ಕಾವ್ಯ ಸಂಗಾತಿ
ಮೊಹರು ಮೂಡುವ ಮುನ್ನ..
ಕಲಾ ಭಾಗ್ವತ್
ಎತ್ತೆತ್ತಲೋ ಸಾಗುವ ಆ ಹೆಜ್ಜೆಗೆ
ಗೊತ್ತಿದ್ದೂ ಗುರಿಯಿಲ್ಲ
ಹಿಂದೆ ಮುಂದೆ ಬೀಸುವ ಕೈಗಳ
ಲಯಕ್ಕೆ ಹೊಂದಿ ನಡೆವಾಗ
ಕುತೂಹಲದಿ ಕೇಳುತ್ತಿದೆ
ಯಾರದು ಈ ನಡಿಗೆ?
ಸುಂಯ್ಯನೆ ಬೀಸುವ ಗಾಳಿಯಲ್ಲಿ
ಅಲ್ಲಾಡುವ ಹಾಯಿ ದೋಣಿಗೆ
ದಡ ಸೇರುವ ತವಕ
ತೇಲಿಸುವ ತಣ್ಣೀರು
ಹಚ್ಚೆ ಒತ್ತಲು ಕಾಯುವಾಗ
ತೆರೆಯ ಬಿಳಿ ನೊರೆಯೊಳಗೆ
ಜಾರಿ ಹೋದಂತೆ
ದಡವಿನ್ನೂ ದೂರ ದೂರ
ಕನಸುಗಳ ಹಕ್ಕಿ ಹಾರುವ ಆ ದಿಗಂತದ ಬುಡದಲ್ಲಿ
ಹಸಿ ಬಿಸಿಯ ತೇವವಿದೆ ಇನ್ನೂ
ಚಿಗಿತು ಕುಡಿಯೊಡೆದಿದೆ ಮನಸ್ಸು
ತುಂಬಿದೆ ಮೃದು ಭಾವ ಮೆತ್ತಗಿನ ಪಾದ
ಊರುವ ಮುನ್ನ ಮತ್ತೊಮ್ಮೆ ಅಲ್ಲೆಲ್ಲೋ ನೋಟ!!
ತಣ್ಣಗೆ ಕೇಳಿದೆ ನಿಂತ ನೆಲ
ಯಾವ ವಿಳಾಸ?
ಮನದ ಕಾಡಿನಲ್ಲಿ
ಹಾಯುವ ಬೆಳಕಿನ ಕೋಲು ಮುರಿದದ್ದು ಹೇಗೆ!?
ಅದೋ ..ಆಚೆಗಿನ ಬಯಲಲ್ಲಿ
ಬೆಳ್ಳಿ ಹೊನಲು
ಒಳಗೊಂದು ಬೆಚ್ಚನೆಯ ತಿಳಿವಿನ ಹರಿವು
ಕುರುಹುಗಳೇ ಇಲ್ಲದೆ
ಖಾಲಿ ಮನದೊಳಗೆ ಹಚ್ಚನೆಯ
ಮೊಹರು ಮೂಡಿದ್ದಾದರೂ ಹೇಗೆ?!
ಕಲಾ ಭಾಗ್ವತ್
ಒಳ್ಳೆಯ ಕವಿತೆ
ಒಳ್ಳೆಯ ಕವಿತೆ
ಚೆಂದದ ಭಾವ
ಚೆಂದದ ಕವಿತೆ
ಮೋಹಕ ಪದಪುಂಜ….
ಎಲ್ಲ ಸಹೃದಯರಿಗೆ ಪ್ರೀತಿಯ ಕೃತಜ್ಞತೆಗಳು.
ಚಂದದ ಕವಿತೆ