ಪೆಟ್ರಿಕೋರ್ : ಒಂದು ಅವಲೋಕನ

ಪಸ್ತಕ ಸಂಗಾತಿ

ಚೈತ್ರಾ ಶಿವಯೋಗಿ ಮಠ ರವರ, ಮೊದಲ ಕವಿತಾ ಸಂಕಲನ

ಪೆಟ್ರಿಕೋರ್ : ಒಂದು ಅವಲೋಕನ

ಪೆಟ್ರಿಕೋರ್ : ಒಂದು ಅವಲೋಕನ

(ಪೆಟ್ರಿಕೋರ್: ಮೊದಲಮಳೆ, ಒಣ ಮಣ್ಣ ಮೇಲೆಬಿದ್ದ ಮಣ್ಣಿನ ಘಮಲು )

ಎಂ.ಟೆಕ್ ಪದವಿಪಡೆದು “ಫಿಲಿಪ್ಸ್ ಹೆಲ್ತ್ ಕೇರ್’” ನಲ್ಲಿ,  ವಿಶೇಷ ತಜ್ಞರು, ಮತ್ತು ಪ್ರಾಡಕ್ಟ್ ಸೆಕ್ಯೂರಿಟಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಚೈತ್ರಾ ಶಿವಯೋಗಿ ಮಠ ರವರ, ಮೊದಲ ಕವಿತಾ ಸಂಕಲನ ಪೆಟ್ರಿಕೋರ್.  ಶೀರ್ಷಿಕೆಯೇ ಅರ್ಥವಾಗದ ಅಚ್ಚರಿ ಹುಟ್ಟಿಸುವಂತಿದ್ದು, ಓದಲೆಳೆಸುವ ಕೃತಿಯಲ್ಲಿ, (43)ಕವನಗಳನ್ನೊಳಗೊಂಡಿದ್ದು, ಆರಿಫ್ ರಾಜಾ, ಆರ್. ತಾರಿಣಿ ಶುಭದಾಯಿನಿ, ಕೇಶವ ಮಳಗಿ, ಅವರ  ಮೂರು ‘ಮುನ್ನಡಿ’ಗಳಿದ್ದು, ಎಚ್. ಎಸ್. ಶಿವ ಪ್ರಕಾಶರ ‘ಬೆನ್ನುಡಿ’ ಇದೆ.

ನಿತ್ಯವೂ ‘ನಿರ್ಮಲ ಪರಂಜ್ಯೋತಿ’ ಬೆಳಗುವ ‘ಕವಡಿಮಟ್ಟಿಯ’ ಶಿವಯೋಗಿಮಠದಲ್ಲಿ ಹುಟ್ಟಿದ ಚೈತ್ರಾರವರು, ಅಣ್ಣ ಅಕ್ಕ ಅಲ್ಲಮನನ್ನು ಓದಿಕೊಂಡಿರುವುದಕ್ಕೆ ಅವರಕಾವ್ಯದಮೇಲೆ ವಚನಕಾರರ ದಟ್ಟ ಪ್ರಭಾವವಿದೆ. ಪ್ರಸ್ತುತ ಸಂಕಲನದ ಕಿರು ಪದ್ಯಗಳು ವಚನಗಳ ‘ಅಂಗಸೌಷ್ಠವ’ ಪಡೆದ ಬೆರಗಿನ ರಚನೆಗಳಾಗಿವೆ.

ಮುಖ ಪುಟತೆರೆಯುತ್ತಲೇ, ಹಿಂಬದಿಯಲ್ಲಿ ಮೊದಲಿಗೆ  ‘ನೀನಲ್ಲದೆ ಮತ್ತಾರಿಲ್ಲವಯ್ಯ’… ಪದ್ಯ,ಇದಿರುಗೊಂಡು ಕಣ್ಸೆಳೆಯುತ್ತದೆ.

ಅಂಗೈಯಲ್ಲಿಟ್ಟುಕೊಂಡ

ಶಿವಲಿಂಗದ ನೆತ್ತಿಯ ಮೇಲೆ

ಕೈಯಿರಿಸಿ ಕಂಪಿಸುತ್ತಿರುವೇ

ಛಕ್ಕನೆ ಜಿಗಿದು ಬಾ…

ಅಮೃತವೋ ವಿಷವೋ

ಕುಡಿಸಿಬಿಡು

ದೇವಾ

ನಿನ್ನಬಿಟ್ಟು

ಯಾರಿಹರು

  ಲೋಕದಲ್ಲಿ!

