ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಪ್ರತಿ ಮಂಗಳವಾರ ಬರೆಯಲಿದ್ದಾರೆ

ಮಹಿಳೆ ಮತ್ತು ಶೈಕ್ಷಣಿಕ ಅರಿವು

ಮಹಿಳೆ ಮತ್ತು ಶೈಕ್ಷಣಿಕ ಅರಿವು ಎಂಬ ವಿಷಯದ ಬಗ್ಗೆ ಪ್ರಸ್ತಾಪಿಸುವ ಮೊದಲು ಮಹಿಳೆ ಎಂದರೆ ಯಾರು ಎಂಬುದರ ಚೌಕಟ್ಟನ್ನು ಅನಾವರಣಗಿಳಿಸಬೇಕಿದೆ. ಹಾಗಾದರೆ ಮಹಿಳೆ ಜೈವಿಕ ಘಟಕವೋ ಅಥವಾ ಸಾಮಾಜಿಕ ಘಟಕವೋ ?

ಮಹಿಳೆಯನ್ನು ಜೈವಿಕ ಘಟಕ ಅಂದರೆ ಲಿಂಗ (sex) ಆಧಾರದ ಮೇಲೆ ನೋಡಿದರೆ ಜೈವಿಕ ಆಧಾರದಲ್ಲಿ ಮಾನವನ ದೈಹಿಕ ರಚನೆ ಹಾಗೂ ಜೈವಿಕ ಗುಣ ಬದಲಾವಣೆಯಿಂದ ತಿಳಿಯಬಹುದಾಗಿದೆ ಹಾಗೂ ಸಾಮಾಜಿಕ ಘಟಕ ಅಂದರೆ ಲಿಂಗಬೇಧ (Gender)  ಆಧಾರದ ಮೇಲೆ ನೋಡಿದಾಗ ಸಾಮಾಜಿಕವಾಗಿ ಸಮಾಜದ ನಿರೀಕ್ಷೆಯಾಗಿದೆ, ಮಹಿಳೆ ಪುರುಷರನ್ನು ನೋಡುವ ದೃಷ್ಠಿಯಿಂದ ಲಿಂಗಬೇಧವನ್ನು ನಿರ್ಧರಿಸುತ್ತಾರೆ.  ಆದ್ದರಿಂದಲೇ ಸಿಮೊನ್‌ ದ ಬೋವೆ ಎಂಬುವರು ಹೆಣ್ಣು ಹೆಣ್ಣಾಗಿ ಹುಟ್ಟುವುದಿಲ್ಲ ಹೆಣ್ಣಾಗಿ ರೂಪಿತವಾಗುತ್ತಾಳೆ ಎಂದಿದ್ದಾರೆ.  ಮಹಿಳೆಯನ್ನು ಸಾಮಾಜೀಕರಣದ ಮೂಲಕ ಮಹಿಳೆಯನ್ನಾಗಿಸುವ ಪ್ರಕ್ರಿಯೆ ಎನ್ನಬಹುದು.

    ಈ ಹಿನ್ನೆಲೆಯಲ್ಲಿ ನನ್ನ ಉಪನ್ಯಾಸದಲ್ಲಿ ಮಹಿಳೆಯನ್ನು ಸಾಮಾಜಿಕ ಘಟಕವಾಗಿ ಗುರುತಿಸಿಕೊಂಡು ಮಾತನಾಡುತ್ತೇನೆ.  ಇನ್ನು ಮಹಿಳೆಯನ್ನು ವಿಶೇಷವಾಗಿ ದಲಿತ ಮಹಿಳೆ, ಬಡ ಮಹಿಳೆ, ಅಲ್ಪಸಂಖ್ಯಾತ ಮಹಿಳೆ ಎಂದೆಲ್ಲಾ ವಿಭಾಗಿಸದೇ ಇಡೀಯಾಗಿ ಮಹಿಳೆ ಎಂದು ಪರಿಭಾವಿಸಿ ಸಾಮಾಜಿಕವಾಗಿ ಮಹಿಳೆ ಎಂಬ ಹಿನ್ನೆಲೆಯಲ್ಲಿ ಮಾತನಾಡುತ್ತೇನೆ.

    ಇನ್ನು ಶಿಕ್ಷಣ ಎಂದಾಕ್ಷಣ ಶಾಲೆ, ಸಾಕ್ಷರತೆ ಹಾಗೂ ಶಿಕ್ಷಣ ಎಂಬ ಪದವನ್ನು ಪರ್ಯಾಯವಾಗಿ ಬಳಸುವರುಂಟು ಆದರೆ ಶಿಕ್ಷಣ ಎಂದರೆ  ಶಾಲೆ ಹಾಗೂ ಸಾಕ್ಷರತೆಗಿಂತ ವಿಶಾಲ ಅರ್ಥವನ್ನು ಹೊಂದಿದೆ. ಆದಾಗ್ಯೂ ರವೀಂದ್ರನಾಥ ಠಾಗೂರ ಅವರು ಹೇಳಿರುವಂತೆ ಶಾಲೆಯ ಚಟುವಟಿಕೆಗಳು ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡುತ್ತವೆ. ಇವೆಲ್ಲವೂ ಒಂದು ಮತ್ತೊಂದನ್ನು ಯಾವಾಗಲೂ ಪ್ರತಿಬಿಂಬಿಸುತ್ತಿರುತ್ತವೆ. ಈ ಪ್ರಕ್ರಿಯೆಯಿಂದ ಕೆಲವು ಕುಶಲತೆಗಳು ಹೊರಬರುತ್ತವೆ. ಎಂದಿದ್ದಾರೆ ಆದ್ದರಿಂದಲೇ ಶಿಕ್ಷಣದ ಮಟ್ಟವನ್ನು ಇಂದಿಗೂ ಸಾಕ್ಷರತೆಯ ದರದ ಅಂಕಿ ಸಂಖ್ಯೆಗಳ ಸೂಚ್ಯಂಕಗಳಿಂದ ಅಳೆಯಬಹುದಾಗಿದೆ. ಈ ಹಿನ್ನೆಲೆಯಿಂದ ಶಾಲೆ ಸಾಕ್ಷರತೆ ಹಾಗೂ ಶಿಕ್ಷಣ ಒಂದಕ್ಕೊಂದು ಪೂರಕ ಅರ್ಥದಲ್ಲಿ ಕಾಣಬಹುದಾಗಿದೆ.

