ಅಂಕಣ ಸಂಗಾತಿ

ಸುಜಾತಾ ರವೀಶ್ ರವರ ಲೇಖನಿಯಿಂದ

ನೆನಪಿನ ದೋಣಿಯಿಂದ

ಜಾರುಬಂಡೆ ಜಾರೋಣ ಬನ್ನಿರೇ!

ಬಾಲ್ಯದ ನೆನಪು ಮೆಲುಕು ಗಳ ಸರಪಣಿಯ ಬೆಸುಗೆಯೆಂದರೆ ಜಾರುಬಂಡೆಯಾಟ .ಎಲ್ಲರೂ ನೋಡಿರುವ ಆಡಿರುವ ಈ ಆಟಕ್ಕೆ ಹೆಚ್ಚಿನ ವಿವರಣೆಯ ಪರಿಚಯ ಬೇಕಿಲ್ಲ. 2ಕಡೆ ಅಥವಾ ಒಂದೇ ಕಡೆ ಮೆಟ್ಟಲುಗಳಿದ್ದು ಅಲ್ಲಿಂದ 2 _ 3 ಕಡೆ ಜಾರಲು ಅನುವಾಗುವಂತಹ ಇಳಿಜಾರು. ಎತ್ತರ ಒಂದೊಂದು ಕಡೆ ಒಂದೊಂದು ರೀತಿ. ಸಾಮಾನ್ಯ ಎಲ್ಲಾ ಉದ್ಯಾನವನಗಳಲ್ಲೂ ಇದ್ದಂತಹ ಈಗಲೂ ಇರುವಂತಹ ಮಕ್ಕಳ ಆಟದ ಸಾಧನ.

ಎಲ್ಲರಂತೆ ನನಗೂ ಜಾರುಬಂಡೆ ಎಂದರೆ ಪ್ರೀತಿ
ಆದರೆ ಆಗ ಹೆಚ್ಚು ಉದ್ಯಾನವನಗಳು ಇರಲಿಲ್ಲ. ಇದ್ದವಕ್ಕೂ ಹೋಗುತ್ತಿದ್ದುದು ಅಷ್ಟರಲ್ಲೇ. ಮೊದಲು ಚಾಮುಂಡಿಪುರಂನ ಮನೆಯಲ್ಲಿ ಅಲ್ಲಿನ ಸರ್ಕಲ್ನಲ್ಲಿದ್ದ ಪಾರ್ಕ್ನಲ್ಲಿ ಜಾರುಬಂಡೆಯಿತ್ತು. ಕೆಲವೊಮ್ಮೆ ಅಮ್ಮ ಅಣ್ಣನ ಜತೆ, ಕೆಲವೊಮ್ಮೆ ಅಕ್ಕಪಕ್ಕದ ಮಕ್ಕಳ ಜತೆ ಹೋಗಿ ಆಟವಾಡುತ್ತಿದ್ದ ನೆನಪು. ಮನೆ ಬದಲಿಸಿ ಬಂದಾದ ಮೇಲೆ ಜಾರುಬಂಡೆ ಅಪರೂಪವಾಯಿತು . ಮೃಗಾಲಯದಲ್ಲಿ ಹಾಗೂ ಕೆ ಆರ್ ಎಸ್ ನ ಮಕ್ಕಳ ಉದ್ಯಾನದಲ್ಲಿ ಹೆಚ್ಚು ಎತ್ತರದ ಜಾರುಬಂಡೆಗಳಿದ್ದವು . ಹಾಗಾಗಿ ಅದನ್ನು ಆಡಲು ಬಹಳ ಖುಷಿಯಾಗುತ್ತಿತ್ತು.

