ಹಂದಿಗನೂರಿನ ದೇಶಗತ್ತಿ ಮನೆತನ

ವಿಶೇಷ ಲೇಖನ

ಹಂದಿಗನೂರಿನ ದೇಶಗತ್ತಿ ಮನೆತನ

ಡಾ. ಪುಷ್ಪಾವತಿ ಶೆಲವಡಿಮಠ

ಹಂದಿಗನೂರಿನ ದೇಶಗತ್ತಿ ಮನೆತನ

ಭಾರತ ದೇಶ ಗ್ರಾಮಗಳಿಂದ ಕೂಡಿದೆ, ಗ್ರಾಮಗಳು ವ್ಯವಸಾಯವನ್ನು ಬದುಕಿನ ಮೂಲಾಧಾರವಾಗಿಟ್ಟುಕೊಂಡಿವೆ. ವ್ಯವಸಾಯಕ್ಕೆ ಪೂರಕವಾಗಿ ಅನೇಕ ಕಸುಬುಗಳು ಹುಟ್ಟಿಕೊಂಡವು. ಆ ಕಸಬುಗಳು ಕುಲ ಕಸುಬುಗಳಾಗಿ ಪರಂಪರಾಗತವಾಗಿ ಮುನ್ನಡೆದುಕೊಂಡು ಬಂದವು. ಗ್ರಾಮಗಳ ರಚನೆಯು ಈ ಕಸುಬುಗಳಿಗೆ ಪೂರಕವಾಗಿತ್ತು.

ಪ್ರಾಚೀನ ಭಾರತದಲ್ಲಿ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು. ಅಂದಿನ ರಾಜಮನೆತನಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದವು. ಪರಸ್ಪರ ಗ್ರಾಮದ ಜನರು ಕೊಡುಕೊಳ್ಳುವಿಕೆಯಿಂದ ಸುಭಿಕ್ಷ ಜೀವನ ನಡೆಸುತ್ತಿದ್ದರು. ಅವರಲ್ಲಿ ಒಂದು ನೆಮ್ಮದಿಯ, ಸಂತೃಪ್ತಿಯ, ಆರೋಗ್ಯಪೂರ್ಣವಾದ ಜೀವನವಿತ್ತು. ಹಬ್ಬ, ಹರಿದಿನ, ಜಾತ್ರೆ, ದೇವತಾ ಕಾರ್ಯ, ಮದುವೆ, ಮುಂಜಿವಿ ಮುಂತಾದವುಗಳನ್ನು ಊರ ಜನರೆಲ್ಲ ಮುಂದಾಗಿ ಒಗ್ಗಟ್ಟಿನಿಂದ ಮಾಡುತ್ತಿದ್ದರು.

ದುಡಿಯುವ ವರ್ಗ ಒಂದೆಡೆಯಾದರೆ, ದುಡಿಯದ ವರ್ಗವೂ ಗ್ರಾಮಗಳಲ್ಲಿತ್ತು. ಆ ವರ್ಗ ನ್ಯಾಯಯುತ ಜೀವನದಿಂದ ದೂರವಾಗಿ ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಹಿಂಸಾ ಪ್ರವೃತ್ತಿಗೆ ಇಳಿಯಿತು. ಇದರಿಂದ ಜನಸಾಮಾನ್ಯರಿಗೆ ಇವರ ಉಪಟಳಗಳು ಹೆಚ್ಚಾಗ ತೊಡಗಿತು. ಅದೇ ಸಂದರ್ಭದಲ್ಲಿ ರಾಜರುಗಳು ಯುದ್ಧಗಳನ್ನು ಮಾಡುತ್ತಾ ಪ್ರಾಂತಗಳನ್ನು ಗೆದ್ದು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗಿದ್ದರು. ಸಾಮ್ರಾಜ್ಯ ವಿಸ್ತಾರವಾದಂತೆ ಎಲ್ಲಾ ಪ್ರಾಂತ್ಯಗಳನ್ನು ಕಾಳಜಿ ಪೂರ್ವಕವಾಗಿ ಒಬ್ಬ ಮಹಾರಾಜನಿಂದ ನಿಭಾಯಿಸಲು ಅಸಾಧ್ಯವಾದಾಗ ಸಾಮಂತ ರಾಜರು ಹುಟ್ಟಿಕೊಂಡರು. ಅವರು ಸಮರ್ಥರಾದ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಒಂದೊAದು ಪ್ರಾಂತ್ಯದ ಅಧಿಕಾರ ನೀಡಿದರು. ಅವರು ತಮಗೆ ಕೊಟ್ಟ ಗ್ರಾಮದ ಆಗುಹೋಗು ನೋಡಿಕೊಳ್ಳುತ್ತಾ, ಕರ ವಸೂಲಾತಿ ಮಾಡುತ್ತಾ, ಅಭಿವೃದ್ಧಿಯತ್ತ ಗಮನ ಕೊಡುತ್ತಾ ಬಂದರು. ಹೀಗೆ ಚಿಕ್ಕ ಪುಟ್ಟ ಸಂಸ್ಥಾನಗಳು, ಹಾಗೂ ದೇಸಗತಿಗಳು ಹುಟ್ಟಿ ಬಂದವು.