ಮಹಿಳೆಗೆ ಶೈಕ್ಷಣಿಕ ಅರಿವು ಏಕೆ ಅವಶ್ಯಕ ಎಂಬುದನ್ನು ನೋಡಿದಾಗ, ಶಿಕ್ಷಣದಿಂದ ಅಭಿವೃದ್ಧಿ ಎಂಬುದಕ್ಕಿಂತ ಶಿಕ್ಷಣವೇ ಅಭಿವೃದ್ಧಿ ಎಂಬ ಮಾತಿನಂತೆ ಮಹಿಳೆ ಸಮಾಜದಲ್ಲಿ ಸಬಲೀಕರವಾಗಬೇಕಾದರೆ, ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅದರ ಕೀಲಿ ಕೈ ಎಂದರೆ ತಪ್ಪಾಗಲಾರದು. ಮಾನವ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಶಿಕ್ಷಣ ಮತ್ತು ಅಭಿವೃದ್ಧಿ ಒಂದು ಅವಿಭಾಜ್ಯವಾಗಿವೆ. ಅಮರ್ತ್ಯಸೇನ್‌ ಅವರು ಶಿಕ್ಷಣಕ್ಕೆ ಇರುವ ಪ್ರಾಮುಖ್ಯತೆಯನ್ನು  ಅವರ ಅಧ್ಯಯನಗಳಲ್ಲಿ ಸವಿವರವಾಗಿ ಪ್ರತಿಪಾದಿಸಿದ್ದಾರೆ. ಹಾಗೆಯೇ ಮಹಿಳೆಯರನ್ನು ಹೇಗೆ ಸಬಲೀಕರಿಸಬಲ್ಲದು ಎಂಬುದನ್ನು ಒತ್ತಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರಿಗೆ ನೀಡಿದ ಶಿಕ್ಷಣವು ತಲೆಮಾರುಗಳಿಗೆ ವರ್ಗಾಯಿಸಲ್ಪಡುತ್ತದೆ ಎಂಬುದು ಸಾರ್ವಜನಿಕ ಸತ್ಯವಾಗಿದೆ.. ಆದ್ದರಿಂದಲೇ Human Development Index ದಲ್ಲಿ ಶಿಕ್ಷಣ ಒಂದು ಪ್ರಮುಖ ಸೂಚಿಯಾಗಿದೆ ಎನ್ನಬಹುದು. ಮಾರ್ತಾ ಮುಸ್ಬುನ್‌ ಮತ್ತು ಗ್ಲೋವೇರಿ ಅವರು ಸಂಪಾದಿಸಿರುವ “ ವಿಮನ್‌ ಕಲ್ಚರ್‌ ಅಂಡ್‌ ಡೆವೆಲಪ್‌ಮೆಂಟ್ “ ಎಂಬ ಪುಸ್ತಕದಲ್ಲಿ ಮಹಿಳಾ ಹಕ್ಕುಗಳ ಪ್ರತಿಪಾದನೆಗೆ ಮತ್ತು ಆಕೆಯ ಸಬಲೀಕರಣಕ್ಕೆ ಶಿಕ್ಷಣ ಹೇಗೆ ಪೂರಕ ಎಂಬುದನ್ನು ಒತ್ತಿ ಹೇಳಿದ್ದಾರೆ.

     ಈ ಹಿನ್ನೆಲೆಯಲ್ಲಿ ಮಹಿಳೆ ಮತ್ತು ಶೈಕ್ಷಣಿಕ ಅರಿವು ಹೇಗೆ ಎಂಬುದರ ಬಗ್ಗೆ ಮಾತನಾಡುವಾಗ 3 ಕಾಲಘಟ್ಟಗಳಲ್ಲಿ ಮಾತನಾಡುವೆ

1. ಚಾರಿತ್ರಿಕವಾಗಿ ಮಹಿಳೆ ಮತ್ತು ಅಕ್ಷರ

2. ವರ್ತಮಾನದಲ್ಲಿ ಶಿಕ್ಷಣದ ಅರಿವಿನಿಂದ ಮಹಿಳೆಗೆ ಆದ ಸ್ಥಿತ್ಯಂತರಗಳು ಹಾಗೂ

3. ಇಷ್ಟೆಲ್ಲಾ ಆದರೂ ಇನ್ನೂ ಮಹಿಳೆ ಮುಖ್ಯವಾಹಿನಿಗೆ ಬರಲು ಇರುವ ಅಡೆತಡೆಗಳ ಬಗ್ಗೆ ಚರ್ಚಿಸಲು ಬಯಸುವೆ .