ಹೀಗಿದ್ದಾಗಲೇ ನಾನು ಓದುತ್ತಿದ್ದ ಶಾಲೆಯ ವಿಶಾಲ ಆವರಣದಲ್ಲಿ ಮದ್ಯಮ ಗಾತ್ರದ ಜಾರುಬಂಡೆ ಕಟ್ಟಲ್ಪಟ್ಟಿತ್ತು. ಸುತ್ತ ಮರಳು ಹಾಕಿದ ಕಟ್ಟೆ ಮಧ್ಯದಲ್ಲಿ 1ಕಡೆ ಮೆಟ್ಟಲು 3ಕಡೆ ಜಾರುಬಂಡೆ. ಆಹಾ! ಅದೆಷ್ಟು ಸಂಭ್ರಮವೋ… ನಾನಾಗ ಮೂರನೆಯ ತರಗತಿ . ದೊಡ್ಡ ಮಕ್ಕಳೇ ಅಕ್ರಮಿಸಿಕೊಂಡು ನಮಗೆ ಆಡಲು ಬಿಡುತ್ತಿರಲಿಲ್ಲ . ಹಾಗದಾಗ ವಾರಕ್ಕೆ 2ಆಟದ ಪಿರಿಯಡ್ಗಳಲ್ಲಿ ಆ ಕ್ಲಾಸಿನ ಮಕ್ಕಳಿಗೆ ಅಂತ ಆಡಲು ಅವಕಾಶ .ಆದರೆ ನಮ್ಮ ಆಡುವ ಬಯಕೆಯ ರಾವಣಾಸುರನಿಗೆ ಅದು ಅರೆಕಾಸಿನ ಮಜ್ಜಿಗೆ ; ತೃಪ್ತಿಯಾಗುತ್ತಿರಲಿಲ್ಲ . ಶಾಲೆ ಬಿಟ್ಟ ಮೇಲೆ ಆಡುತ್ತಿದ್ದುವು. ಶನಿವಾರ ಹಸಿದ ಹೊಟ್ಟೆಯಲ್ಲಿ ಆಟ. ಅದೊಂದು ಸುವರ್ಣ ಸಂತಸದಾ ಗಳಿಗೆ .

ಇಲ್ಲಿ 1ತಮಾಷೆಯ ಸಂಗತಿ ಹೇಳಬೇಕು. ಹೊಸದಾಗಿ ಕಟ್ಟಿದ್ದು ಜಾರುಬಂಡೆ ಅಂದನಲ್ಲ ಅದಕ್ಕೆ ಹಚ್ಚಿದ ರೆಡಾಕ್ಸೈಡ್ ನಮ್ಮ ಬಟ್ಟೆಗಳೆಲ್ಲ ಅಂಟಿಕೊಂಡು ಒಗೆಯಲು ಕಷ್ಟವಾಗಿ ದಿನವೂ ಅಮ್ಮಂದಿರ ಬೈಗುಳ ತಿನ್ನಬೇಕಿತ್ತು. ಶನಿವಾರದ ಬಿಳೀ ಸಮವಸ್ತ್ರದ ಸ್ಕರ್ಟ್ ಅಂತೂ ಪೂರಾ ಕೂರುವ ಜಾಗದಲ್ಲಿ ಕೆಂಪು ಬಣ್ಣವಾಗಿ ಕೊನೆಗೆ ಹೊಸ ಸ್ಕರ್ಟ್ ತೆಗಿಸಿಕೊಳ್ಳಬೇಕಾಯಿತು. ಕೆಂಪಗಿದ್ದರೆ ಏನು ಅಂತ ಆಗ ತಲೆ ಕೆಡಿಸಿಕೊಂಡಿದ್ದೆ .

ನಾಲ್ಕನೆಯ ತರಗತಿಗೆ ಬರುವಾಗ ಶಾಲೆಗೆ ಹತ್ತಿರದಲ್ಲೇ ಸೋದರಮಾವಮನೆ ಮಾಡಿದ್ದರು. ಶನಿವಾರ ಅಲ್ಲಿ ಊಟ ಮಾಡಿ ಬಂದು ಮತ್ತೆ ಜಾರೋ ಬಂಡೆಯಾಟ .ಒಮ್ಮೆ ಹೊಸ ಲಂಗ ತೊಟ್ಟಿದ್ದು ಅದು ಹಾಳಾಗಬಾರದೆಂದು, ಬಿಳಿ ಒಳ ಅಂಗಿ ಕೊಳೆಯಾಗಿ ಬರದೆಂದು ಎರಡನ್ನೂ ಮೇಲೆ ಕಟ್ಟಿಕೊಂಡು ಜಾರಿದ್ದೆ . ಮಧ್ಯಾಹ್ನ ಹನ್ನೆರಡರ ಸುಡು ಬಿಸಿಲಿಗೆ ಕಾದಿದ್ದ ಬಂಡೆ….. ಏನಾಗಿರಬಹುದು ಊಹಿಸಿಕೊಳ್ಳಿ.. ಎಂಟು ಹತ್ತು ದಿನ ಜಾರುಬಂಡೆ ಕಡೆ ತಿರುಗಿಯೂ ನೋಡುತ್ತಿರಲಿಲ್ಲ . ಜೋರಾಗಿ ಬಿದ್ದು ಕಾಲು ತರಚಿಸಿಕೊಂಡಿದ್ದೆವು. ಜಾರುವ ಬಂಡೆಯ ಮೇಲಿಂದ ಹತ್ತಲು ಹೋಗಿ ಬಿದ್ದ ಪ್ರಸಂಗಗಳೂ ಅದೆಷ್ಟೋ .

