒಂದೊಂದು ರೀತಿಯ ನೋವು ಇರುತ್ತದೆ. ನೋವು ಯಾವಾಗಲೂ ಭಾವನೆ ಮತ್ತು ಅರ್ಥದಿಂದ ಕೂಡಿರುತ್ತದೆ. ನಾವು ಅನುಭವಿಸುವ ನೋವುಗಳು ಸಂದೇಶವಾಹಕಗಳಾಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ. ಸಮಯ ಯಾವತ್ತೂ ದೀರ್ಘಕಾಲದ ನೋವಿಗೆ ಪರಿಹಾರವಲ್ಲ. ಆದರೆ ಖಂಡಿತವಾಗಿಯೂ ಸುಧಾರಣೆಗೆ ನಿರ್ಣಾಯಕವಾಗಿದೆ. ಇದು ಬದಲಾಗಲು, ಚೇತರಿಸಿಕೊಳ್ಳಲು ಮತ್ತು ಪ್ರಗತಿ ಸಾಧಿಸಲು ಸಾಥ್ ನೀಡುತ್ತದೆ. ಗಾಯಗಳನ್ನು ಬುದ್ಧಿವಂತಿಕೆಯಾಗಿ ಪರಿವರ್ತಿಸಲು ನೆರವಾಗುತ್ತದೆ. ನಾವು ಸೋತಾಗ ಸೋಲುವುದಿಲ್ಲ, ಬದಲಿಗೆ ಆಟವನ್ನು ತೊರೆದಾಗ ಸೋಲುತ್ತೇವೆ. ಪ್ರತಿಯೊಬ್ಬರಲ್ಲೂ ದೌರ್ಬಲ್ಯಗಳು ಇರುತ್ತವೆಯಾದರೂ ಅವುಗಳನ್ನು ಮೀರಬೇಕು. ದುರಂತವನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳಬೇಕು.

ಯಾವುದೇ ರೀತಿಯ ತೊಂದರೆಗಳು, ಎಷ್ಟೇ ನೋವಿನ ಅನುಭವವಾಗಿದ್ದರೂ, ನಾವು ನಮ್ಮ ಭರವಸೆಯನ್ನು ಕಳೆದುಕೊಂಡರೆ, ಅದು ನಮ್ಮ ನಿಜವಾದ ದುರಂತವಾಗುತ್ತದೆ. ಅಮೇರಿಕನ್ ಲೇಖಕ, ಕವಿ ಮತ್ತು ತತ್ವಜ್ಞಾನಿಯಾದ ರಾಲ್ಫ್ ವಾಲ್ಡೋ ಎಮರ್ಸನ್ ರವರ “ನಮ್ಮ ಬಲವು ನಮ್ಮ ದೌರ್ಬಲ್ಯಗಳಿಂದ ಬೆಳೆಯುತ್ತದೆ” ಎಂಬ ಈ ಮಾತು ಇದನ್ನೇ ಪುಷ್ಟೀಕರಿಸುತ್ತದೆ. ಈ ನೆಲೆಯಲ್ಲಿ ನಗು ನಿಜವಾಗಿಯೂ ಔಷಧವಾಗಿದೆ. ಇದು ಎಲ್ಲವನ್ನೂ ಸರಿಪಡಿಸುವುದಿಲ್ಲವಾದರೂ, ಸ್ವಲ್ಪ ವಿರಾಮವನ್ನು ಕಂಡುಕೊಳ್ಳಲು ಪರಿಣಾಮಕಾರಿಯಾದ ಮಾರ್ಗವಾಗಿದ್ದು ಬದುಕನ್ನು ಅನೇಕ ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸುತ್ತದೆ. ಯಾವುದೇ ನೋವನ್ನು ಅರ್ಥವಿರುವವರೆಗೂ ಸಹಿಸಬಹುದು ಎಂಬುದನ್ನು ಮನವರಿಕೆ ಮಾಡಿಸುತ್ತದೆ. ಅಂತೆಯೇ “ಒಂದು ಪದವು
ಜೀವನದ ಎಲ್ಲಾ ಭಾರ ಮತ್ತು ನೋವಿನಿಂದ ನಮ್ಮನ್ನು ಮುಕ್ತಗೊಳಿಸುತ್ತದೆ,
ಆ ಪದವು ಪ್ರೀತಿ” ಎಂಬ ಗ್ರೀಕ್ ನಾಟಕಕಾರ ಸೋಫೋಕ್ಲಿಸ್ ರವರ ಮಾತು ಸಾರ್ವತ್ರಿಕ ಸತ್ಯ ಅನಿಸುತ್ತದೆ. ಈ ಪ್ರೀತಿಯನ್ನು ಸಾರುವ ಅಕ್ಷಯ ಪಾತ್ರೆಯೇ ಸಾರಸ್ವತ ಲೋಕ. ಇಂಥಹ ಲೋಕದಲ್ಲಿ ‘ನೋವಿನ ಚಿಕಿತ್ಸೆ ನೋವಿನಲ್ಲಿದೆ’ ಎಂಬ ರೂಮಿಯವರ
ಸಂದೇಶವನ್ನು ಸಾರುತ್ತಿರುವ ಗಜಲ್ ಕಾವ್ಯ ಪ್ರಕಾರ ಇಂದು ಕರುನಾಡಿನಾದ್ಯಂತ ಪಸರಿಸಿದೆ. ಬಹಳಷ್ಟು ಬರಹಗಾರರು ಗಜಲ್ ಮಧುಬಾಲೆಯ ಸೆಳೆತಕ್ಕೆ ಒಳಗಾಗಿ ನಿರಂತರವಾಗಿ ಶಾಯರಿ ದುನಿಯಾದಲ್ಲಿ ಮಿನುಗುತಿದ್ದಾರೆ. ಅಂಥವರಲ್ಲಿ ಶ್ರೀ ಮಹಾಂತೇಶ ಗೋನಾಲ ಅವರೂ ಒಬ್ಬರು.