ಗAಗರ ಶಾಸನ, ಪಲ್ಲವ, ನೊಳಂಬ, ಚಾಲುಕ್ಯ, ರಾಷ್ಟçಕೂಟ, ಹೊಯ್ಸಳ, ವಿಜಯನಗರ ಮುಂತಾದ ರಾಜ ಮನೆತನಗಳು ಆಳ್ವಿಕೆಯ ಸಂದರ್ಭದ ಶಾಸನಗಳಲ್ಲಿ ಪ್ರಜಾಸತ್ತಾತ್ಮಕವಾದ ಗ್ರಾಮಾಡಳಿತ ಉಲ್ಲೇಖಿತವಾಗಿದ್ದು ಕಂಡುಬರುತ್ತದೆ. ಗ್ರಾಮಾಡಳಿತಕ್ಕೆ ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆ ಇಲ್ಲದಿದ್ದರೂ ಗೌಡ, ಅಥವಾ ಊರ ಮುಖಂಡ ಇದನ್ನು ನಿರ್ವಹಿಸುತ್ತಿದ್ದನು. ಮುಂದೆ ರಾಜರು, ಸಂಸ್ಥಾನಗಳು, ದೇಶಸಗತಿಯವರು ಇದನ್ನು ಮಾಡುತ್ತಾ ಅಧಿಕಾರವನ್ನು ವಹಿಸಿಕೊಂಡರು. ಸಂಸ್ಥಾನಗಳು ದೇಶಗತಿಯವರು ಮಹಾರಾಜ್ಯದ ಮಹಾರಾಜರುಗಳಿಗೆ ಕಪ್ಪು ಕಾಣಿಕೆ ಸಲ್ಲಿಸುತ್ತಾ, ಅತ್ಯಂತ ದರ್ಬಾರ್ ನಿಂದ ಕಾರುಬಾರು ಮಾಡುತ್ತಾ, ಅನ್ಯೋನ್ಯವಾದ ಆಡಳಿತವನ್ನು ನಡೆಸಿದಂತೆ ಕಾಣುತ್ತದೆ.  ಹೀಗೆ ದೇಶ ಗತ್ತಿ ಮನೆಗಳು ಹುಟ್ಟಿದವು. ಕರ್ನಾಟಕದಲ್ಲೂ ಇಂತಹ ಅನೇಕ ದೇಶಗತಿ ಮನೆತನಗಳನ್ನು ಕಾಣುತ್ತೇವೆ.

