ಹೊಸ ವರ್ಷದ ವಿಶೇಷ-2023

ಕೊರೊನ ನಂತರದ ಹೊಸ ವರ್ಷ

ಕೆ.ವಿ.ವಾಸು

ಕೊರೋನಾ ನಾಲ್ಕನೇ ಆಲೆಯ ಆತಂಕದ ನಡುವೆಯೇ
ಹೊಸ ವರ್ಷ 2023 ಅನ್ನು ಸ್ವಾಗತಿಸಲು ನಮ್ಮ ದೇಶ ಸೇರಿದಂತೆ, ವಿಶ್ವದ ಬಹುತೇಕ ರಾಷ್ಟಗಳು ಸಜ್ಜಾಗುತ್ತಿವೆ.
ಜನವರಿ 1 ನಮಗೆ ಹೊಸ ವರ್ಷವಲ್ಲ, ನಮಗೆ ಏನಿದ್ದರೂ
ಯುಗಾದಿ ಹೊಸ ವರ್ಷ ಎಂಬ ವರ್ಶನ್ ಅನ್ನು ಅನೇಕ ಹಿರಿಯರು‌ ನೀಡುತ್ತಾ ಬಂದಿದ್ದರೂ ಸಹ , ಜನವರಿ 1 ರಂದು ಹೊಸ ವರ್ಷದ ಆಚರಣೆ ನಡೆಯುತ್ತಲೇ ಬಂದಿದೆ. ಸಡಗರ, ಸಂಭ್ರಮ, ಉತ್ಸಾಹ, ಉಲ್ಲಾಸ ಮುಂತಾದವುಗಳಿಗೆ ಮತ್ತೊಂದು ಹೆಸರಾದ ಹೊಸ ವರ್ಷ
ಹೊಸ ಹೊಸ ಕನಸುಗಳಿಗೆ ಸ್ಪೂರ್ತಿ ತುಂಬಬಲ್ಲ ಸಂಜೀವಿನಿಯೇ ಸರಿ.

ಹೌದು, ಹೊಸ ವರ್ಷವನ್ನು ಜನರು ನಾನಾ ರೀತಿಯಲ್ಲಿ ಅಥವಾ ತಮಗೆ ಇಷ್ಟ ಬಂದ ರೀತಿಯಲ್ಲಿ ಆಚರಿಸಿ ಎನ್ಜಾಯ್ ಮಾಡುತ್ತಾರೆ. ಡಿಸಂಬರ್ 31 ರ ಸಂಜೆಯಿಂದಲೇ ಪ್ರಾರಂಭವಾಗುವ ಹೊಸ ವರ್ಷದ ಸಂಭ್ರಮಾಚರಣೆ, ಮದ್ಯರಾತ್ರಿ 12 ಘಂಟೆಗೆ ಕ್ಲೈಮಾಕ್ಸ್
ತಲುಪುತ್ತದೆ. ಸಂಗೀತ ನೃತ್ಯ, ಮೋಜು, ಮಸ್ತಿ ಮುಂತಾದವು ಪರಾಕಾಷ್ಠೆ ಮುಟ್ಟುತ್ತದೆ. ಮದ್ಯಪಾನ ಪ್ರಿಯರು ಮದ್ಯ ರಾತ್ರಿಯ ಹೊತ್ತಿಗೆ ಸಂಪೂರ್ಣ ಚಿತ್ ಆಗಿರುತ್ತಾರೆ. ವಿಶೇಷವಾಗಿ
ಆಧುನಿಕ ಶೈಲಿಯ ಯುವಕ ಯುವತಿಯರು ಅರೆ ಬಟ್ಟೆ
ತೊಟ್ಟು ಪಾನಮತ್ತರಾಗಿ ತೂರಾಡುತ್ತಾ‌ ಕುಣಿದಾಡುವುದೂ ಉಂಟು. ಸಾಮಾನ್ಯವಾಗಿ ಪ್ರತಿಷ್ಠಿತ
ಹೊಟೆಲ್ಲುಗಳಲ್ಲಿ ” ನ್ಯೂ ಇಯರ್ ಪಾರ್ಟಿ” ಜೋರಾಗಿಯೇ ನಡೆಯುತ್ತದೆ. ಬಹುತೇಕ ಹೊಟೆಲ್ಲುಗಳು ಬಣ್ಣಬಣ್ಣದ ದೀಪಗಳಿಂದ ರಂಗಾಗಿ,
ಉನ್ಮಾದ ಯುವ ಜನರ ಭಾವನೆಗಳ ಜೊತೆಗೆ ಕಾಮನೆಗಳನ್ನು ಸಹ ಕೆರಳಿಸುತ್ತದೆ. 12 ಘಂಟೆಯ ಹೊತ್ತಿಗೆ ಪಾನಮತ್ತರಾಗಿ ತಮ್ಮ ತಮ್ಮ ವಾಹನಗಳಲ್ಲಿ
ಕರ್ಕಶವಾಗಿ ಕೂಗುತ್ತಾ, ಹೊರಡುವ ಯುವಕ ಯುವತಿಯರ ಪೈಕಿ ಕೆಲವರು ಅಪಘಾತಕ್ಕೆ ಸಿಲುಕಿ
ಯಮಪುರಿಗೆ ತೆರಳಿ, ಮಾರನೇ ದಿನದ ಪತ್ರಿಕೆಗಳಿಗೆ ಮತ್ತು ಸುದ್ದಿ ಜಾಲಗಳಿಗೆ ಆಹಾರವಾಗುವುದೂ ಉಂಟು.