    ಮಹಾಂತೇಶ ಗೋನಾಲ ಅವರು ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲದವರು. ಇವರು ೧೯೯೧ ರ ಜುಲೈ ೩೧ ರಂದು ಜನಿಸಿದರು. ಪ್ರಸ್ತುತವಾಗಿ ಇವರು ಸುರಪುರ ತಾಲೂಕಿನ ಆಲ್ದಾಳದ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕರಾದರೂ ಸಾಹಿತ್ಯದೆಡೆಗೆ ವಿಶೇಷ ಒಲವು ಹೊಂದಿರುವ ಇವರು ತಮ್ಮ ಚೊಚ್ಚಲ ಕೃತಿ 'ದಣಿದ ಮೌನ' ಎಂಬ ಗಜಲ್ ಸಂಕಲನ ಕರ್ನಾಟಕ ಸರಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ನೀಡುವ ೨೦೨೦ನೇ ಸಾಲಿನ ಪ್ರೋತ್ಸಾಹ ಧನದೊಂದಿಗೆ ಪ್ರಕಟಿಸಿದ್ದಾರೆ. ಇದರೊಂದಿಗೆ 'ಚಾಡಮಾರಿ ಶಹರಗಳು' ಎಂಬ ಗಜಲ್ ಸಂಕಲನವನ್ನೂ ಸಹ ಪ್ರಕಟಿಸಿದ್ದಾರೆ. ಶ್ರೀಯುತರು ಗಜಲ್ ನೊಂದಿಗೆ ಕಾವ್ಯ, ಲೇಖನ, ವಿಮರ್ಶೆ.. ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ಇವರ ಹಲವು ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಗಜಲ್ ಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಗೋನಾಲ ಅವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಸಂಭ್ರಮದ ಹಿನ್ನೆಲೆಯಲ್ಲಿ ನೀಡಿರುವ 'ಗಜಲ್ ಕಾವ್ಯ ಪ್ರಶಸ್ತಿ' ಪ್ರಮುಖವಾಗಿದೆ. 

   "ನೋವು ಮುಗಿದಾಗ ಅದರ ನೆನಪು ಆಗಾಗ ಆನಂದವಾಗುತ್ತದೆ" ಎಂಬ ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ್ತಿ ಜೇನ್ ಆಸ್ಟೆನ್ ರವರ ಮಾತು ಗಜಲ್ ನ ಸ್ಥಾಯಿ ಭಾವವಾಗಿದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ನೋವನ್ನು ಮರೆಯುವುದು ತುಂಬಾ ಕಷ್ಟ. ಅದರೊಂದಿಗೆ ಸಿಹಿಯನ್ನು ನೆನಪಿಟ್ಟುಕೊಳ್ಳುವುದು ಇನ್ನೂ ಕಷ್ಟ ಎಂಬುದನ್ನು ಗಜಲ್ ನ ಅಶಅರ್ ಪ್ರತಿಧ್ವನಿಸುತ್ತ ಬಂದಿವೆ. ಈ ಮಾರ್ಗದಲ್ಲಿ ಗಜಲ್ ನ ರೂಪವನ್ನು ನೋಡುತ್ತಾ ಹೋದರೆ ನೋವಿಗೆ ಮಿಡಿಯುವ, ಕಂಬನಿಯನ್ನು ಒರೆಸುವ ಕರುಣಾಮಯಿಯಾಗಿ ಕಂಗೊಳಿಸುತ್ತದೆ. ಪ್ರೀತಿ, ಪ್ರೇಮ, ಪ್ರಣಯ, ವಿರಹಗಳ ಜೊತೆ ಜೊತೆಗೆ ಸಾಮಾಜಿಕ ವ್ಯವಸ್ಥೆಯ ನೀಲನಕ್ಷೆ, ವರ್ತಮಾನದ ತಲ್ಲಣಗಳು, ಕಲುಷಿತಗೊಂಡಿರುವ ಮನುಷ್ಯನ ನಾಡಿ ಮಿಡಿತ, ದುಡಿಯುವವರ, ಸೋತವರ, ನೊಂದವರ ಧ್ವನಿ, ಧಾರ್ಮಿಕ ವ್ಯವಸ್ಥೆಯ ಅವಾಂತರಗಳ ಕಹಿಸತ್ಯ, ವಿಷಾದ, ಉತ್ಸಾಹ ಮತ್ತು ವಿವೇಕಗಳು ಗಜಲ್ ಗೋ ಗೋನಾಲ ರವರ ಗಜಲ್ ಗಳಲ್ಲಿ ಮುಪ್ಪರಿಗೊಂಡಿವೆ. 