ಶಿರಹಟ್ಟಿ, ನರಗುಂದ, ಹಂದಿಗನೂರು, ಜಮಖಂಡಿ, ರಾಮದುರ್ಗ, ಸವಣೂರು, ಕುಂದಗೋಳ, ತಳ್ಳಿಹಳ್ಳಿ, ಕುರಹಟ್ಟಿ, ರಬಕವಿ ಬನಹಟ್ಟಿ, ಕಿತ್ತೂರು, ಸವದತ್ತಿ, ಹೂಲಿ, ಅಮ್ಮಿನಭಾವಿ, ವಿಜಾಪುರದ ಅಗರಖೇಡ, ಬೆಳಗಾವಿಯ ಯಾದವಾಡ, ಇನ್ನೂ ಚಿಕ್ಕಪುಟ್ಟ ಊರುಗಳನ್ನು ಗಮನಿಸಬಹುದು. ಇವುಗಳ ಅಧಿಕಾರ ವಹಿಸಿಕೊಂಡವರನ್ನು ಜಹಗೀರುದಾರರು, ಇನಾಮುದಾರರು,  ದೇಸಾಯಿ,  ಸರ್ ದೇಸಾಯಿ,  ಮುತಾಲಿಕ್ ದೇಸಾಯಿ,  ದೇಶಪಾಂಡೆ, ಸರ್‌ದೇಶಪಾಂಡೆ, ಚಿಟ್ನೀಸ್, ಪೋತನೀಸ್ ಮುಂತಾದ ಅಡ್ಡ ಹೆಸರುಗಳಿಂದ ಕರೆಯಲಾರಂಭಿಸಿದರು. ಇವರೆಲ್ಲಾ ಐಷಾರಾಮಿಯ ವೈಭೋಗದ ಜೀವನ ನಡೆಸುತ್ತಾ, ತಮಗೆ ಸಿಕ್ಕ ಸಂಸ್ಥಾನ ಅಥವಾ ದೇಸಗತಿಗಳ ಸರ್ವತೋಮುಖ ಬೆಳವಣಿಗೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅಲ್ಲದೆ ಸಾಂಸ್ಕೃತಿಕ ಪರಂಪರೆಯ ಹರಿಕಾರರಾದರು.  ನವರಾತ್ರಿ ಉತ್ಸವಗಳಲ್ಲಿ ನೃತ್ಯ, ಸಂಗೀತ ಕಲಾವಿದರಿಗೆ, ದೇವದಾಸಿಯರಿಗೆ, ಹೊಲ, ಭೂಮಿ, ಉಂಬಳಿಯಾಗಿ ಇವರು ನೀಡುತ್ತಿದ್ದರು. ನವರಾತ್ರಿಯ ಒಂಬತ್ತು ದಿನ ಮೂರು ಪಂಕ್ತಿ ಭೋಜನ ಸಿದ್ಧಗೊಳಿಸಿ, ವಾಡೇದಿಂದ ತುತ್ತೂರಿ ಊದಿಸಿ ಊರ ಜನರಿಗೆಲ್ಲಾ ಅನ್ನಸಂತರ್ಪಣೆ ಮಾಡುತ್ತಿದ್ದರು. ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಜನರಿಗಾಗಿ ಏರ್ಪಡಿಸುತ್ತಿದ್ದರು. ಭಾವೈಕ್ಯತೆಗೆ, ಸರ್ವಧರ್ಮ ಸಹಿಷ್ಣುತೆಗೆ, ಹೆಚ್ಚು ಆದ್ಯತೆ ನೀಡುತ್ತಿದ್ದರು.

ದೇಸಗತಿ ಎಂದರೆ “ಪರಗಣಾವತನ್” ಎನ್ನುತ್ತಿದ್ದಂತೆ ತಿಳಿದುಬರುತ್ತದೆ. “ಪರಗಣಾ” ಎಂದರೆ “ಕೆಲವು ಹಳ್ಳಿಗಳ ಸಮೂಹವಾಗಿದೆ”. ಇವುಗಳ ಮೇಲ್ವಿಚಾರಣೆ, ಆಡಳಿತದ ಹಕ್ಕು ದೇಸಾಯಿಯವರದಾಗಿರುತ್ತಿತ್ತು. ದೇಸಗತಿ ಆಡಳಿತದ ಪ್ರಮುಖ ಕರ್ತವ್ಯ ಹಾಗೂ ಹುದ್ದೆಗಳ ವರ್ಗೀಕರಣವು ಆಯಾ ರಾಜರುಗಳ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿತ್ತು.

ಧಾರವಾಡ, ಲಕ್ಷ್ಮೇಶ್ವರ, ಗದಗ, ಬೆಳಗಾವ, ಬಿಜಾಪುರ ದೇಸಗತಿ ಸಂಸ್ಥಾನಗಳಲ್ಲಿ ಮಾಮಲೆದಾರರು ಪಂಚರ ಮೂಲಕ ನ್ಯಾಯ ವಿಚಾರಣೆ, ನ್ಯಾಯ ತೀರ್ಮಾನ ಮಾಡುತ್ತಿದ್ದು ಕಂಡುಬರುತ್ತದೆ. ಅದರಲ್ಲಿ ಹಂದಿಗನೂರು ದೇಸಗತಿ ಸಂಸ್ಥಾನದ ನ್ಯಾಯಾಡಳಿತವೂ ಹೆಚ್ಚು ಕಡಿಮೆ ಈ ಮಾರ್ಗದಲ್ಲಿಯೇ ನಡೆಯುತ್ತಿತ್ತು. ಹಂದಿಗನೂರು ದೇಸಗತಿ ನ್ಯಾಯಾಡಳಿತವನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿದ್ದು ಕಂಡುಬರುತ್ತದೆ.