ನೂತನ ವರ್ಷ ಕೇವಲ ಮೋಜು ಮಸ್ತಿಗಳಿಗೆ ಮಾತ್ರ
ಸೀಮಿತವಾಗದೇ ” ಒಂದು ದೃಢ ಸಂಕಲ್ಪಕ್ಕೆ ನಾಂದಿ ಹಾಡಬೇಕು. ಕಳೆದ ವರ್ಷದಲ್ಲಿ ನಮ್ಮ ಸಾಧನೆಗಳ
ಪರಾಮರ್ಶೆ ನಡೆಯಲಿದೆ. ಮುಂಬರುವ ವರ್ಷದ ಯೋಜನಾ ಪಟ್ಟಿ ಹೊರಬರಲಿ.

ಮನುಷ್ಯರಾಗಿ ನಾವು ಸಾಧಿಸಬೇಕಾದ್ದು ಬಹಳಷ್ಟಿದೆ. ಮನುಷ್ಯನ ಬದುಕಿನ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ಕಳೆದು ಹೋದ ಸಮಯ ಮತ್ತೆಂದೂ ಹಿಂದಿರುಗಿ ಬಾರದು. ಹೀಗಾಗಿ ನಾವು ಸಾಧ್ಯವಾದಷ್ಟು ಮಟ್ಟಿಗೆ ಜಾಗೃತರಾಗಿರಬೇಕು. ಯಾವುದನ್ನೂ ಅಸಡ್ಡೆಯಿಂದ ಅಥವಾ ನಿಕೃಷ್ಟವಾಗಿ ಕಾಣಬಾರದು.
ಸಾಧನೆಯ ಹಾದಿಗೆ ಕೊನೆ‌ ಮೊದಲೇ ಇಲ್ಲ. ಹೀಗಾಗಿ,
ಹೊಸ ವರ್ಷ‌ ನಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಬೇಕು. ನಮ್ಮ ಸಾಮರ್ಥ್ಯಗಳ ಒರೆ ಹಚ್ಚಬೇಕು.
ಮನುಷ್ಯ ಸಂಘ ಜೀವಿ. ಆತನ ಸಾಧನೆಗೆ ಅನೇಕರು
ಪತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುತ್ತಾರೆ.
ಹೀಗಾಗಿ “ತಾನೊಬ್ಬನೇ” , “ತನ್ನಿಂದಲೇ ಎಲ್ಲಾ” ಎಂಬ ಅಹಂಭಾವವನ್ನು ಮೊದಲು ತ್ಯಜಿಸಬೇಕು. ಆಗ ಮಾತ್ರ
ಏನನ್ನಾದರು ಸಾಧಿಸಲು ಸಾದ್ಯ.

ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಅಸಂಖ್ಯಾತ ದೇಶ ಪ್ರೇಮಿಗಳ ಅಥವಾ ಮಹಾ ಪುರುಷರ ಭವ್ಯ ಇತಿಹಾಸವೇ ನಮ್ಮ ಮುಂದಿದೆ. ದೇಶದ ಗಡಿಗಳನ್ನು ದಿನದ 24 ಗಂಟೆಗಳ ಕಾಲ ಬಿಸಿಲು, ಮಳೆ ಚಳಿಯನ್ನು ಲೆಕ್ಕಿಸದೇ ಕಾಯುವ ನಮ್ಮ ಧೀರ ಯೋಧರ ತ್ಯಾಗಕ್ಕೆ ಎಣೆಯುಂಟೆ ? ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲಾ ಲಜಪತ ರಾಯ್, ‌ಭಗತ್ ಸಿಂಗ್, ತಾಂತ್ಯಾ ಟೋಪಿ, ಆದ್ಯಾತ್ಮ ಚೇತನರಾದ ಸ್ವಾಮಿ
ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶ್ರೀ ಶಂಕರಾಚಾರ್ಯ, ದೇಶದ ಸಂವಿಧಾನದ ಪಿತಾಮಹ ಎಂದೇ ಖ್ಯಾತರಾದ ಡಾ.ಬಿ.ಆರ್.ಅಂಬೇಡ್ಕರ್, ರಾಜಕೀಯ ಮುತ್ಸದ್ದಿಗಳಾದ ಜವಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ,
ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ಶ್ರೀಮತಿ ಇಂದಿರಾ
ಗಾಂಧಿ, ಸರಳ ಸಜ್ಜನಿಕೆಯ ಅಟಲ ಬಿಹಾರಿ ವಾಜಪೇಯಿ, ಡಾ.ಬಾಬು ಜಗಜೀವನ್ ರಾಮ್, ಜಾಗತಿಕ ಮನ್ನಣೆ ಗಳಿಸಿರುವ ದೇಶದ ಈಗಿನ
ಪ್ರಧಾನ ಮಂತ್ರಿ ಗೌರವಾನ್ವಿತ ‌ಶ್ರೀ ನರೇಂದ್ರ‌ಮೋದಿ,
ಭಾರತದ ಕೈಗಾರಿಕೆಗಳಿಗೆ ಭದ್ರ ಬುನಾದಿ ಹಾಕಿದ ಟಾಟಾ,
ಬಿರ್ಲಾ, ದೇಶದ ಸಾಂಸ್ಕೃತಿಕ ರಾಯಭಾರಿ, ಕನ್ನಡ ಚಲನ ಚಿತ್ರರಂಗದ ಮೇರು ಪರ್ವತ ಡಾ.ರಾಜಕುಮಾರ್, ಪ್ರಖ್ಯಾತ ಕರ್ನಾಟಕ ಸಂಗೀತದ ದಿಗ್ಗಜ ಡಾ.ಎಂ.ಬಾಲಮುರುಳಿ ಕೃಷ್ಣ, ಕರ್ನಾಟಕ ಸಂಗೀತ ವಿಧುಷಿ ಸುಬ್ಬಲಕ್ನ್ಮಿ, ಲತಾ ಮಂಗೇಶ್ಕರ್, ಮನ್ನಾಡೆ, ಮಹಮದ್ ರಫಿ, ಕಿಶೋರ್ ಕುಮಾರ್, ಯೇಸುದಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಪಿ.ಬಿ.ಶ್ರೀನಿವಾಸ್
ಹಿಂದೂಸ್ತಾನಿ ಸಂಗೀತದ
ದಿಗ್ಗಜ ಡಾ.ಬೀಮಸೇನ ಜೋಷಿ, ಮಲ್ಲಿಕಾರ್ಜುನ ಮುನ್ಸೂರ್, ದೇಶದ ಪ್ರಥಮ ರಾಷ್ಟಪತಿ ಡಾ.ರಾಜೇಂದ್ರ ಪ್ರಸಾದ್, ಕನ್ನಡದ ಜ್ನಾನ ಪೀಠ ಪ್ರಶಸ್ತಿ ಪುರಸ್ಕೃತರಾದ ರಾಷ್ಟ ಕವಿ ಕುವೆಂಪು (1967),
ಡಾ.ದಾರಾ ಬೇಂದ್ರೆ (1973), ಶಿವರಾಮ ಕಾರಾಂತ ( 1977), ಮಾಸ್ತಿ ವೆಂಕಟೇಶ ಐಯಂಗಾರ್ ,
ವಿ.ಕೆ.ಗೋಕಾಕ್ ( 1990), ಡಾ ಯು.ಆರ್ ಅನಂತಮೂರ್ತಿ ( 1994), ಡಾ. ಗಿರೀಶ್ ಕಾರ್ನಾಡ್ ( 1998) ಡಾ ಚಂದ್ರಶೇಖರ ಕಂಬಾರ ( 2010 ) ಹೀಗೆ
ಹೇಳುತ್ತಾ ಹೋದಂತೆಲ್ಲಾ ಸಾಧಕರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆ ಕೊನೆ‌ ಮೊದಲೇ ಇಲ್ಲವಾಗುತ್ತದೆ

ಈ ರೀತಿ ನಮ್ಮ ಬದುಕು ನಿಂತ ನೀರಾಗದೇ ಸಾಧನೆಯ
ಹಾದಿಯಲ್ಲಿ ಕ್ರಮಿಸುತ್ತಲೇ ಇರಬೇಕು. ಹೊಸ ಮಾವು
ಹಳೆ ಚಿಗುರು ಕೂಡಿರಲು ಮರ ಸೊಬಗು ಅನ್ನುವ ಕವಿವಾಣಿಯ ಹಾಗೇ, ಬದುಕು ಯಾವಾಗಲೂ ಹೊಸ ಹೊಸ ಅನ್ವೇಷಣೆಗಳನ್ನು ಹುಡುಕುತ್ತಲೇ ಹೋಗುತ್ತದೆ. ದೃಢವಾದ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯ, ದೂರ ದೃಷ್ಟಿ, ಮುಂತಾದ ಸಕಾರಾತ್ಮಕ ಅಂಶಗಳು ಬದುಕನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ.

ಬದುಕಿನಲ್ಲಿ ಕಷ್ಟ ನಷ್ಟ, ಸುಖ ದುಃಖ, ಆಸೆ ನಿರಾಸೆ, ಸೋಲು ಗೆಲುವು
ಇವೆಲ್ಲಾ ಸಹಜ ಮತ್ತು ಸಾಮಾನ್ಯ. ಸಾದ್ಯವಾದಷ್ಟು ಮಟ್ಟಿಗೆ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಿ,
ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳೊಣ. ಇದೇ ನಮ್ಮ ನಿಮ್ಮೆಲ್ಲರ ಹೊಸ ವರ್ಷದ ಧ್ಯೇಯ ವಾಕ್ಯವಾಗಿರಲಿ ಎಂದು ಆಶಿಸುತ್ತೇನೆ.


Leave a Reply

Back To Top