ಭವಿಯನ್ನು ಭಕ್ತನನ್ನಾಗಿಸುವಸಶಕ್ತ ರಚನೆ ಇದು. ಓದುತ್ತಲೇ ‘ಪರವಶ ಗೊಳಿಸಿ’ ಕಣ್ತುಂಬುವ ಶಕ್ತಿ

ಈ  ಪುಟ್ಟ ಪದ್ಯದಲ್ಲಿದೆ.  ತಮ್ಮ ಮುನ್ನುಡಿಯಲ್ಲಿ ಆರ್. ತಾರಿಣಿ ಶುಭದಾಯಿನಿಯವರು, ಚೈತ್ರಾರವರವರ ಕಾವ್ಯದ ಬಗ್ಗೆ  ಹೀಗೆ ಬರೆದಿದ್ದಾರೆ.

“ಮೊದಲನೆಯದಾಗಿ ನಿಮ್ಮಕವಿತೆಗಳು ಒಂದು ಪ್ರಾರ್ಥನೆಯಂತಿವೆ. ಹಾಗೆ ನೋಡಿದರೆ ಕವಿವಾಣಿಯಂತೆ ಪ್ರತಿ ಕವಿತೆಯೂ ಪ್ರಾರ್ಥನೆಯೇ. ನಿಮ್ಮಕವಿತೆಗಳು ಉದ್ದೇಶ ಪೂರ್ವಕವಾಗಿ ಮಾಡುವ ಪ್ರಾರ್ಥನೇಯಂತಲ್ಲ; ಅಥವಾ ಆಚರಣಾಮೂಲದ ಒಂದು ಯಾoತ್ರಿಕ ಕ್ರಿಯೆಯೂ ಅಲ್ಲ. ಅವು ಒಂದುಬಗೆಯ ಫ್ಯಾಶನ್ನಿಂದ ಕೂಡಿದ ಪ್ರಾರ್ಥನೆ. ಅದರಲ್ಲಿ ಆರ್ತತೆಯನ್ನು ಹದವಾಗಿ ಬಗ್ಗಿಸಿ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತೀರಿ. ಪ್ರೀತಿಸುವವರೊಂದಿಗೆ ಎಲ್ಲವನ್ನೂ ಹಂಚಿಕೊಂಡು, ಎಲ್ಲವನ್ನೂ ನಿವೇದಿಸಿಕೊಂಡು ಹೋಗುವ ದಿಟ್ಟತೆ ಅಲ್ಲಿ ಕಾಣುತ್ತದೆ. ಆದರೆ ಅದು ಸಂಪೂರ್ಣ ವಿನಯದಿಂದ ತನ್ನನ್ನು ತಾನು ಮರೆಯುವಂಥದ್ದಲ್ಲ. ನಿಮ್ಮತನ ವನ್ನು ಉಳಿಸಿಕೊಂಡು ಇತರರನ್ನು ಪ್ರೀತಿ ಜಗತ್ತಿನಲ್ಲಿ ನೋಡಲು ಬಯಸುತ್ತೀರಿ. ಹಾಗಾಗಿ ಇಲ್ಲಿ ನಿಮ್ಮ ಭಾವನೆಗಳು ತಣ್ಣಗೆ ಎನ್ನಿಸಿದರೂ ಶಕ್ತಿ ಶಾಲಿಯಾಗಿವೆ.”