 ಚಾರಿತ್ರಿಕವಾಗಿ ಅಕ್ಷರ ಮತ್ತು ಮಹಿಳೆ

ವೇದಕಾಲದ ಶಿಕ್ಷಣ ಪದ್ಧತಿ – ಗುರುಕುಲ ಪದ್ಧತಿ ಇತ್ತು.  ಮಹಿಳೆಯರಲ್ಲಿ ಮೈತ್ರೇಯಿ ಗಾರ್ಗಿ ಎಂಬ ಮಹಿಳೆಯರು ಶಿಕ್ಷಣ ಪಡೆದ ಉಲ್ಲೇಖಗಳನ್ನು ಇತಿಹಾಸದ ಪುಟದಲ್ಲಿ ಕಾಣುತ್ತೇವೆ.  ಆದರೆ ಇಲ್ಲಿ ಕೇವಲ ಕೆಲವು ಪ್ರಾಬಲ್ಯ ಪಡೆದ ವರ್ಗ ಹಾಗೂ ಮೇಲ್ಜಾತಿಯ ಮಹಿಳೆಯರು ಮಾತ್ರ ಅವಕಾಶ ಪಡೆದಿದ್ದರು ಎಲ್ಲ ವರ್ಗ ಎಲ್ಲ ಜಾತಿಯ ಮಹಿಳೆಯರು ಮುಖ್ಯವಾಹಿನಿಯಲ್ಲಿ ಅವಕಾಶಪಡೆದಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.

ಬೌದ್ಧಕಾಲದ ಶಿಕ್ಷಣ ಪದ್ಧತಿ – ಪ್ರಾರಂಭದಲ್ಲಿ ಮಹಿಳಾ ಶಿಕ್ಷಣಕ್ಕೆ ವಿರೋಧವಿದ್ದರೂ ಗೌತಮಬುದ್ಧನ ಮಲತಾಯಿ ಮಹಾಪ್ರಜಾಪತಿ ಕಾರಣದಿಂದ ಬೌದ್ಧ ಬಿಕ್ಷುಣಿಯರಿಗೆ ತಕ್ಕಮಟ್ಟಿನ ಶಿಕ್ಷಣದ ಅವಕಾಶ ಸಿಕ್ಕಿದ್ದನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ.  ಥೇರಿ ಗಾಥಾ ಎಂಬ ಮಧು ವೆಂಕಾರೆಡ್ಡಿಯವರ ಪುಸ್ತಕದಲ್ಲಿ ಬಿಕ್ಷುಣಿಯರ ಸಂಘಕ್ಕೆ ಅವಕಾಶ ಹಾಗೂ ಥೇರಿ ಗಾಥಾ ಗೀತಗುಚ್ಚದ ಮೂಲಕ ಮಹಿಳೆಗೂ ಒಂದು ವ್ಯಕ್ತಿತ್ವ ಇದೆ ಎಂದು ಅನುಮೋದಿಸಿದ ಕಾಲ ಎಂದಿದ್ದಾರೆ.

12 ನೇಯ ಶತಮಾನದ ಶರಣರ ಕಾಲ ಮಹಿಳೆಗೆ ಸಮಾನ ಅವಕಾಶದ ಅನಾವರಣ ಕಾಲ -ಏಕೆಂದರೆ ಶರಣರು ಮಹಿಳೆಯರಿಗೆ ಸಮಾನ ಅವಕಾಶ ನೀಡುವದರ ಮೂಲಕ ವ್ಯಕ್ತಿ ಗೌರವವನ್ನು, ಸ್ವಾಭಿಮಾನವನ್ನು ಭಿತ್ತಿದರು. ಉದಾಹರಣೆಗೆ

 ಹೆಣ್ಣು ಹೆಣ್ಣಲ್ಲ; ಹೆಣ್ಣು ರಕ್ಕಸಿಯಲ್ಲ

ಹೆಣ್ಣು ಸ್ವತ: ಕಪಿಲ ಸಿದ್ಧಮಲ್ಲಿಕಾರ್ಜುನ

ಎನ್ನುವ ಮೂಲಕ ಹಾಗೂ

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ಒಳಗೆ ಸುಳಿವಾತ್ಮನು ಹೆಣ್ಣೂ ಅಲ್ಲ,

ಗಂಡೂ ಅಲ್ಲ ರಾಮನಾಥ, ಹಾಗೂ

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ

 ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ

ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ

 ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಎಂದು ಹೇಳುವ ಮೂಲಕ

ಮಹಿಳೆಗೆ ಸಮಾನತೆಯನ್ನು,ಗೌರವವನ್ನು, ಸ್ವಾಭಿಮಾನವನ್ನು ತಂದುಕೊಟ್ಟರು ಅಷ್ಟೇ ಅಲ್ಲದೇ ಕೇವಲ ಪ್ರಾಬಲ್ಯ ವರ್ಗ ಹಾಗೂ ಪ್ರಬಲ ಜಾತಿಗೆ ಮಾತ್ರ ಅವಕಾಶಗಳನ್ನು ಮೀಸಲಿರಿಸದೇ, ಸಾಮಾನ್ಯ ಮಹಿಳೆಯರಾದ  ಕಸಗೂಡಿಸುವ ಸತ್ಯಕ್ಕನಿಗೂ, ಸೂಳೆ ಸಂಕವ್ವೆಗೂ ಹೀಗೆ ಹಲವಾರು ಕೆಳಸ್ತರದ ಶರಣ ಶರಣೆಯರಿಗೆ ಶಿಕ್ಷಣ ನೀಡುವ ಮೂಲಕ ವಚನಗಳ ರಚನೆಗೆ ಪ್ರೇರಣೆಯಾದರು. ಹೀಗೆ ಸಮಾಜದಲ್ಲಿ ಶೈಕ್ಷಣಿಕ ಅವಕಾಶಗಳನ್ನು ತೆರೆದಿಟ್ಟು ಎಲ್ಲರನ್ನೂ ಸಾಕ್ಷರತೆಯೆಡಗೆ ಒಯ್ದರು ಹೀಗೆ ಸಮಾಜವನ್ನು ಪರಿವರ್ತನೆ ಮಾಡಿದ್ದನ್ನು ಕಾಣಬಹುದಾಗಿದೆ. ಅಂದರೆ 12 ನೇ ಶತಮಾನ ಮಹಿಳೆಗೆ ಶೈಕ್ಷಣಿಕ ಅರಿವನ್ನು ಮೂಡಿಸುವದರ ಮೂಲಕ ಕ್ರಾಂತಿಯನ್ನೇ ಮಾಡಿದ ಕಾಲ ಎನ್ನಬಹುದು

