ಕಾವ್ಯ ಸಂಗಾತಿ
ಗಜಲ್
ಡಾ.ಮಮತ
ನಿನ್ನ ನಗೆಯ ಜಾಡು ಹಿಡಿದು ನಡೆದರೂ ನಿನ್ನ ಸುಳಿವೇ ಇಲ್ಲ
ಧ್ಯಾನದಿ ಮೈಮರೆತ ನಿನ್ನ ಪ್ರೀತಿಯ ಅಪ್ಪಿದರೂ ನಿನ್ನ ಸುಳಿವೇ ಇಲ್ಲ
ಹಗಲ ಹಂಬಲ ಇರುಳಿಂಗಿತವ ಹೊರಹಾಕಿ ಕಾದಿರುವೆ ಕನಸ ಬದಿಗೆ ಸರಿಸಿ
ನಿನ್ನನೇ ಧ್ಯಾನಿಸಿ ಈ ಪ್ರೇಮ ಭಿಕ್ಷೆಗಾಗಿ ಕಾಯುತ್ತಿದ್ದರೂ ನಿನ್ನ ಸುಳಿವೇ ಇಲ್ಲ
ದಿಕ್ಕು ದಿಕ್ಕಿಗೂ ಹುಡುಕಿ ಬಿಕ್ಕಿ ಬಿಕ್ಕಿ ಅಳುತಲಿ ಕಣ್ಣೀರ ಅಭಿಷೇಕ
ವಿರಹದಾರತಿಯ ಬೆಳಗಿ ಬೇಡಿದರೂ ನಿನ್ನ ಸುಳಿವೇ ಇಲ್ಲ
ಜನ್ಮ ಜನ್ಮಕೂ ಮುಂದಿನೇಳು ಜನ್ಮಕೂ ನೀನೇ ನನ್ನ ಸಖ
ಇಂದಿಗೆ ಈ ವಿರಸವಳಿದು ಶೃಂಗಾರ ಮೈದೋರಿದರು ನಿನ್ನ ಸುಳಿವೇ ಇಲ್ಲ
ಎದೆಯ ಬೆಳಗು ಮಮತೆ’ಯ ದೀಪ ಉರಿಸುತ ಧಗ ಧಗಿಸುತಿದೆ
ವಿರಹದ ಬೆಂಕಿಯಲಿ ಬೆಂದು ಸುಡುತ್ತಿದ್ದರೂ ನಿನ್ನ ಸುಳಿವೇ ಇಲ್ಲ
ತುಂಬಾ ಚೆನ್ನಾಗಿದೆ ಸೂಪರ್ ❤