ಈ ದೇಸಗತಿ ಮನೆತನಗಳಿಗೆ ‘ದೇಸಗತ ವತನ್’ ಎಂದೂ ಕರೆಯಲಾಗಿತ್ತು. ಇವುಗಳು ಬಿಜಾಪುರದ “ಅಲಿ ಆದಿಲ್ ಷಾ” ನ ಕಾಲಕ್ಕೆ ಹುಟ್ಟಿರುವಂತೆ ಕಂಡುಬರುತ್ತದೆ.  ಪ್ರಾಚೀನ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪರಂಪರಾನುಗತವಾಗಿ ‘ಬಹಮನಿ’ ಮತ್ತು ‘ ಆದಿಲ್ ಶಾಹಿ’ ವಂಶಜರು ಆಳಿದರು. ಇವರ ಆಡಳಿತಾವಧಿಯಲ್ಲಿ ವಿಶೇಷವಾಗಿ ಕಾರ್ಯನಿರ್ವಹಿಸಿದ ಹಿಂದೂ ಅಧಿಕಾರಿಗಳಿಗೆ ಮನ್ನಣೆ ನೀಡಿದರು. ಅವರು ರಾಜನಿಗೆ ಕಪ್ಪಕಾಣಿಕೆ, ಸೈನ್ಯ ಸಹಾಯವನ್ನು ಕಡ್ಡಾಯವಾಗಿ ಮಾಡಬೇಕಿತ್ತು. ಈ ನಿಟ್ಟಿನಲ್ಲಿ ‘ದೇಸಗತಿ’ಗಳು ಹುಟ್ಟಿಕೊಂಡಿವೆ.

ಬಹಮನಿ ಅರಸರು ನಿರಂತರವಾಗಿ ವಿಜಯನಗರದ ಅರಸರೊಂದಿಗೆ ಯುದ್ಧ ಮಾಡುತ್ತಲೇ ಬಂದರು. ಕ್ರಿ.ಶ ೧೫೫೨ ರಲ್ಲಿ ಬಹಮನಿ ಸಂತತಿ ಕೊನೆಗೊಂಡಿತು. ಆಗ ಅದು ಐದು ಭಾಗವಾಗಿ ಒಡೆಯಿತು. ಬಿಜಾಪುರದ ಆದಿಲ್ ಶಹ, ಬೀದರಿನ ಬರೀದ್ ಶಹ, ಗೋಲ್ಕಂಡದ ಕುತುಬ್ ಶಹ, ಬೀರಾರ್ ನ್ ಇಮಾದ ಶಹ, ಹಮದ್ ನಗರದ ನಿಜಾಮಶಹ, ಎಂದು ಐದು ಭಾಗವಾದರು. ಕ್ರಿ.ಶ ೧೫೬೫ ರಲ್ಲಿ ನಡೆದ ‘ರಕ್ಕಸತಂಗಡಿ’ ಕಾಳಗದಲ್ಲಿ ಇವರು ವಿಜಯನಗರದ ರಾಮರಾಯನನ್ನು ಸೋಲಿಸಿ, ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಅಲ್ಲದೆ ಒಬ್ಬೊಬ್ಬ ಮುಸ್ಲಿಂ ದೊರೆ ಒಂದೊAದು ದಿಕ್ಕಿನತ್ತ ಸಾಗಿ ಶತ್ರುರಾಜರೊಂದಿಗೆ ಹೋರಾಡಿ ಕಾದಾಡಿ ಚಿಕ್ಕ ಚಿಕ್ಕ ಹಳ್ಳಿಗಳನ್ನು ಗೆದ್ದು ತಮ್ಮದಾಗಿಸಿಕೊಂಡರು. ನಂತರ ತಮ್ಮ ಆಡಳಿತ ಅನುಕೂಲತೆಗೆ ಸಮರ್ಥರಾದವರಿಗೆ ಕೆಲವು ಷರತ್ತು ಹಾಕಿ ಅಲ್ಲಿಯ ಸ್ಥಾನಿಕರನ್ನಾಗಿ ನೇಮಿಸಿದರು. ಹೀಗೆ ಹುಟ್ಟಿ ಬೆಳೆದು ಬಂದವುಗಳೇ ಈ ದೇಸಗತಿಗಳು.