ಪ್ರೀತಿ, ವಿರಹ, ಹುಸಿಮುನಿಸುಗಳಿಗೆ ಪಕ್ಕಾಗುವ ಇಲ್ಲಿನ ಬಹುತೇಕ ಕವನಗಳು ರಚನೆಗೊಂಡಿದ್ದರೂ, ಒಂದಕ್ಕೊಂದು ವಿಭಿನ್ನವೆನಿಸುವ ಕುಶಲ ಶಬ್ದಪುoಜಗಳಿಂದ ಹೊಸ ‘ಪ್ರತಿಮೆ ಗಳನ್ನು’ ಹೊಳಪಿಸುತ್ತವೆ. ಖಾಸಗಿ ಅನುಭವಗಳಂತೆ ಕoಡರೂ, ಪ್ರತಿಯೊಂದು ಕವಿತೆಗಳಲ್ಲಿ  ಒಂದು ‘ನಿರಾಲಂಕಾರಚೆಲುವು’ ಸಂಚಾರಿಯಾಗಿದ್ದು, ಬೆರಗುಗೊಳಿಸುವ ರೂಪಕಗಳಿಂದ ತುಂಬಿಕೊಂಡಿವೆ. ಸಾಮಾಜಿಕವಾದ ಹೊರ ಜಗತ್ತಿನ ‘ಎಡ-ಬಲ’ ಗಳಿಂದ ಅಂತರ ಕಾಯ್ದು ಕೊಂಡಿರುವ ಚೈತ್ರಾ ರವರಕವಿತೆಗಳು ಎಲ್ಲೂ ಸವಕಲೆನಿಸುವುದಿಲ್ಲ. ‘ ಮಿದುವಾದಷ್ಟು ಹದ ಎನ್ನುವ ಅವರ ‘ಪ್ರಭುವಿನ’ ಸೂಚನೆಗೆ ಮನಸು ಅದನ್ನು ಪಾಲಿಸುವ ಕಡೆಗೇ ಹೊರಳಿದೆ. ಬಹಳಸಲ ಮೌನ ತುಂಬಿಕೊಂಡು ಅವನ ಮುಂದೆ ಕೂತು ಕಂಪಿಸಿದ್ದೆನೆ’… ಎಂದಿದ್ದಾರೆಚೈತ್ರಾ  “ಮೊದಲಮಳೆ ಮತ್ತು ಆ  ಮಣ್ಣಿನ ಘಮಲು” ಶೀರ್ಷಿಕೆಯ ತಮ್ಮ ಪ್ರಾಸ್ತಾವನೆಯಲ್ಲಿ.  ‘ಈ ಮರ್ತ್ಯ ದೊಳಗೆ’ ಎಂಬ ಕವಿತೆ ಇದಕ್ಕೆ ಪೂರಕ ವೆನಿಸುವಂತಿದೆ.