ಬರೀ ಮೆಟ್ಟಿಲ ಮೂಲಕ ಹತ್ತಿ ಜಾರುವುದು ಅಷ್ಟೇ ಅಲ್ಲ ಜಾರುಬಂಡೆಯ ಮೂಲಕವೇ ಹತ್ತಿ ಮತ್ತೆ ಜಾರುವುದು. ಕೆಲವೊಂದು ಸಲ ಸ್ಕಾಟ್ ಮಡಿಲಲ್ಲಿ ಮರಳು ತುಂಬಿಕೊಂಡು ಕೆಳಗಿನಿಂದ ಹತ್ತುವವರಿಗೆ ಕಷ್ಟವಾಗುವಂತೆ ಮೇಲಿನಿಂದ ಸುರಿಯುವುದು, ಹಿಮ್ಮೊಗವಾಗಿ ಜಾರುವುದು ಏನೆಲ್ಲ ತರಹ ಆಡುತ್ತಿದ್ದೆವು. ಜಾರುಬಂಡೆ ಹತ್ತಿ ಜಾರುವ ಮೂಲಕವೂ ಜೂಟಾಟ ಆಡುತ್ತಿದ್ದೆವು. ಬೇರಾವುದೇ ಆಟದ ಸಾಧನಗಳಿಗಿಂತ ತುಂಬ ಪ್ರೀತಿಯ ಆಟ ಇದು. ಇನ್ನು ಅಂಚಿನ ಕಟ್ಟೆಗಳ ಮೇಲೆ ಮಲಗಿದಂತೆ ಕುಳಿತು ಜಾರುವುದೂ ಒಂದು ಮೋಜು. ಈ ಆಟವನ್ನು ನೇರ ಇರುವ ಮಹಡಿ ಅಂಚುಗಳ ಮೇಲೂ ಆಡಿ ಬೈಸಿಕೊಂಡ ಪ್ರಸಂಗಗಳೂ ಇವೆ .

ಇಷ್ಟೆಲ್ಲಾ ತರಲೆ ಆಡಿದರೂ ಪುಟ್ಟ ಮಕ್ಕಳು ಹೆದರದಂತೆ ತೊಡೆ ಮೇಲೆ ಕೂರಿಸಿಕೊಂಡು ಪಕ್ಕದಲ್ಲಿ ಹಿಡಿದುಕೊಂಡು ಜಾರಿಸೋದು ಮಾಡಿ ಏನೋ ಸಾಧನೆ ಮಾಡಿದ ಪೋಸ್ ಕೊಟ್ಟಿದ್ದುಂಟು . ಎಲ್ಲರಿಗೂ ಸಮಾನ ಅವಕಾಶ ಸಿಗುವ ಹಾಗೆ ನಡೆದುಕೊಂಡದ್ದುಂಟು.

ಅವೆಲ್ಲ ನೆನೆಯುವಾಗ ಈಗನ್ನಿಸುತ್ತದೆ ಬರೀ ಆಟ ಮಾತ್ರ ಅಲ್ಲ ಅವು ಹೊಂದಾಣಿಕೆ ಸಹನೆ ಸಹಕಾರ ಕಲಿಸಿದ ಪಾಠಗಳು ಅಂತ. ಸೋಲನ್ನು ಸ್ವೀಕರಿಸುವ ಸಮಚಿತ್ತ ಬಂದದ್ದು ಹೀಗೆ ಕೂಡಿ ಆಡಿದ್ದರಿಂದಲೇ . ಹಾಗಾಗಿಯೇ ಏನೋ ನಮ್ಮ ಕಾಲದಲ್ಲಿ ಹದಿ ಹರೆಯದವರ ಆತ್ಮಹತ್ಯೆ ಕಡಿಮೆ ಇದ್ದದ್ದು ಅನ್ನಿಸುತ್ತೆ.

ಈಗಲೂ ಯಾರೂ ನೋಡದೆ ಕಿಚಾಯಿಸದೆ ಇದ್ದರೆ ಎತ್ತರದ ಜಾರು ಬಂಡೆ ಏರಿ ಜುಯ್ಯನೇ ಜಾರುವಾಸೆ. ಯಾರ್ಯಾರು ಬರ್ತೀರಿ ಹೇಳಿ ನನ್ನೊಟ್ಟಿಗೆ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

Leave a Reply

Back To Top