    'ಕೊಡಲಿಯ ಕಾವು ಕುಲಕ್ಕೆ ಮೃತ್ಯು' ಎಂಬ ಗಾದೆ ಮನುಕುಲದ ಅಸ್ಮಿತೆಯ ಸಂಕೇತ. ನೀರಿನಿಂದ ಉದಯಿಸುವ ಉಪ್ಪು ನೀರಿನಿಂದಲೆ ತನ್ನ ರೂಪವನ್ನು ಕಳೆದುಕೊಳ್ಳುತ್ತದೆ. ಈ ನೆಲೆಯಲ್ಲಿ ಇಡೀ ಜೀವಸಂಕುಲದಲ್ಲಿ ತನ್ನ ಬೌದ್ಧಿಕ ಶಕ್ತಿಯಿಂದ ಪ್ರತ್ಯೇಕವಾಗಿ ನಿಲ್ಲುವ ಮನುಷ್ಯ ಅದೇ ಬೌದ್ಧಿಕ ಕ್ರಿಯೆಯಿಂದ ಸಮಾಜದ, ಪ್ರಕೃತಿಯ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಾನೆ, ಮಾಡುತಿದ್ದಾನೆಯೂ ಕೂಡ. ಇಲ್ಲಿ ಗಜಲ್ ಗೋ ಮಹಾಂತೇಶ ಗೋನಾಲ ರವರು ಮನುಷ್ಯನ ಎಡಬಿಡಂಗಿತನವನ್ನು ತುಂಬಾ ಸರಳವಾಗಿ ದಾಖಲಿಸಿದ್ದಾರೆ. ಅದಕ್ಕೆ ಈ ಕೆಳಗಿನ ಷೇರ್ ಅನ್ನು ಉಲ್ಲೇಖಿಸಬಹುದು.

ಕಟ್ಟಿಗೆ ಕಡಿಯುವ ಕೊಡಲಿಯ ಹಿಡಿಕೆ ಕಟ್ಟಿಗೆಯದ್ದೇ ಅಲ್ಲವೆ ‘ಮಹಾಂತ’
ತನ್ನ ಮನೆಗೆ ತಾನೇ ಬೆಂಕಿ ಹಚ್ಚಲು ಕಡ್ಡಿಗೀರಿ ಕೊಡುವವರೆಗೂ ಹೆಚ್ಚು ಇಲ್ಲಿ”

ಮೋಸ, ವಂಚನೆ, ಕಪಟ… ಎನ್ನುವ ಚೂರಿಗಳನ್ನು ಇರಿಯುವ ಕೈಗಳು ಅನ್ಯ ಗ್ರಹದಿಂದ ಬಂದಿಳಿಯುವುದಿಲ್ಲ, ನಮ್ಮೊಂದಿಗೆ ಸದಾ ಹೆಜ್ಜೆ ಹಾಕುತ್ತಿರುತ್ತವೆ. ಇಂಥಹ ವಿಕೃತ ಮನಸುಗಳು ನಮ್ಮ ಸುತ್ತ ಮುತ್ತಲು ಇರುವುದನ್ನು ಅಲ್ಲಗಳೆಯುವಂತಿಲ್ಲ. ಇದನ್ನು ವಿಷಾದಿಸುತ್ತ ಸುಖನವರ್ ಗೋನಾಲ ರವರು ಮನುಷ್ಯನ ಬೌದ್ಧಿಕ ಅಲೆಯ ಏರಿಳಿತಗಳನ್ನು ತಮ್ಮ ಷೇರ್ ನಲ್ಲಿ ವ್ಯಕ್ತಪಡಿಸಿದ್ದಾರೆ.