ಮಹಮ್ಮದೀಯರ ಕಾಲದ ಶಿಕ್ಷಣ ಪದ್ಧತಿ – ಮಕ್ತಾಬಾ ಹಾಗೂ ಮದರಸಾಗಳಲ್ಲಿ ಮಹಿಳೆಗೆ ಮುಕ್ತ ಅವಕಾಶ ಇರಲಿಲ್ಲ ಮಹಿಳಾ ಶಿಕ್ಷಣದ ಹಿನ್ನಡೆಯನ್ನು ಚಾರಿತ್ರಿಕ ಪುಟಗಳಲ್ಲಿ ಗುರುತಿಸಬಹುದು

ಮಹಿಳಾ ಶಿಕ್ಷಣದ ‘ಜ್ಯೋತಿ’ಯನ್ನು ಹೊತ್ತಿಸಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಸಾವಿತ್ರಿಬಾಯಿ ಫುಲೆ ಜ್ಞಾನವೇ ಅರಿವೆಂಬ ಬೆಳಕಿನ ಮೂಲ! ಅಕ್ಷರವೇ ಜ್ಞಾನದ ಮೂಲ! ಕ್ರಾಂತಿಯೇ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ.. ಹೀಗೆ ಮಹಿಳೆಯರಿಗೆ ಅಕ್ಷರದ ಅರಿವು ಮೂಡಿಸುವ ಕ್ರಾಂತಿಯ ಮೂಲಕ ಸಾಮಾಜಿಕ ಪರಿವರ್ತನೆಯ ಬೀಜ ಬಿತ್ತಿ, ಭಾರತದಲ್ಲಿ ಮಹಿಳೆಯರಿಗೆ ಹೊಸ ದಿಕ್ಕು ತೋರಿಸಿದವರು ಸಾವಿತ್ರಿಬಾಯಿ ಫುಲೆ ಅವರು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಪ್ರಚಲಿತದಲ್ಲಿರುವ ನಾಣ್ಣುಡಿಗೆ ಸಾಕ್ಷಾತ್ ದಂತಕಥೆಯಂತೆ ಉದಾಹರಣೆಯಾಗಿದ್ದಾರೆ ಸಾವಿತ್ರಿಬಾಯಿಯವರು. ಕೇವಲ ತಾನು ವಿದ್ಯೆ ಕಲಿತಿದ್ದಷ್ಟೇ ಅಲ್ಲದೇ, ತಾನೇ ಸ್ವತಃ ಶಿಕ್ಷಕಿಯಾಗಿ ಎರಡು ಶತಮಾನಗಳ ಹಿಂದೆಯೇ ನೂರಾರು ಹೆಣ್ಣುಮಕ್ಕಳಿಗೆ ವಿದ್ಯೆ ನೀಡಿದ್ದಷ್ಟೇ ಅಲ್ಲದೆ ಹೆಣ್ಣು ಮಕ್ಕಳಿಗಾಗಿ ಹಲವಾರು ಶಾಲೆಗಳನ್ನು ಸ್ಥಾಪಿಸಿ, ಭಾರತದಲ್ಲಿ ಶಿಕ್ಷಣಕ್ಕೇ ಅದರಲ್ಲೂ ಮಹಿಳಾ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು ಎಂದೇ ಹೇಳಬಹುದು. ತನ್ಮೂಲಕ ನೂರಾರು ಹೆಣ್ಣುಮಕ್ಕಳು ವಿದ್ಯೆ ಕಲಿತು ಈಗಿನ ಕಾಲಮಾನದಲ್ಲಿ ಮಹಿಳೆಯರು ದೇಶವನ್ನೇ ಬೆಳಗುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಜ್ಯೋತಿ ಸಾವಿತ್ರಿಬಾಯಿ ಫುಲೆ

ಬ್ರಿಟಿಷರ ಕಾಲದ  ಅಥವಾ ಸ್ವತಂತ್ರ್ಯದ ಪೂರ್ವದಲ್ಲಿ ಶಿಕ್ಷಣ ಪದ್ಧತಿ –  ಮೆಕಾಲೆ ವರದಿಯಂತೆ ಶಿಕ್ಷಣಕ್ಕಾಗಿ 1 ಲಕ್ಷ ಹಣ ಮೀಸಲು, ವುಡ್ಸ ವರದಿಯಂತೆ ಮಹಿಳಾ ಶಿಕ್ಷಣಕ್ಕೆ ಸಲಹೆ, 1882 ರ ಹಂಟರ್‌  ಆಯೋಗದಿಂದ ಮಹಿಳೆಯರಿಗೆ ವಿಶೇಷ ವಿಷಯಗಳಲ್ಲಿ ಮಾತ್ರ ಶಿಕ್ಷಣದ ಶಿಫಾರಸ್ಸು, 1917 ರ ಸ್ಯಾಡ್ಲರ್‌ ಆಯೋಗದಲ್ಲಿ ಮಹಿಳೆಯರಿಗಾಗಿ ಪರದಾ ಶಾಲೆಗಳ ಜಾರಿ ಇತ್ಯಾದಿಗಳನ್ನು ಗುರುತಿಸಬಹುದು. ಆದರೆ ಎಲ್ಲ ವರ್ಗ ಹಾಗೂ ಜಾತಿಯ ಮಹಿಳೆಯರಿಗೆ ಸಂಪೂರ್ಣ ಸಾಕ್ಷರತೆಯ ಅರಿವು ಎಂಬುದು ಮರಿಚಿಕೆಯೇ ಆಗಿತ್ತು ಎನ್ನಬಹುದು.