ಹಂದಿಗನೂರು ಸಂಸ್ಥಾನದ ಇತಿಹಾಸ: ಹಂದಿನೂರು ಅಂದಿನ ಧಾರವಾಡ ಜಿಲ್ಲೆಯ, ಇಂದಿನ ಹಾವೇರಿ ಜಿಲ್ಲೆಯ ಒಂದು ಪುಟ್ಟ ಗ್ರಾಮ. ಇದು ವರದಾ ನದಿಯ ದಂಡೆಯ ಮೇಲಿದೆ. ಹಾವೇರಿಯಿಂದ ಸುಮಾರು ೨೦ ಕಿ. ಮೀ ದೂರದಲ್ಲಿದೆ. ಹಂದಿಗನೂರು ಫಲವತ್ತಾದ ಭೂಮಿ ಹೊಂದಿದೆ. ನದಿಯ ದಡದಲ್ಲಿರುವುದರಿಂದ ಇಲ್ಲಿನ ಹೊಲ, ತೋಟಗಳು ಸಮೃದ್ಧವಾಗಿವೆ. ಹಸಿರು ಗಿಡಮರಗಳಿಂದ ಇಲ್ಲಿನ ಪ್ರಕೃತಿಯೂ ಸುಂದರವಾಗಿದೆ.

ಐತಿಹ್ಯದ ಪ್ರಕಾರ “ಹಂದಿಯೊAದು ನೂರು ಮರಿಗಳನ್ನು ಹಾಕಿತ್ತಂತೆ ಅಂದಿನಿAದ ಇದು ಹಂದಿಗನೂರು” ಎಂಬ ಹೆಸರನ್ನು ಪಡೆಯಿತು ಎಂದು ತಿಳಿದು ಬರುತ್ತದೆ. ಅಲ್ಲದೆ ಅದೇ ಹಂದಿ ಮೇಲೆ ಹೋಗಿ ಮತ್ತೊಂದು ಮರಿಯನ್ನು ಹಾಕಿದ್ದರಿಂದ ಈ ಜಾಗವನ್ನು ಇಂದಿಗೂ “ಮೇಲ್ಮರಿ” ಎಂದು ಜನ ಕರೆಯುತ್ತಾರೆ. ಭಾಷಾಶಾಸ್ತçದ ದೃಷ್ಟಿಯಿಂದಲೂ ಈ ಊರಿನ ಹೆಸರಿನ ನಿಷ್ಪತ್ತಿ ಕಂಡುಬAದಿಲ್ಲ. ವಾಡಿಕೆಯಾಗಿ ಈ ಊರಿಗೆ “ದೇಸಾಯಿ ಗ್ರಾಮ” ಅಥವಾ “ದೇಸಳ್ಳಿ ಗ್ರಾಮ” ಅಂತ ಕರೆದರೂ ಇದು “ಹಂದಿಗನೂರು” ಎಂದೇ ಪ್ರಸಿದ್ಧವಾಗಿದೆ.

ಹಂದಿಗನೂರು ದೇಸಗತವು ಕ್ರಿ.ಶ.೧೫೭೫ ರಲ್ಲಿ ಸ್ಥಾಪಿತವಾಗಿದೆ. ಇದನ್ನು ಸ್ಥಾಪಿಸಿದವರು “ವಿಠ್ಠಲನಾಥ ಬುಳ್ಳಪ್ಪ ಸರಸೆಟ್ಟಿ” ಎಂಬುವನು. ಇವನೇ ಈ “ದೇಸಾಯಿ ಮನೆತನ”ದ ಮೂಲ ಪುರುಷನಾಗಿದ್ದಾನೆ. ಕ್ರಿ.ಶ. ೧೮೧೮ ರಲ್ಲಿ ಕಂಪನಿ ಸರ್ಕಾರ ಹಂದಿಗನೂರು ದೇಸಗತಿಯ ಬಗ್ಗೆ ಒಂದು ಕೈಫಿಯತ್ ಬರೆದುಕೊಡಲು ಆಜ್ಞೆ ಮಾಡಿದಾಗ, ವಿಠ್ಠಲನಾಥ ಬುಳ್ಳಪ್ಪ ಸರಸೆಟ್ಟಿ ಬರೆದು ಕೊಟ್ಟನಂತೆ. ಹೀಗೆ ಬರೆದುಕೊಟ್ಟು ಇವನು ಈ ವಂಶದ ಮೂಲ ಪುರುಷನಾಗಿದ್ದಾನೆ.