ಈ ಪ್ರಭುತ್ವವೇ ಹೀಗೆ ಹಾರುವ ಹಕ್ಕಿಯನ್ನೆಂದೂ ಇದು ಉಳಿಸಿಲ್ಲ
ಈ ಪ್ರಭುತ್ವವೇ ಹೀಗೆ ಹಾಡುವ ಕೊರಳನ್ನೆಂದೂ ಇದು ಉಳಿಸಿಲ್ಲ”

ಈ ಮೇಲಿನ ಷೇರ್ ನಲ್ಲಿಯ ‘ಇದು ಉಳಿಸಿಲ್ಲ’ ಎಂಬ ರದೀಫ್ ನಮ್ಮ ‘ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ಅಣಕಿಸುವಂತಿದೆ. ಜೊತೆಗೆ ಪ್ರಜಾಪ್ರಭುತ್ವ ಆಡಳಿತ ವಿಧಾನದ ವಿವಿಧ ಮಗ್ಗುಲಗಳನ್ನು ಸಾಕ್ಷಿಕರಿಸುತ್ತಿದೆ. ಇಲ್ಲಿಯ ‘ಹಕ್ಕಿ’ ಮತ್ತು ‘ಕೊರಳು’ ಎಂಬ ಶಬ್ಧಗಳು ರಾಜಕೀಯ ವ್ಯವಸ್ಥೆಯ ಕರಾಳತೆಯ ದ್ಯೋತಕವಾಗಿದೆ. ಇದನ್ನು ಓದುತ್ತಿದ್ದರೆ ಸಹೃದಯ ಓದುಗರ ಸ್ಮೃತಿ ಪಟಲದ ಮೇಲೆ ರಕ್ತಸಿಕ್ತ ಕಲೆಗಳು ಮೂಡುವುದರಲ್ಲಿ ಸಂದೇಹವಿಲ್ಲ.

    'ಪ್ರೀತಿ' ಎನ್ನುವುದು ನಾವು ಪ್ರೀತಿಸುವ ವ್ಯಕ್ತಿಯ ಸಂತೋಷ ನಮ್ಮ ಸ್ವಂತಕ್ಕೆ ಅತ್ಯಗತ್ಯವಾಗಿರುವ ಸ್ಥಿತಿಯಾಗಿದೆ. ಆ ಸಂತೋಷವೇ ನಮ್ಮನ್ನು ಮುನ್ನಡೆಸುತ್ತದೆ. ಕಾರಣ, ಈ ಪ್ರೀತಿಯು ಎರಡು ದೇಹಗಳಲ್ಲಿರುವ ಒಂದೇ ಆತ್ಮವಾಗಿದೆ. ಇಂಥಹ ಪ್ರೀತಿಯ ತುಡಿತಗಳೊಂದಿಗೆ ಉಸಿರಾಡುವ ಗಜಲ್ ಜನ್ನತ್ ಶಾಯರ್ ಶ್ರೀ ಮಹಾಂತೇಶ ಗೋನಾಲ ಅವರಿಂದ ಮತ್ತಷ್ಟು ಮೊಗೆದಷ್ಟೂ ಜನಸಾಮಾನ್ಯರಿಗೆ ಹತ್ತಿರವಾಗಲಿ ಎಂದು ಶುಭ ಹಾರೈಸುತ್ತೇನೆ. 

ಹೃದಯ ವಿನಾಶವಾಗುವುದರ ಅರ್ಥವೇನಿದೆ
ಈ ನಗರವನ್ನು ನೂರು ಬಾರಿ ಲೂಟಿ ಮಾಡಲಾಗಿದೆ”
-ಮೀರ್ ತಕೀ ಮೀರ್

ಮನುಷ್ಯನ ಮನಸು ಹಲವು ಏರಿಳಿತಗಳ ಕಡಲು. ಶಾಂತಿ, ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ನ ಪಾತ್ರ ಅನನ್ಯ. ಇಂಥಹ ಗಜಲ್ ನಾಕದಲ್ಲಿ ಅಲೆದಾಡುತ್ತಿರಬೇಕಾದರೆ ದಿನದ ೨೪ ಗಂಟೆಗಳೂ ಕಡಿಮೆ ಅನಿಸುತ್ತವೆ. ಒಲ್ಲದ ಮನಸ್ಸಿನಿಂದಲೇ ಕಾಲದ ಮುಂದೆ ಮಂಡಿಯೂರಿರುವೆ.. ಅನಿವಾರ್ಯವಾಗಿ ಇಂದು ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮುಂದಿನ ಗುರುವಾರ‌ ಮತ್ತೇ ಬರುವೆ..ಹೋಗಿ ಬರಲೆ….!!


-ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top