ಗಜಲ್ ಜುಗಲ್ ಬಂದಿ

ಕಾವ್ಯ ಸಂಗಾತಿ

ನಯನ. ಜಿ. ಎಸ್.

ವಿಜಯಪ್ರಕಾಶ್ ಸುಳ್ಯ.

ಬಹು ಕಾಫಿಯಾ ಗಜಲ್


ಸುರಿಯುತಿಹ ಬಾಷ್ಪಕೆ ಮೇರೆಗಳು ಎಟಕುತ್ತಿಲ್ಲ ಅಸುವಿಟ್ಟರೇನು ಸುಖವಿದೆ
ಮಿಡಿಯುತಿಹ ತುಮುಲಕೆ ತಾಳಗಳು ಹೊಂದುತ್ತಿಲ್ಲ ಪದಕಟ್ಟಲೇನು ಹಿತವಿದೆ

ನಗುವಿನ ಮಿಂಚು ಮಿನು ಮಿನುಗಿ ಅಂಚನರಸುತ ಸಾಗುತಿದೆ ತುಸು ಮೆಲ್ಲನೇ
ಮೆರೆಯುತಿಹ ಜಾಡ್ಯಭಾವಕೆ ಸೋಲುಗಳು ದಕ್ಕುತ್ತಿಲ್ಲ ತಾಳ್ಮೆಯಲೇನು ಬಿಸುಪಿದೆ

ಪದಮಂಚದಿ ನಿತ್ರಾಣಗೊಂಡಿವೆ ಬಡ ಭಾವಗಳು ಬಿಕ್ಕಳಿಸುತಲಿ ಯುಗ್ಮತೆಯನು
ಕನವರಿಸುತಿಹ ಸ್ವಪ್ನಕೆ ಕವಲುಗಳು ಬಿರಿಯುತ್ತಿಲ್ಲ ಕೌಮುದಿಯಲೇನು ರಸವಿದೆ

ಬಾಳ ಬಲುಹು ಚಿತ್ತದಲಿ ಶೂನ್ಯವಾಗುತಿದೆ ಉಣುತಲಿ ಭೀತಿತುತ್ತನು ಮುತ್ತಾಗಿ
ಛೇಡಿಸುತಿಹ ತಂತ್ರವ್ಯೂಹಕೆ ನೇಪಥ್ಯಗಳು ತೊಡರುತ್ತಿಲ್ಲ ಗಮ್ಯದಲೇನು ಸಾರವಿದೆ

ಪರಿಭ್ರಮಣದ ಪರಿಧಿಯಲಷ್ಟೇ ಸಾರ್ಥಕ್ಯ ಕಾಣುವ ‘ನಯನ’ಗಳಿಗೇನು ಸುಖವಿದೆ
ಹಿಗ್ಗುತಿಹ ಬಾಳಭಾಗ್ಯಕೆ ಗೆಲುವುಗಳು ನಿಮಿರುತ್ತಿಲ್ಲ ಉತ್ಸಾಹದಲೇನು ತೃಪ್ತಿಯಿದೆ.

  • ನಯನ. ಜಿ. ಎಸ್

ಸ್ಫುರಿಸುತ್ತಿಹ ಅನುಭಾವಕ್ಕೆ ಸಂಶ್ರಯಗಳು ನಿಲುಕುತ್ತಿಲ್ಲ ಅಳುಪಿಟ್ಟರೇನು ಫಲವಿದೆ
ತಿತಿಕ್ಷೆಯಿಲ್ಲದಿಹ ಹೃದಯಕೆ ಮನಸುಗಳು ಬೆಸೆಯುತ್ತಿಲ್ಲ ಒಲವಿಟ್ಟರೇನು ಲಾಭವಿದೆ

ನಲಿವನ್ನು ಕಬಳಿಸಿದ ಬಾಳ ಪಯಣದಲ್ಲಿ ಕಾಣುತ್ತಿದೆ ಖುಷಿಯು ಮರೀಚಿಕೆಯಾಗಿ
ಅಡರುತ್ತಿಹ ಚಿತ್ತಕ್ಲೇಶಕೆ ತಡಪುಗಳು ಸಮನಿಸುತ್ತಿಲ್ಲ ಯೋಗವಿದ್ದರೇನು ಗರುವವಿದೆ

ಬಂಧಗಳ ಶರಪಂಜರದಿ ನಲುಗಿದೆ ತಪ್ತ ಮನ ಅಸುವನರ್ಪಿಸಿದರೂ ಅತೃಪ್ತವಾಗಿ
ಹಸನಲ್ಲದಿಹ ಕಷ್ಟಾತ್ಮಕೆ ಕನಸುಗಳು ಕೃಪೆದೋರುತ್ತಿಲ್ಲ ಸಹಸವಿದ್ದರೇನು ಸಾಫಲ್ಯವಿದೆ

ಕಲ್ಪಮೇಘದ ಮರೆಯಲ್ಲಿ ಹುಡುಕುತ ಬಳಲಿರುವೆನು ಭರವಸೆಗಳ ವಿದ್ಯೋತವನ್ನು
ಸದಯವಿಲ್ಲದಿಹ ನೇತ್ರಕೆ ಅನುಪತ್ಯಗಳು ತೋರುತ್ತಿಲ್ಲ ಸನಿಹವಿದ್ದರೇನು ಪದುಳವಿದೆ

ಕಂಗಳಲಿ ಕವಿದ ಕತ್ತಲೆಯಿಂದೆಡರುತ್ತಿದೆ ಕಾಲ್ಗಳು ಕ್ಷೀಣಿಸುತ್ತಿದೆ ವಿಜಯದ ಅಭಿಧ್ಯೆ
ಧೃತಿಯಿಲ್ಲದಿಹ ಚಿದ್ರೂಪಕೆ ನಲ್ನುಡಿಗಳು ಪಥ್ಯವಾಗುತ್ತಿಲ್ಲ ವಪುವಿದ್ದರೇನು ಚೆಲುವಿದೆ.

  • ವಿಜಯಪ್ರಕಾಶ್ ಸುಳ್ಯ.

Leave a Reply

Back To Top