ಪ್ರಭುವೇ…

ಸಾಕಿನ್ನು

  ಜಂಜಡಗಳಿಂದ

ಮುಕ್ತಿನೀಡು

ನಿನ್ನಮೈಗಂಧವಾಗಿಸಿ

ನಿನ್ನೊಳಗೇ ಕರಗಿಸಿಕೊಂಡು

ನಿನ್ನ ಜೊತೆಗೆ ಹೊತ್ತು ತಿರುಗು

ತಳುಕುಬಿದ್ದ

ನಾಗರಜೋಡಿ

ಅವನಿವಳ ಇವಳವನ

ಅದ್ವೈತವಾಗಿಸಿಕೊಂಡು ಬಿಡು

ಮತ್ತಿನ್ನೇನುಬೇಕು ಹೇಳು ನನಗೆಈ ಮರ್ತ್ಯ ದೊಳಗೆಎಂದು ‘ಆ ಪ್ರಭುವನ್ನೇ’ ಕೇಳುವ ಚೈತ್ರಾ ರವರ ಈ ಕವನದಲ್ಲಿ’ ಶಿವಮತ್ತು ಯೋಗಗಳೆರಡರ’ ಸಮ್ಮಿಳನವನ್ನು ಕಾಣಬಹುದು. ಹಾಗೆಯೇ ಇವರ  ‘ಅಧ್ಯಾತ್ಮಿಕ ಕವಿತೆ’ ಓದುವಾವಾಗ  ಕದಳಿವನದ ‘ಅಕ್ಕ’ ಸುಳಿದು ಹೋಗುತ್ತಾಳೆ. ಇದೇ ಹೊಳಹಿನ ‘ಪ್ರಭುದೇವ’ ಎಂಬ ಕವಿತೆ ಪುಟ (84)ರಲ್ಲಿದೆ.ಅಂತೆಯೇ, ‘ಶಿವನ ಮೀಯಿಸುವ’ ಕವಿತೆಯ ಖ್ಯಾತ,ಕವಯತ್ರಿ ‘ವೈದೇಹಿ’ನೆನಪಾಗುತ್ತಾರೆ, ಇಲ್ಲಿ. ಹಾಗೆಯೇ  ‘ಕಾಫಿಬೆಳೆಗಾರ್ತಿ’ ನಂದಿನಿ ಹೆದ್ದುರ್ಗ ರವರು,ತಮ್ಮ ‘ರತಿಯಕಂಬನಿ’ ಕವನ ಸಂಕಲನದಿಂದಖ್ಯಾತರಾಗಿದ್ದು, ‘ಎಲ್ಲಿಂದ ಬಂತು ಈ ಪ್ರೀತಿ, ನನಗೇ ಅರಿವಾಗದ ರೀತಿ’ ಎಂದು ತಮ್ಮನ್ನೇ ಪ್ರಶ್ನಿಸಿ ಕೊಳ್ಳುತ್ತಲೇ, ಪ್ರತಿಕವಿತೆಯಲ್ಲೂ ‘ಪ್ರೀತಿಯನ್ನು ಹೊಸ ಚಹರೆಗಳಲ್ಲಿ’ ನೀರೂಪಿಸುತ್ತಾರೆ.  ‘ಪ್ರೀತಿಯ ಕಾವ್ಯ ವಸ್ತುಗಳು, ‘ಪೆಟ್ರಿಕೋರ್’ ನಲ್ಲಿರುವುದಕ್ಕೆ, ನಂದಿನಿ ಯವರು ನನಗೆ ನೆನಪಾದರು. ಈ ಉಭಯ ಕವಯತ್ರಿಯರ ಕವಿತೆಗಳು, ರಾಚನಿಕ ವಿಧಾನಗಳಲ್ಲಿ ಬೇರೆ ಬೇರೆ ಯಾಗಿದ್ದರೂ, ಉಭಯರ ‘ಕಾವ್ಯವಸ್ತು ಒಂದೇ; ಅದು ಪ್ರೀತಿ!’…

ಚೈತ್ರಾ ರವರ ‘ಪೆಟ್ರಿಕೋರ್’ ಸಂಕಲನವು, ಇದೇ ಅಕ್ಟೊಬರ್ 9, 2022, ರಂದು, ಬೆಂಗಳೂರಿನಲ್ಲಿ ಖ್ಯಾತ ಬರಹಗಾರರಾದ, ಕೇಶವ ಮಳಗಿ, ಹಾಗೂ  ಎಂ. ಆರ್. ಕಮಲ ರವರು ಅನಾವರಣ ಗೊಳಿಸಿದರು. ಈಗಾಗಲೇ ಕೃತಿಯು ಅಂತರ್ಜಾಲ ಪತ್ರಿಕೆಗಳಲ್ಲಿ, ಹಾಗೂ ಸಾರಸ್ವತ ವಲಯಗಲ್ಲಿ ಹೆಸರುಗಳಿಸಿ ವ್ಯಾಪಕಚರ್ಚೆಗೊಳಗಾಗಿದೆ.

ನವ್ಯೋತ್ತರ ಕಾಲ ಘಟ್ಟದಲ್ಲಿಯೇ ಹುಟ್ಟಿಕೊಂಡ ಸ್ತ್ರೀವಾದೀ ಕಾವ್ಯವು, ಪುರುಷ ಪ್ರಧಾನ ಸಮಾಜದ, ಹೆಣ್ಣಿನ ಶೋಷಣೆ, ಅತ್ಯಾ ಚಾರಗಳ ವಿರುದ್ಧದ ಪ್ರತಿಭಟನಾತ್ಮಕ ಸ್ತ್ರೀ ಕವಿತೆಗಳು ಜನ ಜನಪ್ರಿಯವಾಗಿವೆ.   ಚೈತ್ರಾ ರವರಿಗೆ ಈಸ್ತ್ರೀ ಸಂವೇದನೆಯೇ ತಟ್ಟಿದಂತಿಲ್ಲ. ಅಲ್ಲದೆ, ತಮ್ಮದೇ ವೃತ್ತಿನಿರತ, ಬೆರಳೊತ್ತಿನ “ಲ್ಯಾಪ್ ಟಾಪ್”ಸಂಪರ್ಕದ ಏಕತಾನತೆಯೂ ಅವರಿಗೆ ಬಾಧಿಸಿದಂತಿಲ್ಲ.