ಸ್ವಾತಂತ್ರೋತ್ತರ ಕಾಲದ ಶಿಕ್ಷಣ ಪದ್ಧತಿ – ರಾಧಾಕೃಷ್ಣನ್‌ ಆಯೋಗ 1948 ರಲ್ಲಿ ಹಾಗೂ 1952-53 ರಲ್ಲಿ ಮೊದಲಿಯಾರ ಶಿಕ್ಷಣ ಆಯೋಗ ಮಹಿಳಾ ಶಿಕ್ಷಣದ ಸುಧಾರಣೆಗಾಗಿ ಸಲಹೆ ನೀಡಿತ್ತು, 1964-66 ರಲ್ಲಿ ಕೋಠಾರಿ ಶಿಕ್ಷಣ ಆಯೋಗ ಸ್ತ್ರೀ ಶಿಕ್ಷಣದ ಬಗ್ಗೆ ಶಾಲೆಗಳನ್ನು ತೆರೆಯುವ  ಹಾಗೂ ಸಹಶಿಕ್ಷಣ ಪ್ರಾರಂಭಿಸುವ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದ್ದನ್ನು ಸ್ಮರಿಸಬಹುದು.

ಮೇಲೆ ಹೇಳಿದಂತೆ ಚಾರಿತ್ರಿಕವಾಗಿ ಅಲ್ಲಲ್ಲಿ ಆಯೋಗಗಳು, ವರದಿಗಳು ಹಾಗೂ ಸಂಶೋಧನಾ ಗ್ರಂಥಗಳು  ಮಹಿಳೆಗೆ ಅಕ್ಷರದ ಅರಿವಿಗಾಗಿ ಸಲಹೆ ಸೂಚನೆಗಳನ್ನು ನೀಡುತ್ತ ಮಹಿಳಾ ಶಿಕ್ಷಣದ ಅವಕಾಶಗಳನ್ನು ತೆರೆದಿಡುತ್ತಾ ಹೋದವು.  

    ಶಿಕ್ಷಣವು ವಿಶೇಷವಾಗಿ ಮಹಿಳೆಯರನ್ನು ಅಂದರೆ ಸಮಾಜದ ಅಂಚಿನ ಆಚೆ ತಳಲ್ಪಟ್ಟ ಜನರನ್ನು ರಚನಾತ್ಮಕವಾಗಿ ಅಭಿವೃದ್ಧಿಡಿಸುತ್ತದೆ ಎಂಬುದು ಹಕ್ಕು ಆಧಾರಿತ ಚಿಂತಕರ ವಾದ. ಇದರ ಮಹತ್ವ ಅರಿತಿದ್ದ ಸಂವಿಧಾನ ರಚನಾಕಾರರು ಸಂವಿಧಾನದ 45 ನೇ ಪರಿಚ್ಛೇದದಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ  ಆಶಯವನ್ನು ಹೊಂದಿತ್ತಲಾದರೂ  ಪರಿಪೂರ್ಣ ಯಶಸ್ಸು ಸಾಧ್ಯವಾಗಲಿಲ್ಲ. 1976 ರಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಗೆ ವರ್ಗಾವಣೆಯಾಗಿ ಕೇಂದ್ರ ಹಾಗೂ ರಾಜ್ಯದ ಜಂಟಿ ಜವಾಬ್ದಾರಿಗೆ ಒಳಪಟ್ಟಿತು.  ತದ ನಂತರ 93 ನೇ ತಿದ್ದುಪಡೆಯಿಂದ ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಲಾಯಿತು. ಇತ್ತೀಚಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ 6 ರಿಂದ 18 ವರ್ಷ ದವರೆಗೆ ಶಿಕ್ಷಣ ಹಕ್ಕಾಗಿ  ಮಾಡಿದ್ದು,  ಪ್ರಸ್ತುತ ಹೊಸ ಶಿಕ್ಷಣ ನೀತಿ 2020 ರಲ್ಲಿ 3 ವರ್ಷದಿಂದ 18 ವರ್ಷ ಶಾಲಾ ಶಿಕ್ಷಣ ಮಾಡಿದ್ದು ಇವೆಲ್ಲ ಮಹಿಳಾ ಶಿಕ್ಷಣಕ್ಕೆ ಉತ್ತೇಚನಗಳಾಗಿವೆ. ಅಲ್ಲದೇ ಮಹಿಳೆಯ ವಿವಾಹದ ವಯಸ್ಸು 18 ರಿಂದ 21 ಕ್ಕೆ ಮಾರ್ಪಾಡು ಮಾಡುವ ಆಲೋಚನೆಗಳು ಮಹಿಳೆಗೆ ದೈಹಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲಳಾಗುವಂತೆ ಮಾಡಿವೆ. ಆದಾಗ್ಯೂ ಇಷ್ಟೆಲ್ಲಾ ಅವಕಾಶಗಳ ಮಧ್ಯ ಮಹಿಳೆ ಸಂಪೂರ್ಣವಾಗಿ ಶೈಕ್ಷಣಿಕವಾಗಿ ಮುಖ್ಯವಾಹಿನಿಯಲ್ಲಿರುವಳೇ ಎಂಬ ಪ್ರಶ್ನೆ ಕಾಡುತ್ತದೆ. 1991 ರ ಜನಗಣತಿಯಂತೆ ಪುರುಷ ಸಾಕ್ಷರತೆ ಶೇ 64, ಮಹಿಳಾ ಸಾಕ್ಷರತೆ ಶೇ 39 ಹಾಗೂ 2001 ರ ಜನಗಣತಿಯಂತೆ ಪುರುಷ ಸಾಕ್ಷರತೆ ಶೇ 75 ಮಹಿಳಾ ಸಾಕ್ಷರತೆ ಶೇ 54,  2011 ರಲ್ಲಿ ಪುರುಷ ಸಾಕ್ಷರತೆ 82.14 ಮತ್ತು ಮಹಿಳಾ ಸಾಕ್ಷರತೆ ಶೇ 65.46, ಮತ್ತು 2021 ರ ಜನಗಣತಿಯಂತೆ ಪುರುಷ ಸಾಕ್ಷರತೆ ಶೇ 84.70  ಹಾಗೂ ಮಹಿಳಾ ಸಾಕ್ಷರತೆ ಶೇ 70.30 ಇರುವುದನ್ನು ಗಮನಿಸಿದಾಗ ಪುರುಷ ಮಹಿಳೆಯರ ಸಾಕ್ಷರತಾ ಪ್ರಮಾಣದಲ್ಲಿ ಇನ್ನೂ ಅಸಮಾನತೆ ಇದೆ.  ಮಹಿಳೆ ಸಂಪೂರ್ಣವಾಗಿ ಶೈಕ್ಷಣಿಕ ಅರಿವನ್ನು ಪಡೆಯಲು ಆಗಿಲ್ಲ ಎಂಬುದು ಅರಿವಿಗೆ ಬರುತ್ತದೆ. ಇನ್ನು ಈ ಅಂಕಿ ಸಂಖ್ಯೆಗಳಲ್ಲಿ ವರ್ಗವಾರು ಹಾಗೂ ಜಾತಿವಾರು ಮಹಿಳಾ ಸಾಕ್ಷರತೆಯನ್ನು ನೋಡಿದಾಗ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಹಾಗೂ ಬಡವರಲ್ಲಿ  ಅತ್ಯಂತ ವಿಭಿನ್ನವಾಗಿದ್ದನ್ನು ಕಾಣಬಹುದಾಗಿದೆ. ಹೀಗೆ  ಮಹಿಳಾ ಶೈಕ್ಷಣಿಕ ಅರಿವೆಗೆ ವರ್ಗ ಹಾಗೂ ಜಾತಿಗಳ ಪ್ರಬಾವವನ್ನು ಸಹ ಗುರುತಿಸಬಹುದಾಗಿದೆ.