ಮೂಲ ಪುರುಷನಾದ ವಿಠ್ಠಲನಾಥ ಬುಳ್ಳಪ್ಪ ಸರಸೆಟ್ಟಿಯು ವಿಜಾಪುರದ ಹತ್ತಿರದ “ಗುಣಕಿ ಬೇವಿನಹಳ್ಳಿ” ಗ್ರಾಮದವನು. ಇವನು ಶ್ರೀಮಂತ ವ್ಯಾಪಾರಿಯಾಗಿದ್ದು, ಬಿಜಾಪುರದ ಇಬ್ರಾಹಿಮ್ ಆದಿಲ್ ಷಾ ಸುಲ್ತಾನನ ಸ್ನೇಹ ಸಂಪಾದಿಸಿಕೊAಡು, ಅವನ ಸೈನ್ಯ ಪಡೆಗಳಿಗೆ ಸೈನ್ಯಪಡೆ, ಆಹಾರ ಧಾನ್ಯ, ಮೇವು, ಸಲಕರಣೆ ಮುಂತಾದವುಗಳನ್ನು ನೀಡಿ ಅವನ ವಿಶ್ವಾಸಕ್ಕೆ ಪಾತ್ರನಾಗಿದ್ದು, ಅವನಿಂದ ಇನಾಮು ಆಗಿ ಬಂಕಾಪುರದ ಸೀಮೆಯ ಸುತ್ತಮುತ್ತಲಿನ ಪ್ರದೇಶಗಳನ್ನು ಪಡೆದುಕೊಂಡನAತೆ. ಇಲ್ಲಿಂದ ಹಂದಿಗನೂರಿನ ದೇಸಗತಿಯ ಉದಯವಾಯಿತು. ಇವನು ಈ ಮನೆತನದ ಮೂಲ ಪುರುಷನಾದನು. ಇವನು ಬಿಜಾಪುರದ ಸಮೀಪದ “ಗುಣಕಿ ಬೇವಿನಹಳ್ಳಿ”ಯವನು. ಇವನ ವಂಶಸ್ಥರು ಎರಡು ಶಾಖೆಗಳಲ್ಲಿ ಪರಗಣನೆಯ ಆಡಳಿತ ಮಾಡಿದ್ದಾರೆ. ಹಿರಿಯ ಶಾಖೆಗೆ ಸೇರಿದವರಿಗೆ “ಮಾಮಲೆ ದೇಸಾಯಿ” ಎನ್ನುತ್ತಾರೆ. ಇವರು ಕಂದಾಯ, ಜಮಾಬಂದಿ ಮೊದಲಾದ ಅಧಿಕಾರ ಮಾಡುತ್ತಾರೆ. ಕಿರಿಯ ಶಾಖೆಗೆ ಮಾಮಲೆದÀ ಪಟ್ಟಣಶೆಟ್ಟಿ ಎನ್ನುತ್ತಾರೆ. ಇವರು ನಗರಾಡಳಿತ ಮತ್ತು ಅಭಿವೃದ್ಧಿಯ ಅಧಿಕಾರ ಪಡೆದುಕೊಂಡಿದ್ದರು. ಹಿರಿಯ ಮಾಮಲೆ ದೇಸಾಯಿ ವಂಶಸ್ಥರು ಹಂದಿಗನೂರಿಗೆ ಬಂದು ನೆಲೆಸಿದರು. ಕಿರಿಯ ಶಾಖೆಯವರು ಬಂಕಾಪುರದಲ್ಲಿ ನೆಲೆಸಿದರು. ಹಂದಿಗನೂರು ದೇಸಗತಿಯ ಪರಂಪರೆಯು “ಗಾದಿಮಾಲೀಕರ” ಮೂಲಕ ಮುಂದುವರೆಯಿತು. ಇವರು ಹಂದಿಗನೂರಿನಲ್ಲಿ ವಾಡೆಯನ್ನು ಕಟ್ಟಿಸುತ್ತಾ, ವಿಸ್ತರಿಸುತ್ತಾ ಸಾಗಿದರು. ಬಹು ವಿಸ್ತಾರವಾದ ವಾಡೆ “೩೦x೨೫” ಅಳತೆಯಲ್ಲಿದೆ. ದೊಡ್ಡ ಸದರವನ್ನು ಹೊರತು ಪಡಿಸಿ ಸುಮಾರು ೪೦ ಕೋಣೆಗಳಿವೆ.