ಚೈತ್ರಾ ರವರ ಕೆಲ ಕವಿತೆಗಳ  ‘ಸೆಳಕುಗಳು’.

         **ಕವಿತೆ: ಪೆಟ್ರಿಕೋರ್**

ಬಿಟ್ಟುಬಿಡದೆ ಸುರಿಯುವ

ಈಮಳೆ ಸದಾ ಉಕ್ಕುತ್ತಿರುವ

ಕಡಲುದಿಟ್ಟಿಸುತ್ತ ಸುಮ್ಮನೆ

ಮೌನವಾಗಿರಲು ಹೇಗೆ ಸಾಧ್ಯ?

ಈಘಮಲು

ಕೆಲವರಿಗೆ ಆಗಂತುಕ

ಮತ್ತು ಕ್ಷಣಿಕ ಮಾತ್ರ; ನನ್ನಂಥವಳಿಗೆ

ಒಂದು  ಶಾಶ್ವತ ಅಮಲು.

ಮೊದಲಮಳೆ:ಒಣಮಣ್ಣ ಮೇಲೇಬಿದ್ದ ಮಣ್ಣಿನ ಘಮಲು;

ಬಿರುಮಳೆಗೆ ಕಡಲುಕ್ಕುತ್ತಿರುವುದನ್ನು ನೋಡುತ್ತಾ,ಮಣ್ಣಿನ ವಾಸನೆಗೆ ಆಮಲೇರಿಸಿಕೊಂಡ ಕವಯಿತ್ರಿಯ ಒಳನೋಟಗಳ ಚಿತ್ರಣ ವಿಲ್ಲಿದೆ. ಈ ಮಣ್ಣಿನ ನಸುಗಂಧವು ಅನ್ಯರಿಗೆ ಅಪರಿಚಿತ ವೆನಿನಿಸಿ ದರೆ, ಕವಯಿತ್ರಿಗೆ ಬೆಂಬಿಡದ, ಚಿರವಾದ ನಶೆ.

** ಕವಿತೆ: ಬೆಳದಿಂಗಳ ಬಯಕೆ **

ಹಸುಗೂಸು ತೃಪ್ತಿಯಾಗುವಷ್ಟು

ಎದೆಹಾಲು ಹೀರಿದ ಕಟಬಾಯಿಯಲಿ

ಬೆಳ್ಳಗೆ ತೊಟ್ಟಿಕ್ಕುವ ಸೊದೆ ಧಾರೆ

ಕಿಟಕಿ ಸರಳುಗಳಿಂದ

ಸಣ್ಣಗೆ ಸೋರುವ ತೆಳು ಬೆಳದಿಂಗಳು 

ಸಾಲುಗಳಲ್ಲಿಯೇ ಸರಳ ಅರ್ಥಹೊಮ್ಮಿದೆ. ಹಸುಗೂಸು  ತಾಯಿಯ ಹಾಲು ಕುಡಿಯುವಾಗ, ಅದರಕಟಬಾಯಿ ಯಲ್ಲಿ ತೊಟ್ಟಿಕ್ಕುವ ಅಮೃತಧಾರೆಯನ್ನು, ಕಿಟಕಿಯಸರಳುಗಳಿಂದ ತೆಳು ಬೆಳದಿಂಗಳು ಅಮೃತ ದಂತೆ ಸಣ್ಣಗೆ ಸೋರುವ – ಸೂಕ್ಷ್ಮ ‘ರೂಪಕ’ ವನ್ನು ಇಲ್ಲಿ ಚೈತ್ರಾರವರು ರಮ್ಯವಾಗಿ            ಬಿಂಬಿಸಿದ್ದಾರೆ.