    ವಲ್ಡ ಎಕಾನಾಮಿಕ್‌ ಫೋರಂ ಗ್ಲೋಬಲ್‌ ಜೆಂಡರ್‌ ಗ್ಯಾಪ್‌ 2011 ರ ವರದಿ ಪ್ರಕಾರ ಸಾಕ್ಷರತೆಯಲ್ಲಿ 113 ನೇ ಸ್ಥಾನದಲ್ಲಿತ್ತು ಯುನಿಸೆಫ 11, 2003 ರ ವರದಿಯಲ್ಲಿ ಜಗತ್ತಿನಲ್ಲಿ ಪ್ರತಿ ವರ್ಷ 9 ಮಿಲಿಯನ್‌ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗೆ ಉಳಿಯುತ್ತಾರೆ ಎಂದು ಜೀನೆವಾದಲ್ಲಿ ವ್ಯಕ್ತಪಡಿಸಿದೆ. ಇದರಿಂದ ಇಡೀ ಜಗತ್ತಿನಲ್ಲಿ ಮಹಿಳಾ ಶಿಕ್ಷಣದಲ್ಲಿಯ  ತಾರತಮ್ಯ ಹರಡಿದೆ ಎಂಬುದು ಸ್ಪಷ್ಟವಾಗುತ್ತದೆ.

1996 ರಲ್ಲಿ ಪ್ರೋಬ್‌ ರಿಪೋರ್ಟ ಪ್ರಕಾರ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಇರುವ ಸಾಮಾಜಿಕ ಅಡೆತಡೆಗಳನ್ನು ತಿಳಿಸುತ್ತಾ ಅವುಗಳನ್ನು ಪರಿಗಣಿಸಲು ಎಚ್ಚರಿಸಿದೆ.

2011 ರಲ್ಲಿಆಸೆರ ವರದಿಯಂತೆ 11 ರಿಂದ14 ವರ್ಷದ ಶೆ 6 ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲ ಎಂಬ ಅಘಾತಕಾರಿ ವಿಷಯವನ್ನು ಹೊರಹಾಕಿದೆ.

ಆದ್ದರಿಂದ 2000 ರಲ್ಲಿ ಸರ್ವ ಶಿಕ್ಷಣ ಅಭಿಯಾನ, ತದನಂತರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಸಮಗ್ರಶಿಕ್ಷಣ ಅಭಿಯಾನ, Education for all,  Sustainable developmeņt, ಮಿಲೇನಿಯಂ ಡೆವಲಪ್‌ ಮೆಂಟ ಹೀಗೆ ಹತ್ತಾರು ಯೋಜನೆಗಳು ಹಾಗೂ ಬಾ ಬಾಲೆ ಶಾಲೆಗೆ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಕೂಲಿಯಿಂದ ಶಾಲೆಗೆ, ಬೇಟಿ ಬಚಾವೂ ಬೇಟಿ ಪಡಾವೂ ಎಂಬ ಅನೇಕ ಅಂಶಗಳು ಮಹಿಳಾ ಶಿಕ್ಷಣಕ್ಕೆ ಪ್ರೇರಣೆ ಆಗಿವೆ.

