ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಪ್ರಭಾವತಿ ಎಸ್ ದೇಸಾಯಿ

ಮೊದಲ ರಾತ್ರಿಯಲಿ ಮೌನ ಮುರಿಯಲು ನೀ ಬರ ಬೇಕಾಗಿತ್ತು
ಸಂಜೆಯ ಕೆಂಪಲಿ ಹೆಜ್ಜೆ ಹಾಕಲು ನೀ ಬರ ಬೇಕಾಗಿತ್ತು

ಅನುರಾಗದ ಮಳೆಯಿಲ್ಲದೆ ಕುಸುಮಗಳು ಕಮರಿವೆ ಬಳ್ಳಿಯಲಿ
ಮುದ್ದಿಸಿ ಹೃದಯ ಸುಮವ ಅರಳಿಸಲು ನೀ ಬರ ಬೇಕಾಗಿತ್ತು

ಮಧುಮಾಸಕೆ ಬನದಲಿ ಕೇಳುತಿದೆ ಕೋಗಿಲೆಯ ಪಂಚಮ ದನಿ
ಪ್ರೀತಿಯಾ ಯುಗಳ ಗೀತೆ ಹಾಡಲು ನೀ ಬರ ಬೇಕಾಗಿತ್ತು

ಬಿರುಗಾಳಿಗೆ ಸಿಲುಕಿ ಬಾಳ ನೌಕೆ ಸುತ್ತುತಿದೆ ದಿಕ್ಕು ಕಾಣದೆ
ಬದುಕಿನ ದೋಣಿಯನು ದಡ ಸೇರಿಸಲು ನೀ ಬರ ಬೇಕಾಗಿತ್ತು

ಕಂಡ ಕನಸುಗಳು ನನಸಾಗದೆ ನರಳುತಿದೆ ಒಂಟಿ ಹಣತೆ
ಇರುಳಿನ ವಿರಹ ತಾಪ ಆರಿಸಲು ನೀ ಬರ ಬೇಕಾಗಿತ್ತು

ನಮ್ಮ ಪ್ರಣಯದ ಹೊತ್ತಿಗೆ ಬಿಕ್ಕುತಿದೆ ಮುನಿದು ಮೂಲೆಯಲಿ
ಎದೆ ಪುಟದಲಿ ಒಲವ ಓಲೆ ಬರೆಯಲು ನೀ ಬರ ಬೇಕಾಗಿತ್ತು

ವ್ಯಾವೋಹದ ಅಮಲಿನ ಕಿರಣಗಳ ಬಯಸುವ ಚಕೋರಿ ನಾನು
ಹಾಲ ಬೆಳದಿಂಗಳ “ಪ್ರಭೆ” ಹರಡಲು ನೀ ಬರ ಬೇಕಾಗಿತ್ತು


About The Author

1 thought on “ಪ್ರಭಾವತಿ ಎಸ್ ದೇಸಾಯಿ-ಗಜಲ್”

Leave a Reply

You cannot copy content of this page

Scroll to Top