  ** ಕವಿತೆ: ಖಾಲಿ ದರ್ಪಣ **

ಬಹುಶಃ

ನಾನು ಪ್ರೀತಿಸಿದ್ದು

ಒಂದು ಪ್ರತಿಬಿಂಬವನ್ನು

ಕನಸುಗಳಿಗೂ ಲಗ್ಗೆ ಇಟ್ಟು

ಅಲ್ಲಿಯೂ  ತಾಂಡವವಾಡಿ

ಹೆದರಿ ಬೆದರಿ ಚೀರುವೆನು

ಪ್ರೇತದ ಹಾಗೆ 

ಪ್ರತಿ ಇರುಳ ನಿದ್ದೆಯನ್ನುಕಬಳಿಸುತ್ತಿದೆ

ಪುರಾವೆ ಬೇಕೆ?

ಒಮ್ಮೆ

ಕೇಳಿನೋಡಿ ತಲೆದಿಂಬನ್ನೇ

ಅದೆಷ್ಟು ಗುಪ್ತ ನದಿಗಳನ್ನು

ತನ್ನ ಉದರಕ್ಕಿಳಿಸಿಕೊಂಡಿದೆಯೆಂದು

ಸುತ್ತಲೂ ಸರಕ್ಕನೆಮಿಂಚಿಮಾಯವಾಗುವ ಆಕೃತಿ; ಅಯೋಮಯ ಸ್ಥಿತಿಯಲ್ಲಿ ಆ ಪ್ರತಿಬಿಂಬವನ್ನು

ಅದರ ಭ್ರಮೆ ಯಲ್ಲಿ ಕನವರಿಸಲುಬಿಟ್ಟಮೇಲೆ ನಾನೊಂದು ಖಾಲಿ ದರ್ಪಣ:

ಎನ್ನುತ್ತದೆ ಕವಿತೆಯ ‘ವಸ್ತು’. ಇದೊಂದು ಸಂಕೀರ್ಣ ರಚನೆ. ಖಾಲಿ ದಿಂಬಿನಮೇಲೆ ಮಲಗಿದ ಜೀವ, ಕಂಡ ಕನಸುಗಳು, ಆ ಕನ್ನಡಿಯ ಬಿಂಬದಲ್ಲಿ ಪಡಿ ಮೂಡಿರಬಹುದೇನೋ? ಸ್ಪಷ್ಟ ವಾಗುವುದಿಲ್ಲ.

ಚೈತ್ರಾ ಶಿವಯೋಗಿ ಮಠ ರವರ ಈ ಮೊದಲಕೃತಿಯಲ್ಲಿ, ಕೆಲ ವಿಮರ್ಶಕರು ಎತ್ತಿತೋರಿಸಿದ ಒಂದೆರಡುಕೊರತೆಗಳನ್ನು ಸರಿಪಡಿಸಿಕೊಂಡು, ಮುಂದಿನ ಕೃತಿಯಲ್ಲಿ, ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿ, ಎಂದು ಹಾರೈಸುತ್ತ, ಈ ನನ್ನ ‘ಕಿರು ಅವಲೋಕನವನ್ನು’ ಮುಕ್ತಾಯ ಗೊಳಿಸುತ್ತೇನೆ. ಇವರ ಮುಂದಿನ ಕಾವ್ಯಬೆಳವಣಿಗೆಯ ಮೇಲೆ ತುಂಬಾ ಭರವಸೆ ಹೊಂದಿರುವ ನಾನು, ಚೈತ್ರಾ ರವರಿಗೆ  ಸದಾಶಯ ಕೋರುತ್ತೇನೆ.


ಪ್ರಭುರಾಜ ಅರಣಕಲ್ 

3 thoughts on “ಪೆಟ್ರಿಕೋರ್ : ಒಂದು ಅವಲೋಕನ

  1. ಕಾವ್ಯ ಸಂಕಲನದ ಸಮರ್ಪಕ ಅವಲೋಕನವನ್ನು ವಸ್ತುನಿಷ್ಠವಾಗಿ ಮಾಡಿದ್ದೀರಿ. ತಮಗೂ, ಕವಿಯಿತ್ರಿ ಚೈತ್ರಾ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.

    1. ಧನ್ಯವಾದಗಳು, ಹೇಮನೂರ್ ರವರೇ, ತಮ್ಮ ಪ್ರತಿಕ್ರಿಯೆಗೆ.

Leave a Reply

Back To Top