54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನ – 2020 ಆಚರಣೆ ಆನ್ಲೈನ್‌ ಮೂಲಕ ನಡೆದದ್ದನ್ನುನೆನಪಿಸಿಕೊಳ್ಳುತ್ತಾ,ಈ ವರ್ಷದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ

2020 ರಲ್ಲಿ ‘ಅಕ್ಷರ ಬೋಧನೆ ಮತ್ತು ಕೋವಿಡ್ 19 ಬಿಕ್ಕಟ್ಟು ಹಾಗೂ ಆನಂತರದ ಕಲಿಕೆ’ಗೆ ಒತ್ತು ನೀಡಲಾಗುತ್ತಿದೆ. ಹೊಸ ಸಾಕ್ಷರತಾ ಯೋಜನೆ ‘ಪಡ್ನಾ ಲಿಖ್ನಾ ಅಭಿಯಾನ’ 2030 ರೊಳಗೆ ಸಂಪೂರ್ಣ ಸಾಕ್ಷರತೆ ಗುರಿ ಸಾಧನೆಗೆ ನೆರವಾಗಲಿದೆ ಎಂದು  ಹೇಳಿದ್ದು ಎಲ್ಲರ ಅರಿವಿಗೂ  ಇದೆ.  ಈ ಅಭಿಯಾನದ ಪ್ರಧಾನ ಗುರಿ ಎಂದರೆ 57 ಲಕ್ಷ ಅನಕ್ಷರಸ್ಥರಿಗೆ  ಅಕ್ಷರಗಳನ್ನು ಕಲಿಸುವುದು, ದೇಶಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇರುವ 15 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಅನಕ್ಷರಸ್ಥರಿಗೆ ಕಲಿಸುವ ಉದ್ದೇಶವಿದೆ. ಈ ನಿಗದಿತ ಗುಂಪಿನಲ್ಲಿ ಬಹುತೇಕ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ದುರ್ಬಲ ವರ್ಗದವರಿದ್ದಾರೆ. ಈ ಯೋಜನೆ ಅಡಿ ಇತ್ತೀಚಿನ ಜನಗಣತಿ ಪ್ರಕಾರ ಇತರೆಯವರ ಪೈಕಿ ಮಹಿಳಾ ಸಾಕ್ಷರತೆ ಶೇ.60ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.

ಆದಾಗ್ಯೂ ಸಹ ಪ್ರತಿಶತ ನೂರರಷ್ಟು ಸಾಧನೆಯಾಗಿಲ್ಲ ಅದಕ್ಕೆ ಕಾರಣ ಕೇವಲ ಯೋಜನೆಗಳಿಂದ ಮಾತ್ರ ಮಹಿಳಾ ಶೈಕ್ಷಣಿಕ ಅರಿವು ಸಾಧ್ಯವಾಗುವದಿಲ್ಲ ನಾಗರಿಕ ಸಮಾಜದ ಸಕ್ರೀಯ  ಸಹಬಾಗಿತ್ವ, ಸಾಮಾಜಿಕ ಅಡೆತಡೆಗಳ ನಿವಾರಣೆ ಅಗತ್ಯ ಇದರಿಂದ ಮಹಿಳಾ ಶೈಕ್ಷಣಿಕ ಅರಿವು ಮೂಡಲು ಸಾಧ್ಯ ಎನ್ನಬಹುದು.

 ವರ್ತಮಾನದಲ್ಲಿ ಶಿಕ್ಷಣದ ಅರಿವಿನಿಂದ ಮಹಿಳೆಗೆ ಆದ ಸ್ಥಿತ್ಯಂತರಗಳನ್ನು ಗಮನಿಸಿದಾಗ

ಶೈಕ್ಷಣಿಕ ಅವಕಾಶಗಳಿಂದ ಮಹಿಳೆ ತಕ್ಕ ಮಟ್ಟಿಗೆ ಸಬಲೀಕರಣಗೊಳ್ಳುತ್ತಾ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಖೃತಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾಳೆ. ಇಂದು ಅನೇಕ ರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾಳೆ ಆದರೆ ಮಹಿಳೆಯರಲ್ಲಿ ಕೇವಲ ಪ್ರಾಬಲ್ಯ ಪಡೆದ ವರ್ಗ ಅಥವಾ ಜಾತಿಯವರು ಶೈಕ್ಷಣಿಕ ಅರಿವನ್ನು ಪಡೆದರೆ ಸಾಲದು ಸಮಾಜದ ಕೊಟ್ಟಕೊನೆಯ ಮಹಿಳೆಗೂ ಶೈಕ್ಷಣಿಕ ಅರಿವು ಮೂಡಿದರೆ ಮಾತ್ರ ಮಹಿಳೆ ಸಬಲೀಕರಣ ಎನ್ನಬಹುದು.  ಆಯ್ದ ಮಹಿಳೆಯರು ಕೆಲವು ರಂಗದಲ್ಲಿ ಪ್ರತಿಭಾವಂತರಾದರೆ ಇಡೀ ಮಹಿಳಾ ಸಮಾಜದಲ್ಲಿ ಸಬಲೀಕರಣವಾಗಿದೆ ಎನ್ನಲಾಗದು. ಶೈಕ್ಷಣಿಕ ಅರಿವನ್ನು ಪಡೆದ ಮಹಿಳೆ ಸಮಾಜದಲ್ಲಿ ಕುಟುಂಬದಲ್ಲಿ ಎಷ್ಟರ ಮಟ್ಟಿಗೆ ಅನ್ವಯಿಸಿಕೊಳ್ಳುತ್ತಿದ್ದಾಳೆ ಎಂಬುದು ಮುಖ್ಯ. ಶೈಕ್ಷಣಿಕ ಅರಿವನ್ನು ಪಡೆದರೂ ನಾಲ್ಕು ಗೋಡೆಗಳ ಮಧ್ಯವೇ ಹೆಚ್ಚಾಗಿ ಬದುಕುವ ಮಹಿಳೆಯರು ಏಕೆ ಇದ್ದಾರೆ ಎಂಬ ಪ್ರಶ್ನೆಯೂ ಸಹ ಮೂಡುವುದು.