ಇಲ್ಲಿ ಅನೇಕ ಶತಮಾನದ ವಸ್ತುಗಳಿವೆ, ಹೂರಣ ಅರೆಯುವ ಕಲ್ಲೇ ಸುಮಾರು ೩ ಅಡಿ ಇದೆ. ಎಣ್ಣೆ ತೆಗೆಯುವ ಕಲ್ಲಿದೆ. ಮನೆಯಲ್ಲಿರುವ ಸ್ಥಳ ಸುಮಾರು ೬೦೦ ಕ್ವಿಂಟಲ್ ಚೀಲ ಹಿಡಿಯುವಷ್ಟು ವಿಸ್ತಾರವಾಗಿದೆ. ಇದನ್ನು ವಿಠ್ಠಲ್ ಸರಸೆಟ್ಟಿಯ ನೆನಪಿಗೆ “ವಿಠ್ಠಲವಾಡ” ಎಂದು ಮೊದಲು ಕರೆಯುತ್ತಿದ್ದರಂತೆ. ಒಟ್ಟು ಸುಮಾರು ಹದಿನೈದು ಗಾದಿಮಾಲಿಕರು ಆಗಿ ಹೋಗಿದ್ದಾರೆ. ಅವರು ಉಪಯೋಗಿಸುತ್ತಿದ್ದ ಲಾಟೀನು, ಬೆಳ್ಳಿ ಹಿಡಕಿಯ ಚೂರಿಗಳು, ಖಡ್ಗ, ಕಠಾರಿ, ಬಂದೂಕುಗಳು ಇನ್ನೂ ಇಲ್ಲಿ ಇವೆ. ಈ ವಾಡೆಯು ಸುಮಾರು ೧೨ ಎಕರೆ ವಿಸ್ತೀರ್ಣವಾದ ಕಂಪೌAಡಿನಲ್ಲಿದೆ. ಎತ್ತಿನ ಮನೆಯಲ್ಲಿ ಒಂದು ದೊಡ್ಡ ಕಲ್ಲಿನ ಬಾವಿ ಇದೆ. ಅದು ೭ ಅಡಿ ಉದ್ದ, ೩ ಅಡಿ ಅಗಲ ಮತ್ತು ೩ ೧/೨ ಅಡಿ ಆಳವಿದ್ದು, ಅಖಂಡ ಏಕ ಶಿಲೆಯಿಂದ ಮಾಡಲಾಗಿದೆ. ಕಾಂಪೌAಡಿನಲ್ಲಿ ಸಿಹಿ ನೀರಿನ ಬಾವಿ ಇದೆ. ಬಸವಣ್ಣನ ಗುಡಿ ಸಮೀಪ ಮುಕ್ತೇಶ್ವರ ದೇವಸ್ಥಾನ ಇದೆ. ಈ ದೇವಾಲಯದಲ್ಲಿ ೩ ಲಿಂಗಗಳು, ಗಣಪತಿ, ಸಪ್ತಮಾತೃಕೆಯರು, ದುರ್ಗಾದೇವಿ, ಕೇಶವ ನವಗ್ರಹಗಳ ವಿಗ್ರಹ ಇವೆ.

ಹಂದಿಗನೂರು ದೇಸಗತಿ ಕೆಲವು ವಿಶೇಷ ಪದ್ಧತಿ ನಡೆಸಿಕೊಂಡು ಬಂದಿದೆ. ೧)ಜೇಷ್ಠ  ಪುತ್ರಾಧಿಕಾರ ೨) ಆಸ್ತಿಯ  ಅವಿಭಾಜ್ಯತೆ. ಹಂದಿಗನೂರು ಸಂಸ್ಥಾನ ಸಾಕಷ್ಟು ಸಾಂಸ್ಕೃತಿಕ ಕೊಡುಗೆ ನೀಡಿದೆ. ಹನ್ನೊಂದನೆಯ ಗಾದಿ ಮಾಲಿಕರಾಗಿದ್ದ ಮಾಮಲೆ ದೇಸಾಯಿಯವರ ಮೊದಲ ಪತ್ನಿ ಅವ್ವ ನಾಗವ್ವ, ಇವರು ಸಮಾಜ, ಸಾಹಿತ್ಯ, ಧರ್ಮ, ರಾಜಕೀಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹಂದಿಗನೂರು ಸಂಸ್ಥಾನಕ್ಕೆ ೧೩೪ ಹಳ್ಳಿಗಳು ಸೇರಿದ್ದವು. ಅವುಗಳಲ್ಲಿ ಪ್ರಮುಖವಾದವುಗಳು ಶಿಗ್ಗಾಂವಿ, ಕಾರಡಗಿ, ಬಂಕಾಪುರ, ಮುನವಳ್ಳಿ, ಹಾವೇರಿ, ಆಡೂರು, ನರೇಗಲ್ಲ, ನಿಡಸಂಗಿ, ಕಾಗಿನೆಲೆ, ಮಮ್ಮೀಗಟ್ಟಿ, ತಡಸ, ಕಲಘಟಗಿ, ಮುಂತಾದವು. ಇವುಗಳ ಸುತ್ತಮುತ್ತಲಿನ ಜಮೀನೆಲ್ಲವೂ ಹಂದಿಗನೂರು ದೇಸಗತ್ತಿಗೆ ಸೇರಿದ್ದಾವೆ. ಮಾಮಲೆ ದೇಸಾಯಿಗಳಿಗೆ ಈ ಹಳ್ಳಿಗಳ ಮಾಮಲೆ ಬಾಬಾ, ವತನ ಬಾಬಾ, ಪಟ್ಟಣಸೆಟ್ಟಿ ಬಾಬಾ, ಪಾಟೀಲಕಿ ಬಾಬಾ, ಅಧಿಕೃತ ಸರ್ಕಾರಿ ದಾಖಲೆಗಳಲ್ಲಿ ಅಧಿಕಾರವಿತ್ತು.

ಮಾಮಲೆ ದೇಸಾಯಿ ವಂಶಕ್ಕೆ ಸುಮಾರು ೪೩೦ ವರ್ಷಗಳ ಇತಿಹಾಸವಿದೆ. ಇಲ್ಲಿ ಈ ಮೊದಲೇ ತಿಳಿಸಿದಂತೆ ೪೦ ವಿಶಾಲವಾದ ಕೊಠಡಿಗಳು ಪೂರ್ವಿಕರ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಹಲವಾರು ಎಕರೆ ಪ್ರದೇಶವನ್ನು ಸ್ಥಾಪಿಸಿರುವ ವಾಡೆಕೋಟೆ ಕೊತ್ತಲದ ರಕ್ಷಣಾ ವ್ಯವಸ್ಥೆ ಹೊಂದಿದೆ. ಊಳಿಗದಾಳುಗಳ ವಸತಿ ಮನೆಗಳು, ಕಾಳಿನ ಕಣಜಗಳು, ಹಗೆವು ಸಾವಿರಾರು ಜನಕ್ಕೆ ಭೋಜನ ವ್ಯವಸ್ಥೆ ಮಾಡುವ ಅಡುಗೆ ಸಾಮಾಗ್ರಿಗಳು ಇವೆ. ೧೫ನೇ ಗಾದಿ ಮಾಲೀಕರಾಗಿದ್ದ ಬುಳ್ಳೆಪ್ಪ ದೇಸಾಯಿಯವರು ಸ್ವಾಮಿಗಳಿಗೆ ಕಟ್ಟಿಸಿಕೊಟ್ಟ ಮಠ ವಾಡೆಯಲ್ಲಿದೆ. ೧೨ನೇ ಗಾಂಧಿ ಮಾಲೀಕರಾಗಿದ್ದ ಬುಳ್ಳೆಪ್ಪ ದೇಸಾಯಿ ಅವರ ಕಾಲದಲ್ಲಿ ವಾಡೆದ ಸದರ ಸಾರ್ವಜನಿಕರ ಸಂದರ್ಶನಕ್ಕೆ ಕಟ್ಟಿಸಿದ್ದಾಗಿದೆ. ಸರ್ದಾರ್ ಬುಳ್ಳಪ್ಪ ದೇಸಾಯಿ ಅವರು ತಮ್ಮ ಪ್ರೀತಿಯ ಹೆಂಡತಿ ನಾಗುಬಾಯಿಯ ಹೆಸರಿನಿಂದ “ನಾಗೂವಾಡೆ” ಎನ್ನುತ್ತಿದ್ದರು. ಒಟ್ಟಾರೆ ಈ ವಾಡೆ ವಾಸ್ತುಶಿಲ್ಪ ವೈಭವದಿಂದ ಕೂಡಿದ್ದು, “ಮೂಡಲ ಮನೆ” ಧಾರಾವಾಹಿಯಲ್ಲಿ ಅನಾವರಣಗೊಂಡಿದೆ. ಈ ಮನೆತನದಲ್ಲಿ ಶ್ರೀ ಆರ್. ಬಿ. ಮಾಮಲೆದೇಸಾಯಿಯವರು ಇತ್ತೀಚೆಗೆ ಪ್ರಭಾವಿ ವ್ಯಕ್ತಿಗಳಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಒಟ್ಟಿನಲ್ಲಿ ಹಂದಿಗನೂರ ದೇಶಗತ್ತಿ ಮನೆತನಕ್ಕೆ ಒಂದು ಭವ್ಯ ಇತಿಹಾಸವಿದೆ.


ಡಾ. ಪುಷ್ಪಾವತಿ ಶೆಲವಡಿಮಠ

 

Leave a Reply

Back To Top