 ಮಹಿಳೆ ಮುಖ್ಯವಾಹಿನಿಗೆ ಬರಲು ಇರುವ ಅಡೆತಡೆಗಳು

ಪ್ರೋ ಟಿ ಆರ್‌ ಚಂದ್ರಶೇಖರ ಅವರು ಲಿಂಗಸಂಬಂಧಗಳು ಮತ್ತು ಅಭಿವೃದ್ಧಿ ಗ್ರಂಥದಲ್ಲಿ ಮಹಿಳೆ ಪುರುಷ ಸಾಕ್ಷರತೆ ಬಗ್ಗೆ ಚರ್ಚಿಸುತ್ತಾ ಕೆಳಜಾತಿಗಳ ಮಹಿಳಾ ಶೈಕ್ಷಣಿಕ ಅಂತರ ಹೆಚ್ಚಾಗಿದ್ದು ಅದನ್ನು ನಿರ್ಲಕ್ಷಿಸಬಾರದು ಎಂದು ತಿಳಿಸಿದ್ದಾರೆ.

 ಪ್ರೋಬ್‌ ರಿಪೋರ್ಟ 1999 ರಲ್ಲಿ ಶಾಲೆ ದೊರೆಯುವಿಕೆಯ ಬಗ್ಗೆ ಕೇವಲ ಭೌತಿಕ ಅಂತರವನ್ನು ಮಾತ್ರ ಪರಿಗಣಿಸದೇ ಸಾಮಾಜಿಕ ಅಂತರವನ್ನು ಪರಿಗಣಿಸಬೇಕು ಎಂದು ತಿಳಿಸಿದೆ.

ಮೇಲಿನ ಅನೇಕ ವರದಿ, ಸಂಶೋಧನಾ ಗ್ರಂಥವನ್ನು ಪರಿಗಣಿಸಿದಾಗ ಮಹಿಳೆ ಶೈಕ್ಷಣಿಕ ಅರಿವು ಬೆಳೆಯಲು ಇರುವ ಅಡೆತಡೆಗಳನ್ನು ಈ ರೀತಿ ಪಟ್ಟಿ ಮಾಡಬಹುದು, ಸಾಮಾಜಿಕವಾಗಿ ಜಾತಿ ಹಾಗೂ ವರ್ಗದಲ್ಲಿರುವ ಸಂಘರ್ಷಗಳು, ಆರ್ಥಿಕವಾಗಿ ಹಿಂದೆ ತಳ್ಳುವ ಅಂಶಗಳು, ರಾಜಕೀಯ ಪ್ರಾಬಲ್ಯ ಅಂಶಗಳು, ಸಾಂಸ್ಕೃತಿಕವಾಗಿ  ಲಿಂಗಬೇಧದ ಅಂಶಗಳನ್ನು ಮಹಿಳೆಗೆ ತಳ್ಳಲ್ಪಡುವ ಅಂಶಗಳಾಗಿದ್ದು ಅವುಗಳನ್ನು ನಿವಾರಿಸಿ ಮಹಿಳೆಗೆ ಸಂಪೂರ್ಣವಾಗಿ ಶೈಕ್ಷಣಿಕ ಅರಿವನ್ನು ಮೂಡಿಸಬೇಕಾಗಿದೆ. ಸಮಾಜದ ಎಲ್ಲ ಮಹಿಳೆಯರಿಗೆ ಶೈಕ್ಷಣಿಕವಾಗಿ ಅರಿವು ಮೂಡಿದರೆ ಚಾರಿತ್ರಿಕ, ಸಮಾಜೋ ಆರ್ಥಿಕ ಮತ್ತು ರಾಜಕೀಯ ಅಂಶಗಳಿಗೆ ಉತ್ತರ ನೀಡುವ ಸಾಮರ್ಥ್ಯವನ್ನು ಶಿಕ್ಷಣ ನೀಡುತ್ತದೆ.  ಮಹಿಳೆಗೆ ಮಾಹಿತಿ ಪಡೆಯುವ, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ, ತಮ್ಮ ಭೌತಿಕ ಮತ್ತು ಸಾಮಾಜಿಕ ಸ್ಥಿತಿಗಳ ಬಗ್ಗೆ ಅಮೂಲಾಗ್ರ ಪರಿವರ್ತನೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆರ್ಥಿಕ ಸ್ವಾವಲಂಬಿಯಾಗಲು ನಿರ್ಣಯ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ.

ಒಟ್ಟಾರೆಯಾಗಿ ಮಹಿಳೆಗೆ ಏಕೆ ಶೈಕ್ಷಣಿಕ ಅರಿವು ಅಗತ್ಯ ಎಂಬುದನ್ನು ಅರ್ಥೈಸಿಕೊಂಡು ಹೇಗೆ ಶೈಕ್ಷಣಿಕ ಅರಿವನ್ನು ಮೂಢಿಸಬೇಕಿದೆ ಎಂಬ ಚಿಂತನೆಯನ್ನು ನಾಗರಿಕ ಸಮಾಜ ಮಾಡಬೇಕಿದೆ  ನಮ್ಮ ಸಮಾಜದ ಜನಸಂಖ್ಯೆಯಲ್ಲಿ ಅರ್ಥದಷ್ಟು ಮಹಿಳೆಯರೇ ಇರುವದರಿಂದ ಸಮಾಜದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಮೂಲ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಕಟ್ಟಕಡೆಯ ಮಹಿಳೆಗೂ ಶಿಕ್ಷಣ ದೊರಕಿಸುವ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಮಹಿಳೆಯನ್ನು ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ನಾಗರಿಕ ಸಮಾಜ ತೊಡಗಬೇಕಿದೆ.

——————————————–

ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

3 thoughts on “

Leave a Reply

Back To Top